Thursday, September 13, 2012

ಘಟ್ಟದ ತಪ್ಪಲಲ್ಲೂ ಬಿಡದ ಹುಟ್ಟುಗುಣ


 ಘಟ್ಟದ ತಪ್ಪಲಲ್ಲೂ ಬಿಡದ ಹುಟ್ಟುಗುಣ
ರಿಪ್ ವ್ಯಾನ್ ವಿನ್ ಕಲ್', ಕತೆಗಾರ ಇರ್ವಿನ್ ವಾಶಿಂಗ್ ಟನ್ ಇಲ್ಲಿಗೆ ಬಂದೆ ಇರಲಿಲ್ಲವಂತೆ. ಹರೆಯದ ಹುಡುಗ ಬೆಟ್ಟದ ಮೇಲೆ ಕುಡಿದು ಮಲಗಿದ ಎದ್ದು ನೋಡಿದಾಗ ಮಾರುದ್ದ ಬಿಳಿ ಗಡ್ಡತಲೆಯಲ್ಲ ಬೋಳು. ಹಣ್ಣು ಹಣ್ಣು ಮುದುಕ. ಕೆಳಗಿಳಿದು ಬಂದರೆ ಊರೆಲ್ಲ ಪೂರ್ಣ ಬೇರೆ... ಪರಿಚಿತರಿಲ್ಲವೇ ಇಲ್ಲ. ಮನೆ ಹುಡುಕಿ ಹೋದಾಗ ಹರೆಯದವ ಅವನ ಮೊಮ್ಮಗನಂತೆ...' ಈ ಕತೆ ದೇಶ, ಕಾಲ, ಭಾಷೆ ಮೀರಿ ಜನಪ್ರಿಯ. ಇಲ್ಲಿ ದೊರಕುವ ಮದ್ಯ ಮತ್ತು ಬರುವ ನಿದ್ದೆ ನೋಡಿದರೆ ಕತೆ ನಿಜ ಎನಿಸಿತು. ಸುತ್ತಮುತ್ತ ನೋಡಿದರೆ ಸರ್ವಜನಾಂಗದ ಸುಂದರ ತೋಟ ಕಾಣಿಸಿತು. ಬಿಳಿಯರು, ಕರಿಯರು, ಕಂದು, ಕೆಂಪು, ಹಳದಿ, ಕಕೆಶಿಯನರು, ಆಫ್ರಿಕಾನರು, ದೇಸಿಗಳು, ಮುಂಗೊಲಿಯ ಮೂಲದವರು, ವರ್ಣ, ಜನಾಂಗ ಭೇದವಿಲ್ಲದೆ ಎಲ್ಲ ಒಂದೆಡೆ  ಇದ್ದಾರೆ.
ಇನ್ನು ಭಾಷೆಗಳು ಹಲವು ಬಗೆಯ ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಶ್, ಇಟ್ಯಾಲಿಯನ್, ಕೊರಿಯನ್ ಅಲ್ಲಲ್ಲಿ ಹಿಂದಿ. ಮಿನಿ ವಿಶ್ವ ಸಂಸ್ಥೆಯೇ ಅಲ್ಲಿದೆ ಎನಿಸಿತು. ಎಲ್ಲ ಹರೆಯದ ಹುರುಪಿನ ಜೋಡಿಗಳು. ಅಲ್ಲೊಬ್ಬ, ಇಲ್ಲೊಬ್ಬ ಮಕ್ಕಳು. ಸಾಕು ನಾಯಿಗಳು ಮಾತ್ರ ಸಾಕಷ್ಟು. ಎಲ್ಲ ಸರ್ವ ಸನ್ನದ್ಧರಾಗೇ ಬಂದಿದ್ದಾರೆ. ಅಲ್ಲಿ ಇದ್ದ ಎರಡು ಮರಗಳಿಗೆ ಬಿಗಿದ ಹ್ಯಾಮಕ್ಕಿನಲ್ಲಿ (ಹ್ಯಾಮಕ್ ಎಂದರೆ, ಎರಡು ಮರಗಳಿಗೆ ಕಟ್ಟಿದ ಹಗ್ಗದಿಂದ ಮಾಡಿದ ಬಲೆ, ತೊಟ್ಟಿಲ ತರ ಉಪಯೋಗಿಸುತ್ತಾರೆ. ಒಂದು ನಿಸರ್ಗದ ನಡುವೆ ಅಂತರಿಕ್ಷದಲ್ಲಿ ಮಲಗಿದ ಅನುಭವ.) ಮಲಗಿ ಮುಗಿಲು ನೋಡುವವರು, ಕೆಲವರಾದರೆ, ಮರದ ಟೊಂಗೆಗೆ ನೇತು ಬಿಟ್ಟ ಜೋಕಾಲಿಯಲ್ಲಿ ತೂಕಡಿಸುವವರು, ಟೆಂಟ್ ಮುಂದೆ ಮರದ ಕೆಳಗೆ ಹಾಕಿದ ಮಡಿಚುವ ಆರಾಮ ಕುರ್ಚಿಯಲ್ಲಿ ಕುಳಿತು ಓದುವವರು ಹಲವರು. ಇದ್ದ ಜಾಗದಲ್ಲೇ ಶಟಲ್ ಆಡಿದರೆ, ಊಟದ ಮೇಜಿನ ಮೇಲೆ ಕೇರಂ, ಚೆಸ್. ನಿಧಾನವಾಗಿ ಕತ್ತಲು ಕವಿದಂತೆ ಚಳಿಗಾಳಿ ಶುರುವಾಯಿತು. ಕ್ಯಾಂಪ್ ಫೈರ್ ಹಾಕಲು ಗಡಿಬಿಡಿ ಮೊದಲಾಯಿತು. ಒಣ ಕಟ್ಟಿಗೆ ಹೇರಿಕೊಂಡ ವಾಹನ ಹಾಜರು. ಮಟ್ಟಸವಾಗಿ ಕೊರೆದ ಸುಮಾರು ಗಾತ್ರದ ದುಂಡನೆ, ನಿಗೂಳಾದ, ದಿಂಡುಗಳು. ಇವನ್ನು ಸುಡುವುದೇ... ಎಂದು ಕಣ್ಣು ಕಣ್ಣು ಬಿಟ್ಟೆವು. ಕಡ್ಡಿ ಪುರಲೇ ಕೊಂಬೆ, ರೆಂಬೆ ಸುಡುವ ನಮಗೆ, ಮನೆ ಮುಟ್ಟಿಗೆ ಯೋಗ್ಯವಾದ ಅವುಗಳನ್ನು ಸುಡುವುದಕ್ಕೆ, ನೋಟಿನ ಕಟ್ಟಿಗೇ ಬೆಂಕಿ ಹಚ್ಚಿದಷ್ಟು ಬಾಧೆಯಾಯಿತು. ಸುತ್ತಲು ನೋಡಿದಾಗ ಮುಗಿಲು ಮುಟ್ಟುವ ನಿಸೂರಾದ ಓಕ್ ಮರಗಳ ಗುಂಪು ತುಸು ನೆಮ್ಮದಿ ತಂದಿತು.
ಅಗ್ನಿ ದೇವನಿಗೆ ಹವಿಸ್ಸಿನಂತೆ  ಹಾಕಲು ಎಣ್ಣೆ  ಕ್ಯಾನ್. ಎಲ್ಲದಕ್ಕೂ ಕಾಸು. ಬೆಲೆ ಕೇಳುವ ಹಾಗಿಲ್ಲ ಹೇಳಿದಷ್ಟು. ಅಗ್ನಿ ದೇವ ಚಕ್ಕನೆ ಪ್ರತ್ಯಕ್ಷನಾದ. ಕೆಂಡದ ಕುಂಡದ ಮುಂದೆ ಎಲ್ಲ ದುಂಡಗೆ ಕುಳಿತೆವು. ನಾವು  ಹಿರಿಯರು ಆಗಲೇ ಬೆಚ್ಚನೆ ಉಡುಪು ಧರಿಸಿದ್ದೆವು. ತಾಳಲಾರದ ಚಳಿ. ಕೆಂಡದಲ್ಲಿ ಕೈ ಇಟ್ಟರೆ ಮಾತ್ರ ಮೈ ತುಸು ಬಿಸಿಯಾಗಬಹುದು ಎನಿಸಿತು. ಉಟ್ಟ ಬಟ್ಟೆ ಸುಟ್ಟೀತು ಎಂದು  ಸುಮ್ಮನಾದೆವು.  ನಮ್ಮವರು ಮೆಕ್ಕೆ ತೆನೆ ತಂದಿದ್ದರು. ಅವನ್ನು ಹದವಾಗಿ ಸುಟ್ಟು ಬಿಸಿ ಬಿಸಿ ಕಾಳನ್ನು ಬಿಡಿಸಿ ತಿನ್ನ ತೊಡಗಿದೆವು. ನಮ್ಮ ಯುವ ಗೆಳೆಯರು ಉದ್ದನೆ ಲೋಹದ ಕಡ್ಡಿ ತೆಗೆದು ಅದಕ್ಕೆ ಪೊಟ್ಟಣ ದಲ್ಲಿದ್ದ ಏನನ್ನೋ ತೆಗೆದು ಸುಡತೊಡಗಿದರು. ಅದು ಸುಯ್ಯ್ ಎಂದಾಗ ಹಿಂತೆಗೆದು ಚಪ್ಪರಿಸತೊದಗಿದರು. ನಮಗೂ ತಿನ್ನಲು ಹೇಳಿದರು. ಹೇಳಿ ಕೇಳಿ ಶುದ್ದ ಸಸ್ಯಾಹಾರಿಗಳು, ಮೊದಲೇ ಅನುಮಾನದ ಪ್ರಾಣಿಗಳು. ಏನೇ ತಿನ್ನುವ ಮೊದಲು ಅದರಲ್ಲಿ ಮಾಂಸದ  ಅಂಶ ಇಲ್ಲ ಎಂದು ಖಾತ್ರಿ ಮಾಡಿಕೊಳ್ಳುತಿದ್ದೆವು. ತೊಂದರೆ ಏಕೆಂದು ಎಲ್ಲಿಯೇ ಹೋದರು ಬುತ್ತಿಯ ಗಂಟು, ನೀರಿನ ಶೀಸೆ ನಮ್ಮ ಸಂಗಾತಿ. ಈ ರೀತಿ ಮಾಂಸ ಸುಡುವರೆಂದು ಎಲ್ಲೋ ಓದಿದ ನೆನಪು. ಈ ಗೊಡವೆಯೇ ಬೇಡ ಎಂದು ತಲೆ ಆಡಿಸಿದೆವು. ಮಾರನೆ ದಿನ ಬೆಳಕಿನಲ್ಲಿ ಅದರ ಮೇಲಿದ್ದ ಬರಹ ಓದಿದೆ. ಅದು 'ಲಶ್  ಮೇಲೋಎಂದು ಹೆಸರಿನ ಸಕ್ಕರೆಯ ತಯಾರಿ.  ಹೇಗಿದ್ದರೂ ಸಿಹಿರಕ್ತದ ನಾವು ತಿನ್ನುವ ಹಾಗಿಲ್ಲ. ಬೇಡ ಎಂದಿದ್ದು ಒಳ್ಳೆಯದೇ ಆಯಿತು ಎಂದು ಸಂತಸಪಟ್ಟೆ. ಹೊಟ್ಟೆ ಆಗಲೇ ತಾಳ ಹಾಕ ಹತ್ತಿತು.
