Saturday, July 27, 2013

ಆರರಿಂದ ಅರವತ್ತು- ನೀರಿಗಿಂತ ಸಾರೆ ಮುಖ್ಯೆ

ನೀರಿಗಿಂತ ಸಾರೆ ಮುಖ್ಯ(ಕಾರವಾರ)                                 
ನೀರು ಜೀವ ಜಲ.ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದು. ಪಂಚಭೂತಗಳಲ್ಲಿ ಇದು ಪ್ರಮುಖವಾದುದೂ ಅಹುದು.ಅದನ್ನು ದೇವರು ಎಂದೂ ಪರಿಗಣಿಸುವವರು ಇರುವರು. ಆದರೆ ದಿನ ನಿತ್ಯದ ಊಟಕ್ಕೆ ಮಾತ್ರ ಬರಿ ನೀರು ಸಾಲದು ಅದಕ್ಕೆ ಸಾರೆ ಬೇಕು. ಎರಡರ ನಡುವೆ ಆಯ್ಕೆ ಮಾಡಿಕೊಳ್ಳಲು ಹೇಳಿರೆ ಬಹುತೇಕರು ಸಾರೆ  ಸರಿ ಎನ್ನುವರು. ಅನೇಕ ಬಾರಿ ಸಾರು ನೀರಿನ ಮೇಲೆ  ಮೇಲುಗೈ ಸಾಧಿಸುವುದು. ಇದು ಸಹಜವೂ ಹೌದು.  .ಅದನ್ನು ಒತ್ತಿ ಹೇಳುವ ಅಗತ್ಯ ನನಗೆ ಕಾರವಾರದಲ್ಲಿನ ಅನುಭವದಿಂದ ಬಂದಿತು. ಸತ್ಯ, ನಿಷ್ಠೆ ವೃತ್ತಿ ಧರ್ಮ ಇವೆಲ್ಲವಕ್ಕೂ ಗೌರವ ಕೊಡಬೇಕಾದುದು ಅಗತ್ಯ. ಆದರೆ ಜಾತಿ, ಬಂಧುತ್ವ ಮತ್ತು ಲಾಭದ ಪ್ರಶ್ನೆ ಬಂದಾಗ ಎಲ್ಲವೂ ಗೌಣ. ಸಾರಿನ ರುಚಿಯ ಮುಂದೆ ಅದರಲ್ಲೂ ಮೀನಿನ ಸಾರಿನ ರುಚಿಯ ಮುಂದೆ ನೀರಿನ ನೆನಪು ಯಾರಿಗೆ ಬೇಕು. ಅದೆ ಗತಿ ತತ್ವ ಮತ್ತು ನಿಷ್ಠೆಗಳಿಗೆ             
ನಾನು ಕಾರವಾರದ ಹತ್ತಿರ ದ ಕಾಲೇಜಿಗೆ ವರ್ಗವಾಗಿ ಹೋದೆ. ಅಲ್ಲಿಯೇ ಮಗನೂ ದಿನಪತ್ರಿಕೆಯೊಂದರ ಜಿಲ್ಲಾಪ್ರತಿನಿಧಿ ಆಗ ಕಾರವಾರದಲ್ಲಿ ಯುವ ಪರ್ತಕರ್ತರ ತಂಡವೆ ಇತ್ತು. ಅವರೆಲ್ಲರಿಗೂ ನಾನು ಅಪ್ಪಾಜಿ. ಅಲ್ಲಿನ ಸ್ಥಳೀಯ ದಿನಪತ್ರಿಕೆಯ ಮಾಲಕ ಮತ್ತು ಸಂಪಾದಕ ಬಹು ಕಷ್ಟ ಪಟ್ಟು  ಮೇಲೆ ಬಂದವನು. ಕರಾವಳಿಯಲ್ಲಿ ಆ ಪತ್ರಿಕೆ ತನ್ನ ನಿರ್ಭೀತ ನಿಲುವಿನಿಂದ ಹೊಸ ಅಲೆಯನ್ನೆ ಹುಟ್ಟುಹಾಕಿತ್ತು.. ಅದರ  ಸಂಸ್ಥಾಪಕ   ಸಂಪಾದಕನಿಗೆ ನಾನು ಬಂದ ಹೊಸದರಲ್ಲಿ ನಡೆದ ಎಲ್ಲ ಘಟನೆಗಳ ಮಾಹಿತಿ ಇತ್ತು. ಉಪನಿರ್ದೇಶಕರ  ರಿಯಾಯತಿ ಅನುಕೂಲ ಪಡೆಯದ ನನ್ನ ಬಗೆಗೆ ವಿಭಿನ್ನ ರಾದರು ಎಂಬ ಗೌರವ ವ್ಯಕ್ತ ಪಡಿಸಿದ. ಅವನ ಶ್ರೀ ಮತಿಯೂ ಶಿಕ್ಷಕಳೆ. ಅವಳಿಗೆ ಆಗಾಗ ನಿನ್ನ ಶಾಲೆಗೂ ಇಂಥಹವರು ಬಂದರೆ ಗೊತ್ತಾಗುವುದು ಎಂದು ಛೇಡಿಸುವನು.ಅವರ ಪತ್ರಿಕೆಯ ಸಂಪಾದಕನಂತೂ ಬಹಳ ಬೇಕಾದವರು. ಸಜ್ಜನನಾದ ವ್ಯಕ್ತಿ.
ನಮ್ಮಕಾಲೇಜಿನಲ್ಲಿ ಇರುವ ಬಹುತೇಕರು ಮೊದಲೆ ತಿಳಿಸಿದಂತೆ ಒಂದೆ ಜನಾಂಗಕ್ಕೆ ಸೇರಿದವರು. ಅದರಲ್ಲೂ   ಅವರು ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತರಾದರೂ ಅಂಕೋಲ ಮತ್ತು ಕಾರವಾರ  ತಾಲೂಕಗಳಲ್ಲಿ ಪ್ರಬಲರು.ಬಹುತೇಕರು ಸುಶಿಕ್ಷಿತರು ಮತ್ತು ಸರಕಾರಿ ನೌಕರಿಯಲ್ಲಿರುವವರು. ಜತೆಗೆ ಹಿಂದೆ ಅವರು ಕಾದಾಡುವ ಕಲಿಗಳಾಗಿದ್ದರು ಎಂಬ ಪ್ರತೀತಿ. ಅದಕ್ಕೆ ತಕ್ಕಂತೆ ಈಗಲೂ ಮುನ್ನುಗ್ಗುವ ಸ್ವಭಾವ.. ತುಸು ದುಡುಕಿನವರಾದರೂ  ಅವರಲ್ಲಿ  ಒಗ್ಗಟ್ಟು ಬಹಳ.
