Thursday, June 5, 2014

ಅಮೇರಿಕಾ ಅನುಭವ -9

ಬಣ್ಣದ ಬಾಲೆಯರು ( The Painted Girls)






ಕ್ಯಾಥಿ ಮೇರಿ ಬುಕಾನನ್‌ ಕೆನಡಾದ ಹೆಸರಾಂತ ಲೇಖಕಿ. ಅವರು  ಹದಿನೆಂಟನೆಯ ಶತಮಾನದ ಆದಿಯಲ್ಲಿ  ಪ್ಯಾರಿಸ್‌ನಲ್ಲಿ ಬಹು ಜನಪ್ರಿಯವಾಗಿದ್ದ ಬ್ಯಾಲೆ ( Ballet) ಕಲಾವಿದರಾದ  ಮೂವರು ಸೋದರಿಯರ ಜೀವನ ಕುರಿತು ಬರೆದ ಕಾದಂಬರಿ. ಇದು ಒಂದು ರೀತಿಯಲ್ಲಿ ಐತಿಹಾಸಿಕ ಘಟನೆಯನ್ನು ಆಧರಿಸಿದೆ. ಆ ಕಾಲದ ಕಲಾವಿದ ಎಡ್ಗರ್‌ ಡೆಗಾಸ್‌ನ ಮೂರ್ತಿ ಶಿಲ್ಪ ‘Dancing girl ‘  ಗೆ ಮಾದರಿಯಾಗಿದ್ದ ಬಾಲಕಿ ಮೇರಿ.ಮತ್ತು ಆಕಾಲದ ಬ್ಯಾಲೆ ರಂಗಭೂಮಿಯ ಕಲಾಪರಿಸರ  ಕುರಿತು ಸಾಕಷ್ಟು ಸಂಶೋಧನೆ ಮಾಡಿ  ನೈಜ ಚಿತ್ರಣ ನೀಡಿರುವರು. ಇದು ಒಂದು ರೀತಿಯಲ್ಲಿ ಐತಿಹಾಸಿಕ ಕಾದಂಬರಿಯೂ ಆಗಿದೆ. ಕಾರಣ ಇದರಲ್ಲಿನ ಬಹುತೇಕ ಪಾತ್ರಗಳ ಮಾಹಿತಿ ಲಭ್ಯವಿದೆ. ಆದರೆ ಇದು ರಾಜ, ರಾಣಿ ಅಥವ ಯುದ್ಧದದ ಕಥೆಯಲ್ಲ. ಜನಸಾಮಾನ್ಯರ   ಬದುಕು ಬವಣೆಯ ನೈಜ ಚಿತ್ರಣ ಈ ಕಾದಂಬರಿಯಲ್ಲಿದೆ.



ಲೈಬ್ರರಿ
.
 