ಮನೆಯಿಂದ ತಂದಿದ್ದ  ದಿಢೀರ್ ಉಪ್ಪಿಟ್ಟು ತಡವಿಲ್ಲದೆ ರೆಡಿಯಾಯಿತು. ಜತೆಗೆ ಚಿಪ್ಸ್, ಉಪ್ಪಿನಕಾಯಿ. ಬಿಸಿ ಬಿಸಿ ಉಪ್ಪಿಟ್ಟು ಹೊಟ್ಟೆ ಸೇರಿತು. ಸುತ್ತಮುತ್ತಲಿನವರ ಹಾಡು, ಕೇಕೆ, ಕುಣಿತ ಸಾಗಿಯೇ ಇತ್ತು. ಎಲ್ಲರೂ ಕಡಿಮೆ ಉಡುಪಿನಲ್ಲೇ ಇದ್ದರು. ಇವರಿಗೆ ಚಳಿಯಾಗದೇನೋ ಎನಿಸಿತು. ನಂತರ ತಿಳಿಯಿತು. ಅವರ ಮೈ ಬಿಸಿಯ ಕಾರಣ. ಹೊರಗಿನ ಬೆಂಕಿಯಲ್ಲ. ಹೊಟ್ಟೆಯಲ್ಲಿ ಸೇರುತ್ತಿದ್ದ ದ್ರವಾಗ್ನಿ ಎಂದು. ಗಂಟೆಗಟ್ಟಲೆ ಕೈನಲ್ಲಿ ಹಿಡಿದು ಬಾಯಿ ಚಪ್ಪರಿಸುತಿದ್ದ ಬಣ್ಣ ಬಣ್ಣದ ಪೇಯಗಳೇ ಖುಷಿಯಿಂದ ಕುಣಿಸುತಿದ್ದವು. ನಮ್ಮ ಗುಂಪಿನ ಯುವಕರು ಕಣ್ಣು ಬಾಯಿ ಬಿಡುತಿದ್ದ ಪರಿ ನೋಡಿ ಕನಿಕರವಾಯಿತು. ಪಾನಕ ಕುಡಿವಾಗ ನೊಣ ಬಂದಂತಗಬಾರದು ಎಂದು ನಾವು, ಹಿರಿಯ ದಂಪತಿಗಳು, ಅವರಿಗೆ ಶುಭ ರಾತ್ರಿ ಹೇಳಿ ಟೆಂಟ್ ಸೇರಿದೆವು. ಹೇಗಿದ್ದರೂ ಕಣ್ಣುಗಳು ಆಗಲೇ ಎಳೆಯುತಿದ್ದವು. ಪವನ ತಲ್ಪದ ಮೇಲೆ ಪವಡಿಸಿದೆವು. ಗಾಳಿ ಗಾದಿಯ ಮೇಲೆ ಮಲಗಿದ್ದು ಅದೇ ಮೊದಲು. ಹೇಗೋ ಹೇಗೋ ಎನಿಸಿತು. ಶೀತ ಆಗಬಾರದು ಎಂದು ಆ ವ್ಯವಸ್ಥೆ. ಹವಾ ಹಾಸಿಗೆಯ ಮೇಲೆ ಮಲಗಿರುವ ನಮಗೇ ಏನೆಲ್ಲಾ ಅನಿಸಿರುವಾಗ ಹಾವಿನ ಹಾಸಿಗೆಯ ಮೇಲೆ ಮಲಗಿರುವ ಹರಿಗೆ ಹೇಗಿದ್ದಿರಬೇಕು  ಎಂದು ಕೊಳ್ಳುತ್ತಾನಿದ್ರಾ ಚೀಲದಲ್ಲಿ ತೂರಿಕೊಂಡೆವು. ಜಿಪ್ ಎಳೆದುಕೊಂದು ಗಪ್ಪಗೆ ಮಲಗಿದ್ದೆ ತಡ ನಿದ್ದೆ ಆವರಿಸಿತು.
ನಗರ ನಾಮಾವಳಿ...
ಹುಟ್ಟುಗುಣ ಘಟ್ಟದ ತಪ್ಪಲಿನಲ್ಲೂ ಹೋಗಲಿಲ್ಲ. ಯಥಾರೀತಿ ಬೆಳಗ್ಗೆ ಐದು ಗಂಟೆಗೇ ಎಚ್ಚರವಾಯಿತು. ಟೆಂಟ್ ಬಿಟ್ಟು ಹೊರಬಂದರೆ ಆಗಲೇ ಬೆಳ್ಳಂ ಬೆಳಕು. ಎಲ್ಲೆಡೆ ನೀರವ ಮೌನ. ಹಕ್ಕಿಗಳ ಚಿಲಿ ಪಿಲಿ ಬಿಟ್ಟರೆ ಬೇರೇನೂ ಇಲ್ಲ. ಸುತ್ತಲೂ ಬಣ್ಣ ಬಣ್ಣದ ಟೆಂಟ್ ಗಳೂ ಕೂಡ ನಿದ್ದೆಯ ಮಬ್ಬಿನಲ್ಲಿ  ಇರುವಂತೆ ತೋರಿತು. ಹತ್ತಿರದಲ್ಲಿನ ಕ್ಯಾಂಪ್ ಫೈರ್ ನಿಂದ  ಹೌದೋ ಅಲ್ಲವೋ ಎನ್ನುವಷ್ಟು ಹೊಗೆ. ಸುತ್ತಲೂ ಎತ್ತರದ ಹಸಿರು ಸೂಸುವ ಮರಗಳು. ಅವುಗಳ ನಡುವಿನ ಕಂಡಿಗಳಲ್ಲಿ ಹಾವಸೆಯ ನಡುವಿನ ತಿಳಿ ನೀರಿನಂತೆ ಕಾಣುವ ನೀಲಿ ಆಕಾಶ. ಹತ್ತಿರದಲ್ಲೇ ಜುಳು ಜುಳು ಹರಿಯುವ ತೊರೆಯ ಮಂಜುಳಾ ನಿನಾದ. ಈ ಸೊಬಗ ಸವಿಯಲು ಎರಡು ಕಣ್ಣು, ಎರಡು ಕಿವಿ ಸಾಲದು ಎನಿಸಿತು. ಹಿಂದಿನ ದಿನ ಮಳೆಬಂದದ್ದರಿಂದ ಎಲ್ಲೆಲ್ಲೂ ಕೊಚ್ಚೆ ಕೆಸರು ಮನಸಿಗೆ ಕಿಸಿರು ಆಗಿದ್ದುದು ನಿಜ. ಮೋಡ ಕರಗಿ ಮೂಡಿದ ಹೊಂಬೆಳಕು ನೋಡಿ ಬಂದದ್ದು   ಸಾರ್ಥಕವಾಯಿತು ಎನಿಸಿತು.