ಕಾಲೇಜಿನಲ್ಲಿ ಹರತಾಳವಾದ ಮೇಲೆ ನಾನು ಪಾಠ ಮತ್ತು ಪ್ರವಚನಗಳ ಬಗ್ಗೆ ಕಾಳಜಿ ವಹಿಸಿದೆ.  ಪರಿಶೀಲನೆ ಮಾಡಿದಾಗ  ಒಬ್ಬಿಬ್ಬ ಉಪನ್ಯಾಸಕರು ಹಾಜರಿ ಸರಿಯಾಗಿ ಹಾಕುತಿಲ್ಲದಿರುವುದು ಕಂಡುಬಂದಿತು. ಇಂಗ್ಲಿಷ್ಉಪನ್ಯಾಸಕರಂತೂ ತಿಂಗಳು ಗಟ್ಟಲೆ ವಿದ್ಯಾರ್ಥಿಗಳ ಹಾಜರಿ ಹಾಕಿರಲಿಲ್ಲ. ಮಕ್ಕಳಿಗೆ ಪೂರ್ಣ ಸ್ವಾತಂತ್ರ ಕೊಟ್ಟಿದ್ದರು. ಅದರ ಪರಿಣಾಮವೆ ಅವರ ಅಪಾರ ಜನಪ್ರಿಯತೆ.. ಅವರಿಗೆ ಇನ್ನು ಮೇಲಾದರೂ ದಾಖಲೆಗಳನ್ನು ಸೂಕ್ತವಾಗಿ ನಿರ್ವಹಿಸಲು ಸೂಚಿಸಲಾಯಿತು. ಎಲ್ಲ ಶಿಕ್ಷಕರ ಸಭೆ ಕರೆದು ಪಾಠ ಪ್ರವಚನದ ದಾಖಲೆಗಳು ಮತ್ತು ಸಂಸ್ಥೆಯ ಶಾಂತಿ ಮತ್ತು ಸುವ್ಯವಸ್ಥೆಯ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಈ ಮೊದಲು ನಡೆದ ಘಟನೆಯ ಪುನರಾವರ್ತನೆ ಯಾಗದಿರಲು ಕ್ರಮತೆಗೆದುಕೊಳ್ಳ ಲಾಯಿತು. ಇದಾದ ಒಂದೆ ವಾರದಲ್ಲಿ ಉಪನಿರ್ದೇಶಕರು ಭೇಟಿ ನೀಡಿದರು. ಅವರಿಗೆ ದಾಖಲೆಗಳ ಪರಿಶೀಲನೆಯಿಂದ ಸತ್ಯ ಸಂಗತಿ ಗೊತ್ತಾಯಿತು. ಎಲ್ಲರಿಗೂ ಅಶಿಸ್ತಿಗೆ ಕಾರಣರಾದರೆ ಇಲಾಖೆಯ ಕ್ರಮಕ್ಕೆ ಗುರಿಯಾಗಬಹುದೆಂದು ಎಚ್ಚರಿಸಿದರು. ಅವರು ಕಾರವಾರಕ್ಕೆ ಹೋದ ಮೇಲೆ ಅಲ್ಲಿದ್ದ ಪತ್ರಕರ್ತರು ಕಾಲೇಜಿನಲ್ಲಾದ ಘಟನೆಯ ಬಗ್ಗೆ ಕೇಳಿದಾಗ ಅವರು ತಾವು ನೀಡಿದ ಭೇಟಿಯ ವರದಿಕೊಟ್ಟಾಗ ಮಾರನೆ ದಿನ ಪತ್ರಿಕೆಯಲ್ಲಿ ಉಪನ್ಯಾಸಕರೆ ಹೇಗೆ ಪ್ರಚೋದನೆ ನೀಡಿದರು ವಿದ್ಯಾರ್ಥಿಗಳ ಅಶಿಸ್ತಿಗೆ ಕಾರಣರಾದರು ಎಂದು ಅರ್ಥ ಬರುವ ವರದಿ ಪ್ರಕಟವಾಯಿತು.ಅದರ ಬಿಸಿ ವಿಶೇಷವಾಗಿ ಪುರುಷ ಉಪನ್ಯಾಸಕರ ಮೇಲಾಯಿತು. ಅವರನ್ನು ಪರಿಚಿತರೆಲ್ಲ ನೀವು ಕಾಲೇಜಿಗೆ ಹೋಗುವುದು ಪಾಠ ಮಾಡಲೋ ಇಲ್ಲವೆ  ಗಲಭೆ ಮಾಡಿಸಲೋ ಎಂದು ವಿಚಾರಿಸಿದಾಗ ತಲೆ ತಗ್ಗಿಸುವಂತಾಯಿತು.. ಅಂತೂ ಇಂತೂ ಶೈಕ್ಷಣಿಕ ವರ್ಷ ಮುಗಿಯುತ್ತ ಬಂದಿತು.ಪರೀಕ್ಷೆಯಲ್ಲಿ ಕೆಲವರು  ಚದುರಂಗ ಅಡುವುದು ಕಂಡುಬಂದಿತು. ಅದು ಕೂಡದು ಕೊಟ್ಟಡಿ ಮೇಲ್ವಿಚಾರಣೆ ಯನ್ನು ಗಂಭಿರವಾಗಿ ಪರಿಗಣಿಸಲು ತೀಳಿಸಿದೆ. ಆದೆ ಸಮಯದಲ್ಲಿ ಪರೀಕ್ಷೆ ನಡೆಯುವಾಗಲೆ ಉಪನ್ಯಾಸಕರೊಬ್ಬರು ಉಪಹಾರದ ವ್ಯವಸ್ಥೆ ಮಾಡಿದರು. ಪರೀಕ್ಷಾ ಸಮಯ ಮುಗಿದ ಮೇಲೆ ಮಾಡಬಹುದೆಂಬ ಸಲಹೆ ತಳ್ಳಿಹಾಕಿ ನಮ್ಮ ಮಕ್ಕಳು ನಕಲು ಮಾಡುವುದಿಲ್ಲ  ಅಲ್ಲದೆ ಇದು ಪಬ್ಲಿಕ್‌ ಪರೀಕ್ಷೆಯಲ್ಲ ಎಂದು ಉಡಾಫೆಯ ಮಾತು ಕೇಳಿಬಂತು. ಎಲ್ಲರೂ ಒಟ್ಟಿಗೆ ಕುಳಿತು ತಿನ್ನ ಬೇಡಿ ಎಂದು ಸೂಚಿಸಿ ನನ್ನ ಅಸಂತೋಷ ಸೂಚಿಸಲು ನಾನು ಭಾಗಿಯಾಗಲಿಲ್ಲ.. ಬಹುಶಃ ಇದೆ ಅವರ ಅಸಮಧಾನ ಹೆಚ್ಚಲು ಕಾರಣವಾಯಿತು. ಆ ಸಮಯದಲ್ಲಿನಾನು ತುಸು ತಾಳ್ಮೆಯಿಂದ ವರ್ತಿಸಿದ್ದರೆ ವಿಷಯ ದೀರ್ಘಕ್ಕೆ ಹೋಗುತ್ತಿರಲಿಲ್ಲ.
ಹೊಸ ವರ್ಷದ ತರಗತಿಪ್ರಾರಂಭ ವಾದವು. ಯಾಕೋ ಎಲ್ಲ ಸರಿಯಾಗಿಲ್ಲ ಎನಿಸಿತು. ಒಂದೆ ವಾರದಲ್ಲಿ ಇಂಗ್ಲಿಷ್  ಉಪನ್ಯಾಸಕರೊಗೆ  ಅವರಿಗೆ ಹತ್ತಿರವಿದ್ದ ನಗರದ ಕಾಲೇಜಿಗೆ ಪೂರ್ಣವಾಗಿ ನಿಯೋಜನೆಯಾಯಿತು..ಅವರಿಗೆ ಸಂಬಳ ಇಲ್ಲಿ ಕೆಲಸ ಅಲ್ಲಿ.ಉಪನಿರ್ದೇಶಕರನ್ನು ಸಂಪರ್ಕಿಸಿದಾಗ ಹೇಗಿದ್ದರೂ ಅವರು ಅಶಿಸ್ತಿಗೆ ಪ್ರಚೋದನೆ ಕೊಡುವವರು. ಅಲ್ಲದೆ ರಾಜಕೀಯ ಪ್ರಭಾವ ಬಂದಿದೆ. ಅಲ್ಲಿ ಉಪನ್ಯಾಸಕರ ಕೊರತೆ ಇದೆ. . ಹೇಗಿದ್ದರೂ ನಿಮ್ಮವಿಷಯ ಇಂಗ್ಲಿಷ್‌. ನೀವೆ ಪಾಠ ಮಾಡಿ ಎಂದರು.ಅವರನ್ನು ಬಿಡುಗಡೆ ಮಾಡಿ. ಅಲ್ಲಿ ಹೋಗಿ ವರದಿ ಮಾಡಿಕೊಳ್ಳಲಿ ಎಂದು ತಿಳಿಸಿದರು
 ನಾನು ಇದರಿಂದ ತೊಂರೆಯಾಗುವುದು  ದಯಮಾಡಿ ನಿಯೋಜನೆ ರದ್ದು ಮಾಡಿ ಎಂದು ಮನವಿ ಮಾಡಿದೆ..
ಆದೇಶವನ್ನು ಕಳುಹಿಸಿರುವೆ. ಮರು ಮಾತನಾಡದೆ  ಅದನ್ನು ಪಾಲಿಸಿ. ಇಲ್ಲವಾದರೆ ಕ್ರಮತೆಗೆದುಕೊಳ್ಳ ಬೇಕಾಗುವುದು. ಎಂದು ತುಸು ಗಡುಸಾಗಿಯೆ ಹೇಳಿ ಫೋನು  ಕಟ್‌ ಮಾಡಿದರು.
.ನಿಜ ನಾನು ಪಾಠ ಮಾಡುತಿದ್ದೆ. ಆಧರೆ ನಾನು ಅದೆ ತಾನೆ ಶಸ್ತ್ರ ಕ್ರಿಯೆಯಯಿಂದ ಚೇತರಿಸಿಕೊಂಡಿದ್ದೆ.ನನ್ನ ಆರೋಗ್ಯವೂ ಅಷ್ಟು ಚೆನ್ನಾಗಿರಲಿಲ್ಲ.   ಅಲ್ಲದೆ ಉಪನ್ಯಾಸಕರಿಗೆ ಪಾಠ ಕಲಿಸುವ ಹೆಸರಲ್ಲಿ ಅನುಕೂಲ ಮಾಡಿಕೊಟ್ಟದ್ದರು. ಇದರ ಹಿಂದಿನ ಕಾಣದ ಕೈನ ಕೆಲಸ ಗೊತ್ತಾಯಿತು. ಇದಲ್ಲದೆ ಸದಾ ನಯವಾಗಿ ಮಾತನಾಡುವ ಅವರು ಒರಟಾಗಿ ವರ್ತಿಸಿದುದರು ಹಿಂದೆ ಏನೋ ಕಾರಣವಿದೆ ಎನ್ನಿಸಿತು. ನಾನು ಅವರೊಂದಿಗೆ ಹೆಚ್ಚು ವಾದಿಸಲು ಹೋಗಲಿಲ್ಲ. ಆದರೆ ಬೆದರಿಕೆಗೆ ಜಗ್ಗುವ ಜಾಯಮಾನ  ನನ್ನದಲ್ಲ.