ಈ ಲೇಖನಕ್ಕೆ ಕಾರಣವಾದ ಘಟನೆಯ ಹಿನ್ನೆಲೆಯ ಅಗತ್ಯವೂ ಇದೆ. ನಾನು ಅಮೇರಿಕಾದಲ್ಲಿಯೂ ಓದುವ ಹವ್ಯಾಸ ಮುಂದುವರಿದೇ ಇತ್ತು. ಅದಕ್ಕೆ ಪೂರಕವಾದದ್ದು ಇಲ್ಲಿನ “ನಾರ್ಥ ಬ್ರನ್ಸವಿಕ್‌ ಪಬ್ಲಿಕ್‌ಲೈಬ್ರರಿ:”. ಇಲ್ಲಿನ ಗ್ರಂಥಾಲಯಗಳು ಬರಿ ಪುಸ್ತಕ ಮತ್ತು ಪತ್ರಿಕೆಗಳ ವಿತರಣೆಗ ಮಾತ್ರ ಮೀಸಲಾಗಿಲ್ಲ. ಇವು ಸಾಮಾಜಿಕ ಚಟುವಟಿಕೆಯ ಕೇಂದ್ರಗಳೂ ಆಗಿವೆ. ಎರಡು ಮೂರು ವರ್ಷದಗೆ ಎಳೆಯರಿಂದ ಹಿಡಿದು  ಹಿರಿಯನಾಗರೀಕರ ವರೆಗೆ ಒಂದಲ್ಲ ಒಂದು ಚಟುವಟಿಕೆ ಹಮ್ಮಿಕೊಂಡಿರುವರು. ಅದೂ ವಿಶೇಷವಾಗಿ ಬೇಸಿಗೆಯಲ್ಲಿ. ಮಕ್ಕಳಿಗೆ ಕಥೆ ಹೇಳುವರು,ಪುಸ್ತಕ ಓದುವುದು, ಆಟ ಆಡಿಸುವುದು, ಯುವಕರಿಗೆ ಭಾಷಾಕಲಿಕೆ  ಕಾಂಪ್ಯೂಟರ್‌ ಕಲಿಕೆ,ರಸಪ್ರಶ್ನೆ, ಮಹಿಳೆಯರಿಗೆ ಕಸೂತಿ, ಹಿರಿಯ ನಾಗರೀಕರಿಗೆ ಚುರುಕಾಗಿರಲು ಚಾರಣ , ಸೃಜನಶೀಲ ಬರಹ ಕಮ್ಮಟ, ಕವಿಗಳೊಂದಿಗೆ ಸಂವಾದ, ವಿಶೇಷ ಉಪನ್ಯಾಸ, ಹೀಗೆ ಹಲವಾರು ಕಾರ್ಯಕ್ರಮಗಳು ತೆರಪಿಲ್ಲದೆ ನಡೆಯುತ್ತಲೇ ಇರುತ್ತವೆ . ಬರಿ ಪುಸ್ತಕ ನೀಡುವುದು ಮಾತ್ರವಲ್ಲ ಆ ಕುರಿತು ಆಳವಾಗಿ ಅಧ್ಯಯನ ಮಾಡಲು ಸಹಾಯವಾಗುವ ಚರ್ಚಾ ಗೋಷ್ಠಿಗಳೂ ನಡೆಯುತ್ತವೆ. ತಿಂಗಳಿಗೆ ಮೊದಲ ಮಂಗಳವಾರ ಬೆಳಗ್ಗೆ ೧೦=೩೦  ರಿಂದ ೧೧=೩೦ ರವರೆಗೆ  ಮತ್ತು ಬುಧವಾರ  ೭-೩೦ ರಿಂದ  ೮.೩೦ ರವರೆಗ. ಆಸಕ್ತರು  ಹೆಸರು ನೊಂದಾಯಿಸಿದರೆ ಒಂದು ತಿಂಗಳು ಮುಂಚಿತವಾಗಿಯೇ ಪುಸ್ತಕ ಮತ್ತು ಅದರ ಬಗೆಗಿನ ಇತರೆ ಮಾಹಿತಿಯನ್ನು ನೀಡುವರು. ಕಾರ್ಯಕ್ರಮದ ವೇಳಾಪಟ್ಟಿಯನ್ನು ಸೂಚನಾಫಲಕದ ಮೇಲೆ ಜೊತೆಗೆ ಅವರ ಅಂತರ್‌ ಜಾಲತಾಣದಲ್ಲಿಯೂ ಹಾಕಿರುವರು.ಅದನ್ನುಗಮನಿಸಿ ನಾನೂ ಭಾಗವಹಿಸಲು ನೊಂದಾಯಿಸಿಕೊಂಡೆ.
 