ಬೆಳಗಿನ ಕಾರ್ಯ ಮುಗಿಸಿ ಎಂದಿನಂತೆ ವಾಯುವಿಹಾರಕ್ಕೆ  ಹೊರಟೆವು. ನಮ್ಮ ಶಿಬಿರದಲ್ಲಿ ಎಲ್ಲಿ ನೋಡಿದರು ಕಾರೆ ಕಾರು. ಕಾಲಿಡಲು ತಾವಿಲ್ಲ. ನೋಡುತ್ತಾ ಹೋದಂತೆಲಾ ನಂಬರ್ ಪ್ಲೇಟಿನ ಮೇಲೆ ಬರೆದ ರಾಜ್ಯಗಳ ಹೆಸರುಗಳು ಕುತೂಹಲ ಕೆರಳಿಸಿದವು. ಗಾರ್ಡನ್ ಸ್ಟೇಟ್, ಎಂಪೈರ್ ಸ್ಟೇಟ್, ಗೋಲ್ಡನ್ ಸ್ಟೇಟ್, ಸಿಲ್ವರ್ ಸ್ಟೇಟ್, --ಕೊಪ್ಪರ್ ಸ್ಟೇಟ್, ಜೆಂ ಸ್ಟೇಟ್, ಕೌಬಾಯ್ ಸ್ಟೇಟ್ ಹೀಗೆ ಹತ್ತಾರು ಸ್ಟೇಟುಗಳ ಹೆಸರು ಹೊತ್ತ ಕಾರುಗಳು ಅಲ್ಲಿದ್ದವು. ಇವು ಯಾವ ದೇಶದಲ್ಲಿನ ರಾಜ್ಯಗಳಪ್ಪ ಎಂದು ಹುಬ್ಬು ಹಾರಿಸಬೇಡಿ. ಇವೆಲ್ಲ ಯು.ಎಸ್.ಎ.ನಲ್ಲಿನ ರಾಜ್ಯಗಳೇ. ನಮ್ಮೂರಲ್ಲಿ ಮನುಷ್ಯರಿಗೆ ಅಡ್ಡ ಹೆಸರು ಇರುವಂತೆ ಇಲ್ಲಿ ರಾಜ್ಯಗಳಿಗೆ. ಉದಾಹರಣೆಗೆ ನ್ಯೂ ಜರ್ಸಿ -ಗಾರ್ಡನ್ ಸ್ಟೇಟ್. ಅಲ್ಲಿ ಎಲ್ಲಿ ನೋಡಿದರೂ ಹಸಿರು. ನ್ಯೂಯಾರ್ಕ್- ಎಂಪೈರ್  ಸ್ಟೇಟ್ಜಗದ ವಾಣಿಜ್ಯ ಸಾಮ್ರಾಜ್ಯ  ಅದೇ ತಾನೇ. ಹೀಗೆ ಐವತ್ತು ರಾಜ್ಯಗಳಿಗೂ ಆ ರಾಜ್ಯದ ಹಿರಿಮೆಯನ್ನು ಸಾರುವ ಹೆಸರು ಇವೆ. ಬೆಳಗಿನ ನಡಿಗೆ ಮುಂದೂಡಿ ಕಾರುಗಳ ನಡುವೆ ಓಡಾಡುತ್ತ ಅವುಗಳ ಮೇಲೆ ಬರೆದಾದ ನುಡಿಗಟ್ಟುಗಳನ್ನೂ ಓದುತ್ತ ಹೋದಂತೆ. ಕೆಲವು ಕಡೆ ವಿಶೇಷ ವಾಕ್ಯಗಳಿದ್ದವು. `All for country country', ‘Live free or die`,  `Liberty for prosperity'.
ಆಗ  ನನಗೆ ಅವು ಏನು ಎಂದು ತಿಳಿಯಲಿಲ್ಲ. ನಂತರ ಗೊತ್ತಾಯಿತು ಪ್ರತಿಯೊಂದು ರಾಜ್ಯಕ್ಕೂ ಅದರದೇ ಅದ ಧ್ವಜ, ಗೀತೆ, ವಿಶೇಷ ನಾಮ ಮತ್ತು ಧ್ಯೇಯ ವಾಕ್ಯಗಳಿವೆ ಎಂದು. ನಮ್ಮಲ್ಲಿ ವಿಧಾನಸೌಧದ ಮೇಲೆ ಬರೆಸಿದ್ದರಲ್ಲ ಆ ತರಹ. ಅದರೆ ಇಲ್ಲಿ ಅವು ಕಡ್ಡಾಯವಾಗಿ ಬಳಸಲಾಗುತ್ತಿದೆ. ಇವು ಬರಿ ಇಂಗ್ಲಿಷ್ ನಲ್ಲಿ ಮಾತ್ರ ಇಲ್ಲ. ಸ್ಪ್ಯಾನಿಶ್, ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಮೂಲ ನಿವಾಸಿ ಇಂಡಿಯನ್ ಭಾಷೆಯಲ್ಲೂ ಇವೆ. ಇದು ವಲಸಿಗರ ದೇಶ. ಅಲ್ಲಿನ ಜನ ಹೆಚ್ಚಾಗಿ ಬಳಸುತಿದ್ದ, ಇಷ್ಟ ಪಟ್ಟ ಭಾಷೆ ಅಲ್ಲಿದೆ. ನ್ಯೂಯಾರ್ಕ್ ನ ಘೋಷ ವಾಕ್ಯ--`ಎಕ್ಸ್ಸೇಲ್ಸೋರ್` (Excelsior) ಎಂಬ ಲ್ಯಾಟಿನ್ ಪದ. ಅದರ ಅರ್ಥ "Ever Upwards" `ಸದಾ ಮೇಲ್ಮುಖ' ಎಂದು. ನ್ಯೂಯಾರ್ಕ್ ನ ಗಗನಚುಂಬಿ ಸೌಧಗಳನ್ನೂ ನೋಡಿದಾಗ ಎಷ್ಟು ಸಮರ್ಪಕ ಎನಿಸದಿರದು. ಅಲ್ಲದೇ, ನ್ಯೂಯಾರ್ಕ್ ನಗರಕ್ಕಂತೂ ನೂರಾರು ಅಡ್ಡ ಹೆಸರುಗಳು. 
ಕೆಲವು ರಾಜ್ಯಗಳ ಘೋಷವಾಕ್ಯಗಳಂತೂ ಕಾವ್ಯಮಯ, ಸ್ಪೂರ್ತಿದಾಯಕ. "(Manly deeds, womanly words," "I lead," "Eureka", "It grows as it goes'", "All for our country", "Live free or die" -ನುಡಿಗಟ್ಟುಗಳು ನಿಜಕ್ಕೂ ಚೇತೋಹಾರಿ. ಅಲ್ಲಿನ ಜನರ ಮನೋಭಾವದ ಪ್ರತಿಬಿಂಬ. 
ಈ ಅಡ್ಡ ಹೆಸರಿನ ಬಳಕೆ ಬರಿ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ನಗರಕ್ಕೂ ಒಂದೋ ಎರಡೋ ನಿಕ್ ನೇಮ್. ಅವು ತುಂಬಾ ವಿಚಿತ್ರ ಎನಿಸಿಯಾವು. Biggest little town, Town too tough to die, City too busy to hate, Music city, Magic City, Salt City, Mile Long City, City of Angles, Apple city, Spanish Capital of the world, ಹನುಮನ ಬಾಲದಂತೆ ಬೆಳೆಯುತ್ತದೆ ಪಟ್ಟಿ. ಈ ಹೆಸರಿನ ಹಿಂದೆ ಹುಡುಕುತ್ತ ಹೊರಟರೆ ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ ವಿವರಗಳ ಸುರುಳಿ ಬಿಚ್ಚಿ ಕೊಳ್ಳುತ್ತದೆ. 
ಈ ನಿಕ್ ನೇಮ್ ಗಳ ದಾಳಿಯಿಂದ ಹೆಸರಾಂತ ವ್ಯಕ್ತಿಗಳು ಹೊರತಾಗಿಲ್ಲ. ಇವು ದೇಶದ ಪ್ರಥಮ ಪ್ರಜೆಯನ್ನು ಬಿಟ್ಟಿಲ್ಲ. ಇಂದಿನ ಅಧ್ಯಕ್ಷ ಬರಾಕ್ ಒಬಾಮ, ನೋ ಡ್ರಾಮಾ ಒಬಾಮ, ಹಿಂದಿನ ಅಧ್ಯಕ್ಷ ಬುಷ್- ದುಬ್ಯಾ, ಕ್ಲಿಂಟನ್- ಕಂ ಬ್ಯಾಕ್ ಕಿಡ್ಗೆರಾಲ್ಡ್ ಫೋರ್ಡ್- ಆಕ್ಸಿಡೆಂಟ್ ಪ್ರೆಸಿಡೆಂಟ್ಜಿಮ್ಮಿ ಕಾರ್ಟರ್- ಪೀ ನಟ್ ಪ್ರೆಸಿಡೆಂಟ್ಜಾರ್ಜ್ ವಾಶಿಂಗ್ ಟನ್- ಫಾದರ್ ಆಫ್ ಹಿಜ್ ಕಂಟ್ರಿ, ಥೋಮಸ್ ಜಫಾರ್ಸನ್- ಪೆನ್ ಆಫ್ ರೆವುಲುಶನ್, ಅಬ್ರಹಂ ಲಿಂಕನ್- ಲಿಬರೆಟರ್ಆನೆಸ್ಟ್ ಅಬೆ, ಜೇಮ್ಸ್ ಬುಕನಿನ್-  ಡು ನಥಿಂಗ್ ಪ್ರೆಸಿಡೆಂಟ್, ಕೆಲವು ಸಲ  ವ್ಯಂಗ್ಯವಾಗಿ ಬಹಳ ಸಲ ನೈಜವಾಗಿ ಅವರ ವ್ಯಕ್ತಿತ್ವ ಸಾಧನೆ ಸಾದರಪಡಿಸುತ್ತವೆ.
ಆಟಗಾರರ ನಿಕ್ ನೇಮ್ ಬಹು ಮಜಾ ನೀಡುತ್ತವೆ. ಗಾಲ್ಫ್ ಆಟಗಾರ ವುಡ್ಸ್ -ಟೈಗರ್, ಟೆನ್ನಿಸ್ ಪಟು, ಕೆನ್ ರೋಸ್ವೆಲ್- ಮಸಲ್,   ಅಂಡ್ರ್ಯೂ ಅಗಸ್ಸೇ -ಪಿಸ್ತುಲ್ ಪಿಟೇ, ಈ ರೀತಿ. ನಮ್ಮಲ್ಲೂ ಇದ್ದಾರಲ್ಲ ಬಂಗಾಳದ ಹುಲಿ, ನಜಮ್ ಗಡದ ನವಾಬ್, ಹರ್ಯಾಣ ಹರ್ರಿಕೆನ್, ಮಾಸ್ಟರ್ ಬ್ಲಾಸ್ಟರ್, ಲಿಟಲ್ ಮಾಸ್ಟರ್, ಮೂಗುತಿ ಸುಂದರಿ. 
