|
Monday, September 17, 2012
ಹೀಗೊಂದು ಪ್ರಾರ್ಥನಾ ಪ್ರಸಂಗ
Thursday, September 13, 2012
ಕರಡಿ ಮರವ ಏರಿತು
ಕರಡಿ
ಮರವ ಏರಿತು
ಕಾರಿನ ಕರಗ ನೋಡಿ ಊರಲ್ಲಿ
ಸುತ್ತ ಹೊರಟೆವು. ನಮ್ಮ
ಶಿಬಿರ ಇರುವದು ಪುಟಾಣಿ ಊರಲ್ಲಿ. ಫಿನಿಶಿಯಾ ಎಂಬ ಪುರಾತನ
ನಾಗರಿಕತೆಯ ಹೆಸರು. ಇಲ್ಲಿ ಬಂದ ಬಗೆ ನಮಗೆ ತಿಳಿಯದು. ಬೆಟ್ಟದ
ಬುಡದಲ್ಲಿ, ನದಿಯ ತಟದಲ್ಲಿ ಕಾಡಿನ ನಡುವೆ ಇರುವ ಸುಂದರ ಗ್ರಾಮ. ಊರಿಗೆ
ಒಂದೇ ಒಂದು ಮುಖ್ಯ ರಸ್ತೆ. ಎರಡು ಬದಿಯಲ್ಲಿ ಕಟ್ಟಿಗೆ ಮನೆಗಳು.
ಪ್ರವಾಸಿಗರ ಅಗತ್ಯ ಪೂರೈಸುವ ಸರ್ವ ವಸ್ತು ಭಂಡಾರ, ಹೋಟೆಲ್, ಮೋಟೆಲ್, ವಸತಿ ಗೃಹಗಳು.
ಊರು ಭಿತ್ತಿ ಚಿತ್ರದಂತೆ ಬಹು ಸುಂದರ. ಇದು ಸದ ಪ್ರವಾಸಿಗರ ನೆಚ್ಚಿನ ತಾಣ. ಬೇಸಗೆಯಲ್ಲಿ ಜನ ಜಾತ್ರೆ. ಚಾರಣಿಗರು, ಬೆಟ್ಟ ಏರುವವರು, ಸಾಹಸ ಕ್ರೀಡೆಗಾಗಿ ಕಾರಿನಲ್ಲಿ, ಬಸ್ಸಿನಲ್ಲಿ ಸೈಕಲ್ ಸವಾರರಾಗಿ ವಾರಾಂತ್ಯದಲಿ
ಮುಕುರುವರು. ಚಳಿಗಾಲದಲ್ಲೂ ಸಹಾ ತೆರಪಿಲ್ಲ. ಸ್ಕೀಯಿಂಗ್ ಗೂ
ಇದು ಹೇಳಿ ಮಾಡಿಸಿದ ಜಾಗ. ಆಗ ಮರಗಳೆಲ್ಲ ಬೋಳು ಬೋಳು.
ಅವುಗಳ ನಡುವೆ ಬೆಟ್ಟಗಳ ಇಳಿಜಾರಿನಲ್ಲಿ ಕಾಲಿಗೆ ಹಲಗೆ ಕಟ್ಟಿಕೊಂಡು, ಹಿಮಾವೃತ ಬೆಟ್ಟಗಳನ್ನೂ ದಾಟುವ ಸಾಹಸಿಗರ ಸ್ವರ್ಗ
ಇದು. ಸಕ್ಕರೆ ಬೆಟ್ಟದ ಮೇಲಿನ ಕರಿ ಇರುವೆಗಳ ರೀತಿ ಕಾಣುತ್ತಾರೆ. ವಿಶೇಷ ಉಡುಪು ಧರಿಸಿದ ಆ ಜನ.
ಊರಿನ ಪ್ರಮುಖ ಭಾಗದಲ್ಲಿ ದೊಡ್ಡ ಫಲಕ ಅಲ್ಲಿರುವ ಚಾರಣದ ದಾರಿಗಳ ವಿವರ. ಅವುಗಳ ಅಂತರ, ಎತ್ತರ, ಪ್ರಯಾಸದ ಮಟ್ಟ
ಎಂದರೆ, ಸುಲಭ, ಸಾಧಾರಣ, ಕಷ್ಟ, ಕಡು ಕಷ್ಟ, ಇತ್ಯಾದಿ.
ಎಷ್ಟು ದೂರ ಕಾರಲ್ಲಿ ಹೋಗಬಹುದು, ಹೆಂಗಸರು, ಮಕ್ಕಳು,
ಹಿರಿಯರು ಹೋಗಬಹುದೆ, ಅಲ್ಲಿ ದೊರಕಬಹುದಾದ ಸೌಲಭ್ಯ,
ಬೇಕಾಗುವ ಸಮಯ ಅಗತ್ಯವಾದ ಪೂರ್ವ ತಯಾರಿ, ಎಲ್ಲ
ನಮೂದಿತವಾಗಿದ್ದವು.
ಈ ಉರಿನಲ್ಲಿ ಎಲ್ಲಿಯೂ
ಮೊಬೈಲ್ ಸಂಕೇತ ದೊರಕದು. ಏನಿದ್ದರೂ ಸ್ಥಿರ ದೂರವಾಣಿಯಿಂದ ಮಾತ್ರ ಸಂಪರ್ಕ. ಹೀಗೆ ನಮಗೆ ಆ ದಿನ ಎಲ್ಲಿ
ಹೀಗಿರಬಹುದು ಎನ್ನುವ ಸ್ಥೂಲ ಕಲ್ಪನೆ ಸಿಕ್ಕಿತು. ಆಗಲೇ ಗಂಟೆ ಎಂಟೂವರೆ. ಮಲಗಿದ್ದವರೆಲ್ಲರನ್ನು
ಹೊರಡಿಸಬೇಕೆಂದು ಮನೆ ಕಡೆ ಮುಖ ಮಾಡಿದೆವು.
