Friday, March 20, 2015

ಯುಗಾದಿಯ ಶುಭಾಶಯಗಳು


 ಮಮತೆಯ ಓದುಗರಿಗೆ ಮನ್ಮಥನಾಮ  ಸಂವತ್ಸರವು  ಶುಭ, ಸಂತೋಷ, ಮತ್ತು                                          ನೆಮ್ಮದಿ ತರಲಿ            


(ಎಚ್‌.ಶೇಷಗಿರಿರಾವ್)
ಕನ್ನಡ ಭಾಷೆಯ ಆದಿಯಿಂದ ಹಿಡಿದು ಇಂದಿನವರೆಗಿನ ಬಳಸಿದ ಲಿಪಿಯಲ್ಲಿ ನಿಮಗೆ ಶುಭಾಶಯ ಕೋರಿದೆ
ಲಿಪಿವಿಕಾಸ,ಹಸ್ತ ಪ್ರತಿ, ಸಂರಕ್ಷಣೆ,ಡಿಜಟಲೀಕರಣ ಮತ್ತು ಆನ್‌ಲೈನ್‌ಅಧ್ಯಯನದಲ್ಲಿ ಆಸಕ್ತಿ ಇರುವವರು ಸಂಪರ್ಕಿಸಿ

ಹೊಸ ವರ್ಷದಲ್ಲಿ ಕನ್ನಡ ಲಿಪಿವಿಕಾಸ ಅಂದರೆ ಕ್ರಿಸ್ತಪೂರ್ವ ಮೂರನೆಯ ಶತಮಾನದಿಂದ ಇಂದಿನ ವರೆಗಿನ ಕನ್ನಡ ಲಿಪಿಯ ಪರಿಚಯವನ್ನು ಶಾಸನ ಮತ್ತು  ಹಸ್ತಪ್ರತಿಗಳ ಮೂಲಕ ಮಾಡಿಕೊಡುವ ಯೋಜನೆ ಇದೆ. ಹಸ್ತ ಪ್ರತಿಗಳ ಆನ್‌ಲೈನ್‌ಅಧ್ಯಯನ ಪ್ರಾರಂಭಿಸುವ ಸಾಧ್ಯತೆ ಇದೆ.ಆಸಕ್ತರು ಕೈಜೋಡಿಸಲು ಕರೆ ನೀಡಿದೆ.
 ಸಂಪರ್ಕ ವಿಳಾಸ
ಎಚ್‌.ಶೇಷಗಿರಿರಾವ್
ನಿರ್ದೇಶಕರು
ಹಸ್ತಪ್ರತಿವಿಭಾಗ
ಬಿ.ಎಂ ಶ್ರೀ ಸ್ಮಾರಕಪ್ರತಿಷ್ಠಾನ
ಬೆಂಗಳೂರು-೧೯
ಚರ ದೂರವಾಣಿ-9448442323
ಸ್ಥಿರದೂರವಾಣಿ-080-26613929
ಮಿಂಚಂಚೆ- appaaji@gmail.com

Tuesday, February 24, 2015

ಬ್ರಾಹ್ಮಿ ಲಿಪಿ


ಭಾರತೀಯ ಲಿಪಿಗಳ ಮಾತೆ ಬ್ರಾಹ್ಮಿ
                      ಭಾರತದಲ್ಲಿ ಈವರೆಗೆ ಅರ್ಥೈಸಿರುವ  ಅತಿಪುರಾತನ ಲಿಪಿಗಳಲ್ಲಿ ಬ್ರಾಹ್ಮಿ ಪ್ರಮುಖವಾದುದು. ಅದಕ್ಕೆ ಮುಂಚೆ  ಚಿತ್ರಲಿಪಿಗಳು ಮತ್ತು ಆದಿಮಾನವನ ಬರಹಗಳು ಕಂಡುಬಂದಿವೆ. ಆದರೆ ಪೂರ್ಣವಾಗಿ ಅರ್ಥೈಸಲು ಆಗಿಲ್ಲ ಹರಪ್ಪ  ನಾಗರೀಕತೆ ಪ್ರದೇಶದಲ್ಲಿ ದೊರೆತಿರುವ ಅನೇಕ ಲಿಪಿಗಳು ವಿಶೇಷವಾಗಿ ಮಡಕೆ ಚೂರು ಮತ್ತು ಮುದ್ರೆಗಳೂ. ಅವುಗಳ  ಮೇಲಿನ ಬರಹಗಳನ್ನು ಪೂರ್ಣವಾಗಿ ತಿಳಿಯಲಾಗಿಲ್ಲ.  ಬಹುಶಃ ಅವೇ ಈ  ಬ್ರಾಹ್ಮಿಲಿಪಿಯ ಉಗಮಕ್ಕೆ ಕಾರಣ ವಾಗಿರಬಹುದು. ಈಗ ಹರಪ್ಪ ಲಿಪಿಗಳಿಗೂ ಬ್ರಾಹ್ಮಿ ಲಿಪಿಗೂ ಇರುವ  ಸಂಬಂಧ ಕುರಿತಾದ ಸಂಶೋಧನೆ ಜಾರಿಯಲ್ಲಿದೆ. ಆದರೂ ಎರಡೂ ಲಿಪಿಗಳಲ್ಲಿ ಬಹಳ ವ್ಯತ್ಯಾಸವಿದೆ.  ಹರಪ್ಪ  ಲಿಪಿಗಳು ಭಾವಸೂಚಕಗಳು ಅವು ತಮ್ಮದೆ ಆದ ಧ್ವನಿ ಪ್ರತಿನಿಧಿಸುತ್ತವೆ. ಭಾವವನ್ನು ಸೂಚಿಸುವ ಚಿತ್ರಲಿಪಿಗಳು.ಪ್ರತಿ ಅಕ್ಷರವೂ ಬಹುಅರ್ಥ ಕೊಡಬಹುದು. ಆದರೆ ಬ್ರಾಹ್ಮಿ ಲಿಪಿಗಳಲ್ಲಿ ಪ್ರತಿ ಅಕ್ಷರವೂ ಸ್ವಂತ ಅರ್ಥ ಹೊಂದಿವೆ.ಮೂಲವನ್ನು ಅರಿಯುವ ಇನ್ನೊಂದು ವಿಧಾನವೆಂದರೆ ಬ್ರಾಹ್ಮಿ ಮತ್ತು ಜಗತ್ತಿನ ಇತರೆ ಲಿಪಿಗಳಿಗೆ ಇರುವ ಸಂಬಂಧ.
ಬ್ರಾಹ್ಮಿ ಲಿಪಿಯು ಭಾರತದ ವಿವಿಧ ಪ್ರದೇಶಗಳ ಪ್ರಾದೇಶಿಕ ಭಾಷೆಗಳ ಮಾತೆ.  ಅದರಲ್ಲಿ ಎರಡು ವಿಧ. ಉತ್ತರದದ ಮತ್ತು ದಕ್ಷಿಣದ ಬ್ರಾಹ್ಮಿ.ಅಶೋಕನ ಬ್ರಾಹ್ಮಿಲಿಪಿಯನ್ನು  ಸಂಸ್ಕೃತ, ಪ್ರಾಕೃತ ಮತ್ತು ಪಾಲಿ ಭಾಷೆಗಳನ್ನು ಬರೆಯಲು ಬಳಸಿದ್ದರು.. ಇನ್ನೊಂದು ದಕ್ಷಿಣದ  ತಮಿಳುಬ್ರಾಹ್ಮಿಅದರಿಂದಲೇ ದಕ್ಷಿಣಭಾರತದ ಭಾಷೆಗಳಲಿಪಿಗಳು ರೂಪಗೊಂಡವು. ಅವೆರಡೂ ಅಲ್ಲದೆ ಇನ್ನೊಂದು  ಕ್ರಿ.ಪೂರ್ವ ಅವಧಿಯಲ್ಲಿ ಅದೇ ಕಾಲದಲ್ಲಿ ಪ್ರಚಲಿತವಾಗಿದ್ದ ಲಿಪಿ ಇತ್ತು ಅದೇ ಖರೋಷ್ಠಿ. ಅದು ವಾಯವ್ಯಭಾರತ ಆಫ್ಘನಿಸ್ತಾನ ಮತ್ತು ಈಗಿನ ಪಾಕಿಸ್ತಾನ ಪ್ರದೇಶದಲ್ಲಿ ವ್ಯಾಪಕವಾಗಿತ್ತು .    
ಸಾಂಪ್ರದಾಯಿಕ ನಂಬುಗೆಯಂತೆ ಬ್ರಹ್ಮನೇ ಬ್ರಾಹ್ಮೀಲಿಪಿಯ ಜನಕ.ಬೌದ್ದರ ಲಲಿತ ವಿಸ್ತಾರ ಗ್ರಂಥದ ಪ್ರಕಾರ ಬುದ್ದನಿಗೆ ೬೪ ಲಿಪಿಗಳು ತಿಳಿದಿದ್ದವು.ಅದರಲ್ಲಿ ಬ್ರಾಹ್ಮೀ ಮತ್ತು ಖರೋಷ್ಠಿ ಸಹಾ ಸೇರಿವೆ. ಜೈನ ಗ್ರಂಥಗಳ ಪ್ರಕಾರ ಆದಿ ದೇವನು ತನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಮೊದಲನೆಯವಳಾದ ಬ್ರಾಹ್ಮಿಗೆ  ಲಿಪಿ ಮತ್ತು ಎರಡನೆಯವಳಿಗೆ ಗಣಿತ ಕಲಿಸಿದನು.ಅದರಿಂದಲೇ ಬ್ರಾಹ್ಮಿ ಎಂಬ ಹೆಸರು ಬಂದಿರಬಹುದು. ಅದರ ಕಾಲಮಾನ ಕ್ರಿ. ಪೂ. ೯ನೆಯಯ ಶತಮಾನ.
  
. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದವರೆಗೆ ಬ್ರಾಹ್ಮಿ ಮತ್ತು ಅದರಿಂದ ನಿಷ್ಪನ್ನವಾದ ಲಿಪಿಗಳಿಗೆ ವಿದ್ವಾಂಸರು ವಿವಿಧ ಹೆಸರಿನಿಂದ ಕರೆಯುತಿದ್ದರು.ಲಾತ್‌ ,ಲಾಟ್‌( ಸಂಸ್ಕೃತದಲ್ಲಿ ಯಾಸ್ತ ಅಂದರೆ ಅವು ಹೆಚ್ಚಾಗಿ ಸ್ಥಂಭದಮೇಲೆ ಕಂಡುಬರುತಿದ್ದವು.) ದಕ್ಷಿಣ ಅಶೋಕನ್‌ ಇಂಡಿಯನ್‌ಪಾಲಿ, ಮೌರ್ಯನ್‌ ಇತ್ಯಾದಿ.  ಅದಕ್ಕೆ ಬ್ರಾಹ್ಮಿ ಎಂಬ ಹೆಸರಿನ ಸೂಚನೆ ಮೊದಲು ಬೌದ್ಧರ ಮತ್ತು ಜೈನರ ಗ್ರಂಥಗಳ ಮೂಲಕ ಬಂದಿತು.ಲಿಲಾವತಿಸಾರ ಎಂಬ ಗ್ರಂಥದ ಚೀನೀ ಅನುವಾದವಾದ ವಿಶ್ವ ಕೋಶ  ಫಾಯಾನ್‌ಚು ಲಿನ್‌” ’ನಲ್ಲಿ . ಉಲ್ಲೇಖವಾದುದನ್ನು ಟೆರೀನ್ ಡಿ ಲಕೌಪರೀ ಯು ಗಮನಿಸಿದ ಎಡದಿಂದ ಬಲಕ್ಕೆ ಬರೆಯುವ ( ಇಂಡೊ ಪಾಲಿ ಲಿಪಿ ಬ್ರಾಹ್ಮಿ) ಮತ್ತು ಬಲದಿಂದ ಎಡಕ್ಕ ಬರೆಯುವ ಲಿಪಿ ( ಬ್ಯಾಕ್ಟ್ರೊ ಪಾಲಿ, ಅದರಿಂದ ಖರೋಷ್ಟಿ ) ಗುರುತಿಸಿಲಾಗಿದೆ.
                  ಬ್ರಾಹ್ಮಿ ಎಂಬ ಹೆಸರನ್ನು ಸ್ಥೂಲವಾಗಿ ಮತ್ತು ಅನುಕೂಲಕ್ಕಾಗಿ ಅಶೋಕನ ಲಿಪಿಗಳನ್ನು ಮತ್ತು ಅದರಿಂದ ನಿಷ್ಪನ್ನವಾದ ಲಿಪಿಗಳನ್ನು 6ನೆಯ ಶತಮಾನದ ಗುಪ್ತರ ಅವಧಿಯವರೆಗೆ ಬಳಕೆ ಮಾಡಿದರು.ನಂತರ ವಿಭಿನ್ನವಾದ  ಪ್ರಾದೇಶಿಕ ಮತ್ತು ಸ್ಥಾನೀಯ ಲಿಪಿಗಳು ಅಭಿವೃದ್ಧಿ ಪಡೆದವು ಅವನ್ನು ಪ್ರತ್ಯೇಕ ಲಿಪಿಗಳೆಂದು ಪರಿಗಣಿಸಲಾಯಿತು. ಅವುಗಳು ಭೌಗೋಲಿಕ ವಿಭಿನ್ನತೆ ಹೊಂದಿದ್ದವು
  ಬ್ರಾಹ್ಮಿ ಲಿಪಿಯ ಮೂಲವು ಭಾರತೀಯ ಲಿಪಿಶಾಸ್ತ್ರದಲ್ಲಿ ಬಹು ಚರ್ಚಿತ ವಿಷಯವಾಗಿದೆ.  ಈ ಲಿಪಿಯ  ಮೂಲ  ಕುರಿತು    ಸ್ಥೂಲವಾಗಿ ಎರಡು ಅಭಿಪ್ರಾಯಗಳಿವೆ.
1.     ದೇಶೀಯ ಮೂಲ                2.     ವಿದೇಶಿ ಮೂಲ

                               ವಿದ್ವಾಂಸರಾದ ಅಲೆಕ್ಜಾಂಡರ್‌ ಕನ್ನಿಂಗ್‌ಹ್ಯಾಮ್‌, ಜಿ.ಎಚ್‌. ಓಜಾ, ಆರ್‌.ಬಿ ಪಾಂಡೆ ಮೊದಲಾದವರ ಪ್ರಕಾರ ಬ್ರಾಹ್ಮಿಯು ದೇಶಿಯ ಜನ್ಯ ಲಿಪಿ.ಆದರೆ ಅದರ ಬೆಳವಣಿಗೆಯ ಕುರಿತು ನಿರ್ಧಿಷ್ಟ ವಿವರಣೆ ಇಲ್ಲ ಆಂಗ್ಡನ್‌.ಎಸ್‌. ಹಂಟರ್‌ಜಿ.ಆರ್, ಕನ್ನಿಂಗ್‌ಹ್ಯಾಮ್ 1931,ರಲ್ಲಿ ಇಂಡಸ್‌ಲಿಪಿಯ ಮೂಲವನ್ನು ತಮಗೆ ದೊರಕಿದ ಒಂದು ಮುದ್ರೆಯ ಆಧರಿಸಿ, ಅದರ   ಮೂಲಕ  ವಿವರಣೆ ನೀಡಲು ಯತ್ನಿಸಿದರು.ಇದು ಚಿತ್ರಲಿಪಿಯಾಧಾರಿತವಾಗಿದ್ದು, ಹ-ಹಸ್ತ , ರ-ರಜ್ಜು ವ- ವೀಣೆಮ-ಮುಖ ಮೊದಲಾದ ಪದಗಳ ಮೊದಲ ಅಕ್ಷರಗಳು  ಸಂಕೇತವಾದವು.. ಈ ಲಿಪಿಯು ಅಶೋಕನ ಆಸ್ಥಾನದಲ್ಲಿ ಇದ್ದ  ವೈಯಾಕರಣಿಗಳ ಕೊಡುಗೆ ಎಂಬ ಸಿದ್ಧಾಂತ ಮಂಡಿಸಿದರು.ಎನ್‌.ಪಿ.  ರಷ್ಟೋಗಿಯವರು ವೇದ ಕಾಲದ ಜ್ಯಾಮಿತಿ ಚಿಹ್ನೆಗಳೇ ಬ್ರಾಹ್ಮಿ ಲಿಪಿಯ ಉಗಮಕ್ಕೆ ಕಾರಣ ಎಂಬ ವಾದ ಮಂಡಿಸಿದರು.ಡಾ. ಭಂಡಾರ್‌ಕರ್‌ ಅವರು ನವಶಿಲಾಯುಗದ ಕುಂಭಗಳ ಮೇಲೆ ಕಂಡು ಬರುವ ಚಿಹ್ನೆಗಳಿಂದ ಬ್ರಾಹ್ಮೀ ಜನಿಸಿರಬಹುದು ಎಂದಿರುವರು.
ಜೇಮ್ಸ್‌ ಪ್ರಿನ್ಸೆಪ್‌ನು ಮೊದಲ ಬಾರಿಗೆ ಬ್ರಾಹ್ಮಿಯ ಮೂಲ ಗ್ರೀಕ್‌ಲಿಪಿ ಎಂಬ ವಾದವನ್ನು ಮಂಡಿಸಿದ. ನಂತರ ಕೆ. ಒಟ್ಟೊಫ್ರೈಡ್‌ ಮುಲ್ಲರ್‌ಮತ್ತು ಜೆ ಹ್ಯಾವಲ್‌ರ ಅದನ್ನು ಪ್ರತಿಪಾದಿಸಿದರು. ಅವನು ಬ್ರಾಹ್ಮಿಯಆರು ಅಕ್ಷರಗಳು ( ,,, ,ಥ )ಮತ್ತು ನ ಗ್ರೀಕ್‌ನಿಂದ ನಿಷ್ಪನ್ನವಾಗಿವೆ ಎಂಬುದನ್ನು  ಸಾಧಿಸಲು ಯತ್ನಿಸಿದನು. ಅವುಗಳ ಸಂವಾದಿ ಅಕ್ಷರಗಳನ್ನು ಗ್ರೀಕ್‌ನಲ್ಲಿ ಗುರುತಿಸಿದ. ಅದರಂತೆ ಇತರೆ ಅಕ್ಷರಗಳು ಖರೋಷ್ಟಿ ಮತ್ತು ಅರಾಮಿಕ್‌ ಲಿಪಿಗಳ ಮೂಲದವೆಂದು ಮಂಡಿಸಿದ. ಫಾಕ್‌ನ ಪ್ರಕಾರ ಅಶೋಕನ ಕಾಲದಲ್ಲಿ ಉದ್ದೇಶ ಪೂರ್ವಕವಾಗಿ ಖರೋಷ್ಟಿ ಮತ್ತು ಗ್ರೀಕ್‌ ಲಿಪಿ ಮಾದರಿಯಲ್ಲಿ ಬ್ರಾಹ್ಮಿ ಲಿಪಿ ರೂಪಿಸಲಾಯಿತು ಎಂದು ವಾದಿಸಿದ. ವಿಶೇಷವಾಗಿ ಬರಹದ ದಿಕ್ಕು,ಹ್ರಸ್ವ ಮತ್ತು ದೀರ್ಘ ಸ್ವರಗಳ ವ್ಯತ್ಯಾಸ, ಮತ್ತು ಕೆಲ ಅಕ್ಷರಗಳ ನಿರ್ಧಿಷ್ಟ ಸ್ವರೂಪ ವಿಶೇಷವಾಗಿ ಬ್ರಾಹ್ಮಿಯ ಮತ್ತು ಗ್ರೀಕ್‌ನ ತೀಟ ,ಬ್ರಾಹ್ಮಿಯ     ಮತ್ತು ಗ್ರೀಕ್‌   ಗಮ್ಮಾ ಗಳ ಸಾಮ್ಯತೆ ಯನ್ನು ಎತ್ತಿತೋರಿಸಿದ.
ಆದಾಗ್ಯೂ ಇವು ಅಪವಾದವಾಗಿರಬಹುದು ಮತ್ತು ಹ್ರಸ್ವ ಮತ್ತು ಧೀರ್ಘ ಸ್ವರಗಳ ಸಾಮ್ಯತೆಯು ಗ್ರೀಕ್‌ ಪ್ರಭಾವಕ್ಕೆ ಒಳಗಾಗುವ  ಸಾಧ್ಯತೆ ಕಡಿಮೆ. ಸ್ವರಗಳ ವ್ಯತ್ಯಾಸವು ದೇಶೀಯವಾಗಿಯೇ ಇರಬಹುದು ಕಾರಣ.


