Saturday, May 31, 2014

ಅಮೇರಿಕಾ ಅನುಭವ - 7












                                                                      ಪಿಕಲ್‌ಬಾಲ್‌

ಇತ್ತೀಚೆಗೆ ಪತ್ರಿಕೆ ಓದುತಿದ್ದಾಗ   “ಪಿಕಲ್‌ಬಾಲ್‌"  ಎಂಬ ಪದ ನನ್ನ ಗಮನ ಸೆಳೆಯಿತು. ನಾನು ಮೀಟ್ ಬಾಲ್ ಮತ್ತು ಸ್ವೀಟ್‌ ಬಾಲ್‌ನಂತೆ ಇದೂ ಒಂದು ತಿನಿಸು ಎಂದುಕೊಂಡೆ.  ಪಿಕಲ್‌ ಎಂದರೆ ಉಪ್ಪಿನಕಾಯಿ ಎಂಬುದು ನಮಗೆಲ್ಲಾ ಗೊತ್ತು. ಬಹುಶಃ ಇದು ಮಿಡಿಗಾಯಿ ಉಪ್ಪಿನಕಾಯಿ. ಆವಕಾಯಿ ತರಹದ  ಉಂಡೆ ಉಪ್ಪಿನಕಾಯಿ ಇರಬಹುದೆಂದು ಕೊಂಡೆ. ಪೂರ್ಣ ಓದಿದಾಗ ತಿಳಿಯಿತು. ಇದೊಂದು ಹೊಸ ಕ್ರೀಡೆ ಎಂದು.
ಅಮೇರಿಕಾದಲ್ಲಿ ಇತ್ತೀಚೆಗ ಅವಿಷ್ಕಾರವಾದ ಕ್ರೀಡೆಗಳಲ್ಲಿ ಬಹು ಬೇಗ ಜನಪ್ರಿಯವಾಗುತ್ತಿರುವುದು “ಪಿಕಲ್‌ಬಾಲ್‌’.ದಂತ ಕಥಗಳಾಗಿರುವ   ಅರ್ಥರ್‌ಆಷ್‌ , ಸರೀನಾ ವಿಲಿಯಂ ಮತ್ತು ವೀನಸ್‌ ವಿಲಿಯಂ ಮೊದಲಾದ ಅನೇಕ ಆಟಗಾರರಿಂದಾಗಿ ಟೆನ್ನಿಸ್‌ ಇಲ್ಲಿ ಅಚ್ಚುಮೆಚ್ಚಿನ ಆಟ. ಆದರೆ ಅದಕ್ಕೆ ದೇಹದಾರ್ಢ್ಯ ಅತಿ ಮುಖ್ಯ. ನಿರಂತರ ಅಭ್ಯಾಸದಿಂದ ಭುಜ ನೋವು ಮತ್ತು ಎಲ್ಬೋ ನೋವು ಅನೇಕ ಆಟಗಾರರನ್ನು  ಕಾಡುತ್ತದೆ .ಆಟ ಆಡದಂತೆ ಮಾಡುತ್ತದೆ. ಆದರೆ ಒಂದು ಸಲ ಆಟದ  ಗೀಳು ಹಿಡಿದ ಮೇಲೆ ಬಿಡುವುದು ಬಹಳ ಕಠಿನ. ಏನಾದರೂ ಪರ್ಯಾಯ ಕಂಡು ಕೊಳ್ಳಲೇ ಬೇಕಲ್ಲ. ಆ ಪ್ರಯತ್ನದ ಫಲವೇ ಪಿಕಲ್‌ಬಾಲ್. ಇಲ್ಲಿ ಹೆಚ್ಚಿನ ಶ್ರಮ ಇಲ್ಲ. ಕೈಗೆ ತೊಂದರೆ ಆಗದು. ಟೆನ್ನಿಸ್‌ ಬ್ಯಾಟ್‌ ಬಾಲುಗಳನ್ನು ತುಸು ಮಾರ್ಪಾಟು ಮಾಡಿರುವರು.ಸಹಜವಾಗಿ ಆಟದ ಅಂಗಳವೂ ಚಿಕ್ಕದು. ಇದರ ಅತಿ ಮುಖ್ಯ ಅನುಕೂಲ ಎಂದರೆ ಕೈಗೆ ಗಾಯವಾಬಹುದಾದ ಷಾಟ್‌ಗಳ ಅಗತ್ಯವಿಲ್ಲ. ಭುಜ ಮೇಲೆತ್ತದೆಯೇ ಆಡ ಬಹುದು. ಅಂಥಹ ಬಲಪ್ರಯೋಗದ ಅಗತ್ಯವೂ ಇಲ್ಲ.ಒಂದು ರೀತಿಯಲ್ಲಿ ಇದು ಟೇಬಲ್‌ಟೆನ್ನಿಸ್‌ ಮತ್ತು ಲಾನ್‌ ಟೆನ್ನಿಸ್‌ಗಳ ಸಂಕರ ಕ್ರೀಡೆ. ಟೇಬಲ್‌ ಇಲ್ಲದ ಪಿಂಗ್‌ಪಾಂಗ್‌ ಆಟ ಎನ್ನಬಹುದು.ಇದನ್ನು ಯಾವುದೇ ವಯೋ ಮಿತಿ, ಲಿಂಗ ಬೇಧವಿಲ್ಲದೆ ಆಡ ಬಹುದು. ಹಿರಿಯ ನಾಗರೀಕರಿಗಂತೂ ಹೇಳಿ ಮಾಡಿಸಿದ ಆಟ. ಗಾಯದ ಸಮಸ್ಯೆಯಿಂದ ಟೆನ್ನಿಸ್‌ನಿಂದ ನಿವೃತ್ತಿಯಾದವರಿಗೆ  ಮನಸಿಗೆ ಮುದ ನೀಡುವ ಸಾಧನ.  ಅದೇ ಖುಷಿ, ಅದೇ ಸಾಮಾಜಿಕ ಸಹಯೋಗ  ಮತ್ತು ಸರಳ ಸುಲಭ ಕ್ರೀಡೆ. ಟೆನ್ನಿಸ್‌ ಮತ್ತು ರಾಕೆಟ್‌ ಬಾಲ್‌ ಅಡಿದವರಿಗಂತೂ ನೀರು ಕುಡಿದಷ್ಟು ಸುಲಭ ಇದನ್ನು ಕಲಿಯುವುದು. ದೇಹ ದಂಡನೆಗೆ ಅವಕಾಶವೇಇಲ್ಲ
ಇಲ್ಲಿ ಚೆಂಡು ಸಾಮಾನ್ಯ ಟೆನ್ನಿಸ್‌  ಚೆಂಡಿನ ಮೂರನೆಯ ಒಂದಂಶ ವೇಗ ಹೊಂದಿರುವುದು. ಆಟದ ಅಂಗಳವೂ ಅದೇ ಪ್ರಮಾಣದಲ್ಲಿ ಚಿಕ್ಕದೂ. ಇನ್ನು ಬ್ಯಾಟ್ ಸಹ ಆಕಾರದಲ್ಲಿ ಟೆನ್ನಿಸ್‌ ಬ್ಯಾಟ್‌ನಂತೆ ಇದ್ದರೂ ಹಿಡಿ ಚಿಕ್ಕದು.ಅದರ ಅಳತೆ 16X8  ಅಂಗುಲ. ಪಿಂಗ್‌ಪಾಂಗ್‌ ಬ್ಯಾಟಿಗಿಂತ ದೊಡ್ಡದು.ಪಿಕಲ್‌ ಬಾಲ್‌ ಪ್ಲಾಸ್ಟಿಕ್‌ನಿಂದ ಮಾಡಿದ್ದುಅದರಲ್ಲಿ ೪೦ ರಂದ್ರಗಳಿರುತ್ತವೆ.
 ಈ ಆಟಕ್ಕೆ ದುಬಾರಿ  ಉಪಕರಣ ಮತ್ತು ವಿಶಾಲ ಮೈದಾನ ಬೇಕಿಲ್ಲ. ಪರಿಣಿತರ ತರಬೇತಿಯೂ  ಬೇಡಒಂದು ಪ್ಯಾಡಲ್‌ ಕೊಂಡರೆ ಮುಗಿಯಿತು. ಇನ್ನೆಲ್ಲವನ್ನು  ಸಾಮೂಹಿಕವಾಗಿ ಹಂಚಿಕೊಳ್ಳ ಬಹುದು. ಇನ್ನು ಉಡುಪಿನ ವಿಷಯದಲ್ಲಂತೂ ಬಹಳ ಉದಾರಿ. ವಿಶೇಷ ವಿನ್ಯಾಸದ ಬಟ್ಟೆ ಬರೆ ಬೇಕಿಲ್ಲ. ನಿತ್ಯ ಹಾಕುವ ಉಡುಪೇಸಾಕು. ಸಂಜೆ ವಾಯು ವಿಹಾರಕ್ಕೆ ಹೋದವರು, ಮಾರುಕಟ್ಟೆಗೆ ಹೋದವರು ಬರುತ್ತಾ ಅರ್ಧ ಗಂಟೆ ಆಡಿ ಬರಬಹುದು. ಬಹುತೇಕ ಟೆನ್ನಿಸ್‌ ಮತ್ತು ರಾಕೆಟ್‌ ಬಾಲ್‌ ಕೋರ್ಟುಗಳಲ್ಲಿ ಒಂದು ಚಿಕ್ಕ ಜಾಗದಲ್ಲಿ ಪಿಕಲ್‌ಕೋರ್ಟ ನಿರ್ಮಾಣ ಮಾಡಿರುವರು.
ಕೋರ್ಟನ ಅಳತೆ  20’ x 44’  ಚೆಂಡನ್ನು ಡಯಾಗನಲ್‌ ಆಗಿ ಸರ್ವ ಮಾಡ ಬೇಕು.ಬಲಭಾಗದ ಚೌಕದಿಂದ ಮಾಡ ಬೇಕುಮೊದಲ ಹೊಡೆತವು ನೆಟ್‌ನಿಂದ ೭ ಅಡಿ ವಿಸ್ತಾರದ ಆವಲಯದ ಆಚೆ ಹೋಗ ಬೇಕು. ಒಂದು ಸಲ ಪುಟಿದ ಮೇಲೆ ಹೊಡೆಯ ಬೇಕು.. ಪಾಯಿಂಟಗಳು ಸರ್ವಮಾಡಿದ ತಂಡಕ್ಕೆ ಮಾತ್ರ ದೊರೆಯುತ್ತವೆ.
ಒಂದು ನಿಯಮವೆಂದರೆ ಇದನ್ನು ಯಾವಾಗಲೂ ಅಂಡರ್‌ ಹ್ಯಾಂಡ್‌ ಹೊಡೆತದಿಂದಲೇ ಕಳುಹಿಸ ಬೇಕು. ಯಾವುದೇಕ್ಕು ಕಾರಣಕ್ಕೂ ಸೊಂಟದ ಮೇಲೆ  ಮೇಲೆ ಕೈ ಎತ್ತುವ ಹಾಗಿಲ್ಲ.ಆಟಗಾರನು ಏಳು ಅಡಿ ಅಂತರದ ವಲಯದೊಳಗೆ ಇದ್ದಾಗ ನೇರವಾಗಿ ಹೊಡೆಯಬಹುದು. ಅದು ಪುಟಿದೇಳಲು ಕಾಯುವಗತ್ಯವಿಲ್ಲ.ಅದನ್ನು ವಾಲಿ ಎನ್ನುವರು.
ಸರ್ವ ಮಾಡುವವರು ಫಾಲ್ಟ ಆಗುವ ತನಕ ಮುಂದು ವರಿಸಬಹುದು.
ಸರ್ವ ಮಾಡುವವರು ಮತ್ತು ಮೊದಲ ಸಲ ಸರ್ವ ಮಾಡಿದ ಚೆಂಡನ್ನು ಹೊಡೆಯುವವರು ಅದು ಒಂದು ಸಲ ಪುಟಿದು ಏಳುವವರಗೆ ಕಾಯಲೇ ಬೇಕು.ಅದನ್ನು ವಾಲಿ ಮಾಡಬಾರದು.ವಾಲಿ ಎಂದರೆ ಚೆಂಡು ನೆಲ ಮುಟ್ಟುವ ಮುನ್ನವೇಗಾಳಿಯಲ್ಲಿರುವಾಗಲೇ ಹೊಡೆಯುವುದು. ಈ ಹೊಡೆತವನ್ನು ಏಳು ಅಡಿ ಅದನ್ನು ವಲಯದ ಆಚೆ ಮಾತ್ರ ಬಳಸಬಹುದು.
ಪ್ರತಿತಂಡವೂ ಸರ್ವ ಮಾಡಿದಾಗ ಚೆಂಡು ಒಂದು ಸಲ ನೆಲ ಮುಟ್ಟಲೇ ಬೇಕು. ಅದನ್ನು ವಾಪಸ್ಸು ಕಳುಹಿಸಿದ ನಂತರ ಕೂಡಾ ಅದು ಬೌನ್ಸ್‌ಆದಮೇಲೆಯೇ ಹೊಡೆಯಬಹುದು.ಇಲ್ಲವಾದರೆ ಫಾಲ್ಟ್‌ ಆಗುವುದು. ಆನಂತರದ ಚೆಂಡುಗಳನ್ನು ಯಾವ ರೀತಿಯಲ್ಲಾದರೂ ಹೊಡೆಯಲು ಅವಕಾಶವಿದೆ.
ಫಾಲ್ಟ್‌ ಆದಾಗ ಸರ್ವಎದುರಾಳಿ ತಂಡಕ್ಕೆ   ಬದಲಾಗುವುದು
·          ಕೋರ್ಟನ ಬೌಂಡರಿ ದಾಟಿ ಹೊಡೆದರೆ
·         ನೆಟ್‌ ದಾಟದಿದ್ದರೆ,
·         ನಾನ್‌ವಾಲಿ ವಲಯದಲ್ಲಿ ವಾಲಿ ಮಾಡಿದರೆ
·         ಪುಟಿದೇಳುವ ಮುನ್ನವೇ  ಹೊಡೆದರೆ
ಫಾಲ್ಟ  ಎಂದು ಪರಿಗಣಿಸಲಾಗುವುದು.


ಆಟದ ಪ್ರಾರಂಭದಲ್ಲಿ ಮೊದಲು ಸರ್ವಮಾಡುವ ತಂಡವನ್ನು ನಾಣ್ಯವನ್ನು ಟಾಸ್‌ ಮಾಡುವ ಮೂಲಕ ನಿರ್ಧರಿಸಲಾಗುವುದು. ಟಾಸ್‌  ಗೆದ್ದವರು  ಆಯ್ಕೆ ಮಾಡಿಕೊಳ್ಳ ಬಹುದು.ಹನ್ನೊಂದು ಪಾಯಿಂಟ್‌ ನಂತರ ಎರಡು ಪಾಯಿಂಟ್‌ ಮುನ್ನಡೆ ಪಡೆದವರು ಜಯಶಾಲಿಗಳಾಗುವರು.
ಒಂದಂತೂ ನಿಜ. ಇದು  ಭಾರತದಲ್ಲೂ ಬಂದರೆ  ಎಲ್ಲರೂ ಉಪ್ಪಿನ ಕಾಯಿ ಚಪ್ಪರಿಸುವಂತೆ ಆಡಬಹುದು.



