Tuesday, August 13, 2013

ಜನಮೇಜಯನ ನಾಗಯಜ್ಞ




                        ಹಳೆ ವಸ್ತು ಹೊಸ ದೃಷ್ಟಿಯ ನಾಟಕ
                                                                                ಅನುವಾದ-  ಡಾ.ವಿಜಯಾಸುಬ್ಬರಾಜ್‌
ಸಮೃದ್ಧ ಸಾಹಿತ್ಯಕ್ಕೆ ಸೃಜನ ಶೀಲ ಮತ್ತು ಸೃಜನೇತರ ಸಾಹಿತ್ಯದ ಜೊತೆಗೆ ವಿವಿಧ ಸಂಸ್ಕೃತಿ ,ಭಾಷೆ ಮತ್ತು ಜನಜೀವನದ ಪರಿಚಯಿಸುವ ಅನುವಾದಗಳೂ ಅತ್ಯಗತ್ಯ, ಈ ದಿಶೆಯಲ್ಲಿ ಗಳಗನಾಥ,ಅ,ರಾ. ಕೃಷ್ಣ ಶಾಸ್ತ್ರಿಗಳಿಂದ ಹಿಡಿದು ಇಲ್ಲಿಯವರೆಗೆ ಅನ್ಯಭಾರತೀಯ ಭಾಷೆಗಳ ಉತ್ತಮ ಕೃತಿಗಳನ್ನು ಕನ್ನಡಕ್ಕೆ ತಂದವರು ಅನೇಕರಿದ್ದಾರೆ. ಅದಕ್ಕೆ ಇತ್ತೀಚಿನ ಸೇರ್ಪಡೆ ಎಂದರೆ  ಹಿಂದಿ ನಾಟಕ,ಜನಮೇಯನ ನಾಗಯಜ್ಞ. ಹಿಂದಿ ಸಾಹಿತ್ಯ ರಂಗದಲ್ಲಿ ಜೈಶಂಕರ ಪ್ರಸಾದ ಮಹತ್ವದ ಹೆಸರು. ಚಿಕ್ಕವಯಸ್ಸಿನಲ್ಲಿಯೇ ಕಾಲವಾದರೂ ಚಿರಕಾಲ ಉಳಿಯುವಂಥಹ  ಅನೇಕ ಕೃತಿಗಳ ಕಾಣಿಕೆ ನೀಡಿರುವರು.ನಾಟಕದ ಹೆಸರೇ ಸೂಚಿಸುವಂತೆ ಇದು ಯಾಗದ ಹೆಸರಲ್ಲಿ ಜನಾಂಗ ಒಂದರ ನಾಶದ ಹುನ್ನಾರ. ಇದು ಸರ್ಪಯಾಗವಲ್ಲ ನಾಗಯಜ್ಞ.  ಹಳೆ ವಸ್ತುವಿನತ್ತ ಹೊಸ ನೋಟ ಬೀರುವ ಯತ್ನ ಈ ನಾಟಕದ ವಿಶೇಷ, ಇದರಲ್ಲಿ ಆರ್ಯ ಮತ್ತು ಬುಡಕಟ್ಟುಜನಾಂಗಗಳ  ನಡುವಣ ಸಂಘರ್ಷ , ಅಂತರ್‌ಜನಾಂಗದ ವಿವಾಹ, ವೈಯುಕ್ತಿಕ ಲಾಲಸೆಗೆ ಸಿದ್ಧಾಂತದ ಲೇಪನ,ನಗರೀಕರಣದ ದುರಂತ ಹೀಗೆ ಹಲವು ಆಯಾಮಗಳನ್ನು ಅನಾವರಣ ಗೊಳಿಸುತ್ತ ಆದುನಿಕ ಸಮಾಜ ಅನುಭವಿಸುತ್ತಿರುವ ತಲ್ಲಣಗಳನ್ನು ನಾಟಕ ಪ್ರತಿನಿಧಿಸುತ್ತದೆ,