  ಸ್ವರಗಳು






ಹ್ರಸ್ವ ಮತ್ತು ಧೀರ್ಘ ಸ್ವರಗಳು ವ್ಯತ್ಯಾಸವು  ಪೂರ್ಣವಾಗಿ ಮೂಲದ ತುಸು ಬದಲಾವಣೆಯಿಂದ ನಂಥೃ ರೂಪಿತವಾಗಿವೆ  ( ಆದರೆ ಗ್ರೀಕ್‌ ಸ್ವರಗಳುಅವುಗಳನ್ನು ಪೂರ್ಣವಾಗಿ ವಿಭಿನ್ನ ಸಂಬಂಧವಿಲ್ಲದ ಸಂಕೇತಗಳೇ ಪ್ರತಿನಿಧಿಸುತ್ತವೆ. ( (e)/ ()). ಸ್ವರಗಳ ಸಂಕೇತಗಳ ಸ್ವರೂಪವನ್ನು ವಿವೇಚಿಸಿದರೆ ಬ್ರಾಹ್ಮಿಯು ಗ್ರೀಕ್‌ಮೂಲದ್ದು ಎನ್ನುವ ವಾದ ಬಿದ್ದು ಹೋಗುತ್ತದೆ..


:  ಲೆನೊ ರ್ಮಾಂಟ್ 1875 ರಲ್ಲಿ  ಮತ್ತು ಡೀಕೆ  1877ರಲ್ಲಿ . ಕೆಲವು ಬ್ರಾಹ್ಮಿ ಅಕ್ಷರಗಳು ಮತ್ತು  ಅವಕ್ಕೆ ಸಂವಾದಿಯಾದ ದಕ್ಷಿಣ ಅರೆಬಿಯಾದ ಹಿಮಾಯರಿಟಿಕ್‌ ಅಕ್ಷರಗಳ ನಡುವಿನ ಹೋಲಿಕೆಯನ್ನು ಗಮನಿಸಿದರು. ಐಸಾಕ್‌ಟೇಲರ್‌ನು ಅವುಗಳ ತುಲನಾತ್ಮಕ  ಕೋಷ್ಠಕವನ್ನೇ ತಯಾರಿಸಿದನು. ಅವನ ವಾದದ ಪ್ರಮುಖ ಅಂಶ ಲಿಪಿಗಳನ್ನು ಬರೆಯುವ ದಿಕ್ಕು.ಮತ್ತು ಕೆಲವು ಅಕ್ಷರಗಳ ಹೋಲಿಕೆ. ಬ್ರಹ್ಮಿಯ  ba   ಮತ್ತು ಸಬಿಯನ್‌ betda , daletma ಮತ್ತು memಇತ್ಯಾದಿ.  ಟೇಲರ್‌ ಐತಿಹಾಸಿಕ ಮತ್ತು ಭೌಗೋಳಿಕ ಆಧಾರದ ಮೇಲೆ ತನ್ನ ವಾದನ್ನು ಮಂಡಿಸಿದ.. “ಕ್ರಿ. ಪೂ. 10ನೆಯ ಮತ್ತು ಶತಮಾನದಿಂದ 3ನೆಯ ಶತಮಾನದ ವರೆಗೆ ಯೆಮೆನ್‌ ಭಾರತೀಯ ವಸ್ತುಗಳನ್ನು ಯುರೋಪಿನೊಡನೆ ವಿನಿಮಯ ಮಾಡಿಕೊಳ್ಳುವ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿತ್ತು”. ಆದ್ದರಿಂದ ಅಲ್ಲಿ ಭಾರತೀಯ ಮತ್ತು ಸಬಿಯನ ಅಕ್ಷರಗಳ ಚಲಾವಣೆಗೆ ಅವಕಾಶ ಹೆಚ್ಚಾಗಿದ್ದಿತು.ಈ ಎಲ್ಲ ಅನುಕೂಲಗಳ ಜೊತೆ ಈ ವಾದದಲ್ಲಿ ಕೆಲವು ದೋಷಗಳೂ ಇವೆ.ಬರಹದ ದಿಕ್ಕು ಕುರಿತಾದ ವಾದ ನಿಲ್ಲುವುದಿಲ್ಲ. ಅಲ್ಲದೆ ಎರಡರಲ್ಲೂ ಹೋಲಿಕೆ ಇರುವ ಕೆಲವು ಅಕ್ಷರಗಳು ಇರುವುದು ಬ್ರಾಹ್ಮಿಯು ಸೆಮಿಟಿಕ್‌ನಿಂದ ಜನಿಸಿತು ಎಂದು ಹೇಳಲು ಆಗುವುದಿಲ್ಲ ಅಲ್ಲದೇ ಅವೆರಡೂ ಒಂದು ಸಾಮಾನ್ಯವಾದ ಇನ್ನೊಂದು ಪುರಾರತನ ಲಿಪಿಯಿಂದ ಜನಿಸಿರಬಹುದು.ಅವುಗಳ ಚಾರಿತ್ರಿಕ ಮತ್ತು ಭೌಗೋಲಿಕ ಸಂಬಂಧದ ವಾದವೂ ಗಟ್ಟಿಯಾಗಿ ನಿಲ್ಲದು ಕಾರಣ ಅವುಗಳ ಪ್ರಾಚೀನತೆಯ ಬಗೆಗೆ ಇನ್ನೂ ಖಚಿತತೆ ಇಲ್ಲ.
ಫೊನಿಷಿಯನ್‌: ಉಲ್ರಿಚ್‌ ಫೆಡ್ರಿಕ್‌ಕೊಪ್‌  1821 ರಲ್ಲಿಐ ಇಂಡಿಕ್‌ ಲಿಪಿಗಳಿಗೂ ಮತ್ತು ಉತ್ತರ ಸೆಮಿಟಿಕ್‌ಲಿಪಿಗಳಿಗೂ ಇರುವ ಹೋಲಿಕೆ,,ಗಮನಿಸಿದ್ದನು.ಅದರ ಮೇಲೆ ಅಧಿಕೃತವಾಗಿ ಕೆಲಸ ಮಾಡಿದ್ದು ಅಲ್ಬರ್ಟ ವೇಬರ್‌. ಅವನು ಫೊನಿಷಿಯನ್‌ ಲಿಪಿ ಮತ್ತು ಬ್ರಾಹ್ಮಿಲಿಪಿಗಳ  ನಡುವಿನ ಹೋಲಿಕೆಯ ವಿವರ ಅಧ್ಯಯನ ಮಾಡಿದ. ಬುಹ್ಲರ್‌ ಉತ್ತರ ಸೆಮಿಟಿಕ್‌ ಲಿಪಿಗಳ ಗುಂಪಿನಿಂದ  ತುಸು ಬದಲಾಯಿಸಿ ಬ್ರಾಹ್ಮಿಲಿಪಿಗಳನ್ನು ರೂಪಿಸುವ ಯತ್ನದ ಅವನ ವಿಧಾನವನ್ನು ವಿದ್ವಾಂಸರು ತೀಷ್ಣವಾಗಿ ಟೀಕಿಸಿದರು.  ಒಝಾರ ಪ್ರಕಾರ ಈ ವಿಧಾನದಿಂದ ಯಾವುದೇ ಲಿಪಿಯಿಂದ ಮತ್ಯಾವುದೇ ಲಿಪಿಯನ್ನು ಪಡೆಯಲು ಸಾಧ್ಯ ಎಂದು ತೋರಿಸಿದರು .ಇನ್ನೊಂದು ಅಂಶವೆಂದರೆ ಸೆಮಿಟಿಕ್‌ಲಿಪಿಗಳನ್ನು  ಬಲದಿಂದ ಎಡಕ್ಕೆ ಬರೆಯುವರು. ಅದೇ ಬ್ರಾಹ್ಮಿ  ಲಿಪಿಯು ಎಡದಿಂದ ಬಲಕ್ಕೆ ಬರೆಯಲಾಗುವುದು.ಬುಹ್ಲರ್‌ತನ್ನ ವಾದದ ಆಧಾರವಾಗಿ ಮಧ್ಯಪ್ರದೇಶದ  ಎರಾನ್‌ನಲ್ಲಿ ದೊರೆತ ನಾಣ್ಯದ ಮೇಲಿನ ಬರಹದ ಉಲ್ಲೇಖ ನೀಡಿದ.