ಅಮೇರಿಕಾದ ಕಾರಿನ ನಂಬರ್ ಪ್ಲೇಟುಗಳು ಒಡೆಯನ ವೈಯುಕ್ತಿಕ  ವರದ ಜೊತೆ ಜೊತೆ ಆ ಪ್ರದೇಶದ ಮಾಹಿತಿ ನೀಡುತ್ತದೆ. ನಮ್ಮಲ್ಲೂ ಆಟೋಗಳು ಸಂಸ್ಕೃತಿ, ಜ್ಞಾನ ಪ್ರಸಾರದ ಸಂಚಾರಿ ಕೇಂದ್ರಗಳಂತೆ ಕೆಲಸ ಮಾಡುತ್ತವೆಯಲ್ಲವೇ. -ದುರ್ಗದ ಹುಲಿ, ಮಂಡ್ಯದ ಗಂಡು, ಬಿಜಾಪುರ ಬಲಭೀಮ, ಆಟೋ ರಾಜ, ತಾಯಿ ಪ್ರೀತಿ, ತಂದೆ ಆಶೀರ್ವಾದ ಇತ್ಯಾದಿ ಇತ್ಯಾದಿ....

ಅಮೇರಿಕಾದಲ್ಲಿ ಚಾರಣ

ಅಮೇರಿಕಾದಲ್ಲಿ ಚಾರಣ
ಹಂಪಿ ಪಕ್ಕದ ಹಳ್ಳಿಯ ಅಪ್ಪಾಜಿಯವರ ನಿಜವಾದ ಹೆಸರು ಎಚ್. ಶೇಷಗಿರಿರಾವ್. ಕನ್ನಡನಾಡಿನ ಒಂದು ಮೂಲೆಯ ಮಳವಳ್ಳಿಯಿಂದ ಇನ್ನೊಂದು ಕೊನೆಯ ಗುಲ್ಬರ್ಗದವರೆಗೆ ಕಾಲೇಜು ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ದುಡಿದವರು. ಈಗ ಅರವತ್ತಾರರ ಹುಮ್ಮಸ್ಸಿನಲ್ಲಿ ಕಾಡುಸುತ್ತುವುದು, ಕಂಪ್ಯೂಟರ್, ಸಂಗೀತ, ವಾಕಿಂಗ್, ಮೊಮ್ಮಕ್ಕಳೊಂದಿಗೆ ಮಗುವಿನಂತೆ ಆಡುವುದು ಇತ್ಯಾದಿಗಳಲ್ಲಿ ಚುರುಕಾಗಿ ಬದುಕುತ್ತಿದ್ದಾರೆ. ಅಚ್ಚಕನ್ನಡ ಜಾಯಮಾನದ ಅಪ್ಪಾಜಿಯವರು ಅಮೇರಿಕಾದ ರಿಪ್ ವ್ಯಾನ್ ವಿಂಕಲ್ ' ಕಥೆ ನಡೆದ ಕ್ಯಾಟ್ಸ್ ಕಿಲ್' ಪರ್ವತ ದಲ್ಲಿ ನಡೆಸಿದ ಚಾರಣ ಕಥನದ ಮೊದಲ ಕಂತು ಇಲ್ಲಿದೆ...
ಕಾರಿನ ನಾಡಾದ ಅಮೆರಿಕಾದಲ್ಲಿ ಕಾಲಿಗೆ ಕೆಲಸ ಕಡಿಮೆ. ಕಾಲು ಏಕೆ ಬೇಕೆಂದರೆ ಕಾಲು ಚೀಲ ಹಾಕಿಕೊಳ್ಳಲು, ಟ್ರೆಡ್ ಮಿಲ್ ಮೇಲೆ ನಡೆಯಲು, ಬೇಸಗೆಯಲ್ಲಿ ಸ್ಕೇಟ್ ಮಾಡಲು, ಅಥವಾ ಬರ್ಫದ ಬೆಟ್ಟಗಳಲ್ಲಿ ಸ್ಕೀಯಿಂಗ ಮಾಡಲು, ಡಾನ್ಸ್ ಮಾಡಲು.... ದೈನಂದಿನ ಜೀವನದಲ್ಲಿ ನಡಿಗೆಗೆ ಅವುಗಳ ಉಪಯೋಗ ಕಡಿಮೆಯೆಂದೇ ಹೇಳಬೇಕು. ವೀಲ್ ಛೇರೋ ಅಥವಾ ಅಂಥಾ ಇನ್ಯಾವ ಯಂತ್ರವೋ ಬಳಸುವುದು ಅಷ್ಟು ಸೌಕರ್ಯಕರ ಅಲ್ಲ ಎಂಬ ಕಾರಣಕ್ಕಾಗಿ ಮಾತ್ರ ಆಗೀಗ ಕಾಲು ಬಳಸುತ್ತಾರೆ. ಅನೇಕರ ಪಾಲಿಗೆ ಅದು ಎಕ್ಸರ್ ಸೈಜ್ ಮಾಡಲು ಇರುವ ಮತ್ತೊಂದು ಅಂಗ ಅಷ್ಟೇ.
ಟ್ರೆಡ್ ಮಿಲ್ ಮೇಲೆ ನಡೆದರೆ, ಬೆವರೇನೋ ಬರುತ್ತದೆ. ಆದರೆ ಮನಸಿಗೆ ಮುದ ಸಿಗದು. ಬರೀ ಯಂತ್ರದೊಡನೆ ಸ್ಪರ್ಧೆ. ವರುಷದ ಎಂಟು ತಿಂಗಳು ಕೊರೆವ ಚಳಿ. ಅಂಗಿ ಮೇಲೆ ಅಂಗಿ ಚಳಿರಾಯನ ತಂಗಿ ಎಂದು ಹಾಡುತ್ತಾಆರಾರು ವರಸೆ ಬಟ್ಟೆ ಹಾಕಿದರೂ ಗಡ ಗಡ ನಡುಗು. ಚಂದ್ರಯಾನ ಮಾಡುವ ಗಗನಯಾತ್ರಿಗಳು ನಾವೇ ಎಂಬ ಭ್ರಮೆ ತರಿಸುವ ಉಡುಪು. ಕಾರಿನಲ್ಲಿ ಕಾಲಿಡುವುದಕ್ಕೂ ಕಷ್ಟಪಡಬೇಕು. ಎ.ಸಿ ಮನೆಯಿಂದ ಎ.ಸಿ ಕಾರಿಗೆ ಹೋಗುವುದೇ ಹರ ಸಾಹಸ. ಬೇಸಿಗೆ ಬಂತೆಂದರೆ ಮೈ ಮೇಲಿನ ಬಟ್ಟೆ ಗಳು ಬಹುತೇಕ ಮಟಾಮಾಯ. ಅತಿ ಉಳಿತಾಯ. ಚಡ್ಡಿ ಮೇಲೊಂದು ಬನೀನು. ಗಂಡಸರಿಗೆ ಬನೀನಿನ ಮುಲಾಜೂ ಇಲ್ಲ ಬರಿ ಮೈ. ಸೈಕಲ್ ಸವಾರರ ಸಡಗರ ಹೇಳತೀರದು.  ತಡವಾದರೆ ಕೈತಪ್ಪಿತೇನೋ ಎಂಬಂತೆ ಓಡುವ ಜಾಗರ್ಸ್. ಗಾಲಿ ಚಡಾವುಗಳ ಮೇಲೆ ಜಾರುತ್ತಾ ಜಗವೆಲ್ಲಾ ನಮ್ಮದೇ ಎಂಬ ಜಂಬದಿಂದ ಬಳಕುತ್ತಾ ಬಾಗುತ್ತ ಹೋಗುವ ಹದಿ ಹರೆಯದವರ ಚಮತ್ಕಾರಕ ಚಲನೆ ನೋಡಲು ಕಣ್ಣೆರಡು ಸಾಲವು. ಬೇಸಗೆಯಲ್ಲಿ ಸೂರ್ಯನಿಗೂ ಹುಮ್ಮಸ್ಸು. ಬೆಳಗ್ಗೆ ಐದಕ್ಕೆ ಹಾಜರು. ರಾತ್ರಿ ಎಂಟಾದರೂ ಮುಳುಗಲು ಮಿಜಿ ಮಿಜಿ. ಶುಕ್ರವಾರದ ಸಂಜೆ ಎಲ್ಲೆಲ್ಲೂ ಕಾರುಗಳದೆ ಕಾರುಬಾರು. ಬೆನ್ನಿಗೆ ಸೈಕಲ್ ಗಳನ್ನೂ ಬಿಗಿದುಕೊಂಡು, ಮೇಲೆ ಬೋಟುಗಳನ್ನು ಹೇರಿಕೊಂಡುಒಳಗೆ ನಾಯಿಕೂಡಿಸಿಕೊಂಡು ಬೆಟ್ಟದ ಬದಿಗೋ, ಕಡಲ ತಡಿಗೋ, ಕಾಡಿನ ನಡುವೆಯೋ ರಜೆಕಳೆಯಲು, ಮಜ ಮಾಡಲು ಧಾವಿಸಲು ಎಲ್ಲರ ಧಾವಂತ. ಪರಿಣಾಮ ಒಂದು ಕಾರಿನ ಹಿಂಬದಿ ಮೂಸುವ ಇನ್ನೊಂದು ಕಾರು. ಕರಿ ಟಾರಿನ ರಸ್ತೆಯಲ್ಲಿ ಬಹು ಬಣ್ಣದ ಗೆರೆ ಎಳೆದಂತೆ ಕಾರುಗಳ ಸಾಲು ಸಾಲು.  ಸಂಚಾರವೆಲ್ಲ ಅಸ್ತವ್ಯಸ್ತ. ಮೂರು ಗಂಟೆಯ ಹಾದಿಗೆ ಆರು ತಾಸು ಆಗುವುದು ಸಹಜ.