Thursday, May 29, 2014

ಅಮೇರಿಕಾ ಅನುಭವ-6



ಕ್ಲಿಫ್‌ವಾಕ್‌



 ಈ ಸಲ ನಮಗೆ ಲಾಂಗ್‌ವೀಕ್‌ ಎಂಡ್‌  ಬಂದಿತು. ಯಾರಾದರೂ ಬೇಸಿಗೆಯಲ್ಲಿ ಮೂರು ದಿನದರಜೆ ಮನೆಯಲ್ಲಿ ಕಳೆಯುವುದುಂಟೇ?. ಯಥಾ ರೀತಿ ಹೊರ ಸಂಚಾರ ಹೊರಟೆವು. ಈಸಲ ರೋಡ್‌ ಐಲ್ಯಾಂಡಿಗೆ ನಮ್ಮ ವಾರಾಂತ್ಯದ ಪ್ರವಾಸ ನಿಗದಿಯಾಯಿತು. ಈ ಪ್ರದೇಶವು ಐತಿಹಾಸಿಕವಾಗಿಯೂ ಪ್ರಸಿದ್ಧವಾಗಿದೆ. ಅಮೇರಿಕ ಸ್ವಾತಂತ್ರ್ಯಬರಲು ಇಲ್ಲಿ  ಜಾರ್ಜ ವಾಷಿಂಗ್‌ಟನ್ ಮತ್ತು ಫ್ರೆಂಚ್‌ ಸೇನೆ ಒಟ್ಟಾಗಿ ಬ್ರಿಟಷರನ್ನು  ಸೋಲಿಸಿದ್ದೇ ಕಾರಣ. ಆದ್ದರಿಂದಲೇ ಇಲ್ಲಿ ಅನೇಕ ಸ್ಮಾರಕಗಳಿವೆ. ಜೊತೆಯಲ್ಲಿ ಈ ಭಾಗವು ಹದಿನೆಂಟನೆಯ ಶತಮಾನದ   ಗಿಲೀಟು ಯುಗವೆಂದು ಖ್ಯಾತವಾದ ಅವಧಿಯಲ್ಲಿ ಅತ್ಯಂತ ಶ್ರೀಮಂತ ಮತ್ತು ಪ್ರಭಾವಶಾಲಿ ವ್ಯಕ್ತಿಗಳ ಬೇಸಿಗೆಯ ಧಾಮಗಳ ಸಮೂಹವನ್ನೂ ಹೊಂದಿವೆ. ಅವುಗಳನ್ನು ನ್ಯೂಪೋರ್ಟ ಮ್ಯಾನಷನ್‌ಗಳೆಂದೆ  ಗುರುತಿಸುವರು. ಆ ವಿವರ ಮುಂದೆ ತಿಳಿಯೋಣ. 
ನ್ಯೂಪೋರ್ಟನಲ್ಲಿ ನಮ್ಮ ಗಮನ ಸೆಳೆದೆದ್ದು ವಿಶೇಷವಾಗಿ ಎರಡು ಅಂಶಗಳು.ನಿಸರ್ಗಪ್ರಿಯ ಪ್ರವಾಸಿಗಳಿಗೆ ಸಾಗರದ ಸಂದರ ದೃಶ್ವಯ ಸವಿಯಲು ಇಲ್ಲಿ  ಮಾಡಿರುವ ವ್ಯವಸ್ಥೆ ಬಹಳ ಹಿಡಿಸಿತು ಮೊದಲನೆಯದು ವೋಷನ್‌ ಡ್ರೈವ್‌ ಮತ್ತು ಎರಡನೆಯದು ಕ್ಲಿಫ್‌ವಾಕ್‌.     ದ್ವೀಪ ಎಂದರೆ ಹೇಳಲೇ ಬೇಕಿಲ್ಲ. ಎತ್ತ ಹೋದರೂ ಸಾಗರ ದರ್ಶನ.   ಬಿಸಿಲ ನಾಡಿನ ನಮಗೆ ನೀರು ಕಂಡರೆ ಬಹಳ ಅಕ್ಕರೆ. ಹಾಗಾಗಿ ಸಾಗರ ವೀಕ್ಷಣೆಗೆ ಅನುಕೂಲ ಸ್ಥಳ ಅರಸಿದಾಗ ನಮ್ಮನ್ನು ಆಕರ್ಷಿಸಿದುದು ಕ್ಲಿಫ್‌ ವಾಕ್‌.
ನ್ಯೂ ಪೋರ್ಟನಿಂದ  ಪ್ರಾಂರಂಭವಾಗಿ ಸುಮಾರು ನಾಲ್ಕು ಮೈಲು ಕಡಿದಾದ ಬೆಟ್ಟದ ತುದಿಯಲ್ಲಿ ನಾಲ್ಕರಿಂದ ಆರು ಅಡಿ ಅಗಲದ ಕಾಲುದಾರಿಯಲ್ಲಿ ನಡೆಯುವ ಸೌಲಭ್ಯವಿದೆ. ಹಾದಿಯುದ್ದಕ್ಕೂ ಎಡಬಾಗದಲ್ಲಿ ಅಟ್ಲಾಂಟಿಕ್‌ಸಾಗರದ ನೀಲಿ ನೀರು. ಸುಮಾರು ೫೦-೭೫ ಅಡಿ ಎತ್ತರದ ಬೆಟ್ಟಕ್ಕೆ ಅಂಟಿಕೊಂಡಂತೆ ಸಾಗರವಿದೆ.  ಸಮುದ್ರದ ಅಲೆಗಳು ಬಂಡೆಗಳಿಗೆ ಅಪ್ಪಳಿಸುವ ಸದ್ದು ಕೇಳುತ್ತಾ ಚಾರಣ ಮಾಡುವ ಮೋಜು ಬಹಳ ಖುಷಿಕೊಡುತ್ತದೆ ಬದಿಯಲ್ಲಿ ಹಚ್ಚ ಹಸುರಿನ  ತಡೆ ಬೇಲಿ. 
ಅದರ ಅಚೆ ಹತ್ತಾರು ಎಕರೆ ಹಸಿರು ಹಾಸಿನಲ್ಲಿ ಕಟ್ಟಲಾಗಿರುವ ಭವ್ಯ ಭವನಗಳು. ಅವುಗಳ ವಿನ್ಯಾಸ ಬಹು ಆಕರ್ಷಣೀಯ. ನ್ಯೂಯಾರ್ಕ್‌ ನಗರ ನೋಡಿದವರಿಗೆ ಗಗನ ಚುಂಬಿ ಕಟ್ಟಡಗಳು ಹೊಸದೇನೂ ಅಲ್ಲ. ಆದರೆ   ಇಲ್ಲಿನ ವೈಶಿಷ್ಟ್ಯ ಏನೆಂದರೆ ಬೃಹತ್‌ ಕಟ್ಟಡಗಳು ವೈವಿಧ್ಯಮಯ ವಾಸ್ತು ವಿನ್ಯಾಸ ಹೊಂದಿವೆ. ಎಲ್ಲ ಖಾಸಗಿಯವರ ಸೊತ್ತು .ಇರುವವರು ಬೆರಳೆಣಿಕೆ ಜನ. ಅದೂ ಬೇಸಿಗೆಯಲ್ಲಿನ ಮಾತ್ರ. 
ಹೀಗಾಗಿ ಎಲ್ಲೆಡೆ ನೀರವ ಮೌನ. ಅಲ್ಲಿರುವ ಗಿಡ ಮರಗಲಲ್ಲಿನ ಹಕ್ಕಿಗಳ ಕಲರವ, ಸಾಗರದ ಅಲೆಗಲ ಅಬ್ಬರ ಬಿಟ್ಟರೆ ಬೇರೆ  ಏನೂ ಇಲ್ಲ.ನಾವು ಎರಡು ವರ್ಷದ ಮಗು ಅನಿಕೇತನನ್ನೂ ಕರೆದು ಚಾರಣಕ್ಕೆ ಹೊರಟೆವು ಹೇಗಾದರೂ ಇರಲಿ ಎಂದು ಸ್ಟ್ರಾಲರ್‌ ಅನ್ನೂ ಜೊತೆಗೆ  ತೆಗೆದುಕೊಂಡು ಹೋಗಿದ್ದೆವು. ಇಲ್ಲಿ ಪ್ರವಾಸಿ ಸ್ನೇಹಿ ವ್ಯವಸ್ಥೆಗೆ ಭಲೆ ! ಎನ್ನಲೇಬೇಕು. ಮೊದಲಿನಿಂದ ಹಿಡಿದು ಅಲ್ಲಲ್ಲಿ ಸೂಚನಾಫಲಕ. ಮೈಲಿಗೊಂದು   ಕಡೆ ವಿಶ್ರಮಿಸಲು ಬೆಂಚುಗಳು..ಅಲ್ಲಲ್ಲಿ ಎಚ್ಚರಿಕೆಯ ಫಲಕಗಳು. ಅಂದರೆ ಮಾನವ ಜೀವಕ್ಕೆ ಎಳ್ಳಷ್ಟೂ ಅಪಾಯ ಆಗ ಬಾರದೆಂಬ ಮುನ್ನೆಚ್ಚರಿಕೆ. ಸಾಗರದ ಕಡೆ ಬಲವಾದ ತಂತಿ ಬೇಲಿ. ಅದನ್ನು ದಾಟಿ ಹೋಗಲು ಆಗಲಾರದಷ್ಟು ಭದ್ರ. ಅಲ್ಲಿಲ್ಲಿ ಕಾಲುದಾರಿ ಇದ್ದರೂ ಹೋಗಬಾರದೆಂಬ ಸೂಚನೆ ಪಕ್ಕದಲ್ಲೇ. ಜೊತೆಗ ಸುಮಾರು ಮೂರು ಅಡಿ ಅಗಲದ ತಾರು ಹಾಕಿದ ರಸ್ತೆ.  ಒಂದು ಕಡೆಯಿಂದ ತಂಪನೆಯ ನೆರಳು ಇನ್ನೊಂದುಕಡೆ ಸಾಗರದ ಮೇಲಿನಿಂದ ಬರುವ ತಂಪಾದ ಗಾಳಿ. 
ಹೀಗಾಗಿ ನಾವು ಮಧ್ಯಾಹ್ನ ಒಂದು ಗಂಟೆಗೆ ಹೊರಟರೂ ನಮಗೆ ಬಿಸಿಲಬಾಧೆ ಆಗಲಿಲ್ಲ. ಆಯಾಸದ ಚಿಹ್ನೆ ಸುಳಿಯಲಿಲ್ಲ.ನಮ್ಮೊಡನೆ ಗುಂಪುಗುಂಪಾಗಿ ದೇಶ ವಿದೇಶದ ಯಾತ್ರಿಕರು.  ಎಳೆಯ ಮಕ್ಕಳಿಂದ ಹಿಡಿದು ಹಣ್ಣಾದ ವಯಸ್ಕರ ವರೆಗೆ.  ಮಧ್ಯ ಹೋಗುವಷ್ಟರಲ್ಲಿ ಅಲ್ಲೊಂದು ಕಡೆ ನಾಲ್ಕು ಜಾನಿಗಳು. ಅಂದರೆ ಸಂಚಾರಿ ಶೌಚಾಲಯಗಳು. ಪ್ರಕೃತಿಯ ಕರೆಗೆ ಓಗೊಡಲು ಅವಕಾಶ. ಅಲ್ಲಿಯೇ ಕಸದ ತೊಟ್ಟಿಗಳು. ಯಾವುದೇಕಾರಣಕ್ಕೂ ಪರಿಸರ ಮಾಲಿನ್ಯಕ್ಕೆ ಅವಕಾಶ ವಿರಲಿಲ್ಲ. ಅದಕ್ಕೆಂದೆ ಸುಮಾರು ನಾಲ್ಕು ಮೈಲು ದೂರದ ಚಾರನದಲ್ಲಿ ಒಂದು ಪ್ಲಾಸ್ಟಿಕ್‌ ತುಣಕೂ ಕಾಣಲಿಲ್ಲ. 
ವಾತಾವರಣ ತುಂಬ ಹಿತಕರವಾಗಿತ್ತು. ನಾವು ಸ್ಟ್ರೋಲರ್‌ನಲ್ಲಿ ಮಗುವನ್ನು ಕೂಡಿಸಿ ಕರೆತರಲು ಯೋಚಿಸಿದ್ದರೆ ಅವನೇ ಅದನ್ನು ತಳ್ಳಿಕೊಂಡು ಬರಲು ಯತ್ನಿಸಿದ. ಎರಡು ಗಂಟೆ ಯ ಚಾರಣ ಮುಗಿದದ್ದುಗೊತ್ತಾಗಲೇಇಲ್ಲ. ಇಲ್ಲಿನ ವಿಶೇಷತೆ ಎಂದರೆ ಮಧ್ಯದಲ್ಲಿ  ತಿಂಡಿ ತಿನಿಸು ಪಾನೀಯಗಳ ಮಾರಾಟ ಇಲ್ಲ. ಹಾಗಾಗಿ ಹಸಿವೆ ಎನಿಸಿದರೆ  ಹೋಟೆಲಿಗೆ ಹೋಗಬೇಕು. 
ಅಲ್ಲಿಯೇಕುಳಿತು ತಿನ್ನಲು ಅವಕಾಶ ವಿರದು. ಇದರಿಂದ  ಇಲ್ಲಿ ಕಣ್ಣು, ಕಿವಿ ಮತ್ತು ಮನಸ್ಸಿಗೆ ನಿರಂತರ ಮುದ..ಚಾರಣ ಎಂದರೆ ಹೀಗೆ  ಇರಬೇಕು ಎಂದು ನಮಗನಿಸಿತು











