ಸನಾತನ ವೃಕ್ಷದ ವಿಚಾರವಾದಿ ಫಲ ಪ್ರೊ. ಜಿ. ರಾಮಕೃಷ್ಣ
‘ಕೀರ್ತಿ ಶನಿಯೇ
ತೊಲಗತ್ತ’, ಎಂದ ರಾಷ್ಟ್ರಕವಿ ಕುವೆಂಪು ಅವರ ನುಡಿಯನ್ನು ಅಕ್ಷರಶಃ ನಡೆಯಲ್ಲಿ ತಂದ ವಿರಳಾತಿವಿರಳ
ವ್ಯಕ್ತಿ. ಸನಾತನ ಕುಟುಂಬದಲ್ಲಿ ಜನಿಸಿದರೂ ಗೊಡ್ಡುಸಂಪ್ರದಾಯದ ವಿರುದ್ದ ಸಿಡಿದೆದ್ದ ವಿಚಾರವಾದಿ. ಧರ್ಮದ ಹೆಸರಿನಲ್ಲಿ, ವ್ಯವಸ್ಥೆಯ ಅಡಿಯಲ್ಲಿ ನಡೆಯುವ
ಶೋಷಣೆಯ ವಿರುದ್ಧ ಹೋರಾಟ ನಡೆಸಿದ ಛಲಗಾರ. ಹುಡುಕಿ ಬಂದ ಹಲವು ಪ್ರಶಸ್ತಿಗಳ ಪ್ರಲೋಭನೆಗೆ ಒಳಗಾಗದೆ
ಭ್ರಷ್ಟ ವ್ಯವಸ್ಥೆಯನ್ನು ಪ್ರತಿಭಟಿಸಿದ ಜೀವನ್ಮುಖಿ.
ವಿಚಾರ ಮತ್ತು ಸಾಹಿತ್ಯಕ್ಕೆ ಬದುಕು ಮೀಸಲಿಟ್ಟ ಪ್ರಗತಿಪರ
ಚಿಂತಕ. ರಾಜಕೀಯದ ಸೋಂಕಿಲ್ಲದ ಮತ್ತು ಮನಸ್ಸಾಕ್ಷಿಗೆ
ವಿರೋಧವಾಗದ ಸಾಹಿತ್ಯ ಸಂಘಟನೆಗಳ ಗೌರವವನ್ನುಮಾತ್ರ ಅತಿ ಸಂಕೋಚದಿಂದ ಸ್ವೀಕರಿಸಿದ ಮಾನವತಾವಾದಿ. ಬಿ.
ಎಂ. ಶ್ರೀ. ಸ್ಮಾರಕ ಪ್ರತಿಷ್ಠಾನವು ತನ್ನ ಮೊಟ್ಟ ಮೊದಲ ಶ್ರೀಮತಿ ಸಾವಿತ್ರಮ್ಮ – ಪ್ರೊ. ಎಂ.ವಿ. ಸೀ. ಸಾಹಿತ್ಯ ಪ್ರಶಸ್ತಿಯನ್ನು.ಸನಾತನ ವೃಕ್ಷದಲ್ಲಿ ಬಿಟ್ಟ
ವಿಚಾರವಾದ ಮತ್ತು ಮಾನವತೆಯ ಪ್ರತೀಕವಾದ ಫ ಪ್ರೊ. ಜಿ. ರಾಮಕೃಷ್ಣ ಅವರಿಗೆ ನೀಡಿದೆ.
ಇವರ ಮೂಲನೆಲೆ ಮಧುಗಿರಿ ತಾಲೂಕಿನ
ಗಂಪಲಹಳ್ಳಿಯಾದರೂ ಇವರು ಜನಿಸಿದ್ದು ಬೆಳೆದದ್ದು ಮಾಗಡಿ
ತಾಲೂಕಿನ ಕೆಂಪಸಾಗರದಲ್ಲಿ ಜನನ ೧೭ ಜೂನ್ ೧೯೩೯ರಲ್ಲಾಯಿತು. ಅವರ ತಂದೆ ಸುಬ್ರಮಣ್ಯಂ ಪ್ರಾಥಮಿಕ
ಶಾಲಾಶಿಕ್ಷಕರು- ತಾಯಿ ನರಸಮ್ಮ.. ಅವರದು ಸಂಪ್ರದಾಯಸ್ಥ ಮುಲುಕುನಾಡು ಪಂಗಡದ ಬ್ರಾಹ್ಮಣ ಕುಟುಂಬ.
ಬಾಲ್ಯದಲ್ಲೇ ಸಂಸ್ಕೃತ ಅಧ್ಯಯನಕ್ಕೆ ಬುನಾದಿ.
