Thursday, January 8, 2015

ಕುಂಭಕೋಣಂ ಡಿಗ್ರೀ ಕಾಫಿ





                                     ಕುಂಭಕೋಣಂ ಡಿಗ್ರಿ ಕಾಫೀ

ನಮ್ಮ ನಾಡಿನಲ್ಲಿ ವೈವಿದ್ಯತೆಯಲ್ಲಿ ಏಕತೆ ಇದೆ.ಅದೂ ವಿಶೇಷವಾಗಿ ಭಾಷೆ, ಜಾತಿ, ಮತ, ಜನಾಂಗ, ಉಡುಗೆ  ತೊಡುಗೆಗಳಿಗೆ ಪ್ರಾದೇಶಿಕ ಸೊಗಡು ಇದೆ.  ವಿಶೇವಾಗಿ ಆಹಾರ ಪದಾರ್ಥಗಳಂತೂ ಆ ಪ್ರದೇಶದ ಹೆಸರಿನಲ್ಲಿ ಜನಪ್ರಿಯವಾಗಿರುವವು.ದಾವಣಗೆರೆ ಬೆಣ್ಣೆ ದೋಸೆ, ಕೊಟ್ಟೂರು ಮಿರ್ಚಿ, ಗೋಕಾಕದ ಕರದಂಟು, ಧಾರವಾಡದ ಪೇಢೆ, ಬೆಳಗಾಂನ ಕುಂದ, ಮದ್ದೂರಿನ ವಡೆ, ಮೈಸೂರು ಪಾಕು ಮಂಗಳೂರು ಬೋಂಡ , , ಹೀಗೆ ಸಾಲಿಗೆ ಸಾಲು ಹೆಸರುಗಳು ಇವೆ.  ತಮಿಳುನಾಡಿನ ಪ್ರವಾಸಕ್ಕೆ ಹೋದಾಗ ಒಂದು ಇದೇ ರೀತಿಯ  ವೈಶಿಷ್ಟ್ಯ ಗಮನಕ್ಕೆ ಬಂದಿತು. ಕಂಚಿಪುರಂ ಇಡ್ಲಿ, ತಿರುನಲ್ವೇಲಿಹಲ್ವಾ,ಕಡಂಬೂರು ಪೋಳಿ ತಂಜಾವೂರು ಅಡೈ ಇತ್ಯಾದಿ ಆದರೆ , ಅದು ಬರಿ ಜನಪ್ರಿಯ ಮಾತ್ರವಲ್ಲ ಬ್ರಾಂಡ್‌ ಆಗಿ ಅದರ ಹೆಸರಲ್ಲಿಕೋಟ್ಯಾಂತರ ರೂಪಾಯಿ ವ್ಯವಹಾರ, ವೈವಾಟಿಗೆ ಮೂಲವಾಗಿರುವು ಮಾತ್ರ  ಅಚ್ಚರಿ ತಂದಿತು. ಅದೇ ಕುಂಬಕೋಣಂ ಡಿಗ್ರೀ ಕಾಫಿ.
ಕುಂಭ ಕೋಣಂ ಇತಿಹಾಸ ಕಾಲದಿಂದಲೂ ವಿದ್ವತ್‌ ಕೇಂದ್ರವೆಂದು ಹೆಸರಾಗಿದೆ. ಅದರಲ್ಲೂ ಇದು ಗಣಿತಜ್ಞ ರಾಮಾನುಜಂ ಜನಿಸಿದ ಊರು. ಜೊತೆಗ ಟೆಂಪಲ್‌ ಸಿಟಿ ಎಂಬ ಬಿರದೂ ಇದೆ.ಇತ್ತೀಚೆಗೆ ಕುಂಭಕೋಣಂ ಮಾಡಿದ ಎಂದರೆ ನಯವಂಚಕ ಎಂದೂ ರೂಢಿಗತವಾಗಿದೆ..  ಅದು ಊರ ವಿಷಯವಾದರೆ  ತಮಿಳುನಾಡಿನ ಹೈವೇಯಲ್ಲಿ ಎಲ್ಲಿಯೇ ಹೋದರೂ ರಾರಾಜಿವ ಒಂದು ಹೆಸರೆಂದರೆ ಕುಂಭಕೋಣಂ ಡಿಗ್ರಿ ಕಾಫಿ. ಸರಿ ಸುಮಾರು ಎಲ್ಲ ನಗರಗಳಲ್ಲೂ ಈ ಹೆಸರು ಹೊತ್ತ ಹೋಟೆಲ್‌ಗಳು ಕಣ್ಣಿಗೆ ಬೀಳುವುದು ಸಾಮಾನ್ಯ.  ಹೈವೇನಲ್ಲಂತೂ  ( ಈಸ್ಟ ಕೋಸ್ಟ್‌ ರೋಡ್‌ ) ಹತ್ತಿಪ್ಪತ್ತು ಮೈಲಿಗೊಂದರಂತೆ ಈ ಹೆಸರಿನ ಹೋಟೆಲ್‌ಗಳ ಮುಂದೆ ಕಾರುಗಳ ಸಂದಣಿ ಸರ್ವೆ  ಸಾಮಾನ್ಯ.