ತುಸು ಹೊತ್ತು ಯೋಚನೆ ಮಾಡಿದೆ. ಈ ಅನ್ಯಾಯಕ್ಕೆ ಮಣಿವ ಮಾತೆ ಇರಲಿಲ್ಲ. ಆದರೆ ಏನಾಗ ಬಹುದು. ರಜಾಮಂಜೂರು ಮಾಡಲಕ್ಕಿಲ್ಲ. ವೇತನ ಕೊಡದೆ ಇರಬಹುದು. ಅದಕ್ಕೆ ಸಿದ್ಧ ನಾದರೆ ಮುಗಿಯಿತು. ಅದಕ್ಕಿಂತ ಹೆಚ್ಚು ಏನಾಗಬಹುದು. ಆದರೆ ವಿದ್ಯಾರ್ಥಿಗಳಿಗೆ ನಾನು ಇದ್ಧ ಅನ್ಯಾಯವಾದರೂ ಸಹಿಸಿಕೊಂಡಿರುವುದು ಸ್ವಾಭಿಮಾನಕ್ಕೆ ಧಕ್ಕೆ ತರುವುದು. ಏನಾದರಾಗಲಿ ಧೈರ್ಯವಾಗಿ ಎದುರಿಸಬೇಕು ಎಂದು ನಿರ್ಧರಿಸಿದೆ.  ತಕ್ಷಣ    ಅಲ್ಲಿನ ಸರಕಾರಿ ಆಸ್ಪತ್ರೆಗೆ  ಹೋಗಿ ವೈದ್ಯರಿಂದ ನನ್ನ ಆರೋಗ್ಯ ಪರೀಕ್ಷಿಸಿಕೊಂಡೆ ನನಗೆ ವಿಶ್ರಾಂತಿ ಅಗತ್ಯವಿದೆ ಎಂದು ಪ್ರಮಾಣ ಪತ್ರ ಪಡೆದೆ. ಹೇಗಿದ್ದರೂ  ನನ್ನ ಖಾತೆಯಲ್ಲಿ ಸಾಕಷ್ಟು ರಜೆ ಇದ್ದವು.  ಒಂದು ವರ್ಷದಲ್ಲಿ ನಿವೃತ್ತಿ ಇತ್ತು.ಸದ್ಯಕ್ಕೆ ಮೂರುತಿಂಗಳ ರಜೆ ಅರ್ಜಿಯನ್ನು ಉಪನಿರ್ದೇಶಕರಿಗೆ ಕಳುಹಿಸಿದೆ. ಎರಡೆ ತಾಸಿನಲ್ಲೆ ಅವರಿಂದ ದೂರವಾಣಿ ಕರೆ ಬಂದಿತು. ತಕ್ಷಣವೆ ಅವರಲ್ಲಿಗೆ ಹೋಗಿ ಕಾಣಲು ಸೂಚಿಸಿದರು.ಅಂದು ಮಧ್ಯಾಹವೆ ಕಾಲೇಜಿನಿಂದ ಅವರ ಕಚೇರಿಗೆ ಹೋದೆ.. ಅವರು ಮುಖ ಕೆಂಪು ಮಾಡಿಕೊಂಡು ಕೂತಿದ್ದರು. ಏನು ಪ್ರಿನ್ಸಿಪಾಲರೆ ರಜೆಗೆ  ಅರ್ಜಿ ಹಾಕಿದ್ದೀರಿ, ಎಂದು ಗಡುಸಾಗಿ ಕೇಳಿದರು .
 ಹೌದು ಸಾರ್‌ ನನಗೆ ತೃಪ್ತಿಕರವಾಗಿ  ಎರಡು ತರಗತಿಗಳಿಗೆ ಪಾಠ ಮಾಡಿ ಕಾಲೇಜಿನ ಕೆಲಸ ನಿರ್ವಹಿಸಲು ಆಗದು. ಅದಕ್ಕೆ ಅನಾರೋಗ್ಯವಿದೆ. ಅದಕ್ಕೆ ರಜೆ ಹಾಕಿರುವೆ. ಎಂದೆ.
 ನೀವು ರಜೆ ಅರ್ಜಿ ಕೊಟ್ಟಾಕ್ಷಣ  ಆಗದು  ನಾನು ರಜೆ ಮಂಜೂರು ಮಾಡುವುದಿಲ್ಲ , ಎಂದು ಹೇಳಿದರು. ಅದು ನಿಮಗೆ ಬಿಟ್ಟದ್ದು. ಅಗತ್ಯ ಬಿದ್ದರೆ  ನಿರ್ದೇಶಕರನ್ನು ಸಂಪರ್ಕಿಸುವೆ, .ಏನೆ ಆದರೂ ಕಾಟಾಚಾರಕ್ಕೆ ಕೆಲಸ ಮಾಡುವುದು ನನಗೆ ಆಗದು .ಎಂದೆ.
ಅವರು ಪ್ರಿನ್ಸಿಪಾಲರೆ ನೀವು ಅನುಭವಸ್ಥರು ನನಗಿರುವ ಒತ್ತಡ ಅರ್ಥ ಮಾಡಿಕೊಳ್ಳಿ. ಅವರಿಗೆ ಸ್ಥಳೀಯ ಶಾಸಕರ ಬೆಂಬಲವಿದೆ.ನನ್ನ ಕೈ ಕಟ್ಟಿ ಹಾಕಿರುವುರು. ಅವರನ್ನು ಬಿಡುಗಡೆ ಮಾಡಲೆ ಬೇಕು  ನೀವೆ ಹೇಗಾದರೂ ಈ ಕಗ್ಗಂಟು ಬಿಡಿಸಿ ಎಂದರು.
 ನಾನು ತುಸು ಯೋಚನೆಗೆ ಈಡಾದೆ. ನಾನು ರಜಾ ಹಾಕಿದ ಮೇಲೆ ನೀವೆ  ಬಿಡುಗಡೆ ಮಾಡಿಸಬಹುದು. ಎಂದೆ.
ಆಗ ನಾನು ಇರುವುದಿಲ್ಲ. ಇಂಗ್ಲಿಷ್‌ ಪಾಠ ಮಾಡಲು ಇರುವವರನ್ನು ಬೇರೆ ಕಡೆ ಕಳುಹಿಸಿದರೆ ಜನ ಗಲಾಟೆ ಮಾಡುವರು.ಅದನ್ನು ಸಮರ್ಥಿಸಿಕೊಳ್ಳಲು ಆಗುವುದಿಲ್ಲ. ಎಂದರು
ಸಾರ್  ಹಾಗಿದ್ದರೆ ಒಂದು ಪರಿಹಾರವಿದೆ. ಸದರಿ ಉಪನ್ಯಾಸಕರನ್ನು ವಾರದಲ್ಲಿ ಮೂರುದಿನ ಮಾತ್ರ ನಿಯೋಜನೆ ಮಾಡಿ ಆದೇಶ ಹೊರಡಿಸಿ. ಇಲ್ಲಿ ಮೂರುದಿನ ಪಾಠ ಮಾಡಲಿ. ಇನ್ನುಳಿದ ದಿನ ಹೇಗೋ ಒಂದು ವ್ಯವಸ್ಥೆ ಮಾಡಬಹುದು. ಅದಕ್ಕೆ ನೀವು ಒಪ್ಪಿದರೆ ರಜೆಯ ಮೇಲೆ ಹೋಗದೆ ಕೆಲಸ ನಿರ್ವಹಿಸುವೆ.ಅವರ ಮಾತಿಗೂ ಬೆಲೆ ಕೊಟ್ಟ ಹಾಗಾಗುವುದು. ಜತೆಗೆ ಇಲ್ಲಿನ  ವಿದ್ಯಾರ್ಥಿಗಳಿಗೆ ತೊಂದರೆಯೂ ಆಗದು ಎಂದೆ.
ಅವರು ತುಸು ಯೋಚಿಸಿ  ಗುಮಾಸ್ತರನ್ನು ಕರೆದು ಮಾರ್ಪಡಿಸಿದ ಆದೇಶವನ್ನು ಹೊರಡಿಸಿ ಪ್ರತಿಯನ್ನುನನ್ನ  ಕೈನಲ್ಲಿ ಯೆ ಕೊಟ್ಟು  ಆ ಉಪನ್ಯಾಸಕರನ್ನು ಬಿಡುಗಡೆ ಮಾಡಲು ತಿಳಿಸಿದರು. ನನ್ನ ರಜಾ ಅರ್ಜಿ ವಾಪಸ್ಸು ಕೊಟ್ಟರು.