ವಾರಾಂತ್ಯ  ಎಂದರೆ ಎಲ್ಲಿಲ್ಲದ ಪ್ರಧಾನ್ಯ. ವಾರಪೂರ್ತಿ ಕೆಲಸ. ಕಾಯಕವೇ ಕೈಲಾಸ ಎಂಬ ಅಣ್ಣನ ಮಾತು ಇಲ್ಲಿ ನೂರಕ್ಕೆ ನೂರು ನಿಜ. ಐದು ದಿನ ದುಡಿತ. ಕಾರಣ ಇಲ್ಲಿ ತಿಂಗಳ ಸಂಬಳ ಇಲ್ಲ. ಗಂಟೆಗಳಲ್ಲಿ ಲೆಕ್ಕ. ದಿನಕ್ಕೆ ಎಂಟು ಗಂಟೆ. ವಾರಕ್ಕೆ ನಲವತ್ತು ತಾಸು. ತುಸು ತಡವಾದರೂ ಕಾಸಿಗೆ ಖೋತಾ. ಹಾಗಾಗಿ ಹಬ್ಬ, ಹುಣ್ಣಿಮೆ, ತಿಥಿ, ಮಿತಿ, ಸಂಭ್ರಮ, ಸಡಗರ ಹೋಗುವುದು, ಬರುವುದು, ಮೋಜು, ಮಜಾ ಎಲ್ಲವೂ ವಾರಾಂತ್ಯದಲ್ಲಿ. ನಾಮಕರಣ, ಹುಟ್ಟುಹಬ್ಬ, ಪೂಜೆ-ಪುನಸ್ಕಾರ, ಮದುವೆಮುಂಜಿ, ಆರತಕ್ಷತೆ, ಅಷ್ಟೇ ಏಕೆ ಆರಾಧನೆಗೆ, ಹಬ್ಬಕ್ಕೆ ರಾಯರು, ಗಣಪತಿ ಬರಬೇಕೆಂದರೂ, ವಾರಾಂತ್ಯಕ್ಕಾಗಿ ಕಾಯಲೇಬೇಕು. ಜನ ಸೇರುವ ಯಾವುದೇ ಕಾರ್ಯಕ್ರಮವೂ ವಾರಾಂತ್ಯದಲ್ಲೇ ಆಗಬೇಕು. ಇಲ್ಲವಾದರೆ ಮನೆಯವರು ಮಾತ್ರ ಹಾಜರಿ ಹಾಕುವರು. ಅದೂ ರಜೆ ಸಿಕ್ಕರೆ.ಬೆಟ್ಟದ ನೋಟ
ಶುಕ್ರವಾರ ಇಲ್ಲವೇ ಸೋಮವಾರ ರಜೆ ಬಂದರೆ ಖುಷಿಯೋ ಖುಷಿ. ಮೂರು ದಿನ ರಜೆ ದೀರ್ಘ ವಾರಾಂತ್ಯ ಬೇಸಿಗೆಯಾದರೆ ಮುಗಿಯಿತು ಮನೆಯಲ್ಲಿದ್ದವರೇ ಪಾಪಿಗಳು. ನಮ್ಮವರ ಪಾಡೇನೂ ಭಿನ್ನವಲ್ಲ. ಜುಲೈನಲ್ಲಿ ಶುಕ್ರವಾರ ರಜೆ ಬಂತು. ನಡೆವ ಕಾಲಿಗೆ ಕಡಿತ ಶುರು. ಮೂರು ದಿನದ ಚಾರಣಕ್ಕೆ ಯೋಜನೆ. ಮೂರು ಕುಟುಂಬಗಳ ೧೦ ಜನ. ಅದರಲ್ಲಿ ಒಂದು ವರುಷದ ಕೂಸು, ಮತ್ತೊಂದು ಮೂರುವರ್ಷದ ಮಗು,    ಕ್ಯಾಟ್ಸ್ ಕಿಲ್ ಪರ್ವತದ ತಪ್ಪಲಿನ ಫೋನಿಸಿಯಾದಲ್ಲಿ ಎರಡು ರಾತ್ರಿ ಕಳೆಯಲು ಯೋಜನೆ. ಮೂರು ದಿನದ ಚಾರಣಕ್ಕೆ ಹದಿಮೂರು ದಿನದ ತಯಾರಿ. ಮೊದಲು ಟೆಂಟ್ ಖರೀದಿ. ಸದಸ್ಯರ ಸಂಖ್ಯೆಗೆ ಅನುಸಾರ. ನಾವು ಆರು ಜನ ಮಲಗಬಹುದಾದ ಟೆಂಟ್ ಕೊಂಡೆವು. ನಂತರ ನಿದ್ರಾಚೀಲಗಳು, ಪವನ ತಲ್ಪ, ಕೈ, ಕಾಲು, ಕುತ್ತಿಗೆಗೆ ಕವಚಗಳು, ಸಿದ್ದ ಆಹಾರ, ಹಾಸಿಗೆ, ಹೊದಿಕೆ, ನೀರು, ಹಣ್ಣಿನ ರಸ, ಬ್ರೆಡ್, ಬಿಸಕತ್ತು, ತರ ತರದ ಉಪಹಾರ. ತಯಾರಿ ನೋಡಿದರೆ ಶಾಶ್ವತವಾಗಿ ಅಲ್ಲೇ ನೆಲಸುವ ಹಾಗೆ ತೋರಿತು. ಒಟ್ಟಿನಲ್ಲಿ ನಲವತ್ತೆಂಟೋ- ಅರವತ್ತೆಂಟೋ ಸಾಮಗ್ರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಪಟ್ಟಿಯನ್ನು ಪದೇ ಪದೇ, ಪರಿಷ್ಕರಿಸಲಾಯಿತು. ಅದನ್ನು ಮತ್ತೆ ಮತ್ತೆ ಓದಿ, ವಿವರಿಸಿ, ಖಚಿತ ಪಡಿಸಿಕೊಳ್ಳಲಾಯಿತು. ಈ ಸಿದ್ಧತೆಯನ್ನು ನೋಡಿದ ಮೇಲೆ ನನಗಂತೂ ನಗೆಯೂ, ಆತಂಕವೂ ಒಟ್ಟೊಟ್ಟಿಗೆ ಬಂದವು. ನೆನಸಿಕೊಂಡಾಗ ಧುತ್ತೆಂದು ಪ್ರತ್ಯಕ್ಷನಾಗಿ, ಟ್ರೆಕ್ಕಿಂಗ್ ಓಗಾಣಾ ನಡೀರೀ ಸಾ... ಎಂದು ಯಾವ ಸಿದ್ಧತೆಯೂ ಇಲ್ಲದೇ, ಕರೆದೊಯ್ಯುತ್ತಿದ್ದ ದುರ್ಗದ ಪೇಂಟರ್ ನಾಗರಾಜನೆಲ್ಲಿ, ಇವರೆಲ್ಲಿ ಎಂಬ ಹೋಲಿಕೆ ಬೇಡವೆಂದರೂ ಬಂತು. ಸಿಕ್ಕಾಪಟ್ಟೆ ಉಡಾಫೆ, ಹುಂಬತನದಂತೆ ಕಂಡರೂ, ಆ ಪೂರ್ವಸಿದ್ಥತೆಯಿಲ್ಲದ, ಅಪೂರ್ವ ಚಾರಣಗಳು ನಿಜಕ್ಕೂ ರೋಚಕವಾಗಿದ್ದವು. ಅಲ್ಲಿ ಆ ಗಳಿಗೆಯಲ್ಲಿ ಹೃದಯಶಸ್ತ್ರ ಚಿಕಿತ್ಸೆ ಒಳಗಾದ, ಅರವತ್ತರ ಅಂಚು ದಾಟಿರುವ ಉತ್ಸುಕನಿಗೆ ದುರ್ಗದ ಬೆಟ್ಟ-ಗುಡ್ಡಗಳಲ್ಲಿ, ಕೊಡಚಾದ್ರಿಯ ಶಿಖರಗಳಲ್ಲಿ, ಸಕಲೇಶಪುರದ ಹಳಿಗಳಲ್ಲಿ, ಶರವಾತಿಯ ಕಣಿವೆಗಳಲ್ಲಿ ಆಸರೆಯಾಗಿದ್ದು ಸಂತಸ ನೀಡಿದ್ದು, ಆ ಉತ್ಸಾಹ, ಆ ಹುಂಬತನ, ಅಡಿಕೆ ಗುರುವಿನ ಕೊಳಲು, ದ್ವಾರಕೀಶ-ಗುರು ಅವರ ಪ್ರಾಕ್ಟಿಕಲ್ ಜೋಕುಗಳ ಜುಗಲ್ ಬಂದಿ.