ನಮ್ಮ ಶಿಬಿರದ ಪ್ರವೇಶ ದ್ವಾರದ ಹತ್ತಿರ
ಆಗಲೇ ಜನ ಜಂಗುಳಿ. ರಸ್ತೆಯ ಆಚೆ ಬದಿಯಲ್ಲಿ ನಿಂತು ಏನನ್ನೋ ನೋಡುತ್ತಿದ್ದಾರೆ. ಎಲ್ಲರ ದೃಷ್ಟಿ
ದೂರದ ಮರದ ಮೇಲೆ. ಸಮವಸ್ತ್ರಧಾರಿ ಮಹಿಳೆಯೋಬ್ಬಳು ರಸ್ತೆಯಲ್ಲಿನ
ವಾಹನಗಳ ಒಡಾಟ ನಿಲ್ಲಿಸಿ, ಜನರನ್ನು ನಿಯಂತ್ರಿಸುತ್ತಿದ್ದಾಳೆ. ಆಗಲೇ
ಅಗ್ನಿಶಾಮಕ ವಾಹನದಲ್ಲಿ ಬಂದ ಇಬ್ಬರು ಆ ಮರದ ಸುತ್ತ ನೂರು ಅಡಿಯವರೆಗೆ ಯಾರು ಹೋಗದಂತೆ ಸೂಚನೆ
ಇರುವ ಬಣ್ಣದ ತಡೆ ಟೇಪನ್ನು ಕಟ್ಟಿದರು. ಏನಾಗಿದೆ ಎಂಡು ನಮಗೆ
ಅಚ್ಚರಿ. ಕೇಳಿದಾಗ ತಿಳಿಯಿತು. ಹಿಂದಿನ ರಾತ್ರಿ ಕರಡಿಗಳ ಗುಂಪು
ನಮ್ಮ ಶಿಬಿರಕ್ಕೆ ಭೇಟಿ ನೀಡಿದ್ದವು. ಅವುಗಳ ಪೈಕಿ ಒಂದು ದೊಡ್ಡ ಹೆಣ್ಣು
ಕರಡಿ ಎರಡು ಮರಿಗಳೊಂದಿಗೆ ಮರವೇರಿ ಕುಳಿತಿದೆ. ಕರಡಿ ಬೆಟ್ಟಕೆ ಹೋಯಿತು ಎಂದು
ಶಿಶು ಗೀತೆ ಕೇಳಿದ್ದ ನಾವು ಬೆಟ್ಟದಿಂದ ಇಳಿದು, ಬಯಲಲ್ಲಿ ತಿಂಡಿ
ತಿಂದು, ಮರವೇರಿ ಕುಳಿತ ಕರಡಿಗಳನ್ನು ನೋಡಿದ್ದು ಇದೆ ಮೊದಲು.
ಚಿತ್ರದುರ್ಗದಲ್ಲಿ ಬೆಟ್ಟ
ಇಳಿದು ಬರುವ ಕರಡಿ ದರ್ಶನ ಆಗೀಗ ಆಗುತಿತ್ತು. ಜನ ಕೊಡುವ ಬ್ರೆಡ್ಡು, ಶೇಂಗಾ
ಪಡೆಯಲು ಸಂಜೆಯ ಕಾಲಕ್ಕೆ ಸರಿಯಾಗಿ ಹಾಜರಾಗುತ್ತಿದ್ದ, ಅದಕ್ಕೆ ಜಂಬೂ
ಎಂದು ಹೆಸರಿಟ್ಟಿದ್ದರು. ಒಂದು ಬಾರಿಯಂತೂ, ದುರ್ಗದ ಬೆಟ್ಟ ಗುಡ್ಡಗಳಲ್ಲಿ ಮಿನಿ ಚಾರಣಕ್ಕೆ ಹೋಗಿದ್ದ ನಮ್ಮಿಂದಲೂ ಏನೋ ನಿರೀಕ್ಷಿಸಿ,
ಬೆನ್ನು ಹತ್ತಿ ಬಂತು. ತಪ್ಪಿಸಿಕೊಳ್ಳಲು,
ಬಂಡೆಯೊಂದನ್ನು ಹತ್ತಿ ಕೂರಬೇಕಾಗಿ ಬಂದಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ, ಅದು ನಮ್ಮನ್ನು
ನಿರೀಕ್ಷಿಸುತ್ತ, ಕೆಳಗೆ ಕಾವಲು ಕೂತಿತ್ತು.
ಆದರೆ, ರಸ್ತೆ ಬದಿಯ ಎತ್ತರದ ಮರವನ್ನು ಮರಿಗಳ
ಸಮೇತ ಏರಿ ಕುಳಿತದ್ದನ್ನು ನೋಡಿದ್ದು ಇದೆ ಮೊದಲು. ಅದಕ್ಕೆ
ಗಾಬರಿಯಾಗದಿರಲೆಂದು ಸಂಚಾರದ ದಿಕ್ಕನ್ನೇ ಬದಲಿಸಲಾಗಿತ್ತು. ಬೆಟ್ಟದಲ್ಲಿ
ಕರಡಿ ಇವೆ ಎಂದು ಕೇಳಿದ್ದ ನಮಗೆ ಅವು ನಮ್ಮ ಭೇಟಿಗೆ ಬಂದಿದ್ದವು ಎಂದಾಗ ಹೊರಗೆ ಸಂತೋಷ ತೋರಿಸಿದರೂ,
ಮನದಲ್ಲಿ ಭೀತಿ ಮನೆ ಮಾಡಿತ್ತು. ಆದರೆ ಇದು ಪ್ರವಾಸಿಗಳಿಗೆ ಅನಿರೀಕ್ಷಿತ
ಬೋನಸ್. ಎಲ್ಲರೂ ಕೆಮರ ಕ್ಲಿಕ್ ಮಾಡುವವರೆ. ಟೆಲಿ ಲೆನ್ಸ್ ಇದ್ದವರಿಗೆ ಖುಷಿಯೋ ಖುಷಿ. ಇಲ್ಲದವರು
ಕ್ಲೋಸ್ ಅಪ್ ಚಿತ್ರಕ್ಕಾಗೇ ಕುಳಿತೂ- ನಿಂತೂ, ಮರವೇರಿ ಸರ್ಕಸ್ಸು ಮಾಡಿ
ಉತ್ತಮ ಚಿತ್ರ ಪಡೆವ ಪ್ರಯತ್ನಪಟ್ಟರು.