ಶಾಲಾ ಶಿಕ್ಷಣ ಮಾಗಡಿಯಲ್ಲಿ. ಅಲ್ಲಿಗೆ ನಡೆದೇ ಹೋಗುತಿದ್ದರು ಶಾಲೆ ಬಿಟ್ಟೊಡನೆ ಜತೆಯವರೊಂದಿಗೆ
ಹೊಲ ಗದ್ದೆಗಳಲ್ಲಿ ದನ ಕುರಿ ಮೇಯಿಸುವ ಗೆಳೆಯರೊಡನೆ ಒಡನಾಟ. ಅಲ್ಲಿಯೇ ಆಯಿತು ಕೆಲವು ಗುರುಗಳಿಂದ
ಗಾಂಧೀಜಿ, ಸುಭಾಶ್ ಚಂದ್ರ ಬೋಸ್, ಲೆನಿನ್ ಮಾರ್ಕ್ಸ ಹೆಸರಿನ ಪರಿಚಯ. ಅಸ್ಪೃಶ್ಯತೆಯ ಅಮಾನವಿತೆಯ ಅರಿವು ಶಾಲಾ ಅವಧಿಯಲ್ಲಿಯೇ ಆಯಿತು. ನಿಷ್ಠ ಶಿಕ್ಷಕರೊಬ್ಬರು ಈ ಕಾರಣದಿಂದ ಹೋಟೆಲಿನಲ್ಲಿ
ತಿರಸ್ಕಾರಕ್ಕೆ ಒಳಗಾದುದು ಮನತಟ್ಟಿತು. ತಮ್ಮ ಗ್ರಾಮದ ಬಡ ಮಹಿಳೆಯೊಬ್ಬಳನ್ನು ಅವಳ ಗಂಡನ ಎದುರೇ ಸಾಮಾಜದ
ಪಟ್ಟಭದ್ರ ಹಿತಾಸಕ್ತಿಗಳು ಶೋಣೆಗೆ, ದೂಷಣೆಗೆ
ಗುರಿಮಾಡಿದ ಅವರ ಬಾಲ್ಯದ ನೆನಪು ವರ್ಗಸಂಘರ್ಷದ ಪರ ಹೋರಾಟದ ಬೀಜ ಬಿತ್ತಿತು. ಇಂಟರ್ ಮಿಡಿಯಟ್ ಶಿಕ್ಷಣ ತುಮುಕೂರಿನಲ್ಲಿ. ಅಲ್ಲಿ
ಭಿಕ್ಷಾನ್ನವೇ ಆಸರೆ. ನಂತರ ಪದವಿಗೆ ಮೈಸೂರಿಗೆ ಬಂದರು. ಅಲ್ಲಿ ತಾತಯ್ಯನವರ ಅನಾಥಾಲಯದಲ್ಲಿ ವಾಸ
ಮತ್ತು ವಾರಾನ್ನದ ಊಟ. ಸಂಸ್ಕೃತದಲ್ಲಿ ಬಿ.ಎ ಆನರ್ಸ ವೇದ, ತತ್ವ ಶಾಸ್ತ್ರಗಳ ಕಲಿಕೆ. ಗೆಳೆಯರ ಗುಂಪಿನಲ್ಲಿ ತನ್ನ ನೇರ ನಡೆ, ದಿಟ್ಟ ನುಡಿ, ಪ್ರತಿಭಟನೆಯ
ಗುಣದಿಂದ ಹೆಸರುವಾಸಿ. ಸಾಹಿತ್ಯ ಚಟುವಟಿಕೆಗಳಲ್ಲಿ ಮುಂದು. ಎಲ್‌ಎಸ್ ಬೈರಪ್ಪ, ಸಿ ಎನ್.ರಾಮಚಂದ್ರನ್
ಸಹಾ ಇವರ ಹಾಸ್ಟೆಲ್‌ವಾಸಿಗಳು. ಇವರ ಗೆಳೆಯರ ಬಳಗ ದೊಡ್ಡದು. ಅವರೊಡನೆ ಓಡಾಟ ಪುಸ್ತಕ ವಿದ್ಯೆಯಲ್ಲಿ
ಆಸಕ್ತಿ ಅಷ್ಟಕಷ್ಟೆ. ಸಿನೆಮಾ, ನಾಟಕ, ಓಡಾಟ
ಮತ್ತು ಭಾಷಣದಲ್ಲಿ ಆಸಕ್ತಿ. ಸಂಸ್ಕೃತದಲ್ಲಿ ಎಂ. ಎ. ಮಾಡಿದರು ಮತ್ತು ಪೂನಾ ವಿಶ್ವ
ವಿದ್ಯಾಲಯದಿಂದ ಎಕ್ಸಟರ್ನಲ್ ಇಂಗ್ಲಿಷ್ ಎಂ ಎ.