ಮರುದಿನ ಬಂದು ಮರು ಅದೇಶದ ಮೇರೆಗ ವಾರದಲ್ಲಿ ಮೂರುದಿನ  ಮಾತ್ರ ಅವರ ಊರಿನ ಹತ್ತಿರವೆ ಇರುವ ಕಾಲೇಜಿನಲ್ಲಿ ಕೆಲಸ ಮಾಡಿ . ಇಲ್ಲಿ ಇರುವ ಮೂರುದಿನದಲ್ಲೆ ಪಾಠಪ್ರವಚನಗಳನ್ನು ಕ್ರಮವಾಗಿ ಮಾಡಿ ಮುಗಿಸಲು ಅವರಿಗೆ ಸೂಚನೆ ನೀಡಿ ಬಿಡುಗಡೆ ಮಾಡಿದೆ.. ಅವರಿಗೆ ಇದರಿಂದ  ವಾರಪೂರ್ತಿ ೧೬ ತಾಸುಗಳ ಕೆಲಸದ ಹೊರೆ ಬಿದ್ದಿತು. ಮೊದಲು ಇಲ್ಲಿ ಮಾತ್ರ ವಾರಕ್ಕೆ ಎಂಟು ಗಂಟೆ ಕೆಲಸ ಮಾಡಿ ಆರಾಮಾಗಿದ್ದ ಅವರು ನನಗೆ ಪಾಠ ಕಲಿಸಲು ಹೋಗಿ ಹೆಚ್ಚಿನ  ಪರಿಶ್ರಮ ಪಡಬೇಕಾಯಿತು.
ಅಷ್ಟು ಹೊತ್ತಿಗೆ ನನ್ಮ ಮಗನಿಗೆ ಬೆಂಗಳುರಿಗೆ ವರ್ಗ ವಾಗಿತ್ತು. ನಾನೊಬ್ಬನೆ ಕರವಾರದಲ್ಲಿದ್ದೆ.  ದೀರ್ಘವಾದ ವಾರಾಂತ್ಯದಲ್ಲಿ ಬೆಂಗಳೂರಿಗೆ ಭೇಟಿಕೊಟ್ಟಿದ್ದೆ. ಜತೆಯಲ್ಲೆ ಕರಾವಳಿ ಪತ್ರಿಕೆಯ ಸಂಪಾದಕೃಉ ಬಂದಿದ್ದರು. ಮುಂಜಾನೆ ತಿಂಡಿತಿನ್ನುತ್ತಾ ಕುಳಿತಾಗ ಕಾರವಾರದಿಂದ ಫೋನು ಬಂದಿತು . ಅಂದು ಬೆಳಗಿನ ಪತ್ರಿಕೆಯಲ್ಲಿ ನನ್ನ ಬಗ್ಗೆ ಸತ್ಯದೂರವಾದ ಆಪಾದನೆಗಳಿಂದ ಕೂಡಿದ ವರದಿ ಪ್ರಕಟವಾಗಿತ್ತು. ನನಗೆ ಆಶ್ಚರ್ಯ, ಸಂಪಾದಕರು ಜತೆಯಲ್ಲೆ ಇದ್ದಾರೆ..” ಪ್ರಿನ್ಸಿಪಲ್ದ ಪ್ರಿನ್ಸಿಪಾಲರ ಕಾರ್ಯ ವೈಖರಿ “ ಎಂಬ ಶೀರ್ಷಿಕೆಯ ಅಡಿಯಲ್ಲಿ ಅನೇಕ ಆರೋಪಗಳನ್ನು ಹೊರಿಸಲಾಗಿತ್ತು. ಪಕ್ಕದಲ್ಲೆ ಕುಳಿತಿದ್ದ ಸಂಪಾದಕರಿಗೆ ಅಚ್ಚರಿ. ಹಿಂದಿನ ದಿನ ಬೆಂಗಳೂರಿಗೆ ಹೊರಟಾಗ ಇದರ ವಾಸನೆಯೆ ಅವರಿಗೆ ಇರಲಿಲ್ಲ. ಮಾಲಕ ಮತ್ತು ಕಾರ್ಯನಿರ್ವಾಹ ಸಂಪಾದಕರು ಅವರ ಗೈರು ಹಾಜರಿಯಲ್ಲಿ ಮತ್ತು ನಾನು ಊರಲ್ಲಿಇಲ್ಲದಾಗ ಮಾನ ಹಾನಿಕರ ವರದಿ ಪ್ರಕಟಿಸಿದ್ದರು.
ತಕ್ಷಣ ಕಾರವಾರಕ್ಕೆ  ವಾಪಸ್ಸುಹೊರಟೆ. ಅಲ್ಲಿ ಪತ್ರಿಕೆ ನೋಡಿದೆ. ಮುಖ್ಯವಾಗಿ ಕೆಲವು ಉಪನ್ಯಾಸಕರಿಗೆ ಕಿರುಕುಳ ಕುರಿತು ಬರೆಯಲಾಗಿತ್ತು ಜತೆಯಲ್ಲಿ ಅಲ್ಲಿ ಹೊಸದಾಗಿ ವರ್ಗ ವಾಗಿ ಬಂದ ಅನ್ಯ ಜಿಲ್ಲೆಯ ಶಿಕ್ಷಕಿಯರೊಂದಿಗೆ ಸಂಬಂಧ ಹೊಂದಿರುವದರಿಂದ ಅವರಿಗೆ ಹೆಚ್ಚಿನ ಸೌಲಭ್ಯ ನೀಡಿರುವುದಾಗಿ ತಿಳಿಸಿದ್ದರು. ಮುಗುಮ್ಮಾಗಿ ಹಣಕಾಸಿನ ದುರ್ಬಳಕೆಯ ಆರೋಪ ಮಾಡಲಾಗಿತ್ತು.
 ಅದೆ ದಿನ ಉಪನಿರ್ದೇಶಕರ ಕಚೇರಿಗೆ ಹೋದೆ. ಅವರು ಇದರಿಂದ ತುಸು ವಿಚಲಿತರಾದಂತೆ ಕಂಡಿತು. ಅವರ ವಿರುದ್ಧವೂ ಬರೆಯಲಾಗಿತ್ತಂತೆ. ನಾನೆ ಬಂದು ತಪಾಸಣೆ ಮಾಡಿರುವೆ. ಎಲ್ಲ ಸರಿಯಾಗೆ ಇದೆ. ಏನೂ ಆರೋಪ ಮಾಡಲಾಗದಿರುವಾಗ ಚಾರಿತ್ರ್ಯ ವಧೆ ಮಾಡುವರು. ನಾನು ಸತ್ಯ ಸಂಗತಿಯನ್ನು ಸರಕಾರಕ್ಕೆ ವರದಿ ಮಾಡುವೆ. ನೀವು ಚಿಂತಿಸಬೇಡಿ , ಎಂದು ಧೈರ್ಯ ಹೇಳಿದರು.ನಿಮ್ಮಲ್ಲಿರುವ ಒಂದುವರ್ಗದ ಉಪನ್ಯಾಸಕರ ಕುಲಬಾಂಧವರದು ಈ ಪತ್ರಿಕೆ . ಅವರ ಹಿತಾಸಕ್ತಿ ಕಾಪಾಡುವ  ಪ್ರಯತ್ನವೆ ಇದು. ಇದುವರೆಗ ನಿಮ್ಮ  ಅಭಿಮಾನಿಯಾಗಿದ್ದ ವ್ಯಕ್ತಿ ಈಗ ಧ್ವನಿ ಬದಲಾಯಿಸಲು ಕಾರಣ ಅವರ ಜಾತಿ ಬಾಂಧವರ ಒತ್ತಡವೆ ಆಗಿದೆ. ನೀವು ಅವರ ಮೇಲೆ ಮಾನ ಹಾನಿ ಮೊಕದ್ದಮೆ ಹೂಡಿ .ಹಾಗೆಯೆ ಬಿಡಬಾರದು ಎಂದು ಸಲಹೆ ನೀಡಿದರು . ನಾನ ಅದನ್ನು ಪರಿಶೀಲಿಸಿದೆ. ನಾನು ಮೊಕದ್ದಮೆ ಹೂಡಿದರೆ ಅದು ಅವರಿಗೆ ಹೊಸದೇನು ಅಲ್ಲ.  ಈ ತರಹೆಯ ಹತ್ತಾರು ಈಗಾಗಲೆ ಇವೆ. ಅವುಗಳ ಜೊತೆ ಇದೂ ಒಂದು. ಮೇಲಾಗಿ ಸ್ಥಳೀಯ. .ನಾಲ್ಕಾರುವರ್ಷ ಕೋರ್ಟಿಗೆ ಅಲೆದಾಡಿ ನಂತರ ಕ್ಷಮೆ ಕೇಳುವನು.ಅಲ್ಲಿಗೆ ಪ್ರಕರಣ ಮುಕ್ತಾಯವಾಗುವುದು. ಸುಮ್ಮನೆ ನನ್ನ ಸಮಯ  ಹಾಳುಆಗುವುದು. ಆದರೆ ನಾನು ಅನವಶ್ಯಕವಾಗಿ ಇಲ್ಲದ ಪ್ರಾಮುಖ್ಯತೆಯನ್ನು ಕೊಟ್ಟಹಾಗಾಗುವುದು. ಆಹಾಳು. ಅದರಿಂದ  ಅದನ್ನು ನಿರ್ಲಕ್ಷಿಸಲು ನಿರ್ಧರಿಸಿದೆ.ನನ್ನ ಕೆಲಸವನ್ನೂ ನಾನು ಎಂದಿನಂತೆಯೆ ನಿರ್ವಹಿಸಲು ಮುಂದಾದೆ.