ನಮ್ಮ ತಂಬೂಗೆ ಬಂದಾಗ ಬೆಳಗಿನಜಾವದ ಜಾಂಬವ ಸೈನ್ಯದ ದಾಂಧಲೆಯ ಪರಿಚಯವಾಯಿತು. ನಡುರಾತ್ರಿ
ಮೀರಿ, ಕುಡಿದು ಕುಪ್ಪಳಿಸಿದ ಜನ ತಿಂಡಿ ತೀರ್ಥಗಳನ್ನೂ ಬಯಲಲ್ಲೇ ಮೇಜಿನ
ಮೇಲೆ ಬಿಟ್ಟಿದ್ದರು. ಅವು ಕರಡಿ ಪಡೆಯ ಪಾಲಿಗಿದ್ದವು. ತಿಂದದ್ದಕ್ಕಿಂತ ಚೆಲ್ಲಾಪಿಲ್ಲಿಯಾದದ್ದೇ
ಹೆಚ್ಚು. ಕರಿ ಕರಡಿ ಶಿಬಿರ ಎಂಬ ಹೆಸರಿಗೆ ನ್ಯಾಯ ಒದಗಿಸಲು ಕರಡಿಗಳೆ ದರ್ಶನ ನೀಡಿದ್ದವು ಅಥವಾ ಪ್ರವಾಸಿಗಳಲ್ಲಿ ರೋಮಾಚಂನ ಹುಟ್ಟಿಸಲು ಮಾಡಿದ
ಮಾರ್ಕೆಟಿಂಗ್ ಟ್ರಿಕ್ಕಾ..? ಇರಲಾರದು ಎಂದೇ ಅಂದುಕೊಂಡೆವು.
Labels:
ಅಮೇರಿಕಾ,
ಕರಗ,
ಚಾರಣ,
ಫಿನಿಷಿಯಾ,
ರಿಪ್ವ್ಯಾನ್ವಿಂಕಲ್,
ಸ್ಕೀಯಿಂಗ್
ಘಟ್ಟದ ತಪ್ಪಲಲ್ಲೂ ಬಿಡದ ಹುಟ್ಟುಗುಣ
ಘಟ್ಟದ ತಪ್ಪಲಲ್ಲೂ ಬಿಡದ ಹುಟ್ಟುಗುಣ
‘ರಿಪ್ ವ್ಯಾನ್
ವಿನ್ ಕಲ್', ಕತೆಗಾರ ಇರ್ವಿನ್ ವಾಶಿಂಗ್ ಟನ್ ಇಲ್ಲಿಗೆ ಬಂದೆ
ಇರಲಿಲ್ಲವಂತೆ. ಹರೆಯದ ಹುಡುಗ ಬೆಟ್ಟದ ಮೇಲೆ ಕುಡಿದು ಮಲಗಿದ
ಎದ್ದು ನೋಡಿದಾಗ ಮಾರುದ್ದ ಬಿಳಿ ಗಡ್ಡ, ತಲೆಯಲ್ಲ ಬೋಳು. ಹಣ್ಣು ಹಣ್ಣು ಮುದುಕ. ಕೆಳಗಿಳಿದು ಬಂದರೆ ಊರೆಲ್ಲ ಪೂರ್ಣ ಬೇರೆ... ಪರಿಚಿತರಿಲ್ಲವೇ
ಇಲ್ಲ. ಮನೆ ಹುಡುಕಿ ಹೋದಾಗ ಹರೆಯದವ ಅವನ ಮೊಮ್ಮಗನಂತೆ...' ಈ ಕತೆ ದೇಶ, ಕಾಲ, ಭಾಷೆ ಮೀರಿ ಜನಪ್ರಿಯ. ಇಲ್ಲಿ ದೊರಕುವ ಮದ್ಯ ಮತ್ತು
ಬರುವ ನಿದ್ದೆ ನೋಡಿದರೆ ಕತೆ ನಿಜ ಎನಿಸಿತು. ಸುತ್ತಮುತ್ತ ನೋಡಿದರೆ ಸರ್ವಜನಾಂಗದ ಸುಂದರ ತೋಟ
ಕಾಣಿಸಿತು. ಬಿಳಿಯರು, ಕರಿಯರು, ಕಂದು,
ಕೆಂಪು, ಹಳದಿ, ಕಕೆಶಿಯನರು,
ಆಫ್ರಿಕಾನರು, ದೇಸಿಗಳು, ಮುಂಗೊಲಿಯ
ಮೂಲದವರು, ವರ್ಣ, ಜನಾಂಗ ಭೇದವಿಲ್ಲದೆ ಎಲ್ಲ
ಒಂದೆಡೆ ಇದ್ದಾರೆ.
ಇನ್ನು ಭಾಷೆಗಳು ಹಲವು ಬಗೆಯ
ಇಂಗ್ಲಿಷ್, ಫ್ರೆಂಚ್,
ಸ್ಪ್ಯಾನಿಶ್, ಇಟ್ಯಾಲಿಯನ್, ಕೊರಿಯನ್ ಅಲ್ಲಲ್ಲಿ ಹಿಂದಿ. ಮಿನಿ ವಿಶ್ವ ಸಂಸ್ಥೆಯೇ ಅಲ್ಲಿದೆ ಎನಿಸಿತು. ಎಲ್ಲ ಹರೆಯದ ಹುರುಪಿನ ಜೋಡಿಗಳು. ಅಲ್ಲೊಬ್ಬ, ಇಲ್ಲೊಬ್ಬ
ಮಕ್ಕಳು. ಸಾಕು ನಾಯಿಗಳು ಮಾತ್ರ ಸಾಕಷ್ಟು.