ಹೊರಡಲು ಇನ್ನು ಎರಡೇ ದಿನ ಎನ್ನುವಾಗ ಧುತ್ತೆಂದು ಬಂದಿತು ಆತಂಕ. ಮಧ್ಯರಾತ್ರಿಯಲ್ಲಿ ಮೊದಲಾಯಿತು ಹಲ್ಲು ನೋವು. ಎಲ್ಲ ನೋವಿಗಿಂತ ಹಲ್ಲು ನೋವು ಹಿರಿದು. ಇದರ ಮುಂದೆ ಬೇರೆಲ್ಲ ಗೌಣ. ಬಿಸಿನೀರಲ್ಲಿ ಬಾಯಿ ಮುಕ್ಕಳಿಸುವುದು, ಹೊರಗೆ ತಂಪಿನ ಲೇಪನ, ನೋವು ನಿವಾರಕ ಯಾವುದೂ ಪರಿಣಾಮ ಬೀರಲಿಲ್ಲ. ಅಮೆರಿಕಾ ವಿಮಾನ ಹತ್ತುವಾಗಲೇ ಎಲ್ಲ ತಪಾಸಣೆ ಆಗಿತ್ತು. ಹಲ್ಲಿನದು ಮಾತ್ರ ಹಾಗೆ ಉಳಿದಿತ್ತು. ಅನಿವಾರ್ಯವಾಗಿ ವೈದ್ಯರ ಹತ್ತಿರ ಹೋಗಲೇ ಬೇಕಾಯಿತು. ಯಾವುದೇ ಔಷಧಿ ಬೇಕೆಂದರು ವೈದ್ಯರ ಚೀಟಿ ಬೇಕೇ ಬೇಕು. ಪ್ರವಾಸಿ ವಿಮೆ ಇದ್ದಿದ್ದು ನಿಜ. ಆದರೆ ಅದರಲ್ಲಿ ದಂತಚಿಕೆತ್ಸೆಗೆ ಅವಕಾಶ ಇಲ್ಲ. ದಂತ ಚಿಕಿತ್ಸೆಗೆ ಇಲ್ಲಿ ಆನೆ ದಂತದ ಬೆಲೆ. ಸುಮ್ಮನೆ ನೋಡಲು ನೂರು ಡಾಲರು. ಗೂಗಲ್ ಗೆ ಹೋಗಿ ಹುಡುಕಿದಾಗ ಕೇಯಿಂಗ್ಟನ್ ಸದಸ್ಯರಾದರೆ ಭಾರೀ ಸೋಡಿಯಲ್ಲಿ ತಪಾಸಣೆ ಇರುವುದು ಕಂಡಿತು. ಸರಿ ತರಾತುರಿಯಲ್ಲಿ ಸದಸ್ಯನಾಗಿ  ನೋಂದಾಯಿಸಲಾಯಿತು. ಸಾಧಾರಣವಾಗಿ ಅದರ ಸದಸ್ಯ ವೈದ್ಯರು ೩೦%-೪೦% ರಿಯಾಯತಿ ದರದಲ್ಲಿ ಚಿಕಿತ್ಸೆ ನೀಡುವುದಾಗಿ ತಿಳಿಯಿತು. ಹತ್ತಿರದ ಹಲ್ಲಾಸ್ಪತ್ರೆಗೆ ಹೋದಾಗ, ದೇಸಿ ಡಾಕ್ಟರೇ ಇರುವುದು ತಿಳಿಯಿತು. ತಪಾಸಣೆಯಲ್ಲಿ ತಿಳಿಯಿತು ಹಲ್ಲಿನ ಬುಡವೇ  ಭದ್ರವಿಲ್ಲ ಎಂದು. ನಂಜಾಗಿದೆಕೀಳಸಲೇಬೇಕು ಮೊದಲು ನೋವು ಕಡಿಮೆಯಾಗಬೇಕು ಎಂದರು ವೈದ್ಯರು. ಆಕೆ ಆಂಧ್ರದ ಹುಡುಗಿ ಅಂಕಲ್ ಸದ್ಯ ನಾನು ಔಷಧಿ ಬರೆದುಕೊಡುವೆ. ನಂತರ ಬನ್ನಿ,ಎಂದಾಗ ಅರ್ಧ ನೋವು ಕಡಿಮೆಯಾದಂತೆ ಎನ್ನಿಸಿತು. ತೊಂದರೆ ಆದರೆ ನನ್ನನ್ನು ಸಂಪರ್ಕಿಸಿ ಎಂದಾಗಲಂತೂ ಭಾರತೀಯನಾದುದಕ್ಕೆ ಎದೆ ಉಬ್ಬಿತು. ಪ್ರಬಲ ನಂಜುನಿವಾರಕ ನೀಡಿದರು. ಜತೆಗೆ ಪಾರ್ಶ್ವ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಲು ಮರೆಯಲಿಲ್ಲ. ಅತಿಸಾರ ಆಗಬಹುದು, ಹಾಗೇನಾದರು ಆದರೆ ತಕ್ಷಣ ಸಂಪರ್ಕಿಸಿ ಎಂದೂ ತಿಳಿಸಿದರು. ನಾನು ಮೊದಲೇ ಮಿತಾಹಾರಿ. ದಿನಕ್ಕೊಂದು ಸಲ ಹೋದರೇ ಹೆಚ್ಚು, ಹಾಗಾಗಿ ಕೊಂಚ ನೆಮ್ಮದಿ ಹೇಳಿಕೊಂಡೆ. 15 ದಿನದ ನಂತರ ತಜ್ಞರನ್ನು ನೋಡಲು ತಿಳಿಸಿದರು. ಸದ್ಯಕ್ಕೆ ಐವತ್ತು ಡಾಲರೊಳಗೆ ಮುಗಿಯಿತು. ಗುಳಿಗೆ ಸಿಗುವಾಗ ಸಂಜೆ. ಗುರುವಾರ ರಾತ್ರಿಯಿಂದ ೭ ದಿನದ ಕೋರ್ಸ್ ಮೊದಲಾಯಿತು. ಬೆಳಗಿನ ಹೊತ್ತಿಗೆ ನೋವೇ ಇಲ್ಲ. ಮುಂಜಾನೆಯೇ ಕಾರಿನಲ್ಲಿ ಹೊರೆಟೆವು. ನಾಲಕ್ಕು ತಾಸಿನ ಹಾದಿ. ಮಧ್ಯಾನ್ಹದ ಊಟದ ಸಮಯಕ್ಕೆ ಮುಟ್ಟಬಹುದು. ನ್ಯೂಯಾರ್ಕ್ ರಾಜ್ಯದಲ್ಲಿದೆ ಚಾರಣ ತಾಣ. ರೂಟ್ -1 ಗೆ ಬರುವುದೇ ತಡ.
ರಸ್ತೆಯಲ್ಲಿ ಇರುವೆ ಸಾಲಿನಂತೆ ಕಾರುಗಳು. ಆಮೆ ವೇಗದಲ್ಲಿ ಚಲನೆ. ನಡುವೆ ಸಂಚಾರ ನಿಯಂತ್ರಣದ ಕೆಂಪು ದೀಪ. ತಂದ ತಿಂಡಿ ತಿನ್ನುತ್ತ , ನೀರು ಕುಡಿಯುತ್ತಾ, ಸಂಗೀತ ಲೋಲರಾದೆವು. ತುಸು ಸಮಯದಲ್ಲೇ ಹಲ್ಲುನೋವಿನ ಗುಳಿಗೆಯ ಅಡ್ಡ ಪರಿಣಾಮದ ಅನುಭವಕ್ಕೆ ಬಂದಿತು. ಹೊಟ್ಟೆ ಗುಡು ಗುಡು ಎನ್ನತೊಡಗಿತು. ಒತ್ತಡ ಹೆಚ್ಚತೊಡಗಿತು. ಕಾರು ನೋಡಿದರೆ ನಡುರಸ್ತೆಯಲ್ಲಿ. ಹಿಂದೆ ಮುಂದೆ. ನೂರಾರು ವಾಹನಗಳು. ಹಿಂದೆ ತಿರುಗಿ ಮನೆಗೆ ಹೋಗುವ ಮಾತು ದೂರುಳಿಯಿತು. ಮಧ್ಯದಲ್ಲಿ ನಿಲ್ಲಿಸುವ ಹಾಗೂ ಇಲ್ಲ. ಕೊನೆಗೆ ಬಾಗಿಲು ತೆರೆಯುವ ಹಾಗೂ ಇಲ್ಲ.. ಆಧುನಿಕತೆ ಬಗ್ಗೆ ಕವನವೊಂದರಲ್ಲಿ ಕವಿಯೊಬ್ಬ ಹೇಳಿದ ಮಾತು ಅನುಭವಕ್ಕೆ ಬಂತು. ಕಾರಿನಲ್ಲಿ ಹೋಗುವವರನ್ನು ಬೋನಿನಲ್ಲಿನ ಪ್ರಾಣಿಗಳು ಎಂದಿದ್ದ. ಹತ್ತಾರು ವರುಷದ ಹಿಂದೆ ಬರೆದ ಕವಿವಾಣಿ ಸತ್ಯಸ್ಯ ಸತ್ಯ. ನಾಗರಿಕತೆಯ ನಾಡಲ್ಲಿ ಬೇಕಾದಾಗ ಕಾರಿನಿಂದ ಹೊರಬರಲೂ ಆಗದ ಅಸಹಾಯಕರು ನಾವು. ಪಕ್ಕದಲ್ಲೇ ಇದ್ದ ಮೊಮ್ಮಗನನ್ನು ನೋಡಿ ಅಸೂಯೆಯಾಯಿತು. ಅವನು ಸದಾ ಹಗ್ಗಿ ಧಾರಿ.  