Monday, January 13, 2014

ಪು.ತಿ.ನ- ಸಾಕ್ಷ್ಯ ಚಿತ್ರ

   ಡಾ. ಪು. ತಿ. ನರಸಿಂಹಾಚಾರ್‌



ಕೇಂದ್ರ ಸಾಹಿತ್ಯ ಅಕಾಡಿಮಿಯವರು ಭಾರತದ ಮಹಾನ್‌ಕವಿಗಳ ಕುರಿತಾದ ಸಾಕ್ಷ್ಯ ಚಿತ್ರೋತ್ಸವವನ್ನು ಇದೇ ಜನವರಿ ೯, ೧೦. ಮತ್ತು  ೧೧ ರಂದು ಸುಚಿತ್ರ ಅಕಾಡಮಿಯಲ್ಲಿ ನಡೆಸಿದರು, ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಚಿತ್ರೋತ್ಸವದ ಹಿನ್ನೆಲೆಯಲ್ಲಿ ಅದರಲ್ಲೂ ಕರ್ನಾಟಕದ ಕೊನೆಯ ರಾಷ್ಟ್ರ ಕವಿ ಜಿ ಎಸ್. ಶಿವರುದ್ರಪ್ಪನರು ಅಗಲಿದ ಹಿನ್ನೆಲೆಯಲ್ಲಿ  ಒಂದು ಉತ್ತಮ ಪ್ರಯತ್ನ ಎನಿಸಿತು.ಸಹಜವಾಗಿ ಸಮಕಾಲೀನ ಕವಿಗಳಾದ ಲಕ್ಷಮಿನಾರಾಯಣ ಭಟ್ಟ, ಜಯಂತ ಕಾಯ್ಕಿಣಿ, ಬಿ.ಆರ್‌ಲಕ್ಷ್ಮಣ ರಾವ್‌ ಮೊದಲಾವರು ಹಾಜರಿದ್ದರು..ಇತ್ತೀಚೆಗೆ ಹಸ್ತಪ್ರತಿ ಸಂರಕ್ಷಣೆಯ ಕಾರ್ಯದಲ್ಲಿ ತಲ್ಲೀನನಾಗಿ ಹೊರ ಜಗತ್ತನ್ನು ಮರೆತಿರುವ ನಾನು ಅದೃಷ್ಟವಶಾತ್‌ ಬದಲಾವಣೆ ಇರಲಿ ಎಂದು ಸುಚಿತ್ರಕ್ಕೆ ಭಾನುವಾರ ಸಂಜೆ ಹೋದಾಗ ಕಳೆದ ಎರಡುದಿನ ಆಕಡೆ ಹೋಗದೆ ಇರುವುದಕ್ಕೆ ಮನ ಮಿಡುಕಿತು. ಅಂದು ಸಂಜೆ ಐದಕ್ಕೆ ಅನಂತ ಮೂರ್ತಿಯವರ ಜತೆ ಸಂವಾದ ಇದ್ದಿತು. ಆದರೆ ಅವರ ಅನುಪಸ್ಥಿತಿಯಿಂದ ನೇರವಾಗಿ ಚಿತ್ರಪ್ರದರ್ಶನ ಪ್ರಾರಂಭವಾಯಿತು