ಎಲ್ಲ ಸರ್ವ ಸನ್ನದ್ಧರಾಗೇ ಬಂದಿದ್ದಾರೆ. ಅಲ್ಲಿ ಇದ್ದ ಎರಡು ಮರಗಳಿಗೆ
ಬಿಗಿದ ಹ್ಯಾಮಕ್ಕಿನಲ್ಲಿ (ಹ್ಯಾಮಕ್ ಎಂದರೆ, ಎರಡು ಮರಗಳಿಗೆ ಕಟ್ಟಿದ
ಹಗ್ಗದಿಂದ ಮಾಡಿದ ಬಲೆ, ತೊಟ್ಟಿಲ ತರ ಉಪಯೋಗಿಸುತ್ತಾರೆ. ಒಂದು ನಿಸರ್ಗದ ನಡುವೆ ಅಂತರಿಕ್ಷದಲ್ಲಿ ಮಲಗಿದ ಅನುಭವ.) ಮಲಗಿ ಮುಗಿಲು ನೋಡುವವರು,
ಕೆಲವರಾದರೆ, ಮರದ ಟೊಂಗೆಗೆ ನೇತು ಬಿಟ್ಟ ಜೋಕಾಲಿಯಲ್ಲಿ
ತೂಕಡಿಸುವವರು, ಟೆಂಟ್ ಮುಂದೆ ಮರದ ಕೆಳಗೆ ಹಾಕಿದ ಮಡಿಚುವ ಆರಾಮ
ಕುರ್ಚಿಯಲ್ಲಿ ಕುಳಿತು ಓದುವವರು ಹಲವರು. ಇದ್ದ ಜಾಗದಲ್ಲೇ ಶಟಲ್ ಆಡಿದರೆ, ಊಟದ ಮೇಜಿನ ಮೇಲೆ ಕೇರಂ, ಚೆಸ್. ನಿಧಾನವಾಗಿ ಕತ್ತಲು ಕವಿದಂತೆ ಚಳಿಗಾಳಿ ಶುರುವಾಯಿತು. ಕ್ಯಾಂಪ್ ಫೈರ್ ಹಾಕಲು ಗಡಿಬಿಡಿ ಮೊದಲಾಯಿತು. ಒಣ ಕಟ್ಟಿಗೆ ಹೇರಿಕೊಂಡ ವಾಹನ ಹಾಜರು. ಮಟ್ಟಸವಾಗಿ ಕೊರೆದ ಸುಮಾರು ಗಾತ್ರದ ದುಂಡನೆ, ನಿಗೂಳಾದ,
ದಿಂಡುಗಳು. ಇವನ್ನು ಸುಡುವುದೇ... ಎಂದು ಕಣ್ಣು ಕಣ್ಣು ಬಿಟ್ಟೆವು. ಕಡ್ಡಿ
ಪುರಲೇ ಕೊಂಬೆ, ರೆಂಬೆ ಸುಡುವ ನಮಗೆ, ಮನೆ
ಮುಟ್ಟಿಗೆ ಯೋಗ್ಯವಾದ ಅವುಗಳನ್ನು ಸುಡುವುದಕ್ಕೆ, ನೋಟಿನ ಕಟ್ಟಿಗೇ
ಬೆಂಕಿ ಹಚ್ಚಿದಷ್ಟು ಬಾಧೆಯಾಯಿತು. ಸುತ್ತಲು ನೋಡಿದಾಗ ಮುಗಿಲು
ಮುಟ್ಟುವ ನಿಸೂರಾದ ಓಕ್ ಮರಗಳ ಗುಂಪು ತುಸು ನೆಮ್ಮದಿ ತಂದಿತು.
ಅಗ್ನಿ ದೇವನಿಗೆ
ಹವಿಸ್ಸಿನಂತೆ ಹಾಕಲು
ಎಣ್ಣೆ ಕ್ಯಾನ್. ಎಲ್ಲದಕ್ಕೂ ಕಾಸು. ಬೆಲೆ ಕೇಳುವ ಹಾಗಿಲ್ಲ ಹೇಳಿದಷ್ಟು. ಅಗ್ನಿ ದೇವ ಚಕ್ಕನೆ ಪ್ರತ್ಯಕ್ಷನಾದ.
ಕೆಂಡದ ಕುಂಡದ ಮುಂದೆ ಎಲ್ಲ ದುಂಡಗೆ ಕುಳಿತೆವು. ನಾವು
ಹಿರಿಯರು ಆಗಲೇ ಬೆಚ್ಚನೆ ಉಡುಪು ಧರಿಸಿದ್ದೆವು. ತಾಳಲಾರದ ಚಳಿ. ಕೆಂಡದಲ್ಲಿ ಕೈ
ಇಟ್ಟರೆ ಮಾತ್ರ ಮೈ ತುಸು ಬಿಸಿಯಾಗಬಹುದು ಎನಿಸಿತು. ಉಟ್ಟ ಬಟ್ಟೆ ಸುಟ್ಟೀತು ಎಂದು
ಸುಮ್ಮನಾದೆವು. ನಮ್ಮವರು ಮೆಕ್ಕೆ ತೆನೆ
ತಂದಿದ್ದರು. ಅವನ್ನು ಹದವಾಗಿ ಸುಟ್ಟು ಬಿಸಿ ಬಿಸಿ ಕಾಳನ್ನು
ಬಿಡಿಸಿ ತಿನ್ನ ತೊಡಗಿದೆವು. ನಮ್ಮ ಯುವ ಗೆಳೆಯರು ಉದ್ದನೆ ಲೋಹದ ಕಡ್ಡಿ ತೆಗೆದು ಅದಕ್ಕೆ ಪೊಟ್ಟಣ
ದಲ್ಲಿದ್ದ ಏನನ್ನೋ ತೆಗೆದು ಸುಡತೊಡಗಿದರು. ಅದು ಸುಯ್ಯ್ ಎಂದಾಗ
ಹಿಂತೆಗೆದು ಚಪ್ಪರಿಸತೊದಗಿದರು. ನಮಗೂ ತಿನ್ನಲು ಹೇಳಿದರು. ಹೇಳಿ ಕೇಳಿ ಶುದ್ದ ಸಸ್ಯಾಹಾರಿಗಳು, ಮೊದಲೇ ಅನುಮಾನದ
ಪ್ರಾಣಿಗಳು. ಏನೇ ತಿನ್ನುವ ಮೊದಲು ಅದರಲ್ಲಿ ಮಾಂಸದ ಅಂಶ ಇಲ್ಲ
ಎಂದು ಖಾತ್ರಿ ಮಾಡಿಕೊಳ್ಳುತಿದ್ದೆವು. ತೊಂದರೆ ಏಕೆಂದು ಎಲ್ಲಿಯೇ ಹೋದರು ಬುತ್ತಿಯ ಗಂಟು, ನೀರಿನ
ಶೀಸೆ ನಮ್ಮ ಸಂಗಾತಿ. ಈ ರೀತಿ ಮಾಂಸ ಸುಡುವರೆಂದು ಎಲ್ಲೋ ಓದಿದ ನೆನಪು. ಈ ಗೊಡವೆಯೇ ಬೇಡ ಎಂದು ತಲೆ ಆಡಿಸಿದೆವು. ಮಾರನೆ ದಿನ
ಬೆಳಕಿನಲ್ಲಿ ಅದರ ಮೇಲಿದ್ದ ಬರಹ ಓದಿದೆ. ಅದು 'ಲಶ್ ಮೇಲೋ' ಎಂದು ಹೆಸರಿನ ಸಕ್ಕರೆಯ ತಯಾರಿ.