ಒಂದೆರಡು ಹೋಟೆಲ್‌ಗಳಿಗೆ ಭೇಟಿ ನೀಡಿದಾಗ ತುಸು ವಿವರ ದೊರೆಯಿತು. ಹೋಟೆಲ್‌  ಕಟ್ಟಡಗಳು ಅಷ್ಟೇನೂ ಭವ್ಯವಾಗಿರುವುದಿಲ್ಲ ಜೊತೆಗೆ ತಿಂಡಿಗಿಂತ ಅಲ್ಲಿ ಕಾಫಿಯದೇ ಕಾರುಬಾರು.   ಒಂದು ರೀತಿಯಲ್ಲಿ ಈಗ ಪ್ರಚಲಿತವಿರುವ ದರ್ಶಿನಿಗಳಂತೆ ಹೋದೊಡನೆ ಕಣ್ಣೆದುರಿಗೆ ಕಾಫಿ ತಯಾರಿಸುವ ಫೀಲ್ಟರ್‌.  ಆಸನ ವ್ಯವಸ್ಥೆಗೂ ಒಳಾಂಗಣಕ್ಕಿಂತಲೂ ಹೊರಾಂಣವೇ ಎದ್ದು ಕಾಣುವುದು
ಇವೆಲ್ಲ ಕ್ಕಿಂತ ಎದ್ದು ಕಾಣುವುದು ದೂರದಿಂದಲೇ  ಗೋಚರವಾಗುವ ಬೋರ್ಢ.ಅಲ್ಲಿ ಹೋದಾಗ ತಕ್ಷಣವೇ ಕಾಫಿ ಸಿಗದು . ಐದು ಹತ್ತು ನಿಮಿಷ ಕಾಯಬೇಕಾಗುವುದು. ನಮ್ಮೆದುರಿಗೆ ಸಿದ್ದವಾಗುವ ಹಬೆಯಾಡುವ ಫಿಲ್ಟರ್‌ಕಾಫಿಯನ್ನು ಹಿತ್ತಾಳೆ ಲೋಟ ದಲ್ಲಿ ಹಾಕಿ ಬಟ್ಟಲಿನಲ್ಲಿ ಇಟ್ಟು ಕೊಡುವರು.ಆಧುನಿಕ ಕಪ್ಪು ಬಸಿ, ಗಾಜಿನ ಲೋಟಗಳಿಗೆ ಅಲ್ಲಿ ಪ್ರವೇಶವಿಲ್ಲ.ಇದು ಒಂದು ರೀತಿಯಲ್ಲಿ ಜ್ಯೂಸ್‌ ಸೆಂಟರ್‌ ಇದ್ದಂತೆ. ಅಲ್ಲಾದರೆ ಹಲವು ಹಣ್ಣಿನ ರಸ ಸಿಗಬಹುದು ಆದರೆಅಲ್ಲಿ ದೊರೆಯುವುದು ಒಂದೇ ಒಂದು ಐಟಂ. ಅದೇ  ಫಿಲ್ಟರ್‌ಕಾಫಿ..
ಇರ ಪ್ರಭಾವ ಎಷ್ಟಿದೆಯೆಂದರೆ ಸಂಪ್ರದಾಯಸ್ಥರಾದ ಪಂಚೆಶಾಲು ತ್ರಿಪುಂಡ ಧಾರಿಗಳಾದ  ಪುರುಷರೂ ಮತ್ತು, ಕಾಂಜೀವರಂ ರೇಷ್ಮೆ ಉಟ್ಟು ಹಣೆಯಲ್ಲಿ ಉದ್ದನೆಯ ಕುಂಕುಮ ತಲೆಯಲ್ಲಿ ಹೂ ಮುಡಿದ ಮಹಿಳೆಯರು ಎಗ್ಗಿಲ್ಲದೆ ಕಾಫಿ ಕುಡಿಯುವುದು ಕಂಡುಬರುವುದು. ಇನ್ನೊಂದು ಅಚ್ಚರಿ ಎಂದರೆ ಅಷ್ಟು ಬಿಸಿಯಾದ ಕಾಫಿಯನ್ನೂ ಅವರು ಹಿತ್ತಾಳೆಯ ಲೋಟದ ಅಂಚನ್ನು ತುಟಿಗೆ ತಗುಲಿಸದೆ ಎತ್ತಿ ಬಾಯಿಗೆ ಸುರಿದುಕೊಳ್ಳುವ ವಿಧಾನ.
