Friday, August 1, 2014

ಹಿಂದು ಧರ್ಮ ಕುರಿತ ಒಂದು ಜಿಜ್ಞಾಸೆ

ಸುಜನರ್ ನಿಜವಂ ಅರಿಯದಿರ್ಪರೇ
ಡಾ.  ಸಿ.ಎಂ. ರಾಮಕೃಷ್ಣ




          ನಾನು ನ್ಯೂ ಜರ್ಸಿಗೆ ಸಂಸಾರಸಮೇತ ಸ್ಥಳಾಂತರಿಸಿದ ಮೇಲೆ, ಅಲ್ಲಿನ ಕುವೆಂಪು ಕನ್ನಡ ಸಂಘದ ಸದಸ್ಯನಾದೆ. ಕೆಲವೇ ವರ್ಷಗಳಲ್ಲಿ ಸಂಘದ ಅಧ್ಯಕ್ಷಪದವಿಗೆ (ಅಭ್ಯರ್ಥಿಗಳ ಅಭಾವದಿಂದ) ಅವಿರೋಧವಾಗಿ ಆರಿಸಲ್ಪಟ್ಟೆ. ಅಲ್ಲಿಯವರೆಗೆ ಸಂಘದ "ಸಂದೇಶ"ವೆಂಬ ಪತ್ರಿಕೆಯು ವರ್ಷಕ್ಕೆ ಐದಾರು ಸಲ ಪ್ರಕಟವಾಗುತ್ತಿತ್ತು. ನಾನು ಅಧ್ಯಕ್ಷನಾದಮೇಲೆ, ಸಂದೇಶವನ್ನು ಸಂಘದ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ವಿನಿಮಯ ಮಾಡುವ ವೇದಿಕೆಯನ್ನಾಗಿ ಉಪಯೋಗಿಸುವಂತೆ ಮಾಡಲು, ಅದನ್ನು ಮಾಸಪತ್ರಿಕೆಯನ್ನಾಗಿ ಪ್ರಕಟಿಸಲು ಶುರುಮಾಡಿದೆ. ಮಾಮೂಲಿನಂತೆ, ಅಧ್ಯಕ್ಷನಾದ ನಾನೇ ಸಂದೇಶದ ಸಂಪಾದಕನಾದೆ. ಪ್ರತಿ ತಿಂಗಳೂ ಸಂದೇಶದ ಸಂಪಾದಕೀಯದಲ್ಲಿ, ನಮ್ಮ ಶಾಸ್ತ್ರ-ಸಂಪ್ರದಾಯಗಳಲ್ಲಿರುವ ನ್ಯೂನತೆ, ಅಸಂಬದ್ಧತೆಗಳನ್ನೂ, ಕೆಲವು ಕ್ಲೀಷೇಗಳನ್ನೂ ಟೀಕಿಸಿ ಬರೆಯುತ್ತಿದ್ದೆ. ’ಭಾರತಸಂಸ್ಕೃತಿ ಎಂದರೆ, ದೇವರಲ್ಲಿ ನಂಬಿಕೆ ಮತ್ತು ಮತಾಚರಣೆಯು ಮುಖ್ಯವೇ?’,’ದೇವರಲ್ಲಿಡುವ ಮೂಢಭಕ್ತಿ ಮತ್ತು ಶಾಸ್ತ್ರ-ಪದ್ಧತಿಗಳಲ್ಲಿರುವ ಅಂಧಶ್ರದ್ಧೆಯಿಂದಾಗಬಹುದಾದ ಅಪಾಯ/ಕೇಡು’,’ಸಮಾನಸ್ಕಂಧರ ಪ್ರಭಾವ (peer pressure) ಎನ್ನುವುದು ಎಷ್ಟು ವಾಸ್ತವ?’, ಇತ್ಯಾದಿಯಾಗಿ ಯಾವುದಾದರೊಂದು ವಿಷಯವನ್ನು ಕುರಿತು ಬರೆಯುತ್ತಿದ್ದೆ. ಜೊತೆಗೆ ’ಪ್ರತಿಪೋಷಣೆ’ (feedback) ಎಂಬ ಒಂದು ಭಾಗವನ್ನು ತೆರೆದು, ಅದರಲ್ಲಿ ಸದಸ್ಯರು ಸಂಘವನ್ನು ಮತ್ತು ಸಂಘದ ಚಟುವಟಿಕೆಗಳನ್ನು ಕುರಿತು ಮಾಡುವ ಟೀಕೆಗಳನ್ನು - ಶ್ಲಾಘನೆ, ಖಂಡನೆ, ಎಲ್ಲವನ್ನೂ - ಯಥಾರ್ಥವಾಗಿ ಪ್ರಕಟಿಸಲು ಪ್ರಾರಂಭಿಸಿದೆ. ಸಂಘದ ಅನೇಕ ಸದಸ್ಯರು ಮತ್ತು ಉತ್ತರ ಜರ್ಸಿ, ನ್ಯೂ ಯಾರ್ಕ್ ಮತ್ತು ಕನೆಟಿಕಟ್‍ನ ಕೆಲವು ಕುವೆಂಪು ಸಂಘದಸದಸ್ಯರಲ್ಲದ ಕನ್ನಡಿಗರೂ ಸಹ ನನ್ನ ಸಂಪಾದಕೀಯ, ’ಪ್ರತಿಪೋಷಣೆ’ಗಳನ್ನು ಬಹಳ ಮೆಚ್ಚಿ, ಪ್ರಶಂಸಾತ್ಮಕ ಪತ್ರಗಳನ್ನುಬರೆದರು.  ಉದಾಹರಣೆಗೆ:
ರಾಮಪ್ರಸಾದ್ (ಉತ್ತರ ಜರ್ಸಿ):  "ಗೋಪಿಯವರೇ, ಇತ್ತೀಚಿನ  ಸಂದೇಶದಲ್ಲಿ ನೀವು ’ಶಾಸ್ತ್ರ-ಪದ್ಧತಿ’ ಕುರಿತು ಬರೆದಿರುವ
ಲೇಖನ ಅತ್ಯುತ್ತಮವಾಗಿದೆ. ನೀವು ಚೆನ್ನಾಗಿ ಬರೆಯುತ್ತೀರಿ. ನಿಮ್ಮ ಭಾಷೆ ಭವ್ಯವಾಗಿದೆ. ಕೆಲವರಿಗೆ ನೀವು ಬರೆಯುವುದು ವಿವಾದಾಸ್ಪದವಾಗಿರಬಹುದು. ಅದು ಅಸಾಮಾನ್ಯವೇನಲ್ಲ. ಆದರೆ ನನಗೆ ನಿಮ್ಮ ಲೇಖನಗಳನ್ನೂ, ಸಂಪಾದಕೀಯವನ್ನೂ ಓದಲು ಬಹಳ ಸಂತೋಷ. ನಾನು ಹೆಚ್ಚುಮಟ್ಟಿಗೆ ನಿಮ್ಮ ಅಭಿಪ್ರಾಯಗಳನ್ನು ಅನುಮೋದಿಸುತ್ತೇನೆಂದು ಹೇಳಲವಶ್ಯಕತೆಯಿಲ್ಲ."
ವಾಸುಕಿ :  "ನಿಮ್ಮ ಲೇಖನವು ಉತ್ಕೃಷ್ಟವಾಗಿದೆ. ನೀವು ಚೆನ್ನಾಗಿ ಬರೆಯುತ್ತೀರಿ. ನಾನೇನೋ ಸ್ವತಃ ನೀವು ಬರೆಯುವುದನ್ನು
ಒಪ್ಪುತ್ತೇನೆ. ಆದರೆ ನೀವು ಬರೆದಿರುವ ’ಮತಗಳು ತಮ್ಮ ಪ್ರಯೋಜನವನ್ನು ಮೀರಿ ಬಾಳಿವೆ.’ ಎಂಬುದನ್ನು ನಾನು ಒಪ್ಪಲಾರೆ, ಏಕೆಂದರೆ ಕೆಲವರಿಗೆ ಮತಗಳು ಇಂದೂ ಉಪಯುಕ್ತವಾಗಿರಬಹುದು."
[ಗೋಪಿ: "ಒಪ್ಪುತ್ತೇನೆ. ಆದರೆ, ಈಗಲೂ ಕೆಲವು ಗಂಡಸರಿಗೆ ಹೆಂಗಸರನ್ನು ತಮ್ಮ ಕೈಕೆಳಗಿಟ್ಟುಕೊಂಡು, ಅವರ ಮೇಲೆ
ಅಧಿಕಾರ ಚಲಾಯಿಸುವುದು ಉಪಯುಕ್ತವೆನ್ನಿಸುವುದು. ಹಾಗೆಂದು ’ಅದು ಸರಿ’ ಎಂದು ಒಪ್ಪಿಕೊಳ್ಳುವುದು ಉಚಿತವೇ?"]
ಶ್ರೀಕಂಠಯ್ಯ(ಕನೆಟಿಕಟ್):  "ನೀವು ಕುವೆಂಪು ಸಂಘದ ಅಧ್ಯಕ್ಷರಾಗಿ ಮಾಡುತ್ತಿರುವ ಉತ್ತಮವಾದ ಕೆಲಸವನ್ನು ಅಭಿನಂದಿಸಲು
ಮತ್ತು ’ಸಂದೇಶ’ದಲ್ಲಿ ಎಲ್ಲರ ಮನೋವಿಚಾರವನ್ನು ಕೆರಳಿಸುವಂಥ ನಿಮ್ಮ ಲೇಖನಗಳ ಬಗ್ಗೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಈ ಚಿಕ್ಕಪತ್ರವನ್ನು ಬರೆದಿರುತ್ತೇನೆ. ನಿಮ್ಮ ಬರವಣಿಗೆಗಳ ಮೇಲೆ ಕೆಲವು ನಕಾರಾತ್ಮಕ ಟೀಕೆಗಳು ಬರುವುದು ಸಹಜ; ಆದರೆ, ನೀವು ಮಾತ್ರ ಬರೆಯುವುದನ್ನು ನಿಲ್ಲಿಸುವುದಿಲ್ಲವೆಂದು ಆಶಿಸುತ್ತೇನೆ.
ವಿಧೃತನಾಮ:   "ನೀವು ಸಂದೇಶದಲ್ಲಿ ವ್ಯಕ್ತಪಡಿಸುವ ನಿಮ್ಮ ಅಭಿಪ್ರಾಯಗಳನ್ನೂ, ಕೆಲವರಿಂದ ನೀವು ಪಡೆಯುವ
ಪ್ರಶಂಸೆಗಳನ್ನೂ ನಾನು ಒಪ್ಪುವುದಿಲ್ಲ."
ವಿಶ್ವನಾಥ್: "ಅಧ್ಯಕ್ಷರಿಗೆ ಅಭಿನಂದನೆಗಳು. ನೀವು ಉತ್ತಮವಾದ ಕೆಲಸವನ್ನು ಮಾಡುತ್ತಿರುವಿರಿ. ನಿಮ್ಮ ’ಸಂಪಾದಕೀಯ’
ಬಹಳ ಚೆನ್ನಾಗಿದೆ. ಯಾವ ಮುಖ್ಯ ವಿಷಯಗಳಲ್ಲಿ ಜನರು ಸಾಮಾನ್ಯವಾಗಿ ಆಸಕ್ತಿ ತೋರಿಸುವುದಿಲ್ಲವೋ ಅಂತಹ ವಿಷಯಗಳನ್ನು ಕುರಿತು ಅವರು ಯೋಚಿಸುವಂತೆ ನೀವು ನಿಮ್ಮ ಬರವಣಿಗೆಯಿಂದ ಪ್ರಚೋದಿಸುತ್ತಿರುವಿರಿ."
ಉಮಾ:ಗೋಪಿ, ನೀವು ಇಂಗ್ಲಿಷ್‍ನಲ್ಲಿಯೂ, ಕನ್ನಡದಲ್ಲಿಯೂ ಬಹಳ ಚೆನ್ನಾಗಿ ಬರೆಯುತ್ತೀರಿ. ಸಂದೇಶದಲ್ಲಿ ನಿಮ್ಮ
ಪತ್ರಗಳನ್ನು ಓದಲು ನನಗೆ ಬಹಳ ಸಂತೋಷ.
ಮುಕುಂದ: "ಗೋಪಿಯವರೇ, ನೀವು ಚೆನ್ನಾಗಿ ಬರೆಯುತ್ತೀರಿ. ಸಂದೇಶದಲ್ಲಿ ನಿಮ್ಮ ಪತ್ರಗಳನ್ನು ಓದುವುದಕ್ಕೆ ನನಗೆ ಬಹಳ
ಇಷ್ಟವಾಗುವುದು. ನೀವು ನಮ್ಮ ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆಗೆ ನಾವೆಲ್ಲರೂ ಆಭಾರಿಗಳಾಗಿರಬೇಕು."