ಪಾಂಡವರ ಮೊಮ್ಮಗನ ಕಾಲದ  ಕಥಾವಸ್ತು. ಮಹಾಭಾರತ  ಯುದ್ಧಾನಂತರದ ಪರಿಣಾಮ ಪ್ರತಿಬಿಂಬಿಸುತ್ತದೆ. ’ಯುದ್ಧದಲ್ಲಿ ಸೋತವನು ಸತ್ತ ಗೆದ್ದವನು ಅತ್ತ  ಎಂಬ ಮಾತಿದೆ.ಅದರ ಮುಂದುವರಿದ ಭಾಗ ಇದಾಗಿದೆ. ನಾಟಕದಲ್ಲಿ ಬಹುತೇಕ ಪಾತ್ರಗಳುಪೌರಾಣಿಕ ಹಿನ್ನೆಲೆಯವಾದರೂ ಕಥೆಯ ಸುಗಮ ಓಟಕ್ಕೆ ಅನುಕೂಲವಾಗಲು  ಒಂದೆರಡು ಹೊಸ ಪಾತ್ರಗಳೂ ಇವೆ. . ಆದರೆ ಒಂದೇ ವಿಶೇಷ. ಇಲ್ಲಿ ವೈಭವೀಕರಣ ಇಲ್ಲ. ಗುರಪತ್ನಿಗೆ ಮೇಲೆ ಶಿಷ್ಯ ಉತ್ತಂಕನ ಮೇಲಿನ ಮೋಹ,ಅಸಮವಿವಾಹವಾದ ಕುಲಪತಿ ವೇದ ಮಡದಿಯ ನಡೆಯರಿತೂ ಮನ್ನಿಸುವ ಮಾನವೀಯತೆ ಆಧುನಿಕ ದೃಷ್ಟಿಕೋನದ ಸೂಚಕಗಳಾಗಿವೆ.ನಾಟಕದ ಭಾಷೆ ತುಸು ಅಲಂಕಾರಿಕ. ಆದು ಆಕಾಲದ ಪರಿಸರಕ್ಕೆ ಸೂಕ್ತ ಎನಿಸಿದರೂ ಇಂದಿನ ಓದುಗರಿಗೆ ಕೃತಕೆನಿಸುವುದು. ಅತಿ ಹೆಚ್ಚಿನ ಸಂಖ್ಯೆಯ ಪಾತ್ರಗಳು, ಸತತ ಬದಲಾಗುವ ದೃಶ್ಯಗಳು ಮತ್ತು ಅಗತ್ಯವಾದ ರಂಗಪರಿಕರ  ರಂಗ ಪ್ರಯೋಗಮಾಡ ಬಯಸುವವರಿಗೆ ಸವಾಲೆಸೆಯುತ್ತವೆ.
ಆದರೆ ನಾಟಕದ ಮಿತಿಯೇ ಅದರ ಶಕ್ತಿಯೂ ಹೌದು. ಸಾಹಿತಿಕ ಸಾಂಸ್ಕೃತಿಕ ಮೌಲ್ಯ, ಹಳೆಯ ಘಟನೆಯ ಮರುವ್ಯಾಖ್ಯಾನ ವಿರಳವಾಗುತ್ತಿರುವ ಶಿಷ್ಟ ಸಾಹಿತ್ಯ ಪ್ರಕಾರಕ್ಕೆ ಮರುಪೂರಣ ನೀಡಿದೆ. ಇನ್ನು ಅನುವಾದಕಿ ಸಾಕಷ್ಟು ಸ್ವತಂತ್ರ್ಯ ವಹಿಸಿ ಸರಳ ಭಾಷೆ ಬಳಸಿರುವರು.ಅದರಿಂದ ನಮ್ಮ ಭಾಷೆಯ ಜಾಯಮಾನಕ್ಕೆ ಹೊಂದುವಂತಿದೆ. ಅನುವಾದ ಎನ್ನಿಸುವುದೇಇಲ್ಲ.ಇಂಥಹ ಕೃತಿಯನ್ನು ಕನ್ನಡಕ್ಕೆ ತರಲು ಎಂಟೆದೆ ಬೇಕು. ಜನಪ್ರಿಯತೆ ಮತ್ತು ವ್ಯವಹಾರಿಕತೆ  ಇದರ ಮಾನದಂಡ ಆಗಲಾರದು.ಸಾಹಿತ್ಯ ಪ್ರೀತಿ ಮತ್ತು ಸಂಸ್ಕೃತಿಯ ಅಭಿಮಾನದಿಂದ ಮಾತ್ರ ಇಂಥಹ ಕೃತಿ ಬರಲುಸಾಧ್ಯ. ಅದರಿಂದ ಲೇಖಕಿಯ ಹಿನ್ನೆಲೆಯೂ ಮುಖ್ಯವಾಗುತ್ತದೆ.