ಗೋಷ್ಠಿಯಲ್ಲಿ ಅಧ್ಯಯನ ನಡೆಸಬೇಕಾದ ಪುಸ್ತಕವೇ “ The painted Girls”
ಅದು ಸುಮಾರು ೩೫೦ಪುಟಗಳ ಪುಸ್ತಕ. ಅದು ಫ್ರಾನ್ಸ್‌ ದೇಶದಕಥೆಯಾದ್ದರಿಂದ ಸಾಕಷ್ಟು ಫ್ರೆಂಚ್‌ ಪದಗಳೂ, ವಾಕ್ಯಗಳೂ ಇದ್ದವು ಜೊತೆಗೆ ಬ್ಯಾಲೆ ನರ್ತನದ ತಾಂತ್ರಿಕ ವಿವರಣೆ, ಮೊದ ಮೊದಲು ಕಬ್ಬಿಣದ ಕಡಲೆ ಎನ್ನಿಸಿತು ಓದುತ್ತಾ ಹೋದಂತೆ ಆ ಕಾದಂಬರಿ ಮನಸನ್ನಾಕರ್ಷಿಸಿತು. ಯಾವುದೇ ಕೃತಿ ಜನಪ್ರಿಯವಾಗಲು ಕಾರಣ ಅದರ ಪ್ರಾದೇಶಿಕತೆಯ ಸೊಗಡಿನ  ಹೊರತಾಗಿ ಸಾರ್ವತ್ರಿಕತೆಯ ಗುಣ ಹೊಂದಿರುವುದು. ಭಾಷೆ ಯಾವುದಾದರೇನು ಭಾವ ಒಂದೇಅಲ್ಲವೇ.
ಇದು ಆಂಟಿನೆಟ್‌, ಚಾರಲೆಟ್‌ ಮತ್ತು ಮೇರಿ ಎಂಬ ಮೂವರು ಸೋದರಿಯರ ಕಥೆ. ಅವರು ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡವರು ತಾಯಿ ಮಧ್ಯವ್ಯಸನಿ..ಮನೆಯಲ್ಲಿ ಕಡು ಬಡತನ.  ಹಿರಿಯಕ್ಕನಿಗೆ ೧೬ ವರ್ಷ ವಯಸ್ಸು ಕೊನೆಯವಳಿಗೆ  ಎಂಟು. ಅವರು ಬ್ಯಾಲೆ ತರಬೇತಿ ಶಾಲೆಗೆ ಸೇರಿರುವರು.  ಕಾರಣ ಕಲಾರಾಧನೆ ಅಲ್ಲ. ಅಲ್ಲಿ ತರಬೇತಿ ಅವಧಿಯಲ್ಲಿ ದಿನಕ್ಕೆ ಮೊದಲ ಹಂತದಲ್ಲಿ ಮೂರು ಫ್ರಾಂಕ್‌ ಹಣ ನೀಡುವರು. ಪ್ರತಿಭೆ ತೋರಿದರೆ ಬಡ್ತಿಯಾಗುತ್ತಾ  ರಂಗಪ್ರವೇಶಕ್ಕೆ ಅರ್ಹರಾದರೆ ಉತ್ತಮ ಆದಾಯ. ಆದರೆ ತರಬೇತಿ ಬಹು ಕಠಿನ. ಮೈ ಮುರಿತಕ್ಕ ಆದ್ಯತೆ. ರಂಗದ ಮೇಲೆ ಝಗಝಗಿಸುತ್ತಾ ನರ್ತಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಕಲಾವಿದರು ಬಾಲ್ಯದಿಂದಲೇ ಎಷ್ಟು ಕಠಿನ ಪರಿಶ್ರಮ ಪಡುವರು ಎಂಬುದರ ಕಲ್ಪನೆ ಪ್ರೇಕ್ಷಕರಿಗೆ ಇರುವುದಿಲ್ಲ. ಇಲ್ಲಿ ಅವರ ದೈಹಿಕ ಪರಿಶ್ರಮದ ಜೊತೆ ಜೊತೆಗ ಮಾನಸಿಕ ತುಮುಲಗಳ ಚಿತ್ರಣವೂಇದೆ. ಹಸಿದ ಹೊಟ್ಟೆ, ಮೈ ಮುಚ್ಚದ ಬಟ್ಟೆಯ ಅವರು ಕಲೆ, ನೀತಿ ಧರ್ಮಕ್ಕೆ ಅತೀತರು. ಅಕ್ಕ, ಇಬ್ಬರು ತಂಗಿಯರನ್ನೂ ಸಾಕ ಬೇಕು.