          ಹೀಗೆ ಅನೇಕರಿಗೆ ನನ್ನ ಲೇಖನಗಳು ಸಮ್ಮತವಾದರೂ, ಸಂಘದ ಕೆಲವು ಪ್ರಮುಖ ಸದಸ್ಯರುಗಳಿಗೆ ನನ್ನ ಈ ಹೊಸರೀತಿಯ ತಾರ್ಕಿಕವಾದ, ಮುಚ್ಚುಮರೆಯಿಲ್ಲದ ವರದಿ, ನನ್ನ ಲೇಖನ/ಬರಹಗಳಲ್ಲಿನ ಅಶಾಸ್ತ್ರೀಯ, ಅಸಾಂಪ್ರದಾಯಿಕ ಅಭಿಪ್ರಾಯಗಳು ಒಪ್ಪಿಗೆಯಾಗಲಿಲ್ಲ.
*      *      *
            ಆ ವರ್ಷ ನ್ಯೂಯಾರ್ಕ್ ನಗರದ ಒಂದು ಶಾಲೆಯಲ್ಲಿ ಕನ್ನಡ ಸಮ್ಮೇಳನವನ್ನು ಏರ್ಪಡಿಸಲಾಗಿತ್ತು. ಸಮ್ಮೇಳನದಲ್ಲಿ ಕುವೆಂಪು ಸಂಘವೂ ಕೆಲವು ಕಾರ್ಯಕ್ರಮಗಳನ್ನು ಕೊಟ್ಟು ಭಾಗವಹಿಸಿತ್ತು. ಆ ಸಮ್ಮೇಳನದಲ್ಲಿ ನನಗಾದ ಒಂದು ಅನುಭವ ಮತ್ತು ಅದಕ್ಕೆ ಸಂಬಂಧಿಸಿ ನಡೆದ ಒಂದು ಪ್ರಸಂಗವನ್ನು ಕುರಿತು, ಮುಂದಿನ ಸಂದೇಶದಲ್ಲಿ ನಾನು ಈ ಕೆಳಗೆ ಹೇಳಿರುವ ಸಂಪಾದಕೀಯವನ್ನು ಬರೆದೆ:
          “ಇತ್ತೀಚೆಗೆ ಒಂದು ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಒಂದು ಸಂಗೀತಗಾರರ ತಂಡವು ಶಾಲೆಯ ಪಿಯಾನೋವನ್ನು ಉಪಯೋಗಿಸಬೇಕಾಗಿತ್ತು. ಆದರೆ, ಪಿಯಾನೋವು, ಯಾರಿಂದಲೂ ದುರುಪಯೋಗ ಪಡಲಾಗದಂತೆ, ಶಾಲಾಧಿಕಾರಿಗಳಿಂದ ಯಥಾರೀತಿ ಬೀಗ ಹಾಕಿಡಲ್ಪಟ್ಟಿತ್ತು. ಕಾರಣಾಂತರದಿಂದ ನಾನು ಪಿಯಾನೋ ಬಳಿ ಸಾರಿಹೋಗುತ್ತಿದ್ದಾಗ, ಆ ಸಂಗೀತಗುಂಪಿನ ಮುಖಂಡರು ಪಿಯಾನೋ ಹತ್ತಿರ ನಿಂತಿದ್ದನ್ನು ನೋಡಿದೆ. ಅವರು ನಮ್ಮ ಸಂಘದ ಒಬ್ಬ ಮುಖ್ಯ ಸದಸ್ಯರೂ, ಬಹುಪರಿಚಿತರೂ ಆದುದರಿಂದ, ಮಾಮೂಲಿನಂತೆ ನಾನು, "ನಮಸ್ಕಾರ, ......ರಿಗೆ" ಎಂದು ಅಭಿವಂದಿಸಿದೆ. ಅದಕ್ಕವರು ಪ್ರತಿಯಾಗಿ, "ನನ್ನೊಂದಿಗೀಗ ಮಾತಾಡಬೇಡಿ. ನನಗೆ ಬಹಳ ಅಸಮಾಧಾನವಾಗಿದೆ. ನೋಡಿ, ನಾವು ಈ ಪಿಯಾನೋವನ್ನು ನಮ್ಮ ಇಂದಿನ ಕಾರ್ಯಕ್ರಮದಲ್ಲಿ ಉಪಯೋಗಿಸಬೇಕು. ಆದರೆ ಅದು ಬೀಗಹಾಕಿಡಲ್ಪಟ್ಟಿದೆ. ನೀವು ನಮ್ಮ ಸಂಘದ ಅಧ್ಯಕ್ಷರು." ಅವರ ಅನಿರೀಕ್ಷಿತ ಅವಿನಯವರ್ತನೆಯಿಂದ ನಾನು ಸ್ವಲ್ಪ ಅವಾಕ್ಕಾದೆ. ತುಸುಕಾಲದ ನಂತರ, "ಕ್ಷಮಿಸಬೇಕು. ನಿಮ್ಮ ಕಾರ್ಯಕ್ರಮವನ್ನು ನಮ್ಮ ಸಂಘದ ಮೂಲಕ ಏರ್ಪಡಿಸಲಿಲ್ಲ. ವಾಸ್ತವವಾಗಿ, ಇಂದು ನೀವಿಲ್ಲಿ ಕಾರ್ಯಕ್ರಮವನ್ನು ಕೊಡುವುದೇ ನನಗೆ ತಿಳಿದಿರಲಿಲ್ಲ. ಆದುದರಿಂದ, ನನಗೂ ನಿಮ್ಮ ಈವತ್ತಿನ ಕಾರ್ಯಕ್ರಮಕ್ಕೂ ಯಾವ ಸಂಬಂಧವೂ ಇರುವಂತೆ ಕಾಣುವುದಿಲ್ಲ. ದಯವಿಟ್ಟು ಕ್ಷಮಿಸಿ." ಎಂದೆ. ತಂಡದ ಮುಖಂಡರಿಗೆ ತಮ್ಮ ತಪ್ಪು ಅರಿವಾಯಿತೆಂದು ಕಾಣುತ್ತೆ. ತಮ್ಮ ಧ್ವನಿಯನ್ನು ಬದಲಾಯಿಸಿದರು. "ಹೌದು. ನಮ್ಮ ಕಾರ್ಯಕ್ರಮಕ್ಕೆ ನೀವು ಜವಾಬ್ದಾರರಲ್ಲ. ಆದರೂ ಸ್ವಲ್ಪ ಸಹಾಯ ಮಾಡಬಹುದಲ್ಲ."
          "ಅದು ಸರಿಯೇ, ಒಪ್ಪುತ್ತೇನೆ. ಈಗ ವೇದಿಕೆಯ ಮೇಲೆ ನನಗೆ ನಮ್ಮ ಸಂಘದ ಕಾರ್ಯಕ್ರಮದ ಬಗ್ಗೆ ಸ್ವಲ್ಪ ತುರ್ತು ಕೆಲಸವಿದೆ. ಆ ಕೆಲಸ ಮುಗಿಸಿದ ಕೂಡಲೇ ಬರುತ್ತೇನೆ. ಆಗಬಹುದಲ್ಲ?" ಎಂದು ಹೇಳಿ ರಂಗದಮೇಲೆ ಹೋದೆ. ನಾನು ನನ್ನ ಕಾರ್ಯವನ್ನು ಮುಗಿಸಿ ಬರುವ ವೇಳೆಗಾಗಲೇ ಸಮ್ಮೇಳನದ ವ್ಯವಸ್ಥೆಗಾರರು ಸಂಗೀತನೇತಾರರ ಆವಶ್ಯಕತೆ ತಿಳಿದು, ಶಾಲೆಯ ಸುಪರ್ದುದಾರ (custodian) ರಿಂದ ಪಿಯಾನೋವಿನ ಬೀಗ ತೆಗೆಸಿ, ಸಂಗೀತತಂಡವು ಅದನ್ನು ಉಪಯೋಗಿಸುವಂತೆ ಅಣಿಮಾಡಿಸಿಟ್ಟಿದ್ದರು.
          ಸಂಗೀತ ತಂಡದ ಕಾರ್ಯಕ್ರಮದ ಪೀಠಿಕೆಯಲ್ಲಿ ನಮ್ಮ ಸ್ನೇಹಿತರು ಸಭೆಯನ್ನು ಕುರಿತು ತಮ್ಮ ಗುಂಪು ಕಾರ್ಯಕ್ರಮದ ಮೊದಲು ಅನೇಕ ತೊಡಕುಗಳನ್ನು ಎದುರಿಸಿತೆಂದೂ, ಅವರು ಗಣೇಶನನ್ನು ಪ್ರಾರ್ಥಿಸಿದ ಮೇಲೆ ಆ ಎಲ್ಲಾ ತೊಡಕುಗಳೂ ಕ್ಷಿಪ್ರವಾಗಿ ನಿವಾರಣೆಯಾದುವೆಂದೂ ತಿಳಿಸಿದರು. ಆದರೆ, ನಿಜಸ್ಥಿತಿಯು ಹೀಗಿತ್ತು. ನಮ್ಮ ಸ್ನೇಹಿತರು ಗಣೇಶನನ್ನು ಪ್ರಾರ್ಥಿಸದೇ ಇದ್ದಿದ್ದರೂ ಅವರು ಎದುರಿಸಿದ ತೊಡಕುಗಳು ಸಹಜವಾಗಿ ನಿವಾರಿಸಲ್ಪಡುತ್ತಿದ್ದುವು, ಏಕೆಂದರೆ ಸಮ್ಮೇಳನದ ಮೇಲ್ವಿಚಾರಕರು, ಶಾಲೆಯ ಸುಪರ್ದುದಾರರು ಇರುವುದೇ ಅಂತಹ ಅನಿವಾರ್ಯ, ಅನಿರೀಕ್ಷಿತ ತೊಡಕುಗಳನ್ನು, ಗಮನಕ್ಕೆ ಬಂದಕೂಡಲೇ, ಸಕಾಲದಲ್ಲಿ ಪರಿಹರಿಸುವುದಕ್ಕೆ. ನಮ್ಮ ಸ್ನೇಹಿತರು ತಮ್ಮ ಪ್ರತಿಕ್ರಿಯೆಯಿಂದ ತಮ್ಮ ಅಜ್ಞಾನ, ಅಸಹನೆಯನ್ನು ವ್ಯಕ್ತಪಡಿಸಿದರಷ್ಟೆ. ಅದೂ ಅಲ್ಲದೆ, ಅವರಿಗೆ ದೇವರಲ್ಲಿ ಅಷ್ಟೊಂದು ನಂಬಿಕೆ ವಿಶ್ವಾಸವಿದ್ದರೆ, ಅವರೇಕೆ ಸ್ವಲ್ಪ ತಾಳ್ಮೆಯಿಂದಿರಲಿಲ್ಲ? ಹಾಗೇಕೆ ದುಡುಕಿ, ಕಿರಿಕಿರಿಯಾಗಿ ಅಸಭ್ಯ ವರ್ತನೆಯನ್ನು ತೋರಿಸಬೇಕಾಗಿತ್ತು? ಸಹನೆ, ನಿಷ್ಠೆ ಮತ್ತು ವಿವೇಕದಿಂದ ವರ್ತಿಸಿದರೆ, ಎಂತಹ ದುರ್ಗಮಸಮಸ್ಯೆಗಳನ್ನೂ ಪರಿಹರಿಸಲು ಸಾಧ್ಯ. ಅಂತಹುದರಲ್ಲಿ ನಮ್ಮ ಸ್ನೇಹಿತರು ಎದುರಿಸಿದ ಒಂದು ಸಣ್ಣ ತೊಂದರೆಯು ನಿವಾರಣೆಯಾದುದೇನೂ ಅತಿಶಯವಲ್ಲ! ಮೊದಲು, ನ್ಯಾಯವಾಗಿ ಅರ್ಹರಾದ ಸಮ್ಮೇಳನದ ವ್ಯವಸ್ಥಾಪಕರಿಗೂ, ಶಾಲೆಯ ಸುಪರ್ದುದಾರರಿಗೂ ಕೃತಜ್ಞತೆಯನ್ನು ಸಲ್ಲಿಸಬೇಕಾಗಿತ್ತು. ದೇವರಿಗೆ ಧನ್ಯವಾದವನ್ನರ್ಪಿಸುವ ಆವಶ್ಯಕತೆಯೇ ಇಲ್ಲ. ದೇವರು ನಮ್ಮಿಂದ ಪೂಜೆ, ಪ್ರಾರ್ಥನೆ, ಧನ್ಯವಾದಗಳನ್ನು ಅಪೇಕ್ಷಿಸುವುದಾದರೆ, ಅವನು ದೇವರೇ ಆಗಿರಲಾರ, ಅಲ್ಲವೇ? ಅಲ್ಲದೆ, ಪೂಜಾಪ್ರಾರ್ಥನೆಗಳಿಂದ ಮನಸ್ಸಿಗೆ ಸಮಾಧಾನ, ಸಂತೋಷ, ಸ್ಥೈರ್ಯ ಉಂಟಾಗುವ ಸಂಭವ ಹೆಚ್ಚಾಗಬಹುದೇ ಹೊರತು, ಅವುಗಳಿಂದ ಫಲಸಿದ್ಧಿಗಳಿಸುವ ಸಂಭವ ಹೆಚ್ಚೆಂದರೆ ೫೦-೫೦. ಪೂಜಾಪ್ರಾರ್ಥನೆಗಳನ್ನು ಮಾಡದಿದ್ದರೂ, ಫಲಗಳಿಸುವ ಸಂಭವ  ೫೦-೫೦, ಅಷ್ಟೆ.
          ಇಲ್ಲಿ, ನಾವು ದೇವರ ಮತ್ತು ಮತವಿಚಾರಗಳಲ್ಲಿ ಪದೇಪದೇ ತರ್ಕಸಮ್ಮತ ಸಮೀಕ್ಷೆಯನ್ನು ಒತ್ತಿ, ಒತ್ತಿ ಹೇಳುತ್ತಿದ್ದೇವೆ. ಏಕೆಂದರೆ, ದೇವರ ಮತ್ತು ಮತಗಳ ವಿಚಾರದಲ್ಲಿ ಜನರಿಗಿರುವ ತಪ್ಪು ತಿಳಿವಳಿಕೆ, ಅಂಧಶ್ರದ್ಧೆ ಮತ್ತು ಅತಾರ್ಕಿಕ ಭಾವನೆಯಿಂದಲೇ ಲೋಕದಲ್ಲಿ ಇಷ್ಟೊಂದು ಅಸಹನೆ, ಮತದ್ವೇಷ, ದೇವರ ಹೆಸರಿನಲ್ಲಿಯೇ ಹಿಂಸೆ, ಕ್ರೌರ್ಯ, ಕೊಲೆ ಆಗುತ್ತಿರುವುದು. ನಮ್ಮ ಮಕ್ಕಳು ಮುಖ್ಯವಾಗಿ ನಮ್ಮಿಂದಲೇ ಕಲಿಯುವುದು. ಆದುದರಿಂದ ನಾವು ಹಿರಿಯರು, ತಂದೆತಾಯಿಯರು ದೇವರ ವಿಚಾರದಲ್ಲಿ, ಮತಗಳ ವಿಚಾರದಲ್ಲಿ ವಿವೇಚನಾದೃಷ್ಟಿಯನ್ನು ತೋರಿಸಬೇಕು ಮತ್ತು ಆದರಿಸಲೂ ಬೇಕು. ಆಗಲೇ ನಮ್ಮ ಮಕ್ಕಳು ನಮ್ಮ ಸಂಸ್ಕೃತಿಯ ನಿಜ ಮೌಲ್ಯವನ್ನು ಗ್ರಹಿಸುವುದು ಸಾಧ್ಯ ಮತ್ತು ಪ್ರಪಂಚದಲ್ಲಿ ಶಾಂತಿಯುತ ಜೀವನವನ್ನು ಕಾಣುವುದು ಹೆಚ್ಚು ಸಂಭವ. ವಿವೇಚನೆಯನ್ನು ಮೀರಿದ ದೇವರಾಗಲೀ, ಮತವಾಗಲೀ ಖಂಡಿತ ಇರಲಾಗದು.”
*
          ಸಂಗೀತತಂಡದ ಮುಖಂಡರ ಹೆಸರು ಸಂಧ್ಯಾ ಎಂದು. ಈ ಸಂಪಾದಕೀಯವನ್ನು ಓದಿದಮೇಲೆ, ಸಂಧ್ಯಾರ ಪತಿ ಮುರಳೀಧರ್ ಮತ್ತು ಅವರ ಆಪ್ತಸ್ನೇಹಿತರಾದ ವೇದಾಂತಂ, ಕುಮುದಾ ಮತ್ತು ಶಾಲಿನಿ ಅವರು ಬಹಳ ಕ್ರೋಧಾನ್ವಿತರಾಗಿ, ನಾನು ಸಂದೇಶದ ಸಂಪಾದಕೀಯದಲ್ಲಿ ಸಾಂಪ್ರದಾಯಿಕವಾಗಿ ಬಂದ ಪೂಜಾಪ್ರಾರ್ಥನೆಗಳನ್ನು ಮತ್ತು ಸಾಮಾನ್ಯವಾಗಿ ಜನರು ದೇವರಲ್ಲಿಟ್ಟಿರುವ ಭಕ್ತಿನಂಬಿಕೆಗಳನ್ನು ಅಲ್ಲಗಳೆದುದು ಬಹಳ ಅನುಚಿತವೆಂದೂ, ನನ್ನ ನಾಸ್ತಿಕನಿಲುವನ್ನು ಪ್ರಚಾರಮಾಡಲು ಸಂಪಾದಕೀಯವನ್ನು ದುರುಪಯೋಗಪಡಿಸಿದೆನೆಂದೂ ಬಹಳ ಕಟುವಾಗಿ ಖಂಡಿಸಿ ನನಗೊಂದು ದೀರ್ಘ ಪತ್ರವನ್ನು ಬರೆದು, ಅದರ ಪ್ರತಿಗಳನ್ನು ಕಾರ್ಯಕಾರೀ ಸಮಿತಿಯ ಎಲ್ಲಾ ಸದಸ್ಯರಿಗೂ ಕಳುಹಿಸಿದರು. ಅವರ ಪತ್ರಗಳಿಗೆ ಉತ್ತರವಾಗಿ ಮುಂದಿನ ಸಂದೇಶದಲ್ಲಿ, ನಾನು ಈ ರೀತಿ ಬರೆದೆ:
          “ಉದ್ದೇಶಪೂರ್ವಕವಾಗಿಲ್ಲದಿದ್ದರೂ, ಸಂದೇಶದ ಹಿಂದಿನ ಸಂಚಿಕೆಯಲ್ಲಿ ನಾನು ಬರೆದ ಸಂಪಾದಕೀಯದಿಂದ ನಮ್ಮ ಸಂಘದ ಕೆಲವು ಸದಸ್ಯರ ಮನಸ್ಸನ್ನು ನೋಯಿಸಿದುದಕ್ಕೆ ನನ್ನ ಕ್ಷಮಾಪಣೆ. ಅದು ಏನಿದ್ದರೂ ನನ್ನ ಸಾಮಕುಶಲವಿಹೀನವಾದ (undiplomatic) ಸರಳ ಭಾಷೆಯ ಫಲವಲ್ಲದೆ ಬೇರೆಯಲ್ಲ. ನನ್ನ ಈ ದೌರ್ಬಲ್ಯವನ್ನು, ನಾನು ಮೊದಲ ಸಂದೇಶದಲ್ಲಿ ಬರೆದ ಅಧ್ಯಕ್ಷವಾಣಿಯಲ್ಲೇ ತಿಳಿಸಿ ಸದಸ್ಯರೆಲ್ಲರ ಸಹಾನುಭೂತಿಯನ್ನು ಕೋರಿದ್ದೆ.
          ಹಿಂದಿನ ಸಂಚಿಕೆಯಲ್ಲಿನ ಸಂಪಾದಕೀಯವು ಪೂಜಾಪ್ರಾರ್ಥನೆಗಳನ್ನು ವಿರೋಧಿಸುವುದಿಲ್ಲ; ಪೂಜಾಪ್ರಾರ್ಥನೆಗಳಿಂದ ಯಾವ ಪ್ರಯೋಜನವಿಲ್ಲವೆಂದೂ ಹೇಳುವುದಿಲ್ಲ. ಆದರೆ, ಪೂಜಾಪ್ರಾರ್ಥನೆಗಳಿಂದ ಜನರು ಫಲವನ್ನು ಪಡೆಯುವುದರಲ್ಲಿರುವ ಯಥಾರ್ಥತೆ, ಸಂಭವವನ್ನು ಓದುಗರ ಗಮನಕ್ಕೆ ತರುವುದು. ಅಂಧಶ್ರದ್ಧೆ, ಮೂಢನಂಬಿಕೆಗಳು ನಮ್ಮ ವಿಚಾರಶಕ್ತಿಯನ್ನು ಕುಂಠಿತಗೊಳಿಸುವುವು; ನಮ್ಮನ್ನು ಸತ್ಯಾಂಶಕ್ಕೂ, ಹೊಸ ವಿಚಾರ, ಹೊಸ ಭಾವನೆಗಳಿಗೂ  ಕುರುಡರನ್ನಾಗಿ ಮಾಡುವುವು. ಅದಕ್ಕೂ ಮುಖ್ಯವಾಗಿ, ಅಂಧಶ್ರದ್ಧೆ, ಮೂಢಭಕ್ತಿಯಿಂದ ಹಾನಿಗೂ, ಪ್ರಾಣಾಪಾಯಕ್ಕೂ ಸಂಭವವುಂಟು. ನಮ್ಮ ಸಂಘದ ಚಟುವಟಿಕೆಗಳಲ್ಲಿ, ಆಚರಣೆ-ಪದ್ಧತಿಗಳಲ್ಲಿ ಕಾಣ್ಬರುವ ನ್ಯೂನತೆ, ದೋಷಗಳನ್ನು ಎತ್ತಿ ತೋರಿಸಿ, ಅವುಗಳಿಗೆ ಉಪಯುಕ್ತವಾದ ಪರಿಹಾರಗಳನ್ನು ಸೂಚಿಸುವುದು ಸಂಪಾದಕೀಯದ ಹಕ್ಕು ಮತ್ತು ಕರ್ತವ್ಯ. ಹೆದರಿಕೆಯಿಲ್ಲದೆಯೂ, ಪಕ್ಷಪಾತವಿಲ್ಲದೆಯೂ ಸಂಪಾದಕೀಯವು ಸತ್ಯವನ್ನು ಸಮರ್ಥಿಸುವುದು ಆವಶ್ಯಕ.
          ಮುತುವರ್ಜಿಯಿಂದ ಕಾಲವ್ಯಯಮಾಡಿ ನಾನು ಬರೆದ ಸಂಪಾದಕೀಯದ ಮೇಲೆ ತಮ್ಮ ಟೀಕೆಗಳನ್ನು ಬರೆದುದಕ್ಕಾಗಿ ಮುರಳೀಧರ್, ವೇದಾಂತಂ, ಕುಮುದಾ ಮತ್ತು ಶಾಲಿನಿ ಅವರಿಗೆ ನನ್ನ ಧನ್ಯವಾದಗಳು. ಅವರ ಖಂಡನೆಗಳಲ್ಲಿನ ಕಾಠಿನ್ಯವನ್ನು ನಾನು ಇಷ್ಟಪಡದೇ ಇರಬಹುದು. ಆದರೆ ಅವರು ತಮ್ಮ ವಿರೋಧಾಭಿಪ್ರಾಯವನ್ನು ನಿಸ್ಸಂಕೋಚದಿಂದ ಬರೆದು ತಿಳಿಸಿದುದನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ಹಿಂಜರಿಯದೆ ವೈಚಾರಿಕವಾಗಿ ಖಂಡಿಸುವುದನ್ನೂ, ಇತರರ ಖಂಡನೆಯನ್ನು ವೈಯಕ್ತಿಕಭಾವವಿಲ್ಲದೆ ಸ್ವೀಕರಿಸುವುದನ್ನೂ ನಾವೆಲ್ಲರೂ ಅಗತ್ಯವಾಗಿ ಕಲಿಯಬೇಕು. ಪ್ರಾಮಾಣಿಕ ಖಂಡನೆಯು ಅವಶ್ಯವಾದುದು, ಏಕೆಂದರೆ ಖಂಡನೆಯು ಸುಧಾರಣೆಗೆ ಪ್ರಚೋದಕಾರಿಯಾಗಬಲ್ಲುದು.
          ಗೋಪೀವಲ್ಲಭ”
*
          ನನ್ನ ಬರಹಗಳನ್ನು ಮೆಚ್ಚಿ ಹೊಗಳಿದವರ ಸಂಖ್ಯೆಯು ತೆಗಳಿದವರ ಸಂಖ್ಯೆಗಿಂತ ಹೆಚ್ಚಾಗಿದ್ದರೂ, ನನ್ನ ನಾಸ್ತಿಕ್ಯನಿಲುವನ್ನು ಒಪ್ಪದೆ ಮೌನವಾಗಿ ಅಸಮಾಧಾನಗೊಂಡವರು ಹೆಚ್ಚು ಮಂದಿ ಇದ್ದರೆಂದು ತೋರುತ್ತೆ. ಆ ಕಾರಣದಿಂದಲೇ, ನನ್ನ ನಾಸ್ತಿಕತೆಯು ಬಹಿರಂಗವಾದಮೇಲೆ, ನಾನು, ನನ್ನ ಜೊತೆಗೆ ಪಂಕಜಾ, ಪುಷ್ಪಾರೂ ಸಹ, ಬಹುಮಟ್ಟಿಗೆ ನಮ್ಮ ಸಂಘದ ಎಲ್ಲಾ ಸ್ನೇಹಿತರ ಖಾಸಗೀ ಸಮಾರಂಭಗಳಿಂದಲೂ ಬಹಿಷ್ಕೃತರಾದೆವು. ಹಿಂದೆ ನಮ್ಮ ಮನೆಯ ಸಮಾರಂಭಗಳಿಗೆ ಆಹ್ವಾನಿತರಾಗಿ ಬರುತ್ತಿದ್ದವರೂ, ನಮ್ಮನ್ನು ಕರೆಯುತ್ತಿದ್ದವರೂ ಥಟ್ಟನೆ ನಮ್ಮನ್ನು ಕರೆಯುವುದನ್ನು ಬಿಟ್ಟುಬಿಟ್ಟರು. ಸತ್ಯನಾರಾಯಣಪೂಜೆ, ಲಕ್ಷ್ಮೀಪೂಜೆ ಅಂತಹ ಮತೀಯ ಉತ್ಸವಗಳಿಗೆ ಮಾತ್ರವಲ್ಲದೆ, ಮದುವೆ-ಮುಂಜಿ ಅಂತಹ ಭಾಗ ಮತೀಯ, ಭಾಗ ಸಾಮಾಜಿಕ ಸಮಾರಂಭಗಳಿಗೂ ಮತ್ತು ಕೇವಲ ಸಾಮಾಜಿಕ ಕೂಟಗಳಾದ ಸ್ನಾತಕೋತ್ಸವ, ಜನ್ಮದಿನೋತ್ಸವಗಳಿಗೂ ನಮ್ಮನ್ನು ಯಾರೂ ಆಹ್ವಾನಿಸುತ್ತಿರಲಿಲ್ಲ. ಕೇವಲ ನಾಲ್ಕೈದು ಸಂಸಾರಗಳು ಮಾತ್ರ ನಮ್ಮ ಸ್ನೇಹವನ್ನು ಬಿಡದೆ ತಮ್ಮ ಮನೆಗಳಲ್ಲಿ ಯಾವುದಾದರೂ ಸಮಾರಂಭಗಳಾದರೆ ನಮ್ಮನ್ನು ಕರೆಯುತ್ತಿದ್ದರು. ಇದು ನಿಜವಾಗಿಯೂ ಒಂದು ಸೋಜಿಗ ವರ್ತನೆ! ಬಹುಮಟ್ಟಿಗೆ ನಮ್ಮ ಸಂಘದ ಸದಸ್ಯರೆಲ್ಲಾ ಹಿಂದೂಮತದವರು, ಹಿಂದೂ ಶಾಸ್ತ್ರಸಂಪ್ರದಾಯಗಳನ್ನು ಪರಿಪಾಲಿಸುವವರು. ವಿಚಾರಸ್ವಾತಂತ್ರ್ಯ, ವಾಕ್‍ಸ್ವಾತಂತ್ರ್ಯಗಳು ಹಿಂದೂಧರ್ಮದ ಹಿರಿಮೆಯ ಲಕ್ಷಣ. ಮತಸಹಿಷ್ಣುತೆಯೇ ಹಿಂದುಧರ್ಮದ ವಿಶಿಷ್ಟಗುಣ. ಈ ವಿಶಾಲಮನೋಭಾವವು ಭಾರತಸಂಸ್ಕೃತಿಯಲ್ಲಿ ಪುರಾತನಕಾಲದಿಂದಲೂ ಬೆಳೆದುಬಂದಿದೆ. ಈ ಕಾರಣದಿಂದಲೇ ಹಿಂದೂಮತದಲ್ಲಿ ಈಶ್ವರವಾದಿಗಳು, ನಿರೀಶ್ವರವಾದಿಗಳು, ಚಾರ್ವಾಕರು, ದ್ವೈತಿಗಳು, ಅದ್ವೈತಿಗಳು, ವಿಶಿಷ್ಟಾದ್ವೈತಿಗಳು, ಶಕ್ತಿವಿಶಿಷ್ಟಾದ್ವೈತಿಗಳು, ಇತ್ಯಾದಿ, ಇತ್ಯಾದಿ ಹಲವಾರು ವಿಧ  ತತ್ತ್ವಚಿಂತಕರು, ವಿಚಾರಪರರು ಹಿಂದೆ ಇದ್ದರು, ಈಗಲೂ ಇದ್ದಾರೆ. ಈ ಕಾರಣದಿಂದಲೇ ಹಿಂದೂಮತವು "ಮತಗಳ ಮತ"(Hinduism is a religion of religions.) ಎಂದು ಲೋಕಪ್ರಸಿದ್ಧಿಯಾಗಿರುವುದು. ಅದೇ ಕಾರಣದಿಂದಲೇ, ಭಾರತದಲ್ಲಿ ಬೌದ್ಧಮತ, ಜೈನಮತ, ಸಿಖ್‍-ಮತ, ಆರ್ಯಸಮಾಜ, ಬ್ರಹ್ಮಸಮಾಜ, ಇತ್ಯಾದಿ ಅನೇಕ ಹೊಸ ಮತಗಳು, ಹೊಸ ತತ್ತ್ವಶಾಸ್ತ್ರಗಳು ನಿರಾತಂಕವಾಗಿ ಹುಟ್ಟಿ ಬೆಳೆದವು. ಹೀಗಿರುವಲ್ಲಿ, ನಮ್ಮ ಹಿಂದು ಸ್ನೇಹಿತರು ನನ್ನ ನಾಸ್ತಿಕತೆ, ನಿರೀಶ್ವರವಾದವನ್ನು ಸಹಿಸಲಾರದೆ ನಮ್ಮನ್ನು ಬಹಿಷ್ಕರಿಸಿರುವುದು ಒಂದು ದೊಡ್ಡ ಸೋಜಿಗ ಮತ್ತು ಹಾಸ್ಯಾಸ್ಪದ. ಇಲ್ಲಿ ಇನ್ನೊಂದು ವೈಚಿತ್ರ್ಯವಿದೆ: ದೇವರಲ್ಲಿ ನಂಬಿಕೆ, ಭಕ್ತಿ ಇರುವವರ ಅಭಿಪ್ರಾಯದಂತೆಯೇ, ಎಲ್ಲವೂ ದೈವಾನುಗ್ರಹ, ಎಲ್ಲವೂ ದೈವಾಧೀನ, ಭಗವಂತನ ಲೀಲೆ ಆದರೆ, ನಾನೂ ಆ ಭಗವಂತನ ಕೈಗೊಂಬೆಯೇ ಅಲ್ಲವೇ? ನನ್ನ ನಾಸ್ತಿಕ್ಯವು ಸಹ ದೇವರ ಪ್ರೇರಣೆಯೇ ಆಗಿರಬೇಕಲ್ಲವೇ? ಈ ಸರಳ ಸತ್ಯವನ್ನು ನನ್ನ ದೈವಭಕ್ತ ಸ್ನೇಹಿತರು ಯಾಕೆ ತಿಳಿದುಕೊಳ್ಳುವುದಿಲ್ಲ? ನನ್ನ ಮೇಲೆ ಇಷ್ಟೊಂದು ಕೋಪ ಮಾಡುವುದೇಕೆ? ಭಕ್ತಿಯಲ್ಲಿ ಪ್ರೇಮವೂ, ನಿಷ್ಠೆಯೂ ಕೂಡಿರುವುದು. ಅವುಗಳಲ್ಲಿ ಪ್ರೇಮವೇ ಮುಖ್ಯಾಂಶ. ಸರ್ವವ್ಯಾಪಿಯೆಂದೆನಿಸಿರುವ ಆ ದೇವರಲ್ಲಿ ಭಕ್ತಿ ಇರುವುದಾದರೆ, ಪ್ರೇಮವು ಸಹ ಸರ್ವತೋಮುಖವಾಗಿರಬೇಕು ಅಲ್ಲವೇ? ಭಕ್ತಿ ಇರುವೆಡೆಯಲ್ಲಿ ಕೋಪಕ್ಕೆ ತಾವೆಲ್ಲಿದೆ? ನಿಜವಾಗಿಯೂ, ಭಕ್ತಿಗೂ, ಕೋಪಕ್ಕೂ ಎಣ್ಣೆ-ಸೀಗೇಕಾಯಿ ಸಂಬಂಧ ಇರಬೇಕಲ್ಲವೇ?
          ನಾನು ಯಾರನ್ನೂ ದೇವರನ್ನು ನಂಬಬೇಡಿ ಎಂದು ಹೇಳುವುದಿಲ್ಲ, ದೇವರನ್ನು ಪೂಜಿಸಬೇಡಿ ಎಂದು ಹೇಳುವುದಿಲ್ಲ. ನಾನು ಹೇಳುವುದಿಷ್ಟೆ - ದೇವರನ್ನು ನಂಬಿದರೆ, ಸದಾ, ಸರ್ವಕಾಲದಲ್ಲಿಯೂ ನಂಬೋಣ. ಸುಮ್ಮನೆ ತಾತ್ಕಾಲಿಕ ನಂಬಿಕೆ, ಭಯದಿಂದ ನಂಬಿಕೆ, ಸಾಂಪ್ರದಾಯಿಕ ನಂಬಿಕೆ ಬೇಡ. ಆದರೆ, ದೇವರಲ್ಲಿ ನಂಬಿಕೆ, ವಿಶ್ವಾಸ ಇಟ್ಟಿರುವೆನೆಂದು, ದೇವರಿಂದ ಫಲಾಪೇಕ್ಷೆಯನ್ನು ಮಾಡಿದರೆ, ನಿರಾಸೆಹೊಂದುವ ಸಂಭವವುಶೇ. ೫೦ ಎನ್ನುವುದನ್ನು ಮಾತ್ರ ಮರೆಯಬಾರದು. ಗೀತೆಯಲ್ಲಿ (೨-೪೭) ಶ್ರೀಕೃಷ್ಣನೇ ಹೇಳಿರುವಂತೆ ಕರ್ಮವನ್ನು, ಅಂದರೆ ಪ್ರಯತ್ನವನ್ನು,ಮಾಡುವುದು ಮಾತ್ರ ನಮ್ಮ ಅಧೀನದಲ್ಲಿರುವುದು.ಎಂದಿಗೂ ಪ್ರಯತ್ನದ ಫಲವು ನಮ್ಮ ಅಧೀನದಲ್ಲಿರುವುದಿಲ್ಲ. ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ; ಮಾಡಬೇಕು. ಆದರೆ, ಆ ಕರ್ತವ್ಯವನ್ನು ಎಷ್ಟು ಶ್ರದ್ಧೆಯಿಂದ ಮಾಡಿದರೂ, ಅದರ ಫಲವನ್ನು ಪಡೆಯುವುದು ಎಂದೂ ನಿಶ್ಚಿತವಲ್ಲ. ದೇವರಲ್ಲಿ ನಂಬಿಕೆ ಇಡುವುದು, ದೇವರನ್ನು ಪೂಜಿಸುವುದು, ಪ್ರಾರ್ಥಿಸುವುದು ಸಹ ಒಂದು ವಿಧವಾದ ಪ್ರಯತ್ನವೇ ಹೊರತು ಬೇರೆಯಲ್ಲ.
          ವಾಸ್ತವವಾಗಿಯೂ, ನಾನು ನಾಸ್ತಿಕನಾದರೂ, ದೇವರೆನ್ನುವ ಕಲ್ಪನೆಗೆ, ದೇವರೆನ್ನುವ ಭಾವನೆಗೆ ನಾನು ಕೊಡುವಷ್ಟು ಗೌರವವನ್ನು ನನ್ನ ಆಸ್ತಿಕ ಸ್ನೇಹಿತರು ಸಹ ಕೊಡುವುದಿಲ್ಲ ಎಂದು ಧಾರಾಳವಾಗಿ ಹೇಳಬಹುದು. ಈಗಲೀಗ, ಮತಗಳು ಹೆಚ್ಚು ಆಚರಣೆಯಲ್ಲಿರುವುವೇ ಹೊರತು ಜೀವನದಲ್ಲಿಲ್ಲ. (Nowadays, religions are mostly observed,but are seldomlived.)
*      *      *
            ಹಿಂದೆ ಮೇರಿಲ್ಯಾಂಡ್‍-ನಲ್ಲಿ ಒಂದು ಸಲ, ನಮ್ಮ ಸ್ನೇಹಿತರೊಬ್ಬರ ಮನೆಗೆ ಸತ್ಯನಾರಾಯಣ ಪೂಜೆಗೆ ಹೋಗಿದ್ದೆವು. ಪೂಜೆಯಾದನಂತರ, ಒಬ್ಬ ಮಹಿಳೆ ನನಗೆ ಸಜ್ಜಿಗೆ ಪ್ರಸಾದವನ್ನು ಕೊಡಲು ಬಂದರು. ಅದನ್ನು ನೋಡಿ, ನಾನು,
          "ಇದು ಬಿಳೀ ಸಕ್ಕರೆಯಲ್ಲಿ ಮಾಡಿದೆ; ನಾನು ತಿನ್ನುವುದಿಲ್ಲ. ಕ್ಷಮಿಸಬೇಕು." ಎಂದು ಕೈಮುಗಿದೆ. ಅವರು
          "ಅರೇ, ಇದು ಸತ್ಯನಾರಾಯಣ ಪ್ರಸಾದ! ಬೇಡ ಎನ್ನ ಬಾರದು. ದೇವರ ಪ್ರಸಾದವನ್ನು ತಿರಸ್ಕರಿಸಿದರೆ, ಒಳ್ಳೆಯದಾಗುವುದಿಲ್ಲ."
          "ದೇವರು ಎನ್ನುವುದು ಸತ್ಯವಾದರೆ, ದೇವರು ಇರುವುದು ನಿಜವಾದರೆ, ನಾವು ತಿನ್ನುವುದೆಲ್ಲಾ ದೇವರ ಪ್ರಸಾದ, ನಾವು ಕುಡಿಯುವುದೆಲ್ಲಾ ದೇವರ ಪ್ರಸಾದ, ನಾವು ಪ್ರತಿಕ್ಷಣ ಉಸಿರಾಡುವ ಗಾಳೀ ಸಹ ದೇವರ ಪ್ರಸಾದ. ದೇವರ ಪ್ರಸಾದವಿಲ್ಲದೆ, ದೇವರ ಪ್ರಸಾದವನ್ನು ಸೇವಿಸದೆ ನಾವು ಜೀವಿಸುವುದಕ್ಕೇ, ಜೀವಿಸಿರುವುದಕ್ಕೇ ಆಗುವುದಿಲ್ಲ. ಹಾಗಿರುವಲ್ಲಿ, ಈ ಸಜ್ಜಿಗೆಯಲ್ಲೇನು ವಿಶೇಷ, ಹೇಳಿ."
          "ವ್ಹೋ, ಅದು ಬಹಳ ಉನ್ನ್-ನತ ಆಲೋಚನೆ; ಎಲ್ಲರಿಗೂ ಸಾಧ್ಯವಿಲ್ಲ."
          "ಇಲ್ಲಿ, ಉನ್ನತವೇನು ಬಂತು, ಅಸಾಧ್ಯವೇನು ಬಂತು; ಇದು ಕೇವಲ ತಾರ್ಕಿಕ ಆಲೋಚನೆ; ಬಹಳ ಸರಳವಾದ ಸತ್ಯ. ಈಗ, ಆ ಸಜ್ಜಿಗೆಯನ್ನು ತಿನ್ನದೇ ಇದ್ದರೆ, ನನಗೆ ಯಾವ ಕೆಡಕೂ ಆಗುವುದಿಲ್ಲ. ಭಯಪಡಬೇಡಿ."
          "ನಾನು ತಂದಿದ್ದಕ್ಕೆ, ನನಗಾದರೂ ಸ್ವಲ್ಪ ಮರ್ಯಾದೆ ಮಾಡಿ."
          "ಸರಿ. ಒಂದು ಚಿಟಿಕೆ ಕೊಡಿ, ಸಾಕು."
ಸಜ್ಜಿಗೆ ಪ್ರಸಾದ ತಂದ ಮಹಿಳೆಗಂತೂ ಒಂದೇ ಆಶ್ಚರ್ಯ: ಯಾರಾದರೂ ಹೀಗೆ ಒಳ್ಳೇ ರುಚಿಯಾದ ಸಜ್ಜಿಗೆಯನ್ನು, ಅದರಲ್ಲೂ ಸತ್ಯನಾರಾಯಣ ಪ್ರಸಾದವನ್ನು "ಬೇಡ" ಎಂದು ತಿರಸ್ಕರಿಸುತ್ತಾರೆಯೇ, ಎಂದೋ ಏನೋ.
*
          ಹೀಗೆಯೇ ಮತ್ತೊಂದು ಸಲ, ರಾಜೀವ ಅಡಿಗರ ಅಧ್ಯಕ್ಷತೆಯಲ್ಲಿ ನಮ್ಮ ಸಂಘವು ಗಣೇಶನ ಹಬ್ಬವನ್ನು ಆಚರಿಸಿತು. ವೇದಿಕೆಯ ಹಿಂಭಾಗದಲ್ಲಿ ಗೌರೀ-ಗಣೇಶರ ವಿಗ್ರಹಗಳನ್ನಿಟ್ಟು ಪೂಜೆ ಮಾಡಿದರು. ಪೂಜೆಯಾದ ನಂತರ ಕೆಲವು ಮನೋರಂಜಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವೇದಿಕೆಯ ಪಕ್ಕದಿಂದ ಯಾರೋ "ತೆರೆ ಹಾಕಿ" ಎಂದು ಹೇಳಿದರು. ಆಗ ಅಧ್ಯಕ್ಷರು ಮುಂದೆ ಬಂದು, "ರಂಗದ ಮೇಲೆ ದೇವರನ್ನಿಟ್ಟು ಪೂಜೆ ಮಾಡಲಾಗಿದೆ. ತೆರೆಹಾಕಿದರೆ ದೇವರನ್ನು ಮುಚ್ಚಿದಂತಾಗುವುದು. ಆದುದರಿಂದ, ಈ ದಿನ ತೆರೆಯನ್ನು ಹಾಕುವುದಿಲ್ಲ." ಎಂದು ಆದೇಶವನ್ನಿತ್ತರು. ಮಕ್ಕಳೂ, ದೊಡ್ಡವರೂ ತೆರೆದ ವೇದಿಕೆಯ ಮೇಲೆ ಬಂದು ಸಜ್ಜಾಗುವುದಕ್ಕೆ ಸ್ವಲ್ಪ ಅವಲಕ್ಷಣಪಟ್ಟರು (felt awkward). ಅದನ್ನು ಗಮನಿಸಿದ ನಾನು ಮರುದಿನ, ರಾಜೀವರಿಗೆ ಹೀಗೆಂದು ಬರೆದೆ:

"ಪ್ರಿಯ ರಾಜೀವ ಅಡಿಗರೇ,
          ನೆನ್ನೆ ಪೂಜೆಯಾದಮೇಲೆ ತೆರೆ ಹಾಕದೇ ಇದ್ದುದರಿಂದ, ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸ್ವಲ್ಪ ಅವಲಕ್ಷಣ ಭಾವನೆಯಾಯಿತು. ದೇವರು ಸರ್ವಾಂತರ್ಯಾಮಿ, ಎಲ್ಲೆಲ್ಲಿಯೂ ಇದ್ದಾನೆ ಎಂದು ಹೇಳುತ್ತೇವೆ. ಹಾಗಿರುವಲ್ಲಿ, ದೇವರನ್ನು ಮುಚ್ಚುವುದಕ್ಕಾಗುವುದೇ? ಮುಚ್ಚಿಡುವುದಕ್ಕಾಗುವುದೇ? ಮೂರ್ತಿಪೂಜೆ ಮಾಡಿದಾಕ್ಷಣ, ದೇವರು ಆ ಮೂರ್ತಿಯಲ್ಲಿ ಮಾತ್ರ ಇರುವನೆಂದು ಭಾವಿಸುವುದೇ? ದೇವರ ಅಸ್ತಿತ್ವವನ್ನು ಸೀಮಿತಗೊಳಿಸುವುದಕ್ಕಾಗುವುದೇ? ತೆರೆಯಲ್ಲಿಯೇ ದೇವರಿದ್ದಾನೆ. ಸಭಾಂಗಣದಲ್ಲಿ ಎಲ್ಲೆಲ್ಲಿಯೂ ದೇವರಿದ್ದಾನೆ. ನಿಮ್ಮ ಮಾತಿನಿಂದ, ಈ ದೇಶದಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ದೇವರ ವಿಚಾರದಲ್ಲಿ ಒಂದು ತಪ್ಪು ಭಾವನೆಯನ್ನು ಕೊಡುತ್ತಿದ್ದೀರಿ.
          ಇತಿ,
ಗೋಪೀವಲ್ಲಭ"