 ಆದರೆ ಒಂದು ಅನುಕೂಲವಾಯಿತು ಅಭಿವೃದ್ಧಿ ಸಮಿತಿಯರು ಬೆಂಬಲಕ್ಕೆ ನಿಂತರು. ನಿರ್ಧಿಷ್ಟ ಕೋಮಿನರ ವಿರುದ್ಧ ಉಳಿದವರು ಒಂದಾಗಿ ಬಂದು ಬೆಂಬಲ ಸೂಚಿಸಿದರು. ಅವರಲ್ಲೂ  ಕೆಲವರು ಏನೂ ಅರಿಯದ ಮಳ್ಳಿಯ ತರಹ ಸಾರ್‌ ಹೀಗೆ ಬರೆಯಬರದಿತ್ತು ಎಂದು ಸಹಾನುಭೂತಿ ಸೂಚಿಸಿದರು.

 ನಾನು ಅವರ ಪತ್ರಿಕೆ ಅವರ ಮರ್ಜಿ. ಅದನ್ನು ಬೇಡ ಎನ್ನಲು ನಾವು ಯಾರು. ಸ್ವಾತಂತ್ರ್ಯವಿದೆ. ಓದುವವರಿಗೆ ನಿಜ ಗೊತ್ತೆ ಇದೆ. ಚಿಂತೆ ಮಾಡುವ ಅಗತ್ಯವೆ ಇಲ್ಲ ಎಂದೆ. ಬಹು ದಪ್ಪ ಚರ್ಮದ ಆಸಾಮಿ ಎಂದುಕೊಂಡರು. ಅದರ ಪರಿಣಾಮ ಏನೂ ಆಗಲಿಲ್ಲ. ಆದರೆ ಒಂದು ಮಾತ್ರ ಖಚಿತವಾಯಿತು. ಸತ್ಯ ,ಧರ್ಮ,  ತತ್ವ ಮಾತಿಗೆ ಮಾತ್ರ. ದಿನ ನಿತ್ಯದ ಬದುಕಿಗೆ ಜಾತಿ, ಪಂಗಡ , ಹಿತಾಸಕ್ತಿಯೆ ಅಗತ್ಯ. ಅದಕ್ಕೆ ಅಲ್ಲವೆ   ನೀರಿಗಿಂತ ಸಾರು ರುಚಿಯಾಗಿರುವುದು.

Friday, July 19, 2013

ಡಾ.ಕೆ.ವಿ. ರಮೇಶ್‌- ನುಡಿ ನಮನ


ಪುರಾತತ್ತ್ವ  ಪರಿಣಿತ -ಡಾ.ಕೆ.ವಿ. ರಮೇಶ್‌




http://kendasampige.com/images/trans.gif
ಭಾರತದ ಇತಿಹಾಸ ಮತ್ತು ಪುರಾತತ್ತ್ವವ ರಂಗದಲ್ಲಿನ ಹಿರಿಯ ಚೇತನ ಡಾ. ಕೆ.ವಿ ರಮೇಶ್ ಅತ್ಯಂತ ಶ್ರೇಷ್ಠ ಶಾಸನ ಸಂಶೋಧಕಇತಿಹಾಸ ತಜ್ಞಸಂಸ್ಕೃತ ವಿದ್ವಾಂಸಲಿಪಿಶಾಸ್ತ್ರಜ್ಞ ಮಾತ್ರವಲ್ಲ ನಾಣ್ಯಶಾಸ್ತ್ರಮತ್ತು ಭಾಷಾತಜ್ಞರೂ ಆಗಿದ್ದರು. ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸದಾ ಹಸಿರಾಗಿರಲು ಎರಡು ಮಹತ್ವದ ಕಾರಣಗಳಿವೆ. ಮೊದಲನೆಯದೆಂದರೆ ಕರ್ನಾಟಕದಲ್ಲಿ ಹಲವಾರು ಅಶೋಕನ ಶಾಸನಗಳು ದೊರೆತಿದ್ದರೂ ಸನ್ನತಿಯಲ್ಲಿನ ಶಾಸನಗಳ ಜತೆಗೆ ಅಲ್ಲಿ ಕ್ರಿ.ಪೂ. ೩ನೇ ಶತಮಾನದ ಬೌದ್ಧ ಸ್ತೂಪದ ಅವಶೇಷಗಳ ಪತ್ತೆಗೆ ನಾಂದಿ ಹಾಡಿದ ಹೆಗ್ಗಳಿಕೆ ಅವರದ್ದು. ಅಲ್ಲದೇ ಅತ್ಯಂತ ಸೂಕ್ಷ್ಮವಾದ ಮತ್ತು ವಿವಾದಾಸ್ಪದವಾದ ಬಾಬ್ರಿಮಸೀದಿ ಮೊಕದ್ದಮೆಯಲ್ಲಿ ಅವರು ಕಟ್ಟಡ ಸಂರಚನೆಯ ಬಗೆಗೆ ನೀಡಿದ ಮೌಲಿಕ ಅಭಿಪ್ರಾಯ ಎರಡನೆಯದು.


ಡಾ.ಕೆ.ವಿ. ರಮೇಶ್‌ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮನೆತನದವರು. ಹುಟ್ಟಿದ್ದು ಕೇರಳದಲ್ಲಿ. ಜನನ ೧೯೩೫ ರ ಜೂನ್‌ ೮ ರಂದು. ತಂದೆ ಕೋಳುವೈಯಲ್‌ ವ್ಯಾಸರಾಯ ಶಾಸ್ತ್ರಿ. ಅವರು ಮದ್ರಾಸ್‌ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ಹಾಗಾಗಿ ಬೆಳೆದದ್ದುಓದಿದ್ದು ಮದ್ರಾಸಿನಲ್ಲಿಯೇ. ಮನೆಯಲ್ಲಿ ಸುಸಂಸ್ಕೃತ ವಾತಾವರಣ. ಬಾಲ್ಯದಲ್ಲಿಯೇ ಕನ್ನಡತಮಿಳು,ತೆಲುಗುಮಲೆಯಾಳಂಗಳ ಸಂಪರ್ಕ. ತಂದೆಯಪ್ರಭಾವದಿಂದ ಸಹಜವಾಗಿ ಸಂಸ್ಕೃತ ಹತ್ತಿರವಾಯಿತು. ಅವರು ತಮ್ಮ ಸ್ನಾತಕೋತ್ತರ ಪದವಿಯನ್ನೂ ಸಂಸ್ಕೃತದಲ್ಲಿಯೇ ಸುವರ್ಣ ಪದಕ ಸಮೇತ ಪಡೆದರು . ಶಿಕ್ಷಣ ಮುಗಿದೊಡನೆಯೇ ೧೯೫೬ ರಲ್ಲಿ ಉದ್ಯೋಗವೂ ಸಿಕ್ಕಿತು. ಉದಕಮಂಡಲದಲ್ಲಿದ್ದ ಭಾರತೀಯ ಪುರಾತತ್ತ್ವ ಇಲಾಖೆಯಲ್ಲಿ ಶಾಸನ ಸಂಶೋಧನಾ ವಿಭಾಗದಲ್ಲಿ ಸಹಾಯಕ ಲಿಪಿಶಾಸ್ತ್ರಜ್ಞರಾಗಿ ನೇಮಕಾತಿ ಆಯಿತು.. ಅಲ್ಲಿಂದ ಅವರ ಸಾರಸ್ವತ ಯಾತ್ರೆ ಪ್ರಾರಂಭವಾಯಿತು. ಉದಕಮಂಡಲದ ಪರಿಸರ ಅವರ ಪ್ರತಿಭೆಗೆ ಪುಟ ಕೊಟ್ಟಿತು. ಅಲ್ಲಿ ದೇಶದ ವಿವಿಧ ಬಾಗಗಳಿಂದ ಬಂದ ವಿದ್ವಾಂಸರ ಒಡನಾಟ. ಎಷ್ಟು ಓದಿದರೂ ಮುಗಿಯದ ಶಾಸನಗಳ ಸಂಗ್ರಹವಿವಿಧ ಭಾಷಾತಜ್ಞರ ಒಡನಾಟ ಹಿರಿಯ ವಿದ್ವಾಂಸರ ಪ್ರೋತ್ಸಾಹ ಮತ್ತು ಬೆಂಬಲ ದಿಂದ ಅವರು ಬಹು ಬೇಗನೇ ಲಿಪಿಶಾಸ್ತ್ರದಲ್ಲಿ ನಿಷ್ಣಾತರಾದರು. ಜೊತೆಗೆಅವರಿಗಿದ್ದ ಬಹುಭಾಷಾಜ್ಞಾನ ಅಲ್ಲಿ ಬಹಳ ಉಪಯೋಗಕ್ಕೆ ಬಂದಿತು. ಅವರಿಗೆ ವೃತ್ತಿ ಮತ್ತು ಪ್ರವೃತ್ತಿ ಒಂದಾದವು. ಗಳಿಕೆ ಮತ್ತು ಕಲಿಕೆ ಪರಸ್ಪರ ಪೂರಕವಾದವು. ಸಹಜವಾಗಿ ಜ್ಞಾನಭಂಡಾರ ಹೆಚ್ಚಿತು. ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಡಾ. ಜಿ.ಎಸ್ ದೀಕ್ಷಿತರ ಮಾರ್ಗದರ್ಶನದಲ್ಲಿ ೧೯೬೫ ರಲ್ಲಿ ಪಿಎಚ್‌.ಡಿ ಪದವಿ ಪಡೆದರು. ಅವರು ಪರಿಣಿತಿಯಿಂದಾಗಿ ಇಂಡೊ-ಜಪಾನು ತಂಡದ ಎಂಟು ಅನ್ವೇಷಕರಲ್ಲಿ ಒಬ್ಬರಾಗಿ ಸೇವೆಸಲ್ಲಿಸಿ ಪುರಾತತ್ತ್ವ ಮತ್ತು ಭೌಗೋಳಿಕ ಅನ್ವೇಷಣೆ ಮಾಡಿದರು. ಅಲ್ಲಿ ಅನೇಕ ಐತಿಹಾಸಿಕ ನಿವೇಶನಗಳ ಭೇಟಿ ನೀಡಿ ಶಾಸನಗಳ ಪ್ರತಿ ಮಾಡಿದರು. ಅವರ ಶಾಸನ ಕೃಷಿಯು ನಿರಂತರವಾಗಿ ೧೯೯೩ ವರ್ಷಗಳವರೆಗ ನಡೆಯಿತು ಅಂದರೆ ಅಖಂಡ ೪೩ ವರ್ಷಗಳ ಸೇವೆಯಲ್ಲಿ ಹಂತ ಹಂತವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರು ಮುಖ್ಯ ಲಿಪಿತಜ್ಞ, ,ಡೈರೆಕ್ಟರ್ ಅಫ್ ಎಪಿಗ್ರಫಿ ಹುದ್ದೆಯನ್ನು ಅಲಂಕರಿಸಿದ್ದರು. ಅಂತಿಮವಾಗಿ ಭಾರತೀಯ ಪುರಾತ್ತತ್ವ ಸರ್ವೇಕ್ಷಣದಲ್ಲಿ ಎರಡನೆಯ ಅತ್ಯುನ್ನತ ಸ್ಥಾನವಾದ ಜಾಯಿಂಟ್‌ ಡೈರೆಕ್ಟರ್‌ಅಫ್ ಆರ್ಕಿಯಾಲಜಿ ಎಂಬ ಸ್ಥಾನವನ್ನು ಅಲಂಕರಿಸಿದ್ದರು.


ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿಯ ಅಶೋಕನ ಶಿಲಾಶಾಸಗಳ ಮತ್ತು ಅಲ್ಲಿನ ಸ್ತೂಪಗಳ ಅವಶೇಷಗಳ ಮಹತ್ವ ಪೂರ್ಣ ಅಧ್ಯಯನ ಹಾಗೂ . ಅವುಗಳು ಕರ್ನಾಟಕದಲ್ಲಿ ದೊರೆತ ಇತರೆ ಅಶೋಕನ ಶಾಶನಗಳಿಗಿಂತ ಹೇಗೆ ಭಿನ್ನವಾಗಿವೆ ಎಂದು ತೋರಿಸಿರುವುದು.ಚಂದ್ರಲಾಂಬ ದೇವಸ್ಥಾನದಲ್ಲಿರುವ ಕಾಳಿಕಾದೇವಿ ಗುಡಿಯ ಮೇಲ್ಛಾವಣೆ ೧೯೮೬ ರಲ್ಲಿ ಕುಸಿಯಿತು. ಅದರೊಡನೆ ವಿಗ್ರಹವೂ ನಾಶವಾಯಿತು. ಅಲ್ಲಿ ಉತ್ಖನನ ಮಾಡಿದಾಗ ಅಡಿಪಾಯದಲ್ಲಿ ನಾಲ್ಕು ಅಶೋಕನ ಶಾಸನಗಳು ಕಂಡವು. ಒಂದು ಶಾಸನವನ್ನೇ ದೇವಿಯ ವಿಗ್ರಹದ ಪೀಠವಾಗಿ ಬಳಸಲಾಗಿತ್ತು.ಅಲ್ಲಿ ದೊರೆತಿರುವ ಟೆರ್ರಕೋಟ,ವಸ್ತುಗಳು ಮತ್ತು ಸುಣ್ಣದ ಕಲ್ಲಿನ ಫಲಕಗಳಿಂದಅವು ನಾಶವಾದ ಮಹಾಸ್ತೂಪದ ( ಅಧೋಲೋಕ ಮಹಾಚೈತ್ಯ) ದ ಭಾಗಗಳೆಂದು ಗುರುತಿಸಲಾಯಿತು. ಅಷ್ಟೇಅಲ್ಲ ಅದರಿಂದ ಅದು ೨೧೦ ಎಕರೆ ವ್ಯಾಪ್ತಿಯ ಕೋಟೆಯಿದ್ದ ರಣಮಂಡಲ ಎಂಬ ಬೌದ್ಧ ವಸತಿ ಪ್ರದೇಶವಾಗಿತ್ತು ಎಂದು ಖಚಿತಪಡಿಸಿದರು. ಅಲ್ಲಿ ಶಾತವಾಹನ ಮತ್ತು ರೋಮನ್‌ ಕಾಲದ ಕರಿ ಶಿಲಾಫಲಕಗಳು ಮತ್ತು ಟೆರ್ರಿಕೋಟಾ ತುಣಕುಗಳು ದೊರೆತಿವೆ. ಆ ಮಹಾಬೌದ್ಧನಿವೇಶನದಲ್ಲಿ. ಇದುವರೆಗ ಕೇವಲ ೨.೫ ಎಕರೆ ಪ್ರದೇಶದ ಉತ್ಖನನ ಮಾತ್ರ ನಡೆದಿದೆ. ಇನ್ನೂ ನಡೆಸಬೇಕಾದ ಸಂಶೋಧನೆ ಮತ್ತು ಭೂಶೋಧನೆ ಬಹಳಷ್ಟಿದೆ. ಈ ಬೌದ್ಧ ನಿವೇಶನದ ಅನ್ವೇಷಣ ಕಾರ್ಯ ಡಾ.ಕೆ.ವಿ. ರಮೇಶ ಅವರ ಕಾಲಾವಧಿಯಲ್ಲಿ ಮೊದಲು ನಡೆಯಿತು. ಅಲ್ಲಿ ಅಶೋಕ ಸಾಮ್ರಾಟ ಸಿಂಹಾಸನದ ಮೇಲೆ ಕುಳಿತಿರುವ ಚಿತ್ರವಿರವ ಶಾಸದ ಏಕೈಕ ಉದಾಹರಣೆ ಇಲ್ಲಿ ಸಿಕ್ಕಿದೆ.


ಅವರಿಗೆ ವೃತ್ತಿಯಿಂದ ನಿವೃತ್ತಿಯಾಯಿತೇ ಹೊರತು ಪ್ರವೃತ್ತಿಯಿಂದ ಅಲ್ಲ. ದೆಹಲಿಯ ಪುರಾತತ್ತ್ವ ಇಲಾಖೆಯಿಂದ ನಿವೃತ್ತರಾದ ತಕ್ಷಣವೆ ಮೈಸೂರಿನಲ್ಲಿ ಕೆಲಸ ಮುಂದುವರಿಸಿದರು. ಓರಿಯಂಟಲ್ ರಿಸರ್ಚ ಇನಸ್ಟಿಟ್ಯೂಟಿನ ನಿರ್ದೇಶಕರಾಗಿ ಹೊಸ ಹುದ್ದೆ ವಹಿಸಿಕೊಂಡರು. ಹೊಸ ಹೊಣೆಯನ್ನು ೮ ವರ್ಷ ನಿರ್ವಹಿಸದರು. ಅಲ್ಲಿ ಸಮಶೋಧನಾ ಕಾರ್ಯ ರಭಸವಾಗಿ ಸಾಗಿತು. ಈ ಸುಧೀರ್ಘ ಅವಧಿಯಲ್ಲಿ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಗಳ ಅಧ್ಯಯನಕ್ಕೆ ಅವರ ಕೊಡುಗೆ ಅಪಾರ. ಅಲ್ಲಿಂದ ನಿವೃತ್ತರಾದರೂ ಅಜೀವ ಅದರ ಗೌರವ ಸದಸ್ಯರಾಗಿ ಮಾರ್ಗದರ್ಶನ ನೀಡಿದರು. ಅವರ ಸೇವೆಯ ಅವಧಿಯಲ್ಲಿ ದಕ್ಷಿಣ ಭಾರತದ ಹಲವಾರು ರಾಜ ವಂಶಗಳ ಶಾಸನಗಳ ಬೃಹತ್‌ ಸಂಪುಟಗಳನ್ನು ಪ್ರಕಟಿಸಿದರು. ಪಶ್ಚಿಮ ಗಂಗರುಬಾದಾಮಿಯ ಚಾಲುಕ್ಯರುತುಳುನಾಡು ಶಾಸನಗಳು ಮುಖ್ಯವಾದವುಗಳು. ಭಾರತೀಯ ಶಾಸನ ಮತ್ತು ಲಿಪಿಶಾಸ್ತ್ರಗಳಿಗೆ ಸಂಬಂಧಿಸಿದ ಗ್ರಂಥಗಳುಉಪನ್ಯಾಸಗಳು ಮತ್ತು ವಿದ್ವತ್‌ ಪತ್ರಿಕೆಗಳಲ್ಲಿನ ಲೇಖನಗಳಿಂದ ಪುರಾತತ್ತ್ವ ರಂಗಕ್ಕೆ ಗಣನೀಯ ಕಾಣಿಕೆ ಸಲ್ಲಿಸಿದ್ದಾರೆ.ಡಾ. ರಮೇಶ್ ಎಪಿಗ್ರಾಫಿಯಾ ಇಂಡಿಕಾದ ೪೧ ಮತ್ತು ೪೨ ಸಂಪುಟಗಳ ಸಂಪಾದಕರಾಗಿದ್ದರು.