ಮೊದಲ ಚಿತ್ರ ಪು. ತಿ. ನ ಅವರಕುರಿತಾದುದು.ಸಂಗೀತ ಕಾವ್ಯಗಳ ಸುಮಧುರ ಸಂಗಮವಾದ ಅವರ ಕಾವ್ಯದ ಝಳಕಿನೊಂದಿಗೆ ಚಿತ್ರ ಪ್ರಾರಂಭವಾಯಿತು. ಮಲೆದೇಗುಲದ ಗೀತೆ ಮೇಲುಕೋಟೆಯ ಪ್ರಕೃತಿ ಚಿತ್ರಣ ಉತ್ತಮ ಆರಂಭ ಒದಗಿಸಿತು. ಜ್ಞಾನ ಪೀಠ ಪ್ರಶಸ್ತಿ ವಿಜೇತ ಚಂದ್ರಶೇಖರ ಕಂಬಾರರು.  ಹಿರಿಯ ಕವಿಯ ವ್ಯಕ್ತಿತ್ವವನ್ನು ಅವರ ಸ್ಪೂರ್ತಿ ನೆಲೆವೀಡಾದ ಮೇಲುಕೋಟೆಯ ಸುಂದರ ಪರಿಸರದ ಜೊತೆಅವರ ಜೀವನ ಹೇಗೆ ಹಾಸು ಹೊಕ್ಕಾಗಿದ್ದನ್ನು  ಸಮರ್ಥವಾಗಿ ಸೆರೆ ಹಿಡಿದಿರುವರು. ಬಹುಶಃ ಪು.ತಿ.ನ ಅವರ ಮಾಗಿದ ವಯಸ್ಸಿನಲ್ಲಿ ಚಿತ್ರೀಕರಣವಾದುದರಿಂದ ಅವರ ಬಾಲ್ಯ ಯೌವನ  ಮತ್ತು ಅವರ ಸಮಕಾಲೀನ  ಒಡಗಿನ ಒಡನಾಡದ ವಿವರ ಇಲ್ಲದೇ ಇರುವುದು ಎದ್ದು ಕಾಣುತಿತ್ತು . ಚೆಲುವನಾರಾಯಣನ ಅರ್ಚಕರ ವಂಶದಲ್ಲಿ ಜನಿಸಿದ ಅವರು ವೈದಿಕಜಗತ್ತಿನಿಂದ ಹೊರಬಂದು ಮೈಸೂರು ಸೈನಿಕ ಇಲಾಖೆಯಲ್ಲಿ ಆಂಗ್ಲ ಅಧಿಕಾರಿಗಳ ಅಡಿಯಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿದರೂ ಅವರ ಮನದ ತುಂಬ ಚೆಲುವನಾರಾಯಣ ಮತ್ತು ಮೇಲು ಕೋಟೆಯೇ. ತಮ್ಮ ೧೯ರ ಎಳೆವಯಸ್ಸಿನಲ್ಲಿ ೧೩ರ ಬಾಲೆಯನ್ನು ಮದುವೆಯಾದ  ಅವರು ತಮ್ಮ ಅರವತ್ತುವರ್ಷಕ್ಕೂ ಅಧಿಕ ದಾಂಪತ್ಯ ಜೀವನದಲ್ಲಿ ಕಷ್ಟ ನಷ್ಟಗಳ ಕೋಟಲೆ ಕೊರತೆಗಳ ನಡುವೆ ಕವಿ ಮನ ಮುದುಡದಂತೆ ನೋಡಿಕೊಂಡಮಡದಿಯೇ ರಂಗವಲ್ಲಿ ಹಾಕುವುದರೊಂದಿಗೆ ಚಿತ್ರ ಪ್ರಾರಂಭವಾದುದು ಸಾಂಕೇತಿಕವಾಗಿತ್ತು