Sunday, May 25, 2014

ಅಮೇರಿಕಾ ಅನುಭವ-5

 ಶ್ವಾನ ಯಾರು ನಿನಗೆ ಸಮಾನ    
ಎಚ್. ಶೇಷಗಿರಿರಾವ್

ಶ್ವಾನ- ನಾನ, ನೀನ?
ಬೀದಿ ನಾಯಿಗಳನ್ನು ನೋಡಬೇಕೆಂದು ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರೂ ದೊರೆಯುವುದು ದುರ್ಲಭ ಅಮೇರಿಕಾದಲ್ಲಿ. ಅಷ್ಟೆ ಏಕೆ ನಾಯಿಗಳಿವೆ ಎಚ್ಚರಿಕೆ ಎಂಬ ಫಲಕ ಯಾವ ಮನೆಯ ಮುಂದೆಯೂ ಕಾಣುವುದು ಕಷ್ಟ. ಅಂದರೆ ಅಮೇರಿಕಾ ನಾಯಿಗಳಿಲ್ಲದ ನಾಡು ಎಂದು ಅಂದು ಕೊಳ್ಳಬಾರದು. ಅಲ್ಲಿ ೭೭.೫ ಮಿಲಿಯನ್ ನಾಯಿಗಳಿವೆ. ಸರಿ ಸುಮಾರು ಶೇಕಡಾ ನಲವತ್ತು ಕುಟುಂಬಗಳಲ್ಲಿ ಶ್ವಾನವೂ ಸಹ ಅವಿಭಾಜ್ಯ ಅಂಗ. ಸುಮಾರು .೯% ಸಂಸಾರಗಳಲ್ಲಿ ಎರಡು ನಾಯಿಗಳು ಉಂಟು. ಆ ದೇಶದ ಅತಿ ಮುದ್ದಿನ ಪ್ರಾಣಿಗಳಲ್ಲಿ ನಾಯಿಯದು ಪ್ರಥಮ ಸ್ಥಾನ. ನಂತರದ ಸ್ಥಾನ ಬೆಕ್ಕಿನದು. ಹತ್ತನೆಯ ಸ್ಥಾನ ಹಾವಿನದು. ನಾಯಿ ಅಲ್ಲಿಯ ಮೂಲ ನಿವಾಸಿಗಳ ಸಂಗಾತಿಯಾಗಿತ್ತು. ಆದರೆ ಬೆಕ್ಕು  ವಲಸಿಗ. ನೂರಾರು ವರ್ಷಗಳ ಹಿಂದೆ ವಲಸಿಗರನ್ನು ಸಾಗಿಸುವ ನೌಕೆಗಗಳಲ್ಲಿ ಇಲಿ, ಹೆಗ್ಗಣಗಳು ಹೆಚ್ಚಾಗಿ, ಇದ್ದ ಬದ್ದ ಆಹಾರವನ್ನೆಲ್ಲ ಮೂಷಿಕ ಸೇನೆ ಮುಗಿಸಿದಾಗ ಬೆಕ್ಕನ್ನೂ ಹಡಗಿನಲ್ಲಿ ಖಾಯಂ ಪಯಣಿಗನಾಗಿ ಪರಿಗಣಿಸಿದರು. ಮೂಲನಿವಾಸಿಗಳ ದೊರೆಯೊಬ್ಬ ತನ್ನ ರಾಜ್ಯದಲ್ಲಿನ ಇಲಿಗಳ ಹಾವಳಿ ತಡೆಗಟ್ಟಿದವರಿಗೆ ತನ್ನ ಮಗಳನ್ನೇ ಕೊಟ್ಟು ಮದುವೆ ಮಾಡಿ ಅರ್ಧ ರಾಜ್ಯ ಕೊಡುವುದಾಗಿ ಘೋಷಿಸಿದಾಗ ಯುರೋಪಿನ ನಾವಿಕನಿಬ್ಬ ತನ್ನ ಜತೆ ಇದ್ದ ಬೆಕ್ಕಿನ ಸಮೇತ ಬಂದು ಅಲ್ಲಿ ನೆಲಸಿ ರಾಜನಾದ ಕತೆ ಇದೆ. ಬೊಮ್ಮನಹಳ್ಳಿಯ ಕಿಂದರಿಜೋಗಿ ಕವನಕ್ಕೆ ಸ್ಫೂರ್ತಿ ದೊರೆತದ್ದೂ ಇಂತಹ ಘಟನೆಯೇ ಇದ್ದೀತು. ಅಂತೂ ಮಾರ್ಜಾಲ ಜಾತಿಯ ಪ್ರಾಣಿಗಳು ಅಮೇರಿಕಾದ ಮೂಲದವಲ್ಲ. ಅದಕ್ಕೆ ಬೆಕ್ಕಿನ ಅಣ್ಣಂದಿರಾದ ಹುಲಿ, ಸಿಂಹ, ಚಿರತೆ ಅಮೇರಿಕಾದಲ್ಲಿ ಇಲ್ಲ. ಈಗ ಇಲಿಗಳನ್ನು ಹಿಡಿಯುವ ಕೆಲಸವಿಲ್ಲದಿದ್ದರೂ ಹವಾನಿಯಂತ್ರಿತ ಮನೆಯಲ್ಲಿ ಮುದ್ದಿನ ಮುದ್ದೆಯಾಗಿದೆ ಬೆಕ್ಕು.
ಇಲ್ಲಿನ ಅತಿ ಮುದ್ದಿನ ಪ್ರಾಣಿಗಳಲ್ಲಿ ಹತ್ತನೆಯದು ಹಾವು. ಅದನ್ನು ಸಾಕುವವರೂ ಇದ್ದಾರೆ. ಫ್ಲೀ ಮಾರ್ಕೆಟ್ಟಿಗೆ ಹೋದಾಗ ಗಾಜಿನ ಚೌಕಾಕಾರದ ಜಾಡಿಗಳಲ್ಲಿ ಹರಿದಾಡುವ ಹಾವುಗಳನ್ನು ನೋಡಿದೆ. ಅವು ಮಾರಾಟಕ್ಕೆ ಇವೆ ಎಂಬುದನ್ನು ಕೇಳಿ ಗಾಬರಿಯಾದೆ. ಅವು ವಿಷದ ಹಾವುಗಳಲ್ಲ. ಅವುಗಳಿಂದ ಜೀವ ಹಾನಿಯ ಭಯವಿಲ್ಲ. ಅವುಗಳಿಗೂ  ಬೇಡಿಕೆ ಇದೆ ಎಂದಾಗ ನಮ್ಮ ಹಾವಾಡಿಗರ ನೆನಪಾಯಿತು. ಆದರೆ ಇವರು ಸಾಕುವುದು ಪ್ರೀತಿಗಾಗಿ. ಅದಕ್ಕೆ ನಿತ್ಯ ಬೇಕಾದ ಆಹಾರವೂ ಅಂದರೆ ಹುಳ, ಹುಪ್ಪಡಿ. ಕಪ್ಪೆ ಇತ್ಯಾದಿಗಳು ಅಲ್ಲಿಯೇ ಮಾರಾಟವಾಗುತ್ತವೆ.
ನಾಯಿಗಿಂತ ಕಡೆ ಎಂದು ಹೀನಾಯವಾಗಿ ಮಾತನಾಡುವವರು ಇಲ್ಲಿ ಬಂದು ನೋಡಬೇಕು. ಶ್ವಾನದಂತೆ ಶ್ರೇಷ್ಠ ಎಂದು ಅವರೇ ಹೇಳಬೇಕಾಗುತ್ತದೆ. ಒಂದು ರೀತಿಯಲ್ಲಿ ಜನರಿಗಿಂತ ಅವುಗಳ ಜಬರು ಬಹು ಜೋರು. ಮಾನವ ಮಗು, ಶಿಕ್ಷಣ ಮತ್ತು ಶ್ವಾನದ ನಡುವೆ ಒಂದನ್ನು ಆಯ್ಕೆ ಮಾಡಲು ಹೇಳಿದರೆ ಬಹಳ ಜನ ನಾಯಿಗೆ ಆದ್ಯತೆ ನೀಡುವ ಸಂಭವ ಹೆಚ್ಚಂತೆ. ಅವುಗಳನ್ನು ಸಾಕುವುದು ಎಂದರೆ ಒಂದು ಹೆಮ್ಮೆಯ ಸಂಗತಿ. ಅವುಗಳಿಗೆ ವಿಶೇಷ ವಾಸದ ಮನೆ. ಅಲ್ಲಿ ಹಿತವಾದ ವಾತಾನುಕೂಲ. ಹವಾಮಾನಕ್ಕೆ ಅನುಗುಣವಾದ ಹಾಸಿಗೆ  ಹೊದಿಕೆ, ಹೊತ್ತು ಹೊತ್ತಿಗೆ ನಿಗದಿತ ಆಹಾರ, ಆಗಾಗ ವೈದ್ಯಕೀಯ ತಪಾಸಣೆ, ಸಕ್ರಮವಾದ ಔಷಧ ಉಪಚಾರ ಒದಗಿಸಲೇಬೇಕು. ತುಸು ಹೆಚ್ಚು ಕಡಿಮೆ ಮಾಡಿದರೂ ಸ್ಥಳೀಯ ಸಂಘಟನೆಗಳು ಮಧ್ಯ ಪ್ರವೇಶಿಸುತ್ತವೆ.
ಅವುಗಳಿಗೆ ಕಾರಿನಲ್ಲಿ ವಿಶೇಷ ಸೀಟು. ಅಲ್ಲದೆ ಬೆಲ್ಟನ್ನು ಕಡ್ಡಾಯವಾಗಿ ಕಟ್ಟಲೇಬೆಕು. ವಾ, ಅವು ಕುಳಿತು ಹೊಗುವ ಠೀವಿ ನೋಡಬೇಕು. ಅವೇ ಮಾಲಿಕರು ಯಜಮಾನ ಬರಿ ಕಾರಿನ ಚಾಲಕ ಯಜಮಾಯ ಎನ್ನುವ ಹಾಗಿರುತ್ತವೆ.
ಬೆಳಗಿನ ವಾಯುವಿಹಾರಕ್ಕೆ ಹೊರಟಾಗ ತರ ತರದ ಜಾತಿಯ ನಾಯಿ ಹಿಡಿದ ಜನ ಸಿಗುತ್ತಿದ್ದರು. ಎಲ್ಲರ ಕೈನಲ್ಲೂ ಒಂದೊಂದು ಪ್ಲಾಸ್ಟಿಕ್ ಚೀಲ ಇದ್ದೇ ಇರುತಿತ್ತು. ನನಗೆ ಇವೇನು ಕೂಳುಬಾಕ ನಾಯಿಗಳು, ಮನೆಯಲ್ಲಿ ತಿನ್ನುವುದಲ್ಲದೆ ಹೊರಗೆ ಬಂದಾಗಲೂ ಹೊಟ್ಟೆಗೆ ಹಾಕಿಕೊಳ್ಳಬೇಕೆ? ಎಂದುಕೊಂಡೆ. ನಂತರ ತಿಳಿಯಿತು. ಅದು ಅವುಗಳ ಆಹಾರವಲ್ಲ. ಅವು ರಸ್ತೆಯಲ್ಲಿ ಮಲ ವಿಸರ್ಜನೆ ಮಾಡಿದರೆ ತಡ ಮಾಡದೆ ಅದನ್ನು ಸಂಗ್ರಹಿಸಿ ಮನೆಗೆ ಒಯ್ಯಬೇಕು. ಎಲ್ಲಿ ಅಂದರೆ ಅಲ್ಲಿ ಗಲೀಜು ಮಾಡುವ ಹಾಗಿಲ್ಲ. ಅಲ್ಲಲ್ಲಿ ಫಲಕದ ಮೇಲೆ ನಾಯಿಯ ಚಿತ್ರ ಕಂಡಿತು. ಅದನ್ನು ಜನರಿಗೆ ಎಚ್ಚರಿಕೆ ನೀಡಲು ಹಾಕಿದ್ದಾರೆ. ನಾಯಿ ಎಲ್ಲೆಂದರೆ ಅಲ್ಲಿ ಗಲೀಜು ಮಾಡಿದರೆ ಮಾಲಿಕ ದಂಡ ತೆರಬೇಕು. ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲರ ಕೈನಲ್ಲೂ ಪ್ಲಾಸ್ಟಿಕ್ ಚೀಲ. ಮನೆಯಲ್ಲಿ ಅವಕ್ಕೆ ಶೌಚ ಕವಚ ತೊಡಿಸಿದ್ದರೂ ಅಚ್ಚರಿಯಿಲ್ಲ.
ಹೋದ ಹೊಸದರಲ್ಲಿ ನಾನು ಸತೀ ಸಮೇತನಾಗಿ ಹತ್ತಿರವಿದ್ದ ವಾಲ್ ಮಾರ್ಟಿಗೆ ಹೋಗಿದ್ದೆ. ಅಲ್ಲಿ ಅನೇಕ ವಿಭಾಗಗಳು. ಒಂದು ಕಡೆ ಪುಟ್ಟ ಪುಟ್ಟ ಅಂಗಿ ಲಂಗ ಸರ, ಹಾರ, ಮೇಜು ಕುರ್ಚಿ, ಹಾಸಿಗೆ ಹೊದಿಕೆಗಳ ಸಾಲು ಸಾಲು ಕಂಡಿತು. ನನ್ನ ಹಂಡತಿಗೆ ತುಂಬ ಖುಷಿ. ಅವು ಆಟದ ಬೊಂಬೆಯ ಉಡುಗೆ ತೊಡುಗೆಗಳು ಆಟದ ಸಾಮಾನುಗಳು. ಎಷ್ಟು ಚೆನ್ನಾಗಿವೆ, ಚಿಕ್ಕ ಮಕ್ಕಳಿಗೂ ಹಾಕಬಹುದು ನಮ್ಮ ಇನಿಗೆ ತೊಗಳ್ಳೋಣ ಎಂದು ಹೊಗಳಿಯೇ ಹೊಗಳಿದಳು. ಮನೆಯಲ್ಲೂ ಮಗಳ ಮುಂದೆ ಹೇಳಿದಳು. ಮುಂದಿನ ಸಲ ಮಗಳೊಂದಿಗೆ ಹೋದಾಗ ಅವನ್ನು ನೋಡಿ ಮಗಳಿಗೆ ನಗುವೋ ನಗು. ಅವು ನಾಯಿಯ ಉಡುಪು ತೊಡಪುಗಳು. ಪ್ರತಿ ಮಾಲ್ ನಲ್ಲೂ ಮುದ್ದು ಪ್ರಾಣಿಗಳ ವಸ್ತು ವಿಭಾಗ ಪ್ರತ್ಯೇಕ ವಿಭಾಗವಿರುತ್ತದೆ. ನಂತರ ಪೆಟ್ ಮಾರ್ಟಿಗೆ ಹೋದಾಗ ತಿಳಿಯಿತು ಶ್ವಾನ ಸಂಪದದ ಸೊಗಸು. ಆದು ಸಂಪೂರ್ಣ ಮುದ್ದಿಗಾಗಿ ಸಾಕಿದ ಪ್ರಾಣಿಗಳ ವಸ್ತುಭಂಡಾರ. ಅಲ್ಲಿ ಸಾಕಿದ ಮುದ್ದು ಪ್ರಾಣಿ ಪಕ್ಷಿಗಳಿಗೆ ಬೇಕಾದ್ದೆಲ್ಲ ದೊರಕುವುದು. ಅದರಲ್ಲೂ ನಾಯಿ ಬೆಕ್ಕುಗಳದೆ ಮೇಲುಗೈ. ಕುರ್ಚಿ, ಮಂಚ, ಹಾಸಿಗೆ ಹೊದಿಕೆ, ಸೋಫಾ, ಸ್ನಾನದ ತೊಟ್ಟಿ, ಪೇಷ್ಟು, ಬ್ರಷು, ಸೋಪು. ಶ್ಯಾಂಪು, ತರಹ ತರಹದ ಬೆಲ್ಟು, ಬಗೆ ಬಗೆಯ ಆಹಾರ, ಕಡಿಯಲು ಎಲುಬಿನ ತುಂಡುಗಳು, ಅಲಂಕಾರ ಸಾಮಗ್ರಿಗಳು ಅವುಗಳ ಬಗೆಗಿನ, ಮಾಹಿತಿ, ತರಬೇತಿಗಳ ಪುಸ್ತಕ ಹಾಗು  ಸೀಡಿ.  ವೈಭೋಗದ ಜೀವನಕ್ಕೆ ಬೇಕಾದ ಎಲ್ಲ ಒಂದೆ ಸೂರಿ ನಡಿಯಲ್ಲಿದ್ದವು. ಇಂತಹ ಜೀವನ ನಡೆಸುವ ಆ ಪ್ರಾಣಿಗೆ ನಾಯಿ ಎಂದು ಕರೆಯುವುದು ಹೇಗೆ ಎಂದು ನನಗೆ ಜೀವ ಹುರಿ ಹುರಿ ಅನಿಸಿತು.
ಒಂದು ಬಾರಿ ನನ್ನ ಅಳಿಯನ ಬಂಧುವಿನ ಮನೆಗೆ ಸಮಾರಂಭ ಒಂದಕ್ಕೆ ಹೋಗಿದ್ದೆವು. ಅವರದು ತುಂಬ ದೊಡ್ಡದಾದ ಮನೆ. ಅವರ ಮನೆಯಲ್ಲಿ ಒಂದು ಮುದ್ದಾದ ನಾಯಿಮರಿ ಇದ್ದಿತು. ಎಲ್ಲ ಕಡೆ ಬಿಡು ಬೀಸಾಗಿ ಓಡಾಡುತಿತ್ತು. ಆದರೆ ದೇವರ ಮನೆ, ಅಡುಗೆ ಮನೆ ಮತ್ತು ಡೈನಿಂಗ್ ಹಾಲಿನ ಬಾಗಿಲವರೆಗೆ ಬಂದರೂ ಒಳಗೆ ಬರುತ್ತಿರಲಿಲ್ಲ. ಕುಂಯಿ, ಕುಂಯಿ ಎನ್ನುತ್ತಾ ಹಿಂದಕ್ಕೆ ಹೋಗುತಿತ್ತು. ಅದಕ್ಕೆ ನೀಡಿದ ತರಬೇತಿ ನೋಡಿ ನನಗೆ ಬಹಳ ಮೆಚ್ಚಿಗೆ ಆಯಿತು. ಎಂತಹ ನಾಗರಿಕ ನಾಯಿಮರಿ ಎಂದುಕೊಂಡೆ.
ಸಂಜೆ ಹಾಗೆಯೇ ಕಾಲಾಡಿಸಿಕೊಂಡು ಬರಲು ಹೊರ ಸಂಚಾರಕ್ಕೆ ಹೊರಟೆ. ಅದು ತುಂಬ ಸಿರಿವಂತರ ಬಡಾವಣೆ. ಎಲ್ಲ ಮೂರು ನಾಲಕ್ಕು ಗರಾಜು ಇರುವ ಮಹಲುಗಳು. ಅರ್ಧ ಮುಕ್ಕಾಲು ಎಕರೆ ಹುಲ್ಲು ಹಾಸಿನ ಮಧ್ಯದ ಮನೆಗಳು. ಅಲ್ಲಿಯೇ ಮಕ್ಕಳಿಗೆ ಆಟವಾಡಲು ಜಾರುಬಂಡಿ, ಉಯ್ಯಾಲೆ, ಬಾಸ್ಕೆಟ್ ಬಾಲ್ ಅಂಕಣ, ಇನ್ನಿತರ ಪರಿಕರಗಳು. ನಮ್ಮ ನಗರದ ಬಡಾವಣೆಗೆ ಇಂತಹ ಒಂದು ಸೌಲಭ್ಯ ಇದ್ದರೆ ಸಂಜೆಯಲ್ಲಿ ಮುಕುರುವ ಮಕ್ಕಳ ನೆನಪಾಯಿತು. ತಂದೆ ತಾಯಿಗಳಿಗೆ ಮಕ್ಕಳ ಬಗೆಗಿನ ಕಾಳಜಿ, ಕಳಕಳಿ ತೃಪ್ತಿ ತಂದಿತು. ಇಲ್ಲಿನ ವಿಶೇಷ ಎಂದರೆ ಆರತಿಗೊಂದು, ಕೀರುತಿಗೊಂದು, ನಾವಿಬ್ಬರು ನಮಗಿಬ್ಬರು ಎಂಬ ಮಾತೆ ಇಲ್ಲ. ಮಕ್ಕಳಿರಲವ್ವ ಮನೆ ತುಂಬ ಎನ್ನುವ ನಂಬಿಕೆ ಅವರದು. ಅಲ್ಲದೆ ಸರ್ಕಾರದ ಸೌಲಭ್ಯವೂ ಸಿಕ್ಕುವುದು. ಅದಕ್ಕೆ ಅಲ್ಲಿ ಎಲ್ಲ ಅನುಕೂಲ ಮಾಡಿಕೊಡುವರು ಮಕ್ಕಳ ಆಟ ಪಾಠಕ್ಕೆ. ಹೀಗೆ ಯೋಚಿಸುತ್ತಾ ಮುಂದೆ ಸಾಗುತ್ತಿರುವಾಗ ಮನೆಯೊಂದರಿಂದ ದೈತ್ಯ ದೇಹದ ನಾಯಿ ಬೊಗಳುತ್ತಾ ನನ್ನತ್ತ  ಧಾವಿಸಿತು. ಅಯ್ಯೋ ಇನ್ನೇನು ಗತಿ ಎಂದು ಕಂಗಾಲಾದೆ. ನಾಯಿಯಿಂದ ಕಡಿಸಿಕೊಳ್ಳಲು ನ್ಯೂಜರ್ಸಿಗೆ ಬರಬೇಕಿತ್ತೆ? ಎನಿಸಿತು.