ಎಪಿಗ್ರಾಫಿಕಲ್‌ ಸೊಸೈಟಿ ಅಫ್ ಇಂಡಿಯಾ ಮತ್ತು ಪ್ಲೇಸ್‌ನೇಮ್ಸ್‌ ಅಫ್ ಇಂಡಿಯ ದಂಥಹ ರಾಷ್ಟ್ರೀಯ ಸಂಸ್ಥೆಗಳಲ್ಲಿ ನಿರಂತರವಾಗಿ ಮೂರುದಶಕಗಳಿಗೂ ಮೀರಿ ಹೆಚ್ಚುಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅವುಗಳ ಬೆಳವಣಿಗೆಗೆ ಕಾರಣರಾಗಿರುವರು..
ಪುರಾತತ್ತ್ವ ಇಲಾಖೆಯ ೧೫೦ನೆಯ ವರ್ಷದ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್‌ ಶಾಸನಶಾಸ್ತ್ರದಲ್ಲಿನ ಅವರ ಕೊಡುಗೆ ಪರಿಗಣಿಸಿ ನವದೆಹಲಿಯಲ್ಲಿ ವಿಶೇಷ ಸನ್ಮಾನ ಮಾಡಿದ್ದರು.
ಅವರ ವಿದ್ವತ್‌ ಗುರುತಿಸಿದ ಭಾರತೀಯ ಪುರಾತತ್ತ್ವ ಇಲಾಖೆಯು ಅವರನ್ನು ಸೆಪ್ಟಂಬರ್‌ ೨೦೧೨ ರಂದು ಲಿಪಿ ಶಾಸ್ತ್ರದ ರಾಷ್ಟ್ರೀಯ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿತು. ರಾಷ್ಟ್ರೀಯ ಪ್ರಾಧ್ಯಾಪಕರಾಗಿ ಶಾಸನ ಸಂಶೋಧನೆ ಮತ್ತು ಶಾಸನ ವಿಜ್ಞಾನಗಳಲ್ಲಿ ಪ್ರೌಢವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಕಾರ್ಯ ನಿರ್ವಹಿಸುವ ಹೊಣೆ ಅವರದಾಗಿತ್ತು.
ಅವರ ವಿದ್ವತ್‌ ಮತ್ತು ವಸ್ತು ನಿಷ್ಠೆಯನ್ನು ಒರೆಗೆ ಹಚ್ಚಿದ್ದು. ಬಾಬ್ರಿ ಮಸೀದಿ ವಿವಾದ. ಮೊಕದ್ದಮೆ ಇತ್ಯರ್ಥಮಾಡಲು ಅಲ್ಲಿ ದರೆತ ಪುರಾತತ್ತ್ವ ವಸ್ತುಗಳ ಅಧ್ಯಯನ ಮಾಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಲು ಸೂಚನೆ ನೀಡಲಾಯಿತು. ಆಗ ಲಿಪಿಶಾಸ್ತ್ರ ಶಾಖೆಯ ಮುಖ್ಯಸ್ಥರಾದ ಡಾ. ರಮೇಶ್ ಅದರ ಅಧ್ಯಯನ ನಡೆಸಿ ವರದಿ ನೀಡಿದರು. ಅವರನ್ನು ಪಾಟಿ ಸವಾಲು ಮಾಡಲು ನ್ಯಾಯಾಲಯಕ್ಕೆ ಕರೆಸಲಾಯಿತು. ಅದರಲ್ಲಿ ಅವರು ಆ ಸ್ಥಳದಲ್ಲಿ ದೊರೆತ ಸಂಸ್ಕೃತಶಾಸನದ ಕಾಲ ಮತ್ತು ವಿಷಯವನ್ನು ಖಚಿತಪಡಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವರದಿಯ ಪ್ರಕಾರ "ಆ ಸ್ಥಳದಲ್ಲಿ ಗಹಡವಾಲ ವಂಶದ ಸಾಮ್ರಾಟ ಗೋವಿಂದ ಚಂದ್ರನಿಂದ ( ಕ್ರಿ. ಶ ೧೧೧೪-೧೧೫೫) ಸಾಕೇತ ಮಂಡಲದ ( ಅಯೋಧ್ಯ) ಒಡೆತನವನ್ನು ಪಡೆದ ಮೇಘಸುತನು ಮಂದಿರ ನಿರ್ಮಿಸಿದನು. ನಂತರ ಅದರ ಮೇಲೆ ಬೃಹತ್ತ್‌ಕಟ್ಟಡ ನಿರ್ಮಾಣವಾಯಿತು. ಆದರೆ ಅದರ ಜೀವಾವಧಿ ಬಹಳ ಕಡಿಮೆಯಾಗಿತ್ತು. ಅದನ್ನು ನಾಶ ಮಾಡಿ ಅದರ ಅವಶೇಷಗಳ ಮೇಲೆ ೧೬ನೆಯ ಶತಮಾನ ಆದಿಯಲ್ಲಿ ವಿವಾದಿತ ಸಂರಚನೆ ನಿರ್ಮಾಣವಾಯಿತು." ಎಂಬುದು ಪುರಾತತ್ತ್ತ್ವ ಇಲಾಖೆಯ ನಿರ್ದೇಶಕರಾಗಿ ಅವರು ನೀಡಿದ ತಜ್ಞ ಅಭಿಪ್ರಾಯವನ್ನು ನ್ಯಾಯಾಲಯವು ಪರಿಗಣಿಸಿತು. ಆದರೆ ಈ ಬಗ್ಗೆ ವಿವಾದಗಳೆದ್ದವು. ಡಾ. ರೊಮಿಲಾ ಥಾಪರ್‌ನಂತಹ ಹಲವು ಇತಿಹಾಸತಜ್ಞರು ಇವರ ವಾದವನ್ನು ಅಲ್ಲಗೆಳೆದರು.


ಡಾ. ರಮೇಶ್‌ ಅವರ ಇತ್ತೀಚಿನ ಕೊಡುಗೆ ಎಂದರೆ ನವದೆಹಲಿಯ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌ನ ಯೋಜನೆಯಡಿಯಲ್ಲಿ ಸಿದ್ಧಪಡಿಸಿರುವ ಬಹು ಸಂಫುಟಗಳ ದಕ್ಷಿಣ ಭಾರತದ ಶಾಸನಗಳಲ್ಲಿನ ಸಾಮಾಜಿಕ. ಆರ್ಥಿಕಮತ್ತು ಆಡಳಿತ ಪಾರಿಭಾಷಿಕ. ಶಬ್ದ ಕೋಶ. ಇದರ ಪ್ರಥಮ ಸಂಪುಟ ಪ್ರಕಟವಾಗಿದೆ. ಅವರು ನಿಘಂಟುವಿನ ಯೋಜನಾ ಕಾರ್ಯದಲ್ಲಿ ಸಕ್ರಿಯವಾಗಿದ್ದರು ಎರಡನೆಯ ಸಂಪುಟ ಸಿದ್ಧ ಮಾಡುತ್ತಿರುವಾಗಲೇ ಇತಿಹಾಸದ ಪುಟ ಸೇರಿದರು...
ಸುಮಾರು ಒಂದುಲಕ್ಷ ಶಾಸನಗಳ ಸಂಗ್ರಹವಾಗಿರುವಾಗ ಈವರೆಗಿನ ಕಾರ್ಯವು ಕೇವಲ 25 ರಿಂದ30 ಶತಾಂಶವಾಗಿದೆ ಇಂಥಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅವರ ಮಾರ್ಗದರ್ಶನವು ಇಲ್ಲದಾಗಿರುವುದು ಇತಿಹಾಸ ಲೋಕಕ್ಕೆ ತುಂಬಲಾರದ ನಷ್ಟ ಎಂದು ಪುರಾತತ್ತ್ವ ಇಲಾಖೆಯ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿರುವರು. ಪುರಾತನ ದಾಖಲೆಗಳ ಅರ್ಥೈಸುವಿಕೆಗೆ ಇದೊಂದು ಹಿನ್ನೆಡೆಯಾಗಿದೆ. ಡಾ. ರಮೇಶ್‌ ಅವರು ಕಳೆದ ಬುಧವಾರ ಕಾಲವಶರಾದರು ಅವರ ಹೆಂಡತಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ..