ಅವರು ಜನಿಸಿದ ಮನೆ ಮೈಸೂರಲ್ಲಿ ವಾಸವಿದ್ದ ವಠಾರ, ದೈನಂದಿನ ವೈದಿಕಾಚರಣೆಗಳು  ನಡುವೆಯೂ ಅವರ ಕವಿಮನಸ್ಸು ಹೇಗೆ ಕ್ರಿಯಾಶೀಲವಾಗಿ ಜೀವಂತವಾಗಿತ್ತು, ಕನ್ನಡದಲ್ಲಿ ಮೊದಲ ಸಂಗೀತ ನಾಟಕ ರಚಿಸಿದ ಅವರ ವೈಶಿಷ್ಟ್ಯವನ್ನು ವೀಣೆ ದೊರೆಸ್ವಾಮಿಗಳೇ ವಿವರಿಸಿದ್ದು ಜೊತೆಗೆ ಸುಧಾಮ ಎಂಬ ಬ್ಯಾಲೆಯ ತುಣುಕು ತೋರಿಸಿದುದು ತುಂಬಾ ಆಸಕ್ತಿದಾಯಕವಾಗಿದ್ದಿತು.ಅವರೇ ಹೇಳಿದಂತೆ ಅರವತ್ತರ ವಯಸ್ಸಿನವರೆಗೆ ಅವರ ಕಾವ್ಯಕ್ಕೆ ಯಾವುದೇ ಪ್ರಶಸ್ತಿ ಪುರಸ್ಕಾರ ಬಂದಿರಲಿಲ್ಲ. ನಂತರ ಅವರ ಕಾವ್ಯ ಪ್ರತಿಭೆಗೆ ಸಲ್ಲಬೇಕಾದ ಗೌರವ ಸಂದಿತು. ಅವರು ಬಹುಶಃ ಹನ್ನೆರಡನೆಯ ಶತಮಾನದಲ್ಲಿ ಪ್ರಾಂರಂಭವಾದ  ಭಕ್ತ ಕವಿ ಪರಂಪರೆಯ ಕೊನೆಯ ಕೊಂಡಿ ಎಂಬ ವಿಮರ್ಶಕ  ಡಾ. ಕೆ.. ಮರಳ ಸಿದ್ಧಪ್ಪನವರ ಮಾತು  ಅರ್ಥಪೂರ್ಣ. ಅವರ ಧಾರ್ಮಿಕ ಆಚರಣೆ, ವೇಷ ಭೂಷಣ   ನೋಡಿ ಮೂಡುವ ಚಿತ್ರಣಕ್ಕಿಂತ ಹೇಗೆ ಅವರ ವ್ಯಕ್ತಿತ್ವ ಭಿನ್ನವಾಗಿತ್ತಯ ಎಂದು ಮರುಳಸಿದ್ದಪ್ಪ ನೀಡಿದ ಒಂದು ಘಟನೆ  ಮನಮುಟ್ಟುವಮತೆ ಇತ್ತು. ಕಟ್ಟಾ ವೈದಿಕ ಸಂಪ್ರದಾಯದವರಂತಿದ್ದ ಅವರು ಬಾಬ್ರಿ ಮಸೀದಿಯು ಧರ್ಮಾಧರರ ದಾಳಿಗೆ ತುತ್ತಾಗಿ ನಾಶವಾದಾಗ ಅದನ್ನು ಖಂಡಿಸುವ ಸಭೆಗೆ ಬಂದುದನ್ನು ನೆನಸಿಕೊಂಡರು.. ಅವರನ್ನು ಕರೆತರಲು ಹೋದಾಗ ಅವರು ಸಂಧ್ಯಾವಂದನೆಯ ಸಿದ್ದತೆಯಲ್ಲಿದ್ದರು.