ಈ ಕಾಫಿಯ ಹೆಸರಿನ ಮೂಲ ಬೆದಕಿದಾಗ ವಿಭಿನ್ನ ವಿವರಣೆಗಳು ದೊರೆತವು. ಕುಂಬಕೋಣಂನಲ್ಲಿ  ವಿಶೇಷವಾಗಿ ತಯಾರಿಸಿದ ಫಿಲ್ಟರ್‌ಕಾಫಿ ಎಂಬ ಪ್ರಥಮ  ಮಾಹಿತಿ ದೊರೆಯಿತು. ಅಲ್ಲಿ ಕಾಫಿ ಪುಡಿಗಿಂತ ಹಾಲಿಗೆ ಪ್ರಥಮ ಆದ್ಯತೆ. ವಿಶೇಷವಾಗಿ ಅವರು ಬಳಸುವುದು  ಹಸುವಿನ ತಾಜಾಹಾಲು. ಅದಕ್ಕೆ ನೀರು ಬೆರಸುವ ಹಾಗಿಲ್ಲ. ಹಾಲಿನ ಪರಿಶುದ್ಧತೆಯನ್ನು ಅಳೆಯಲು ಲ್ಯಾಕ್ಟೋ ಮೀಟರ್‌  ( ಡಿಗ್ರಿ) ಬಳಸಿ ಶುದ್ಧ  ಹಾಲು ಗುರುತಿಸಿ  ಅದರಿಂದ ಕಾಫಿ ಮಾಡುವರು.ಅದಕ್ಕೇ  ಆ ಹೆಸರು ಬಂದಿದೆ ಎಂಬ ವಾದ ವೂಇದೆ. ಇನ್ನೊಂದು     ವಿವರಣೆ ಎಂದರೆಫಿಲ್ಟರ್‌ನಲ್ಲಿ ಹಾಕುವ ಪುಡಿಯಯಿಂದ ಮೊದಲು ಇಳಿದ ಡಿಕಾಷನ್‌ ಅನ್ನು ಫಸ್ಟ ಡಿಗ್ರಿ  ಕಾಫೀ ಎಂನ್ನುವರು.ಅದನ್ನು ಹಣವಂತ ರಸಿಕರು ಮಾತ್ರ ಕುಡಿಯುವರು. ಉಳಿದವರು ಎರಡನೆಯ ಸಲ ಇಳಿದ ಡಿಕಾಷನ್‌ ಮತ್ತು  ಬಡವರು ಮೂರನೆ ಸಲ ಇಳಿದ ಕಾಫಿಯನ್ನು ಬಳಸುವರು. ಈ ರೀತಿ ಉತ್ತಮ ಗುಣ ಮಟ್ಟದ ಡಿಕಾಷನ್‌ ನಿಂದ ತಯಾರಾದುದನ್ನೇ ಫಸ್ಟ್‌ ಡಿಗ್ರೀ ಕಾಫೀ.ಎಂದು ಗುರುತಿಸುವರು. ಕಾಫೀ ಪುಡಿ ಮಾಡಲು . ಚಿಕ್ಕಮಗಳೂರಿನಿಂದ ತರಿಸಿದ ಕಾಫಿ ಬೀಜ ೭೫% ಮತ್ತು ಚಿಕೋರಿ ೨೫ % ಬೆರಸಿದ  ತಾಜಾಪುಡಿ ಮಾತ್ರ ಬಳಸುವರು.ಚಿಕೋರಿಯನ್ನು ಬಳಸುವುದರಿಂದ ತಮಿಳಿನ ಉಚ್ಚಾರಣೆಯಲ್ಲಿ ಚಿಕೋರಿಯು ಚಿಗೋರಿಯಾಗಿ ನಂತರ ಚಿಗ್ರಿ  ಕೊನೆಗೆ ಸಾಮಾನ್ಯರ ಬಾಯಲ್ಲಿ  ಡಿಗ್ರಿ ಆದುದರಿಂದ ಈ ಹೆಸರು.ಫಸ್ಟ ಡಿಗ್ರಿ  ಕಾಫಿ ಎಂದಾಗಿದೆ ಅನ್ನುವ ವಿವರಣೆಯೂ ಇದೆ.