ಅವನು ಯಾವಾಗ ಬೇಕಾದರೂ ವಿಸರ್ಜನೆ  ಮಾಡಬಹುದು.  ಹಗ್ಗಿ ಬಿಚ್ಚಿದಾಗ ಮಾತ್ರ ಬಯಲು. ಧಾರಣ ಶಕ್ತಿಗಾಗಿ ಧ್ಯಾನ ಮಾಡಿದೆ. ನನಗೆ ದೇಶ ಭಕ್ತಿ ಉಕ್ಕಿತು. ನಮ್ಮಲ್ಲಿ ಉಣ್ಣಲು ಕೊರತೆ ಇರಬಹುದು, ಉಡಲು ಕಡಿಮೆ ಇರಬಹುದು. ಆದರೆ ನಮ್ಮಲ್ಲಿನ ಅಪರಿಮಿತ ವಿಸರ್ಜನ ಸ್ವಾತಂತ್ರ್ಯ ಪ್ರಪಂಚದಲ್ಲಿ ಎಲ್ಲೂ ಇಲ್ಲ ಎಂಬ ಸತ್ಯದ ಸಾಕ್ಷಾತ್ಕಾರವಾಯಿತು. ಬಯಲು, ಬೆಟ್ಟ, ಗಿಡದ ಬುಡ, ರಸ್ತೆಯ ಬದಿ, ಪೊದೆಯ ಮರೆ  ಸಾಕು ದೇಹಭಾದೆ ತೀರಿಸಲು. ಯಾರೋ ಇಲ್ಲದಿದ್ದರೆ ಸರಿ, ಇದ್ದರೇನಂತೆ ನಾವೇ ಕಣ್ಣು ಮುಚ್ಚಿದರಾಯಿತು. ನಿಮಿಷದಲ್ಲಿ ಹಗುರ. ಸ್ವದೇಶದಲ್ಲಿ ಉಪವಾಸವಿದ್ದರೂ ಸರಿ ಪರ ದೇಶದ   ಪರಿಸ್ಥಿತಿ ಪ್ರಾಣಸಂಕಟ ಎನಿಸಿತು. ಒಂದು ಗಂಟೆಯಾದ ಮೇಲೆ ಸಂಚಾರ ಸುಲಭವಾಯಿತು. ರಸ್ತೆ ಪಕ್ಕದಲ್ಲಿ ಗಿಡ ಮರಗಳು ಸಣ್ಣಪುಟ್ಟ ಬೆಟ್ಟಗಳು. ಆದರೆ ಪ್ರಕೃತಿ ಸೊಬಗು ಸವಿಯುವ ಸೌಭಾಗ್ಯ ನಮಗಿಲ್ಲ. ೬೫ ಮೈಲು ವೇಗದಲ್ಲಿ ಗಾಡಿ ಓಡಿಸಬೇಕು. ಮನಬಂದಲ್ಲಿ ನಿಲ್ಲಿಸಿದರೆ ದೊಡ್ಡ ಮೊತ್ತದ ದಂಡ. ಚಾಲನ ಪತ್ರದ ರದ್ದತಿ ಆಗಲೂಬಹುದು.  ಭಾರತದಲ್ಲಿ ಪ್ರವಾಸ ಹೊರಟಾಗ ನೀರು ಕಂಡಲ್ಲಿ ಸ್ನಾನ, ನೆರಳು ಕಂಡಲ್ಲಿ ಊಟ ಮಾಡುವ ನೆನಪು ನುಗ್ಗಿ ಬಂದಿತು. ಇಲ್ಲಿನ ರಸ್ತೆಗಳದೇ ಒಂದು ವಿಶೇಷ ಎಲ್ಲವೂ ಜೋಡಿ ರಸ್ತೆ ಗಳು.
ವಾಹನಗಳು ಓಡುತ್ತಲೇ ಇರಬೇಕು. ಹತ್ತು ಇಪ್ಪತ್ತು ಮೈಲು ಹೋದರೆ ಸೇವಾ ಕ್ಷೇತ್ರ ಸಿಗುತ್ತದೆ. ಅಲ್ಲಿ ಎಲ್ಲ ವ್ಯವಸ್ಥೆ ಇದೆ. ಅದೊಂದು ವಾಣಿಜ್ಯ ಸಂಕೀರ್ಣ. ತಿನ್ನಲು, ಕುಡಿಯಲು, ದೇಹಬಾಧೆ ತೀರಿಸಲು, ಮಕ್ಕಳಿಗೆ, ಮಹಿಳೆಯರಿಗೆ ಸಾಕಷ್ಟು ಅನುಕೂಲ ಇವೆ. ಪ್ರಥಮ ಚಿಕೆತ್ಸೆಗೂ ಅವಕಾಶ. ನನಗಂತೂ ಸಗ್ಗವೇ ಧರೆಗಿಳಿದಂತಹ ಭಾವನೆ. ಒಂದೆರಡು ಸಲ ವಿಶ್ರಾಂತಿ ಕೋಣೆಗೆ ಭೇಟಿ ನೀಡಿದ ಮೇಲೆ ಮನಸು ನಿರಾಳ. ದೇಹ ಹಗುರ. ನಮ್ಮಲ್ಲಿನ ಸಂಡಾಸಕ್ಕೆ ಇಲ್ಲಿ ರೆಸ್ಟ್ ರೂಂ ಎಂದು ಯಾಕೆ ಕರೆಯುತ್ತಾರೆ ಎಂಬುದು ಈಗ ಅರ್ಥವಾಯಿತು. ಇಲ್ಲಿನ ವಿಶೇಷ ಎಂದರೆ ಪಯಣಿಗರಿಗೆ ಬಾಧಿಸಬಹುದಾದ ತಲೆನೋವು, ಮೈಕೈ ನೋವು, ಭೇದಿ ಮೊದಲಾದ ಸಣ್ಣಪುಟ್ಟ ರೋಗಗಳಿಗೆ ಗುಳಿಗೆಗಳನ್ನು ಮಾರುವ ಯಂತ್ರಗಳ ಮೂಲಕ ಕಾಸು ಹಾಕಿ ಪಡೆಯಬಹುದು. ನಾನು ಮಾಡಿದ ಮೊದಲ ಕೆಲಸ ನನ್ನ ವೈದ್ಯರನ್ನು ಸಂಪರ್ಕಿಸುವ ಪ್ರಯತ್ನ ಯಶ ಕಾಣಲಿಲ್ಲ. ಕಾರಣ ಅವರೂ ಸಹಾ ರಜೆಯ ಮಜಾ ತೆಗದುಕೊಳ್ಳಲು ಎಲ್ಲೋ ಹೋಗಿದ್ದರು. ಮಾಡುವುದೇನು, ಯಂತ್ರದ ಮೂಲಕ ವಿರೆಚನ ನಿಲ್ಲಿಸಲು ಮಾತ್ರೆ ಪಡೆದಾಯಿತು. ಮನೆ ಬಿಟ್ಟು ನಾಲಕ್ಕು ತಾಸಾಗಿತ್ತು ಮಗುವೂ ಹಸಿದಿತ್ತು. ನಾವು ಕೂತು ಕೂತು ದಣಿದಿದ್ದೆವು. ಉಪಹಾರ, ವಿಶ್ರಾಂತಿ ಆಯಿತು. ಇಲ್ಲಿನ ಉಪಹಾರದ ಬಗೆ ಬಣ್ಣನೆಗೆ ನಿಲಕದ್ದು. ಸಸ್ಯಾಹಾರ, ಮಾಂಸಾಹಾರವಂತೂ  ಸರೇ ಸರಿ... ಎಲ್ಲ ಬಗೆಯಾ ಪಥ್ಯದ ತಿಂಡಿ ತೀರ್ಥ. ಸಕ್ಕರೆ ಇಲ್ಲದ್ದು, ಕೊಬ್ಬಿಲ್ಲದ್ದು, ಶೂನ್ಯ ಕೆಲೊರಿ, ಕಡಿಮೆ ಸೋಡಿಯಂ ಇರುವುದು, ಹೆಚ್ಚು ಪೊಟಾಸಿಯಂ ಇರವುದು, ಇತರೆ ಲವಣಸಹಿತ, ರಹಿತ, ಕರಿಯದ, ಬರಿ ಹುರಿದ, ಧಾನ್ಯದ, ಬೀಜದ ಬಗೆ ಬಗೆಯ ತಿನಿಸುಗಳು. ಇಲ್ಲಿ ಬಾಯಿ ಕಟ್ಟುವ ಮಾತೆ ಇಲ್ಲ. ಬಾಯಿ ಚಪ್ಪರಿಸುವ ತಿನಿಸೇ ಎಲ್ಲ.