ಮನೆ ಬಾಡಿಗೆ ಹೊಂದಿಸ ಬೇಕು. ಅವರಿರುವ ಪರಿಸರ ಬಹು ದುರ್ಭರ. ಬಹುತೇಕ ಮಹಿಳೆಯರು  ತುಂಡು ಬ್ರೆಡ್ಡಿಗಾಗಿ  ಬಟ್ಟೆ ಬಿಚ್ಚುವವರು ಜೊತೆಗೆ ಮನೆಯಲ್ಲಿ ಹಸಿವಿನಿಂದ ಅಳುವ ಹಸುಗೂಸುಗಳು.. ಅವಳು ಸಹಜವಾಗಿ ಹೆಚ್ಚು ಹಣ ಬರುವ ಹಾದಿ ಹಿಡಿದು ಬ್ಯಾಲೆ ಶಾಲೆಯಿಂದ ಹೊರ ಹಾಕಲ್ಪಡುತ್ತಾಳೆ. ಅದೇ ಸಮಯದಲ್ಲಿ ಎಮಿಲಿ ಎಂಬ ಯುವಕನ ಪರಿಚಯವಾಗಿ ಪ್ರಣಯಿಗಳಾಗುವರು.ಅವರಿಬ್ಬರ ಶೃಂಗಾರ, ಕಾಮ, ಪ್ರೇಮ ಮೋಹ, ವಿರಹಗಳ ವರ್ಣನೆ ಭಾರತೀಯ ಓದುಗರಿಗೆ ಮುಜುಗರ ತರಿಸುವಷ್ಟು ಸಹಜ ಮತ್ತು ಮುಕ್ತ.  ಎಮಿಲಿ  ಮತ್ತು ಅವನ ಗೆಳೆಯರು ಸ್ವಭಾತಃ ಪುಂಡರು, ಮೈ ಮುರಿದು ದುಡಿಯಲಾರದವರು . ಅಪಮಾರ್ಗಗಳಿಂದ ಹಣ ಗಳಿಸಿ ಹೆಣ್ಣು ಹೆಂಡದ  ಮೋಜಿಗೆ ಖರ್ಚುಮಾಡುವವರು.. ಆದರೆ ಅಂಟಿನೆಟ್‌ಳಿಗೆ ಅವನಲ್ಲಿ ಅಪಾರ ಪ್ರೇಮ. ಅವನೊಂದಿಗೆ ಸಂಸಾರ ಹೂಡುವ ಕನಸು. ಅದಕ್ಕಾಗಿ ಏನು ಮಾಡಲೂ ಸಿದ್ಧ. ಸುಳ್ಳಿನ ಸರಮಾಲೆ ಹೆಣೆಯುತ್ತಾಳೆ. ಅವನು ಕೊಲೆಮಾಡಿ ಜೈಲು ಸೇರಿದರೂ ಅವಳ ಪ್ರೀತಿ ಕಡಿಮೆಯಾಗದು. ಅವನು ಅಂದು ಕೊಂಡಂತೆ  ಮರಣ ದಂಡನೆಯ ಬದಲು ಕಾಲಾಪಾನಿ ಆಗುವುದು. ಅಂದರೆ ಆಷ್ಟ್ರೇಲಿಯಾದ  ಹತ್ತಿರದ  ಫ್ರೆಂಚ್‌ ವಸಾಹತುವಾದ ದ್ವೀಪಕ್ಕೆ ಗಡಿಪಾರಾಗುವನು. ಅಲ್ಲಿ ಕೆಲ ವರ್ಷ ಸೆರೆವಾಸ. ನಂತರ  ಸುಖ ಜೀವನ ನಡೆಸಬಹುದೆಂದು ಅವನ ಹಂಚಿಕೆ.  ಅವನ ಜೊತೆ ತಾನೂ ಹೊರಡಲುಸಿದ್ಧಳಾಗುವಳು. ಪ್ರಯಾಣದ ವೆಚ್ಚ ಹೊಂದಿಸಲು  ಮಾಡಬಾರದ್ದನೆನೆಲ್ಲ  ಮಾಡಿ ಕೊನೆಗೆ ಜೈಲು ಪಾಲಾಗುವಳು. ಅಷ್ಟರಲ್ಲಿ ಅಮಿಲಿ ಮತ್ತೊಂದು ಕೊಲೆ ಮಾಡುವನು. ಅವನದು ಪ್ರೇಮವಲ್ಲ ಬರಿ ಕಾಮ ಎಂದು ಅವಳಿಗೆ ತಿಳಿಯುವುದು.ಮತ್ತೆ ಮನೆಗೆ ವಾಪಸ್‌ ಆಗಿ ತಂಗಿಯರ ಏಳಿಗೆಗೆ ಶ್ರಮಿಸುವಳು.
ತಂಗಿಯರು. ಇಬ್ಬರೂ ನೃತ್ಯಶಾಲೆಯ ಮೊದಲ ಹಂತ ದಾಟುವರು. ಮೇರಿಯ ಮುಖ ತುಸು ಆದಿ ಮಾನರನ್ನು ಹೋಲುವುದು. ಆಗಿನ ಒಂದು ನಂಬಿಕೆಯೆಂದರೆ ಮುಖ ಮನಸ್ಸಿನ ಕನ್ನಡಿ ಎಂದು. ಹೀಗಾಗಿ ಆ ರೀತಿಯ ಮುಖಭಾವ ಇರುವವರು ಜನ್ಮತಃ ಕೆಟ್ಟವರು ಎಂಬ ಭಾವನೆ ಅವಳಲ್ಲಿ ಮೂಡಿಸಿರುತ್ತಾರೆ.ಅದೇ ಅವಳ ಪತನಕ್ಕೆ ಕಾರಣವಾಗುವುದು.