          ಅದಕ್ಕೆ ರಾಜೀವರು ಬಹು ರೋಷದಿಂದ, "ಗೋಪಿ, ನೀವು ’ಸಂಘದ ಕಾರ್ಯಕಾರೀಸಮಿತಿಯು ನಮ್ಮ ಮಕ್ಕಳನ್ನು ತಪ್ಪುದಾರಿಗೆ ಎಳೆಯುತ್ತಿದೆ’ ಎಂದು ದೂಷಿಸುತ್ತಿದ್ದೀರಿ. ನಿಮ್ಮ ಕಾಗದವನ್ನು ಸಂಘದ ಸದಸ್ಯರಿಗೆಲ್ಲಾ ಕಳುಹಿಸಿ ಬಹಿರಂಗ ಪಡಿಸುತ್ತೇನೆ." ಎಂದು ಹೆದರಿಸಿದರು. ಅದಕ್ಕೆ ನಾನು, "ರಾಜೀವರೇ, ಅಭ್ಯಂತರವೇನಿಲ್ಲ. ರೋಗಿ ಬಯಸುವುದೂ ಹಾಲು ಅನ್ನವೇ! ದಯವಿಟ್ಟು, ಅಗತ್ಯವಾಗಿ ನನ್ನ ಪತ್ರವನ್ನು ಸದಸ್ಯರಿಗೆಲ್ಲಾ ಕಳುಹಿಸಿ, ನನ್ನ ಅಭಿಪ್ರಾಯವನ್ನು ಎಲ್ಲರಿಗೂ ತಿಳಿಸಿರಿ. ನನ್ನ ಪತ್ರದ ಜೊತೆಗೆ ನಿಮ್ಮ ಉತ್ತರವನ್ನೂ ಕಳುಹಿಸಿದರೆ, ಇನ್ನೂ ಉತ್ತಮ." ಎಂದು ಬರೆದೆ. ಆದರೇಕೋ ರಾಜೀವರು ತಮ್ಮ ಬೆದರಿಕೆಯನ್ನು ಸಾಧಿಸಿದಂತೆ ಕಾಣಲಿಲ್ಲ.
*
          ಹದಿನಾರನೇ ಶತಮಾನಾರ್ಧದಲ್ಲಿ ಬಾಬರನ ಸೇನಾಪತಿ, ಮೀರ್ ಬಾಕಿಯು ಅಯೋಧ್ಯೆಯಲ್ಲಿ ಶ್ರೀರಾಮದೇವರ ಜನ್ಮಸ್ಥಳವೆಂದು ಹೆಸರಾದ "ರಾಮಜನ್ಮಭೂಮಿ"ಯ ಮೇಲೆ ಒಂದು ಮಸೀದಿಯನ್ನು ಕಟ್ಟಿಸಿದನು. ಅದೇ "ಬಬ್ರಿ ಮಸೀದಿ" (ಬಾಬರಿ ಮಸೀದಿ). ಆದರೂ ಅದು "ಮಸ್ಜಿದ್-ಇ-ಜನ್ಮಸ್ಥಾನ್" (ಜನ್ಮಸ್ಥಳದಲ್ಲಿಯ ಮಸೀದಿ) ಎಂದೇ ಪ್ರಸಿದ್ಧವಾಯಿತು. ಈ ಪ್ರಕರಣದಿಂದ, ಹಿಂದುಗಳ ಅಸಮಾಧಾನವು ನಾಲ್ಕು ಶತಮಾನಗಳಿಂದ ಕರುಬುತ್ತಿತ್ತು. ೧೯೮೦ರ ದಶಕದ ಉತ್ತರಾರ್ಧದಲ್ಲಿ, ವಿಶ್ವ ಹಿಂದು ಪರಿಷದ್ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ರಾಮಜನ್ಮಭೂಮಿಯನ್ನು ಪುನರಾಕ್ರಮಿಸಬೇಕೆಂದು ಚಳುವಳಿ ಹೂಡಲು ಹವಣಿಸಿದರು. ಆ ಸಂದರ್ಭದಲ್ಲಿ, ಆಗ ಭಾರತದ ಪ್ರಧಾನಿಗಳಾಗಿದ್ದ, ಶ್ರೀ ವಿ.ಪಿ. ಸಿಂಗ್ ಅವರಿಗೆ ಈ ಕೆಳಗಿನ ಪತ್ರವನ್ನು ಬರೆದು ಅಂಚೆಯ ಮೂಲಕ ಕಳುಹಿಸಿದೆ:
          "ರಾಮಾಯಣದಲ್ಲಿ ಹೇಳಿರುವ ಪ್ರಕಾರ, ತಂದೆಯು ತನ್ನ ಚಿಕ್ಕಮ್ಮನಿಗೆ ಕೊಟ್ಟಿದ್ದ ಭಾಷೆಯನ್ನು ನೆರವೇರುವಂತೆ ಮಾಡಿ, ತಂದೆಯ ಸತ್ಯಸಂಧತೆಯನ್ನು ಕಾಪಾಡಲು, ಶ್ರೀರಾಮನು ಸಂಪೂರ್ಣ ರಾಜ್ಯವನ್ನೇ ಬಿಟ್ಟುಕೊಟ್ಟು ಕಾಡಿಗೆ ಹೋದ. ಅಂತಹ ಉದಾತ್ತ ಮನಸ್ಸುಳ್ಳ ಆ ಶ್ರೀರಾಮದೇವರ ಹೆಸರಿನಲ್ಲಿ, ಕೇವಲ ಕೆಲವೇ ಎಕರೆ (ರಾಮಜನ್ಮ) ಭೂಮಿಗಾಗಿ, ಚಳುವಳಿ ಹೂಡಿ ಕೋಮುವಾರು ಗಲಭೆಯನ್ನೆಬ್ಬಿಸುವುದು ಸುತರಾಂ ಅರ್ಥವಿಲ್ಲದುದು. ಅಲ್ಲದೆ, ಈ ಆಂದೋಲನದಿಂದ ಶ್ರೀರಾಮನ ಮಹಿಮೆ, ಗೌರವಕ್ಕೆ ಅವಹೇಳನ ಮಾಡಿದಂತಾಗುವುದು. ಸುಮಾರು ನಾನ್ನೂರೈವತ್ತು ವರ್ಷಗಳ ಹಿಂದೆ ನಡೆದ ಅನ್ಯಾಯವನ್ನು ಈಗ ಸರಿಪಡಿಸಲು ಹೋಗಿ, ಮತವೈಷಮ್ಯದ ಕರಾಳ ಕಿಚ್ಚನ್ನು ಹಚ್ಚುವುದು ಸರ್ವಥಾ ಅಸಂಗತ (absurd). ಆ ಹಿಂದೆ ನಡೆದ ಅನ್ಯಾಯವಾದರೋ ಹಿಂದುಗಳ ಅಂತಃಕಲಹ, ಬಲಹೀನತೆಯಿಂದಲೇ ಅಲ್ಲವೇ ಉಂಟಾದುದು!
          ಆದುದರಿಂದ, ಭಾರತಸರ್ಕಾರವು ರಾಮಜನ್ಮಭೂಮಿಯನ್ನು ವಶಪಡಿಸಿಕೊಂಡು, ಅದನ್ನು ಒಂದು "ರಾಷ್ಟ್ರೀಯ ಉದ್ಯಾನ"ವನ್ನಾಗಿ ಪರಿವರ್ತಿಸುವುದು ಅವಶ್ಯಕ. ಆಗ, ಹಿಂದು, ಮುಸ್ಲಿಮರು ಮಾತ್ರವೇ ಅಲ್ಲದೆ, ಇತರ ಎಲ್ಲಾ ಮತದವರೂ, ದೇಶೀಯರೂ, ವಿದೇಶೀಯರೂ ಸಹ, ಆ "ರಾಮಜನ್ಮಭೂಮಿ ರಾಷ್ಟ್ರೋದ್ಯಾನ"ದ ಪ್ರಕೃತಿಸೌಂದರ್ಯವನ್ನು ನೋಡಿ ಆರಾಧಿಸಿ,ಆನಂದಪಡಬಹುದು. ಆಗಲೇ, ’ರಾಮಜನ್ಮಭೂಮಿ’ ಎಂಬ ಹೆಸರು ಅನ್ವರ್ಥವಾಗುವುದು. ’ರಾಮ’ ಎಂದರೇ ’ಎಲ್ಲರನ್ನೂ ಆಹ್ಲಾದಪಡಿಸುವವನು, ಸಂತೋಷಪಡಿಸತಕ್ಕವನು’ ಎಂದರ್ಥ."
[ ನಾನು ಈ ಕಾಗದ ಬರೆದ ಮೇಲೆ, ಕೆಲವು ತಿಂಗಳಲ್ಲಿಯೇ ಶ್ರೀ ವಿ.ಪಿ. ಸಿಂಗ್ ಅವರು ತಮ್ಮ ಪ್ರಧಾನಿಪದವಿಯನ್ನು ಕಳೆದುಕೊಂಡರು.]
*
          ಹಾಗೆಯೇ, ಕೆಲವು ವರ್ಷಗಳ ಹಿಂದೆ, ಶೌಚಾಸನಗಳನ್ನು (’ಟಾಯ್ಲೆಟ್ ಸೀಟ್ಸ್’) ತಯಾರಿಸುವ ಅಮೆರಿಕನ್ ಕಂಪನಿಯೊಂದು ಗಣೇಶನ, ಕಾಳಿಯ ಚಿತ್ರಗಳನ್ನು ಶೌಚಾಸನಮುಚ್ಚಳಗಳ ಮೇಲೆ ಮುದ್ರಿಸಿ ಮಾರಾಟಮಾಡಲಾರಂಭಿಸಿತು. ಕೆಲವು ವರ್ಷಗಳ ನಂತರ, ಮತ್ತೆ ಕೆಲವು ಅಮೆರಿಕನ್ ಕಂಪನಿಗಳು ಹಿಂದು ದೇವರ ಚಿತ್ರಗಳನ್ನು ಚಪ್ಪಲಿಗಳ ಮೇಲೆಯೂ, ಹೆಂಗಸರ ಲಂಗೋಟಿಚೆಡ್ಡಿಗಳ  (’ಥಾಂಗ್ಸ್’) ಮೇಲೆಯೂ ಮುದ್ರಿಸಿ ಮಾರಲಾರಂಭಿಸಿದುವು. ಕೆಲವು ಹಿಂದುಗಳು, ತಮ್ಮ ದೇವರುಗಳನ್ನು ಅವಹೇಳನ ಮಾಡಲು ಈ ಕಂಪನಿಗಳು ಈ ರೀತಿ ಮಾಡುತ್ತಿರುವುವೆಂದು ರೋಷಗಂಡು, ಅವುಗಳ ವರ್ತನೆಯನ್ನು ಪ್ರತಿಭಟಿಸಿ, ಆ ಕಂಪನಿಗಳ ಮಾಲಿಕರಿಗೆ ಪತ್ರಗಳನ್ನು ಬರೆದು, ಅನೇಕ ಅನಿವಾಸಿ ದೇಶೀಯ ಪತ್ರಿಕೆಗಳಲ್ಲಿಯೂ ಪ್ರತಿಭಟನ ಪತ್ರಗಳನ್ನು ಪ್ರಕಟಪಡಿಸಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಅದನ್ನೋದಿ ನಾನು,  ಒಂದು ಅನಿವಾಸಿ ವಾರಪತ್ರಿಕೆಯ ’ಲೆಟರ್ಸ್ ಟು ದಿ ಎಡಿಟರ್ ಕಾಲಂ’ಗೆ, ಈ ರೀತಿ ಬರೆದು ಕಳುಹಿಸಿದೆ:
          "ನಾವು, ಹಿಂದುಗಳು ದೇವರು ’ಸರ್ವಾಂತರ್ಯಾಮಿ’, ’ಸರ್ವವ್ಯಾಪಿ’ ಎಂದು ಹೇಳಿ ಕೊಂಡಾಡುತ್ತೇವೆ. ಉಪನಿಷತ್ತುಗಳು ’ಸರ್ವಂ ಬ್ರಹ್ಮಮಯಮ್’ ಎಂದು ಸಾರುತ್ತವೆ. ಪುರಂದರ ದಾಸರು ’ಅಣುರೇಣುತೃಣಕಾಷ್ಠಪರಿಪೂರ್ಣ ಗೋವಿಂದ’ ಎಂದು ಹಾಡಿ ಹಿಗ್ಗಿದರು. ಈ ಪ್ರಕಾರ, ದೇವರು ಚಪ್ಪಲಿಗಳಲ್ಲಿ ಮಾತ್ರವೇ ಅಲ್ಲ, ಚಪ್ಪಲಿಗೆ ಅಂಟಿಕೊಂಡಿರುವ ಮಣ್ಣಿನ ಕಣಕಣಗಳಲ್ಲಿಯೂ ಅಡಗಿರುವನು, ಹೆಂಗಸರ ಒಳಚೆಡ್ಡಿಗಳ ನೂಲುನೂಲುಗಳಲ್ಲಿಯೂ ರಾರಾಜಿಸುತ್ತಿರುವನು. ಸರ್ವವ್ಯಾಪಿಯಾದ ದೇವರು ರಸದಲ್ಲಿಯೂ ಇರುವನು, ಕಸದಲ್ಲಿಯೂ ಇರುವನು. ಹೀಗಿರುವಲ್ಲಿ, ದೇವರ ಚಿತ್ರವನ್ನು ಚಪ್ಪಲಿ-ಚೆಡ್ಡಿಗಳ ಮೇಲೆ, ಶೌಚಪೀಠಮುಚ್ಚಳಗಳ ಮೇಲೆ ಅಚ್ಚು ಹಾಕಿದರೆಂದು ಕೋಪಗೊಂಡರೆ, ನಾವೇ ದೇವರ ಔನ್ನತ್ಯವನ್ನು ಅಲ್ಲಗಳೆದಂತಾಗುವುದಲ್ಲವೇ? ಕೋಪಗೊಳ್ಳುವ ಬದಲು, ಕಂಪನಿಯವರು ತಮ್ಮ ವ್ಯಕ್ತವಾದ ಅಪಹಾಸ್ಯಕರ ಕಾರ್ಯದಿಂದ ನಿಜವಾಗಿಯೂ ದೇವರ ಸರ್ವವ್ಯಾಪ್ತತೆಯನ್ನು ಕಾರ್ಯತಃ ಪ್ರಸಿದ್ಧಪಡಿಸಿದುದನ್ನು ಶ್ಲಾಘಿಸಿ, ಅವರ ಕುಯುಕ್ತಿಯನ್ನು ಕುಂಠಿತಗೊಳಿಸಿ, ಅವರೇ ತಲೆತಗ್ಗಿಸುವಂತೆ ಮಾಡಬೇಕಾಗಿತ್ತು. ಅದೀಗ “ನಮ್ಮ” ದೇವರ, ನಮ್ಮ ಹಿಂದುಧರ್ಮದ ಮೇಲ್ಮೆಯನ್ನು ಎತ್ತಿಹಿಡಿಯುವ ಮಾರ್ಗ."
*      *      *
          ನನ್ನ ಅಧ್ಯಕ್ಷತೆಯ ಅವಧಿ ಮುಗಿದ ಮೂರನೇ ವರ್ಷಕ್ಕೆ ಶಂಕರ ಶಾಸ್ತ್ರಿಗಳು ಸಂಘದ ಅಧ್ಯಕ್ಷರಾದರು. ಶಾಸ್ತ್ರಿಗಳು ಬಹಳ ಸಂಪ್ರದಾಯಸ್ಥರು. ಸಂಘದ ಗೌರೀ-ಗಣೇಶ ಪೂಜೆಯನ್ನು ಅವರೇ ಮಾಡುತ್ತಿದ್ದರು. ಸದಸ್ಯರ ಮನೆಗಳಲ್ಲಿ ಸತ್ಯನಾರಾಯಣಪೂಜೆಮುಂತಾದ ವಿಶೇಷ ಪೂಜೆಗಳನ್ನು ಮಾಡುತ್ತಿದ್ದರು. ಮತ್ತು, ಮುಂಜಿ-ವಿವಾಹಗಳಲ್ಲಿ ಅವರೇ ಪೌರೋಹಿತ್ಯವನ್ನು ವಹಿಸುತ್ತಿದ್ದರು. ನಾನು ಬರೆಯುವಂತಹ ಲೇಖನ/ಬರಹಗಳನ್ನು ಸಂದೇಶದಲ್ಲಿ ಪ್ರಕಟಿಸಲು ಅನರ್ಹಗೊಳಿಸಲೆಂದೋ ಏನೋಶಂಕರ ಶಾಸ್ತ್ರಿಗಳು ಸಂಘದ ಧ್ಯೇಯಕ್ಕೆ ಹೊಸದಾಗಿ ಒಂದು ನಿಯಮಾವಳಿ ಮಾಡಿ ಪ್ರಕಟಿಸಿದರು:

          ಕುವೆಂಪು ಕನ್ನಡ ಸಂಘದ ಧ್ಯೇಯ -
                                ಭಾರತ ಸಂಸ್ಕೃತಿಯನ್ನೂ, ಕರ್ನಾಟಕ ಸಂಸ್ಕೃತಿಯನ್ನೂ ಪ್ರೋತ್ಸಾಹಿಸಿ ಪೋಷಿಸುವುದು
                                ಭಾರತ ಮತ್ತು ಕರ್ನಾಟಕ ಪರಂಪರಪ್ರಾಪ್ತಿಯನ್ನು ಗೌರವಿಸಿ ಸಂರಕ್ಷಿಸುವುದು.

ಈ ನಿಯಮಾವಳಿಯನ್ನು ಪ್ರತಿಯೊಂದು ಸಂದೇಶದಲ್ಲೂ ಪ್ರಕಟಿಸಿ, ಸದಸ್ಯರು ಅದಕ್ಕನುಸಾರವಾಗಿ ಪ್ರಬಂಧ, ಕವನ, ಮುಂತಾದ  ಲೇಖನಗಳನ್ನು ಬರೆದು, ಸಂದೇಶದಲ್ಲಿ ಪ್ರಕಟಿಸಲು ಕಳುಹಿಸಿಕೊಡಬೇಕೆಂದು ಕೋರುತ್ತಿದ್ದರು. ಶಂಕರ ಶಾಸ್ತ್ರಿಗಳ ಪ್ರಕಾರ ಮತ್ತು ಅವರ ನಂತರ ಬಂದ ಎಲ್ಲಾ ಅಧ್ಯಕ್ಷರ ಮತ್ತು ಸಂಘದ ಇತರ ಗಣ್ಯ ಸದಸ್ಯರ ತಿಳಿವಳಿಕೆಯ ಪ್ರಕಾರ, ಭಾರತ ಸಂಸ್ಕೃತಿ, ಕರ್ನಾಟಕ ಸಂಸ್ಕೃತಿ ಎಂದರೆ, ದೇವರಲ್ಲಿ ನಂಬಿಕೆ ಇಡುವುದು, ದೇವರನ್ನು ಪೂಜಿಸುವುದು ಮತ್ತು ಶಾಸ್ತ್ರಸಂಪ್ರದಾಯಗಳನ್ನು ಆಚರಿಸುವುದು - ಇವುಗಳೇ ಬಹು ಮುಖ್ಯ, ಎಂದು ತೋರುತ್ತೆ. ಆ ಕಾರಣದಿಂದಲೇ ಏನೋ, ನಾನು ಏನು ಬರೆದು ಕಳುಹಿಸಿದರೂ ಅದನ್ನು ಯಾರೂ ’ಸಂದೇಶ’ದಲ್ಲಿ ಪ್ರಕಟಿಸುತ್ತಿರಲಿಲ್ಲ.
*       *       *
          ಕೆಲವು ವರ್ಷಗಳಾದಮೇಲೆ, ವಿಶ್ವನಾಥರು ನಮ್ಮ ಕುವೆಂಪು ಸಂಘದ ಅಧ್ಯಕ್ಷರಾದರು. ಹಿಂದೆ ನನ್ನ ಅಧ್ಯಕ್ಷವಾಣಿ, ಸಂಪಾದಕೀಯಗಳನ್ನು ಅವರು ಬಹಳ ಶ್ಲಾಘಿಸಿದ್ದರಾದುದರಿಂದ, ವಿಶ್ವನಾಥರು ಖಂಡಿತ ನನ್ನ ಬರಹವನ್ನು’ಸಂದೇಶ’ದಲ್ಲಿ ಪ್ರಕಟಿಸುವರೆಂಬ ಪೂರ್ಣ ಭರವಸೆಯಿಂದ, ಈ ಕೆಳಗೆ ಕೊಟ್ಟಿರುವ "ಚಿಂತನಾಹಾರ" (Food for Thought) ಎಂಬ, ಸ್ವಲ್ಪ ಆಲೋಚನೆಯನ್ನು ಕೆರಳಿಸುವಂಥ, ಕೆಲವು ವೈಚಾರಿಕೋಕ್ತಿಗಳ ಪಟ್ಟಿಯೊಂದನ್ನು ಅವರಿಗೆ ಕಳುಹಿಸಿದೆ
ಚಿಂತನಾಹಾರ

. ಮಣದಷ್ಟು ವಿದ್ಯೆಗಿಂತ ಕಣದಷ್ಟು ಬುದ್ಧಿಯೇ ಲೇಸು.
 ೨. ಮುಖ್ಯವಾಗಿ, ಆರೋಗ್ಯವೂ, ಆನಂದವೂ ನಮ್ಮ ಕೈಯಲ್ಲೇ ಇರುವುದು.
 ೩. ಜೀವನವು ಸುಂದರವಾಗಿಲ್ಲದಿರಬಹುದು.  ಆದರೂ, ಜೀವನದಲ್ಲಿ ಅದೆಷ್ಟು ಸೌಂದರ್ಯವಿದೆ!
 ೪. ಮಾನವನೊಂದು ಬಯಸಿದರೆ, ಸಂದರ್ಭವು ತಾ ಬೇರೊಂದು ಸಾಧಿಸುವುದು.
 ೫. ಕೋಪಕ್ಕೂ ವಿವೇಚನೆಗೂ ವಿಪರ್ಯಯ (inverse) ಸಂಬಂಧ.
. ಪ್ರಪಂಚದಲ್ಲಿ ಜಯಗಳಿಸುವುದಕ್ಕೆ ಪ್ರಾಮಾಣಿಕತೆಯು ಉತ್ತಮನೀತಿ ಅಲ್ಲದಿರಬಹುದಾದರೂ,
ಪ್ರಪಂಚವನ್ನು ಎದುರಿಸುವುದಕ್ಕೆ ಪ್ರಾಮಾಣಿಕತನವು ಸರ್ವೋತ್ತಮನೀತಿಯೇ ಸರಿ.
 ೮. ಬುದ್ಧಿಗೂ ಅಜ್ಞಾನಕ್ಕೂ ವಿರೋಧವಿಲ್ಲ. ಅಜ್ಞಾನಕ್ಕೂ ಮಹತ್ವಕ್ಕೂ ವಿರೋಧವಿಲ್ಲ.
 ೯. ಜ್ಞಾನಿಗೆ ಎಲ್ಲರಲ್ಲಿಯೂ ಸ್ನೇಹ, ಎಲ್ಲೆಲ್ಲಿಯೂ ಸೌಂದರ್ಯ, ಯಾವಾಗಲೂ ಸಂತೋಷ.
೧೦. ಖಂಡನೆಯು ಸುಧಾರಣೆಗೆ ಪ್ರಚೋದಕಾರಿಯಾಗಬಲ್ಲದು.
೧೧. ಸಂಕಲ್ಪಬಲವು (willpower) ಚಾಪಲ್ಯವನ್ನು ತಡೆಯಲು ಸ್ವಂತ ಸಾಧನೆಯಿಂದ ಗಳಿಸಿದ ಸಾಮರ್ಥ್ಯವಷ್ಟೆ.
೧೨. "ನಾನು, ನನ್ನ, ನನಗೆ" ಎಂಬ ಭಾವನೆಯು ಜಾಗೃತಶರೀರದಲ್ಲಿ ಮಾತ್ರ ಇರುವುದು ಸಾಧ್ಯ.
೧೩. ವಿಶ್ವವು ನಿತ್ಯ, ಅಪಾರ, ಸ್ವಯೋಜಿತ ಮತ್ತು ಸ್ವವ್ಯವಸ್ಥಿತ. ವಿಶ್ವದಲ್ಲಿ ಎಲ್ಲವೂ ವಿಕಸಿತವೇ.
೧೪. ’ದೇವರು’ ಎನ್ನುವುದು (ಪ್ರಾಚೀನ) ಮಾನವನು ತನ್ನ ಅಜ್ಞಾನದಿಂದ ಸೃಜಿಸಿದ ಕಲ್ಪನಾಮೂರ್ತಿ.
೧೫. (ಭಯದಿಂದ) ದೇವರನ್ನು ಮೆಚ್ಚಿಸಲು, ಮಾನವನು ಮತಗಳನ್ನು ಸ್ಥಾಪಿಸಿದನು.
೧೬. ದೇವರ ’ಮಹತ್ವ’ವನ್ನು ಕಾಪಾಡಲು, ಮಾನವನು ಶನಿ/ಸೇಟನ್/ಶೈತಾನ್‍-ಅನ್ನು ಸೃಷ್ಟಿಸಿದನು.
೧೭. ವಿಧಿ ಎನ್ನುವುದು ಅಜ್ಞಾನಿಗಳ ಪಲಾಯನ ಮಂತ್ರ.
೧೮. ಸಕಲ ಮತಾಚಾರನೀತಿಸಂಪ್ರದಾಯಗಳೂ ಮಾನವಪ್ರಣೀತ.
೧೯. ವೇದ, ಬೈಬಲ್, ಖೊರಾನ್, ಮುಂತಾದ ಎಲ್ಲಾ ಮತಗ್ರಂಥಗಳೂ ಮಾನವಕೃತ.
೨೦. ಪರಬ್ರಹ್ಮವು ಸತ್ಯ; ಪರಮಾತ್ಮವು ಮಿಥ್ಯ.
೨೧. ಪ್ರಾಣಕ್ಕೆ ಅಸ್ತಿತ್ವವಿಲ್ಲ. ಆತ್ಮಕ್ಕೂ ಅಸ್ತಿತ್ವವಿಲ್ಲ.
೨೨. ಜನರು ಜೀವಿಸಿರುವಾಗಲೇ ನಾವು ಅವರನ್ನು ಪ್ರೀತಿಸಿ ಆದರಿಸಬೇಕು.
೨೩. ’ಮರಣಾನಂತರ ಬದುಕು’ ಒಂದು ವಿರೋಧಾಭಾಸಾಲಂಕಾರ.
೨೪. ಸ್ವರ್ಗ, ನರಕ, ವೈಕುಂಠ, ಕೈಲಾಸ, ಇತ್ಯಾದಿ ಎಲ್ಲವೂ ಕಾಲ್ಪನಿಕ; ಯಥಾರ್ಥವಲ್ಲ.
೨೫. ಅರ್ಥಮಾಡಿಕೊಳ್ಳಲು/ವಿವರಿಸಲು ಅಸಾಧ್ಯವಾಗಿ ತೋರುವ ಪ್ರಸಂಗವನ್ನು ಜನರು ಪವಾಡವೆನ್ನುತ್ತಾರೆ.
೨೬. ಪ್ರತಿಯೊಬ್ಬ ಮಾನವನ ಜನ್ಮವೂ ಕೇವಲ ಅನಿರೀಕ್ಷಿತ (by chance); ಖಂಡಿತ ವಿಧಿವಶದಿಂದಲ್ಲ.
೨೭. ಭೂಮಿಯ ಮೇಲಿನ ಜೀವಿಕೆಯು ಪೂರ್ವಸಂಕಲ್ಪಿತವೂ ಅಲ್ಲ, ಆಕಸ್ಮಿಕವೂ (accidental) ಅಲ್ಲ.
೨೮. ಜೀವವು ಕೇವಲ ನಿರಂತರ, ಅಶಮನೀಯ ವಿಕಾಸಶಕ್ತಿಯ ಫಲ.
೨೯. ಯಾರೂ ಸಾವನ್ನು ಅನುಭವಿಸಲಾಗುವುದಿಲ್ಲ.
೩೦. ಮಾನವನಿಗೆ ಪೂರ್ವಜನ್ಮವೂ ಇರಲಿಲ್ಲ, ಪುನರ್ಜನ್ಮ/ಪುನರುತ್ಥಾನವೂ ಇರುವುದಿಲ್ಲ.