ಅದರಲ್ಲಿಬರಹವು ಎಡದಿಂದ ಬಲಕ್ಕೆ ಇದೆ.ಆದರೆ ಇದು ಅತಿ ವಿರಳವಾದ ಸಂದರ್ಭ ಆದ್ದರಿಂದ ಸಾಮಾನ್ಯವಾದುದಲ್ಲ.ಆದರೆ ಇತ್ತೀಚೆಗೆ ದೊರೆತಿರುವ ಎರ್ರಾಗುಡಿ ಅಶೋಕನ ಶಾಸನ, ( ಆಂಧ್ರ ಪ್ರದೇಶ) ಮತ್ತು ಶ್ರೀಲಂಕಾದ ಗುಹೆಗಳಲ್ಲಿನ  ಬರಹಗಳು  ಬಲದಿಂದ ಎಡಕ್ಕೆ ಇವೆ.ಮತ್ತು ಇದರಿಂದ ಪುರಾತನ ಸೆಮಿಟಿಕ್‌ಲಿಪಿಗಳ ಬರಹದ ವಿಧಾನದ ಪ್ರಭಾವ ಇರುವುದು ಕಂಡು ಬರುವುದು. ಆದರೆ ಶ್ರೀಲಂಕಾದ ಬರಹಗಳ ಅಶೋಕನ ಕಾಲಕ್ಕಿಂತ ಈಚಿನವು ಆದ್ದರಿಂದದ ಅವು ಸ್ಥಳೀಯ ಬದಲಾವಣೆಗಳು ಎಂದು ಳ್ಳಬಹುದು. ಅಲ್ಲದೆ ಬರಹದ ದಿಕ್ಕು ಒಂದನ್ನೇ ಏಕಮಾತ್ರ ಅಂಶವಾಗಿ ಪರಿಗಣಿಸಬಾರದು . ಕಾರಣ ಅನೇಕ ಸೆಮಿಟಿಕ್‌ನಿಂದ ಹುಟ್ಟಿದ ಲಿಪಿಗಳನ್ನು ಕೂಡಾ ಅದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಬರೆಯಲಾಗುತ್ತಿದೆ. ಅದಕ್ಕೂ ಮಿಗಿಲಾಗಿ ಸೆಮೆಟಿಕ್‌ ಲಿಪಿಗಳಲ್ಲಿ  ಸ್ವರಗಳು ಇಲ್ಲ.  ಬ್ರಾಹ್ಮಿಯಲ್ಲಿ ಸ್ವತಂತ್ರ ಸ್ವರ ಸಂಕೇತಗಳಿವೆ.
 ಎ.ಸಿ. ಬರ್ನೆಲ್‌  1874ರಲ್ಲಿ ಈ ಸಿದ್ಧಾಂತವನ್ನು ಮುಂದಿಟ್ಟನು ಬ್ರಾಹ್ಮಿಯು ಅರಮೇಯಿಕ್‌ ಲಿಪಿ ಪ್ರಭಾವ ಹೊಂದಿದೆಯೇ ವಿನಃ  ಅದರಿಂದ ಜನಿಸಿದ್ದಲ್ಲ.ಅನೇಕ ಬ್ರಾಹ್ಮಿ ಅಕ್ಷರಗಳನ್ನು ಅರೆಮಿಕ್‌ನಿಂದ  ಫೊನಿಷಿಯನ್‌ಗಿಂತ ಹೆಚ್ಚಾಗಿ ರೂಪಿಸಬಹುದು.ಐತಿಹಾಸಿಕವಾಗಿ ಮತ್ತು ಕಾಲಾನುಗತವಾಗಿಯೂ ಈ ವಾದವು ಸಬಲವಾಗಿದೆ. ಅರಮೇಯಿಕ್ ಬಾಷೆ ಮತ್ತು ಲಿಪಿಯನ್ನು ವ್ಯಾಪಕವಾಗಿ  ಪೂರ್ವದ ಮತ್ತು ಇರಾನಿನ ಪ್ರದೇಶಗಳಲ್ಲಿ ಬಳಸಲಾಗುತಿತ್ತು.ಅಕಾಮೆನಿಯನ್ ಸಾಮ್ರಾಜ್ಯದ ಆಡಳಿತ ಭಾಷೆಯನ್ನಾಗಿ ಬಳಸಲಾಗುತಿತ್ತು. ಅದೂ ಅಲ್ಲದೆ ಆರು ಅರಾಮಿಕ್‌ಲಿಪಿಯಲ್ಲಿನ ಮೌರ್ಯರ ಶಾಸನಗಳು  ಈ  ವಾದಕ್ಕೆ ಬೆಂಬಲ ನೀಡುತ್ತವೆ.ಆದರೆ ಮೊದಲು ಖರೋಷ್ಠಿಯು ಹುಟ್ಟಿದನಂತರ ಅದರಿಂದ ಬ್ರಾಹ್ಮಿ ಜನಿಸಿತು ಎನ್ನುವುದು ಸರಿ ಎನಿಸುವುದಿಲ್ಲ ಕಾರಣ ಪೂರ್ಣ ಭಿನ್ನವಾದ ಲಿಪಿಯೊಂದು ರೂಪಗೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಆ ವಾದ ನಿಲ್ಲುವುದಿಲ್ಲ.
ಮೇಲಿನ ಎಲ್ಲ ಚರ್ಚೆಯಿಂದ ವ್ಯಕ್ತವಾಗುವುದು ಏನೆಂದರೆ ಅದರ ಮೂಲವನ್ನು ಖಚಿತವಾಗಿ ಹೇಳಲಾಗುದು. ಅದಕ್ಕೆ ಇನ್ನೂ ಬಲವಾದ ಆಧಾರಗಳು ಅಗತ್ಯ.ಮೇಲ್ನೋಟದ ಹೋಲಿಕೆಯಿಂದ ಏನನ್ನು ನಿರ್ಧರಿಸಲಾಗುವುದು.. ಅನೇಕ ಸಾಧ್ಯತೆಗಳಿವೆ.ಅವೆರಡೂ ಒಂದೇ ಮೂಲದಿಂದ ಬಂದವಾಗಿರಬಹುದು ಅಥವ ಪರಸ್ಪರ ಪ್ರಬಾವ ಬೀರಿಬಹುದು. ಅವುಗಳ ಪ್ರಾದೇಶಿಕ  ಪ್ರಭಾವವು ವಿಕಾಸಕ್ಕೆ ಕಾರಣವಿರಬಹುದು . ಇವೆಲ್ಲದರಲ್ಲಿ ಅರಾಮಿಕ್‌ಮೂಲವೇ  ಹೆಚ್ಚು ಸಂಭವನೀಯ ಎನಿಸಿದೆ. ಆದರೂ ಪ್ರತಿ ಅಕ್ಷರದ ಉಗಮವನ್ನು ನಿರ್ಧರಿಸುವುದ ಸಾಧ್ಯವೆನಿಸುವುದಿಲ್ಲ.

ಬ್ರಾಹ್ಮಿಯ ಮೂಲದ ಬಗ್ಗೆ ಏನೆ ಚರ್ಚೆಇದ್ದರೂ ಆಧುನಿಕ ಭಾರತೀಯ ಭಾಷೆಗಳ ತಾಯಿ ಬ್ರಾಹ್ಮಿ ಎಂಬುದು ಸುಸ್ಪಷ್ಟ. ಅದನ್ನು ವರ್ಣಮಾಲೆಯೇ ದೃಢಪಡಿಸುವುದು
ಸ್ವರಗಳು
ಅಶೋಕನ ಕಾಲ  (  ಕ್ರಿ.ಪೂ.304–232 ) ದಿಂದಲೇ ನಮಗೆ ಖಚಿತವಾದ ಬ್ರಾಹ್ಮಿ ಲಿಪಿಗಳು ದೊರಕಿವೆ.

ಸ್ವರಗಳು

ಕಾಲಾನುಕ್ರಮದಲ್ಲಿ  ದೀರ್ಘಾಕ್ಷರಗಳೂ ಸೇರಿದವು.