ಅನುವಾದ ಅಕ್ಕರೆಗಳಿಸಬೇಕಾದರೆ ಎರಡೂ ಭಾಷೆಯಲ್ಲಿ ಪ್ರಭುತ್ವ ಅತ್ಯಗತ್ಯ. ಅಂದಾಗ ಮಾತ್ರ ಅನ್ಯ ಭಾಷೆಯ ಸಾರ ಸೊಗಡು ಸೆರೆ ಹಿಡಿಯಲು ಸಾಧ್ಯ.ಜೊತೆಗೆ ಅನುವಾದಕರು ಸ್ವತಃ ಕವಿಯಾದರೆ ಅನುವಾದವು ಮೂಲ ಕೃತಿಯೇ ಅನಿಸಬಹುದು  .ಡಾ. ವಿಜಯಾಸುಬ್ಬರಾಜ್ ಬಹುಭಾಷಾ ಕೋವಿದೆ.  ಕನ್ನಡ ಎಂ.ಎ.ಯಲ್ಲಿ ಚಿನ್ನದ ಪದಕ ,ಜೊತೆಗೆ ಇಂಗ್ಲಿಷ್ ನಲ್ಲೂ ಸ್ನಾತಕೋತ್ತರ ಪದವಿ. ಹಿಂದಿಯ ಮೇಲೂ ಸಂಪೂರ್ಣ ಹತೋಟಿ ಫ್ರೆಂಚ್ ಮತ್ತು ತೆಲುಗುಭಾಷೆಗಳ  ಪರಿಚಯವೂ ಉಂಟು . ಕನ್ನಡದಿಂದ ಇಂಗ್ಲಿಷ್‌, ಇಂಗ್ಲಿಷ್‌ನಿಂದ ಕನ್ನಡ ಅನುವಾದ ಮಾಡುವುದು ನೀರುಕುಡಿದಂತೆ ,ಸುಮಾರು ಹನ್ನೆರಡಕ್ಕೂಹೆಚ್ಚು ಅನುವಾದ ಕೃತಿಗಳಿಗೆ ಎಂಟುವಿವಿಧ ಪ್ರಶಸ್ತಿಗಳು, “ಶಾಲ್ಮಲಿ “ಕಾದಂಬರಿ ಅನುವಾದಕ್ಕೆ ಕರ್ನಾಟಕ ಅನುವಾದ ಅಕಾಡಮಿಯ ಪ್ರಶಸ್ತಿ  ಅವರದು ಪದವಿಯಲ್ಲಿ ವಿಜ್ಞಾನದ ಅಧ್ಯಯನ. ಇದರಿಂದ ಅವರ ಕೃತಿಗಳಲ್ಲಿ ಬರಿ ಭಾವುಕತೆಗೆ ಮಣೆಹಾಕದೆ ವೈಜ್ಞಾನಿಕ ವಿಶ್ಲೇಷಣೆಗೆ ಆದ್ಯತೆ. ಇನ್ನೇನು ಬೇಕು ಉತ್ತಮ ಅನುವಾದ ಹೊರತರಲು ಅರ್ಹತೆ. ಅದರ ಮೇಲೆ ಸ್ವತಃ ಸೃಜನ ಶೀಲ ಬರಹದ ಗೀಳು.  ಕಥಾ ಸಂಕಲನ, ಕಾದಂಬರಿ , ನಾಟಕ, ಪ್ರಬಂಧ ಕಾವ್ಯ, ವಿಮರ್ಶೆ ಹೀಗೆ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿ ಹೆಜ್ಜೆ ಗುರುತು. ಪ್ರಶಶ್ತಿ