          ಆದರೆ, ವಿಶ್ವನಾಥರು ಸಹ ನನ್ನ ’ಚಿಂತನಾಹಾರ’ ಪಟ್ಟಿಯು ಸಂಘ ಸಂದೇಶದಲ್ಲಿ ಪ್ರಕಟಿಸಲ್ಪಡಲು ಯೋಗ್ಯವಲ್ಲವೆಂದು ಹೇಳಿ ನಿರಾಕರಿಸಿದರು. ನನಗೆ ಬಹಳ ಆಶ್ಚರ್ಯವಾಯಿತು.
*       *       *
          ಒಂದು ಸಲ, ಕುವೆಂಪು ಸಂಘವು ದೀಪಾವಳಿ/ರಾಜ್ಯೋತ್ಸವ ಹಬ್ಬವನ್ನು ಭರತನಾಟ್ಯ, ಕೋಲಾಟ, ಮುಂತಾದ ವಿವಿಧ ಕಾರ್ಯಕ್ರಮದೊಡನೆ ಆಚರಿಸಿತು. ಆ ಕಾರ್ಯಕ್ರಮವನ್ನು ಕುರಿತು ಒಂದು ಪ್ರಶಂಸಾತ್ಮಕ ಟೀಕೆಯನ್ನು ಹೀಗೆಂದು ಬರೆದೆ:
          “. . . . . . . . . . . . . . . . . . . . . . .  . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
          ಸಂಘದ ಕಂದಮ್ಮಗಳಿಂದ ಕುವೆಂಪುರವರ "ಹಚ್ಚೇವು ಕನ್ನಡದ ದೀಪ" ಎಂಬ ಪ್ರಾರ್ಥನೆ ಗೀತೆಯಾದಮೇಲೆ, ವಿಜಯೇಂದ್ರರ ನೇತೃತ್ವದಲ್ಲಿ ಕರ್ನಾಟಕದ ಮೇಲ್ಮೆಯನ್ನು ಕುರಿತಾದ ಕೆಲವು ಸಮೂಹಸಂಗೀತಗಳು.  ಅನಂತರ, ಜಲಕ್ರೀಡೆಯಾಡುತ್ತಿದ್ದ "ಬೆತ್ತಲೆ ಭಾಮಿನಿಯರು" ತಮ್ಮ ವಸ್ತ್ರಗಳನ್ನು ಕಾಣದೆ ಎರಡು ಕೈಗಳಿಂದಲೂ ತಮ್ಮ ಮಾನವನ್ನು ಮುಚ್ಚಿ ಲಜ್ಜಿತರಾಗಿದ್ದಾಗ, "ಚಿತ್ತಚೋರನ" ಚೋದನೆಯಿಂದ ನಾಚಿಕೆಯನ್ನು ಬಿಟ್ಟು ಕೈಗಳೆರಡನ್ನೂ ಎತ್ತಿ ಮುಗಿದು ದೇಹಾಭಿಮಾನದಿಂದ ಮುಕ್ತರಾದ ಗೋಪಿಕಾಸ್ತ್ರೀಯರ ಜ್ಞಾನಸಿದ್ಧಿಯ ಚಿತ್ರ. ಮತ್ತೆ, ಹರಿಯು "ದುರುಳ ಹಿರಣ್ಯಕನುದರವ ಸೀಳಿ, ಸ್ಮರಣೆ ಗೈದ ಪ್ರಹ್ಲಾದನ ರಕ್ಷಿಸಿದ" ಅತ್ಯದ್ಭುತ ದೃಶ್ಯ. ಮುಂದೆ, "ಭರದಿ ಅಕ್ಷಯವನಿತ್ತು,ತರುಣಿ ದ್ರೌಪದಿಯ" ಮಾನಭಂಗವನು ತಪ್ಪಿಸಿದ ಹೃದಯಂಗಮ ನೋಟ.  ಈ ಘಟನೆಗಳೆಲ್ಲಾ ನಮ್ಮ ಕಣ್ಣೆದುರಿಗೇ ನಡೆದಂತೆ ಅದ್ಭುತವಾಗಿ ಅಭಿನಯಮಾಡಿ ನಮ್ಮನ್ನು ಬೆರಗುಗೊಳಿಸಿದ ಕುಮಾರಿ ಭವಾನಿಯ ಭರತನಾಟ್ಯ. ಅದಾದಮೇಲೆ, ಉಚಿತವಾದ ವೇಷಭೂಷಣಗಳಿಂದಲಂಕೃತರಾದ ಮಕ್ಕಳಿಂದ ಬಲೀಂದ್ರ ನಾಟಕ. ಆಟಮರೆತು ಕೋಲು ತಪ್ಪಿದರೂ ತನ್ನ ತಾಳದಿಂದಲೇ ಸಭಿಕರೆಲ್ಲರ ಮೆಚ್ಚುಗೆಯ ಕರತಾಡನವನ್ನು ಗಳಿಸಿದ ಕೋಲಾಟ. ಇನ್ನು, ಆ ಕೊರವಂಜಿ ಕುಣಿತ! ಏನು ಹೇಳೋಣ! ಹಿರಿಯ ಕೊರವಂಜಿ ತನ್ನ ಅನುಭವಾಭಿನಯದಿಂದ ಸೌಂದರ್ಯವನ್ನು ಸೂಸುತ್ತಿದ್ದರೆ, ಆ ಮುದ್ದು ಮರಿ ಕೊರವಂಜಿ ತನ್ನ ಮುಗ್ಧ ನರ್ತನದಿಂದ ನಮ್ಮೆಲ್ಲರ ಮನಸ್ಸನ್ನೂ ಸೂರೆಗೊಂಡಿತು.  ನನಗಂತೂ, ಆ ಕ್ಷಣವೇ ನನ್ನ ಬಲಗೈ ಚಾಚಿ, "ನನಗೆ ಇನ್ನೊಂದು ಕಂಕಣಬಲವಿದೆಯೇ?" ಎಂದು ಕಣಿ ಕೇಳೋಣ ಎನ್ನಿಸಿತು.  ತದನಂತರ, ಹಲಕೆಲವು ಶೃಂಗಾರರಸಭರಿತ ಕನ್ನಡ ಚಲನಚಿತ್ರಗಳ ಹಾಡುಗಳಿಂದ ಪ್ರೇಕ್ಷಕರನ್ನು, ಅದರಲ್ಲೂ ಹೆಂಗಸರನ್ನುಪದೇ ಪದೇ ಉದ್ರೇಕಿಸಿ, ಸಭೆಯಲ್ಲಿ ಕೋಲಾಹಲವನ್ನೆಬ್ಬಿಸಿದ, ಮಮತಾ - ಸುರೇಶ್ ರವರ ಗುಂಪಿನಿಂದ ಯುಗಳಸಂಗೀತ. ಕಡೆಯಲ್ಲಿ, ಇಂತಹ ಅಮೋಘವಾದ ಮನೋರಂಜಕ ಕಾರ್ಯಕ್ರಮಕ್ಕೆ ಕಲಶವಿಟ್ಟಂತೆ ಒಂದು ಭಾರಿ ಹಬ್ಬದೂಟ.
          ಒಟ್ಟಿನಲ್ಲಿ, ಕುವೆಂಪು ಸಂಘದ ದೀಪಾವಳಿ/ರಾಜ್ಯೋತ್ಸವವು ಬಹು ವಿಜೃಂಭಣೆಯಿಂದ ನಡೆಯಿತೆಂದು ಹೇಳಿದರೆ ಎಳ್ಳಷ್ಟೂ ಅತಿಶಯೋಕ್ತಿಯಾಗಲಾರದು.”
          ಈ ಪತ್ರವನ್ನು ಸಂದೇಶದಲ್ಲಿ ಪ್ರಕಟಿಸಲು, ಸಂಘದ ಉಪಾಧ್ಯಕ್ಷರಿಗೆ ಕಳುಹಿಸಿದೆ. (ಕೆಲಸದ ನಿಮಿತ್ತ, ಅಧ್ಯಕ್ಷರು ಭಾರತಕ್ಕೆ ಹೋಗಿದ್ದರು.) ಆದರೆ, ಸಂಘದ ದೀಪಾವಳಿ ಕಾರ್ಯಕ್ರಮವನ್ನು ಪ್ರಶಂಸಿಸಿ ಬರೆದ ಈ ಲೇಖನವನ್ನೂ ಸಹ ಸಂದೇಶದಲ್ಲಿ ಪ್ರಕಟಿಸಲಿಲ್ಲ! ಬಹುಶಃ, ಅತೀ ವಿನೀತರಾದ (too modest) ನಮ್ಮ ಸಂಘದ ಕಾರ್ಯಕಾರೀ ಸಮಿತಿಯವರಿಗೆ ಸಂಗೀತಪಿತಾಮಹ ಶ್ರೀ ಪುರಂದರದಾಸರೇ ತಮ್ಮ ಕೃತಿಯಲ್ಲಿ ಉಲ್ಲೇಖಿಸಿರುವ "ಬೆತ್ತಲೆ ಭಾಮಿನಿಯರು"ಎಂಬ ಪದಗುಚ್ಚವು ಬಹು ಅಸಭ್ಯವಾಗಿ ತೋರಿತೆಂದು ಕಾಣುತ್ತೆ!
*      *      *
            ಒಂದು ದಿನ, ಕುವೆಂಪುಸಂಘದ ಕೆಲವು ಪ್ರಮುಖಸದಸ್ಯರು ಲೋಕಾಭಿರಾಮವಾಗಿ ಸೇರಿದ ಒಂದು ಖಾಸಗಿ ಕೂಟದಲ್ಲಿ, ಒಬ್ಬ ಪ್ರಮುಖ ಸದಸ್ಯರಂತೂ ನೇರವಾಗಿ, "ಗೋಪಿ ನಾಸ್ತಿಕರು. ಅವರು ನಮ್ಮ ಸಂಘದಲ್ಲಿರಲು ಅರ್ಹರಲ್ಲ, ಅವರನ್ನು ಸಂಘದಿಂದ ಹೊರದಬ್ಬಬೇಕು." ಎಂದರಂತೆ. ಆ ವಿಷಯವನ್ನು, ಅದೇ ಕೂಟದಲ್ಲಿ ಹಾಜರಿದ್ದ ನನ್ನ ಆಪ್ತಸ್ನೇಹಿತರಾದ ಮತ್ತೊಬ್ಬ ಪ್ರಮುಖ ಸದಸ್ಯರು ನನಗೆ ಹೇಳಿದರು. ಅದಕ್ಕೆ ನಾನು, ಕುವೆಂಪು ಸಂಘವು ಒಂದು ಮತೀಯ ಸಂಘವೆಂದು ಈಗ ಖಚಿತಪಡಿಸಲಿ, ತತ್‍-ಕ್ಷಣ ನಾನೇ ಸಂತೋಷದಿಂದ ಸಂಘವನ್ನು ಬಿಟ್ಟು ಹೋಗುತ್ತೇನೆ, ನನ್ನನ್ನು ಹೊರದಬ್ಬಿ ಯಾರೂ ಕೈ ಉಳುಕಿಸಿಕೊಳ್ಳುವುದು ಬೇಡ, ಎಂದೆ. ಹಿಂದುಗಳಲ್ಲಿಯೂ ಇಷ್ಟೊಂದು ಅಸಹಿಷ್ಣುತೆ ಇರುವವರು ಇದ್ದಾರೆಯೇ ಎಂದು ನನಗೆ ಮಹದಾಶ್ಚರ್ಯವಾಯಿತು.
*       *       *
          ಈ ತೆರನಾಗಿ, ನನಗೆ, ಅಲ್ಲ ನನ್ನ ಲೇಖನಗಳಿಗೆ, ಅವಹೇಳನ ಮಾಡುವುದಿರಲಿ, ಭಾರತ ಸಂಸ್ಕೃತಿಯ ತಳಪಾಯವಾದ ಅಭಿಪ್ರಾಯ ಮತ್ತು ವಾಕ್ ಸ್ವಾತಂತ್ರ್ಯಕ್ಕೂ, ಅಮೆರಿಕದ ’ಮೊದಲನೇ ತಿದ್ದುಪಡಿ’ (First Amendment) ಹಕ್ಕಿಗೂ ತಿಲಾಂಜಲಿಯನ್ನು ಬಿಟ್ಟಿದ್ದ ನಮ್ಮ ಕುವೆಂಪು ಸಂಘದ ಕಾರ್ಯಕಾರೀ ಸಮಿತಿಗಳಿಗೆ ಸವಾಲುಹಾಕಿ ಹೀಗೆ ಬರೆದೆ:

          “ನಮ್ಮ ಸಂಘದ ಅಧ್ಯಕ್ಷರು, ಸಂದೇಶದಲ್ಲಿ ಪ್ರಕಟಿಸಲು, ಸದಸ್ಯರಿಂದ ಲೇಖನಗಳನ್ನೂ, ಪದ್ಯಗಳನ್ನೂ, ಚರ್ಚಾತ್ಮಕ ಟೀಕೆಗಳನ್ನೂ ಪದೇಪದೇ ಯಾಚಿಸುತ್ತಾರೆ. ಆದರೆ, ಆ ಬರಹಗಳು (ಅವರ ಅಭಿಪ್ರಾಯದಂತೆ) ಭಾರತ ಮತ್ತು ಕರ್ನಾಟಕ ಸಂಸ್ಕೃತಿಗಳಿಗೆ ಅನುಗುಣವಾಗಿರಬೇಕು ಹಾಗೂ ಭಾರತ ಮತ್ತು ಕರ್ನಾಟಕ ಪರಂಪರಪ್ರಾಪ್ತಿಯನ್ನು ಅವಶ್ಯವಾಗಿ ಗೌರವಿಸಬೇಕು ಎಂದು ಷರತ್ತು ಹಾಕುತ್ತಾರೆ. ನಮ್ಮ ಸಂಘದ ಅಧ್ಯಕ್ಷರು ಅಥವಾ ಯಾವ ಸದಸ್ಯರಾದರೂ ಸರಿ, ದಯವಿಟ್ಟು, ಭಾರತ ಸಂಸ್ಕೃತಿ ಏನು, ಕರ್ನಾಟಕ ಸಂಸ್ಕೃತಿ ಏನು ಎಂದು ತಿಳಿಯಪಡಿಸುವಿರಾ?
          “ದೇವರಲ್ಲಿ ನಂಬಿಕೆ ಇಡುವುದೇ ಭಾರತ ಸಂಸ್ಕೃತಿಯ ’ಲಿಟ್ಮಸ್’ ಪರೀಕ್ಷೆಯೇ? ಗೌತಮ ಬುದ್ಧನು, ’ಆಸೆಯೇ ದುಃಖಕ್ಕೆ ಮೂಲ.’ ಎಂದು ಸಾರಿದನು. ಯಾವ ದುಃಖವೂ ಇಲ್ಲದೆ ಸದಾ ಆನಂದವನ್ನು ಅನುಭವಿಸಬೇಕಾದರೆ, ಮೊದಲು ’ಆಸೆಯನ್ನು ಬಿಡಬೇಕು’ ಎಂದು ಬುದ್ಧನು ಹೇಳಿದನೇ ಹೊರತು ’ದೇವರನ್ನು ಪೂಜಿಸಬೇಕು, ದೇವರನ್ನು ಪ್ರಾರ್ಥಿಸಬೇಕು’ ಎಂದು ಹೇಳಲಿಲ್ಲ. ಸಹಜವಾಗಿಯೇ, ಬುದ್ಧನು ನಾಸ್ತಿಕನೆಂದು ಪರಿಗಣಿಸಲ್ಪಟ್ಟನು. ಹಾಗಾದರೆ, ಬುದ್ಧನು ಭಾರತೀಯ ಸಂಸ್ಕೃತಿಗೆ ವಿರೋಧಿಯೇ? ಸೋಜಿಗವೋ ಎಂಬಂತೆ, ಹಿಂದುಗಳೇ, ಹಿಂದು ಮತದವರೇಈಗ, ಬುದ್ಧನನ್ನು ವಿಷ್ಣುವಿನ ಹತ್ತವತಾರಗಳಲ್ಲಿ ಒಂಭತ್ತನೆಯ ಅವತಾರವೆಂದು ಪರಿಗಣಿಸುತ್ತಾರೆ!
          “ಶಾಸ್ತ್ರಸಂಪ್ರದಾಯಗಳನ್ನು ಅನುಸರಿಸುವುದೇ ಭಾರತೀಯ ಸಂಸ್ಕೃತಿಯ ಮಾನದಂಡವೇ? ಬಹುಮಂದಿ ವಿವಾಹಿತ ಭಾರತೀಯ ಮಹಿಳೆಯರು (ಸುಮಂಗಲೆಯರು), ಅಮೆರಿಕದಲ್ಲಿ ಮಾತ್ರವೇ ಅಲ್ಲ, ಈಗ ಇಂಡಿಯಾನಲ್ಲೂ ಸಹ, ತಲೆಕೂದಲನ್ನು ಕತ್ತರಿಸಿಕೊಳ್ಳುತ್ತಾರೆ ಮತ್ತು ಕುಂಕುಮವನ್ನು ಧರಿಸುವುದಿಲ್ಲ (ಅರಿಸಿನ ಲೇಪನವನ್ನು ಮರೆತೇ ಬಿಡಿ). ಈ ನಡತೆ, ಅಭ್ಯಾಸಗಳು ನಮ್ಮ ಶಾಸ್ತ್ರ-ಸಂಪ್ರದಾಯಗಳಿಗೆ ವಿರುದ್ಧ. ಹಾಗಾದರೆ, ನಮ್ಮ ಹೆಂಗಸರು ಭಾರತಸಂಸ್ಕೃತಿಯ ವಿರೋಧಿಗಳೇ?
          “ಸಾಂಪ್ರದಾಯಿಕ ವಿಚಾರಗಳನ್ನು, ನಂಬಿಕೆಗಳನ್ನು ಪ್ರಶ್ನಿಸಿ ಎದುರಿಸುವುದು ಭಾರತಸಂಸ್ಕೃತಿಗೆ ವಿರುದ್ಧವೇ? ವಿಶಿಷ್ಟಾದ್ವೈತ ತತ್ತ್ವವನ್ನು ಪ್ರತಿಪಾದಿಸಿದ ಶ್ರೀ ರಾಮಾನುಜಾಚಾರ್ಯರು ತಮ್ಮ ಗುರುಗಳು ಉಪದೇಶಿಸಿದ ತತ್ವಶಾಸ್ತ್ರವನ್ನು ವಿರೋಧಿಸಿ ತಮ್ಮದೇ ಆದ ಒಂದು ತಾತ್ವಿಕಪಂಥವನ್ನು ಸ್ಥಾಪಿಸಿದರು. ಅಲ್ಲದೆ, ರಾಮಾನುಜರು ತಮ್ಮ ಗುರುಗಳ ಆದೇಶವನ್ನು ಉಲ್ಲಂಘಿಸಿ, "ನಾನೊಬ್ಬನು ನರಕಕ್ಕೆ ಹೋದರೂ ಚಿಂತೆಯಿಲ್ಲ, ಸಹಸ್ರಾರು ಜನರಿಗೆ ಶ್ರೇಯಸ್ಸಾಗುವುದು ಮೇಲು." ಎಂದು ಗುರುಗಳು ತಮಗೆ ಗುಟ್ಟಾಗಿ ಉಪದೇಶಿಸಿದ ’ಓಂ ನಮೋ ನಾರಾಯಣಾಯ’ ಎಂಬ ಅಷ್ಟಾಕ್ಷರೀಮಂತ್ರವನ್ನು ಸಾರ್ವಜನಿಕವಾಗಿ ಘೋಷಿಸಿದರು. ಅಷ್ಟೇ ಅಲ್ಲದೆ, ಆಚಾರ್ಯರು ಕೆಲವು ಕ್ಷತ್ರಿಯರನ್ನೂ, "ಹೊಲೆಯರು", "ಅಸ್ಪೃಶ್ಯರು"ಎಂದು ಕರೆಯಲ್ಪಡುವ ಕೆಲವು ಬಡಜನರನ್ನೂ ತಮ್ಮ ಮತಕ್ಕೆ ಸೇರಿಸಿಕೊಂಡು, ಅವರನ್ನೆಲ್ಲಾ ಬ್ರಾಹ್ಮಣರನ್ನಾಗಿ ಪರಿವರ್ತಿಸಿದರು. ಹಾಗಾದರೆ, ರಾಮಾನುಜಾಚಾರ್ಯರು ಭಾರತೀಯ ಸಂಸ್ಕೃತಿಗೆ ವೈರಿಯೇ?
          “ದಯಾನಂದ ಸರಸ್ವತಿಗಳು ಮೊದಲು ಮೂರ್ತಿಪೂಜೆಯ ಮೌಲ್ಯವನ್ನು ಪ್ರಶ್ನಿಸಿ, ನಂತರ ಮೂರ್ತಿಪೂಜೆಯನ್ನೇ ವಿರೋಧಿಸಿದರು. ಆದರೂ ಅವರು ಮಹರ್ಷಿಗಳೆಂದು ಪ್ರಸಿದ್ಧರಾದರು. ಹಾಗಾದರೆ, ಮಹರ್ಷಿ ದಯಾನಂದ ಸರಸ್ವತಿಗಳು ಭಾರತಸಂಸ್ಕೃತಿವಿರೋಧಿಯೇ?
          “ಕುರುಡು ಸಂಪ್ರದಾಯಗಳನ್ನೂ, ಅರ್ಥವಿಲ್ಲದ ಪ್ರಾಚೀನ ಪದ್ಧತಿಗಳನ್ನೂ ಖಂಡಿಸುವುದು ಭಾರತಸಂಸ್ಕೃತಿಗೆ ವಿರುದ್ಧವೇ? ನಮ್ಮವರೇ, ನಮ್ಮ ಸ್ವಂತ ಕನ್ನಡಿಗರೇ ಆದ ಶ್ರೀ ಪುರಂದರದಾಸರು ತಮ್ಮ ಹಾಡುಗಳ ಮೂಲಕ ನಮ್ಮಲ್ಲಿರುವ ಅನೇಕ ಮತಾಚರಣೆಗಳನ್ನೂ, ಅವುಗಳಲ್ಲಿರುವ ಮೌಢ್ಯವನ್ನೂ, ಆಷಾಢಭೂತಿತನವನ್ನೂ ಖಂಡಿಸಿದರು. ಉದಾಹರಣೆಗೆ,

          "ಬಟ್ಟೆಯ ನೀರೊಳಗದ್ದಿ ಒಣಗಿಸಿ | ಉಟ್ಟುಕೊಂಡರದು ಮಡಿಯಲ್ಲ",

          "ಕುಟಿಲವ ಬಿಡದಿಹ ಕುಜನರು ಮಂತ್ರದ | ಪಠನೆಯ ಮಾಡಿದರೇನು ಫಲ? |
          ಸಟೆಯನ್ನಾಡುವ ಮನುಜರು ದಿನದಿನ | ವಿಠಲನ ನೆನೆದರೆ ಏನು ಫಲ? ||"

          "ಕರದಲಿ ಜಪಮಣಿ, ಬಾಯಲಿ ಮಂತ್ರವು | ಅರಿವೆಯ ಮೋರೆಗೆ ಮುಸುಕಿಟ್ಟು |
           ಪರಸತಿಯರ ರೂಪ ಸ್ಮರಿಸುತಲನುದಿನ | ಪರಮ ವೈರಾಗ್ಯವ ನಟಿಸುತಲಿರ್ಪುದು ||
           ಉದರ ವೈರಾಗ್ಯವಿದು, ------.",
ಇತ್ಯಾದಿ.