ಪದವಿ ಪಡೆದರು.
![]() |
ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ- ಕುಳಿತವರಲ್ಲಿ ಎರಡನೆಯವರು |
ಎಳವೆಯಲ್ಲಿಯೇ ಎ.ಜಿ ಕಚೇರಿಯಲ್ಲಿ ಪ್ರಾರಂಭವಾಯಿತು ಅವರ
ಉದ್ಯೋಗ ಪರ್ವ. ನಂತರ ಕೈವಲ್ಯಧಾಮದಲ್ಲಿ ಮೂರುವರ್ಷ ವಾಸ. ಲೋನಾವಾಲದಲ್ಲಿನ ಕೈವಲ್ಯಧಾಮದಲ್ಲಿ
ಸಂಶೋಧನಾ ಸಹಾಯಕರಾದರು. ಯೋಗ ವಿಶ್ವಕೋಶದ ಕೆಲಸ.ಅದಕ್ಕಾಗಿ ಪತಂಜಲಿಭಾಷ್ಯ, ವಾಚಸ್ಪತಿಭಾಷ್ಯ
ಮತ್ತು ಅನೇಕ ಸಂಸ್ಕೃತ ಗ್ರಂಥಗಳನ್ನು ಓದ
ಬೇಕಿತ್ತು.ಅವರ ಅದ್ಯನ ಅಷ್ಟಕ್ಕೇ ಸೀಮಿತವಾಗಲಿಲ್ಲ. ಅಲ್ಲಿರುವ ಗ್ರಂಥಾಲಯದ ಉತ್ತಮ ಕೃತಿಗಳನ್ನು
ಓದಿದರು.ಅವರಧ್ಯನದ ವ್ಯಾಪ್ತಿ ವಿಶಾಲವಾಯಿತು. ಇತರ ಆಸಕ್ತ ವಿಷಯಗಳ ಅಧ್ಯಯನ ಮೂರುವರ್ಷಗಳ ಕಾಲ
ಸಾಗಿತು. ಜೊತೆಗೆ ಯೋಗದಲ್ಲಿ ಡಿಪ್ಲೊಮೋ ಕೂಡಾ ಆಯಿತು. ಅಲ್ಲಿಯೇ ಕುವಲಾಯನಂದರ ಸಂಪರ್ಕ ಬಂದಿತು ಧ್ಯಾನಕ್ಕೆ
ಭಾರತದ ಭೂಪಟ ಆಯ್ದುಕಂಡಿದ್ದ ಅವರ ಮನೋವೃತ್ತಿಯ
ಪ್ರತೀಕ.
. ಅಲ್ಲಿಂದ ಮಹಾರಾಷ್ಟ್ರ ರಾಜ್ಯದ ಹಿಂದುಳಿದ
ಪ್ರದೇಶದಲ್ಲಿರುವ ಮಹಾಡ್ ಅಂಬೇಡ್ಕರ್ ಕಾಲೇಜಿನಲ್ಲಿ
ಉಪನ್ಯಾಸಕ ಹುದ್ದೆ ದೊರೆಯಿತು.ಅಲ್ಲಿ ಇಂಗ್ಲಿಷ್ ಜೊತೆ ಪಾಲಿ ಪಾಠ ಮಾಡಬೇಕಿತ್ತು. ಅಲ್ಲಿ
ದಲಿತ ವಿದ್ಯಾರ್ಥಿಗಳೇ ಹೆಚ್ಚು.ದಮನಿತರ ಜೀವನದ ಒಳ ನೋಟ ದೊರೆತಿದ್ದುದು ಅಲ್ಲಿಯೇ.ಆಗಲೇ
ಮರಾಠಿಯನ್ನು ಕಲಿತರು. ಅಲ್ಲಿಂದ ಬೆಂಗಳೂರಿನ
ನ್ಯಾಷನಲ್ ಕಾಲೇಜಿಲ್ಲಿ ಕೆಲಸಕ್ಕೆ ಸೇರಿದರು. ಮೂರೇ ತಿಂಗಳಲ್ಲಿ ಬ್ರಿಟನ್‌ಗೆ ಹೋದರು. ಅಲ್ಲಿ ವೇಲ್ಸ ವಿಶ್ವ ವಿದ್ಯಾಲಯದಲ್ಲಿ. ಕಮ್ಯುನಿಜಂ
ಚಟುವಟಿಕೆಗಳ ಸಂಪರ್ಕಕ್ಕೆ ಬಂದರು . ಸ್ವಅಧ್ಯಯನ ಮತ್ತು ಉಪನ್ಯಾಸಗಳಿಂದ ಅವರ ಸಭೆಗಳಿಗೂ ಹೋಗಿ
ಮಾರ್ಕ್ಸವಾದದ ತಿರುಳನ್ನು ಅರಿತರು.