ಪ್ರಶಸ್ತಿ ವಿಜೇತ   “ ಏನ ಹೇಳಲಿ ಗೆಳೆಯಾ,ಮತ್ತು “ ಹಾಡೇನ ಪಾಡೇನ  “,ಸೇರಿದಂತೆ ಎಂಟು ಕವನ ಸಂಕಲನ, ಹೊರತಂದಿರುವ ಹತ್ತು ಕಥಾಸಂಕಲನಗಳಲ್ಲಿ , ಕನ್ನಡ ಸಾಹಿತ್ಯ ಪರಿಷತ್‌ಪ್ರಶಸ್ತಿಯೊಂದಿಗೆ ಎಂಟು ವಿವಿಧ ಪ್ರಶಸ್ತಿಪಡೆದಿವೆ. ಅವರು ರಚಿಸಿದ ೧೦ ನಾಟಕಗಳಲ್ಲಿ  ಗೋರೂರು ಪ್ರಶಸ್ತಿಸೇರಿದಂತೆ ಸುಮಾರು ೪ ಪ್ರಶಸ್ತಿಗಳು ಬಂದಿವೆ.,  ಕಾದಂಬರಿ, ಕಥಾ ಸಂಕಲನ ಮತ್ತು ಪ್ರವಾಸಕಥನಗಳೂ  ಪ್ರಶಸ್ತಿ ಭಾಜನವಾಗಿವ.  ಸಾಹಿತ್ಯ ಸಾಧನೆಗೆ ಕೆಂಪೆ ಗೌಡ ಪ್ರಶಸ್ತಿ ಮತ್ತು ಅತ್ತಿಮಬ್ಬೆ ಪ್ರಶಸ್ತಿ ಗಳು ಸಂದಿವೆ.
ಎಪ್ಪತ್ತಕೂ ಹೆಚ್ಚು ಕೃತಿಗಳನ್ನು ರಚಿಸಿ ಅದರಲ್ಲಿ ಇಪ್ಪತ್ತಕ್ಕೂ ಅಧಿಕ ಪ್ರಶಸ್ತಿಗಳನ್ನು ಪಡೆದ ಅವರ ಸಾಧನೆಯ ಹಿನ್ನೆಲೆ ಕುರಿತು ಕುತೂಹಲ ಮೂಡುವುದು ಸಹಜ. ಅಮಿತ ಕಾವ್ಯದ್ರವ್ಯಹೊಂದಲು ಅವರ ಅಸಾಧರಣ ಜೀವ ದ್ರವ್ಯವೇ ಕಾರಣ ಎನ್ನಬಹುದು.ಅವರು ಜನಿಸಿದುದು ಬೆಂಗಳೂರಿನ ಮಧ್ಯಮ ದರ್ಜೆಯ ಕುಟುಂಬ ಒಂದರಲ್ಲಿ. ತಂದೆ ಸಿ ಟಿ ಸೀತಾರಾಂ, ತಾಯಿಲಕ್ಷ್ಮಿ ನಾಂಚಾರ್‌ ದಂಪತಿಗಳ ಮೂರನೆಯ ಮಗುವಾಗಿ ೧೯೪೭ ಏಪ್ರಿಲ್‌ನಲ್ಲಿ   ಜನನ. ಬೆನ್ನಿಗೆ ಇಬ್ಬರು ತಮ್ಮಂದಿರು, ಎಳೆ ವಯಸ್ಸಿನಲ್ಲಿಯೇ ತಂದೆ ತೀರಿದರು...ಹಿರಿಯಕ್ಕನೇ ಖಾಸಗಿ ಪಾಠ ಹೇಳಿ ಮನೆವಾರ್ತೆ ನೋಡಿಕೊಳ್ಳುವ ಪರಿಸ್ಥಿತಿ. ಪ್ರಾಥಮಿಕ ಮತ್ತು ಹೈಸ್ಕೂಲ್‌ ಶಿಕ್ಷಣ ಕಾರ್ಪೊರೇಷನ್‌ಶಾಲೆಯಲ್ಲಿ .ಗುಬ್ಬಿ ಕಂಪನಿ ರಂಗ ನಟ ಮತ್ತು ಚಿತ್ರ ನಟರಾಗಿದ್ದ ಚಿಕ್ಕಪ್ಪ ಸಿ.ಟಿ.ಶೇಷಾಚಲಂ ಅವರಿಂದ ಕಲೆಯ, ಸಾಹಿತ್ಯದ ನಂಟು. ಆಂಟಿತು. ಹೈಸ್ಕೂಲು ಓದುವಾಗಲೇ ಬಿಡುವಿನಲ್ಲಿ ಮನೆಪಾಠ ಹೇಳಿ ಸಂಸಾರ ನೊಗಕ್ಕೆ  ಹೆಗಲು ಕೊಡುವ ಕೆಲಸ ಪದವಿ ಪ್ರಾಧ್ಯಾಪಕಿಯಾಗಿ  ೨೦೦೩ ರಲ್ಲಿ ನಿವೃತ್ತರಾಗುವವರೆಗೂ ಮುಂದುವರೆದಿದೆ. ಬಿ.