ಪ್ರಾಚೀನ ಅಶೋಕನ ಲಿಪಿಗಳಲ್ಲಿ ಆರು ಸ್ವರಗಳು ಮಾತ್ರ ಇವೆ. ಈ, ಊ ,ಋ ಏ, ಐ,  ಕಾಲುಕ್ರಮದಲ್ಲಿ ಬಂದು ಸೇರಿವೆ.ಅನುನಾಸಿಕ ಇದ್ದಿತು ಇ, ಉ, ಎ ಓ ಗಳನ್ನು ಸಂದರ್ಭಾನುಸಾರ ಹ್ರಸ್ವ ಅಥವ ಧೀರ್ಘ ಸ್ವರವಾಗಿ ಓದಿಕೊಳ್ಳ ಬೇಕಾಗುತಿತ್ತು.
ವರ್ಗೀಯ ವ್ಯಂಜನಗಳು ೨೫



ಅವರ್ಗೀಯ ವ್ಯಂಜನಗಳು  ೮

   ಅವರ್ಗೀಯ ವ್ಯಂಜನಗಳು  ೮
 ಬ್ರಾಹ್ಮೀ ಲಿಪಿಯನ್ನು ಮೂಲತಃ ಪ್ರಾಕೃತ ಭಾಷೆಯನ್ನು ಬರೆಯಲು ಬಳಸಿದರು. ಆದ್ದರಿಂದಮೊದಮೊದಲ ಲಿಪಿಯಲ್ಲಿ  ಋ. ಔ ಮತ್ತು ಳ ಅಕ್ಷರಗಳು ಕಂಡು ಬರುವುದಿಲ್ಲ
 ಈಗಿನ ರೂಪಾಂತರಿತ ಲಿಪಿಗಳ ಗ ಮತ್ತು ಸ ಗಳು ಮಾತ್ರ ತುಸು ಮಟ್ಟಿಗೆ ಮೂಲ ಅಕ್ಷರಗಳನ್ನು ಹೋಲುತ್ತವೆ.
ಕಾಗುಣಿತ  ಬಹು ಸರಳವಾಗಿ ರೂಪಿಸುತಿದ್ದರು ವ್ಯಂಜನಗಳಿಗೆ ಮೇಲೆ ಅಥವ ಕೆಳಗೆ ಎಡ,  ಅಥವಾ ಬಲ ಭಾಗದಲ್ಲಿ ಸಣ್ಣ ಗೆರೆಗಳನ್ನು ಸೇರಿಸಲಾಗುತಿತ್ತು.


  ಬ್ರಾಹ್ಮೀ ಲಿಪಿಯ ಆಯ್ದ ಅಕ್ಷರಗಳ ಬಳ್ಳಿ ( ಕಾಗುಣಿತ)

ಇದೇ ರೀತಿಯಲ್ಲಿ ಎಲ್ಲ ವ್ಯಂಜನಗಳಿಗೂ ಕಾಗುಣಿತವನ್ನು ಬರೆಯಬಹುದು.



   ಒತ್ತಕ್ಷರಗಳಿಗೆ ಪ್ರತ್ಯೇಕ ಚಿಹ್ನೆಗಳಿರಲಿಲ್ಲ.
,ಯಾವುದೇ ಒತ್ತಕ್ಷರದ ಕೆಳಗೆ ಮೇಲಿನ ಅಕ್ಷರಕ್ಕ ಅಂಟಿಕೊಂಡಂತೆ ಚಿಕ್ಕದಾಗಿ ಬರೆಯುವುದರಿಂದ ಸಂಯುಕ್ತಾಕ್ಷರಗಳ ರಚನೆ ಯಾಗುವುದು
   
             
ಗುಹಾಶಾಸನದಲ್ಲಿನ ಒಂದು ಸಾಲು










ಭಾರತದಲ್ಲಿ ಕ್ರಿ. ಪೂ. ಸಹಸ್ರಾರುವರ್ಷಗಳಿಂದ ಸಮೃದ್ಧ ಸಾಹಿತ್ಯವಿದರೂ ಅವೆಲ್ಲ ಮೌಖಿಕವಾಗಿದ್ದವು. ವೇದಗಳ ಕಾಲ ಕ್ರಿ. ಪೂರ್ವ ೧೭೦೦ರಿಂದ ೧೧೦೦. ಆದರೆ ಅವು ಲಿಪಿಯಾಗಿ ಇಳಿಯಲಿಲ್ಲ. ರಾಮಾಯಣದ   ಕಾಲ ಕ್ರಿ. ಪೂ ೫ – ೪ ನೆಯ ಶತಮಾನ.  ಗ್ರೀಕ್‌    ಮಹಾಕಾವ್ಯಗಳೆರಡರನ್ನೂ ಒಟ್ಟುಗೂಡಿಸಿದರೂ  ಅದರ ಅರ್ಧದಷ್ಟೂ ಇಲ್ಲ. ಹಾಗಿದ್ದರೂ ಲಿಪಿ ಇರಲಿಲ್ಲ., ಅದೇ ಅವಧಿಯ ಕಾಳಿದಾಸ, ಪಾಣಿನಿ,  ಪತಂಜಲಿ ಮತ್ತು ಕೌಟಿಲ್ಯ ಕ್ರಿ. ಪೂ. ಶತಶತಮಮಾನಗಳ ಹಿಂದೆಯೆ  ಗ್ರಂಥ ರಚನೆ ಮಾಡಿದ್ದರೂ ನಮಗೆ ಲಿಪಿ ದೊರಕುವುದ ಮಾತ್ರ  ಅಶೋಕನ ಕಾಲದಿಂದ ಈಚೆಗೆ.ಕಾರಣ ಬರವಣಿಗೆ ನಿಷಿದ್ಧವೆನ್ನುವ ಅಂದಿನ ನಂಬಿಕೆ.  ಅಶೋಕನು ಬೌಧ್ಧ ಧರ್ಮವಾವಲಂಬಿಯಾದ ಮೇಲೆ ಆ ನಿಷೇಧದಿಂದ ಹೊರ ಬಂದು ಮೊದಲ ಬಾರಿಗೆ ಶಾಸನ ಗಳನ್ನು ಸ್ತಂಭ, ಗುಹೆ ಮತ್ತು ಬಂಡೆಗಳ ಮೇಲೆ ಬರೆಸ ತೊಡಗಿದ. ಆದ್ದರಿಂದ  ಅವೇ ನಮಗೆ ದೊರೆತಿರುವ ಲಿಪಿಯ ಅತಿಪ್ರಾಚೀನ ಮಾದರಿಗಳು. ಅವುಗಳ ಭಾಷೆ ಬೇರೆ ಬೇರೆ ಯಾದರೂ ಲಿಪಿ ಮಾತ್ರ ಒಂದೇ ಅದೇ ಬ್ರಾಹ್ಮೀಲಿಪಿ.  ಆ ಲಿಪಿಗಳು ಮುಂದೆ ಮಾರ್ಪಾಟು ಹೊಂದುತ್ತಾ  ಭಾರತ ಮತ್ತು ದಕ್ಷಿಣ ಏಷಿಯಾದಲ್ಲಿ ಅನೇಕ ಲಿಪಿಗಳಾಗಿ ರೂಪಗೊಂಡವು. ಬ್ರಾಹ್ಮೀ ಲಿಪಿಯ ಹಲವುಶಾಸನಗಳನ್ನು ಗಮನಿಸ ನಂತರ ಕ್ರಮೇಣ ಕನ್ನಡ ಲಿಪಿ  ಹಲವು ಹಂತದಲ್ವಿಲಿಕಾಸವಾದುದನ್ನು ಅರಿಯೋಣ.
