ಸಂಸ್ಕೃತ ಸಾಹಿತ್ಯ ವೇದ , ವೇದಾಂತ ಶಾಸ್ತ್ರ ಓದಿದ
ಅವರು. ಪ್ರೊ. ರಾಮಚಂದ್ರರಾವ್‌ವರ ಮಾರ್ಗದರ್ಶನದಲ್ಲಿ “ ಋಗ್ವೇದದಲ್ಲಿ ಋತದ ಕಲ್ಪನೆ” ವಿಷಯ ಕುರಿತು
ಪಿ.ಎಚ್ ಡಿ ಮಾಡಿದರು ಅವರ ಬಾಳ ಗುರಿ ಸರಳ ಜೀವನ ಮತ್ತು ಉದಾತ್ತ ವಿಚಾರದ ಸಂಗಮವಾಗಿತ್ತು.ಜ್ಞಾನ
ಯಾನದಲ್ಲಿ ತೊಡಗಿದ ಅವರು ಸಂಸಾರ ಬಂಧನಕ್ಕೆ ಸಿಲುಕಲಿಲ್ಲ. ತಮ್ಮ ವಿರಾಮದ ಅವಧಿಯನ್ನೆಲ್ಲ
ಸಾಮಾಜಿಕ ಜಾಗೃತಿ ಮತ್ತು ಚಳುವಳಿಗೆ ಮೀಸಲಿಟ್ಟರು ಅವರಿಗೆ ಸಿ.ಪಿ ಐ ಪಕ್ಷದ ಪ್ರಣಾಳಿಕೆ
ಮೆಚ್ಚಿಗೆ ಯಾಗಿತ್ತು. ಹಳತನ್ನು ಹೊಸ ದೃಷ್ಟಿಯಿಂದ ನೋಡುವ ಲೇಖನಗಳು ಮತ್ತು ಭಾಷಣಗಳು ಅವರ
ವೈಶಿಷ್ಟ್ಯವಾಗಿತ್ತು . ವೇದಾಧ್ಯಯನ ಮಾಡಿದವರು ಕುತೂಹಲರಹಿತ ಜಡರು, ಆಂಗ್ಲ ಅಧ್ಯಯನ ಮಾಡಿದವರು
ಭಾರತೀಯ ಕೃತಿಗಳ ಮೂಲವನ್ನೇ ಮೂಸಿ ನೋಡದೆ ಮಾತನಾಡುವ ಉಡಾಫೆಯವರು ಎಂಬ ಮಾತಿಗೆ ಅವರು ಅಪವಾದ. ಅವರು
ಯೋಗ, ಧ್ಯಾನ, ಭೌತವಾದ ಮತ್ತು ಮಾರ್ಕ್ಸವಾದಗಳ ನಡುವೆ ಸಮತೋಲನ ಕಾಪಾಡಿಕೊಂಡಿದ್ದರು. ಚರಿತ್ರೆ
ಪುರಾಣವಾಗಬಾರದು ಎಂಬುದು ಅವರ ದೃಢ ನಂಬಿಕೆ..