              ಎಡ್ಗರ್  ಡೆಗಾಸ್‌ನ  ಕೃತಿ  

.  ಅವಳ ಮೂರ್ತಿ ಶಿಲ್ಪವು ಆಕಾಲದಲ್ಲಿ ಹೆಸರು ಪಡೆಯದಿದ್ದರೂ ನಂತರ ಜಗತ್‌ವಿಖ್ಯಾತ ಕಲಾಕೃತಿ ಎನಿಸಿದೆ. ಆದರೆ ಅದಕ್ಕೆ ಮಾದರಿಯಾಗಿದ್ದ ಮೇರಿಯ ಬದುಕುಮಾತ್ರ ಸುಖಕರವಾಗಿರಲಿಲ್ಲ. ಮೂವರಲ್ಲಿ ಅವಳೊಬ್ಬಳೇ ತುಸು ವಿದ್ಯಾವಂತೆ.ಅಕ್ಕನ ಭ್ರಮೆ ಹೋಗಲಾಡಿಸಲು ಅವಳು ಪರಿಶ್ರಮ ಪಡುತ್ತಾಳೆ.  ಕಲಾವಿದನೊಬ್ಬ ಅವಳನ್ನು ತನ್ನ ಕಲಾಕೃತಿಗಳಿಗೆ ಮಾದರಿಯಾಗಿ ಆಯ್ದುಕೊಳ್ಳುವನು. ಅವನೆದರು ಎಳೆಯ ಬಾಲಕಿ ನಗ್ನವಾಗಿ ಗಂಟೆಗಟ್ಟಲೆ ನಿಲ್ಲುವಳು. ಕಾರಣ ಅವನು ಮೂರು ಗಂಟೆಯ ಕೆಲಸಕ್ಕೆ ಆರು ಪ್ರಾಂಕ್‌ ನೀಡುವನು.. ಅದರಿಂದ ಮನೆಯ ಕಷ್ಟ ತುಸು ಪರಿಹಾರ. ಚಾರಲೆಟ್‌ ಮಾತ್ರ ತಲೆ ಬಗ್ಗಿಸಿಕೊಂಡು ನೃತ್ಯ ಕಲಿಯುತ್ತಾಳೆ.ಒಂದೇ ಸಮಸ್ಯೆ. ಅವರಿಗೆ ಯಾರೂ ದೈವ ಪಿತರು ಇಲ್ಲ ಹೀಗಾಗಿ ಮುಂದುವರಿಯುವುದು ಬಹು ಕಷ್ಟವಾಗುವುದು.
ಇದು ಐತಿಹಾಸಿಕ  ಅಂಶಗಳನ್ನು ಒಳಗೊಂಡ ಒಂದು ಸಾಮಾಜಿಕ ಕಾದಂಬರಿ. ಲೇಖಕಿಯ ಹಿರಿಮೆ ಎಂದರೆ ಬಡತನವನ್ನು ಬಣ್ಣಿಸುವಷ್ಟೇ ಸಹಜವಾಗಿ ನೃತ್ಯನಾಟಕದ ರಂಗ ವೈಭವ,  ಹೆಂಡದಂಗಡಿ, ಚಿತ್ರ ಮತ್ತು ಶಿಲ್ಪಕಲೆ,  ಪತಿತಹೆಂಗಸರನ್ನು ಮೇಲೆತ್ತಲು ಕ್ರೈಸ್ತ ಸನ್ಯಾಸಿನಿಯರ ಪ್ರಯತ್ನ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ.  ಹಸಿಹಸಿ ಕಾಮ,ಹುಸಿ ಪ್ರೇಮ , ಸೋದರ ವಾತ್ಸಲ್ಯ  ಮತ್ತು ಜೀವನಪ್ರೀತಿಯ ಕಥನವೇ ಈ ಕಾದಂಬರಿಯ ಸಾರ.