ಹಾಗಾದರೆ, ನಾವು ಪುರಂದರದಾಸರನ್ನು ಭಾರತಸಂಸ್ಕೃತಿವಿರೋಧಿ, ಕರ್ನಾಟಕಸಂಸ್ಕೃತಿವಿರೋಧಿ ಎಂದು ದೂಷಿಸಿ, ಅವರು ಕರ್ನಾಟಕಪರಂಪರಪ್ರಾಪ್ತಿಯ ಸಂಕೇತವಾಗಿರುವುದಕ್ಕೆ ಅನರ್ಹರು ಎಂದು ಘೋಷಿಸೋಣವೇ?
          “ವಸ್ತುತಃ, ಕಾಮಶಿಲ್ಪ, ಕಾಮಕಲೆಯೂ (erotica) ಭಾರತಸಂಸ್ಕೃತಿಯ ಮತ್ತು ಭಾರತ ಪರಂಪರಪ್ರಾಪ್ತಿಯ ಒಂದು ಅಮುಖ್ಯವಲ್ಲದ ಅಂಶ. ಇದಕ್ಕೆ ಖಜುರಾಹೋ, ಬೇಲೂರು, ಮುಂತಾದ ಪ್ರಸಿದ್ಧ ಪುರಾತನ ದೇವಾಲಯಗಳ ಕಲ್ಲುಗೋಡೆಗಳಲ್ಲಿ ಕಡೆದಿರುವ ಸುವ್ಯಕ್ತ ರತಿಕೇಲಿಶಿಲ್ಪಗಳೂ, ಕಾಮಸೂತ್ರ, ರತಿಮಂಜರಿ, ರತಿರಹಸ್ಯ, ಮುಂತಾದ ರತಿಲೀಲಾ ಸಾಹಿತ್ಯಗಳೂ ಆಧಾರಗಳಾಗಿವೆ. ಈ ಪ್ರಕಾರ, ಭಾರತಸಂಸ್ಕೃತಿಯಲ್ಲಿ, ರತಿಯೂ, ನಗ್ನತೆಯೂ ಉತ್ಸವಿಸಲ್ಪಟ್ಟಿವೆ.
          “ಅಂದಹಾಗೆ, ಯಾವುದು ಭಾರತಸಂಸ್ಕೃತಿ, ಯಾವುದು ಭಾರತಸಂಸ್ಕೃತಿಯಲ್ಲ, ಯಾವುದು ಕರ್ನಾಟಕ ಸಂಸ್ಕೃತಿ, ಯಾವುದು ಕರ್ನಾಟಕಸಂಸ್ಕೃತಿಯಲ್ಲ ಎಂದು ನಿಶ್ಚಯಿಸುವವರು ಯಾರು? ಅವರು ಹೇಗೆ ತಾನೇ ನಿಶ್ಚಯಿಸುತ್ತಾರೆ? ನಿಶ್ಚಯಿಸುವುದಕ್ಕೆ ಮಾನದಂಡವಾದರೂ ಯಾವುದು?
          “ನಮ್ಮ ಸಂಘದ ಅಧ್ಯಕ್ಷರು, ಸಂದೇಶದಲ್ಲಿ ಪ್ರಕಟಿಸಲು, ಚರ್ಚಾತ್ಮಕ ವಿಷಯಗಳನ್ನು ಕೇಳುತ್ತಾರೆ. ಅವರ ಕರಾರಿನ ಪ್ರಕಾರ, ಪ್ರತಿಯೊಂದು ಲೇಖನ, ಪದ್ಯ, ಟೀಕೆ, ಎಲ್ಲವೂ ನಮ್ಮ ಹಿಂದು ಶಾಸ್ತ್ರ-ಸಂಪ್ರದಾಯಗಳಿಗೆ, ಅದೂ ಅಧ್ಯಕ್ಷರ ಮತ್ತು ಕಾರ್ಯಕಾರೀಸಮಿತಿಯವರ ಅಭಿಪ್ರಾಯಕ್ಕನುಸಾರವಾಗಿ ಅನುಗುಣವಾಗಿರಬೇಕಾದರೆ, ಚರ್ಚಾತ್ಮಕ ವಿಷಯಗಳಿಗೆ ತಾವೆಲ್ಲಿದೆ? ಮತ್ತು ಅವಶ್ಯಕತೆಯಾದರೂ ಏನಿದೆ? ವಿಚಾರಾನ್ವಿತ ಲೇಖನಗಳನ್ನು ’ಸೆನ್ಸಾರ್’ ಮಾಡುವುದು ಕುವೆಂಪು ಸಂಘದ ಒಂದು ಅಲಿಖಿತ ಧ್ಯೇಯವೇ? ಅದೂ, ಪ್ರತಿಯೊಬ್ಬ ಪ್ರಜೆಯ ’ಮೊದಲ ತಿದ್ದುಪಡಿ’ ಹಕ್ಕನ್ನು ಖಾತ್ರಿ ಮಾಡಿರುವ ಅಮೆರಿಕ ದೇಶದಲ್ಲಿ!!ಸದ್ಯ, ಕುವೆಂಪು ಸಂಘವು ಮೂರ್ನಾಲ್ಕು ಸಾವಿರ ವರ್ಷಗಳ ಹಿಂದೆ ಇರಲಿಲ್ಲ! ನಮ್ಮ ಪೂರ್ವಜರೇನಾದರೂ, ತಮ್ಮ ಸಂಸ್ಕೃತಿಯ ಸಂರಕ್ಷಣೆಗೆ, ನಮ್ಮ ಸಂಘದ ಇತ್ತೀಚಿನ ಅಧ್ಯಕ್ಷರುಗಳ ಅಧಿಕಾರಕ್ಕೂ, ಮಾನದಂಡಕ್ಕೂ ಒಳಪಟ್ಟಿದ್ದರೆ, ಆ ಸನಾತನ ಸಂಸ್ಕೃತಿಯು, ಇಂದಿನ ಚಿರಂತನ ಭಾರತಸಂಸ್ಕೃತಿಯಾಗಿರದೆ, ಈ ವೇಳೆಗಾಗಲೇ ಅದೂ, ಗ್ರೀಕ್ ಮತ್ತು ರೋಮನ್ ಸಂಸ್ಕೃತಿಗಳಂತೆ, ಒಂದು ಸತ್ತ ಸಂಸ್ಕೃತಿಯಾಗಿ, ಚರಿತ್ರೆಯ ಒಂದು ಮೂಲೆಯಲ್ಲಿ ಬಿದ್ದಿರುತ್ತಿತ್ತು.
          “ನಮ್ಮ ಭಾರತಸಂಸ್ಕೃತಿಗೆ, ಸನಾತನ ಹಿಂದುಸಂಸ್ಕೃತಿಗೆ ವಿರುದ್ಧವಾದುದು ಒಂದೇ ಒಂದು: ಅಧರ್ಮ- ಅನ್ಯಾಯ, ಅಪ್ರಾಮಾಣಿಕತೆ, ಕಪಟಾಚಾರ ಮತ್ತು ಕರ್ತವ್ಯಲೋಪ. ಪ್ರಾಚೀನಕಾಲದಿಂದಲೂ ವಿಚಾರಸ್ವಾತಂತ್ರ್ಯ ಮತ್ತು ವಾಕ್‍ಸ್ವಾತಂತ್ರ್ಯವು ನಮ್ಮ ಹಿಂದು ಸಂಸ್ಕೃತಿಯ ಅಡಿಪಾಯಗಳಾಗಿವೆ; ಆ ಸಂಸ್ಕೃತಿಯ ಶ್ರೇಷ್ಠತೆಯ ಲಕ್ಷಣ ಮತ್ತು ವಿಶಿಷ್ಠಗುಣಗಳಾಗಿವೆ. ಅಂತಹ ಪರಮಸಹಿಷ್ಣು ಭಾರತಸಂಸ್ಕೃತಿಯ ಹೆಸರಿನಲ್ಲಿ ಮತಶದ್ಧೆಯುಳ್ಳ(ವರೆಂದು ಹೇಳಿಕೊಳ್ಳುವ) ನಮ್ಮ ಸಂಘದ ಕಾರ್ಯಕಾರೀ ಸಮಿತಿಯ ಸದಸ್ಯರು ಸಂಘದ ಸದಸ್ಯರಿಗೆ ವಾಕ್ ಸ್ವಾತಂತ್ರ್ಯವನ್ನು ನಿರಾಕರಿಸುತ್ತಿರುವುದು ಶೋಚನೀಯ. ಅಥವಾ, ಇದು ಕೇವಲ ನನಗೆ, ಗೋಪಿಗೆ, ಮಾತ್ರ ಅನ್ವಯಿಸುವಂತಹುದೇ?
          ಗೋಪೀವಲ್ಲಭ”

          ಈ ಪತ್ರವನ್ನು ಆಗ ಕುವೆಂಪು ಸಂಘದ ಅಧ್ಯಕ್ಷರಾಗಿದ್ದ ರಾಜೀವ ಅಡಿಗರಿಗೆ ಕಳುಹಿಸಿ ಅದನ್ನು ಸಂದೇಶದಲ್ಲಿ ಪ್ರಕಟಿಸಬೇಕೆಂದು ಕೋರಿದೆ. ಆ ಪತ್ರವು ಸಂದೇಶದಲ್ಲಿ ಸೂರ್ಯಬೆಳಕನ್ನೇ ಕಾಣಲಿಲ್ಲ. ನಂತರ, ನನ್ನ ಪತ್ರವನ್ನು ವೇದಾಂತಂ, ಮುರಳೀಧರ್, ಶಂಕರ ಶಾಸ್ತ್ರಿವಿಜಯವರ್ಮ ಮುಂತಾದ ಸಂಘದ ಪ್ರಮುಖ ಸದಸ್ಯರಿಗೆಲ್ಲಾ (ಎ-ಅಂಚೆಯ ಮೂಲಕ) ಕಳುಹಿಸಿದೆ. ಅವರೂ ಯಾರೂ ನನ್ನ ಪತ್ರವು ಬಂದು ಸೇರಿತೆಂದೂ ಸಹ ತಿಳಿಸಲಿಲ್ಲ! ಆಗ, ರೇಖಾ ಎಂಬ ಒಬ್ಬ ಕಾಲೆಜ್ ಹುಡುಗಿಯು ರಾಜೀವರ ಕಾರ್ಯಕಾರೀ ಸಮಿತಿಯಲ್ಲಿ ಯುವಜನಪ್ರತಿನಿಧಿಯಾಗಿದ್ದಳು. ಬಹು ಮಂದಿ ಕುವೆಂಪು ಸಂಘದ ಸದಸ್ಯರಂತೆ, ಅವಳೂ, ಅವಳ ತಂದೆತಾಯಿಯರೂ ನಮ್ಮೊಂದಿಗೆ ಮಾತಾಡುವುದನ್ನು ಬಿಟ್ಟುಬಿಟ್ಟಿದ್ದರು. ನನ್ನ ಕಾಗದವನ್ನು ಓದಿದಮೇಲೆ, ರೇಖಾ, ಹಿರಿಯನೆಂಬ ಗೌರವವೂ ಇಲ್ಲದೆ, ನಾನು ಬರೆದಿರುವುದೆಲ್ಲಾ ಅಸಂಬದ್ಧ ಸುಳ್ಳು ವಿಷಯಗಳು, ನಾನೊಬ್ಬ ಅಳುಬುರುಕ (whiner) ಎಂದು ಹೀಯಾಳಿಸಿ, ಒಂದು ದೀರ್ಘ ಪತ್ರವನ್ನು ಬರೆದು ಸಂಘದ ಸದಸ್ಯರಿಗೆಲ್ಲಾ ಕಳುಹಿಸಿದಳು. ಅವಳ ಕಾಗದವನ್ನೋದಿದ ಮೇಲೂ ಯಾರೂ ಯಾವರೀತಿಯಲ್ಲೂ ಪ್ರತಿಕ್ರಿಯಿಸಲಿಲ್ಲ.