 ಅದರ ಮೊದಲ ಅಂಗವಾಗಿ  ತ್ರಿನಾಮ ಹಾಕಿಕೊಳ್ಳುತಿದ್ದರು. ಇವರನ್ನು ನೋಡಿದೊಡನೆ ಅಪ್ಪಾ, ನಾನು ನಾಮ  ಹಾಕಿಕೊಳ್ಳುವೆ ಇತರರಿಗೆ ಹಾಕುವುದಿಲ್ಲ ಎಂಬ ಅವರ ಹಾಸ್ಯ ಪ್ರಜ್ಞೆ ಅವರ ಸರಸ ಗುಣಕ್ಕೆ ಸಾಕ್ಷಿ . ಅಂದಿನ ಸಭೆಯಲ್ಲಿ ಲಂಕೇಶ, ಮರುಳಸಿದ್ದಪ್ಪ ಅನಂತ ಮೂರ್ತಿ , ರಾಮದಾಸ ಮೊದಲಾದ ಪ್ರಗತಿಪರ ಧೋರಣೆ ಸಾಹಿತಿಗಳು ಭಾಗವಹಿಸಿ, ಗುಡಿ, ಮಸೀದಿ ಚರ್ಚು ಯಾವುದೇ ಪೂಜಾಸ್ಥಳವಾದರೂ ಅದರ ನಾಶ ಖಂಡನಾರ್ಹ ಎಂದು ಮಾತನಾಡಿದರು.. ಆದರೆ ಬಾಬ್ರಿ ಮಸೀದೆಯಲ್ಲಿ ಪ್ರಾರ್ಥನೆ ನಡೆಸುತ್ತಿರರಲಿಲ್ಲ  ಅಲ್ಲವೇ ಎಂಬ  ಅವರ ಪ್ರಶ್ನೆ ಹಲವರ ಕಣ್ಣು ಕೆಂಪಾಗಲೂ ಕಾರಣವಾದರೂ .ಕೋಮುವಾದದ ಖಂಡನೆಯ ಸಭೆಯಲ್ಲಿ ಭಾಗವಹಿಸಿದುದು ಅವರ ಜ್ಯಾತ್ಯಾತೀತ ಮನಸ್ಸಿನ ಅನಾವರಣ ಗೊಳಿಸುವಂಥಹ ಘಟನೆ. ಆದರೆ ಈ ಎಲ್ಲ ಆಯಾಮಗಳು ಚಿತ್ರದಲ್ಲಿ ಇಲ್ಲದಿರುವುದು ಒಂದು ಕೊರತೆ. ದೇವನೂರು ಮಹದೇವ ಅವರ ಮಗಳ ಕವನ ಸಂಕಲನಕ್ಕೆ ಮುನ್ನುಡಿ ಬರೆಸಲು ಡಾ. ವಿಜಯಮ್ಮ ಮತ್ತು ಮಹಾದೇವ ಅವರ ಮನೆಗೆ ಹೊದಾಗ ರಾತ್ರಿ ಹನ್ನೆರಡುಗಂಟೆ. ಅಪರಾತ್ರಿಯಲ್ಲಿ ಹೊದರೂ ಬಾಗಿಲುತೆರೆದು ಏನಮ್ಮ  ವಿಜಯಾ ,ಇಷ್ಟು ಹೊತ್ತಿನಲ್ಲಿ ಬಂದೆ? ಎಂದವರು, ಮಹದೇವ ಬಂದಿರುವನು ಎಂದು ಕೇಳಿದೊಡನೆ  ಧಾವಿಸಿ ಅಪ್ಪಿಕೊಂಡ ಘಟನೆ  ಮಡಿವಂತಿಕೆಯ ಮುಸುಕಿನಲ್ಲಿ  ಅವರ ಮನದಾಳದಲ್ಲಿ ಹುದುಗಿದ  ಅಂತಃಕರಣಕ್ಕೆ ಸಾಕ್ಷಿ ಭೂತ. ಮಾರನೆಯ ದಿನ ಬೆಳಗಿನ ಹತ್ತೂವರೆಗ ಮುನ್ನುಡಿ ಬರೆದು ಯುವ ಕವಿಯತ್ರಿಯನ್ನು ಹರಸಿದುದು ಕೇಳಿ ಅವರ ವ್ಯಕ್ತಿತ್ವಕ್ಕೆ ತಲೆ ಬಾಗುವುದು. ಇಂಥಹ ಅಂಶಗಳೇ ವ್ಯಕ್ತಿಚಿತ್ರಣ ಕುಸರಿ ಕೆಲಸ ಎಂಬುದು ನಿಜಕ್ಕೂ ಮನನೀಯ. ಇವೆಲ್ಲಸಾಕ್ಷ್ಯಚಿತ್ರದಲ್ಲಿ ಇರಲಿಲ್ಲ. ಅಲ್ಲದೇ ಅನೇಕ ಕಡೆ ಅವರ ಮಾಗಿದ ವಯಸ್ಸಿನ ಕಾರಣವೋ ಇಲ್ಲವೇ ತಾಂತ್ರಿಕಕ ದೋಷದಿಂದಾಗಿಯೋ   ಮಾತು ತುಸು ಅಸ್ಪಷ್ಟವಾಗಿತ್ತು.