 ಇದರ ತಯಾರಿಗೆ ಹತ್ತಾಳೆಯ  ಫಿಲ್ಟರ್‌ ಅನ್ನು ಬಳಸಲೇ ಬೇಕು.ಡಿಕಾಷನ್‌ ಅನ್ನು ಹಾಲಿಗೆ ಹಾಕುವುದಿಲ್ಲ. ಹಾಲನ್ನೇ ಡಿಕಾಷನ್‌ಗೆ ಹಾಕ ಬೇಕು.ಹಸುವಿನ ಶುದ್ಧ ಹಾಲನ್ನು ಮಾತ್ರ ಹಾಕುವರು. ನೀರು ಬೆರಸುವ ಹಾಗಿಲ್ಲ . ಡಿಕಾಷನ್‌ ಅನ್ನು ಮತ್ತೆ ಮತ್ತೆ ಕಾಯಿಸಿ ಬಳಸುವಂತಿಲ್ಲ. ಹಾಗೆ ಮಾಡಿದರೆ ಅದರ ಸ್ವಾದ ಕೆಡುವುದು. ಗ್ರಾಹಕರಿಗೆ ಕಾಫಿ  ಕೊಡುವುದಕ್ಕಿಂತ ಮುಂಚೆ ಹಿತ್ತಾಳೆ ಲೋಟ ಮತ್ತು ಬಟ್ಟಲುಗಳಿಂದ ಎರಡುಸಾರಿ ಎತ್ತರದಿಂದ ಕಾಫಿ ಸುರಿಯುವರು. ಅದನ್ನು ನೋಡಿದರೆ ಕಾಫಿಯನ್ನು ಮೀಟರ್‌ಲೆಕ್ಕದಲ್ಲಿ ಕೊಡುವರೇನೋ ಎನ್ನಿಸುವುದು. ಅದರಿಂದ ಲೋಟದಲ್ಲಿನ ಕಾಫಿಯ ಮೇಲ್‌ಮೈನಲ್ಲಿ ಹಾಲಿನ ನೊರೆ ಬರುವುದು.ಜೊತೆಗೆ ಕಾಫಿ ಪುಡಿಯನ್ನುನಿರ್ವಾತ ಬಾಟಲಿಯಲ್ಲಿ ಸಂಗ್ರಹಿಸುವರು. ಅನೇಕರು ಹತ್ತಿರದಲ್ಲಿಯೇ ಹಸು ಸಾಕಣೆ ಮಾಡಿರುವವರ ಜೊತೆ  ಒಪ್ಪಂದ ಮಾಡಿಕೊಂಡು ದಿನಕ್ಕೆ ಮೂರು ಬಾರಿ ಆಗಲೇ ಹಿಂಡಿದ ಹಾಲು ಪೂರೈಕೆ  ಆಗುವಂತೆ ವ್ಯವಸ್ಥೆ ಮಾಡಿ ಕೊಂಡಿರುವರು. ಯಾವುದೇ ಕಾರಣಕ್ಕೂ ಪಾಕೆಟ್‌ಹಾಲು ಬಳಸುವುದಿಲ್ಲ.. ನಕಲಿ ಹೋಟೆಲ್‌ಗಳೂ ಇವೆ. ಅದಕ್ಕೇ ತಮ್ಮದೇ ಆದ  ಹೋಟೆಲ್‌ ಚೈನ್‌ ತೆರೆದಿರುವರು.ಅನೇಕ ನಿಬಂದನೆಗಳನ್ನು ಹಾಕಿ ಲಕ್ಷಾಂತರ ಠೇವಣಿ ಪಡೆದು ಮೂಲಭೂತ ಸೌಕರ್ಯ ಒದಗಿಸಿ, ಗುಣ ಮಟ್ಟ ಪರೀಕ್ಷಿಸುವ ವ್ಯವಸ್ಥೆಮಾಡಿ ಪರಿಶುದ್ಧತೆ ಕಾಪಾಡುವ ಪ್ರಯತ್ನ ನಡೆದಿದೆ. ಅಂತೂ ತಮಿಳುನಾಡಿನ ಪ್ರವಾಸಿಗರ ಬಾಯಿಗೆ ಘಮಘಮ ಬಿಸಿ ಕಾಫಿ ಕೊಡುವ  ಈ ಕುಂಭಕೋಣಂ  ಡಿಗ್ರಿ ಕಾಫಿಯ ಉದ್ಧೇಶ ತಕ್ಕ ಮಟ್ಟಿಗೆ ಸಫಲವಾಗಿದೆ






No comments:

Post a Comment