ಕೊನೆಯ ೨೦ ಅಧ್ಯಾಯಗಳು ಅಕ್ಕತಂಗಿಯರ ಮನದಾಳದ ತುಡಿತವನ್ನು ತೆರೆದಿಡಲು ಮಿಸಲಾಗಿವೆ. ಅವು ತುಂಬ ಚಿಕ್ಕವು.ಒಬ್ಬರ ನಂತರ ಇನ್ನೊಬ್ಬರ ಭಾನೆಯನ್ನು ವ್ಯಕ್ತಪಡಿಸಿ ತೀವ್ರತೆಯಿಂದ ಗಮನ ಸೆಳೆಯುತ್ತವೆ.
 ದುರಂತದ ಛಾಯೆಯಲ್ಲೂ ಬದುಕಿನ ಆಶಾಕಿರಣ ಬಿರುವ ಕೃತಿಯಾಗಿ ಮೆಚ್ಚುಗೆ ಪಡೆಯುತ್ತದೆ. ಬಣ್ಣದ ಬದುಕಿಗೆ ಕಾಲಿಟ್ಟು ವೈಭವದ ಕನಸುಕಾಣುವ ಕಿರಿಯಕಲಾವಿದರ  ಬವಣೆಯನ್ನು  ಎಲ್ಲ ಕಾಲ ದೇಶಗಳಲ್ಲೂ ಕಾಣಬಹುದು..
ಇನ್ನು ಗೋಷ್ಠಿಯದಿನ ಗಮನಸೆಳೆದದ್ದು ಅಚ್ಚುಕಟ್ಟಾದ ವ್ಯವಸ್ಥೆ. ಸುಮಾರು ಹನ್ನೆರಡು ಜನ . ಬಹುತೇಕರು ಹಿರಿಯ ನಾಗರೀಕರು.ನಮ್ಮಲ್ಲಿಯಂತೆ ಇಲ್ಲಿಯೂ ಸಾಹಿತ್ಯಿಕ ಸಭೆಗಳಿಗೆ ಯುವ ಜನಾಂಗದ ಹಾಜರಿ ಕಡಿಮೆ.. ನಾನು ತುಸು ಸಂಕೊಚದಿಂದಲೇ ಭಾಗವಹಿಸಿದೆ.ನನಗೆ ಅವರ ಮಾತಿನ ವೈಖರಿ ಗಲಿಬಿಲಿ ಮಾಡುತಿತ್ತು  . ನನಗೆ ಮೊದಲ ಅವಕಾಶ ದೊರೆಯಿತು. ನಾನು ಸವಿವರ ಟಿಪ್ಪಣಿ ಮಾಡಿಕೊಂಡಿದ್ದೆ. ಎಲ್ಲವನ್ನು ಸಾದರ ಪಡಿಸಿದೆ. ಇದೇ ಸಮಯದಲ್ಲಿ ಮುಖ ಮನಸ್ಸಿನ ಕನ್ನಡಿ ಎಂಬ ವಾದ ಪೂರ್ಣ ಸರಿಯಲ್ಲ. ಎದು ಹೇಳುತ್ತಾ ಕೆ.ವಿ.