          ನಾನು ರೇಖಾಗೆ ಈ ರೀತಿ ಉತ್ತರ ಬರೆದೆ:
“ಪ್ರಿಯ ರೇಖಾ,
          ನೀನು ಕೋಪದಿಂದ ನನ್ನನ್ನು ಹೀಯಾಳಿಸಿ ಬರೆದ ಕಾಗದದಿಂದ ನನಗೆ ಅಸಮಾಧಾನವಿಲ್ಲ. ಚಿಕ್ಕವಯಸ್ಸಿನಲ್ಲಿ ಹಿಂದುಮುಂದು ಯೋಚಿಸದೆ ದುಡುಕಿ ಕೋಪಗೊಳ್ಳುವುದು ಅಸಾಮಾನ್ಯವೇನಲ್ಲ. ಕುವೆಂಪು ಸಂಘದ ಕಾರ್ಯಕಾರೀ ಸಮಿತಿಯ ನಿಲುವು ತಪ್ಪಾದರೂ, ನೀನದನ್ನು ಸಮರ್ಥಿಸಲು ಬರೆದ ಕಾಗದದಿಂದ, ನಿನಗೆ ಸಂಘದ ಮೇಲಿರುವ ಅಭಿಮಾನವನ್ನು ತೋರಿಸುವುದು. ಅದು ಶ್ಲಾಘನೀಯ. ಆದರೆ, ಸತ್ಯವನ್ನು ಮರೆಮಾಚುವುದಕ್ಕಾಗುವುದಿಲ್ಲ. ನನ್ನ ಕಾಗದವನ್ನು ಮತ್ತೊಮ್ಮೆ ಸಾವಧಾನವಾಗಿ ಓದು. ನಾನು ಬರೆದಿರುವ ಪ್ರತಿಯೊಂದು ಅಂಶವನ್ನೂ ಪರಿಶೀಲಿಸು. ನಿನಗೆ ತಿಳಿಯದ ವಿಷಯವನ್ನು ಓದಿ ತಿಳಿದುಕೊ; ಅಥವಾ, ತಿಳಿದವರಿಂದ ಕೇಳಿ ತಿಳಿದುಕೊ. ವೇದಾಂತಂ ಅಂಕಲ್, ಮುರಳಿ ಅಂಕಲ್, ಸಂಧ್ಯಾ ಆಂಟಿ, ಕುಮುದಾ ಆಂಟಿ, ಮುಂತಾದವರು ಬಹಳ ಓದಿ ತಿಳಿದವರು. ನಾನು ಬರೆದಿರುವುದರಲ್ಲಿ ಯಾವುದಾದರೂ ತಪ್ಪೆಂದು ನೀನು ಖಚಿತ ಪಡಿಸಿದರೆ, ನಾನು ನಿನ್ನ ಮತ್ತು ಕುವೆಂಪು ಸಂಘದ ಸದಸ್ಯರೆಲ್ಲರ ಕ್ಷಮಾಪಣೆಯನ್ನು ಕೇಳಿಕೊಳ್ಳುತ್ತೇನೆ. ನನ್ನ ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ನನಗೆ ಯಾವ ತೆರನಾದ ಅವಮಾನವೂ ಇಲ್ಲ.
          ನಿನ್ನ ಹಿತವನ್ನು ಬಯಸುವ,
          ಗೋಪಿ ಅಂಕ್‍ಲ್”
          ಇಲ್ಲಿಯ ವರೆಗೆ ನನ್ನ ಬರವಣಿಗೆಗಳನ್ನು "ನಾಸ್ತಿಕ", "ಮತವಿರೋಧಿ" ಎಂದು ಪ್ರಕಟಿಸಲಿಲ್ಲ. ಆ ಕಾರಣ, ಕೆಲವು ವರ್ಷಗಳ ಮೇಲೆ, ಪತಂಜಲಿಯ "ಯೋಗ ಸೂತ್ರ"ದ ಮೇಲೆ, ಆಸನವನ್ನು ಪ್ರಧಾನವಾಗಿಟ್ಟು, ಒಂದು ಲೇಖನವನ್ನು ಬರೆದು, ಆಗ ಸಂಘದ ಅಧ್ಯಕ್ಷರಾಗಿದ್ದ ಡಾ. ವಾಮನ್ ಅವರಿಗೆ ಆ ಲೇಖನವನ್ನು ಸಂದೇಶದಲ್ಲಿ ಪ್ರಕಟಿಸುವಂತೆ ಕೋರಿ ಕಳುಹಿಸಿದೆ. ಆ ಲೇಖನದಲ್ಲಿ, ಕೆಲವು ಯೋಗಸೂತ್ರಗಳಲ್ಲಿ ವ್ಯಕ್ತವಾಗಿರುವ ದೈವಿಕ, ಆಧ್ಯಾತ್ಮಿಕ ಲಕ್ಷಣಗಳನ್ನು ಬಿಟ್ಟು, ಆ ಸೂತ್ರಗಳಿಗೆ ಸೂಕ್ತವಾದ ವೈಜ್ಞಾನಿಕ, ವೈಚಾರಿಕ ವಿವರಣೆಯನ್ನು ಕೊಟ್ಟು ಬರೆದಿದ್ದೆ. ಆದರೂ, ವಾಮನರು ನನ್ನ ಬರವಣಿಗೆಯು "ಬಹು ಮತೀಯ, ಆದುದರಿಂದ ಪ್ರಕಟಿಸಲಾಗುವುದಿಲ್ಲ" ಎಂದು ಹೇಳಿದರು. ಇಲ್ಲಿಗೆ ನನ್ನ ಆಶ್ಚರ್ಯದ ಬಿಂದಿಗೆಯು ಸಂಪೂರ್ಣವಾಗಿ ತುಂಬಿ ತುಳುಕಿತು! ಇದೀಗ ಮೊದಲ ತಿದ್ದುಪಡಿ ಹಕ್ಕು ಖಾತ್ರಿ ಇರುವ ಅಮೆರಿಕದಲ್ಲಿ, ಎಂ.ಎಸ್., ಪಿಎಚ್.ಡಿ., ಎಂ.ಡಿ., ಎಂ.ಬಿ.ಎ., ಇತ್ಯಾದಿ ಉನ್ನತ ಪದವಿಗಳನ್ನು ಪಡೆದು, ಉತ್ತಮ ವಿದ್ಯಾವಂತರೂ, ಮಹಾ ಪಂಡಿತರೂ ಆದ ಆಸ್ತಿಕ ಹಿಂದುಗಳು ಹಿಂದು ಸಂಸ್ಕೃತಿಯನ್ನು ಸಂರಕ್ಷಿಸಲು ವಾಕ್‍ಸ್ವಾತಂತ್ರ್ಯಕ್ಕೆ ಕೊಟ್ಟ ಮಹಾ ಮಹಾ ಗೌರವ. ಇಲ್ಲಿಗೆ, ಇನ್ನು ನಿರ್ವಾಹವಿಲ್ಲದೆ ನನ್ನ ಸೋಲನ್ನು ಸಹಿಸಿಕೊಂಡು ತೆಪ್ಪನಾದೆ.
*      *      *
          ನಾಸ್ತಿಕ್ಯದಲ್ಲಿ ಒಂದು ವಿಶಿಷ್ಟತೆಯಿದೆ. ಆಸ್ತಿಕನಾಗಿರುವುದಕ್ಕೆ ಯಾವ ಶ್ರಮವೂ ಬೇಕಿಲ್ಲ. ಹುಟ್ಟಿದಂದಿನಿಂದಲೇ, ನಾವು ಆಸ್ತಿಕ್ಯದಲ್ಲಿ, ಆಸ್ತಿಕವಾತವರಣದಲ್ಲಿ ಮುಳುಗಿ ಬೆಳೆಯುತ್ತೇವೆ. ನಮ್ಮ ಹಿರಿಯರಿಂದ ದೇವರಲ್ಲಿ ಭಕ್ತಿ, ಭಯ, ನಂಬಿಕೆ ಇಡುವುದನ್ನು ಕಲಿಯುತ್ತೇವೆ; ಮತಶ್ರದ್ಧೆ, ಸಂಪ್ರದಾಯಪಾಲನೆಗಳನ್ನು ಗ್ರಹಿಸುತ್ತೇವೆ; ಪೂಜೆ, ವ್ರತ, ನೇಮ, ನಿಯಮಾದಿಗಳ ಆಚರಣೆಯಲ್ಲಿ ಹಿರಿಯರ ಮೇಲ್ಪಂಕ್ತಿಯನ್ನು ಅನುಸರಿಸುತ್ತೇವೆ. ಈ ರೀತಿಯ ಆಜನ್ಮ ಬುದ್ಧಿಮಾರ್ಜನದಿಂದ, ಆಸ್ತಿಕಜ್ಞಾನವು ನಮ್ಮ ಮೆದುಳಿನಲ್ಲಿ ’ನ್ಯೂರಾನ್‍’ಗಳಾಗಿ ಪರಿವರ್ತಿಸಿ, ಬಲವಾಗಿ ಬೇರೂರಿರುವುದು. ಅಲ್ಲದೆ, ಸುಮ್ಮನೆ ಆಸ್ತಿಕ್ಯವನ್ನು ಅನುಸರಿಸುವುದು ಅತ್ಯಲ್ಪವಿರೋಧ ಮಾರ್ಗ (path of least resistance). ಅದೇ, ಒಬ್ಬ ಆಸ್ತಿಕನು,ಆಸ್ತಿಕವಾತಾವರಣದಲ್ಲಿ ಬೆಳೆದವನು ನಾಸ್ತಿಕನಾಗಬೇಕಾದರೆ, ಬಹಳ ಪರಿಶ್ರಮ ಬೇಕು. ’ಅಪ್ಪ ಹಾಕಿದ ಆಲದಮರ’ ಎಂಬ ಮನೋವೃತ್ತಿಯನ್ನು ಬಿಟ್ಟು, ಸ್ವಲ್ಪ ಸಂಶಯಾತ್ಮಕನಾಗಿ, ಸದಾ ವಿಚಾರಪರನಾಗಿರಬೇಕು. ತನ್ನ ಜೀವಮಾನ, ಪರಿಸರ ಮತ್ತು ಪ್ರಪಂಚದಲ್ಲಿ ಹಿಂದೆ ನಡೆದ ಮತ್ತು ಈಗಲೂ ನಡೆಯುತ್ತಿರುವ ಘಟನೆಗಳನ್ನೂ, ವಿದ್ಯಮಾನಗಳನ್ನೂ ಕುರಿತು ಕೂಲಂಕುಷವಾಗಿ, ನಿಷ್ಪಕ್ಷಪಾತದಿಂದ ತಾರ್ಕಿಕವಾಗಿ ಆಲೋಚಿಸಬೇಕು, ವೈಚಾರಿಕವಾಗಿ ವಿಶ್ಲೇಶಿಸಬೇಕು. ಆ ವಿಶ್ಲೇಶಣೆಯಿಂದ ಪಡೆದ ಫಲಿತಾಂಶವನ್ನು, ಇತರರ ಖಂಡನೆಗೆ ಒಳಪಟ್ಟರೂ, ಧೈರ್ಯಗೆಡದೆ ಆದರಿಸಿ ಅಂಗೀಕರಿಸಬೇಕು. ಈ ಪ್ರಕಾರ, ವಿವೇಚನೆಯಿಂದ ನಾಸ್ತಿಕನಾಗುವುದಕ್ಕೆ ಸ್ವಪ್ರಯತ್ನ, ಮನಃಸ್ಥೈರ್ಯ ಮತ್ತು ಸಮಾಜವನ್ನು ಎದುರಿಸಿ ನಿಲ್ಲುವ ಧೈರ್ಯ - ಮೂರೂ ಬೇಕು.ಬಹುಜನರಿಗೆ,ಇದು ಸಲ್ಲದ ವಿಷಯ.
          ಸಾಮಾನ್ಯ ಮಟ್ಟದಲ್ಲಿ, ಅಂದರೆ ಸಾಮಾನ್ಯ ಜನರಿಗೆ, ಹಿಂದುಮತವು ಆಸ್ತಿಕ. ಅದೇ ಉನ್ನತ ಮಟ್ಟದಲ್ಲಿ - ಹೆಚ್ಚು ವಿವೇಚನೆಯುಳ್ಳವರಿಗೆ, ವೈಚಾರಿಕಶಕ್ತಿಯುಳ್ಳವರಿಗೆ - ಹಿಂದುಮತವು ಅಗತ್ಯವಾಗಿ ನಾಸ್ತಿಕ. ಹಿಂದು (ಸನಾತನ) ಧರ್ಮವು ಮೂಲತಃ ಉಸುರುವುದು ನಾಸ್ತಿಕ್ಯವನ್ನೇ!  ನಾಸ್ತಿಕ್ಯದ ವಿಷಯದಲ್ಲಿ ಮತ್ತೊಂದು ಸತ್ಯಾಂಶವನ್ನಿಲ್ಲಿ ಗಮನಿಸಬೇಕಾದುದು ಅವಶ್ಯ. ನಾಸ್ತಿಕ್ಯವನ್ನು ಇತರರಲ್ಲಿ ಪ್ರೇರಿಸುವುದು ಸಾಧ್ಯವಿಲ್ಲ. ನಾಸ್ತಿಕ್ಯವು ಏನಿದ್ದರೂವಿಚಾರಪರತೆ ಮತ್ತು ವಿಷಯನಿಷ್ಠತೆಯಿಂದಲೂ (objectivity), ತಾರ್ಕಿಕಾಲೋಚನೆಯಿಂದಲೂ ಸ್ವತಃ ಗಳಿಸತಕ್ಕ ತಿಳಿವಳಿಕೆ, ಜ್ಞಾನ. ಆಸ್ತಿಕ್ಯವು ಭಾವಕ, ನಾಸ್ತಿಕ್ಯವು ವೈಚಾರಿಕ.
*      *      *
            ಹೀಗೆ ಹತ್ತು ವರ್ಷಗಳಿಗೂ ಮೀರಿ ನಾನು ಮತ್ತು (ನನ್ನನ್ನು ಮದುವೆಮಾಡಿಕೊಂಡ ತಪ್ಪಿಗೆ) ಪಂಕಜಾರೂ ನಮ್ಮ ಹಿಂದಿನ ಅನೇಕ ಸ್ನೇಹಿತರಿಂದ ಪ್ರತ್ಯೇಕಿಸಲ್ಪಟ್ಟೆವು. ನಮಗದು ಒಂದು ವಿಧವಾದ ಬಲವಂತ ವಾನಪ್ರಸ್ಥ (ಅಥವಾ, ನಾಗರಪ್ರಸ್ಥ?) ಸ್ಥಿತಿ ಆಗಿತ್ತು. ಮಾನವನೊಬ್ಬ ಸಾಮಾಜಿಕಪ್ರಾಣಿ. ಅವನ ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕೆ, ಅವನು ಆಗಾಗ ಸ್ನೇಹಿತರೊಡನೆ ಬೆರೆತು, ಕೂಟ, ಸಮಾರಂಭಗಳಲ್ಲಿ ಪಾಲುಗೊಂಡು ಪರಸ್ಪರ ಪ್ರತಿಕ್ರಿಯಿಸುವುದು ಆವಶ್ಯಕ. ಆದರೆ, ನಾವೇನು ಮಾಡುವುದು? ಸಮಾರಂಭಗಳಿಗೆ ನಮ್ಮನ್ನು ಆಮಂತ್ರಿಸದೇ ಇರುವುದಿರಲಿ, ಸಂಘದ ಕೆಲವು ಪ್ರಮುಖ ಸದಸ್ಯರು ನನ್ನೊಂದಿಗೆ ಮಾತಾಡುವುದನ್ನೂ ಸಹ ನಿಲ್ಲಿಸಿಬಿಟ್ಟರು. ಇಂತಹ ಪರಿಸ್ಥಿತಿಗಳಲ್ಲಿ ನಾನೊಂದು ಸರಳವಾದ ನಿಯಮವನ್ನು ಪಾಲಿಸುತ್ತೇನೆ:  ಇತರರ ಖಂಡನೆಯಲ್ಲಿ ತಿರುಳಿದ್ದರೆ, ಅದನ್ನು ಅನುಸರಿಸಿ, ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತೇನೆ; ಅವರ ಖಂಡನೆಯಲ್ಲಿ ತಿರುಳಿಲ್ಲದಿದ್ದರೆ, ನಾದನ್ನು ಸುಮ್ಮನೆ ನಿರಾಕರಿಸುತ್ತೇನೆ. ಈ ರೀತಿ, ಹೇಗೆ ನೋಡಿದರೂ ಖಂಡನೆಯಿಂದ ನನಗೆ ಬಾಧಕವಿಲ್ಲ. ಆದುದರಿಂದ, ನನ್ನಲ್ಲಿ ಒಂದು ಸ್ಥೈರ್ಯವಿದೆ. ನನ್ನ ಅರಿವು, ನನ್ನ ನಿಲುವು ಸರಿಯಾದುದೆಂದು ನನಗೆ ಸಂಪೂರ್ಣವಾಗಿ ಖಚಿತವಾದರೆ, ನಾನು ಯಾರನ್ನೂ, ಯಾವುದನ್ನೂ ಲಕ್ಷಿಸುವುದಿಲ್ಲ; ಮತ್ತು, ಯಾರಮೇಲೆಯೂ ಕೋಪಗೊಳ್ಳುವುದೂ ಇಲ್ಲ. ಆದರೆ, ನಾನಾಗಿಯೇ ಮೇಲ್ಬಿದ್ದು ನನ್ನನ್ನು ನಿರಾಕರಿಸುವವರ ಸ್ನೇಹವನ್ನು ಯಾಚಿಸುವುದೂ ಇಲ್ಲ. ಆದುದರಿಂದ, ನಮ್ಮ ಸ್ನೇಹಿತರು ನಮ್ಮನ್ನು ಬಹಿಷ್ಕರಿಸಿ ದೂರಮಾಡಿದರೂ, ನಾನು ಅಳುಕಲಿಲ್ಲ. ನನ್ನೀ ನಿಲುವಿನಲ್ಲಿ ವಿಶೇಷತೆಯೇನಿಲ್ಲ. ಸತ್ಯವು ನಮಗೆ ವಿರುದ್ಧವಾದರೆ, ಸಾಮಾನ್ಯವಾಗಿ ಕೋಪವುಂಟಾಗುವುದು, ಸಹಜ. ಆದುದರಿಂದ, ಸತ್ಯವು ನಮ್ಮ ಪರವಾಗಲೀ ವಿರುದ್ಧವಾಗಲೀ, ಸದಾ ಸತ್ಯವನ್ನು ಆಶ್ರಯಿಸಿದರೆ, ಮನಸ್ಥೈರ್ಯವು ನಿಶ್ಚಿತ. (’ಸತ್ಯಮೇವ ಜಯತೇ’ ಯಥಾರ್ಥವಲ್ಲದಿರಬಹುದು. ಆದರೆ, ’ಸತ್ಯೇನ ಮನಃಸ್ಥೈರ್ಯಂ ಜಾಯತೇ’ ಎನ್ನುವುದು ಯಥಾರ್ಥ.)
          ನಮ್ಮೀ ಸ್ಥಿತಿಯಲ್ಲಿ ಸ್ವಲ್ಪ ವಿನೋದವನ್ನು ಕಾಣುವುದಕ್ಕೂ, ಸಮಾಧಾನ ತಂದುಕೊಳ್ಳುವುದಕ್ಕೂ ನಾನು ಭಗವದ್ಗೀತೆಯ (೨-೩೮) ಶ್ಲೋಕಾನುಸಾರ ಕೆಳಗಿನ ಎರಡು ಶ್ಲೋಕಗಳನ್ನು ರಚಿಸಿದೆ:
          ಸ್ನೇಹಾಸ್ನೇಹೌ ಸಮೌ ಕೃತ್ವಾ ಬಂಧುತಾಂ ಚ ಅಬಂಧುತಾಮ್|
          ಅಸ್ಮಾಭಿರಧಿಗನ್ತವ್ಯಂ ಸುಖೇನ ಚ ಜೀವಿತುಮ್ ||
ಸ್ನೇಹವನ್ನೂ, ಅಸ್ನೇಹ ಅಥವಾ ವಿರೋಧವನ್ನೂ ಸಮವೆಂದೆಣಿಸಿ, (ಹಾಗೆಯೇ) ಬಂಧುತ್ವವನ್ನೂ, ಅಬಂಧುತ್ವವನ್ನೂ ಸಮವೆಂದೆಣಿಸಿ, ನಾವು ಸಂತೋಷದಿಂದಿರುವುದನ್ನು ಕಲಿಯಬೇಕು.
          ಸಂಗಾಸಂಗೌ ಸಮೌ ಕೃತ್ವಾ ನಿಮನ್ತ್ರಣಂ ಚಾನಿಮನ್ತ್ರಣಮ್|
          ಸುಖೇನ ಜೀವಿತುಂ ಸುಷ್ಠು ಮೇಧಾವಿರಧಿಗಚ್ಛತಿ ||
ಸಂಗವನ್ನೂ, ಅಸಂಗವನ್ನೂ (ಸಮಾಜದ ಅಂಗೀಕಾರವನ್ನೂ, ಬಹಿಷ್ಕಾರವನ್ನೂ) ಸಮವೆಂದೆಣಿಸಿ, (ಹಾಗೆಯೇ) ನಿಮಂತ್ರಣವನ್ನೂ, ಅನಿಮಂತ್ರಣವನ್ನೂ (ಕರೆಯನ್ನೂ, ಅಕರೆಯನ್ನೂ) ಸಮವೆಂದೆಣಿಸಿ, ವಿವೇಕಿಯಾದವನು ಸಂತೋಷದಿಂದಿರುವುದನ್ನು ಕಲಿಯುತ್ತಾನೆ.
[ ಮೇಲೆ ರಚಿಸಿರುವ ಎರಡು ಶ್ಲೋಕಗಳಲ್ಲೂ, ನಾನು “ಸಮೇ ಕೃತ್ವಾ” ಎಂದು ತಪ್ಪು ಮಾಡಿದ್ದೆ. ಅದನ್ನು ವೇದಾತಂ ಅವರೇ, ನಮ್ಮ ಸ್ನೇಹವು ಪುನರೂರ್ಜಿತವಾದ ಮೇಲೆ, “ಸಮೌ ಕೃತ್ವಾ” ಎಂದು ದಯವಿಟ್ಟು ತಿದ್ದಿ ಕೊಟ್ಟರು.]