ನಾನು ಸಾಧಾರಣವಾಗಿ ನಾಯಿಗೆ ಅಂಜುವವನಲ್ಲ. ಬೆಳ್ಳಂ ಬೆಳಗ್ಗೆ ವಾಕಿಂಗ್ ಹೋಗುವಾಗ ಅನೇಕರು ಕೈನಲ್ಲಿ ಕೋಲು ಹಿಡಿದಿರುತ್ತಾರೆ ಅದನ್ನು ಕೋಲು ಎನ್ನುವುದಕ್ಕಿಂತ ಶ್ವಾನದಂಡ ಎನ್ನಬಹುದು. ಬಹುತೇಕರು ನಿವೃತ್ತ ಹಿರಿಯ ಅಧಿಕಾರಿಗಳು. ಅದನ್ನು ರಾಜದಂಡವೇನೋ ಎಂಬ ಗತ್ತಿನಿಂದ ಹಿಡಿದು ಬರುತ್ತಾರೆ. ಆದರೆ ಅದು ನಾಯಿ ಹೊಡೆವ ಕೋಲು. ನಮ್ಮಲ್ಲಿ ಹಿಂಡು ಹಿಂಡು ನಾಯಿಗಳನ್ನು ನೋಡಿದ್ದೇನೆ. ಹಚಾ ಹಚಾ ಎನ್ನುತ್ತಾ ಕೈ ಎತ್ತಿದರಾಯಿತು ಬಾಲ ಮುದುರಿಕೊಂಡು ಕಾಲು ಕೀಳುತ್ತವೆ. ಇಲ್ಲವೆ ಕೆಳಗೆ ಬಗ್ಗಿ ಕಲ್ಲು ತೆಗೆದುಕೊಂಡರಂತೂ ಮುಗಿಯಿತು. ತಮ್ಮದಾರಿ ತಾವು ಹಿಡಿಯುತ್ತವೆ. ಆದರೆ ಇದು ಅಮೇರಿಕಾದ ನಾಯಿ. ನನ್ನ ಹಚಾ ಹುಚಾ ಅದಕ್ಕೆ ತಿಳಿಯಬೇಕಲ್ಲ. ಮೇಲಾಗಿ ಅದನ್ನು ಹೆದರಿಸಬೇಕೆಂದರೆ ಅಲ್ಲಿ ಕಲ್ಲು ಎಲ್ಲಿಂದ ತರಲಿ.  ದೇವರೇ ದಿಕ್ಕು ಎಂದು ನಿಂತು ಬಿಟ್ಟೆ. ನಾಯಿಗಳು ಮತ್ತು ಸಮಸ್ಯೆಗಳು ಒಂದೆ ರೀತಿ. ಕಾಲೂರಿ ನಿಂತು ಎದುರಿಸಿದರೆ ಹೆದರಿ ದೂರ ಹೋಗುತ್ತವೆ. ಬೆನ್ನು ತೋರಿದರೆ ಬೆಂಬಿಡದೆ ಕಾಡುತ್ತವೆ. ನಾಯಿಗಳದು ಇನ್ನೊಂದು ಗುಣ. ನಾವು ಓಡಿದರೆ ಮಾತ್ರ ಅವುಗಳ ಜೋರು ಬಹಳ. ಬಹುಶ: ತನ್ನ ಪೂರ್ವಿಕರು ಬೇಟೆ ಆಡಿ ಬದುಕುತ್ತಿದ್ದಾಗಿನ ಗುಣ ಜಾಗೃತವಾಗಿರಬಹುದು. ಚಲಿಸುವ ಯಾವುದನ್ನು ಕಂಡರೂ ಸರಿ ಅವುಗಳ ವೇಗ, ರಭಸ ದ್ವಿಗುಣವಾಗುವುದು. ಸೈಕಲ್ ಮತ್ತು ಬೈಕ್ ಸವಾರರಿಗೆ ರಾತ್ರಿಯಲ್ಲಿ ಈ ಅನುಭವ ಬಹು ಕಟು. ಸೀಳು ನಾಯಿಗಳಂತೆ ಗುಂಪಾಗಿ ಬೊಗಳುತ್ತಾ ಬೈಕ್ ಅನ್ನು ಹಿಂಬಾಲಿಸದಾಗ ಅವರ ಗತಿ ಗಂಗಮ್ಮ. ವಿಶೇಷವಾಗಿ ಅಪರಾತ್ರಿಯಲ್ಲಿ ಬರುವ ಬಿಪಿಒ ನೌಕರರು ಬಹುತೇಕ ಬೈಕಲ್ಲಿ ಬರುವುದಕ್ಕೆ ಹಿಂದೆ ಮುಂದೆ ನೋಡಲು ಇದೆ ಕಾರಣ. ಇನ್ನೇನು ಅದು ನನ್ನ ಮೇಲೆ ನೆಗೆಯಬಹುದು ಎಂದುಕೊಂಡು ಕಣ್ಣು ಮುಚ್ಚಿ ನಿಂತೆ. ಇದುವರೆಗೆ ಕೆಲಸ, ಹೆಂಡತಿ, ಮಕ್ಕಳು, ಸಂಸಾರ ಎಂಬ ಪಡಿಪಾಟಿಲಿನಲ್ಲಿ ಸಮಾಜಕ್ಕೆ ಯಾವ ಸೇವೆಯನ್ನು ಮಾಡಲಿಲ್ಲ. ಸತ್ತ ಮೇಲಾದರೂ ಅನ್ಯರಿಗೆ ತುಸು ಅನುಕೂಲವಾಗಲಿ ಎಂದು ಲಯನ್ಸ್ ಕ್ಲಬ್ಬಿಗೆ ನೇತ್ರದಾನ ಮಾಡಿದ್ದೆ. ವೈದ್ಯಕೀಯ ಸಂಶೋಧನೆಗೆ ಕಿರು ಸಹಾಯವಾಗಲಿ ಎಂದು ಸೆಂಟ್ ಜಾನ್ ಆಸ್ಪತ್ರೆಗೆ ದೇಹ ದಾನ ಮಾಡಿದ್ದೆ. ಆದರೆ ಈಗ ಪರದೇಶದಲ್ಲಿ ನಾನು ಹಾದಿಯ ಹೆಣ. ನಾಯಿಯ ಬಾಯಲ್ಲಿ ಶರೀರ ಚೂರು ಚೂರು. ಏನೂ ಮಾಡುವ ಹಾಗಿಲ್ಲ. ದೇವರೇ ಗತಿ ಎಂದು ಕಾಯತ್ತಿದ್ದೆ. ಆದರೆ ಏನೂ ಆಗಲಿಲ್ಲ. 
ನಾಯಿ ರಸ್ತೆಯಿಂದ ೧೦ ಅಡಿ ದೂರದಲ್ಲಿ ಯಾರೋ ಸರಪಳಿ ಹಿಡಿದು ತಡೆದಂತೆ ಹಿಂಗಾಲುಗಳ ಮೇಲೆ ನಿಂತು ಭೀಕರವಾಗಿ ಬೊಗಳತೊಡಗಿತು. ಮುನ್ನುಗಲು ಶತಪ್ರಯತ್ನ ಮಾಡುತ್ತಿದೆ .ಆದರೆ ಕಾಣದ ಕೈ ಅದನ್ನು ತಡೆದಿದೆ. ಅದು ಏನೇ ಎಗರಾಡಿದರೂ ಒಂದು ಇಂಚು ಮುಂದೆ ಬರಲಾಗಲಿಲ್ಲ. ನಾನು ನಿರಾಳವಾಗಿ ಮುನ್ನೆಡೆದೆ. ಅದೂ ಹಿಂಬಾಲಿಸಿತು. ಆದರೆ ಅಂತರ ಮಾತ್ರ ಅಷ್ಟೆ ಇತ್ತು. ಯಾರೋ ಗೆರೆ ಎಳೆದಂತೆ ಇತ್ತು. ಅದನ್ನು ದಾಟಲಾಗದೆ ಅದು ಪಡಿಪಾಟಲು ಪಡುತ್ತಿದೆ. ಇದು ಲಕ್ಷ್ಮಣ ರೇಖೆಗಿಂತಲೂ ಬಲವಾದದ್ದು ಎನಿಸಿತು. ಬದುಕಿದೆಯಾ ಬಡಜೀವವೆ ಎಂದುಕೊಂಡು ಮನೆಯ ಹಾದಿ ಹಿಡಿದೆ. ಬರಸಿಡಿಲಿನಂತೆ ಎರಗಿದ್ದು ಬರಿ ಗುಡುಗಿನಂತೆ ಗಡಿಬಿಡಿ ಮಾಡಿಹೋಯಿತು. ಮನೆಗೆ ಮರಳಿದ ಮೇಲೆ ರಾತ್ರಿ, ನನ್ನ ಮಗಳಿಗೆ ಇದೇನಮ್ಮ ನಿಮ್ಮ ದೇಶದಲ್ಲೂ ಮಾಟ ಮಂತ್ರ ಇದೆಯಾ. ಅಂತಹ ಭೀಕರ ಪ್ರಾಣಿ ಹಾರುವಷ್ಟು ಹತ್ತಿರ ಬಂದರೂ ನನ್ನನ್ನು ಮುಟ್ಟಲಾಗದೆ ಎಗರಾಡುತ್ತಿತ್ತಲ್ಲ ಏನು ವಿಚಿತ್ರ ಎಂದೆ.
ಆಗ ಅವಳು ಹೇಳಿದಳು ಮಾಟ ಮಂತ್ರ ಯಾವುದು ಇಲ್ಲ. ಇದು ತಂತ್ರಜ್ಙಾನದ ಕೊಡುಗೆ. ಸಾಕು ಪ್ರಾಣಿಗಳನ್ನು ಕಂಡಹಾಗೆ ಬಿಡಲಾಗುವುದಿಲ್ಲ. ಏನಾದರು ಅಪಾಯ ಮಾಡಿದರೆ ಕಂಡಾಬಟ್ಟೆ ದಂಡ ತೆರಬೇಕಾಗುತ್ತದೆ. ಅದಕ್ಕೆ ಎಲೆಕ್ಟ್ರಾನಿಕ್ ಬೇಲಿ ಅಳವಡಿಸಿರುತ್ತಾರೆ. ಅವುಗಳ ಕೊರಳಿಗೆ ಒಂದು ವಿಶೇಷ ಕಾಲರ್ ಕಟ್ಟಿರುವರು. ನಿಗದಿತ ತಾಣಕ್ಕೆ ಬಂದೊಡನೆ ಹಗುರವಾದ ವಿದ್ಯುತ್ ಷಾಕ್ ತಗುಲಿ ಅವು ಹಿಂದೆ ಹೋಗುವಂತೆ ಮಾಡುತ್ತದೆ ಎಂದಳು. ಬಯಲು ಪ್ರದೇಶದಲ್ಲಿ ಬೇಲಿಯಂತೆ ಇದ್ದರೆ, ಮನೆಯೊಳಗೆ ಪ್ರಾಣಿಗಳಿಗೆ ಎಲ್ಲೆಲ್ಲಿ ಪ್ರವೇಶ ನಿಷಿದ್ಧವೋ ಅಲ್ಲಿ ಎಲೆಕ್ಟ್ರಾನಿಕ್ ತಡೆ ನಿರ್ಮಿಸಿರುವರು. ಆ ಪ್ರದೇಶದಲ್ಲಿ ಅವು ಬಂದರೆ ಷಾಕ್ ಹೊಡೆಯವುದು. ಅಲ್ಲಿಗೆ ಅವು ಬರುವುದೆ ಇಲ್ಲ, ಎಂದು ವಿವರಣೆ ನೀಡಿದಳು. ನಾವು ಆ ದಿನ ಸಮಾರಂಭಕ್ಕೆ ಹೋಗಿದ್ದ ಮನೆಯ ಮುದ್ದಾದ ನಾಯಿಯ ನಾಗರಿಕ ನಡೆಯ ಹಿಂದಿನ ಗುಟ್ಟು ಗೊತ್ತಾಯಿತು. ಅದನ್ನು ನಿಗದಿತ ಜಾಗದಲ್ಲಿ ಬರದಂತೆ ಎಲೆಕ್ತ್ರಾನಿಕ್ ತಡೆಹಾಕಿದ್ದರು. ನನಗೆ ಎಲೆಕ್ಟಿಕ್ ಬೇಲಿಯ ಬಗ್ಗೆ ಗೊತ್ತಿತ್ತು. ತಮ್ಮ ಬೆಳೆಯನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಕಬ್ಬಿಣದ ತಂತಿಬೇಲಿ ಎಳೆದು ಅನಧಿಕೃತವಾಗಿ ವಿದ್ಯುತ್ ಹರಿಸುತ್ತಿದ್ದರು. ಒಮ್ಮೊಮ್ಮೆ ಅರಿಯದ ಜನ ಅಪಾಯಕ್ಕೆ ಬಲಿಯಾಗಿದ್ದುದು ಇದೆ. ಚಿಕ್ಕ ಪುಟ್ಟ ಪ್ರಾಣಿಗಳು ಬಿಡಿ, ಒಂದೊಂದು ಸಲ ಆನೆ ಸಹ ಪ್ರಾಣ ತೆತ್ತಿದ್ದೂ ಓದಿದ್ದೆ. ಆದರೆ ಈ ಅದೃಶ್ಯ ಬೇಲಿ ನನಗೆ ಗೊತ್ತೇ ಇರಲಿಲ್ಲ. ಅಂತೂ ಕಣ್ಣಿಗೆ ಕಾಣಿಸದಿದ್ದರೂ ಅದು ನನ್ನನ್ನು ಕಾಪಾಡಿತು.
ನ್ಯೂಯಾರ್ಕಿನಲ್ಲಿ  ನಾನು ಯುಎನ್ ಒ ನೋಡಲು ಹೋದಾಗ ಹಾದಿಯಲ್ಲಿ ಒಂದು ವೀಶೇಷ ನೋಡಿದೆ. ಅದುವೆ ಶ್ವಾನೋದ್ಯಾನ. ಹೆಸರು ನೋಡಿ ಮಾನವನಾದ ನಾನು ಒಳಗೆ ಹೋಗಬೇಕೋ, ಬೇಡವೋ ಎಂದು ಒಂದು ಕ್ಷಣ ಗಲಿಬಿಲಿಗೆ ಒಳಗಾದೆ. ಆದರೆ ಅಲ್ಲಿ ನಾಯಿಗಳ ಜತೆ ಅವನ್ನು ಹಿಡಿದ ಜನರೂ ಇದ್ದರು. ಅದು ಎಲ್ಲ ಉದ್ಯಾನವನದಂತೆ ಇದ್ದಿತು. ಆದರೆ ಅದರಲ್ಲಿ ಒಂದು ವಿಶೇಷ ರಚನೆ ಇತ್ತು. ಆ ಒಂದು ಭಾಗದಲ್ಲಿ ಭದ್ರವಾದ ಕಬ್ಬಿಣದ ಜಾಲರಿಯಿಂದ ಆವೃತವಾದ ವಿಶಾಲವಾದ ಬಯಲು ಇತ್ತು. ಅಲ್ಲಿ ಜನರಿಗೆ ಪ್ರವೇಶ ಇಲ್ಲ. ಶ್ವಾನಗಳನ್ನು ಸರಪಳಿ ಕಳಚಿ ಒಳಗೆ ಬಿಡಬಹುದಿತ್ತು. ಅಲ್ಲಿ ಅವು ಮನಬಂದಂತೆ ಹಾರಿ ನೆಗೆದು ಓಡಿ ಆಡಬಹುದಾಗಿತ್ತು. ಅವುಗಳ ಮಾಲಿಕರು ಜಾಲರಿಯ ಹೊರಗೆ ನಿಂತು ಸೂಚನೆ ನೀಡಿ ನಿಯಂತ್ರಿಸಬಹುದಿತ್ತು. ಸದಾ ಸರಪಳಿಯಲ್ಲಿ ಸಿಕ್ಕು ಸುತ್ತುತ್ತಿದ್ದ ಪ್ರಾಣಿಗೆ ಬಿಡುಗಡೆ ನೀಡಿ ಬಯಲಿಗೆ ಬಿಡಲು ಅವಕಾಶ ಈ ವಿಶೇಷ ಉದ್ಯಾನವನ.
ಅಮೇರಿಕಾದ ಸಮಾಜದಲ್ಲಿ ಶ್ವಾನಗಳಿಗೆ ಬಹು ಆದರಣೀಯ ಸ್ಥಾನವಿದೆ. ಅದಕ್ಕೆ ಕಾರಣ ಅವುಗಳ ನಿಷ್ಠೆ, ನಿರ್ವ್ಯಾಜ್ಯ ಪ್ರೀತಿ. ಎಲ್ಲ ಸಾಕು ಪ್ರಾಣಿಗಳಲ್ಲಿ ಮಾನವನ ಅತ್ಯುತ್ತಮ ಸಂಗಾತಿ ಅದು. ಬೇಟೆಯಾಡುವಲ್ಲಿ ಅದರ ಕೊಡುಗೆ ಹಿರಿದು. ಮನೆಯ ಮತ್ತು ಮಾಲಿಕನ ರಕ್ಷಣೆಗೆ ಅದು ಸದಾ ಬದ್ಧ. ಅಲ್ಲಿನ ಮುಕ್ತ ಸಮಾಜದಲ್ಲಿ ಒಂಟಿತನ ಕಾಡುವುದು ಸಹಜ. ಅದು ಏಕಾಂಗಿ ಮಹಿಳೆಯರಿಗೆ ಉತ್ತಮ ಜತೆಗಾರ. ನಂಬುಗೆಯ ಬಂಟ,ರಕ್ಷಕ, ಭಾವನಾತ್ಮಕ ತೃಪ್ತಿ ನೀಡುವ ಸಂಗಾತಿ. ಗಂಡನಿಗಿಂತ ನಾಯಿಯೇ ಉತ್ತಮ, ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳುತ್ತದೆ ಎನ್ನುವ ಮಹಿಳೆಯರು ಇದ್ದಾರೆ.
ಯುದ್ಧ ಮತ್ತು ಶಾಂತಿ ಸಮಯದಲ್ಲೂ ಅದು ಉಪಯುಕ್ತ. ಸಿನೆಮಾ ನಟಿಯರಿಗಂತೂ ಅದು ಬಹಿರ್ ಪ್ರಾಣ. ಅವರು ಇವರು ಏಕೆ ಅಮೇರಿಕಾದ ಅಧ್ಯಕ್ಷರಿಗೂ ಅತಿ ಪ್ರೀತಿಯ ಸಂಗಾತಿ. ಅಮೇರಿಕಾ ಮೊದಲ ಅಧ್ಯಕ್ಷರಿಂದ ಹಿಡಿದು ಇಂದಿನವರೆಗೆ ಎಲ್ಲರೂ ಶ್ವಾನವನ್ನು ಶ್ವೇತಭವನದಲ್ಲಿ ಜತೆಗೆ ಇಟ್ಟು ಕೊಂಡವರೆ. ರಾಷ್ಟ್ರಪಿತ ಜಾರ್ಜ್ ವಾಷಿಂಗ್ಟನ್ ಜತೆ ಶ್ವೇತಭವನದಲ್ಲಿ ಹತ್ತು ನಾಯಿಗಳಿದ್ದವು. ತನ್ನೆಲ್ಲ ಕೆಲಸ ಕಾರ್ಯಗಳ ನಡುವೆ ಅವುಗಳ ಜತೆ ತುಸು ಸಮಯ ಕಳೆದರೆ ಅವರ ಮನಸ್ಸಿಗೆ ನೆಮ್ಮದಿ.
ಈ ವರೆಗಿನ ೩೪ ಜನ ಅಧ್ಯಕ್ಷರಲ್ಲಿ ಶ್ವಾನವನ್ನು ಹೊಂದಿರದೆ ಇದ್ದವರೆಂದರೆ ವಿಶ್ವಸಂಸ್ಥೆಗೂ ಮೊದಲು ಜಗತ್ತಿನ ಶಾಂತಿಗಾಗಿ ಲೀಗ್ ಆಫ್ ನೇಷನ್ಸ್ ಸ್ಥಾಪಿಸಿದ ವುಡ್ರೋ ವಿಲ್ಸನ್. ಆದರೆ ಶ್ವೇತಭವನದಲ್ಲಿ ಅವರೆ ಮೊದಲಬಾರಿಗೆ ನಾಯಿ ಒಂದಕ್ಕೆ ಸನ್ಮಾನ ಮಾಡಿದರು. ಸ್ಟಫಿ ಎಂಬ ನಾಯಿಯು ಪ್ರಥಮ ಮಹಾಯುದ್ಧದಲ್ಲಿ ತೋರಿದ ಅಪ್ರತಿಮ ಸಾಹಸಕ್ಕಾಗಿ ಅದನ್ನು ಗೌರವಿಸಿ ಹಸ್ತಲಾಘವ ನೀಡಲಾಯಿತು.
ಅಮೇರಿಕಾದಲ್ಲಿ ವರ್ಣವಿಭೇದ ನೀತಿಗೆ ಮಂಗಳ ಹಾಡಿದ  ಅಬ್ರಾಹಂ ಲಿಂಕನ್ ಜತೆ ಎರಡು ನಾಯಿಗಳು ಇದ್ದವು. ಫಿಡೋ ಎಂಬುದು ಅವರ ಅತಿ ಮುದ್ದಿನ ನಾಯಿ. ಅದು ಸಹ ತನ್ನ ಯಜಮಾನನಂತೆ ದುರಂತಮಯ ಅಂತ್ಯ ಕಂಡಿತು. ಅದನ್ನು ಕುಡುಕನೊಬ್ಬ ಚೂರಿಯಿಂದ ಇರಿದು ಕೊಂದ.