ಎಸ್‌.ಸಿ ಮುಗಿಸಿ ಓದಿದ ಶಾಲೆಯಲ್ಲಿ ಅರೆಕಾಲಿಕ ವಿಜ್ಞಾನ ಶಿಕ್ಷಕಿಯಾಗಿ ಕಾರ್ಯನಿರ್ವಹಣೆ .ಆದರೆ ಜ್ಞಾನ ದಾಹ ಇಂಗಿಸಲು ಎಂ ಎ. ಆದ್ಯಯನ.. ಕಲಿಕೆ ಗಳಿಕೆ ಒಟ್ಟೊಟ್ಟಿಗೆ ನಡೆಸಿ ಸೆಂಟ್ರಲ್‌ ಕಾಲೇಜಿನಲ್ಲಿ ಕನ್ನಡ ಎಂ ಎ ಯಲ್ಲಿ ಸುವರ್ಣ ಪದಕ ಪಡೆದರು. .ವಿದ್ಯಾರ್ಥಿ ಜೀವನದುದ್ದಕ್ಕೂ ಗುರುಗಳ ಕಣ್ಮಮಣಿ. ಕಾರಣ ಸಾಹಿತ್ಯ, ಸಂಗೀತ, ನಾಟಕ, ಸಂಶೋಧನೆಯಲ್ಲಿನ  ಆಸಕ್ತಿ . ಬಿ.ವಿ ಕಾರಂತರ ಗರಡಿಯಲ್ಲ ನಾಟಕರಂಗದಲ್ಲಿ ಮಿಂಚಿದರೆ ಮತ್ತು ಡಾ. ಜಿ.ಎಸ್. ಎಸ್‌ ಮಾರ್ಗದರ್ಶನದಲ್ಲಿ ಪಿ .ಎಚ್‌ಡಿ. ಪದವಿ . ಪ್ರತಿಷ್ಠಿತ ಎಂ ಇ.ಎಸ್‌. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ಹುದ್ದೆ ೧೯೬೯ ರಲ್ಲಿ  ದೊರೆಯಿತು. ಅಲ್ಲಿಂದ ಆರ್ಥಿಕ ಸ್ಥಿರತೆ ಬಂತೆಂದು ಸಾಹಿತ್ಯದ ತುಡಿತ ಕಡಿಮೆಯಾಗಲಿಲ್ಲ  ಎಲ್ಲ ರಂಗಗಳಲ್ಲೂ ನಾಗಾಲೋಟದ ಸಾಧನೆ . ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಶಬ್ದ ಚಿತ್ರ ,ರೂಪಕ, ನಾಟಕಗಳ ರಚನೆ ಮತ್ತು ಪ್ರಸ್ತುತಿ. ಡಾ. ವಿಜಯಾ ಅವರನ್ನು  ೧೯೭೫  ರಲ್ಲಿ ಮದುವೆಯಾದ ಶ್ರೀ. ಎಸ್‌ ಸುಬ್ಬರಾಜ್‌ ವೃತ್ತಿಯಿಂದ ಇಂಜನಿಯರ್‌ ಆದರೂ ಪ್ರವೃತ್ತಿಯಿಂದ ಸಾಹಿತ್ಯ ಪ್ರೇಮಿ. ಅದರ ಫಲ ಸಾಹಿತ್ಯ ಸಾಧನೆಯ ಹುರುಪಿನ ಹೆಚ್ಚಳ.. ಮಗಳು ಮೃಣಾಲಿನಿ ಆಗಮನವೂ ಅವರಿಗೆ ಅನುಕೂಲ ದಾಂಪತ್ಯದಿಂದಾಗಿ ಆತಂಕಕ್ಕೆ ಕಾರಣವಾಗಲಿಲ್ಲ