ಜನಗಳು ನಮ್ಮ ಸ್ನೇಹವನ್ನು ಮನ್ನಿಸಲಿ, ಮನ್ನಿಸದಿರಲಿ, ನೆಂಟರಿಷ್ಟರು ನಮ್ಮ ಬಾಂಧವ್ಯವನ್ನು ಗೌರವಿಸಲಿ, ಗೌರವಿಸದಿರಲಿ, ನಾವು ಮಾತ್ರ ಕ್ಲೇಶಗೊಳ್ಳದೆ ಸದಾ ಸಂತೋಷದಿಂದಿರುವುದನ್ನು ಕಲಿಯಬೇಕು. ಹಾಗೆಯೇ, ಸ್ನೇಹಿತರು ತಮ್ಮ ಕೂಟಗಳಿಗೆ ಸೇರಿಸಲಿ ಸೇರಿಸದಿರಲಿ, ಸಮಾರಂಭಗಳಿಗೆ ಆಹ್ವಾನಿಸಲಿ ಆಹ್ವಾನಿಸದಿರಲಿ, ವಿವೇಕವುಳ್ಳವರು ಸರ್ವದಾ ಸಹನೆ ಮತ್ತು ಸಂತೋಷದಿಂದ ಇರುತ್ತಾರೆ. ಅಲ್ಲದೆ, ವಿವೇಕಿಗಳು ಅಂತಹ ಕುಪಿತ ಸ್ನೇಹಿತರಲ್ಲಿಯೂ ಮತ್ತು ಉದಾಸೀನ ಬಾಂಧವರಲ್ಲಿಯೂ ತಮ್ಮ ಸ್ನೇಹಭಾವವನ್ನೂ, ಪ್ರೀತಿಯನ್ನೂ ಬಿಡದೆ ತಾಳ್ಮೆಯಿಂದಲೇ ಇರುತ್ತಾರೆ.
ಈ ರೀತಿ, ನನಗೂ, ಪಂಕಜಾಗೂ ಸಮಾರಂಭಗಳಿಗೆ ಆಹ್ವಾನ ದೊರಕದಿದ್ದುದರಿಂದ, ಸ್ನೇಹಿತರ ಸಮಾಗಮಲಾಭವು ದೊರಕದೇ ಹೋದರೂ, ಕೂಟಭೋಜನಗಳು ತಪ್ಪಿ ನಮಗೆ ಇನ್ನೊಂದು ಅನಿರೀಕ್ಷಿತ ಲಾಭ, ಆರೋಗ್ಯಲಾಭವು, ದೊರಕಿತು. ಅದಕ್ಕೊಂದು ನಾಣ್ಣುಡಿಯನ್ನು ರಚಿಸಿದೆ:
          "ಅನಿಮಂತ್ರೇಣಾರೋಗ್ಯವೃದ್ಧಿಃ"    ಅಥವಾ    "ವಿನಾಽಹ್ವಾನೇನಾರೋಗ್ಯವೃದ್ಧಿಃ"
          (ಭೋಜನಕೂಟಗಳಿಗೆ) ಆಹ್ವಾನವಿಲ್ಲದಿದ್ದರೆ, ಆರೋಗ್ಯವು ಹೆಚ್ಚುವುದು.
*       *       *
            ಹೀಗೆಯೇ, ಮೇಲೆ ಹೇಳಿದಂತೆ, ದಿನಗಳು, ಮಾಸಗಳು, ಕೊನೆಗೆ ಕೆಲವು ವರ್ಷಗಳೂ ಸಹ ಕಳೆದುವು.  ಈ ಅವಧಿಯಲ್ಲಿ, ನನಗೆ ಬೆಂಗಳೂರು ಸೆಂಟ್ರಲ್ ಕಾಲೆಜ್‍-ನಲ್ಲಿ ಇಂಗ್ಲಿಷ್ ಉಪಾಧ್ಯಾಯರಾಗಿದ್ದ ಪ್ರೊಫ಼ೆಸರ್ ಎ.ಎನ್. ಮೂರ್ತಿರಾಯರ "ದೇವರು" ಎಂಬ ಪುಸ್ತಕವು ಪ್ರಕಟವಾಯಿತು. ಅದೊಂದು ಹಿಂದೂಮತದ ದೇವರುಗಳನ್ನೂ, ಶಾಸ್ರಸಂಪ್ರದಾಯಗಳನ್ನೂ ವೈಚಾರಿಕವಾಗಿ ಪರಿಶೀಲಿಸಿ ಬರೆದ ಪ್ರಬಂಧ. ನನ್ನ ನಾಸ್ತಿಕ್ಯನಿಲುವನ್ನು ಖಠಿನವಾಗಿ ಖಂಡಿಸಿದ ಮಿತ್ರರೆಲ್ಲಾ ಆ ಪುಸ್ತಕವನ್ನು ಓದಿದರೆಂದು ಕಾಣುತ್ತೆ. ಅದರಲ್ಲಿ ಡಾ. ಮೂರ್ತಿರಾಯರೂ, ನನ್ನ ಹಾಗೆಯೇ, ನಿರೀಶ್ವರವಾದವನ್ನು ಪ್ರತಿಪಾದಿಸುತ್ತಾರೆ. ಆದರೆ, ನನಗೂ, ಮೂರ್ತಿರಾಯರಿಗೂ ಅಜಗಜಾಂತರ! ಅವರು ಮಹಾವಿದ್ವಾಂಸರು, ಗಣ್ಯ ಮನುಷ್ಯರು. ಪಾಂಡಿತ್ಯದಲ್ಲಿ ನಾನು ಮೂರ್ತಿರಾಯರ ಒಂದುಂಗುಷ್ಠಕ್ಕೂ ಸಹ ಸಮನಲ್ಲ. ನನ್ನ ಸ್ನೇಹಿತರು ನನ್ನ ನಾಸ್ತಿಕ್ಯನಿಲುವನ್ನು ಆಕ್ಷೇಪಿಸಿದಂತೆ, ಮೂರ್ತಿರಾಯರ ನಾಸ್ತಿಕವಾದವನ್ನು ಅಷ್ಟು ಸುಲಭವಾಗಿ ಆಕ್ಷೇಪಿಸುವಂತಿಲ್ಲ. ಅದು ಹೇಗಾದರಿರಲಿ. ಅಂತೂ, ನನ್ನ ಮಿತ್ರರಿಗೆ ನನ್ನ ಮೇಲಿನ, ನನ್ನ ನಾಸ್ತಿಕ್ಯನಿಲುವಿನ ಮೇಲಿನ ಅಭಿಪ್ರಾಯವು ಸ್ವಲ್ಪ ಸ್ವಲ್ಪವಾಗಿ ಬದಲಾಗುತ್ತಾ ಬಂದಿತೆಂದು ತೋರುತ್ತೆ. ಆ ಕಾರಣ, ನನ್ನ ಮೇಲಿನ ಕೋಪವೂ ಇಳಿಯುತ್ತಾ ಬಂದಿತು.
          ಒಂದು ದಿನ, ನಾನು, ಪಂಕಜಾ, ಪುಷ್ಪಾ ನನ್ನೊಬ್ಬ ಸ್ನೇಹಿತರ ಮಗನ ಮದುವೆಗೆ ಹೋಗಿದ್ದೆವು. ಸ್ವಲ್ಪ ಹೊತ್ತಿನ ಮೇಲೆ, ಅಲ್ಲಿಗೆ ವೇದಾಂತಂ ಸಹ ಬಂದರು. ನನ್ನ ಹಾಗೆಯೇ ವೇದಾಂತಂಗೂ ಅಲ್ಲಿ ಪರಿಚಿತರಾದವರು ಹೆಚ್ಚು ಮಂದಿ ಇರಲಿಲ್ಲವೆಂದು ಕಾಣುತ್ತೆ. ಅವರು ಬಂದು, ಕುರ್ಚಿಗಳ ಮಧ್ಯದ ನಡುವಣಹಾದಿಯಲ್ಲಿ, ನನ್ನ ಹತ್ತಿರದಲ್ಲೇ ನಿಂತು ಸ್ವಲ್ಪ ಹೊತ್ತು, ಏನೂ ತೋಚದೆ, ಸುತ್ತಲೂ ನೋಡುತ್ತಾ ನಿಂತರು. ಯಾರೂ ಬಂದು ಅವರನ್ನು ಸ್ವಾಗತಿಸಲಿಲ್ಲ. ಆಗ, ಅವರ ಮಗನ ಮದುವೆಯಲ್ಲಿ ನಮಗಾದ ಸದೃಶಾನುಭವ ಜ್ಞಾಪಕಕ್ಕೆ ಬಂದಿತು. ನನ್ನ ಎಡಪಕ್ಕದಲ್ಲಿ ಒಂದು ಕುರ್ಚಿ ಖಾಲಿ ಇದ್ದುದನ್ನು ವೇದಾಂತಂ ನೋಡಿದರೋ ಇಲ್ಲವೋ ತಿಳಿಯದು; ಅಂತೂ,ಅವರು ಬಂದು ಕುಳಿತುಕೊಳ್ಳಲಿಲ್ಲ. ವೇದಾಂತಂರವರು ನನ್ನೊಂದಿಗೆ ಮಾತು ಬಿಟ್ಟು ಹತ್ತು ವರ್ಷಗಳ ಮೇಲಾಗಿತ್ತು. ಆದರೂ, ಹಿರಿಯರು ಹಾಗೆ ನಿಂತಿರುವುದನ್ನು ನೋಡಿ ನನ್ನ ಮನಸ್ಸು ಸಹಿಸಲಿಲ್ಲ. ನನ್ನ ಎಡಪಕ್ಕದಲ್ಲಿ ಖಾಲಿಯಿದ್ದ ಕುರ್ಚಿಯನ್ನು ತೋರಿಸುತ್ತಾ, "ಇಲ್ಲಿ ಬನ್ನಿ, ವೇದಾಂತಂ" ಎಂದು ಕರೆದೆ. ಅವರು ಸಂತೋಷದಿಂದ ಬಂದು ನನ್ನ ಪಕ್ಕದಲ್ಲಿ ಕುಳಿತು ನನ್ನನ್ನು ಅಭಿವಂದಿಸಿ ನನ್ನೊಂದಿಗೆ ಸಂಭಾಷಣೆ ಪ್ರಾರಂಭಿಸಿದರು. ಮಾತುಕತೆಯ ಮಧ್ಯೆ, ಈಗ ಅವರಿಗೂ ದೇವರೆನ್ನುವುದು ಕೇವಲ ಮಾನವಕಲ್ಪನೆ ಎಂಬ ಅರಿವಾಗಿದೆ ಎಂದು ತಿಳಿಸಿದರು. ನನಗೆ ಹೆಚ್ಚು ಆಶ್ಚರ್ಯವೇನೂ ಆಗಲಿಲ್ಲ, ಏಕೆಂದರೆ, "-------- ಕಾಲಾನುಕಾಲಕ್ಕೆ ತಾವ್, ಸುಜನರ್ ನಿಜವಂ ಅರಿಯದಿರ್ಪರೇ?"ವಿಚಾರಪರರಿಗೆ ಸತ್ಯವನ್ನು ತಿಳಿಯುವುದು ಅಸಾಧ್ಯವೇನಲ್ಲ, ಅದೂ ವೇದಾಂತಂ‍ರಂತಹ ಅನೇಕ ವಿಷಯಗಳಲ್ಲಿ ಪಾಂಡಿತ್ಯವುಳ್ಳವರಿಗೆ. ಆದರೆ, ಮುಂಗೋಪವು ಎಂತಹ ಮೇಧಾವಿಯ ವಿವೇಕವನ್ನೂ ಕೆಡಿಸುವುದು. ಅಲ್ಲದೆ, ಅನೇಕರಿಗೆವಿದ್ವಾಂಸರಿಗೂ,ಪಂಡಿತರಿಗೂ ಸಹ -ದೇವರಲ್ಲಿ ನಂಬಿಕೆ ಎನ್ನುವುದು ಒಂದು ವಿಧವಾದ ರಕ್ಷಣೀಯ ಚಟ (protective habit) ಆಗಿಬಿಟ್ಟಿದೆ. ಆದರೂ, ವೇದಾಂತಂಅವರ ತೆರೆಮನಸ್ಸಿನ ಅಂಗೀಕಾರದಿಂದ, ಅವರ ಒಂದು ಹಿರಿಯ ಗುಣವು ವ್ಯಕ್ತವಾಯಿತು: ಅವರೊಬ್ಬ ಅತಿ ಸರಳವ್ಯಕ್ತಿ, ಪ್ರತಿಷ್ಠೆಯ ಮೇಲೆ ನಿಲ್ಲುವವರಲ್ಲ, ಎಂದು.
          ಇನ್ನೊಂದು ಸಲ, ಕುವೆಂಪುಸಂಘದ ಒಂದು ಸಮಾರಂಭದಲ್ಲಿ, ಯಾವುದೋ ಒಂದು ಪ್ರಸಂಗದಲ್ಲಿ, ವೇದಾಂತಂ ತಮ್ಮ ಆಪ್ತ ಸ್ನೇಹಿತರಾದ ಡಾ. ಸೋಮಶೇಖರರಿಗೆ ನನ್ನನ್ನು ಕುರಿತು, "ಇವರೇನಪ್ಪಾ ಋಷಿಗಳು." ಎಂದು ಹೇಳಿದರು. ನನಗೆ ಬಹಳ ಆಶ್ಚರ್ಯವಾಯಿತು - ನಾನು ನಾಸ್ತಿಕನೆಂದು ಸುಮಾರು ಹತ್ತು ವರ್ಷಗಳಕಾಲ ನನ್ನೊಂದಿಗೆ ಯಾವ ಸಂಪರ್ಕ, ವ್ಯವಹಾರವನ್ನು ಇಟ್ಟುಕೊಳ್ಳದಿದ್ದರೂ, ವೇದಾಂತಂ ನನ್ನನ್ನು ’ಋಷಿ’ ಎಂದು ಹೊಗಳುವಷ್ಟು ನನ್ನ ಗುಣ-ನಡತೆಯನ್ನು ಇಷ್ಟು ಕೂಲಂಕುಷವಾಗಿ ಪರಿಶೀಲಿಸಿದ್ದಾರೆಯೇ, ಎಂದು. ಅಂದಹಾಗೆ, ಡಾ. ಸೋಮಶೇಖರರೂ ನನ್ನೊಂದಿಗೆ ಮಾತಾಡುವುದನ್ನು ಬಿಟ್ಟು ಹತ್ತು ವರ್ಷಗಳಮೇಲಾಗಿತ್ತು! ಕಾರಣವಿಷ್ಟೆ. ಅದೇ ಹತ್ತ್-ಹನ್ನೆರಡು ವರ್ಷಗಳ ಹಿಂದೆ, ಅವರ ಮಗಳ ಮದುವೆಯಲ್ಲಿ ನಾನು, ಪಂಕಜಾ, ಪುಷ್ಪಾ ಊಟಕ್ಕೆ ಕುಳಿತಿದ್ದಾಗ, ಸೋಮಶೇಖರರು ಬಂದು, "ನೀವೇನು ಇಷ್ಟು ಬೇಗ ಊಟಕ್ಕೆ ಕುಳಿತುಬಿಟ್ಟಿರಿ? ಮಕ್ಕಳಿಗೆ ನೀವು ಆಶೀರ್ವಾದ ಮಾಡಬೇಕಾಗಿತ್ತು." ಎಂದಾಗ, ನಾನು ತಮಾಷೆಗೆ, "ನಾವು ನಾಸ್ತಿಕರು. ನಮಗೆ ಆಶೀರ್ವಾದ ಮಾಡುವ ಹಕ್ಕು ಇದೆಯೋ ಇಲ್ಲವೋ." ಎಂದಿದ್ದೆ. ನಾನು ತಮಾಷೆಗೆ ಹಾಗೆಂದಿದ್ದರೂ, ಆ ರೀತಿ ಹೇಳಿದುದಕ್ಕೆ ಒಂದು ಕಾರಣವಿತ್ತು. ನನ್ನ ಎರಡನೇ ಅಕ್ಕನ ಮದುವೆಯಲ್ಲಿ, ನಮ್ಮ ಚಿಕ್ಕ ತಾತ (ನಮ್ಮ ತಂದೆಯ ಚಿಕ್ಕಪ್ಪ) ಅಕ್ಕನವರನ್ನು, "ದೀರ್ಘಸುಮಂಗಲಾ ಭವ" ಎಂದು ಆಶೀರ್ವದಿಸಿದ್ದರು. ನಮ್ಮ ತಾತ ಮಹಾ ವಿದ್ವಾಂಸರೂ, ಶ್ರೋತ್ರೀಯರೂ, ಸಂಸ್ಕೃತ ಪಂಡಿತರೂ ಆಗಿದ್ದರು. ಬೆಂಗಳೂರು ಸೆಂಟ್ರಲ್ ಕಾಲೆಜ್‍-ನಲ್ಲಿ ಕೆಮಿಸ್ಟ್ರಿ ಪ್ರೊಫ಼ೆಸರ್ ಆಗಿದ್ದರು. ನಿವೃತ್ತರಾದ ಮೇಲೆ, ಭಗವದ್ಗೀತೆ, ಶ್ರೀ ಭಾಷ್ಯ, ಶ್ರೀಸ್ತುತಿ, ಮುಂತಾದ ಸಂಸ್ಕೃತ ಗ್ರಂಥಗಳಿಗೆ ಟೀಕೆಗಳನ್ನು ಬರೆದಿದ್ದರು. ನಮ್ಮ ಕುಟುಂಬದಲ್ಲೆಲ್ಲಾ ಅತ್ಯಂತ ವೃದ್ಧರಾದ ನಮ್ಮ ಚಿಕ್ಕತಾತನವರಲ್ಲಿ ಎಲ್ಲರಿಗೂ ಬಹಳವಾದ ಪೂಜ್ಯಭಾವನೆ ಇತ್ತು. ಆದರೂ, ನಮ್ಮಕ್ಕ ಮದುವೆಯಾದ ಎರಡು ವರ್ಷಗಳಲ್ಲಿಯೇ ವಿಧವೆಯಾದರು. ಅಂದಿನಿಂದ ನನಗೆ ಆಶೀರ್ವಾದ ಮಾಡುವುದರಲ್ಲಿ ಅರ್ಥವಿಲ್ಲವೆನ್ನಿಸಿತು. ಆದರೂ, ಸೋಮಶೇಖರರಿಗೆ ನಾನು ಹಾಗೆ ಹೇಳಿದುದು ವ್ಯಕ್ತವಾಗಿ ಶುದ್ಧ ಅವಿವೇಕತನ, ಅದೂ ಅಂತಹ ಒಂದು ಶುಭಕಾರ್ಯ ಸಂದರ್ಭದಲ್ಲಿ. ನನ್ನ ಮೇಲೆ ಸೋಮಶೇಖರರು ಅಸಮಾಧಾನದಿಂದ ಕೋಪಗೊಂಡುದು ನ್ಯಾಯವಾದುದೇ. ವೈದ್ಯರು, ಕುವೆಂಪುಸಂಘದಹಲವಾರುಸಮಾರಂಭಗಳಲ್ಲಿ, ಅನೇಕ ಸಲ ನನ್ನೆದುರಿಗೆ ಬಂದಾಗ, ನಾನಾಗಿಯೇ ಅವರೊಡನೆ ಮಾತನಾಡಲು ಹೋದಾಗಲೂ, ಅವರು ಮುಖ ತಿರುಗಿಸಿಕೊಂಡು, ನನ್ನೊಂದಿಗೆ ಮಾತಾಡಲು ನಿರಾಕರಿಸಿದ್ದುದರಿಂದ, ನನ್ನ ತಪ್ಪು ನನಗೆ ಅರಿವಾಯಿತು.  ಕೂಡಲೇ, ಅಂದು ಅವರ ಮಗಳ ಮದುವೆಯಲ್ಲಿ ನಮಗೆ ಒದಗಿದ್ದ ಸಂದರ್ಭ, ನಾವುಮೊದಲಪಂಕ್ತಿಯಲ್ಲಿಯೇಊಟಕ್ಕೆ ಕುಳಿತ ಕಾರಣ, ನಾನು ಆಶೀರ್ವಾದ ಮಾಡುವುದನ್ನು ಕುರಿತು ಮಾಡಿದ ಟೀಕೆಯ ಕಾರಣ - ಎಲ್ಲವನ್ನೂ ವಿಶದವಾಗಿ ಬರೆದು, ನಾನು ಮಾಡಿದ ತಪ್ಪಿಗೆ ಕ್ಷಮೆಯನ್ನು ಬೇಡಿ ಅವರಿಗೊಂದು ಕಾಗದವನ್ನು ಬರೆದು ಹಾಕಿದೆ.
          ವೇದಾಂತಂ ನನ್ನನ್ನು ಋಷಿ ಎಂದು ಕರೆದಾಗ, ಹಿಂದೆ ಮೇರಿಲ್ಯಾಂಡ್‍-ನಲ್ಲಿ ನೀಲಕಂಠಯ್ಯ ನನ್ನನ್ನು "ಸ್ಥಿತಪ್ರಜ್ಞರಾದ ಗೋಪಿವಲ್ಲಭರು" ಎಂದು ಸಭೆಯಲ್ಲಿ ಹೇಳಿದುದು,ಹಾಗೆಯೇ "ನಾಟ್ಯ ಭಾರತಿ" ಎಂಬ ಒಂದು ನಾಟಕಮಂಡಲಿಯ ಉದ್ಘಾಟನಾ ಸಮಯದಲ್ಲಿ, ಸುಭಾಷ್ ವೆಂಜಮುರಿ ಎಂಬ ಒಬ್ಬ ವೈಣಿಕ ವಿದ್ವಾನ್, ನನ್ನನ್ನು ನೋಡಿ ಅಭಿವಂದಿಸಿ, "ಗೋಪಿ, ನಿಮ್ಮನ್ನು ನೋಡಿದರೇ ಸಾಕು, ಮನಸ್ಸಿಗೆ ಸಂತೋ-ಷ-ವಾಗುತ್ತೆ." ಎಂದು ಹೇಳಿದುದು, ಜ್ಞಾಪಕಕ್ಕೆ ಬಂದಿತು. ಇಂತಹ ಉನ್ನತ ಪ್ರಶಂಸೆ, ಸ್ಥಾನಮಾನಗಳಿಗೆ ನನ್ನಲ್ಲಿ ಅರ್ಹತೆ ಇಲ್ಲದಿದ್ದರೂ, ನಾನು ಬಹಳ ವರ್ಷಗಳ ಹಿಂದೆಯೇ ಎಣಿಸಿದಂತೆ, ಈ ಮಾತುಗಳು ಒಂದು ಅಂತರ್ಗತ ಭಾವನೆಯನ್ನು ಸೂಚಿಸುವುವು:  ಸಾತ್ವಿಕಗುಣ, ಚಿತ್ತಸಮಾಧಾನ, ಸ್ಥಿತಪ್ರಜ್ಞತೆ - ಇವುಗಳು ದೇವರಲ್ಲಿಯ ಭಕ್ತಿ-ನಂಬಿಕೆಯಿಂದ ಮಾತ್ರ ಪಡೆಯುವಂತಹುವಲ್ಲ. ಅವುಗಳನ್ನು ತಾರ್ಕಿಕಾಲೋಚನೆ, ವಿಚಾರಪರತೆ, ಮತ್ತು ಸ್ವಪ್ರಯತ್ನದಿಂದ ಗಳಿಸುವುದೂ ಸಾಧ್ಯ. ವಾಸ್ತವವಾಗಿಯೂ, ಚಿತ್ತಸ್ಥೈರ್ಯ ಸಾಧನಗಳಾದ ಯೋಗಾಭ್ಯಾಸ, ತಪಸ್ಸು ಸಹ ಸ್ವಪ್ರಯತ್ನಗಳೇ. ಆದುದರಿಂದ, ನಾಸ್ತಿಕನೂ ಋಷಿಯಾಗಬಲ್ಲ, ಸ್ಥಿತಪ್ರಜ್ಞನಾಗಬಲ್ಲ; ಮುಖದಲ್ಲಿ ವರ್ಚಸ್ಸನ್ನು ಹೊಂದಿರಬಲ್ಲ. ಅದಕ್ಕೆ ಪ್ರತಿಯಾಗಿ, ಒಬ್ಬ ಋಷಿ ಅಥವಾ ಸ್ಥಿತಪ್ರಜ್ಞನು, ತಾನು ಹಾಗೆಂದು ಅಂಗೀಕರಿಸದಿದ್ದರೂ, ಆವಶ್ಯಕವಾಗಿ ನಾಸ್ತಿಕ, ನಾಸ್ತಿಕವಾದಿ ಅಥವಾ ನಿರೀಶ್ವರವಾದಿಯೇ ಆಗಿರಬೇಕು.
          ಮತ್ತೆ, ಸ್ವಲ್ಪ ದಿವಸಗಳ ನಂತರ, ನಮ್ಮ ಸಂಘದ ಒಂದು ಗಣೇಶೋತ್ಸವ ಸಮಾರಂಭದಲ್ಲಿ, ಸಂಧ್ಯಾ ತಾವಾಗಿಯೇ ನನ್ನಲ್ಲಿಗೆ ಬಂದು, "ನಮಸ್ಕಾರ, ಗೋಪಿ. ಕ್ಷೇಮವಾಗಿದ್ದೀರಾ?" ಎಂದು ಕೇಳಿ ನನ್ನನ್ನು ವಿಸ್ಮಯಪಡಿಸಿದರು. ಇನ್ನೊಂದು ಸಲ, ಒಂದು ದೀಪಾವಳಿಯ ಸಮಾರಂಭದಲ್ಲಿ, ರೇಖಾ ಹಸನ್ಮುಖದಿಂದ ಬಂದು, "ಹಲೋ ಅಂಕ್‍ಲ್, ಹೇಗಿದ್ದೀರಾ?" ಎಂದು ನನ್ನನ್ನು ಅಭಿನಂದಿಸಿ, ನನ್ನೊಡನೆ ಬಹಳ ಸ್ನೇಹದಿಂದ ಮಾತುಕತೆಯನ್ನಾಡಿದಳು. ಆ ವೇಳೆಗಾಗಲೇ, ರೇಖಾಳ ತಾಯಿಯೂ ಬಹಳ ಸ್ನೇಹದಿಂದ ನನ್ನೊಂದಿಗೆ ಮಾತಾಡುವುದನ್ನು ಪುನರಾರಂಭಿಸಿದ್ದರು. ಹೀಗೆ, ನನ್ನ ಮೇಲೆ ಕೋಪಗೊಂಡು ವರ್ಷಗಟ್ಟಲೆ ನನ್ನೊಂದಿಗೆ ಮಾತಾಡದಿದ್ದವರು, ಒಬ್ಬೊಬ್ಬರಾಗಿ ಬಂದು ನನ್ನನ್ನಾದರಿಸಿ ಮಾತನ್ನಾಡಲಾರಂಭಿಸಿದರು. ಇಲ್ಲಿಯೂ, ನಾನು ಮೊದಲು ಸೋಲನ್ನು, ಅಲ್ಲ ವಿರೋಧವನ್ನು, ತಾಳ್ಮೆಯಿಂದ ಸಹಿಸಿ, ನಂತರ ಅನನಿರೀಕ್ಷಿತವಾಗಿ ಬಂದ ಗೆಲುವನ್ನು (ಜಯವನ್ನು) ಸಮಾಧಾನದಿಂದ ಸ್ವೀಕರಿಸಿದೆ. ನಮ್ಮ ತಾಯಿ ಹೇಳುತ್ತಿದ್ದ "ತಾಳಿದವ ಬಾಳ್ಯಾನು" ಎಂಬ ನುಡಿಯು ಮತ್ತೊಮ್ಮೆ ಯಥಾರ್ಥವಾಯಿತು.
***

*          *          *
*          *

*

No comments:

Post a Comment