ಪೌರಾತ್ಯ ಮತ್ತು ಪಶ್ಚಿಮಾತ್ಯ ಸಾಹಿತ್ಯ ಮತ್ತು
ಸಂಸ್ಕೃತಿ ವಿಚಾರಗಳ ಸುಸಂಗತ ಸಂಗಮವಾಗಿರುವ ಜಿ.ಆರ್. ಹೀಗೆ ಪಾರಂಪರಿಕ ಮತ್ತು ಆಧುನಿಕ
ಮೌಲ್ಯಗಳ ಸತ್ವ ಹೀರಿದ ಗುಣ ಗ್ರಾಹಿ.ಅವರ ಚಿಂತನದ
ಫಲವಾಗಿ ಹೊರಬಂದ ಕೃತಿಗಳು: ಭಾರತೀಯ ಸಂಸ್ಕೃತಿಯ ಇಣಕುನೋಟ, ಆಯತನ, ಭಾರತೀಯ ವಿಜ್ಞಾನದ
ಹಾದಿ,ವೈಚಾರಿಕ ಜಾಗೃತಿ.ತಮ್ಮಮೆಚ್ಚಿದ ಸಿದ್ಧಾಂತದ ಹಿರಿಯ ಸಾಧಕರ ನುಡಿ ಚಿತ್ರಗಳನ್ನು
ರಚಿಸಿದರು. –ಯುಗ ಪುರುಷ,ಭಗತ್ ಸಿಂಗ್, ಭೂಪೇಶ ಗುಪ್ತ ಮತ್ತು ಚೆಗೆವಾರ. ಕಾರ್ಲಮಾರ್ಕ್ಸರ ”ಬಾ ನೊಣ ವೇ ಬಾ ನೊಣವೆ’, ಏಂಗಲ್ಸ್‌ರ ,’ ವಾನರನಿಂದ ಮಾನವನವರೆಗೆ”,ಕೃತಿಗಳು
ಕ್ರಾಂತಿಕಾರಿ ಜೀವನದ ಒಳನೋಟ ನೀಡುತ್ತವೆ. ಕೂಲಿ ಮತ್ತು ಕೆಲಸ ಮತ್ತು ದರ್ಶನ , ಅವರ ಅನುವಾದ
ಕೃತಿಗಳು. ಅವುಗಳ ಜೊತೆಗ ನಂಬಿದ ಸಿದ್ಧಾಂತದ
ಪ್ರಚಾರಕ್ಕಾಗಿ ಅನೇಕ ಕಿರು ಪುಸ್ತಿಕೆಗಳನ್ನೂ ರಚಿಸಿರುವರು.
ಇಂಗ್ಲಿಷ್‌ನಲ್ಲಿಯೂ ನಾಲ್ಕು ಕೃತಿಗಳನ್ನು
ಬರೆದಿರುವರು.ಅವರ ಸಂಪಾದಕತ್ವದಲ್ಲಿ ಸಾಮಾಜಿಕ
ಮತ್ತು ಸಾಂಸ್ಕೃತಿಕ ವಿಷಯ ಕುರಿತಾದ ಸುವರ್ಣ ಸ್ವತಾಂತ್ರ್ಯಮಾಲಿಕೆಯ ೧೨ ಕೃತಿಗಳು ಬಂದಿವೆ. ಕೋಶ
ಓದುವುದರ ಜೊತೆ ಜೊತೆಗೆ ದೇಶ ಸುತ್ತುವುದರಲ್ಲೂ ಇವರಿಗೆ ಆಸಕ್ತಿ. ದೇಶದ ಬಹುಭಾಗದಲ್ಲಿ ಸಂಚಾರ ಮಾಡಿರುವರು.

ಜೊತೆಗೆ ಚಾರಣದಲ್ಲೂ ಎತ್ತಿದ ಕೈ.. ಕೈಲಾಸಮಾನಸ ಸರೋವರ, ಗೋಮುಖ ಗಂಗೋತ್ರಿಗಳ ಸಮೀಪ ದರ್ಶನ ಮಾಡಿರುವರು. ಮೌಂಟ್‌ಎವರೆಷ್ಟ ಬೇಸ್‌ಕ್ಯಾಂಪ್ ಮೊದಲಾಗಿ ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ಚಾರಣ ಮಾಡಿರುವರು.

ಜೊತೆಗೆ ಚಾರಣದಲ್ಲೂ ಎತ್ತಿದ ಕೈ.. ಕೈಲಾಸಮಾನಸ ಸರೋವರ, ಗೋಮುಖ ಗಂಗೋತ್ರಿಗಳ ಸಮೀಪ ದರ್ಶನ ಮಾಡಿರುವರು. ಮೌಂಟ್‌ಎವರೆಷ್ಟ ಬೇಸ್‌ಕ್ಯಾಂಪ್ ಮೊದಲಾಗಿ ಹಿಮಾಲಯದ ಪರ್ವತ ಪ್ರದೇಶಗಳಲ್ಲಿ ಚಾರಣ ಮಾಡಿರುವರು.
ಸಾಹಿತ್ಯ ,ಯೋಗ ಮತ್ತು ಸಂಗೀತ ಪ್ರೀತಿ ಅವರ
ಜೀವನದಲ್ಲಿ ಮುಪ್ಪುರಿಗೊಂಡಿದೆ. ಸಿದ್ಧಾಂತವನ್ನು ವಿರೋಧಿಸಿದರೂ ವ್ಯಕ್ತಿಯನ್ನು ಆದರಿಸುವ ಅವರ
ಗುಣದಿಂದಾಗಿ ಅವರ ಗೆಳೆಯರ ಬಳಗ ಬಹು ದೊಡ್ಡದಾಗಿದೆ.. ಕಟ್ಟಾಹಿಂದುತ್ವವನ್ನು ವಿರೋಧಿಸಿದರೂ
ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಸಕ್ರಿಯರಾದ ಆರ್.ರಾಮಸ್ವಾಮಿ ಇವರ ಆತ್ಮೀಯ ಗೆಳೆಯರು
ಅದ್ಯಯನ ಮತ್ತು ವಿಚಾರವಿನಿಮಯಕ್ಕಾಗಿ ಇಂಗ್ಲೆಂಡ,
ಅಮೇರಿಕಾ, ರಷ್ಯಾ. ನೇಪಾಳ, ಟಿಬೆಟ್ ಮತ್ತು
ಆಫ್ಘನಿಸ್ತಾನಗಳಲ್ಲೂ ಪ್ರವಾಸ ಮಾಡಿರುವರು.
ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುವರು. ಮಾ.ಲೆ- ಅವರು ಪ್ರಾರಂಭಿಸಿದ ಪ್ರಕಾಶನ ಸಂಸ್ಥೆ ಅದರಲ್ಲಿ
.ಅನೇಕ ಮೌಲಿಕ ಪುಸ್ತಕಗಳನ್ನು ಪ್ರಕಟಿಸಿರುವರು.
ಮಾ.ಲೆ ಅಂದರೆ ಮಾರ್ಕ್ಸ ಲೆನಿನ್ ಗ್ರಂಥಮಾಲೆ.
ಅಲ್ಲದೆ ’ಹೊಸತು” ಎಂಬ ಪತ್ರಿಕೆಯನ್ನೂ
ಹೊರತಂದಿರುತ್ತಾರೆ.


ಬೆಂಗಳೂರಿನಲ್ಲಿ ನೆಲಸಿದ ತರುವಾಯ ಅವರ ಸಾಮಾಜಿಕ
ಚಟುವಟಿಕೆ ಗರಿ ಗೆದರಿತು. ಕಾಲೇಜು ಅಧ್ಯಾಪಕರ ಸಂಘಟನೆಯಲ್ಲಿ ಅವರ ಪಾತ್ರ ಹಿರಿದು ರಾಜ್ಯ
ಮಟ್ಟದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ರಾಷ್ಟ್ರ ಮಟ್ಟದಲ್ಲೂ ಚಳುವಳಿಯಲ್ಲಿ ಭಾಗ
ವಹಿಸಿದರು. ಅವರ ಹೊರಾಟದ ಫಲವಾಗಿ ಖಾಸಗಿ ಕಾಲೇಜಿನ ಬೋಧಕರಿಗೂ ಸೇವಾ ಸೌಲಭ್ಯ ದೊರೆಯಿತು. ಡಾ, ಕೆ.. ದ್ನಾರಕಾನಾಥ್ ಮೊದಲಾದವರ ಹೋರಾಟದ ಫಲವಾಗಿ ಕಾಲೇಜುಅಧ್ಯಾಪಕರಿಗೆ ಸಾಮಾಜಿಕ
ಪ್ರತಿಷ್ಠೆಯ ಜೊತೆ ಆರ್ಥಿಕ ಸೌಲಭ್ಯವೂ ದೊರೆಯಿತು. ಖಾಸಗಿಯವರು ನಡೆಸುತಿದ್ದ ಶೋಷಣೆ
ನಿಯಂತ್ರಣಕ್ಕೆ ಬಂದಿತು. ವಿಪರ್ಯಾಸವೆಂದರೆ ಈಗ ಅವರ ಕಣ್ಣೆದುರಿಗೆ ಕಾಲೇಜುಅಧ್ಯಾಪಕರ ಸಂಘಟನೆ
ದುರ್ಬಲವಾಗಿದೆ. ಖಾಸಗಿಯವರು ಅನುದಾನರಹಿತ ಹುದ್ದೆಗಳಲ್ಲಿ ನೇಮಕ ಮಾಡಿಕೊಂಡು ನಿಯಮಗಳಲ್ಲಿನ
ಮಿತಿಯ ಲಾಭ ಪಡೆದುಕೊಂಡು ಅರ್ಹತೆಗೆ ತಕ್ಕವೇತನ ನೀಡದೆ ಶೋಷಣೆಗೆ ಮುಂದಾಗಿರುವರು.
ಎಲ್ಲ ಜನಪರ ಹೋರಾಟಗಳಲ್ಲೂ ಪ್ರತ್ಯಕ್ಷ್ಯ ಅಥವ
ಪರೋಕ್ಷವಾಗಿ ಒತ್ತಾಸೆ ನೀಡುವರು. ಗೋಕಾಕ
ಚಳುವಳಿಯಲ್ಲೂ ಹೋರಾಟಕ್ಕೆ ಹೊಸಬರಾದ ಸಾಹಿತಿಗಳಿಗೆ ಬೆಂಬಲ ನೀಡಿದ್ದರು.ಮುಂಚೂಣಿಯಲ್ಲಿದ್ದ ಡಾ.