ಹೇಗಿದ್ದರೂ ಸಿಹಿರಕ್ತದ ನಾವು ತಿನ್ನುವ ಹಾಗಿಲ್ಲ. ಬೇಡ ಎಂದಿದ್ದು ಒಳ್ಳೆಯದೇ
ಆಯಿತು ಎಂದು ಸಂತಸಪಟ್ಟೆ. ಹೊಟ್ಟೆ ಆಗಲೇ ತಾಳ ಹಾಕ ಹತ್ತಿತು.
ಮನೆಯಿಂದ ತಂದಿದ್ದ ದಿಢೀರ್ ಉಪ್ಪಿಟ್ಟು ತಡವಿಲ್ಲದೆ ರೆಡಿಯಾಯಿತು. ಜತೆಗೆ ಚಿಪ್ಸ್, ಉಪ್ಪಿನಕಾಯಿ. ಬಿಸಿ ಬಿಸಿ ಉಪ್ಪಿಟ್ಟು ಹೊಟ್ಟೆ ಸೇರಿತು. ಸುತ್ತಮುತ್ತಲಿನವರ
ಹಾಡು, ಕೇಕೆ, ಕುಣಿತ ಸಾಗಿಯೇ ಇತ್ತು. ಎಲ್ಲರೂ ಕಡಿಮೆ ಉಡುಪಿನಲ್ಲೇ ಇದ್ದರು. ಇವರಿಗೆ ಚಳಿಯಾಗದೇನೋ ಎನಿಸಿತು. ನಂತರ
ತಿಳಿಯಿತು. ಅವರ ಮೈ ಬಿಸಿಯ ಕಾರಣ. ಹೊರಗಿನ ಬೆಂಕಿಯಲ್ಲ. ಹೊಟ್ಟೆಯಲ್ಲಿ ಸೇರುತ್ತಿದ್ದ
ದ್ರವಾಗ್ನಿ ಎಂದು. ಗಂಟೆಗಟ್ಟಲೆ ಕೈನಲ್ಲಿ ಹಿಡಿದು ಬಾಯಿ
ಚಪ್ಪರಿಸುತಿದ್ದ ಬಣ್ಣ ಬಣ್ಣದ ಪೇಯಗಳೇ ಖುಷಿಯಿಂದ ಕುಣಿಸುತಿದ್ದವು. ನಮ್ಮ ಗುಂಪಿನ ಯುವಕರು
ಕಣ್ಣು ಬಾಯಿ ಬಿಡುತಿದ್ದ ಪರಿ ನೋಡಿ ಕನಿಕರವಾಯಿತು. ಪಾನಕ
ಕುಡಿವಾಗ ನೊಣ ಬಂದಂತಗಬಾರದು ಎಂದು ನಾವು, ಹಿರಿಯ ದಂಪತಿಗಳು, ಅವರಿಗೆ ಶುಭ ರಾತ್ರಿ ಹೇಳಿ ಟೆಂಟ್ ಸೇರಿದೆವು. ಹೇಗಿದ್ದರೂ ಕಣ್ಣುಗಳು ಆಗಲೇ
ಎಳೆಯುತಿದ್ದವು. ಪವನ ತಲ್ಪದ ಮೇಲೆ ಪವಡಿಸಿದೆವು. ಗಾಳಿ ಗಾದಿಯ ಮೇಲೆ ಮಲಗಿದ್ದು ಅದೇ ಮೊದಲು. ಹೇಗೋ ಹೇಗೋ ಎನಿಸಿತು. ಶೀತ ಆಗಬಾರದು ಎಂದು ಆ ವ್ಯವಸ್ಥೆ. ಹವಾ ಹಾಸಿಗೆಯ ಮೇಲೆ
ಮಲಗಿರುವ ನಮಗೇ ಏನೆಲ್ಲಾ ಅನಿಸಿರುವಾಗ ಹಾವಿನ ಹಾಸಿಗೆಯ ಮೇಲೆ ಮಲಗಿರುವ ಹರಿಗೆ ಹೇಗಿದ್ದಿರಬೇಕು
ಎಂದು ಕೊಳ್ಳುತ್ತಾ, ನಿದ್ರಾ ಚೀಲದಲ್ಲಿ
ತೂರಿಕೊಂಡೆವು. ಜಿಪ್ ಎಳೆದುಕೊಂದು ಗಪ್ಪಗೆ ಮಲಗಿದ್ದೆ ತಡ ನಿದ್ದೆ ಆವರಿಸಿತು.
ನಗರ ನಾಮಾವಳಿ...