ಅಯರ್‌ಅವರ ರೂಪದರ್ಶಿ ಕಾದಂಬರರಿಯನ್ನು ಉಲ್ಲೇಖಿಸಿ , ಅದರಲ್ಲಿ ಬಾಲಯೇಸುಕ್ರಿಸ್ತನ ಚಿತ್ರಕ್ಕೆ ಮಾದರಿಯಾಗಿದ್ದವನೇ ಇಪ್ಪತ್ತು ವರ್ಷದ ನಂತರ ಜುದಾಸನ ಚಿತ್ರಕ್ಕೂ ,ಅಂದರೆ ಕೆಡುಕಿನ ಅಪರಾವತಾರಕ್ಕೂ ಮಾದರಿಯಾಗಿದ್ದ ಎಂಬ ಉದಾಹರಣೆ ನೀಡಿದೆ. ಅದು ಅವರ ಗಮನ ಸೆಳಯಿತು.ನಂತರ ಒಬ್ಬೊಬ್ಬರಾಗಿ ಮಾತನಾಡಿದರು ಆದರೆ ಯಾರೂ ಪುಸ್ತಕದ ಬಗ್ಗೆ ಸಮಗ್ರ  ಚರ್ಚೆಮಾಡಲಿಲ್ಲ. ಅಲ್ಲಿ ಇಲ್ಲಿ ಒಂದೊಂದು ಅಂಶ ಹೇಳಿದರು.
. ನಂತರ  ನಾವು ಅಮೇರಿಕನರು ವೇಗವಾಗಿ  ಮಾತನಾಡುವೆವು. ಕೆಲದಿನ ರೇಡಿಯೋ ಕೇಳಿ,  accent ಅರ್ಥವಾಗುವುದು  ಎಂಬ ಸಲಹೆ ನೀಡಿದರು. ಕೊನೆಯದಾಗಿ ಒಬ್ಬಮಹಿಳೆ “ you have  put us to shame with your presentation” ಎಂದಾಗ ಇನ್ನು ಹಲವರು ತಲೆದೂಗಿದರು..
ಎಲ್ಲರಿಗೂ ವಂದಿಸಿ ಹೊರ ಬಂದೆ.
ಮಾರನೆಯದಿನ ಲೈಬ್ರರಿಗೆ  ಹೋಗಿ ಬರುವಾಗ ಒಬ್ಬ ಮಹಿಳೆ ಬಂದು    How are  you Mr. Row  ,ಎಂದಾಗ ಕಣ್ಣು ಕಣ್ಣುಬಿಟ್ಟೆ.   ಗಡಿಬಿಡಿಯಲ್ಲಿ  Fine  thank you ಎಂದೆ
 
.

ಇದು ಯಾರಪ್ಪ  ಇಲ್ಲಿ ನನಗೆ ಮಿ.ರೌ . ಅನ್ನುವವರು !   ನನ್ನ ಟ್ಯೂಬ್‌ ಲೈಟ್‌ ತಲೆಯಲ್ಲಿ  ನಂತರ  ಭಗ್‌  ಎಂದು ಬೆಳಕು ಮೂಡಿತು. ಹಿಂದಿನ ದಿನದ ಸಭೆಯ ಪ್ರಭಾವ,  ಎಂದು

 

1 comment:

  1. ಒಳ್ಳೆ ಕೃತಿಯನ್ನು ಅತ್ಯಂತ ಸರಳವಾಗಿ ಸಹಜವಾಗಿ ಪರಿಚಯಿಸಿದ್ದಕ್ಕೆ ಧನ್ಯವಾದಗಳು ಸರ್ ಓದಿ ಕುಶಿ ಆಯಿತು

    ReplyDelete