ಚಿದಾನಂದಮೂರ್ತಿ ಮತ್ತು ಡಾ.ಪಿ.ವಿ ನಾರಾಯಣರಿಗೆ ಬೆನ್ನುತಟ್ಟಿ ’ ಚಳುವಳಿಗೆ ಹಣ ಬೇಕಾಗುತ್ತದೆ,
ಎಂದು ಮೊದಲ ಕಾಣಿಕೆ ನೀಡಿದವರು. ವಾಮಪಂಥೀಯಚಿಂತಕರಲ್ಲಿ ಅತಿಪ್ರಮುಖರಾದ ಇವರು ಯುವಜನರಿಗೆ ಮತ್ತು
ಚಳುವಳಿಗಾರರಿಗೆ ನಿರಂತರವಾಗಿ ಸ್ಪೂರ್ತಿ ನೀಡುತಿದ್ದಾರೆ.


ಅಂತರಿಕ ಪ್ರಜಾಪ್ರಭುತ್ವವು ಸಮಾಜ, ಪಕ್ಷ, ಕುಟುಂಬ ಮತ್ತು ವ್ಯಕ್ತಿಯಲ್ಲೂ ಅತಿ ಮುಖ್ಯ. ಇದರಿಂದ ಅಧಿಕಾರದ ದುರುಪಯೋಗ ನಿಯಂತ್ರಣ ದಲ್ಲಿರುತ್ತದೆ. ಸ್ವಾತಂತ್ರ್ಯ ಎಂದರೆ ಅಗತ್ಯತೆಯ ಮೆಚ್ಚುಗೆ. ತನ್ನಂತೆ ಇನ್ನೊಬ್ಬನಿದ್ದಾನೆ ಎಂಬ ಭಾವನೆಯೇ ಆಸ್ತಿಕತೆ. ಧಾರ್ಮಿಕ ಅಭಿವ್ಯಕ್ತಿ ಯಾಂತ್ರಿಕ ಆಚರಣೆಯಾದಾಗ ಅರ್ಥ ಹೀನವಾಗುವುದು. ವರ್ಗ ಸಂಘರ್ಷ ಎಂದರೆ ಪರಂಪರೆಯನ್ನು ತಿರಸ್ಕರಿಸುವುದು ಅಲ್ಲ .ನಮ್ಮ ಹಿಂದಿನ ಪೀಳಿಗೆಯವರ ಹೆಗಲ ಮೇಲೆ ನಿಂತು ಹೊಸತನ್ನು ನೋಡುವುದು. ಕ್ರಾಂತಿಕಾರಿಗಳು ಹಿಂದೂ ಇದ್ದರು, ಇಂದೂ ಇರುವರು ಮತ್ತು ಮುಂದೂ ಇರುತ್ತಾರೆ.. ಮನುಷ್ಯ ಸ್ವಭಾವ ಬರಿ ಸಂಸ್ಕಾರದಿಂದ ಬರುವುದಿಲ್ಲ ಸನ್ನಿವೇಶವೂ ಅದಕ್ಕೆ ಕಾರಣ .
ಭಾರತದ ವೈಶಿಷ್ಟ್ಯವೆಂದರೆ ಲಾಭದ ಆಶೆ ಇಲ್ಲದೆ ಜನರನ್ನು ಆಪ್ತರಾಗಿಸಿಕೊಳ್ಳುವುದು. ಇದನ್ನು ಆತ್ಮೀಯತೆ ಎನ್ನಲೂಬಹುದು ಇದು ಭಾರತದಲ್ಲಿ ಸಂಪ್ರದಾಯ ಪ್ರಿಯತೆಯ ಹೊರತಾಗಿಯೂ ಕಂಡು ಬರುತ್ತದೆ.. ಆದರೆ ವಿದೇಶಗಳಲ್ಲಿ ವಿರಳ. ಧರ್ಮ ದುಖಃ ದುಮ್ಮಾನಗಳಿಗೆ ಸಿದ್ಧೌಷದಿಯಾಗಿ ಕಾಣಬಹುದು. ಆದರೆ ಅದು ತಾತ್ಕಾಲಿ ಪರಿಹಾರ ಮಾತ್ರ.ಧಾರ್ಮಿಕತೆಯು ಸರಕಾಗುವುದು ಸ್ವಸ್ಥ ಮನಸ್ಸಿನ ಸಂಕೇತವಲ್ಲ.ವಿಶ್ವದ ವಿಸ್ಮಯದ ಹಿನ್ನೆಲೆಯಲ್ಲಿ ಉದಾತ್ತ ಮೌಲಿಕ ಪ್ರಜ್ಞೆ ಮೂಡಿಸುವುದೆ ಧರ್ಮ ಮೊದಲಾದ ಅವರ ಅನೇಕ ಚಿಂತನಶೀಲ ನುಡಿಗಳು ಯುವ ಜನಾಂಗಕ್ಕೆ ದಾರಿ ದೀಪವಾಗಿವೆ.