ಹುಟ್ಟುಗುಣ ಘಟ್ಟದ ತಪ್ಪಲಿನಲ್ಲೂ ಹೋಗಲಿಲ್ಲ. ಯಥಾರೀತಿ ಬೆಳಗ್ಗೆ ಐದು ಗಂಟೆಗೇ ಎಚ್ಚರವಾಯಿತು. ಟೆಂಟ್ ಬಿಟ್ಟು ಹೊರಬಂದರೆ ಆಗಲೇ ಬೆಳ್ಳಂ ಬೆಳಕು. ಎಲ್ಲೆಡೆ ನೀರವ ಮೌನ. ಹಕ್ಕಿಗಳ ಚಿಲಿ ಪಿಲಿ ಬಿಟ್ಟರೆ ಬೇರೇನೂ ಇಲ್ಲ. ಸುತ್ತಲೂ ಬಣ್ಣ ಬಣ್ಣದ ಟೆಂಟ್ ಗಳೂ ಕೂಡ ನಿದ್ದೆಯ ಮಬ್ಬಿನಲ್ಲಿ ಇರುವಂತೆ ತೋರಿತು. ಹತ್ತಿರದಲ್ಲಿನ ಕ್ಯಾಂಪ್ ಫೈರ್ ನಿಂದ ಹೌದೋ ಅಲ್ಲವೋ ಎನ್ನುವಷ್ಟು ಹೊಗೆ. ಸುತ್ತಲೂ ಎತ್ತರದ ಹಸಿರು ಸೂಸುವ ಮರಗಳು. ಅವುಗಳ ನಡುವಿನ ಕಂಡಿಗಳಲ್ಲಿ ಹಾವಸೆಯ ನಡುವಿನ ತಿಳಿ ನೀರಿನಂತೆ ಕಾಣುವ ನೀಲಿ ಆಕಾಶ. ಹತ್ತಿರದಲ್ಲೇ ಜುಳು ಜುಳು ಹರಿಯುವ ತೊರೆಯ ಮಂಜುಳಾ ನಿನಾದ. ಈ ಸೊಬಗ ಸವಿಯಲು ಎರಡು ಕಣ್ಣು, ಎರಡು ಕಿವಿ ಸಾಲದು ಎನಿಸಿತು. ಹಿಂದಿನ ದಿನ ಮಳೆಬಂದದ್ದರಿಂದ ಎಲ್ಲೆಲ್ಲೂ ಕೊಚ್ಚೆ ಕೆಸರು ಮನಸಿಗೆ ಕಿಸಿರು ಆಗಿದ್ದುದು ನಿಜ. ಮೋಡ ಕರಗಿ ಮೂಡಿದ ಹೊಂಬೆಳಕು ನೋಡಿ ಬಂದದ್ದು ಸಾರ್ಥಕವಾಯಿತು ಎನಿಸಿತು.
ಹುಟ್ಟುಗುಣ ಘಟ್ಟದ ತಪ್ಪಲಿನಲ್ಲೂ ಹೋಗಲಿಲ್ಲ. ಯಥಾರೀತಿ ಬೆಳಗ್ಗೆ ಐದು ಗಂಟೆಗೇ ಎಚ್ಚರವಾಯಿತು. ಟೆಂಟ್ ಬಿಟ್ಟು ಹೊರಬಂದರೆ ಆಗಲೇ ಬೆಳ್ಳಂ ಬೆಳಕು. ಎಲ್ಲೆಡೆ ನೀರವ ಮೌನ. ಹಕ್ಕಿಗಳ ಚಿಲಿ ಪಿಲಿ ಬಿಟ್ಟರೆ ಬೇರೇನೂ ಇಲ್ಲ. ಸುತ್ತಲೂ ಬಣ್ಣ ಬಣ್ಣದ ಟೆಂಟ್ ಗಳೂ ಕೂಡ ನಿದ್ದೆಯ ಮಬ್ಬಿನಲ್ಲಿ ಇರುವಂತೆ ತೋರಿತು. ಹತ್ತಿರದಲ್ಲಿನ ಕ್ಯಾಂಪ್ ಫೈರ್ ನಿಂದ ಹೌದೋ ಅಲ್ಲವೋ ಎನ್ನುವಷ್ಟು ಹೊಗೆ. ಸುತ್ತಲೂ ಎತ್ತರದ ಹಸಿರು ಸೂಸುವ ಮರಗಳು. ಅವುಗಳ ನಡುವಿನ ಕಂಡಿಗಳಲ್ಲಿ ಹಾವಸೆಯ ನಡುವಿನ ತಿಳಿ ನೀರಿನಂತೆ ಕಾಣುವ ನೀಲಿ ಆಕಾಶ. ಹತ್ತಿರದಲ್ಲೇ ಜುಳು ಜುಳು ಹರಿಯುವ ತೊರೆಯ ಮಂಜುಳಾ ನಿನಾದ. ಈ ಸೊಬಗ ಸವಿಯಲು ಎರಡು ಕಣ್ಣು, ಎರಡು ಕಿವಿ ಸಾಲದು ಎನಿಸಿತು. ಹಿಂದಿನ ದಿನ ಮಳೆಬಂದದ್ದರಿಂದ ಎಲ್ಲೆಲ್ಲೂ ಕೊಚ್ಚೆ ಕೆಸರು ಮನಸಿಗೆ ಕಿಸಿರು ಆಗಿದ್ದುದು ನಿಜ. ಮೋಡ ಕರಗಿ ಮೂಡಿದ ಹೊಂಬೆಳಕು ನೋಡಿ ಬಂದದ್ದು ಸಾರ್ಥಕವಾಯಿತು ಎನಿಸಿತು.