ಅಲ್ಲಿ ಮಕ್ಕಳ ಡಯಾಪರ್ ಬದಲಾಯಿಸಲೂ ವಿಶೇಷವಾದ ಜಾಗ. ಪಯಣಿಗರ ಆರಾಮಿಗೆ ಆವರು ನೀಡುವ ಆದ್ಯತೆ ಮೆಚ್ಚುಗೆ ಮೂಡಿಸುವುದು. ಮಗುವಿನ ಆರೈಕೆ ತಾಯಿಯ ಹೊಣೆ ಎನ್ನುವವರು ಇಲ್ಲಿ ನೋಡಿ ಕಲಿಯಬೇಕು. ತಂದೆಯದು ಇಲ್ಲಿ ಹೆಚ್ಚಿನ ಹೊಣೆ. ಅದರಲ್ಲೂ ಡಯಾಪರ್ ಬದಲಾಯಿಸುವುದಂತೂ ಬಹುಪಾಲು ತಂದೆಯರೆ. ಅದಕ್ಕೆ ಅವರಿಗೆ ಮೊದಲೇ ತರಬೇತಿಯೂ ಆಗಿರುತ್ತದೆ!  ಇಲ್ಲಿ  ನನ್ನ ದೇಶ ನೆನೆಸುವ ಯೋಗ ಬಂದಿತು. ಒಂದು ಯುವ ಜೋಡಿ. ಇನ್ನೂ ಇಪ್ಪತ್ತರ ಆಸುಪಾಸಿನವರು. ಅವರಿಗೆ ಅವಳಿ ಜವಳಿ. ಬಹುಶಃ ೬-೮ ತಿಂಗಳ  ವಯಸ್ಸಿರಬೇಕು. ಬಹು ಮುದ್ದಾಗಿವೆ. ಎರಡು ಸೀಟ್ ಇರುವ ಸ್ತ್ರೋಲ್ಲರ್ ನಲ್ಲಿ ಮಕ್ಕಳು ಇವೆ. ಯುವಕ ಮಕ್ಕಳ ತಳ್ಳು ಗಾಡಿಯನ್ನು ರಸ್ತೆ ಬದಿಯ ಫುಟ್ ಪಾಥ್ ನಲ್ಲಿ ನಿಲ್ಲಿಸಿದ. ಒಂದು ಮಗುವನ್ನು ಅಲ್ಲಿ ಮಲಗಿಸಿ  ಶೌಚ ಕವಚ ಬದಲಿಸತೊಡಗಿದ. ಹೆಂಡತಿ ಇನ್ನೊಂದು ಮಗುವಿನ ಹತ್ತಿರವಿದ್ದಳು. ನಂತರ ಇನ್ನೊಂದರ ಸರದಿ. ನನಗಂತೂ ಬಹು ಖುಷಿ ಆಯಿತು. ನನ್ನ ನಾಡಿನಲ್ಲಿ ರಸ್ತೆ ಯ ಪಕ್ಕದಲ್ಲೇ ಶೌಚಕ್ಕೆ ಕೂಡುವ ಮಕ್ಕಳನ್ನು ನೋಡಿದ್ದೇ. ಆದರೆ ಇಲ್ಲಿ ಇದು ಕನನಸಲ್ಲೂ ಸಾಧ್ಯ ಇಲ್ಲ. ಕೊನೆಗೆ ಹಸುಗೂಸಿಗಾದರು ರಸ್ತೆಯಲ್ಲಿಯೇ  ಆ ಅವಕಾಶ ಇದೆ ಎಂದರೆ, ಮಕ್ಕಳು ಕಾಲ ದೇಶಗಳನ್ನೂ ಮೀರಿದವರು ಎಂಬ ನಂಬಿಕೆ ಸತ್ಯವಾಯಿತು.
ನಾವು ಕ್ಯಾಟ್ಸ್ ಕಿಲ್ ಬೆಟ್ಟದ ಬುಡದ ಊರು ತಲುಪಿದಾಗೆ ಆಗಲೇ ಸಂಜೆ ಐದು. ನಾಲಕ್ಕು ತಾಸಿನ ಪಯಣ ಎಂಟು ತಾಸು ಮೀರಿತ್ತು -ಥೇಟು ಕರ್ನಾಟಕದಂತೆ. ನಮ್ಮ ಸಹ ಚಾರಣಿಗರು ಹಿಂದಿನ ದಿನವೇ ಬಂದು ಟೆಂಟ್ ಹಾಕಿದ್ದರು. ಹಾಗಾಗಿ ನಮಗೆ ತುಸು ಆರಾಮ್ ಎನಿಸಿತು.  ನಾವು ಟೆಂಟ್ ಹಾಕಿದ ಜಾಗ ನೋಡಿದರೆ ಸಂತೆಯಿಂದ ಜಾತ್ರೆಗೆ ಬಂದಂತಾಗಿತ್ತು.  ಕ್ಯಾಂಪ್ ನಲ್ಲಿ ನೂರಾರು ವಾಹನಗಳು. ಮರಗಿಡಗಳ ನಡುವೆ ಬಯಲಿದ್ದಲ್ಲೆಲ್ಲ ಬಣ್ಣ ಬಣ್ಣದ ಟೆಂಟ್ ಗಳು. ಮರಗಳಿಗೆ ಗುರುತಿಸಲು ಸಂಕೇತಕ್ಷರಗಳು. ಪ್ರತಿ ಗುಂಪಿಗೂ ಮರದ ಬೆಂಚು  ಮೇಜುಗಳು. ಅಲ್ಲಿಯೇ ಬೆಂಕಿಹಾಕಲು ಲೋಹದ ದೊಡ್ಡ ಅಗ್ಗಿಷ್ಟಿಕೆ. ಪಕ್ಕದಲ್ಲೇ ಕಾರು ನಿಲ್ಲಿಸಲು ಜಾಗ. ಆದರೆ ಮಳೆ ಬಂದದ್ದರಿಂದ ಕೆಸರು, ಕೊಚ್ಚೆ. ಇಲ್ಲೂ ತಲೆಗಂದಾಯ ಉಂಟು. ಜಾತ್ರೆಯಲ್ಲಿ ಹಾಕುತ್ತಾರಲ್ಲ ನೆಲಗಂದಾಯ ಹಾಗೆ. ಬಹಳ ಹೆಚ್ಚೇನಿಲ್ಲ, ವಸತಿ ಗೃಹಕ್ಕಿಂತ ೪-೫ ಡಾಲರ್ ಕಡಿಮೆ ಅಷ್ಟೇ. ಅಂದರೆ ಸುಮಾರು ೪೦ ಡಾಲರುಗಳು ೨ ದಿನಕ್ಕೆ. ಆವರು ಕೊಡುವ ಏಕಮಾತ್ರ ಸೌಲಭ್ಯ ರೆಸ್ಟ್ ರೂಂ. ಅದು ಟಾಯ್ಲೆಟ್ ಪೇಪರ್ ರಹಿತ. ಹೋದ ಕೂಡಲೇ ರೆಸ್ಟ್ ರೂಮಿಗೆ ಹೋದರೆ, ಶುಚಿ ಮಾಡಿಕೊಳ್ಳಲು ಏನೂ ಏನೂ ಇಲ್ಲ. ಕೇಳಿದರೆ ನಮ್ಮದು ನಾವೇ ಒಯ್ಯಬೇಕು. ನಮ್ಮ ಊರಿನಂತೆ ತಂಬಿಗೆ ಹಿಡಿದು ಹೋಗುವ ಬದಲು ಪೇಪರ್ ಸುರಳಿ ಹಿಡಿದು ಹೋಗಬೇಕು. ಹತ್ತಿರದಲ್ಲೆ ಹಳ್ಳವೋ, ಝರಿಯೋ ಹರಿಯುತ್ತಿದೆ. ಆದರೆ ಆ ಕಾರ್ಯಕ್ಕೆ ಉಪಯೋಗಿಸುವ ಹಾಗಿಲ್ಲ ಎಂದು ಸುಮ್ಮನಾಗಬೇಕಾಯಿತು. ಜನಮರುಳೋ, ಜಾತ್ರೆ ಮರುಳೋ. ಬಂದದ್ದಾಯಿತು ಗುಂಪಿನೊಡನೆ ಗೋವಿಂದ ಎಂದು ಕೇಳಿದಷ್ಟು ಕೊಟ್ಟು ತೆಪ್ಪಗಾದೆವು.
ನಾವು ತಂಗಿದ ಜಾಗದ ಹೆಸರು ಕರಿ ಕರಡಿ ಶಿಬಿರ... ಹೆಸರು ಪ್ರಾಸಬದ್ಧವಾಗಿದೆ ಎಂದರೆ ಅವರು, ರಾತ್ರಿ ಕರಡಿಗಳು ಬರುತ್ತವೆ, ಯಾರೂ ಆಹಾರ ಪದಾರ್ಥ ರಾತ್ರಿ ಹೊರಗಿಡಬಾರದು ಎಂದಾಗ ನಕ್ಕು ಸುಮ್ಮನಾದೆವು. ಜಾಂಬುವಂತ ತಿಂಡಿ ಕದಿಯಲು ಬರುವನೇ ಎಂದು ಹಾಸ್ಯ ಮಾಡಿದೆವು.
ಕ್ಯಾಟ್ಸ್ ಕಿಲ್ ಪರ್ವತ ಪಂಕ್ತಿ ಕಡಿದಾದ ಬೆಟ್ಟಗಳಿಗೆ, ದಟ್ಟವಾದ ಕಾಡಿಗೆ ಹೆಸರಾದುದು. ನ್ಯೂಯಾರ್ಕ್ ನಗರದ ಅತಿ ಸಿರಿವಂತರೆಲ್ಲರ ಬೇಸಗೆ ಧಾಮಗಳು ಇಲ್ಲಿವೆ. ದಶಕಗಳವರೆಗೆ ನಿದ್ದೆ ಮಾಡಿ ಎದ್ದ 'ರಿಪ್ ವ್ಯಾನ್ ವಿಂಕಲ್ ' ಕಥೆ ಇಲ್ಲಿಯೇ ನಡೆದದ್ದಂತೆ.

Tuesday, September 11, 2012

ನೆನಪಿಡು ಮರೆಯಲು ಸದಾ



                                 ನಿನಗೆ ನೋವು ನೀಡಿದ ವಿಷಯ 
                                 ಮರೆಯದೆ,ನೆನಪಿಡು ಅನುಗಾಲ
                                 ನಲಿವು ನೀಡಿದರು ನಿನಗೆ ಕ್ಷಣಕಾಲ 
                                  ನೆನಪಿಡು  ಮರೆಯಲು  ಸದಾ 
                                   ನಂಬಲಾಗದ ಗೆಳೆಯರ 
                                   ಮರೆಯಲು  ನೆನಪಿಡು 
                                   ಕಷ್ಟದಲಿ  ಹೆಗಲಿಗೆ ಹೆಗಲು ಹಚ್ಚಿದವರ 
.                           ನೆನಪಿಡು ಮರೆಯದೆ  ಸದಾ  
       ಕಳೆದು  ಹೋದ ಕಷ್ಟ  ಕಾರ್ಪಣ್ಯಗಳ
       ಮರೆಯದೆ ನೆನಪಿಡು ಸದಾ 
      ಅನು ದಿನವು ದೊರೆವ  ಕರುಣೆಯ .