ರಾಷ್ಟ್ರೀಯ, ಅಂತಾರಾಷ್ತ್ರೀಯ ತೀರ್ಮಾನಗಳಿಗೆ ಸಾಕ್ಷೀಭೂತವಾದ ನಾಯಿಯೂ ಇದೆ. ವಾರೆನ್ ಹಾರ್ಡಿಂಜರು ೧೯೨೧ರಲ್ಲಿ ಅಮೇರಿಕಾದ ಅಧ್ಯಕ್ಷರಾಗಿದ್ದರು. ಅವರು ತಮ್ಮ ಪ್ರಾಣಿ ಮಿತ್ರನನ್ನು ಅರೆಗಳಿಗೆ ಅಗಲಿ ಇರುತ್ತಿರಲಿಲ್ಲ, ಅದರ ಹೆಸರು ಲೇಡಿ ಬಾಯ್.. ಅವರ ಮಂತ್ರಿ ಮಂಡಳದ ಸಭೆಯಲ್ಲೂ ಅದು ಇರಬೇಕಿತ್ತು. ಅದಕ್ಕಾಗಿ ವಿಶೇಷ ಕುರ್ಚಿಯ ವ್ಯವಸ್ಥೆ ಮಾಡಲಾಗಿತ್ತು.
ಪ್ರಥಮ ಮಹಾಯುದ್ಧದ ಸಮಯದಲ್ಲಿ ಯುದ್ಧ ನಿಧಿಯ ಸಂಗ್ರಹಣೆಗೆ ಚಾಲನೆ ನೀಡಿದ ಕೀರ್ತಿ ನಾಯಿಯದು. ಅಂದಿನ ಅಧ್ಯಕ್ಷರಾದ ರೂಸ್ ವೆಲ್ಟರ ಮುದ್ದಿನ ನಾಯಿ ಡೆಲ್ಲಾ. ಅದು ಯುದ್ಧ ನಿಧಿಗೆ ಮೊದಲ ಕಾಣಿಕೆಯಾಗಿ ಒಂದು ಡಾಲರ್ ನೀಡಿತು. ಅದರಿಂದ ದೇಶಕ್ಕೆ ದೇಶವೇ ಪುಳಕಗೊಂಡಿತು. ಅದರಿಂದ ಸ್ಪೂರ್ತಿಗೊಂಡ ಜನ ಒಂದಾಗಿ ನಿಂತು ಧಾರಾಳವಾಗಿ ಕೊಡುಗೆ ನೀಡಿ ನಿಧಿ ಸಂಗ್ರಹಣೆಗೆ ನೆರವಾದರು. ಅದು ಅಮೇರಿಕಾದಲ್ಲಿ ಪ್ರಥಮ ಬಾರಿಗೆ ತೆಗೆದ 'ಶ್ವೇತ ಭವನದಲ್ಲಿ ಶ್ವಾನದ ಒಂದು ದಿನ' ಎಂಬ ಸಾಕ್ಷ್ಯಚಿತ್ರದ ಕೇಂದ್ರಬಿಂದುವಾಗಿತ್ತು.
ಮೊದಲ ಮಹಾಯುದ್ಧದ ಕ್ಲಿಷ್ಟ ಸಮಯದಲ್ಲಿ ಅಮೇರಿಕಾವನ್ನು ಮುನ್ನೆಡೆಸಿದ ಹ್ಯಾರಿ ಟ್ರೂಮನರಿಗೆ ನಾಯಿಗಳಲ್ಲಿ ಅಪಾರ ವಿಶ್ವಾಸ. ವಾಷಿಂಗಟನ್ನಿನಲ್ಲಿ ನಿನಗೆ ನಿಜವಾದ ಗೆಳೆಯ ಬೇಕೆಂದರೆ ಒಂದು ನಾಯಿಯನ್ನು ಸಾಕು ಎನ್ನುತ್ತಿದ್ದರು. ಮಕ್ಕಳು ಮತ್ತು ನಾಯಿಗಳು ರಾಷ್ಟ್ರಕ್ಕೆ ವಾಲ್ ಸ್ಟ್ರೀಟ್ ಮತ್ತು ರೈಲು ರೋಡ್ ಗಳಷ್ಟೆ ಪ್ರಾಮುಖ್ಯ ಎಂದು ಭಾವಿಸಿದ್ದರು.
ಜಾನ್ ಎಫ್. ಕೆನಡಿ ಅಧ್ಯಕ್ಷಪದ ಗ್ರಹಣ ಮಾಡಿ ಶ್ವೇತಭವನಕ್ಕೆ ಮೊದಲ ಬಾರಿಗೆ ಕಾಲಿಟ್ಟಾಗ ಅವರ ಮುದ್ದಿನ ನಾಯಿ ಸಹ ಸ್ವಾಗತಿಸಿತು. ಅವರಲ್ಲಿ ಗಗನಯಾತ್ರೆ ಮಾಡಿದ ಶ್ವಾನ ಸ್ಟ್ರೆಟಾದ ವಂಶದ ಕುಡಿ ಪುಷಿಂಕಾ ಅವರಲ್ಲಿ ಇದ್ದಿತು. ಅದನ್ನು ರಷ್ಯಾದ ಅಧ್ಯಕ್ಷ ಕೃಶ್ನೇವ್ ಕಾಣಿಕೆಯಾಗಿ ನೀಡಿದ್ದರು.
ಅಧ್ಯಕ್ಷ ಲಿಂಡನ್ ಜಾನಸನ್ ರಿಗೆ ದಿನವೂ ಅವರ ಮುದ್ದಿನ ಮರಿಯು, ಅವರು ಶ್ವೇತಭವನದಿಂದ ಹೊರಡುವಾಗ, ಹಿಂದಿರುಗಿದಾಗ ಎದುರಿಗೆ ಇರಲೇಬೇಕಿತ್ತು.
ಈಗಿನ ಅಧ್ಯಕ್ಷ ಬರಾಕ್ ಒಬಾಮರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಅವರಿಗೆ, ಅವರ ಕುಮಾರಿಯರಿಗೆ ಸರಿ ಹೊಂದುವ ಶ್ವಾನಕ್ಕಾಗಿ ದೊಡ್ಡ ಹುಡುಕಾಟವೇ ನಡೆಯಿತು. ಎಲ್ಲ ಪತ್ರಿಕೆಗಳಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅದೇ ಸುದ್ದಿ ರಾರಾಜಿಸಿತು. ಸಾಕಷ್ಟು ಸಂಶೋಧನೆ ನಡೆಸಿ, ನಾಯಿಗಳ ಜಾತಕ ಜಾಲಾಡಿಸಿ ಕೊನೆಗೆ 'ಬೋ' ಎಂಬುದನ್ನು ಆಯ್ಕೆ ಮಾಡಲಾಯಿತು.
ಸಿನೆಮಾ ನಟಿಯರ, ಸಿರಿವಂತರ ಶ್ವಾನಪ್ರೇಮ ಬಹುರಂಜನೀಯ. ಅನೇಕರು ತಮ್ಮ ಪ್ರೀತಿಯ ನಾಯಿಗಾಗಿ ಏನೆಲ್ಲ ಮಾಡಿದ್ದಾರೆ ಗೊತ್ತೆ...  ಎಲ್ಲಾ ಎಂಬ ಒಬ್ಬ ಅಮೇರಿಕಾದ ಶ್ರೀಮಂತ ಮಹಿಳೆ ೭೫ ಮಿಲಿಯನ್ ಡಾಲರ್ ಬೆಲೆಯ ಎಲ್ಲ ಆಸ್ತಿಯನ್ನು ತನ್ನ ನಾಯಿ ಟೋಬೊ ಹೆಸರಿಗೆ ಬರೆದಳು. ಅದು ಆ ಹಣ ಏನು ಮಾಡಿತು ಎಂಬುದು ಬೇರೆ ವಿಷಯ. ಆದರೆ ಜಗತ್ತಿನ ಅತ್ಯಂತ ಶ್ರೀಮಂತ ನಾಯಿ ಎಂದು ವಿಶ್ವ ವಿಖ್ಯಾತವಾಯಿತು. ಶ್ವಾನಗಳು ಶಾಂತಿ ಮತ್ತು ಸಮರದ ಸಮಯದಲ್ಲೂ ಅಪಾರ ಸೇವೆ ಸಲ್ಲಿಸಿವೆ. ಅವು ತಮ್ಮ ವಿಶೇಷ ಗ್ರಹಣ ಶಕ್ತಿಯಿಂದಾಗಿ ಅಪರಾಧ ಪತ್ತೆಗೆ ಸಹಾಯ ಮಾಡುತ್ತವೆ. ಉಗ್ರವಾದಿಗಳ ಅಟ್ಟಹಾಸದ ಈ ದಿನಗಳಲ್ಲಿ ಬಾಂಬು, ಸ್ಪೋಟಕಗಳ ಪತ್ತೆಯಲ್ಲಿ ಅವುಗಳ ಪಾತ್ರ ಹಿರಿದು. ಮಾದಕ ವಸ್ತುಗಳ ಕಳ್ಳ ಸಾಗಣಿಕೆ ಪತ್ತೆಗೆ ಅವುಗಳ ನೆರವು ಬೇಕೆ ಬೇಕು. ವಿಶ್ವ ವಾಣಿಜ್ಯ ಕೇಂದ್ರವನ್ನು ಭಯೋತ್ಪಾದಕರು ೨೦೦೧ರ ೯/೧೧ ನಲ್ಲಿ ಉಡಾಯಿಸಿದಾಗ ೩೦೦ ಪೋಲೀಸ್ ನಾಯಿಗಳನ್ನು ಅವಶೇಷಗಳ ಅಡಿಯಿಂದ ಜನರನ್ನು ಉಳಿಸಲು ಬಳಸಲಾಯಿತು. ಆ ಕೆಲಸದಲ್ಲಿ ಪ್ರಾಣ ತೆತ್ತ  ಶ್ವಾನದ ಸ್ಮಾರಕ ನಿರ್ಮಿಸಿದೆ.
ಅದೇ ಸಂದರ್ಭದಲ್ಲಿ ರೆವಾ ಮತ್ತು ಸಾಲ್ಟಿ ಎಂಬ ಎರಡು ನಾಯಿಗಳು ಕುರುಡನಾದ ತಮ್ಮ ಯಜಮಾನನ್ನು ೭೧ನೇ ಮಹಡಿಯಿಂದ ಸುರಕ್ಷಿತವಾಗಿ ಕೆಳಗೆ ಕರೆದುತಂದು ಪ್ರಾಣ ಕಾಪಾಡಿದವು. ಆ ಬೆಂಕಿ, ಹೊಗೆ, ಅಪಾಯದ ನಡುವೆಯೂ ಅವುಗಳು ತೋರಿದ ನಿಷ್ಠೆ ಅವಿಸ್ಮರಣೀಯ.
ಖಗೋಳ ವಿಜ್ಞಾನದ ಮುನ್ನೆಡೆಯಲ್ಲಿ ನಾಯಿಯ ಕೊಡುಗೆ ಅಪಾರ. ಲೋಕ ವಿಖ್ಯಾತವಾದ ಹಿಜ್ ಮಾಸ್ಟರ್ಸ್ ವಾಯ್ಸ್ ಗ್ರಾಮಫೋನ್ ಕಂಪೆನಿಯ ಲೋಗೋದಲ್ಲಿರುವ ನಾಯಿ ನಿಪ್ಪರ್ ಅಜರಾಮರವಾಗಿದೆ.
ವಿಶೇಷವಾಗಿ ಚಳಿಗಾಲದಲ್ಲಿ ಹಿಮಾವೃತವಾದ ಬೆಟ್ಟಗುಡ್ಡಗಳಲ್ಲಿ ಹಾದಿ ತಪ್ಪಿಸಿಕೊಂಡವರನ್ನು ಸಂರಕ್ಷಿಸುವಲ್ಲಿ ಶ್ವಾನಗಳು ಬಹು ಉಪಯುಕ್ತ.
ಮಾನವ ಕುಲಂ ಒಂದೆ ವಲಂ, ಎಂದಿರುವುದು ಶ್ವಾನಗಳ ವಿಷಯದಲ್ಲಿ ಅನ್ವಯಿಸದು ನಾಯಿಯ ತಳಿಗಳು ನೂರಾರು. ಅವುಗಳ ವೈವಿಧ್ಯವೂ ಬಹಳ. ಅತಿ ಚಿಕ್ಕ ನಾಯಿಯ ಉದ್ದ ಕೇವಲ ೬ ಅಂಗುಲ. ಫ್ಲಾರಿಡಾದಲ್ಲಿರುವ ಅದರ ಹೆಸರು 'ಹೆವೆನ್ ಸೆಂಟ್ ಬ್ರಾಂಡಿ' ಅದನ್ನು ಅಂಗೈ ಮೇಲೆ ನಿಲ್ಲಿಸಿಕೊಳ್ಳಬಹುದು.
ಅತಿ ದೊಡ್ಡ ನಾಯಿಯರ ಹೆಸರು ಹರ್ಕ್ಯುಲೆಸ್. ಅದರ ತೂಕ ೨೮೨ ಪೌಂಡುಗಳು. ಅದರ ವಾಸ ಮೆಸುಚೆಸಟ್ಸ್ ರಾಜ್ಯದಲ್ಲಿ. ಆ ದೈತ್ಯ ದೇಹಿಯ ಪಾದಗಳೇ ಸಾಫ್ಟ್ ಬಾಲಿನ ಗಾತ್ರ ಹೊಂದಿವೆ. ನೋಡಲು ಭೀಕರ. ಆದರೆ ಅದು ಅತಿ ಸಾಧು. ಮಗುವಿನೊಂದಿಗೆ ಮಗುವಾಗಿರುವುದು. ಅದಕ್ಕಾಗಿ ಮಕ್ಕಳ ಹಬ್ಬದಂದು. ವಿಶೇಷ ಅತಿಥಿಯಾಗಿ ಅದಕ್ಕೆ ಬಹು ಬೇಡಿಕೆ. ಶುಲ್ಕ ನೀಡಿದರೆ ಅದರ ಜತೆ ಛಾಯಾಚಿತ್ರತೆಗಿಸಿಕೊಳ್ಳಬಹುದು. ಅದಕ್ಕೆ ಮಕ್ಕಳು ಸಾಲುಗಟ್ಟಿ ನಿಲ್ಲುತ್ತಾರೆ. ಧೈರ್ಯಶಾಲಿ ಯುವಕ ಯುವತಿಯರು ಮುಖಕ್ಕೆ ಪೀನಟ್ ಬಟರ್ ಸವರಿಕೊಂಡರೆ ಅದು ಬಾಯಿ ಚಪ್ಪರಿಸುತ್ತಾ ನೆಕ್ಕುತ್ತದೆ. ಹೀಗೆ ವಿಶ್ವದಾಖಲೆ ವೀರನಿಗೆ ಆದಾಯದ ಜತೆ ಜತೆಗೆ ಪ್ರಚಾರ  ದೊರಕುವುದು.
ಶ್ವಾನಗಳಲ್ಲಿ ಅನೇಕ ತಳಿಗಳಿವೆ. ಫ್ರೆಂಚ್ ಮ್ಯಾಸ್ಟಿಫ್ ಗೆ ಅಪಾರ ಬೇಡಿಕೆ. ೭೫೦ರಿಂದ ೧೦೦೦ ಡಾಲರ್ ವರೆಗೆ ಅದರ ಬೆಲೆ.
ಅಮೇರಿಕಾದ ಒಂದೊಂದು ರಾಜ್ಯದಲ್ಲಿ ಒಂದೊಂದು ತಳಿಯ ನಾಯಿಗಳು ಬೇಡಿಕೆ ಪಡೆದಿವೆ. ಮುದ್ದು, ಮುಚ್ಚಟೆಗಾದರೆ ಆಟಿಕೆ ನಾಯಿಗಳಿಗೆ ಬೇಡಿಕೆ. ಪೂಡಲ್, ಚಿಹೋಹ ಆಕಾರದಲ್ಲಿ ಚಿಕ್ಕವು. ಖರ್ಚು ಕಡಿಮೆ. ಮಹಿಳೆಯರು, ನಗರವಾಸಿಗಳು ಅವನ್ನು ಸಾಕುವರು. ಲ್ಯಾಬ್ರಡಾರ್, ಬುಲ್ ಡಾಗ್, ಜರ್ಮನ್ ಷೆಪರ್ಡ್, ಯಾರ್ಕಷೈರ್ ರಿಟ್ರೈವರ್ ರಕ್ಷಣೆಗೆ, ಕಾವಲಿಗೆ, ಸಾಂಗತ್ಯಕ್ಕೆ ಅನುಕೂಲ.
ಬೆಕ್ಕಿಗೆ ಜ್ವರ, ನಾಯಿಗೆ ನೆಗಡಿ ಬಂದಿದೆ ಎನ್ನುವುದು ನಂಬುವ ಮಾತಲ್ಲ ಎಂದು ನಮ್ಮಲ್ಲಿ ವಾಡಿಕೆಯ ಮಾತು. ಆದರೆ ಅಲ್ಲಿ ಮುದ್ದು ಪ್ರಾಣಿಗಳ ಆರೋಗ್ಯವೂ ಅತಿ ಕಾಳಜಿಯ ವಿಷಯ. ಶ್ವಾನಗಳ ಆರೋಗ್ಯ ರಕ್ಷಣೆಗೆ ಪರಿಣಿತ ವೈದ್ಯಕೀಯ ಸೌಲಭ್ಯ ದೊರಕುವುದು. ಮರಿಗಳಿಗೆ ನಿರೋಧಕ ಚುಚ್ಚು ಮದ್ದು, ಸ್ಪ್ರೇಗಳು ಹಾಗು ಗಾಯಗಳಿಗೆ ಅಗತ್ಯ ಔಷಧಿಗಳು, ಪ್ರೌಢ ಶ್ವಾನಕ್ಕೆ ದಂತ ಚಿಕಿತ್ಸೆ, ವಾಂತಿ ವಿರೇಚನ, ಶ್ವಾಶ ಸಂಬಂಧಿ ಸಮಸ್ಯೆಗೆ, ಮುದಿಯಾದಾಗ ಬರುವ ಕಿಡ್ನಿ, ಥೈರಾಯಿಡ್, ಮಧುಮೇಹ, ಕ್ಯಾನ್ಸರ್ ಗಳಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆಯಬಹುದು. ಎಲ್ಲದಕ್ಕೂ ವಿಮಾ ಸೌಲಭ್ಯವಿದೆ.
ನಾಯಿಗಳಿಗೆ ವಿಶೇಷ ತರಬೇತಿ ನೀಡುವ ಸಂಸ್ಥೆಗಳಿವೆ. ಅವುಗಳು ಯರ್ರಾಬಿರ್ರಿಯಾಗಿ ವರ್ತಿಸಿದರೆ ಅವುಗಳಿಗೆ ಬಿಹೇವಿಯರಲ್ ತೆರಪಿ ಕೊಡಿಸಬೇಕು. ಅವುಗಳ ಸ್ವಾಸ್ಥ್ಯ ನೋಡಿಕೊಳ್ಳಲು ಕಮ್ಯುನಿಟಿ ಕಮಿಟಿಗಳಿವೆ. ಅವು ಪ್ರಾಣಿಗಳು ಕ್ರೌರ್ಯಕ್ಕೆ ಗುರಿಯಾಗದಂತೆ ಸೂಕ್ತ ಎಚ್ಚರಿಕೆ ವಹಿಸುತ್ತವೆ.
ಅಲ್ಲಿ ಬೀದಿಯಲ್ಲಿ ನಾಯಿ ಇರಲು ಸಾಧ್ಯವೇ ಇಲ್ಲ. ಏಕೆಂದರೆ ತಿನ್ನಲು ಬೀದಿಯಲ್ಲಿ ಏನೂ ಸಿಕ್ಕುವುದಿಲ್ಲ. ಬಹಳ ರಾಜ್ಯಗಳಲ್ಲಿ ನಾಯಿ ಸಾಕ ಬೇಕೆಂದರೆ ನೋಂದಾವಣೆ ಕಡ್ಡಾಯ. ಅಕಸ್ಮಾತ್ ದೂರದ ಜಾಗಕ್ಕೆ ವಲಸೆ ಹೋದರೆ ಸಾಕಲಾರದ ಅನಿವಾರ್ಯ ಪರಿಸ್ಥಿತಿ ಬಂದರೆ ಮಾಹಿತಿ ನೀಡಿದರೆ ಅವನ್ನು ಸರಕಾರಿ ಆಶ್ರಯಕ್ಕೆ ತೆಗೆದುಕೊಳ್ಳುವರು ಇಷ್ಟೆಲ್ಲಾ ಕ್ರಮ ತೆಗೆದುಕೊಂಡರೂ ಪ್ರತಿ ವರ್ಷ ೪ ಮಿಲಿಯನ್ ಮುದ್ದು ಪ್ರಾಣಿಗಳು ಆಶ್ರಯ ಕಳೆದುಕೊಳ್ಳುತ್ತವೆ. ಅವುಗಳಲ್ಲಿ ಹೆಚ್ಚಿನವು ಶ್ವಾನಗಳು. ಅವುಗಳಿಗಾಗಿ ರಾಷ್ಟ್ರದಲ್ಲಿ ೧೦೦೦ ಆಶ್ರಯ ತಾಣಗಳಿವೆ. ಅಲ್ಲಿ ಅವುಗಳ ಪೋಷಣೆ ಮಾಡಲಾಗುವದು. ಗುಣವಾಗದ ರೋಗ. ವಾಸಿಯಾಗದ ಗಾಯದಿಂದ ನರಳುವ, ಸಾಮಾನ್ಯ ಜೀವನ ನಡೆಸಲಾಗದವಕ್ಕೆ ಶಾಶ್ವತ ಶಾಂತಿ ನೀಡಲಾಗುವುದು.
ಅಮೇರಿಕಾದಲ್ಲಿ ಶ್ವಾನಗಳು ಗೌರವಾನ್ವಿತ ನಾಗರಿಕರಂತೆ ಬದುಕು ಸಾಗಿಸುವವು. ಆಗ ನನಗೆ ಅನಿಸಿತು, ಶ್ವಾನ ನಿನ್ನ ಮಹಿಮೆ ಎನಿತು ಬಣ್ಣಿಸಲಿ ನಿನಗೆ ಯಾರು ಸಮಾನ ಎಂದು ಹೇಳಬೇಕೆನಿಸಿತು.
(ಚಿತ್ರಗಳು: ಸಂಗ್ರಹದಿಂದ)