Wednesday, January 14, 2015

ಶುಭಾಶಯಗಳು


 ಸರ್ವರಿಗೂ  ಸಂಕ್ರಾಂತಿಯ ಶುಭಾಶಯಗಳು











‌ಎಚ್‌. ಶೇಷಗಿರಿರಾವ್




Thursday, January 8, 2015

ಕುಂಭಕೋಣಂ ಡಿಗ್ರೀ ಕಾಫಿ





                                     ಕುಂಭಕೋಣಂ ಡಿಗ್ರಿ ಕಾಫೀ

ನಮ್ಮ ನಾಡಿನಲ್ಲಿ ವೈವಿದ್ಯತೆಯಲ್ಲಿ ಏಕತೆ ಇದೆ.ಅದೂ ವಿಶೇಷವಾಗಿ ಭಾಷೆ, ಜಾತಿ, ಮತ, ಜನಾಂಗ, ಉಡುಗೆ  ತೊಡುಗೆಗಳಿಗೆ ಪ್ರಾದೇಶಿಕ ಸೊಗಡು ಇದೆ.  ವಿಶೇವಾಗಿ ಆಹಾರ ಪದಾರ್ಥಗಳಂತೂ ಆ ಪ್ರದೇಶದ ಹೆಸರಿನಲ್ಲಿ ಜನಪ್ರಿಯವಾಗಿರುವವು.ದಾವಣಗೆರೆ ಬೆಣ್ಣೆ ದೋಸೆ, ಕೊಟ್ಟೂರು ಮಿರ್ಚಿ, ಗೋಕಾಕದ ಕರದಂಟು, ಧಾರವಾಡದ ಪೇಢೆ, ಬೆಳಗಾಂನ ಕುಂದ, ಮದ್ದೂರಿನ ವಡೆ, ಮೈಸೂರು ಪಾಕು ಮಂಗಳೂರು ಬೋಂಡ , , ಹೀಗೆ ಸಾಲಿಗೆ ಸಾಲು ಹೆಸರುಗಳು ಇವೆ.  ತಮಿಳುನಾಡಿನ ಪ್ರವಾಸಕ್ಕೆ ಹೋದಾಗ ಒಂದು ಇದೇ ರೀತಿಯ  ವೈಶಿಷ್ಟ್ಯ ಗಮನಕ್ಕೆ ಬಂದಿತು. ಕಂಚಿಪುರಂ ಇಡ್ಲಿ, ತಿರುನಲ್ವೇಲಿಹಲ್ವಾ,ಕಡಂಬೂರು ಪೋಳಿ ತಂಜಾವೂರು ಅಡೈ ಇತ್ಯಾದಿ ಆದರೆ , ಅದು ಬರಿ ಜನಪ್ರಿಯ ಮಾತ್ರವಲ್ಲ ಬ್ರಾಂಡ್‌ ಆಗಿ ಅದರ ಹೆಸರಲ್ಲಿಕೋಟ್ಯಾಂತರ ರೂಪಾಯಿ ವ್ಯವಹಾರ, ವೈವಾಟಿಗೆ ಮೂಲವಾಗಿರುವು ಮಾತ್ರ  ಅಚ್ಚರಿ ತಂದಿತು. ಅದೇ ಕುಂಬಕೋಣಂ ಡಿಗ್ರೀ ಕಾಫಿ.
ಕುಂಭ ಕೋಣಂ ಇತಿಹಾಸ ಕಾಲದಿಂದಲೂ ವಿದ್ವತ್‌ ಕೇಂದ್ರವೆಂದು ಹೆಸರಾಗಿದೆ. ಅದರಲ್ಲೂ ಇದು ಗಣಿತಜ್ಞ ರಾಮಾನುಜಂ ಜನಿಸಿದ ಊರು. ಜೊತೆಗ ಟೆಂಪಲ್‌ ಸಿಟಿ ಎಂಬ ಬಿರದೂ ಇದೆ.ಇತ್ತೀಚೆಗೆ ಕುಂಭಕೋಣಂ ಮಾಡಿದ ಎಂದರೆ ನಯವಂಚಕ ಎಂದೂ ರೂಢಿಗತವಾಗಿದೆ..  ಅದು ಊರ ವಿಷಯವಾದರೆ  ತಮಿಳುನಾಡಿನ ಹೈವೇಯಲ್ಲಿ ಎಲ್ಲಿಯೇ ಹೋದರೂ ರಾರಾಜಿವ ಒಂದು ಹೆಸರೆಂದರೆ ಕುಂಭಕೋಣಂ ಡಿಗ್ರಿ ಕಾಫಿ. ಸರಿ ಸುಮಾರು ಎಲ್ಲ ನಗರಗಳಲ್ಲೂ ಈ ಹೆಸರು ಹೊತ್ತ ಹೋಟೆಲ್‌ಗಳು ಕಣ್ಣಿಗೆ ಬೀಳುವುದು ಸಾಮಾನ್ಯ.  ಹೈವೇನಲ್ಲಂತೂ  ( ಈಸ್ಟ ಕೋಸ್ಟ್‌ ರೋಡ್‌ ) ಹತ್ತಿಪ್ಪತ್ತು ಮೈಲಿಗೊಂದರಂತೆ ಈ ಹೆಸರಿನ ಹೋಟೆಲ್‌ಗಳ ಮುಂದೆ ಕಾರುಗಳ ಸಂದಣಿ ಸರ್ವೆ  ಸಾಮಾನ್ಯ.
ಒಂದೆರಡು ಹೋಟೆಲ್‌ಗಳಿಗೆ ಭೇಟಿ ನೀಡಿದಾಗ ತುಸು ವಿವರ ದೊರೆಯಿತು. ಹೋಟೆಲ್‌  ಕಟ್ಟಡಗಳು ಅಷ್ಟೇನೂ ಭವ್ಯವಾಗಿರುವುದಿಲ್ಲ ಜೊತೆಗೆ ತಿಂಡಿಗಿಂತ ಅಲ್ಲಿ ಕಾಫಿಯದೇ ಕಾರುಬಾರು.   ಒಂದು ರೀತಿಯಲ್ಲಿ ಈಗ ಪ್ರಚಲಿತವಿರುವ ದರ್ಶಿನಿಗಳಂತೆ ಹೋದೊಡನೆ ಕಣ್ಣೆದುರಿಗೆ ಕಾಫಿ ತಯಾರಿಸುವ ಫೀಲ್ಟರ್‌.  ಆಸನ ವ್ಯವಸ್ಥೆಗೂ ಒಳಾಂಗಣಕ್ಕಿಂತಲೂ ಹೊರಾಂಣವೇ ಎದ್ದು ಕಾಣುವುದು
ಇವೆಲ್ಲ ಕ್ಕಿಂತ ಎದ್ದು ಕಾಣುವುದು ದೂರದಿಂದಲೇ  ಗೋಚರವಾಗುವ ಬೋರ್ಢ.ಅಲ್ಲಿ ಹೋದಾಗ ತಕ್ಷಣವೇ ಕಾಫಿ ಸಿಗದು . ಐದು ಹತ್ತು ನಿಮಿಷ ಕಾಯಬೇಕಾಗುವುದು. ನಮ್ಮೆದುರಿಗೆ ಸಿದ್ದವಾಗುವ ಹಬೆಯಾಡುವ ಫಿಲ್ಟರ್‌ಕಾಫಿಯನ್ನು ಹಿತ್ತಾಳೆ ಲೋಟ ದಲ್ಲಿ ಹಾಕಿ ಬಟ್ಟಲಿನಲ್ಲಿ ಇಟ್ಟು ಕೊಡುವರು.ಆಧುನಿಕ ಕಪ್ಪು ಬಸಿ, ಗಾಜಿನ ಲೋಟಗಳಿಗೆ ಅಲ್ಲಿ ಪ್ರವೇಶವಿಲ್ಲ.ಇದು ಒಂದು ರೀತಿಯಲ್ಲಿ ಜ್ಯೂಸ್‌ ಸೆಂಟರ್‌ ಇದ್ದಂತೆ. ಅಲ್ಲಾದರೆ ಹಲವು ಹಣ್ಣಿನ ರಸ ಸಿಗಬಹುದು ಆದರೆಅಲ್ಲಿ ದೊರೆಯುವುದು ಒಂದೇ ಒಂದು ಐಟಂ. ಅದೇ  ಫಿಲ್ಟರ್‌ಕಾಫಿ..