 ಪು. ತಿ. ನರಸಿಮಹಾಚಾರ್‌ ಅವರ ಜನನ  17 ಮಾರ್ಚ್‌ 1905 ರಲ್ಲಿ ಸಂಪ್ರದಾಸ್ಥ ಅಯ್ಯಂಗಾರ್‌ ಕುಟುಂಬ. ತಂದೆ ತಿರುನರಾಯಣ ಅಯ್ಯಂಗಾರ್‌ ಚೆಲುವನಾರಾಯಣನ ಅರ್ಚಕರು. ತಾಯಿ ಶ್ರೀರಂಗಮ್ಮ. ಅವರದು ಪುರೋಹಿತ ಮನೆತನ.  ಮಗನು ಅದೇ ವೃತ್ತಿಯಲ್ಲಿ ಮುಂದುವರಿಯಲ್ಲಿ ಎಂಬ ಆಸೆ. ಅದಕ್ಕೆ ಚಿಕ್ಕಂದಿನಿಂದಲೇ ಸಂಸ್ಕೃತ, ಶಾಸ್ತ್ರ ಅಭ್ಯಾಸ. ಆದರೆ ಪುತಿನ ಅವನ್ನು ಕನ್ನಡ ಕೈ ಬಿಸಿ ಕರೆಯಿತು  ಪ್ರಾಥಮಿಕ  ಶಿಕ್ಷಣ ಅಲ್ಲಿಯೇ ಆದರೂ  ಅವರ ಮುಂದಿನ ಶಿಕ್ಷಣ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ, ತಿ..ನಂ.ಶ್ರೀ,, ಡಾ.ರಾಧಾಕೃಷ್ಣನ್,  ಪ್ರೊ. ಹಿರಿಯಣ್ಣ ಅವರ ಗುರುಗಳು. ಇಂಗ್ಲಿಷ್‌, ಫ್ರೆಂಚ್‌ ತಮಿಳು ಭಾಷೆಗಳಲ್ಲೂ ಪ್ರೌಢಿಮೆ. ವಂಶಪಾರ್ಯಂಪರೆಯ ವೈದಿಕ ವೃತ್ತಿ ತೊರೆದು  ಮೈಸೂರು ರಾಜ್ಯದ ಸೈನಿಕ ಇಲಾಖೆಯಲ್ಲಿ ಉದ್ಯೋಗ.. ಆಂಗ್ಲರ ಅಡಿಯಲ್ಲಿ ಕೆಲಸ  ಮಾಡಿದರೂ ವೃತ್ತಿ ಬದುಕು ಹಿತಕರ. .ಅಂದಿನ  ಮೈಸೂರಿನಲ್ಲಿ ಸಂಗೀತದ ಸುಗ್ಗಿ.ವೀಣೆ ಶೇಷಣ್ಣ , ಬಿಡಾರಂ ಕೃಷ್ಣಪ್ಪ ಮೊದಲಾದ ಕರ್ನಾಟಕ ಸಂಗೀತದತ್ತ ದಿಗ್ಗಜರ ಜೊತೆಜೊತೆಗೆ ಅರಮನೆಯ ಪಾಶ್ಚಾತ್‌ ಸಂಗೀತ ಆಲಿಸುವ ಭಾಗ್ಯ ಅವರದಾಗಿತ್ತು.  ಅದರ ಪರಿಣಾಮ ಕೃತಿಗಳು ಸಂಗೀತ ಸಾಹಿತ್ಯಗಳ ಸುಮಧುರ ಸಮ್ಮಿಳನ  ನಂತರ ವಿಧಾನ ಮಂಡಲದಲ್ಲಿ  ಉದ್ಯೋಗ . ಬೆಂಗಳೂರಿನಲ್ಲಿ ವಾಸ.  ನಿವೃತ್ತಿಯ ನಂತರ ನಿಘಂಟು ರಚನೆಯಲ್ಲಿ ನಿರತರು.