Thursday, May 22, 2014

ಅಮೇರಿಕಾ ಅನುಭವ-೪


ಹಂಪಿಯ ಅಪ್ಪಾಜಿ ಅಮೆರಿಕಾದಲ್ಲಿ ಬೆಟ್ಟ ಏರಿದ್ದು-
ಎಚ್. ಶೇಷಗಿರಿರಾವ್

ಬೆಳಗಿನ ಎಳೆ ಬಿಸಿಲು ನಮಗೆ ಉತ್ಸಾಹ ಮೂಡಿಸಿತು. ಅತಿ ಕಷ್ಟವಲ್ಲದ ೨ ಗಂಟೆಯಲ್ಲಿಮುಗಿಸಬಹುದಾದ ಬೆಟ್ಟವೇರಲು ಹೊರಟೆವು.ಕೂಸನ್ನು ಬೆನ್ನಿಗೆ ಕಟ್ಟಿಕೊಂಡ ಚೀಲದಲ್ಲಿ ಕೂರಿಸಿಕೊಂಡು ಹೊರಟೆವು. ನಮ್ಮ ಹಳ್ಳಿಯಲ್ಲಿ ಜೋಗೆರರು ಮಕ್ಕಳನ್ನು ಹೀಗೆ ಬೆನ್ನಿಗೆ ಕಟ್ಟಿ ಕೊಂಡು ಪಿನ್ನುಸೂಜಿ, ಹಣಿಗೆ ಮಾರಲು ಬರುತಿದ್ದ ಕಾಲ ನೆನಪಾಯಿತು. ಇಪ್ಪತ್ತು ವರ್ಷಗಳ ಹಿಂದಿನ ಶಿಷ್ಯ ಡುಮ್ಮ ಮಂಜುವಿನ ಅಮ್ಮ-ಅಕ್ಕ ನೆನಪಾದರು. ಆದರೆ ಇದು ಹಗುರ ಲೋಹದಿಂದ ರಬ್ಬರ್ ಪ್ಲಾಸ್ಟಿಕ್ ನಿಂದ ತಯಾರಾಗಿದೆ. ಒಬ್ಬರಬೆನ್ನಿನಿಂದ ಇನ್ನೊಬ್ಬರಿಗೆ ಸುಲಭವಾಗಿ ಬದಲಾಯಿಸಬಹುದು. ನಾಲ್ಕು ವರ್ಷದ ಮಗುವನ್ನುಅದರ ತಂದೆಯೇ ಹೆಗಲ ಮೇಲೆ ಹೊತ್ತುಕೊಂಡ.ಮಗು ಅಪ್ಪನ ತಲೆಗೂದಲಲ್ಲಿ ಏನೇನೋ ಆಟವಾಡುತ್ತಿತ್ತು. ಆಗೀಗ ಅಪ್ಪನ ಮುಖ ಕಿವುಚುತಿತ್ತು, ಉದ್ಗಾರಗಳು ಹೊರಡುತಿದ್ದವು. 
ನಾವು ಚಿಕ್ಕವರಿದ್ದಾಗ ಹೀಗೆ ಹಂಪಿ ಜಾತ್ರೆಗೆ ಹೋಗಿ ಬರುತ್ತಿದ್ದ ನೆನಪು ಬಂತು. ವ್ಯತ್ಯಾಸ ಒಂದೇ. ಆಗ ಕೈನಲ್ಲಿ ಬೆಂಡುಬತ್ತಾಸು ಇರುತಿತ್ತು. ಈಗ ಬಿಸ್ಕತ್‌ಚಾಕಲೇಟ್ ಇದೆ. ನಾವು ಹಿರಿದಂಪತಿಗಳು ಆಗುಂಬೆ ಕಾಡಲ್ಲಿ ಚಾರಣ ಮಾಡಿದವರುಕೊಡಚಾದ್ರಿಬ್ರಹ್ಮಗಿರಿ ಏರಿದವರುಇದೆಲ್ಲ ಏನು ಮಹಾ ಎಂದು ಎದೆಯುಬ್ಬಿಸಿ ಹೊರಟೆವು. ಬೆಟ್ಟದ ಬುಡದಲ್ಲಿ ಹೋದಾಗ ತಿಳಿಯಿತು ಅಲ್ಲಿನ ವ್ಯವಸ್ಥೆಯ ಪರಿ. ಅಲ್ಲೊಂದು ಫಲಕ  ಎಲ್ಲ ಮಾಹಿತಿ ಇತ್ತು. ಇದು ಬರಿ ಬೆಟ್ಟ ಅಲ್ಲ. ದಟ್ಟವಾದ ಮರ-ಗಿಡಳಿಂದ ಪೂರ್ಣ ಆವೃತ. ಎಲ್ಲೆಲ್ಲೂ ಹಸಿರು. ಕಾಲು ಜಾಡೂ ಇಲ್ಲ. ಆದರೆ ಹೇಗೆ ಹೋಗಬೇಕೆಂದು ದಾರಿ ತೋರಲ ಅಲ್ಲಲ್ಲಿ ಮರಗಳಿಗೆ ಹಳದಿನೀಲಿ ರಿಬ್ಬನ್ ಕಟ್ಟಿದ್ದರು. ಅದರಿಂದ ತುಸು ನೆಮ್ಮದಿ ಎನಿಸಿತು. ಚಾರಣಕ್ಕೆ ಹೊರಡುವ ಮೊದಲೇ ಎಲ್ಲಿ ಹೋಗುತ್ತೇವೆ ಎಷ್ಟು ಜನ ಎಂಬ ಮಾಹಿತಿಯನ್ನು ಶಿಬಿರದ ಕಛೇರಿಯಲ್ಲಿ ಪಡೆದಿದ್ದರು. ಮೊದಲೇ ಕರಡಿಗಳ ಹಾವಳಿ. ಮೊಬೈಲ್ಸಿಗ್ನಲ್ ಸಿಗುವುದು ಇಲ್ಲ. ದಾರಿ ತಪ್ಪಿದರೆ ದೇವರೇ ಗತಿ. ಯಾರಾದರು ಕಾಣೆಯಾದರು ಎಂದರೆ ತತ್ ಕ್ಷಣಸರ್ಚ್ ಪಾರ್ಟಿ ಹೊರಡುತಿತ್ತು. ಎಲ್ಲರ ನಮ್ಮ ನಮ್ಮ ಆಹಾರ-ನೀರನ್ನು ಬೆನ್ನಿನ ಚೀದಲ್ಲಿ ಹಾಕಿಕೊಂಡಿದ್ದೆವು. ಮೊದಲ ಹೆಜ್ಜೆಯಿಂದಲೇ ಏರಿಕೆ ಪ್ರಾರಂಭ. ಹಿಂದಿನ ದಿನ ಮಳೆ ಬಂದದ್ದರಿಂದ ಜಾರಿಕೆಯೂಇತ್ತು. ನೇರ ಹಾದಿ ಇಲ್ಲ. ದಟ್ಟ ಮರಗಳು. ಸುತ್ತಿ ಬಳಸಿ ಹೋಗಬೇಕು. ಇನ್ನೊಂದು ವಿಧದಲ್ಲಿಅನುಕೂಲ. ಹಿಡಿಯಲು ಆಸರೆಯಾಗಿದ್ದವು. ಹಿಂದಿನ ದಿನದ ಮಳೆಯನ್ನು ನಾವು ಮರೆತೇ ಬಿಟ್ಟಿದ್ದೆವು. ಹೊರಡುವಾಗ ಬಿರು ಬಿಸಿಲು ಇದ್ದರೂ, ಇಲ್ಲಿ ಸೂರ್ಯನ ಕಿರಣ ನೆಲ ಮುಟ್ಟಿಲ್ಲ. ಎಲ್ಲ ಕೆಸರುಮಯ. ಹದಿನೈದು ನಿಮಿಷ ಹತ್ತಿರಬಹುದು. ಆಗಲೇ ಇಬ್ಬರು ಜಾರಿ ಬಿದ್ದರು. ಮಗುವಿದ್ದವರು ಹತ್ತು ಅಡಿ ಎತ್ತರವನ್ನು ಹತ್ತಿಲ್ಲ. ತಾಯಂದಿರು ಅಷ್ಟೇ. ನಾವೇನೋ ಕೊಂಬೆ ರೆಂಬೆ ಹಿಡಿದು ಮುಂದೆ ಸಾಗಿದ್ದೆವು. ಹತ್ತುವುದೇನೋ ಸರಿಇಳಿಯುವುದು ಹೇಗೆ ಎಂಬ ಯೋಚನೆ ಶುರುವಾಯಿತು. ಎಲ್ಲರೂ ಯುವಕರಾದರೂ ಕಾರಿನಲ್ಲಿ ಕುಳಿತು ಬೆಟ್ಟ ನೋಡಿದವರೇ...  ಹತ್ತಲಾರದೆ ಕಣ್ಣು-ಬಾಯಿ ಬಿಡತೊಡಗಿದರು. ನಮ್ಮ ಚಾರಣಕ್ಕೆ ಮಂಗಳಹೇಳಬೇಕಾಯಿತು.  ಜಾರುವ ದಾರಿಯಲ್ಲಿ ಇಳಿಯುವದು ಸುಲಭವಾಗಿರಲಿಲ್ಲ. ಮರದಿಂದ  ಮರಕ್ಕೆ ಆಸರೆಪಡೆಯುತ್ತಾ ಹೇಗೋ ತಳ ತಲುಪಿದೆವು. ಒಂದು ಹಂತದಲ್ಲಿ ನಾವು ನರರಾಗದೆ, ವಾನರರಾಗಿದ್ದರೆಕೊಂಬೆಯಿಂದ ಕೊಂಬೆಗೆ ಹಾರಿ ಕೊಚ್ಚೆ ನೆಲ ಮುಟ್ಟದೆ, ಬಟ್ಟೆ ಕೈ ಕಾಲು ಕೆಸರು ಮಾಡಿಕೊಳ್ಳದೆ ವಾಪಸ್ಸು ಬರಬಹುದಿತ್ತಲ್ಲ ಎನಿಸಿತು. ವಾನರರೆ ಆಗಿದ್ದರೆ ಆ ಪ್ರಶ್ನೆ ಏಳುತ್ತಿರಲಿಲ್ಲ. ಬಟ್ಟೆ ಬರೆ ಇದ್ದರೆ ತಾನೇ ಕೊಳೆ ಕೆಸರು. ಚಾರಣ ಪೂರ್ಣವಾಗದಿದ್ದರೂ ಬಟ್ಟೆಮೈ ಕೈ ಕೆಸರು ಆಗಿತ್ತು. ಒಬ್ಬಿಬ್ಬರು ಕುಂಟುತ್ತಕೆಲವರು ತೆರೆದ ಕೈಕಾಲು ನೇವರಿಸುತ್ತ  ಬೆಟ್ಟದ ಬುಡ ತಲುಪಿದರು. ಮಕ್ಕಳು ಮಾತ್ರ ಮುಗುಳು ನಗೆ ಬೀರುತ್ತ ಆರಾಮಾವಾಗಿ ಬೆನ್ನಿನ ಮರೆಯಿಂದ ಇಣುಕುತ್ತಿದ್ದವು.
ಬೆಟ್ಟ ಹತ್ತುವ ಯೋಜನೆ ಬದಿಗಿಟ್ಟು,ಕೊಳೆಯಾಗಿದ್ದ ಕೈ ಕಾಲು ತೊಳೆಯಲು ಹೊಳೆ ಕಡೆ ಹೊರಟೆವು. ಹಾದಿಯಲ್ಲಿ ಗಾಳಿ ತುಂಬಿದ ಬಣ್ಣ ಬಣ್ಣದ ್ಯೂಬುಗಳನ್ನು ತೂಗಿಹಾಕಿದ್ದರು. ಈ ರಬ್ಬರ್ ಟೂಬುಗಳ ಮೇಲೆ ಕುಳಿತೋ ಮಲಗಿಯೋ ನೀರಿನ ಹರಿಗುಂಟ ಸಾಗುವುದೇ ಜನಪ್ರಿಯ ಜಲಕ್ರೀಡೆ.  ನಮ್ಮ ಗೆಳೆಯರು ಈ ಸಾಹಸಕ್ಕೆ ಎಳಸಿದರು, ನದಿಯಲ್ಲಿ ನೀರೇನು ಬಹಳ ಇಲ್ಲ. ಆದರೆ ಸೆಳವು ಬಹಳ. ಎಲ್ಲಿ ಹೋದರು ನಾಲ್ಕು ಅಡಿಗಿಂತ ಹೆಚಿಲ್ಲ. ಆದರು ನೀರಿಗಿಳಿಯುವವರು ಲೈಫ್ ಜಾಕೆಟ್ ಹಾಕಿ ಕೊಡು ಹೋಗುತ್ತಿದ್ದರು. ನೀರು ಬಹು ತಿಳಿ. ದಿ ಪಾತ್ರದಲ್ಲಿ ಚಿಕ್ಕ ಚಿಕ್ಕ ಗುಂಡುಕಲ್ಲು ಬಂಡೆ ಗಳು... ಅವುಗಳ ನಡುವೆ ನೀರು ರಭಸವಾಗಿ ನುಗ್ಗಿ ಹರಿಯುತಿತ್ತು. ಕೆಲವು ಕಡೆ ಹತ್ತಾರು ಅಡಿ ಅಗಲದ ಮಡುಗಳುನಂತರ ಬಂಡೆಯ ಮೇಲೆ ಭೋರ್ಗರೆವ ನೀರು. ದಡದಲ್ಲಿಸಕ್ಕರೆಯಂತಹ ಮರುಳ, ಗೋಲಿ ಗಾತ್ರದ   ಆಣೆಕಲ್ಲುಗಳುನೀರಾಕ್ಕೆ ಹೇಳಿ ಮಾಡಿಸಿದಂತಹ ತಾಣನದಿಯ ತಟದಲ್ಲಿ ದೊಡ್ಡ ಮರಗಳು. ಅವುಗಳ ನಡುವೆ ರಸ್ತೆ.  ಹೇಗಿದ್ದರೂ ತಂದ ಬುತ್ತಿ ಬೆನ್ನಿಗೆ ಇತ್ತು. ಜಲಕ್ರೀಡೆಗೆ ಮುಂದಾದ ಸಾಹಸಿಗಳೇ ಜೊತೆ ನಾವು ನದಿ ಗುಂಟ ನಡೆದೆವು. ಸುಮಾರು ಎರಡು ಮೈಲು ದೂರದಲ್ಲಿ ಅವರು ನೀರಿಗಿಳಿದರುಇಪ್ಪತ್ತು ಡಾಲರ್‌  ಎಂದಿದ್ದ ಅವರನ್ನು ಲೈಫ್ ಜಾಕೆಟ್ ತೊಡಿಸಿ -ಟ್ಯೂಬಿನಲ್ಲಿ ಕೂಡಿಸಿ ಕೈಬಿಟ್ಟರು. ಕುಳಿತೋಮಲಗಿಯೋ ಜೋತುಬಿದ್ದೋ ನೀರಿನಗುಂಟಸಾಗಬೇಕಿತ್ತು. ಈಜುಡುಗೆ ತೊಟ್ಟ ಲಲನೆಯರು ಬೀಳುತ್ತಾ ಏಳುತ್ತಾ ನಲಿಯುತ್ತಿದ್ದರು. ದಢೂತಿ ದೇಹದವರಂತೂ ಬಿದ್ದು ಎದ್ದು ಸಾಗುವುದು ಬಹು ಮಜಾ ಕೊಟ್ಟಿತು. ಅವರ ಭಾರಕ್ಕೆ ಟ್ಯೂಬು ತಲೆ ಕೆಗಾದಾಗನೋಡಬೇಕಿತ್ತು ಅವರ ಫಜೀತಿ. ಅಲ್ಲಲ್ಲಿ ರಬ್ಬರಿನ ಚಿಕ್ಕ ದೋಣಿಯಲ್ಲಿ ಕುಳಿತು ಹುಟ್ಟು ಹಾಕುತ್ತ ಪ್ರವಾಹಕ್ಕೆ ಎದುರಾಗಿ ಸಾಗುತ್ತಿದ್ದರು. ಇನ್ನು ಕೆಲ ಸಾಹಿಸಿಗಳು. ಟ್ಯೂಬಿನ ಸಹವಾಸವೇ ಬೇಡವೆಂದು ಲೈಫ್ ಜಾಕೆಟ್ಧಾರಿಗಳಾಗಿ ನೀರಿನಲ್ಲಿ ಈಜುತ್ತಾ ತೇಲುತ್ತಾ ಸಾಗುತಿದ್ದರು. ನಾವೆಲ್ಲ ಅಲ್ಲೇ ನೀರ ನಡುವಿನ ಬಂಡೆಯ ಮೇಲೆ ಕುಳಿತು ನೀರಾಟವಾಡಿದೆವು. ಬೆನ್ನ ಬುತ್ತಿ ಹೊಟ್ಟೆ ಸೇರಿತು. ಗಂಟೆಗಳು ಕಳೆದಿದ್ದು ಗೊತ್ತಾಗಲೇ ಇಲ್ಲ.  ಎಲ್ಲರು ಶಿಬಿರ ಸೇರಿದಾಗ  ಸಂಜೆಯ ಐದು ಗಂಟೆ.
ಹಿಂತಿರುಗಿ ಬರುವಾಗ ಗೊತ್ತಾಯಿತು ಹತ್ತಿರದ ಹಳ್ಳಿಯಲ್ಲಿ ಕಾರ್ನಿವಾಲ್ ಹಾಗ ಫೈರ್  ವರ್ಕ್ಸ್ ಇದೆ ಎಂದು.ಅಮೇರಿಕಾದ ನಗರ ಜೀವನ ನೋಡಿದ್ದ ನಾವು ಹಳ್ಳಿ ಹೇಗಿದೆ ಎಂದು ತಿಳಿಯಲು ಇದೊಂದು ಅವಕಾಶ ಬಿಡಬಾರದು ಎಂದುಕೊಂಡೆವು.  ರಿ ಮೂರ ಕಾರುಗಳು ನಮ್ಮನ್ನು ಹೇರಿಕೊಂಡು ಹೊರಟವು. ಹತ್ತಾರು ಮೈಲು ಹೋದರು ಸುಳಿ ಇಲ್ಲ. ಜನರು ಇಲ್ಲ. ಕಾರ್ನಿವಾಲ್ ಎಂದರೆ ನಮ್ಮಲ್ಲಿನ ಜಾತ್ರೆ ತರಹ. ಕೊನೆಗೂ ಬಂದಿತು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗ ಸಾಲು. ಬೆಟ್ಟದ ಬುಡದಲ್ಲಿ ರಸ್ತೆ. ಹಾಡಿಗೆ ಹೊಂದಿಕೊಂಡಂತೆ ನದಿ. ಆಚೆ ಬದಿಗೆ ಜನಜಾತ್ರೆ. ವಿಶಾಲವಾದ ಮೈದಾನದಲ್ಲಿ ಬಣ್ಣ ಬಣ್ಣದ ದೀಪಗಳಿಂದ ಚೆಂದ ಕಾಣುವ ಅಂಗಡಿಗಳ ಸಾಲು. ಮಕ್ಕಳ ಖುಷಿಗೆ ರಂಗಿನ ರಾಟೆಆಟಿಕೆ ರೈಲು, ಯುವ ಜನರಿಗೆ ಮೈ ನವಿರು ಮೂಡಿಸುವ ರೋಸ್ಟರ್,  ಕ್ಲಿಫ್ಫ್ ಹ್ಯಾಂಗರ್ ವಸ್ತು ಪ್ರದರ್ಶನದಲ್ಲಿ  ಕಾಣುವ ಎಲ್ಲ ಆಟಗಳು ಅಲ್ಲಿದ್ದವು.  ವಯಸ್ಸಿನ ಭೇದವಿಲ್ಲದೆ ಜನ ಸೇರಿದ್ದರು. ಹಳ್ಳಿ  ಜನಎನ್ನುವ ಹಾಗಿಲ್ಲ. ಎಲ್ಲರೂ ಸೂಟ್ ಬೂಟ್ ಧಾರಿಗಳು. ಸೀರೆಯುಟ್ಟು ಬಂದಿದ್ದ ನನ್ನ ಹೆಂಡತಿಗೆ ಬಹಳ ಸಂತಸ. ಇಲ್ಲಿನ ಎಲ್ಲ ಹೆಣ್ಣುಮಕ್ಕಳು  ಮೈತುಂಬ ಬಟ್ಟೆ ತೊಟ್ಟಿದ್ದಾರೆ ಎಂದು. ನಾವು ತಿಳಿದಂತೆ ಸೂಟು ಬೂಟ ಹಾಕುವುದು ಡೌಲು ಮಾಡಲು ಅಲ್ಲಚಳಿಯಿಂದ  ರಕ್ಷಣೆ  ಪಡೆಯಲು. ಇಲ್ಲಿನ ವಾತಾವರಣಕ್ಕೆ ಇಂಥ  ಉಡುಪು ಬೇಕೇ ಬೇಕು.  ನಾವಾಗಲೇ ಚಳಿಗೆ ಗಡ ಗಡ  ನಡುಗತೊಡಗಿದ್ದೆವು.  ನಮ್ಮ ಯುವ ಜೋಡಿಗಳು ಆಗಲೇ ಮನ ಬಂದ ಆಟ ಆಡಿ ಬಂದಿದ್ದರು.  ಸಾಲು ಸಾಲು ಇದ್ದ ತಿಂಡಿ ಅಂಗಡಿಗಳಿಂದ ಘಮ ಘಮ ವಾಸನೆ ಬರುತಿತ್ತು.  ಫ್ರೆಂಚ್ ಫ್ರೈವೆಜ್ ಬರ್ಗರ್ ತಿಂದು, ಫೈರ್ ವರ್ಕ್ಸ್  ಕಾರಿನಲ್ಲಿ ಬೆಚ್ಚಗೆ ಕುಳಿತು ನೋಡಬಹುದೆಂದು ಜಾಗ ಖಾಲಿ ಮಾಡಿದೆವು.  ಬಂದು ನೋಡಿದರೆ ಕಾರುಗಳ ಮೇಳ. ಟ್ರಾಫಿಕ್ ಜಾಮ್‌ ಆಗಬಹುದೆಂದು  ಹೊರಟೆವು. ಹಾದಿಯುದ್ದಕ್ಕೂ ಹಳ್ಳಿ ಎಂಬುದಕ್ಕೆ ಸಾಕ್ಷಿ ದೊರೆತವು. ಕಾರ್ ಅಷ್ಟೇನೋಡಿದ್ದ ನಾವುಲಾರಿ ಗಳಲ್ಲಿಟಿಪ್ಪರ್ ಗಳಲ್ಲಿ  ಕುರ್ಚಿ ಹಾಕಿ ಕೂತ ಜನ ನೋಡಿದೆವು. ಎಲ್ಲರೂ ಮುಗಿಲ ಕಡೆ ಮುಖ ಮಾಡಿ ಕೂತಿದ್ದರು.  ಕೊರೆವ ಚಳಿಯಲ್ಲಿ ಅವರು ಕಾಯುತಿದ್ದರು.
ನಮ್ಮ ಲೆನಾಡಿನಂತೆ ಇಲ್ಲಿ ಜನ ಸಂಖ್ಯೆ ಯೂ ವಿರಳ.  ಮನೆಗಳೂ ದೂರ ದೂರ. ವರ್ಷದ ಎಂಟು ತಿಂಗಳೂ  ಪಂಜರದ  ಪಕ್ಷಿಯ ತರಹ ಏಕಾಂತ ವಾಸ. ಬೇಸಿಗೆಯ ಈ ಕಾರ್ನಿವಲ್ ಅವರಿಗೆ ಅಮೋಘ ಅವಕಾಶ. ನಮ್ಮಶಿಬಿರಕ್ಕೆ ಬಂದಾಗ ಆಗಲೇ ಹನ್ನೊಂದು. ಶಿಬಿರದಲ್ಲಿನ ಅರ್ಧಕರ್ಧ ವಾಹನಗಳು  ಜಾಗ ಖಾಲಿಮಾಡಿದ್ದವು ಬಿಸಿ ಬೇಳೆ ಭಾತ್  ಮಾಡಿ ತಿಂದು ಮಲಗಿದ್ದೆ ಬಂತು ಮರು ಮಾತಿಲ್ಲದೆ ನಿದ್ದೆಮರುದಿನ ಎಂಟಾದರೂ ಯಾರೂ ಏಳಲಿಲ್ಲ...
ಸಾವಕಾಶವಾಗಿ ಎದ್ದು ಮತ್ತೊಂದು ಸುತ್ತು ಊರಲ್ಲೇ ಸುತ್ತಿಸೆವು. ಅಲ್ಲಿನ ಚರ್ಚ್ಶತಮಾನಕ್ಕೂ ಹಳೆಯದಾದ ಮನೆ ನೋಡುವಂತಿದ್ದವು.  ಅಲ್ಲೇ ರಸ್ತೆ ಬದಿಯಲ್ಲೇ ಗ್ರಂಥಾಲಯ ಇದೇ ತೋರಿತು. ಹತ್ತಿರ ಹೋಗಿ ನೋಡಿದೆಅಲ್ಲಿ ಯಾರೂ ಇಲ್ಲ, ಯಾವ ಸೂಚನೆಯೂ ಬರಹದಲ್ಲಿ ಏನೂ ಇಲ್ಲ. ಕಾಣುವಂತೆ ಕಪಾಟಿನಲ್ಲಿ ಜೋಡಿಸಿದ  ಸ್ತಕಗಳು... ಪತ್ರಿಕೆಗಳು.. ಮಾತ್ರ ಇವೆ. ಅಲ್ಲಿಯೇ ಎರಡು ಮೂರು ಕುರ್ಚಿ ಒಂದು ಬೆಂಚು. ನೋಡಿಕೊಳ್ಳುವವರು ಯಾರು ಇಲ್ಲ. ಯಾರೋ ಬಂದರು ಪುಸ್ತಕ ತೆಗದುಕೊಂಡು ಓದುತ್ತ ಕುಳಿತರು.  ಇನ್ನೊಬ್ಬರು ಬಂದು ತಾವು ತಂದಿದ್ದ ಪುಸ್ತಕ ಕಪಾಟಿನಲ್ಲಿ ಇಟ್ಟು ಬೇರೊಂದು ಪುಸ್ತಕ ತೆಗೆದುಕೊಂಡು ಅಲ್ಲಿಯೇ ಇದ್ದ ರಿಜಿಸ್ಟರ್ ನಲ್ಲಿ ದಾಖಲೆ ಮಾಡಿ  ಹೊರಟರು.  ಮಹಿಳೆಯೊಬ್ಬಳು ಬಂದು ತನ್ನ ಕೈ ಚೀಲ ಆಲ್ಲಿ ಇಟ್ಟು  ಪತ್ರಿಕೆ ಯೊಂನ್ನು ತೆಗೆದುಕೊಂಡು  ಓದಲು  ಕುಳಿತಳು. ಈ ಸ್ವಯಂ ಸೇವಾಗ್ರಂಥಾಲಯ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಈ ಮಾದರಿಯದು ನಾನು  ನೋಡಿದ್ದು  ಇದೆ ಮೊದಲು. ಇದು ಅವರ ಪುಸ್ತಕ ಪ್ರೀತಿಜತೆಗೆ ಪ್ರಮಾಣಿಕತೆಯನ್ನು ಸಾರಿ ಹೇಳಿತು. ಬಹಳಮಟ್ಟಿಗೆ ಎಲ್ಲರೂ ಪಾಲಿಸಬೇಕಾದ ನೀತಿ ನಿಯಮಗಳು ಇರಬಹುದು.ಆದರೆ ಇಲ್ಲಿನ ಪಾರದರ್ಶಕತೆಹೊಣೆಗಾರಿಕೆ  ಎಲ್ಲ ಕಡೆಅಲ್ಲದಿದ್ದರೂ ಕೊನೆಗೆ ಪುಸ್ತಕ ಪ್ರಪಂಚದಲ್ಲಾದರೂ ಬಂದರೆ ಎಷ್ಟು ಚೆನ್ನ!  ಇದೊಂದು ಅನುಸರಿಸಬೇಕಾದ ಆದರ್ಶ. ಬೆಂಗಳೂರಿಗೆ ಹಿಂದಿರುಗಿದ ಮೇಲೆ ಎನ್ ಆರ್ ಕಾಲೋನಿಯ ಕಟ್ಟೆ ಬಳಗದ ಅನುಕೂಲ ಕಂಡೆ. ಇಲ್ಲೂ ಹೆಚ್ಚು ಕಡಿಮೆ ಇದೇ ಬಗೆಯ ವ್ಯವಸ್ಥೆಯುಂಟು. ಮುಖ್ಯರಸ್ತೆಯ ಮಧ್ಯದಲ್ಲಿಯೇ ಇರುವ ಮರಗಳ ಕೆಳಗೆ, ಹಾಕಿದ ಕಲ್ಲು ಬೆಂಚಿನ ಮೇಲೆ, ಹಲವಾರು ದಿನ ಪತ್ರಿಕೆಗಳು. ಅವನ್ನು ವಿರಾಮವಾಗಿ ಓದುತ್ತಿರುವ ಬಹುತೇಕ ನಿವೃತ್ತರನ್ನು ನೋಡಿದಾಗ ಖುಷಿಯಾಯಿತು.
ಮಧ್ಯಾಹ್ನ  ಹೊತ್ತಿಗೆ ಅಲ್ಲಿನ ಅತಿ ಪುರಾತನ ರೈಲುನಿಲ್ದಾಣಕ್ಕೆ ಭೇಟಿ ನೀಡಿದೆವು. ಅಲ್ಲಿ ಒಂದು ವಸ್ತು ಸಂಗ್ರಹಾಲಯ ಇದೆ. ಮೊದಲ ರೈಲು ಬಂದಾಗಿನ ಸರಕು ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.  ಅಂದಿನ ಇಂಜಿನ್ಬೋಗಿಸರಕು ಸಾಗಣೆ ಗಾಡಿ, ಬಳಸುತಿದ್ದ ದೀಪಸಮವಸ್ತ್ರ  -ಏನೆಲ್ಲ ಇವೆ. ಎಲ್ಲಕ್ಕಿಂತ ಮಿಗಿಲಾಗಿ ಪುಟ್ಟ ಟ್ರೈನ್ ನಲ್ಲಿ ಸುಂದರ ಬೆಟ್ಟಗಳದಟ್ಟಕಾಡಿನ ಪ್ರವಾಸ ಕಣ್ಣಿಗೆ ಹಬ್ಬ. ಮನಸಿಗೆ ಮುದ.
ಮೂರು ಗಂಟೆಗೆ ಮನೆಗೆ ಬಂದೆವು. ಇನ್ನೂ  ತಿಂಡಿ  ಗಂಟು ಇತ್ತು, ಅದರ ಗಾತ್ರ ಕಡಿಮೆ ಮಾಡಿದೆವು. ಟೆಂಟ್ ನಾವು ಹಾಕಿರಲಿಲ್ಲ. ಈಗ ಬಿಚ್ಚುವ ಭಾಗ್ಯವನ್ನಾದರೂ  ಪಡೆಯೋಣ ಎಂದುಶುರು ಮಾಡಿದೆವು.  ಮೂರು ಟೆಂಟ್ ಗಳು ಬೇರೆ ಬೇರೆ ಬಗೆಯವು.  ಆದರೆ ಬಿಚ್ಚುವುದು ಬಹು ಸುಲಭದಕೆಲಸ. ಅವನ್ನು ತುಸು ಬಿಸಿಲಿಗೆ ಹಾಕಿ ಮಣ್ಣು ಝಾಡಿಸಿದೆವು . ಬಿಗಿಯಾಗಿ ಸುತ್ತಿ  ವುಗಳ ಕವರ್ರ‌ನಲ್ಲಿ  ಇಡುವುದೇ ತುಸು ಜಾಣತನದ ಕೆಲಸ. ಎಲ್ಲ ಪ್ಯಾಕ್ ಮಾಡಿ ಕಾರಿನ ಹಿಂಭಾಗಕ್ಕೆ ತುಂಬಿದೆವು. ಶಿಬಿರ ನಿರ್ವಾಹಕರು ಜಾಗದ ಜೊತೆ ದೊಡ್ಡ ಪ್ಲಾಸ್ಟಿಕ್ ಕವರ್ ನೀಡಿದ್ದರು. ನಾವು ಬಳಸಿದ ಎಲ್ಲವನ್ನು ಅದಕ್ಕೆ ಹಾಕಿದ್ದೆವು. ಅದನ್ನು ಶಿಬಿರದ ಬಾಗಿಲಲ್ಲಿ ಇದ್ದ ಕಸದತೊಟ್ಟಿಗೆ ಹಾಕಿದ ನಂತರ ಅಲ್ಲಿಂದ ಮೋಕ್ಷ ಪ್ರಾಪ್ತಿ. 
ಹೊರಡುವ ಮುನ್ನ, ಅಲ್ಲಿಯೇ ಇದ್ದ ಹುಂಡಿಗೆ ಹಣ ಹಾಕಲು ಮರೆಯಲಿಲ್ಲ.  ಆ ಹುಂಡಿ ಸ್ಥಳೀಯ ಸೇವಾ ಸಂಸ್ಥೆಗೆ ಸೇರಿದ್ದು.  ಆ ಸಂಸ್ಥೆಯು ಪ್ರವಾಸಿಗರಿಗಾಗಿ ಬಗೆ ಬಗೆಯ ಬ್ರೆಡ್ಡು, ಬನ್ನು, ಬಿಸ್ಕತ್ತು ಇತ್ಯಾದಿ ಸ್ಥಳೀಯ ತಿನಿಸುಗಳನ್ನು ಪ್ರದರ್ಶಿಸುತ್ತಿತ್ತು.  ಬೇಕೆಂದವರು ಉಚಿತವಾಗಿ ಪಡೆಯಬಹುದು.  ಆಸಕ್ತರು ತಮಗೆ ತೋಚಿದಷ್ಟು ಹಣವನ್ನು ಹುಂಡಿಗೆ ಹಾಕಿದರೆ ಆಯಿತು.  ಕಡ್ಡಾಯವೇನೂ ಇಲ್ಲ. ಬಹುತೇಕ ಪ್ರವಾಸಿ ತಾಣಗಳಲ್ಲಿ  ಒಂದಕ್ಕೆರಡು ಬೆಲೆಯೇರಿಸಿ, ಪ್ರವಾಸಿಗರ ಸುಲಿಗೆ ಮಾಡುವ ಪ್ರವೃತ್ತಿ ಕಂಡಿದ್ದವರಿಗೆ, ಇದನ್ನು ಕಂಡು ಸೋಜಿಗ. ಬಿಟ್ಟಿ ಎಂದರೆ, ನನಗೂ ಇರಲಿ, ನಮ್ಮಪ್ಪನಿಗೂ ಇರಲಿ ಎನ್ನುವ ಫ್ರೀ ಎಂದರೆ, ಫಿನಾಯಿಲ್ಲೂ ಕುಡಿಯುವ, ಮನೋಭಾವ ಇರುವ ಜಗತ್ತಿನಲ್ಲಿ ಇಂಥ ಆತಿಥ್ಯ ಅಚ್ಚರಿ ತರಬಹುದು. ಸ್ಥಳೀಯ ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸುವ, ಗ್ರಾಮದ ಅಭಿಮಾನದ ದ್ಯೋತಕವಾಗಿ ಕಂಡಿತು.
ಕರಡಿ ಶಿಬಿರಕ್ಕೆ ವಿದಾಯ ಹೇಳಿದಾಗ ಸಹಜವಾಗಿ ಕರಡಿಗಳು ಏರಿ ಕುಳಿತಿದ್ದ ಮರದ ಕಡೆ ನೋಡಿದೆವು. ಅಲ್ಲಿ ಅವುಗಳ ಸುಳಿವೇ ಇಲ್ಲ.  ಹಿಂದಿನ ರಾತ್ರಿಯೇ  ಜನಸಂಚಾರ ನಿಂತಮೇಲೆ ಮರವಿಳಿದು ನಮಗಿಂತ ಮೊದಲೇ ಮನೆ ಸೇರಿದ್ದವು.  ಕ್ಯಾಟ್ಸ್ ಕಿಲ್ ಬೆಟ್ಟಕ್ಕೆ ವಿದಾಯ ಹೇಳಿ ಊರ ಕಡೆ ಕಾರು ಓಡಿಸಿದಾಗ ಹೊತ್ತು ಮುಳುಗಿತ್ತು.