ಬೆಳಗಿನ ಕಾರ್ಯ ಮುಗಿಸಿ ಎಂದಿನಂತೆ
ವಾಯುವಿಹಾರಕ್ಕೆ ಹೊರಟೆವು. ನಮ್ಮ
ಶಿಬಿರದಲ್ಲಿ ಎಲ್ಲಿ ನೋಡಿದರು ಕಾರೆ ಕಾರು. ಕಾಲಿಡಲು ತಾವಿಲ್ಲ. ನೋಡುತ್ತಾ ಹೋದಂತೆಲಾ ನಂಬರ್
ಪ್ಲೇಟಿನ ಮೇಲೆ ಬರೆದ ರಾಜ್ಯಗಳ ಹೆಸರುಗಳು ಕುತೂಹಲ ಕೆರಳಿಸಿದವು. ಗಾರ್ಡನ್ ಸ್ಟೇಟ್, ಎಂಪೈರ್ ಸ್ಟೇಟ್, ಗೋಲ್ಡನ್ ಸ್ಟೇಟ್, ಸಿಲ್ವರ್ ಸ್ಟೇಟ್, --ಕೊಪ್ಪರ್ ಸ್ಟೇಟ್, ಜೆಂ ಸ್ಟೇಟ್, ಕೌಬಾಯ್
ಸ್ಟೇಟ್ ಹೀಗೆ ಹತ್ತಾರು ಸ್ಟೇಟುಗಳ ಹೆಸರು ಹೊತ್ತ ಕಾರುಗಳು ಅಲ್ಲಿದ್ದವು. ಇವು ಯಾವ ದೇಶದಲ್ಲಿನ
ರಾಜ್ಯಗಳಪ್ಪ ಎಂದು ಹುಬ್ಬು ಹಾರಿಸಬೇಡಿ. ಇವೆಲ್ಲ ಯು.ಎಸ್.ಎ.ನಲ್ಲಿನ ರಾಜ್ಯಗಳೇ. ನಮ್ಮೂರಲ್ಲಿ
ಮನುಷ್ಯರಿಗೆ ಅಡ್ಡ ಹೆಸರು ಇರುವಂತೆ ಇಲ್ಲಿ ರಾಜ್ಯಗಳಿಗೆ. ಉದಾಹರಣೆಗೆ ನ್ಯೂ ಜರ್ಸಿ -ಗಾರ್ಡನ್
ಸ್ಟೇಟ್. ಅಲ್ಲಿ ಎಲ್ಲಿ ನೋಡಿದರೂ ಹಸಿರು. ನ್ಯೂಯಾರ್ಕ್- ಎಂಪೈರ್ ಸ್ಟೇಟ್, ಜಗದ ವಾಣಿಜ್ಯ ಸಾಮ್ರಾಜ್ಯ ಅದೇ ತಾನೇ. ಹೀಗೆ ಐವತ್ತು ರಾಜ್ಯಗಳಿಗೂ ಆ ರಾಜ್ಯದ ಹಿರಿಮೆಯನ್ನು ಸಾರುವ ಹೆಸರು ಇವೆ. ಬೆಳಗಿನ ನಡಿಗೆ ಮುಂದೂಡಿ ಕಾರುಗಳ ನಡುವೆ
ಓಡಾಡುತ್ತ ಅವುಗಳ ಮೇಲೆ ಬರೆದಾದ ನುಡಿಗಟ್ಟುಗಳನ್ನೂ ಓದುತ್ತ
ಹೋದಂತೆ. ಕೆಲವು ಕಡೆ ವಿಶೇಷ ವಾಕ್ಯಗಳಿದ್ದವು. `All for country country', ‘Live
free or die`, `Liberty for prosperity'.
ಆಗ ನನಗೆ ಅವು ಏನು ಎಂದು
ತಿಳಿಯಲಿಲ್ಲ. ನಂತರ ಗೊತ್ತಾಯಿತು ಪ್ರತಿಯೊಂದು ರಾಜ್ಯಕ್ಕೂ
ಅದರದೇ ಅದ ಧ್ವಜ, ಗೀತೆ, ವಿಶೇಷ ನಾಮ ಮತ್ತು
ಧ್ಯೇಯ ವಾಕ್ಯಗಳಿವೆ ಎಂದು. ನಮ್ಮಲ್ಲಿ ವಿಧಾನಸೌಧದ ಮೇಲೆ
ಬರೆಸಿದ್ದರಲ್ಲ ಆ ತರಹ. ಅದರೆ
ಇಲ್ಲಿ ಅವು ಕಡ್ಡಾಯವಾಗಿ ಬಳಸಲಾಗುತ್ತಿದೆ. ಇವು ಬರಿ ಇಂಗ್ಲಿಷ್ ನಲ್ಲಿ ಮಾತ್ರ ಇಲ್ಲ.
ಸ್ಪ್ಯಾನಿಶ್, ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಮೂಲ ನಿವಾಸಿ ಇಂಡಿಯನ್ ಭಾಷೆಯಲ್ಲೂ ಇವೆ. ಇದು ವಲಸಿಗರ ದೇಶ. ಅಲ್ಲಿನ ಜನ ಹೆಚ್ಚಾಗಿ ಬಳಸುತಿದ್ದ, ಇಷ್ಟ
ಪಟ್ಟ ಭಾಷೆ ಅಲ್ಲಿದೆ. ನ್ಯೂಯಾರ್ಕ್ ನ ಘೋಷ ವಾಕ್ಯ--`ಎಕ್ಸ್ಸೇಲ್ಸೋರ್` (Excelsior) ಎಂಬ ಲ್ಯಾಟಿನ್ ಪದ. ಅದರ ಅರ್ಥ "Ever
Upwards" `ಸದಾ ಮೇಲ್ಮುಖ' ಎಂದು. ನ್ಯೂಯಾರ್ಕ್ ನ ಗಗನಚುಂಬಿ ಸೌಧಗಳನ್ನೂ ನೋಡಿದಾಗ ಎಷ್ಟು ಸಮರ್ಪಕ ಎನಿಸದಿರದು. ಅಲ್ಲದೇ, ನ್ಯೂಯಾರ್ಕ್ ನಗರಕ್ಕಂತೂ ನೂರಾರು ಅಡ್ಡ ಹೆಸರುಗಳು.
ಕೆಲವು ರಾಜ್ಯಗಳ
ಘೋಷವಾಕ್ಯಗಳಂತೂ ಕಾವ್ಯಮಯ, ಸ್ಪೂರ್ತಿದಾಯಕ.