ಇವರ ಸಾಹಿತ್ಯ ಪ್ರತಿಭೆಗೆ ಸಾಕಷ್ಟು ಗೌರವ ಸಮದಿದೆ. ಮುನೋಟ , ಆಯತನ,ಭಾರತೀಯ ಮತ್ತು ವಿಜ್ಞಾನದ ಹಾದಿ ಕೃತಿಗಳು ಕರ್ನಾಟಕ ಸಾಹಿತ್ಯಕಾಡಮಿ ಬಹುಮಾನಕ್ಕೆ ಭಾಜನವಾಗಿವೆ ಇವರ ಸಾಹಿತ್ಯ ಪ್ರತಿಭೆಗೆ ಗೌರವ ಸಲ್ಲಿಸಲು ಅನೇಕ ಸಾಹಿತ್ಯೇತರ ಸಂಸ್ಥೆಗಳ ಪ್ರಯತ್ನಗಳಿಗೆ ಅವರು ಸ್ಪಂದಿಸಿಲ್ಲ. ಸರ್ಕಾರ ನೀಡಿದ ರಾಜ್ಯೋತ್ಸವ ಪ್ರಶಸ್ತಿಯನ್ನು ವಿನಯದಿಂದ ನಿರಾಕರಣೆ ಮಾಡಿರುವರು.ಈಗ ಸಾಹಿತ್ಯ ಸಂಶೋಧನಾ ಸಂಸ್ಥೆಯಾದ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನ ಪ್ರಪ್ರಥಮವಾಗಿ ಪ್ರದಾನ ಮಡುತ್ತಿರುವ ಶ್ರೀಮತಿ ಸಾವಿತ್ರಮ್ಮ ಮತ್ತು ಎಂ.ವಿ. ಸೀ ಪ್ರಶಸ್ತಿ ಯನ್ನು ಸ್ವೀಕರಿಸಲು ತುಂಬಾ ಒತ್ತಾಯದ ಮೇಲೆ ಒಪ್ಪಿರುವರು. ಇಳಿವಯಸ್ಸಿನಲ್ಲೂ ಒಂಟಿಯಾಗಿ ಸ್ವತಂತ್ರ ಜೀವನ ನಡೆಸುತ್ತಾ ತಮ್ಮ ಸಾಮಾಜಿಕ ಕಳಕಳಿ, ವಿಚಾರವಾದ ಮತ್ತು ಚಿಂತನ ಶೀಲತೆಯಿಂದ ಸಮಾಜಮುಖಿ ಜೀವನ ನಡೆಸುತ್ತಿರುವರು.
”ವಿಶ್ವದ ಯಾವುದೇ ಭಾಗದಲ್ಲಾದರೂ ನ್ಯಾಯವಾಗುತ್ತಿದ್ದರೆ, ಕೆರಳಿ ಸ್ಪಂದಿಸ ಬಲ್ಲವರಾದರೆ ನಾವು ನಿಜವಾದ ಸಂಗಾತಿಗಳು’ , ಎಂಬ ನುಡಿಯಂತೆ ನಡೆದವರು. ದಮನಿತರ ನೋವಿಗೆ ಮಿಡಿಯುವ,ಶೋಷಿತರ ಕಷ್ಟಕ್ಕೆ ಮರುಗುವ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮತ್ತು ಹೋರಾಟಗಾರರಿಗೆ ಜೊತೆಯಾಗುವ ಅವರಿಗೆ ’ಸಂಗಾತಿ” ಎಂಬ ಹೆಸರಿನ ಅಭಿನಂದನಾ ಗ್ರಂಥ ಅರ್ಪಣೆಯಾಗಿರುವುದು ಬಹಳ ಅರ್ಥ ಪೂರ್ಣವಾಗಿದೆ.
( ಚಿತ್ರ ಕೃಪೆ- -ಅಭಿನಂದನ ಗ್ರಂಥ ಸಂಗಾತಿ )
( ಚಿತ್ರ ಕೃಪೆ- -ಅಭಿನಂದನ ಗ್ರಂಥ ಸಂಗಾತಿ )
No comments:
Post a Comment