ಇರ ಪ್ರಭಾವ ಎಷ್ಟಿದೆಯೆಂದರೆ ಸಂಪ್ರದಾಯಸ್ಥರಾದ ಪಂಚೆಶಾಲು ತ್ರಿಪುಂಡ ಧಾರಿಗಳಾದ  ಪುರುಷರೂ ಮತ್ತು, ಕಾಂಜೀವರಂ ರೇಷ್ಮೆ ಉಟ್ಟು ಹಣೆಯಲ್ಲಿ ಉದ್ದನೆಯ ಕುಂಕುಮ ತಲೆಯಲ್ಲಿ ಹೂ ಮುಡಿದ ಮಹಿಳೆಯರು ಎಗ್ಗಿಲ್ಲದೆ ಕಾಫಿ ಕುಡಿಯುವುದು ಕಂಡುಬರುವುದು. ಇನ್ನೊಂದು ಅಚ್ಚರಿ ಎಂದರೆ ಅಷ್ಟು ಬಿಸಿಯಾದ ಕಾಫಿಯನ್ನೂ ಅವರು ಹಿತ್ತಾಳೆಯ ಲೋಟದ ಅಂಚನ್ನು ತುಟಿಗೆ ತಗುಲಿಸದೆ ಎತ್ತಿ ಬಾಯಿಗೆ ಸುರಿದುಕೊಳ್ಳುವ ವಿಧಾನ.
ಈ ಕಾಫಿಯ ಹೆಸರಿನ ಮೂಲ ಬೆದಕಿದಾಗ ವಿಭಿನ್ನ ವಿವರಣೆಗಳು ದೊರೆತವು. ಕುಂಬಕೋಣಂನಲ್ಲಿ  ವಿಶೇಷವಾಗಿ ತಯಾರಿಸಿದ ಫಿಲ್ಟರ್‌ಕಾಫಿ ಎಂಬ ಪ್ರಥಮ  ಮಾಹಿತಿ ದೊರೆಯಿತು. ಅಲ್ಲಿ ಕಾಫಿ ಪುಡಿಗಿಂತ ಹಾಲಿಗೆ ಪ್ರಥಮ ಆದ್ಯತೆ. ವಿಶೇಷವಾಗಿ ಅವರು ಬಳಸುವುದು  ಹಸುವಿನ ತಾಜಾಹಾಲು. ಅದಕ್ಕೆ ನೀರು ಬೆರಸುವ ಹಾಗಿಲ್ಲ. ಹಾಲಿನ ಪರಿಶುದ್ಧತೆಯನ್ನು ಅಳೆಯಲು ಲ್ಯಾಕ್ಟೋ ಮೀಟರ್‌  ( ಡಿಗ್ರಿ) ಬಳಸಿ ಶುದ್ಧ  ಹಾಲು ಗುರುತಿಸಿ  ಅದರಿಂದ ಕಾಫಿ ಮಾಡುವರು.ಅದಕ್ಕೇ  ಆ ಹೆಸರು ಬಂದಿದೆ ಎಂಬ ವಾದ ವೂಇದೆ. ಇನ್ನೊಂದು     ವಿವರಣೆ ಎಂದರೆಫಿಲ್ಟರ್‌ನಲ್ಲಿ ಹಾಕುವ ಪುಡಿಯಯಿಂದ ಮೊದಲು ಇಳಿದ ಡಿಕಾಷನ್‌ ಅನ್ನು ಫಸ್ಟ ಡಿಗ್ರಿ  ಕಾಫೀ ಎಂನ್ನುವರು.ಅದನ್ನು ಹಣವಂತ ರಸಿಕರು ಮಾತ್ರ ಕುಡಿಯುವರು. ಉಳಿದವರು ಎರಡನೆಯ ಸಲ ಇಳಿದ ಡಿಕಾಷನ್‌ ಮತ್ತು  ಬಡವರು ಮೂರನೆ ಸಲ ಇಳಿದ ಕಾಫಿಯನ್ನು ಬಳಸುವರು. ಈ ರೀತಿ ಉತ್ತಮ ಗುಣ ಮಟ್ಟದ ಡಿಕಾಷನ್‌ ನಿಂದ ತಯಾರಾದುದನ್ನೇ ಫಸ್ಟ್‌ ಡಿಗ್ರೀ ಕಾಫೀ.ಎಂದು ಗುರುತಿಸುವರು. ಕಾಫೀ ಪುಡಿ ಮಾಡಲು . ಚಿಕ್ಕಮಗಳೂರಿನಿಂದ ತರಿಸಿದ ಕಾಫಿ ಬೀಜ ೭೫% ಮತ್ತು ಚಿಕೋರಿ ೨೫ % ಬೆರಸಿದ  ತಾಜಾಪುಡಿ ಮಾತ್ರ ಬಳಸುವರು.ಚಿಕೋರಿಯನ್ನು ಬಳಸುವುದರಿಂದ ತಮಿಳಿನ ಉಚ್ಚಾರಣೆಯಲ್ಲಿ ಚಿಕೋರಿಯು ಚಿಗೋರಿಯಾಗಿ ನಂತರ ಚಿಗ್ರಿ  ಕೊನೆಗೆ ಸಾಮಾನ್ಯರ ಬಾಯಲ್ಲಿ  ಡಿಗ್ರಿ ಆದುದರಿಂದ ಈ ಹೆಸರು.ಫಸ್ಟ ಡಿಗ್ರಿ  ಕಾಫಿ ಎಂದಾಗಿದೆ ಅನ್ನುವ ವಿವರಣೆಯೂ ಇದೆ.
 ಇದರ ತಯಾರಿಗೆ ಹತ್ತಾಳೆಯ  ಫಿಲ್ಟರ್‌ ಅನ್ನು ಬಳಸಲೇ ಬೇಕು.ಡಿಕಾಷನ್‌ ಅನ್ನು ಹಾಲಿಗೆ ಹಾಕುವುದಿಲ್ಲ. ಹಾಲನ್ನೇ ಡಿಕಾಷನ್‌ಗೆ ಹಾಕ ಬೇಕು.ಹಸುವಿನ ಶುದ್ಧ ಹಾಲನ್ನು ಮಾತ್ರ ಹಾಕುವರು. ನೀರು ಬೆರಸುವ ಹಾಗಿಲ್ಲ . ಡಿಕಾಷನ್‌ ಅನ್ನು ಮತ್ತೆ ಮತ್ತೆ ಕಾಯಿಸಿ ಬಳಸುವಂತಿಲ್ಲ. ಹಾಗೆ ಮಾಡಿದರೆ ಅದರ ಸ್ವಾದ ಕೆಡುವುದು. ಗ್ರಾಹಕರಿಗೆ ಕಾಫಿ  ಕೊಡುವುದಕ್ಕಿಂತ ಮುಂಚೆ ಹಿತ್ತಾಳೆ ಲೋಟ ಮತ್ತು ಬಟ್ಟಲುಗಳಿಂದ ಎರಡುಸಾರಿ ಎತ್ತರದಿಂದ ಕಾಫಿ ಸುರಿಯುವರು. ಅದನ್ನು ನೋಡಿದರೆ ಕಾಫಿಯನ್ನು ಮೀಟರ್‌ಲೆಕ್ಕದಲ್ಲಿ ಕೊಡುವರೇನೋ ಎನ್ನಿಸುವುದು. ಅದರಿಂದ ಲೋಟದಲ್ಲಿನ ಕಾಫಿಯ ಮೇಲ್‌ಮೈನಲ್ಲಿ ಹಾಲಿನ ನೊರೆ ಬರುವುದು.ಜೊತೆಗೆ ಕಾಫಿ ಪುಡಿಯನ್ನುನಿರ್ವಾತ ಬಾಟಲಿಯಲ್ಲಿ ಸಂಗ್ರಹಿಸುವರು. ಅನೇಕರು ಹತ್ತಿರದಲ್ಲಿಯೇ ಹಸು ಸಾಕಣೆ ಮಾಡಿರುವವರ ಜೊತೆ  ಒಪ್ಪಂದ ಮಾಡಿಕೊಂಡು ದಿನಕ್ಕೆ ಮೂರು ಬಾರಿ ಆಗಲೇ ಹಿಂಡಿದ ಹಾಲು ಪೂರೈಕೆ  ಆಗುವಂತೆ ವ್ಯವಸ್ಥೆ ಮಾಡಿ ಕೊಂಡಿರುವರು. ಯಾವುದೇ ಕಾರಣಕ್ಕೂ ಪಾಕೆಟ್‌ಹಾಲು ಬಳಸುವುದಿಲ್ಲ.. ನಕಲಿ ಹೋಟೆಲ್‌ಗಳೂ ಇವೆ. ಅದಕ್ಕೇ ತಮ್ಮದೇ ಆದ  ಹೋಟೆಲ್‌ ಚೈನ್‌ ತೆರೆದಿರುವರು.ಅನೇಕ ನಿಬಂದನೆಗಳನ್ನು ಹಾಕಿ ಲಕ್ಷಾಂತರ ಠೇವಣಿ ಪಡೆದು ಮೂಲಭೂತ ಸೌಕರ್ಯ ಒದಗಿಸಿ, ಗುಣ ಮಟ್ಟ ಪರೀಕ್ಷಿಸುವ ವ್ಯವಸ್ಥೆಮಾಡಿ ಪರಿಶುದ್ಧತೆ ಕಾಪಾಡುವ ಪ್ರಯತ್ನ ನಡೆದಿದೆ. ಅಂತೂ ತಮಿಳುನಾಡಿನ ಪ್ರವಾಸಿಗರ ಬಾಯಿಗೆ ಘಮಘಮ ಬಿಸಿ ಕಾಫಿ ಕೊಡುವ  ಈ ಕುಂಭಕೋಣಂ  ಡಿಗ್ರಿ ಕಾಫಿಯ ಉದ್ಧೇಶ ತಕ್ಕ ಮಟ್ಟಿಗೆ ಸಫಲವಾಗಿದೆ