(ಚಿತ್ರಗಳು: ಲೇಖಕರವು)

Wednesday, May 21, 2014

ಅಮೇರಿಕಾ ಅನುಭವ-3

ಅಪ್ಪಾಜಿ ಚಾರಣ ಕಥನ-3 : ಕರಡಿ ಮರವ ಏರಿತು   
ಎಚ್. ಶೇಷಗಿರಿರಾವ್

ಮರ ಏರಿದ ಕರಡಿ
ಕಾರಿನ ಕರಗ ನೋಡಿ ಊರಲ್ಲಿ ಸುತ್ತ ಹೊರಟೆವು.  ನಮ್ಮ ಶಿಬಿರ ಇರುವದು ಪುಟಾಣಿ ಊರಲ್ಲಿ.  ಫಿನಿಶಿಯಾ ಎಂಬ ಪುರಾತನ ನಾಗರಿಕತೆಯ ಹೆಸರು. ಇಲ್ಲಿ ಬಂದ ಬಗೆ ನಮಗೆ ತಿಳಿಯದು.  ಬೆಟ್ಟದ ಬುಡದಲ್ಲಿ, ನದಿಯ ತಟದಲ್ಲಿ ಕಾಡಿನ ನಡುವೆ ಇರುವ ಸುಂದರ ಗ್ರಾಮ. ಊರಿಗೆ ಒಂದೇ ಒಂದು ಮುಖ್ಯ ರಸ್ತೆ. ಎರಡು ಬದಿಯಲ್ಲಿ  ಕಟ್ಟಿಗೆ ಮನೆಗಳು. ಪ್ರವಾಸಿಗರ ಅಗತ್ಯ ಪೂರೈಸುವ ಸರ್ವ ವಸ್ತು  ಭಂಡಾರ, ಹೋಟೆಲ್, ಮೋಟೆಲ್, ವಸತಿ ಗೃಹಗಳು. ಊರು ಭಿತ್ತಿ ಚಿತ್ರದಂತೆ ಬಹು ಸುಂದರ. ಇದು ಸದ ಪ್ರವಾಸಿಗರ ನೆಚ್ಚಿನ ತಾಣ. ಬೇಸಗೆಯಲ್ಲಿ ಜನ ಜಾತ್ರೆ. ಚಾರಣಿಗರು, ಬೆಟ್ಟ  ಏರುವವರು, ಸಾಹಸ ಕ್ರೀಡೆಗಾಗಿ ಕಾರಿನಲ್ಲಿ, ಬಸ್ಸಿನಲ್ಲಿ  ಸೈಕಲ್ ಸವಾರರಾಗಿ ವಾರಾಂತ್ಯದಲಿ ಮುಕುರುವರು. ಚಳಿಗಾಲದಲ್ಲೂ ಸಹಾ ತೆರಪಿಲ್ಲ.  ಸ್ಕೀಯಿಂಗ್ ಗೂ ಇದು ಹೇಳಿ ಮಾಡಿಸಿದ ಜಾಗ.  ಆಗ ಮರಗಳೆಲ್ಲ ಬೋಳು ಬೋಳು.  ಅವುಗಳ ನಡುವೆ ಬೆಟ್ಟಗಳ ಇಳಿಜಾರಿನಲ್ಲಿ ಕಾಲಿಗೆ ಹಲಗೆ ಕಟ್ಟಿಕೊಂಡು, ಹಿಮಾವೃತ ಬೆಟ್ಟಗಳನ್ನೂ ದಾಟುವ ಸಾಹಸಿಗರ  ಸ್ವರ್ಗ ಇದು. ಸಕ್ಕರೆ ಬೆಟ್ಟದ ಮೇಲಿನ ಕರಿ ಇರುವೆಗಳ ರೀತಿ ಕಾಣುತ್ತಾರೆ. ವಿಶೇಷ ಉಡುಪು ಧರಿಸಿದ ಆ ಜನ. ಊರಿನ ಪ್ರಮುಖ ಭಾಗದಲ್ಲಿ ದೊಡ್ಡ ಫಲಕ ಅಲ್ಲಿರುವ ಚಾರಣದ ದಾರಿಗಳ ವಿವರ. ಅವುಗಳ ಅಂತರ, ಎತ್ತರ, ಪ್ರಯಾಸದ  ಮಟ್ಟ ಎಂದರೆ, ಸುಲಭ, ಸಾಧಾರಣ, ಕಷ್ಟ, ಕಡು ಕಷ್ಟ, ಇತ್ಯಾದಿ. ಎಷ್ಟು ದೂರ ಕಾರಲ್ಲಿ ಹೋಗಬಹುದು, ಹೆಂಗಸರು, ಮಕ್ಕಳು, ಹಿರಿಯರು ಹೋಗಬಹುದೆ, ಅಲ್ಲಿ ದೊರಕಬಹುದಾದ ಸೌಲಭ್ಯ, ಬೇಕಾಗುವ ಸಮಯ ಅಗತ್ಯವಾದ ಪೂರ್ವ ತಯಾರಿ, ಎಲ್ಲ ನಮೂದಿತವಾಗಿದ್ದವು.
ಈ ಉರಿನಲ್ಲಿ ಎಲ್ಲಿಯೂ ಮೊಬೈಲ್ ಸಂಕೇತ ದೊರಕದು. ಏನಿದ್ದರೂ ಸ್ಥಿರ ದೂರವಾಣಿಯಿಂದ ಮಾತ್ರ ಸಂಪರ್ಕ.  ಹೀಗೆ ನಮಗೆ ಆ ದಿನ ಎಲ್ಲಿ ಹೀಗಿರಬಹುದು ಎನ್ನುವ ಸ್ಥೂಲ ಕಲ್ಪನೆ ಸಿಕ್ಕಿತು. ಆಗಲೇ ಗಂಟೆ ಎಂಟೂವರೆ. ಮಲಗಿದ್ದವರೆಲ್ಲರನ್ನು ಹೊರಡಿಸಬೇಕೆಂದು ಮನೆ ಕಡೆ ಮುಖ ಮಾಡಿದೆವು.
ನಮ್ಮ ಶಿಬಿರದ ಪ್ರವೇಶ ದ್ವಾರದ ಹತ್ತಿರ ಆಗಲೇ ಜನ ಜಂಗುಳಿ. ರಸ್ತೆಯ ಆಚೆ ಬದಿಯಲ್ಲಿ ನಿಂತು ಏನನ್ನೋ ನೋಡುತ್ತಿದ್ದಾರೆ. ಎಲ್ಲರ ದೃಷ್ಟಿ ದೂರದ ಮರದ ಮೇಲೆ. ಸಮವಸ್ತ್ರಧಾರಿ ಮಹಿಳೆಯೋಬ್ಬಳು  ರಸ್ತೆಯಲ್ಲಿನ ವಾಹನಗಳ ಒಡಾಟ ನಿಲ್ಲಿಸಿ, ಜನರನ್ನು ನಿಯಂತ್ರಿಸುತ್ತಿದ್ದಾಳೆ. ಆಗಲೇ ಅಗ್ನಿಶಾಮಕ ವಾಹನದಲ್ಲಿ ಬಂದ ಇಬ್ಬರು ಆ ಮರದ ಸುತ್ತ ನೂರು ಅಡಿಯವರೆಗೆ ಯಾರು ಹೋಗದಂತೆ ಸೂಚನೆ ಇರುವ ಬಣ್ಣದ ತಡೆ ಟೇಪನ್ನು ಕಟ್ಟಿದರು. ಏನಾಗಿದೆ ಎಂಡು ನಮಗೆ ಅಚ್ಚರಿ. ಕೇಳಿದಾಗ ತಿಳಿಯಿತು. ಹಿಂದಿನ ರಾತ್ರಿ ಕರಡಿಗಳ ಗುಂಪು ನಮ್ಮ ಶಿಬಿರಕ್ಕೆ ಭೇಟಿ ನೀಡಿದ್ದವು. ಅವುಗಳ ಪೈಕಿ ಒಂದು ದೊಡ್ಡ ಹೆಣ್ಣು  ಕರಡಿ ಎರಡು ಮರಿಗಳೊಂದಿಗೆ ಮರವೇರಿ ಕುಳಿತಿದೆ. ಕರಡಿ ಬೆಟ್ಟಕೆ ಹೋಯಿತು ಎಂದು ಶಿಶು ಗೀತೆ ಕೇಳಿದ್ದ ನಾವು ಬೆಟ್ಟದಿಂದ ಇಳಿದು, ಬಯಲಲ್ಲಿ ತಿಂಡಿ ತಿಂದು, ಮರವೇರಿ ಕುಳಿತ ಕರಡಿಗಳನ್ನು ನೋಡಿದ್ದು ಇದೆ ಮೊದಲು.
ಚಿತ್ರದುರ್ಗದಲ್ಲಿ ಬೆಟ್ಟ ಇಳಿದು ಬರುವ ಕರಡಿ ದರ್ಶನ ಆಗೀಗ ಆಗುತಿತ್ತು.  ಜನ ಕೊಡುವ ಬ್ರೆಡ್ಡು, ಶೇಂಗಾ ಪಡೆಯಲು ಸಂಜೆಯ ಕಾಲಕ್ಕೆ ಸರಿಯಾಗಿ ಹಾಜರಾಗುತ್ತಿದ್ದ, ಅದಕ್ಕೆ ಜಂಬೂ ಎಂದು ಹೆಸರಿಟ್ಟಿದ್ದರು. ಒಂದು ಬಾರಿಯಂತೂ, ದುರ್ಗದ ಬೆಟ್ಟ ಗುಡ್ಡಗಳಲ್ಲಿ ಮಿನಿ ಚಾರಣಕ್ಕೆ ಹೋಗಿದ್ದ ನಮ್ಮಿಂದಲೂ ಏನೋ ನಿರೀಕ್ಷಿಸಿ, ಬೆನ್ನು ಹತ್ತಿ ಬಂತು.  ತಪ್ಪಿಸಿಕೊಳ್ಳಲು, ಬಂಡೆಯೊಂದನ್ನು ಹತ್ತಿ ಕೂರಬೇಕಾಗಿ ಬಂದಿತ್ತು.  ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ, ಅದು ನಮ್ಮನ್ನು ನಿರೀಕ್ಷಿಸುತ್ತ, ಕೆಳಗೆ ಕಾವಲು ಕೂತಿತ್ತು.ಅಪ್ಪಾಜಿ ದಂಪತಿ
ಆದರೆ, ರಸ್ತೆ ಬದಿಯ ಎತ್ತರದ ಮರವನ್ನು ಮರಿಗಳ ಸಮೇತ ಏರಿ ಕುಳಿತದ್ದನ್ನು ನೋಡಿದ್ದು ಇದೆ ಮೊದಲು. ಅದಕ್ಕೆ ಗಾಬರಿಯಾಗದಿರಲೆಂದು ಸಂಚಾರದ ದಿಕ್ಕನ್ನೇ ಬದಲಿಸಲಾಗಿತ್ತು. ಬೆಟ್ಟದಲ್ಲಿ ಕರಡಿ ಇವೆ ಎಂದು ಕೇಳಿದ್ದ ನಮಗೆ ಅವು ನಮ್ಮ ಭೇಟಿಗೆ ಬಂದಿದ್ದವು ಎಂದಾಗ ಹೊರಗೆ ಸಂತೋಷ ತೋರಿಸಿದರೂ, ಮನದಲ್ಲಿ ಭೀತಿ ಮನೆ ಮಾಡಿತ್ತು. ಆದರೆ ಇದು ಪ್ರವಾಸಿಗಳಿಗೆ ಅನಿರೀಕ್ಷಿತ ಬೋನಸ್. ಎಲ್ಲರೂ ಕೆಮರ ಕ್ಲಿಕ್ ಮಾಡುವವರೆ. ಟೆಲಿ ಲೆನ್ಸ್ ಇದ್ದವರಿಗೆ ಖುಷಿಯೋ ಖುಷಿ. ಇಲ್ಲದವರು ಕ್ಲೋಸ್ ಅಪ್ ಚಿತ್ರಕ್ಕಾಗೇ ಕುಳಿತೂ- ನಿಂತೂ, ಮರವೇರಿ ಸರ್ಕಸ್ಸು ಮಾಡಿ ಉತ್ತಮ ಚಿತ್ರ ಪಡೆವ ಪ್ರಯತ್ನಪಟ್ಟರು.
ನಮ್ಮ ತಂಬೂಗೆ ಬಂದಾಗ ಬೆಳಗಿನಜಾವದ ಜಾಂಬವ ಸೈನ್ಯದ ದಾಂಧಲೆಯ ಪರಿಚಯವಾಯಿತು. ನಡುರಾತ್ರಿ ಮೀರಿ, ಕುಡಿದು ಕುಪ್ಪಳಿಸಿದ ಜನ ತಿಂಡಿ ತೀರ್ಥಗಳನ್ನೂ ಬಯಲಲ್ಲೇ ಮೇಜಿನ ಮೇಲೆ ಬಿಟ್ಟಿದ್ದರು. ಅವು ಕರಡಿ ಪಡೆಯ ಪಾಲಿಗಿದ್ದವು. ತಿಂದದ್ದಕ್ಕಿಂತ ಚೆಲ್ಲಾಪಿಲ್ಲಿಯಾದದ್ದೇ ಹೆಚ್ಚು. ಕರಿ ಕರಡಿ ಶಿಬಿರ ಎಂಬ ಹೆಸರಿಗೆ ನ್ಯಾಯ ಒದಗಿಸಲು ಕರಡಿಗಳೆ ದರ್ಶನ ನೀಡಿದ್ದವು ಅಥವಾ ಪ್ರವಾಸಿಗಳಲ್ಲಿ ರೋಮಾಚಂನ ಹುಟ್ಟಿಸಲು ಮಾಡಿದ ಮಾರ್ಕೆಟಿಂಗ್ ಟ್ರಿಕ್ಕಾ..? ಇರಲಾರದು ಎಂದೇ ಅಂದುಕೊಂಡೆವು.
ಗೆ




Sunday, May 18, 2014

ಅಮೇರಿಕಾ ಅನುಭವ-೨



 ಘಟ್ಟದ ತಪ್ಪಲಲ್ಲೂ ಬಿಡದ ಹುಟ್ಟುಗುಣ  

http://kendasampige.com/images/trans.gif

http://kendasampige.com/images/trans.gif
ರಿಪ್ ವ್ಯಾನ್ ವಿನ್ ಕಲ್' ಕತೆಗಾರ ಇರ್ವಿನ್ ವಾಶಿಂಗ್ ಟನ್ ಇಲ್ಲಿಗೆ ಬಂದೆ ಇರಲಿಲ್ಲವಂತೆ. ಹರೆಯದ ಹುಡುಗ ಬೆಟ್ಟದ ಮೇಲೆ ಕುಡಿದು ಮಲಗಿದ ಎದ್ದು ನೋಡಿದಾಗ ಮಾರುದ್ದ ಬಿಳಿ ಗಡ್ಡತಲೆಯಲ್ಲ ಬೋಳು. ಹಣ್ಣು ಹಣ್ಣು ಮುದುಕ. ಕೆಳಗಿಳಿದು ಬಂದರೆ ಊರೆಲ್ಲ ಪೂರ್ಣ ಬೇರೆ... ಪರಿಚಿತರಿಲ್ಲವೇ ಇಲ್ಲ. ಮನೆ ಹುಡುಕಿ ಹೋದಾಗ ಹರೆಯದವ ಅವನ ಮೊಮ್ಮಗನಂತೆ...' ಈ ಕತೆ ದೇಶ, ಕಾಲ, ಭಾಷೆ ಮೀರಿ ಜನಪ್ರಿಯ. ಇಲ್ಲಿ ದೊರಕುವ ಮದ್ಯ ಮತ್ತು ಬರುವ ನಿದ್ದೆ ನೋಡಿದರೆ ಕತೆ ನಿಜ ಎನಿಸಿತು. ಸುತ್ತಮುತ್ತ ನೋಡಿದರೆ ಸರ್ವಜನಾಂಗದ ಸುಂದರ ತೋಟ ಕಾಣಿಸಿತು. ಬಿಳಿಯರು, ಕರಿಯರು, ಕಂದು, ಕೆಂಪು, ಹಳದಿ, ಕಕೆಶಿಯನರು, ಆಫ್ರಿಕಾನರು, ದೇಸಿಗಳು, ಮುಂಗೊಲಿಯ ಮೂಲದವರು, ವರ್ಣ, ಜನಾಂಗ ಭೇದವಿಲ್ಲದೆ ಎಲ್ಲ ಒಂದೆಡೆ  ಇದ್ದಾರೆ.
ಇನ್ನು ಭಾಷೆಗಳು ಹಲವು ಬಗೆಯ ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಶ್, ಇಟ್ಯಾಲಿಯನ್, ಕೊರಿಯನ್ ಅಲ್ಲಲ್ಲಿ ಹಿಂದಿ. ಮಿನಿ ವಿಶ್ವ ಸಂಸ್ಥೆಯೇ ಅಲ್ಲಿದೆ ಎನಿಸಿತು. ಎಲ್ಲ ಹರೆಯದ ಹುರುಪಿನ ಜೋಡಿಗಳು. ಅಲ್ಲೊಬ್ಬ, ಇಲ್ಲೊಬ್ಬ ಮಕ್ಕಳು. ಸಾಕು ನಾಯಿಗಳು ಮಾತ್ರ ಸಾಕಷ್ಟು. ಎಲ್ಲ ಸರ್ವ ಸನ್ನದ್ಧರಾಗೇ ಬಂದಿದ್ದಾರೆ. ಅಲ್ಲಿ ಇದ್ದ ಎರಡು ಮರಗಳಿಗೆ ಬಿಗಿದ ಹ್ಯಾಮಕ್ಕಿನಲ್ಲಿ (ಹ್ಯಾಮಕ್ ಎಂದರೆ, ಎರಡು ಮರಗಳಿಗೆ ಕಟ್ಟಿದ ಹಗ್ಗದಿಂದ ಮಾಡಿದ ಬಲೆ, ತೊಟ್ಟಿಲ ತರ ಉಪಯೋಗಿಸುತ್ತಾರೆ. ಒಂದು ನಿಸರ್ಗದ ನಡುವೆ ಅಂತರಿಕ್ಷದಲ್ಲಿ ಮಲಗಿದ ಅನುಭವ.) ಮಲಗಿ ಮುಗಿಲು ನೋಡುವವರು, ಕೆಲವರಾದರೆ, ಮರದ ಟೊಂಗೆಗೆ ನೇತು ಬಿಟ್ಟ ಜೋಕಾಲಿಯಲ್ಲಿ ತೂಕಡಿಸುವವರು,
ಟೆಂಟ್ ಮುಂದೆ ಮರದ ಕೆಳಗೆ ಹಾಕಿದ ಮಡಿಚುವ ಆರಾಮ ಕುರ್ಚಿಯಲ್ಲಿ ಕುಳಿತು ಓದುವವರು ಹಲವರು. ಇದ್ದ ಜಾಗದಲ್ಲೇ ಶಟಲ್ ಆಡಿದರೆ, ಊಟದ ಮೇಜಿನ ಮೇಲೆ ಕೇರಂ, ಚೆಸ್. ನಿಧಾನವಾಗಿ ಕತ್ತಲು ಕವಿದಂತೆ ಚಳಿಗಾಳಿ ಶುರುವಾಯಿತು. ಕ್ಯಾಂಪ್ ಫೈರ್ ಹಾಕಲು ಗಡಿಬಿಡಿ ಮೊದಲಾಯಿತು. ಒಣ ಕಟ್ಟಿಗೆ ಹೇರಿಕೊಂಡ ವಾಹನ ಹಾಜರು. ಮಟ್ಟಸವಾಗಿ ಕೊರೆದ ಸುಮಾರು ಗಾತ್ರದ ದುಂಡನೆ, ನಿಗೂಳಾದ, ದಿಂಡುಗಳು. ಇವನ್ನು ಸುಡುವುದೇ... ಎಂದು ಕಣ್ಣು ಕಣ್ಣು ಬಿಟ್ಟೆವು. ಕಡ್ಡಿ ಪುರಲೇ ಕೊಂಬೆ, ರೆಂಬೆ ಸುಡುವ ನಮಗೆ, ಮನೆ ಮುಟ್ಟಿಗೆ ಯೋಗ್ಯವಾದ ಅವುಗಳನ್ನು ಸುಡುವುದಕ್ಕೆ, ನೋಟಿನ ಕಟ್ಟಿಗೇ ಬೆಂಕಿ ಹಚ್ಚಿದಷ್ಟು ಬಾಧೆಯಾಯಿತು. ಸುತ್ತಲು ನೋಡಿದಾಗ ಮುಗಿಲು ಮುಟ್ಟುವ ನಿಸೂರಾದ ಓಕ್ ಮರಗಳ ಗುಂಪು ತುಸು ನೆಮ್ಮದಿ ತಂದಿತು.