ಸಾಮಾಜಿಕ ರಂಗದಲ್ಲೂ ಕ್ರಿಯಾಶೀಲೆ. ಸಾಹಿತ್ಯಪರಿಷತ್ತಿನ  ’ಕನ್ನಡ ನುಡಿ’ ಪತ್ರಿಕೆಯ ಪ್ರಥಮ ಮಹಿಳಾಸಂಪಾದಕಿ. ಕರ್ನಾಟಕ ಲೇಖಕಿಯರ ಸಂಘದ ಉಪಾದ್ಯಕ್ಷೆ. ಹಲವು ಸಂಘ ಸಂಸ್ಥೆಗಳಲ್ಲಿ ಸದಸ್ಯೆ. ಸಾಮಾಜಿಕ ರಂಗದಲ್ಲೂ ಆಸಕ್ತಿ.  ಇಷ್ಟೆಲ್ಲ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ನಿರಂತರ ದುಡಿಮೆಯ ದಟ್ಟವಾದ ಅನುಭವಗಳನ್ನು ದಿಟ್ಟವಾಗಿ ಬರಹದಲ್ಲಿ ಮೂಡಿಸಿರುವುದೇ ಅವರ ಸಾಹಿತ್ಯದ ಗಟ್ಟಿತನದ  ಗುಟ್ಟು. ಇಷ್ಟೆಲ್ಲ ಕಾರ್ಯಭಾರದಲ್ಲೂ  ತಮ್ಮ ಶೈಕ್ಷಣಿಕೆ ಬದ್ದತೆಗೂ ಆದ್ಯತೆ . ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರು. ಕಾಲೇಜು ಶಿಕ್ಷಣ ಇಲಾಖೆಯಿಂದ ಆದರ್ಶ ಶಿಕ್ಷಕಿ ಪ್ರಶಸ್ತಿ. ನಿವೃತ್ತರಾದಮೇಲೂ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರದಲ್ಲಿ ಮತ್ತು ಇಂಡಿಯನ್‌ ಇನಸ್ಟಿಟ್ಯೂ ಅಫ್ ಆಯುರ್ವೇದಿಕ್‌ ಸ್ಟಡೀಸ್‌ನಲ್ಲಿ  ಅತಿಥಿ ಉಪನ್ಯಾಸಕರಾಗಿ ಸೇವೆ, ಬಿ. ಎಂ ಶ್ರೀ.ಪ್ರತಿಷ್ಠಾನದಲ್ಲಿ ಎಂ.ಫಿಲ್‌.ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಬೆಂಗಳೂರು ವಿಶ್ವವಿದ್ಯಾಲಯದ ‘ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ , ಹಲವು ಪ್ರಶಸ್ತಿ ಸಮಿತಿಗಳಲ್ಲಿ ಸೇವೆ. ಹೀಗೆ ದಣಿವರಿಯದ ದುಡಿಮೆ ಅವರದು.ಬಹುಮುಖಿ ಸಾಧಕಿಯಾದ ಡಾ. ವಿಜಯಾಸುಬ್ಬರಾಜ್‌ ಅವರ ಇತ್ತೀಚಿನ ಕೃತಿ ’ ಜನಮೇಜಯನ ನಾಗಯಜ್ಞ ಲೋಕಾರ್ಪಣೆಯಾಗುತ್ತಿದೆ.

-ಎಚ್‌..ಶೇಷಗಿರಿರಾವ್‌


No comments:

Post a Comment