Sunday, January 4, 2015

ಶ್ರೀ ಪ್ರಶಸ್ತಿ ಚಿತ್ರ ಸಂಪುಟ

                  ಬಿ. ಎಸ್  ಸಣ್ಣಯ್ಯ ಅವರಿಗೆ  ಶ್ರೀಸಾಹಿತ್ಯ ಪ್ರಶಸ್ತಿ                                                    ಪ್ರದಾನ


ಎಚ್‌.ಶೇಷಗಿರಿರಾವ್, ನಿರ್ದೇಶಕರು, ಹಸ್ತಪ್ರತಿವಿಭಾಗ














ಹಿರಿಯ ಸಂಶೋಧಕ, ಹಸ್ತ ಪ್ರತಿ ಸಂಗ್ರಾಹಕ , ಸಂಪಾದಕ ಮತ್ತು ಕೃತಿಕಾರ ಶ್ರೀ. ಬಿ.ಎಸ್‌ ಸಣ್ಣಯ್ಯ ಅವರಿಗೆ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನವು  ಶ್ರೀ ಸಾಹಿತ್ಯ ಪ್ರಶಸ್ತಿಯನ್ನು ಶನಿವಾರ  ಬಿ.ಎಂ.ಶ್ರೀ  ಅವರ ಜನುಮ  ದಿನದಂದು   ಇಂಡಿಯನ್‌ ಇನಸ್ಟಿಟ್ಯೂಟ್‌ ಅಫ್ ವರ್ಲ್ದ ಕಲ್ಚರ್‌ಸಭಾಂಗಣದಲ್ಲಿ  ನಾಡೋಜ ಡಾ. ಕಮಲಾ ಹಂಪನಾ ಪ್ರದಾನ ಮಾಡಿದರು..ತಮ್ಮ ಮತ್ತು  ಪುರಸ್ಕೃತರ ಅರವತ್ತು ವರ್ಷದ ಒಡನಾಟವನ್ನು ನೆನಪಿಸಿಕೊಂಡು ಎಲೆಯ ಮರೆಯ ಕಾಯಿಯಂತೆ ಪ್ರಚಾರದ ಹಂಬಲವಿಲ್ಲದೆ  ಶ್ರಮ,ಶ್ರದ್ಧೆ ಮತ್ತು ಆಳವಾದ ಪಾಂಡಿತ್ಯ ಅಗತ್ಯವಿರುವ ಕೆಲಸದಲ್ಲಿ ಜೀವನವನ್ನೇ ಮುಡುಪಾಗಿಟ್ಟು ಮಾಡಿದ ಅಪಾರ ಸಾಧನೆಯನ್ನು ಎತ್ತಿ ತೋರಿಸಿದರು.
ಡಾ. ವೈ.ಸಿ. ಭಾನುಮತಿಯವರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿನ ತಮ್ಮ ನಾಲ್ಕು ದಶಕದ ಅನುಭವದಿಂದ ಬಿ.ಎಸ್‌ ಸಣ್ಣಯ್ಯ ಅವರು ಹೇಗೆ ಹಸ್ತಪ್ರತಿ ಸಂಗ್ರಹಣೆ, ಸಂಪಾದನೆ ಮತ್ತು ಕೃತಿ ರಚನೆಗಾಗಿ ೩೨ ವರ್ಷ ಇಲಾಖೆಯಲ್ಲಿ ನಂತರ ೨೨ ವರ್ಷ ಸಂಶೋಧನಾ  ಸಂಸ್ಥೆಯಲ್ಲಿ ಅವಿರತ ಶ್ರಮಮಾಡಿ   ಹಸ್ತಪ್ರತಿಗಳಲ್ಲಿದ್ದ ಸಾಹಿತ್ಯ ಮತ್ತು ಶಾಸ್ತ್ರ ಗ್ರಂಥಗಳನ್ನು  ಬೆಳಕಿಗೆ ತಂದು  ಮಾಡಿರುವ ಸಾಹಿತ್ಯ ಸೇವೆಯಿಂದ ಸಂಶೋಧನ ಮತ್ತು ಸಂಪಾದನಾ  ರಂಗದ ದೊಡ್ಡಣ್ಣನಾಗಿರುವರು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ   ಎಂಬತ್ತೇಳರ ಹರಯದಲ್ಲೂ ಕೆಲಸ ಮಾಡಲು ಸಾಧ್ಯವಾಗಿರುವುದು ಗುರುಗಳಾದ ಡಿ.ಎಲ್‌ಎನ್ ಮತ್ತು ತ.ಸು. ಶಾಮರಾಯರ ಬೋಧನೆ, ಯಾವುದೇ ಕೆಲಸವಾದರೂ ನಿಷ್ಠೆ ಮತ್ತು ಶ್ರದ್ಧೆ ಯಿದ್ದರೆ ಸಾಧನೆ ಸಾಧ್ಯ, ಅದರಿಂದಾಗಿಯೇ ಮಿತ ಆದಾಯದಲ್ಲಿಯೂ ಮರಿಮಕ್ಕಳಾದಿಯಾಗಿ ಎಲ್ಲರೂ ನೆಮ್ಮದಿಯಿಂದಿರುವ  ಕುಟುಂಬ ತಮ್ಮದು ಎಂದರು. ಅಲ್ಲದೆ ಪ್ರತಿಷ್ಠಾನ ಮಾಡುತ್ತಿರುವ  ಉತ್ತಮ ಸೇವೆಗೆ ಒತ್ತಾಸೆಯಾಗಿ ತಮ್ಮಕೃತಿಗಳನ್ನು ಮತ್ತು ೨೫ ಸಾವಿರ ರೂಪಾಯಿಗಳ ಕೊಡುಗೆ ನೀಡಿದರು
ಕರುಣಾಳು ಬಾ ಬೆಳಕೆ ಎಂಬ ಬಿ.ಎಂ.ಶ್ರೀ ಯವರ  ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾಂಭವಾಯಿತು.  ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಪಿ.ವಿ. ನಾರಾಯಣ ಅವರು ಎರಡನೆಯ  ಶ್ರೀಸಾಹಿತ್ಯ ಪ್ರಶಸ್ತಿಯ  ಆಯ್ಕೆಯ ವಿಧಾನವನ್ನುವಿವರಿಸುತ್ತಾ.  ಈ ಪ್ರಶಸ್ತಿಗೆ ಕಾಣರಾದ ಶ್ರೀಮತಿ ಕಮಲಿನಿ  ಶಾ. ಬಾಲುರಾವ್‌  ಅವರ ಔದಾರ್ಯ ನೆನೆಯುತ್ತಾ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಕಾರ್ಯದರ್ಶಿಗಳಾದ ರವೀಂದ್ರನಾಥ ಅವರು ಕಾರ್ಯಕ್ರಮ ನಿರೂಪಿಸಿದರು, ಡಾ.ಅಬ್ದುಲ್‌ ಬಷೀರ್ ಅವರು ಅಭಿನಂದನೆ ಪತ್ರ ವಾಚನ ಮಾಡಿದರು.
 ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಲ್‌. ಹನುಮಂತಯ್ಯನವರು ಇಂಥಹ  ಅಪರೂಪದ ಸಮಾರಂಭಕ್ಕೆ ಕಾರಣವಾದ ಪ್ರತಿಷ್ಠಾನವನ್ನು ಅಭಿನಂದಿಸಿ , ಕನ್ನಡದ ವಿದ್ವತ್‌ ಕೆಲಸ ಮಾಡುತ್ತಿರುವ ಸಂಸ್ಥೆಗೆ ಪ್ರಾಧಿಕಾರ ಮತ್ತು ಸರ್ಕಾರ ಜೊತೆಯಾಗಿರುವು ದೆಂದು ಅಧ್ಯಕ್ಷ ಭಾಷಣದಲ್ಲಿ ಹೇಳಿದರು.
ಕನ್ನಡ ಸಾಹಿತ್ಯ ಲೋಕದ ಹಿರಿಯರು,, ಬಿ.ಎಂ ಶ್ರೀಯವರ ಮೊಮ್ಮಗಳಾದ ಶ್ರೀಮತಿ ಕಮಲಿನಿ ಶ.ಬಾಲುರಾವ್ , ಕಳೆದ ವರ್ಷ  ಪ್ರಥಮ ಪ್ರಶಸ್ತಿ ವಿಜೇತ ಡಾ.ಎನ್‌ಎಸ್ ಲಕ್ಷ್ಮ ನಾರಾಯಣ ಭಟ್ಟ ಮತ್ತು ಅಪಾರ ಸಂಖ್ಯೆಯ ಸಾಹಿತ್ಯಾಭಿಮಾನಿಗಳು  ಸಮಾರಂಭದಲ್ಲಿ ಭಾಗವಹಿಸಿದ್ದರು
 ಶ್ರೀ ರಾಮಪ್ರಸಾದ, ಖಜಾಂಚಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.










  





               


                                                 
          
         
ಅಭಿನಂದನಾ ಪತ್ರ

                                                   





 








ಶ್ರೀಸಾಹಿತ್ಯ ಪ್ರಶಸ್ತಿ  ಸ್ಮರಣ ಫಲಕ













                                                                                                   






ಡಾ.ಪಿ ವಿ ಎನ್‌, ಡಾ. ಕಮಲಾಹಂಪನಾ, ಡಾ. ಎಲ್  ಹನುಮಂತಯ್ಯ,ಶ್ರೀ ಬಿ.ಎಸ್‌ ಸಣ್ಣಯ್ಯ, ಡಾ. ವೈಸಿ .ಭಾನುಮತಿ  ಮತ್ತು ಪ್ರೊ. ಎಂ ಎಚ್‌.ಕೃಷ್ಣಯ್ಯ



ಪ್ರಸ್ತಾವನಾ ನುಡಿ  ಆಡಿದ ಅಧ್ಯಕ್ಷ ಡಾ. ಪಿವಿ.ನಾರಾಯಣ




ಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ


ಸಣ್ಣ ಯ್ಯ ನವರನ್ನು ಸ್ವಾಗತಿಸುತ್ತಿರುವ ಅದ್ಯಕ್ಷರು








ಡಾ.ಎಲ್‌ ಹನುಮಂತಯ್ಯನವರಿಗೆ ಸ್ವಾಗತ ನೀಡಿಕೆ


ಡಾ. ಕಮಲಾ ಹಂಪನಾ ಅವರಿಗೆ ಸ್ವಾಗತ




ಪ್ರಶಸ್ತಿ ಪ್ರದಾನ ಮಾಡಿದ ಡಾ. ಕಮಲಾ ಹಂಪನಾರ ಮಾತು

ಅಭಿನಂದನಾ ಪತ್ರ ವಾಚಿಸುತ್ತಿರುವ ಕಾರ್ಯದರ್ಶಿ ಡಾ ಜಿ. ಅಬ್ದುಲ್‌ ಬಷೀರ್





ಅಭಿನಂದನಾ ಪತ್ರ ವಾಚಿಸುತ್ತಿರುವ ಡಾ. ಜಿ. ಅಬ್ದುಲ್‌ ಬಷೀರ್




ಸಕುಟುಂಬಿಯಾಗಿ ಸನ್ಮಾನಿತರು