.ನವೋದಯ ಕಾವ್ಯದ  ಪ್ರಾರಂಭದ ಪ್ರಮುಖ ಕವಿ. ಕುವೆಂಪು , ಬೇಂದ್ರೆ  ಮತ್ತು ನರಸಿಂಹಸ್ವಾಮಿಯವರ ಸಾಲಿನಲ್ಲಿರಬಹುದಾದ ಪ್ರತಿಭೆ .ಇವರ ಕಾವ್ಯ  ದೈವ, ಪ್ರಕೃತಿ ಮತ್ತು ಸಂಗೀತಗಳತ್ರಿ ವೇಣಿ ಸಂಗಮ ಹಣತೆ, ಮಾಂದಳಿರು,ಗಣೇಶ ದರ್ಶನ,  ಮಲೆಯ ದೇಗುಲ,ಎಳೆಯ ಚಿಗುರು,ಹೊಸಬೇರು ರಾಗರಾಗಿಣಿ ಕವನ ಸಂಕಲನಗಳು,ಗೋಕುಲನಿರ್ಗಮನ, ಸುಧಾಮ,ಅಹಲ್ಯ, ಶಬರಿ. ಸೀತಾಕಲ್ಯಾಣ, ರಾಮಪಟ್ಟಾಭಿಷೇಕ  ಮೊದಲಾದ ಗೀತ ನಾಟಕಗಳು
ರಾಮಾಚಾರಿಯ ನೆನಪು, ಈಚಲು ಮರದ ಕೆಳಗೆ,  ರಥಸಪ್ತಮಿ ಮತ್ತುಇತರೆ ಕಥೆಗಳು ಮುದಲಾದ ಗದ್ಯ ಕೃತಿಗಳು ಅವರ ವೈವಿದ್ಯಮಯ ಬರವನಿಣಿಗೆಯ ಪ್ರತೀಕ.
ಅವರ ಕಾವ್ಯ ಪ್ರತಿಭೆ ಗುರುತಿಸಲು ತಡವಾದರೂ   ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಡಾಕ್ಟ್ರೇಟ್‌, ಪಂಪ ಪ್ರಶಸ್ತಿ, ಪದ್ಮಶ್ರೀ,  ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರಿಗೆ ಸಂದಸನ್ಮಾನಗಳು.ನವೋದಯದ ಕೊನೆಯ ಕೊಂಡಿ ಕಳಚಿದ್ದು ೧೯೯೮ ರ ಅಕ್ಟೋಬರ್‌೨೩ ರಂದು. ಇಂಥಹ ಸಮೃದ್ಧ ಜೀವನವನ್ನು ಕಿರು ಚಿತ್ರದಲ್ಲಿ ಸೆರೆ ಹಿಡಿಯುವುದು ತುಸು ಕಠಿನ, ಆ ಮಿತಿಯಲ್ಲಿಯೇ ಡಾ. ಚಂದ್ರಶೇಖರ ಕಂಬಾರರು ತಕ್ಕ ಮಟ್ಟಿಗೆ ಯಶಸ್ವಿಯಾಗಿರುವರು.ಕಾವ್ಯ ರಸಿಕರಿಗೆ ಖುಷಿಕೊಡುವರು

No comments:

Post a Comment