ಅಗ್ನಿ ದೇವನಿಗೆ ಹವಿಸ್ಸಿನಂತೆ  ಹಾಕಲು ಎಣ್ಣೆ  ಕ್ಯಾನ್. ಎಲ್ಲದಕ್ಕೂ ಕಾಸು. ಬೆಲೆ ಕೇಳುವ ಹಾಗಿಲ್ಲ ಹೇಳಿದಷ್ಟು. ಅಗ್ನಿ ದೇವ ಚಕ್ಕನೆ ಪ್ರತ್ಯಕ್ಷನಾದ. ಕೆಂಡದ ಕುಂಡದ ಮುಂದೆ ಎಲ್ಲ ದುಂಡಗೆ ಕುಳಿತೆವು. ನಾವು  ಹಿರಿಯರು ಆಗಲೇ ಬೆಚ್ಚನೆ ಉಡುಪು ಧರಿಸಿದ್ದೆವು. ತಾಳಲಾರದ ಚಳಿ. ಕೆಂಡದಲ್ಲಿ ಕೈ ಇಟ್ಟರೆ ಮಾತ್ರ ಮೈ ತುಸು ಬಿಸಿಯಾಗಬಹುದು ಎನಿಸಿತು. ಉಟ್ಟ ಬಟ್ಟೆ ಸುಟ್ಟೀತು ಎಂದು  ಸುಮ್ಮನಾದೆವು.  ನಮ್ಮವರು ಮೆಕ್ಕೆ ತೆನೆ ತಂದಿದ್ದರು. ಅವನ್ನು ಹದವಾಗಿ ಸುಟ್ಟು ಬಿಸಿ ಬಿಸಿ ಕಾಳನ್ನು ಬಿಡಿಸಿ ತಿನ್ನ ತೊಡಗಿದೆವು. ನಮ್ಮ ಯುವ ಗೆಳೆಯರು ಉದ್ದನೆ ಲೋಹದ ಕಡ್ಡಿ ತೆಗೆದು ಅದಕ್ಕೆ ಪೊಟ್ಟಣ ದಲ್ಲಿದ್ದ ಏನನ್ನೋ ತೆಗೆದು ಸುಡತೊಡಗಿದರು. ಅದು ಸುಯ್ಯ್ ಎಂದಾಗ ಹಿಂತೆಗೆದು ಚಪ್ಪರಿಸತೊದಗಿದರು. ನಮಗೂ ತಿನ್ನಲು ಹೇಳಿದರು. ಹೇಳಿ ಕೇಳಿ ಶುದ್ದ ಸಸ್ಯಾಹಾರಿಗಳು, ಮೊದಲೇ ಅನುಮಾನದ ಪ್ರಾಣಿಗಳು. ಏನೇ ತಿನ್ನುವ ಮೊದಲು ಅದರಲ್ಲಿ ಮಾಂಸದ  ಅಂಶ ಇಲ್ಲ ಎಂದು ಖಾತ್ರಿ ಮಾಡಿಕೊಳ್ಳುತಿದ್ದೆವು. ತೊಂದರೆ ಏಕೆಂದು ಎಲ್ಲಿಯೇ ಹೋದರು ಬುತ್ತಿಯ ಗಂಟು, ನೀರಿನ ಶೀಸೆ ನಮ್ಮ ಸಂಗಾತಿ. ಈ ರೀತಿ ಮಾಂಸ ಸುಡುವರೆಂದು ಎಲ್ಲೋ ಓದಿದ ನೆನಪು. ಈ ಗೊಡವೆಯೇ ಬೇಡ ಎಂದು ತಲೆ ಆಡಿಸಿದೆವು. ಮಾರನೆ ದಿನ ಬೆಳಕಿನಲ್ಲಿ ಅದರ ಮೇಲಿದ್ದ ಬರಹ ಓದಿದೆ. ಅದು 'ಲಶ್  ಮೇಲೋಎಂದು ಹೆಸರಿನ ಸಕ್ಕರೆಯ ತಯಾರಿ.  ಹೇಗಿದ್ದರೂ ಸಿಹಿರಕ್ತದ ನಾವು ತಿನ್ನುವ ಹಾಗಿಲ್ಲ. ಬೇಡ ಎಂದಿದ್ದು ಒಳ್ಳೆಯದೇ ಆಯಿತು ಎಂದು ಸಂತಸಪಟ್ಟೆ. ಹೊಟ್ಟೆ ಆಗಲೇ ತಾಳ ಹಾಕ ಹತ್ತಿತು.
ಮನೆಯಿಂದ ತಂದಿದ್ದ  ದಿಢೀರ್ ಉಪ್ಪಿಟ್ಟು ತಡವಿಲ್ಲದೆ ರೆಡಿಯಾಯಿತು. ಜತೆಗೆ ಚಿಪ್ಸ್, ಉಪ್ಪಿನಕಾಯಿ. ಬಿಸಿ ಬಿಸಿ ಉಪ್ಪಿಟ್ಟು ಹೊಟ್ಟೆ ಸೇರಿತು. ಸುತ್ತಮುತ್ತಲಿನವರ ಹಾಡು, ಕೇಕೆ, ಕುಣಿತ ಸಾಗಿಯೇ ಇತ್ತು. ಎಲ್ಲರೂ ಕಡಿಮೆ ಉಡುಪಿನಲ್ಲೇ ಇದ್ದರು. ಇವರಿಗೆ ಚಳಿಯಾಗದೇನೋ ಎನಿಸಿತು. ನಂತರ ತಿಳಿಯಿತು. ಅವರ ಮೈ ಬಿಸಿಯ ಕಾರಣ. ಹೊರಗಿನ ಬೆಂಕಿಯಲ್ಲ. ಹೊಟ್ಟೆಯಲ್ಲಿ ಸೇರುತ್ತಿದ್ದ ದ್ರವಾಗ್ನಿ ಎಂದು. ಗಂಟೆಗಟ್ಟಲೆ ಕೈನಲ್ಲಿ ಹಿಡಿದು ಬಾಯಿ ಚಪ್ಪರಿಸುತಿದ್ದ ಬಣ್ಣ ಬಣ್ಣದ ಪೇಯಗಳೇ ಖುಷಿಯಿಂದ ಕುಣಿಸುತಿದ್ದವು. ನಮ್ಮ ಗುಂಪಿನ ಯುವಕರು ಕಣ್ಣು ಬಾಯಿ ಬಿಡುತಿದ್ದ ಪರಿ ನೋಡಿ ಕನಿಕರವಾಯಿತು. ಪಾನಕ ಕುಡಿವಾಗ ನೊಣ ಬಂದಂತಗಬಾರದು ಎಂದು ನಾವು, ಹಿರಿಯ ದಂಪತಿಗಳು, ಅವರಿಗೆ ಶುಭ ರಾತ್ರಿ ಹೇಳಿ ಟೆಂಟ್ ಸೇರಿದೆವು. ಹೇಗಿದ್ದರೂ ಕಣ್ಣುಗಳು ಆಗಲೇ ಎಳೆಯುತಿದ್ದವು. ಪವನ ತಲ್ಪದ ಮೇಲೆ ಪವಡಿಸಿದೆವು. ಗಾಳಿ ಗಾದಿಯ ಮೇಲೆ ಮಲಗಿದ್ದು ಅದೇ ಮೊದಲು. ಹೇಗೋ ಹೇಗೋ ಎನಿಸಿತು. ಶೀತ ಆಗಬಾರದು ಎಂದು ಆ ವ್ಯವಸ್ಥೆ. ಹವಾ ಹಾಸಿಗೆಯ ಮೇಲೆ ಮಲಗಿರುವ ನಮಗೇ ಏನೆಲ್ಲಾ ಅನಿಸಿರುವಾಗ ಹಾವಿನ ಹಾಸಿಗೆಯ ಮೇಲೆ ಮಲಗಿರುವ ಹರಿಗೆ ಹೇಗಿದ್ದಿರಬೇಕು  ಎಂದು ಕೊಳ್ಳುತ್ತಾನಿದ್ರಾ ಚೀಲದಲ್ಲಿ ತೂರಿಕೊಂಡೆವು. ಜಿಪ್ ಎಳೆದುಕೊಂದು ಗಪ್ಪಗೆ ಮಲಗಿದ್ದೆ ತಡ ನಿದ್ದೆ ಆವರಿಸಿತು.
ನಗರ ನಾಮಾವಳಿ...
ಹುಟ್ಟುಗುಣ ಘಟ್ಟದ ತಪ್ಪಲಿನಲ್ಲೂ ಹೋಗಲಿಲ್ಲ. ಯಥಾರೀತಿ ಬೆಳಗ್ಗೆ ಐದು ಗಂಟೆಗೇ ಎಚ್ಚರವಾಯಿತು. ಟೆಂಟ್ ಬಿಟ್ಟು ಹೊರಬಂದರೆ ಆಗಲೇ ಬೆಳ್ಳಂ ಬೆಳಕು. ಎಲ್ಲೆಡೆ ನೀರವ ಮೌನ. ಹಕ್ಕಿಗಳ ಚಿಲಿ ಪಿಲಿ ಬಿಟ್ಟರೆ ಬೇರೇನೂ ಇಲ್ಲ. ಸುತ್ತಲೂ ಬಣ್ಣ ಬಣ್ಣದ ಟೆಂಟ್ ಗಳೂ ಕೂಡ ನಿದ್ದೆಯ ಮಬ್ಬಿನಲ್ಲಿ  ಇರುವಂತೆ ತೋರಿತು. ಹತ್ತಿರದಲ್ಲಿನ ಕ್ಯಾಂಪ್ ಫೈರ್ ನಿಂದ  ಹೌದೋ ಅಲ್ಲವೋ ಎನ್ನುವಷ್ಟು ಹೊಗೆ. ಸುತ್ತಲೂ ಎತ್ತರದ ಹಸಿರು ಸೂಸುವ ಮರಗಳು. ಅವುಗಳ ನಡುವಿನ ಕಂಡಿಗಳಲ್ಲಿ ಹಾವಸೆಯ ನಡುವಿನ ತಿಳಿ ನೀರಿನಂತೆ ಕಾಣುವ ನೀಲಿ ಆಕಾಶ. ಹತ್ತಿರದಲ್ಲೇ ಜುಳು ಜುಳು ಹರಿಯುವ ತೊರೆಯ ಮಂಜುಳಾ ನಿನಾದ. ಈ ಸೊಬಗ ಸವಿಯಲು ಎರಡು ಕಣ್ಣು, ಎರಡು ಕಿವಿ ಸಾಲದು ಎನಿಸಿತು. ಹಿಂದಿನ ದಿನ ಮಳೆಬಂದದ್ದರಿಂದ ಎಲ್ಲೆಲ್ಲೂ ಕೊಚ್ಚೆ ಕೆಸರು ಮನಸಿಗೆ ಕಿಸಿರು ಆಗಿದ್ದುದು ನಿಜ. ಮೋಡ ಕರಗಿ ಮೂಡಿದ ಹೊಂಬೆಳಕು ನೋಡಿ ಬಂದದ್ದು   ಸಾರ್ಥಕವಾಯಿತು ಎನಿಸಿತು.
ಬೆಳಗಿನ ಕಾರ್ಯ ಮುಗಿಸಿ ಎಂದಿನಂತೆ ವಾಯುವಿಹಾರಕ್ಕೆ  ಹೊರಟೆವು. ನಮ್ಮ ಶಿಬಿರದಲ್ಲಿ ಎಲ್ಲಿ ನೋಡಿದರು ಕಾರೆ ಕಾರು. ಕಾಲಿಡಲು ತಾವಿಲ್ಲ. ನೋಡುತ್ತಾ ಹೋದಂತೆಲಾ ನಂಬರ್ ಪ್ಲೇಟಿನ ಮೇಲೆ ಬರೆದ ರಾಜ್ಯಗಳ ಹೆಸರುಗಳು ಕುತೂಹಲ ಕೆರಳಿಸಿದವು. ಗಾರ್ಡನ್ ಸ್ಟೇಟ್, ಎಂಪೈರ್ ಸ್ಟೇಟ್, ಗೋಲ್ಡನ್ ಸ್ಟೇಟ್, ಸಿಲ್ವರ್ ಸ್ಟೇಟ್, --ಕೊಪ್ಪರ್ ಸ್ಟೇಟ್, ಜೆಂ ಸ್ಟೇಟ್, ಕೌಬಾಯ್ ಸ್ಟೇಟ್ ಹೀಗೆ ಹತ್ತಾರು ಸ್ಟೇಟುಗಳ ಹೆಸರು ಹೊತ್ತ ಕಾರುಗಳು ಅಲ್ಲಿದ್ದವು. ಇವು ಯಾವ ದೇಶದಲ್ಲಿನ ರಾಜ್ಯಗಳಪ್ಪ ಎಂದು ಹುಬ್ಬು ಹಾರಿಸಬೇಡಿ. ಇವೆಲ್ಲ ಯು.ಎಸ್.ಎ.ನಲ್ಲಿನ ರಾಜ್ಯಗಳೇ. ನಮ್ಮೂರಲ್ಲಿ ಮನುಷ್ಯರಿಗೆ ಅಡ್ಡ ಹೆಸರು ಇರುವಂತೆ ಇಲ್ಲಿ ರಾಜ್ಯಗಳಿಗೆ. ಉದಾಹರಣೆಗೆ ನ್ಯೂ ಜರ್ಸಿ -ಗಾರ್ಡನ್ ಸ್ಟೇಟ್. ಅಲ್ಲಿ ಎಲ್ಲಿ ನೋಡಿದರೂ ಹಸಿರು. ನ್ಯೂಯಾರ್ಕ್- ಎಂಪೈರ್  ಸ್ಟೇಟ್ಜಗದ ವಾಣಿಜ್ಯ ಸಾಮ್ರಾಜ್ಯ  ಅದೇ ತಾನೇ. ಹೀಗೆ ಐವತ್ತು ರಾಜ್ಯಗಳಿಗೂ ಆ ರಾಜ್ಯದ ಹಿರಿಮೆಯನ್ನು ಸಾರುವ ಹೆಸರು ಇವೆ. ಬೆಳಗಿನ ನಡಿಗೆ ಮುಂದೂಡಿ ಕಾರುಗಳ ನಡುವೆ ಓಡಾಡುತ್ತ ಅವುಗಳ ಮೇಲೆ ಬರೆದಾದ ನುಡಿಗಟ್ಟುಗಳನ್ನೂ ಓದುತ್ತ ಹೋದಂತೆ. ಕೆಲವು ಕಡೆ ವಿಶೇಷ ವಾಕ್ಯಗಳಿದ್ದವು. `All for country country', ‘Live free or die`,  `Liberty for prosperity'.
ಆಗ  ನನಗೆ ಅವು ಏನು ಎಂದು ತಿಳಿಯಲಿಲ್ಲ. ನಂತರ ಗೊತ್ತಾಯಿತು ಪ್ರತಿಯೊಂದು ರಾಜ್ಯಕ್ಕೂ ಅದರದೇ ಅದ ಧ್ವಜ, ಗೀತೆ, ವಿಶೇಷ ನಾಮ ಮತ್ತು ಧ್ಯೇಯ ವಾಕ್ಯಗಳಿವೆ ಎಂದು. ನಮ್ಮಲ್ಲಿ ವಿಧಾನಸೌಧದ ಮೇಲೆ ಬರೆಸಿದ್ದರಲ್ಲ ಆ ತರಹ. ಅದರೆ ಇಲ್ಲಿ ಅವು ಕಡ್ಡಾಯವಾಗಿ ಬಳಸಲಾಗುತ್ತಿದೆ. ಇವು ಬರಿ ಇಂಗ್ಲಿಷ್ ನಲ್ಲಿ ಮಾತ್ರ ಇಲ್ಲ. ಸ್ಪ್ಯಾನಿಶ್, ಗ್ರೀಕ್, ಲ್ಯಾಟಿನ್, ಫ್ರೆಂಚ್ ಮತ್ತು ಮೂಲ ನಿವಾಸಿ ಇಂಡಿಯನ್ ಭಾಷೆಯಲ್ಲೂ ಇವೆ. ಇದು ವಲಸಿಗರ ದೇಶ. ಅಲ್ಲಿನ ಜನ ಹೆಚ್ಚಾಗಿ ಬಳಸುತಿದ್ದ, ಇಷ್ಟ ಪಟ್ಟ ಭಾಷೆ ಅಲ್ಲಿದೆ. ನ್ಯೂಯಾರ್ಕ್ ನ ಘೋಷ ವಾಕ್ಯ--`ಎಕ್ಸ್ಸೇಲ್ಸೋರ್` (Excelsior) ಎಂಬ ಲ್ಯಾಟಿನ್ ಪದ. ಅದರ ಅರ್ಥ "Ever Upwards" `ಸದಾ ಮೇಲ್ಮುಖ' ಎಂದು. ನ್ಯೂಯಾರ್ಕ್ ನ ಗಗನಚುಂಬಿ ಸೌಧಗಳನ್ನೂ ನೋಡಿದಾಗ ಎಷ್ಟು ಸಮರ್ಪಕ ಎನಿಸದಿರದು. ಅಲ್ಲದೇ, ನ್ಯೂಯಾರ್ಕ್ ನಗರಕ್ಕಂತೂ ನೂರಾರು ಅಡ್ಡ ಹೆಸರುಗಳು. 
ಕೆಲವು ರಾಜ್ಯಗಳ ಘೋಷವಾಕ್ಯಗಳಂತೂ ಕಾವ್ಯಮಯ, ಸ್ಪೂರ್ತಿದಾಯಕ. "(Manly deeds, womanly words," "I lead," "Eureka", "It grows as it goes'", "All for our country", "Live free or die" -ನುಡಿಗಟ್ಟುಗಳು ನಿಜಕ್ಕೂ ಚೇತೋಹಾರಿ. ಅಲ್ಲಿನ ಜನರ ಮನೋಭಾವದ ಪ್ರತಿಬಿಂಬ. 
ಈ ಅಡ್ಡ ಹೆಸರಿನ ಬಳಕೆ ಬರಿ ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ನಗರಕ್ಕೂ ಒಂದೋ ಎರಡೋ ನಿಕ್ ನೇಮ್. ಅವು ತುಂಬಾ ವಿಚಿತ್ರ ಎನಿಸಿಯಾವು. Biggest little town, Town too tough to die, City too busy to hate, Music city, Magic City, Salt City, Mile Long City, City of Angles, Apple city, Spanish Capital of the world, ಹನುಮನ ಬಾಲದಂತೆ ಬೆಳೆಯುತ್ತದೆ ಪಟ್ಟಿ. ಈ ಹೆಸರಿನ ಹಿಂದೆ ಹುಡುಕುತ್ತ ಹೊರಟರೆ ಭೌಗೋಳಿಕ, ಐತಿಹಾಸಿಕ, ಸಾಂಸ್ಕೃತಿಕ ವಿವರಗಳ ಸುರುಳಿ ಬಿಚ್ಚಿ ಕೊಳ್ಳುತ್ತದೆ. 
ಈ ನಿಕ್ ನೇಮ್ ಗಳ ದಾಳಿಯಿಂದ ಹೆಸರಾಂತ ವ್ಯಕ್ತಿಗಳು ಹೊರತಾಗಿಲ್ಲ. ಇವು ದೇಶದ ಪ್ರಥಮ ಪ್ರಜೆಯನ್ನು ಬಿಟ್ಟಿಲ್ಲ. ಇಂದಿನ ಅಧ್ಯಕ್ಷ ಬರಾಕ್ ಒಬಾಮ, ನೋ ಡ್ರಾಮಾ ಒಬಾಮ, ಹಿಂದಿನ ಅಧ್ಯಕ್ಷ ಬುಷ್- ದುಬ್ಯಾ, ಕ್ಲಿಂಟನ್- ಕಂ ಬ್ಯಾಕ್ ಕಿಡ್ಗೆರಾಲ್ಡ್ ಫೋರ್ಡ್- ಆಕ್ಸಿಡೆಂಟ್ ಪ್ರೆಸಿಡೆಂಟ್ಜಿಮ್ಮಿ ಕಾರ್ಟರ್- ಪೀ ನಟ್ ಪ್ರೆಸಿಡೆಂಟ್ಜಾರ್ಜ್ ವಾಶಿಂಗ್ ಟನ್- ಫಾದರ್ ಆಫ್ ಹಿಜ್ ಕಂಟ್ರಿ, ಥೋಮಸ್ ಜಫಾರ್ಸನ್- ಪೆನ್ ಆಫ್ ರೆವುಲುಶನ್, ಅಬ್ರಹಂ ಲಿಂಕನ್- ಲಿಬರೆಟರ್ಆನೆಸ್ಟ್ ಅಬೆ, ಜೇಮ್ಸ್ ಬುಕನಿನ್-  ಡು ನಥಿಂಗ್ ಪ್ರೆಸಿಡೆಂಟ್, ಕೆಲವು ಸಲ  ವ್ಯಂಗ್ಯವಾಗಿ ಬಹಳ ಸಲ ನೈಜವಾಗಿ ಅವರ ವ್ಯಕ್ತಿತ್ವ ಸಾಧನೆ ಸಾದರಪಡಿಸುತ್ತವೆ.
ಆಟಗಾರರ ನಿಕ್ ನೇಮ್ ಬಹು ಮಜಾ ನೀಡುತ್ತವೆ. ಗಾಲ್ಫ್ ಆಟಗಾರ ವುಡ್ಸ್ -ಟೈಗರ್, ಟೆನ್ನಿಸ್ ಪಟು, ಕೆನ್ ರೋಸ್ವೆಲ್- ಮಸಲ್,   ಅಂಡ್ರ್ಯೂ ಅಗಸ್ಸೇ -ಪಿಸ್ತುಲ್ ಪಿಟೇ, ಈ ರೀತಿ. ನಮ್ಮಲ್ಲೂ ಇದ್ದಾರಲ್ಲ ಬಂಗಾಳದ ಹುಲಿ, ನಜಮ್ ಗಡದ ನವಾಬ್, ಹರ್ಯಾಣ ಹರ್ರಿಕೆನ್, ಮಾಸ್ಟರ್ ಬ್ಲಾಸ್ಟರ್, ಲಿಟಲ್ ಮಾಸ್ಟರ್, ಮೂಗುತಿ ಸುಂದರಿ. 
ಅಮೇರಿಕಾದ ಕಾರಿನ ನಂಬರ್ ಪ್ಲೇಟುಗಳು ಒಡೆಯನ ವೈಯುಕ್ತಿಕ  ವರದ ಜೊತೆ ಜೊತೆ ಆ ಪ್ರದೇಶದ ಮಾಹಿತಿ ನೀಡುತ್ತದೆ. ನಮ್ಮಲ್ಲೂ ಆಟೋಗಳು ಸಂಸ್ಕೃತಿ, ಜ್ಞಾನ ಪ್ರಸಾರದ ಸಂಚಾರಿ ಕೇಂದ್ರಗಳಂತೆ ಕೆಲಸ ಮಾಡುತ್ತವೆಯಲ್ಲವೇ. -ದುರ್ಗದ ಹುಲಿ, ಮಂಡ್ಯದ ಗಂಡು, ಬಿಜಾಪುರ ಬಲಭೀಮ, ಆಟೋ ರಾಜ, ತಾಯಿ ಪ್ರೀತಿ, ತಂದೆ ಆಶೀರ್ವಾದ ಇತ್ಯಾದಿ ಇತ್ಯಾದಿ....