"(Manly deeds, womanly words," "I
lead," "Eureka", "It grows as it goes'",
"All for our country", "Live free or die" -ನುಡಿಗಟ್ಟುಗಳು
ನಿಜಕ್ಕೂ ಚೇತೋಹಾರಿ. ಅಲ್ಲಿನ ಜನರ ಮನೋಭಾವದ ಪ್ರತಿಬಿಂಬ.
ಈ ಅಡ್ಡ ಹೆಸರಿನ ಬಳಕೆ ಬರಿ
ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ನಗರಕ್ಕೂ ಒಂದೋ ಎರಡೋ ನಿಕ್ ನೇಮ್. ಅವು ತುಂಬಾ
ವಿಚಿತ್ರ ಎನಿಸಿಯಾವು. Biggest little town, Town too tough to die, City too
busy to hate, Music city, Magic City, Salt City, Mile Long City, City of
Angles, Apple city, Spanish Capital of the world, ಹನುಮನ ಬಾಲದಂತೆ
ಬೆಳೆಯುತ್ತದೆ ಪಟ್ಟಿ. ಈ ಹೆಸರಿನ ಹಿಂದೆ ಹುಡುಕುತ್ತ ಹೊರಟರೆ ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ ವಿವರಗಳ ಸುರುಳಿ ಬಿಚ್ಚಿ
ಕೊಳ್ಳುತ್ತದೆ.
ಈ ನಿಕ್ ನೇಮ್ ಗಳ ದಾಳಿಯಿಂದ
ಹೆಸರಾಂತ ವ್ಯಕ್ತಿಗಳು ಹೊರತಾಗಿಲ್ಲ. ಇವು ದೇಶದ ಪ್ರಥಮ ಪ್ರಜೆಯನ್ನು ಬಿಟ್ಟಿಲ್ಲ. ಇಂದಿನ ಅಧ್ಯಕ್ಷ ಬರಾಕ್ ಒಬಾಮ, ನೋ ಡ್ರಾಮಾ ಒಬಾಮ, ಹಿಂದಿನ ಅಧ್ಯಕ್ಷ ಬುಷ್- ದುಬ್ಯಾ, ಕ್ಲಿಂಟನ್- ಕಂ ಬ್ಯಾಕ್ ಕಿಡ್, ಗೆರಾಲ್ಡ್ ಫೋರ್ಡ್- ಆಕ್ಸಿಡೆಂಟ್ ಪ್ರೆಸಿಡೆಂಟ್, ಜಿಮ್ಮಿ
ಕಾರ್ಟರ್- ಪೀ ನಟ್ ಪ್ರೆಸಿಡೆಂಟ್, ಜಾರ್ಜ್ ವಾಶಿಂಗ್ ಟನ್- ಫಾದರ್ ಆಫ್ ಹಿಜ್ ಕಂಟ್ರಿ, ಥೋಮಸ್ ಜಫಾರ್ಸನ್- ಪೆನ್ ಆಫ್ ರೆವುಲುಶನ್, ಅಬ್ರಹಂ ಲಿಂಕನ್-
ಲಿಬರೆಟರ್; ಆನೆಸ್ಟ್ ಅಬೆ, ಜೇಮ್ಸ್
ಬುಕನಿನ್- ಡು ನಥಿಂಗ್
ಪ್ರೆಸಿಡೆಂಟ್, ಕೆಲವು ಸಲ ವ್ಯಂಗ್ಯವಾಗಿ
ಬಹಳ ಸಲ ನೈಜವಾಗಿ ಅವರ ವ್ಯಕ್ತಿತ್ವ ಸಾಧನೆ ಸಾದರಪಡಿಸುತ್ತವೆ.
ಆಟಗಾರರ ನಿಕ್ ನೇಮ್ ಬಹು ಮಜಾ
ನೀಡುತ್ತವೆ. ಗಾಲ್ಫ್
ಆಟಗಾರ ವುಡ್ಸ್ -ಟೈಗರ್, ಟೆನ್ನಿಸ್ ಪಟು, ಕೆನ್ ರೋಸ್ವೆಲ್- ಮಸಲ್, ಅಂಡ್ರ್ಯೂ ಅಗಸ್ಸೇ -ಪಿಸ್ತುಲ್ ಪಿಟೇ, ಈ ರೀತಿ. ನಮ್ಮಲ್ಲೂ ಇದ್ದಾರಲ್ಲ ಬಂಗಾಳದ ಹುಲಿ, ನಜಮ್ ಗಡದ ನವಾಬ್,
ಹರ್ಯಾಣ ಹರ್ರಿಕೆನ್, ಮಾಸ್ಟರ್ ಬ್ಲಾಸ್ಟರ್, ಲಿಟಲ್ ಮಾಸ್ಟರ್, ಮೂಗುತಿ ಸುಂದರಿ.
ಅಮೇರಿಕಾದ ಕಾರಿನ ನಂಬರ್
ಪ್ಲೇಟುಗಳು ಒಡೆಯನ ವೈಯುಕ್ತಿಕ ವರದ
ಜೊತೆ ಜೊತೆ ಆ ಪ್ರದೇಶದ ಮಾಹಿತಿ ನೀಡುತ್ತದೆ. ನಮ್ಮಲ್ಲೂ ಆಟೋಗಳು
ಸಂಸ್ಕೃತಿ, ಜ್ಞಾನ ಪ್ರಸಾರದ ಸಂಚಾರಿ ಕೇಂದ್ರಗಳಂತೆ ಕೆಲಸ
ಮಾಡುತ್ತವೆಯಲ್ಲವೇ. -ದುರ್ಗದ ಹುಲಿ, ಮಂಡ್ಯದ
ಗಂಡು, ಬಿಜಾಪುರ ಬಲಭೀಮ, ಆಟೋ ರಾಜ, ತಾಯಿ ಪ್ರೀತಿ, ತಂದೆ ಆಶೀರ್ವಾದ ಇತ್ಯಾದಿ ಇತ್ಯಾದಿ....
Subscribe to:
Posts (Atom)