ಅವರು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳೆರಡರಲ್ಲೂ ಕೃತಿ ರಚನೆ ಮಾಡಿರುವರು. ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.
1. Indian Epigraphy, 1984.
2. Chalukyas of Vaataapi, 1984.
3. Inscriptions of Western Gangas, 1984, Indian Council of Historical Research, Delhi.
4. A Copper Plate Hoard of the Gupta Period from ‘Bagh', Madhyapradesh, (With others), 1990, Archaeological Survey of India.
5. South Indian Inscriptions, 1990, Published by Director General, Archaeological Survey of India.
6. A History of South Kanara from the earliest times to the fall of Vijayanagara, Research Publication Series, 1970, Karnatak University.
7. TuLunADina itihAsa, 1969, Geetha Book House, Mysore.
8. Karnataka Shasana Sameekshe, 1971, Bangalore University, Bangalore.
9. South Indian Inscriptions, Vol 16, Telugu Inscriptions of the Vijayanagara Dynasty, Archaeological Survey of India.
10. Dynastic List of Copper Plate Inscriptions noticed in Annual reports on Indian Epigraphy from 1887-1969, by G.S. Gai and K.V. Ramesh, 1986.
11. Archaeological Survey of India.
ಇವಲ್ಲದೇ ಅವರು ತತ್ವನಿಧಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಗ್ರಂಥದ ಸಂಪಾದಕರು ಜೊತೆಗೆ ಹಿರಿಯ ಲಿಪಿತಜ್ಞ ಮತ್ತು ವಿದ್ವಾಂಸರಾದ ಜಿಎಸ್ ಗಾಯಿ,ಬಿ.ಕೆ ಗುರುರಾಜರಾವ್ಬಿ.ಸಿ. ಛಾಬ್ರ,ಮತ್ತು ಜಿ.ಎಸ್ ದೀಕ್ಷಿತ್‌ರ ಗೌರವ ಸಂಭಾವನಾ ಗ್ರಂಥಗಳ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವರು. ಶಾಸನ ಅಧ್ಯಯನವನ್ನು ಕೊನೆಯುಸಿರು ಎಳೆಯುವವರೆಗೆ ಕೈ ಗೊಂಡಿದ್ದರು..
http://kendasampige.com/images/trans.gif


Thursday, July 18, 2013

ಕಟ್ಟ ಕಡ ಕಟ್ಟ -.- ಕೊನೆಯ ಸಂದೇಶ






ಸುಮಾರು ಒಂದೂವರೆ ಶತಮಾನ ಹಿಂದೆ ಸಂಪರ್ಕ ಮಾಧ್ಯಮದಲ್ಲಿ ಸಂಚಲನ ಉಂಟುಮಾಡಿ ರಾಷ್ಟ್ರ ರಾಷ್ಟ್ರಗಳನ್ನು ಹತ್ತಿರ ತಂದ, ಹಳ್ಳಿ ಹಳ್ಳಿಗಳನ್ನೂ ತಲುಪುತಿದ್ದ  ಟೆಲಿಗ್ರಾಫ್  ಎಂಬ   ಸಂಪರ್ಕ  ಸಾಧನ  ಭಾನುವಾರ ದಿನಾಂಕ ೧೪-೭-೨೦೧೩ ರಂದು ಹಂಸಗೀತೆ ಹಾಡಿತು. ಸಂವಹನ ಮತ್ತು ಸಂಪರ್ಕ ನಾಗರೀಕ ಜಗತ್ತಿನ  ಹೆಗ್ಗುರುತುಗಳು. ಮೊದಲಲ್ಲಿ  ಮಾನವನು ಸಂದೇಶಗಳನ್ನು ಕಳುಹಿಸಲು ಪಾರಿವಾಳಗಳನ್ನು ಬಳಸುತಿದ್ದನು. ಆಫ್ರಿಕಾದಲ್ಲಿ ಎತ್ತರದ ಸ್ಥಾನದಲ್ಲಿ ನಿಂತು ನಗಾರಿ ಬಾರಿಸಿ ಆ ಮೂಲಕ ಬಾರಿಸಿ ಸಂದೇಶ ಪ್ರಸಾರಮಾಡುತಿದ್ದರು.. ರಾತ್ರಿಯ ಹೊತ್ತು ಬೆಂಕಿಹಾಕಿ ದೊಂದಿಹಚ್ಚಿ  ಬೆಳಕಿನಮೂಲಕ  ಸಂದೇಶಗಳ ಸಾಗಣಿಕೆ ಯಾಗುತಿತ್ತು.  ಹಗಲಲ್ಲಿ ಹೊಗೆ ಹಾಕುವುದರಿಂದ ಸಂದೇಶ  ರವಾನೆಯಾಗುತ್ತಿತ್ತು. ಆದರೆ ಇವೆಲ್ಲಕ್ಕೂ ತಮ್ಮದೇ ಆದ  ಮಿತಿ ಇತ್ತು ಇವೆಲ್ಲಕ್ಕೂ ಮೀರಿದ ಸಂದೇಶವನ್ನು ವೇಗವಾಗಿ ಕಳುಹಿಸುವ ಸಾಧನವನ್ನು ಹುಡುಕುತ್ತಲೇಇದ್ದರು. ದೂತನೊಬ್ಬನು ಓಡುತ್ತಾ ನೂರಾರು ಮೈಲು ಕ್ರಮಿಸಿ ಸಂದೇಶ ತಲುಪಿಸಿ ಪ್ರಾಣ ಬಿಟ್ಟ ಘಟನೆಗಳು ಇತಿಹಾಸದಲ್ಲಿ ಇವೆ. ಕುದರೆ ಸವಾರರೂ ಸಂದೇಶವಾಹಕಕರಾಗಿ ಬಳಕೆಯಾಗುತಿದ್ದರು. ಯುರೋಪು ಮತ್ತು ಅಮೇರಿಕಾದಲ್ಲಿ ಕುದರೆಗಾಡಿಗಳೂ ಬಳಕೆಯಾಗಿದ್ದವು ದೂರದ ಸ್ಥಳಕ್ಕೆ ಹೋಗಲು ಅವುಗಳಿಗೆ ಒಂದು ಮಿತಿ ಇತ್ತು.  ಮಧ್ಯ ಮಧ್ಯ ವಿಶ್ರಾಂತಿ ಪಡೆದು ಸಾಗಬೇಕಿತ್ತು. ಹಾಗಾಗಿ  ಎಷ್ಟೇ ತುರ್ತು ಇದ್ದರೂ   ಸಂದೇಶ ತಲುಪಿಸಲು ಹಲವಾರು ದಿಗಳು ಹಿಡಿಯುತಿದ್ದವು. ಅದಕ್ಕೆಂದೇ ಹಿಂದಿನಕಾಲದಲ್ಲಿ ಭಾರತದಲ್ಲಿ ಕಾಶಿಯಾತ್ರೆಗ ಹೋಗುವವರುಮನೆ ನಡೆಸಲು ಸರ್ವ ವ್ಯವಸ್ಥೆ ಮಾಡಿ ಹೊಗುವರು. ಅವರು ಇರುವರೋ ಇಲ್ಲವೋ ಎಂಬ ಸುದ್ಧಿ ಸಹಾ ಸಿಗುತ್ತಿರಲಿಲ್ಲ. ಆರೇಳುತಿಂಗಳಾದ ಮೇಲೆ ತಿರುಗಿ ಬಂದರೆ ಊರಿಗೆ ಊರೇ ಸಂಭ್ರಮದಿಂದ ಅವರನ್ನುಸ್ವಾಗತಿಸಿ ಹಬ್ಬ ಮಾಡುತಿದ್ದರು ಈ ಎಲ್ಲ ಅಡಚಣೆಗಳಿಗೆ ಮಂಗಲ ಹಾಡಿದ ಮಹಾನ್‌ಅನ್ವೇಷಣೆ ಎಂದರೆ ಟೆಲಿಗ್ರಫಿ , . ಜನರ ಬಾಲ್ಲಿ ತಂತಿ ಅಥವ ತಾರು .
ಟೆಲಿಗ್ರಫಿ ಎಂದರೆ  ದೂರಬರಹ .ಸಂದೇಶದಲ್ಲಿ  ಭಾಷೆಯನ್ನು  ಸಂಕೇತಗಳಾಗಿ ಪರಿವರ್ತಿಸಿ ತಂತಿಯ  ಮೂಲಕ ಕಳುಹಿಸುವ ವಿಧಾನ.ಅದನ್ನು ಪಡೆಯುವವರು ಸಂಕೇತಗಳನ್ನು ಭಾಷೆಯಾಗಿ ಪರಿವರ್ತಿಸಿ ಸಂಬಂಧಿಸಿದವರಿಗೆ ತಲುಪಿಸುವರು..ವಿದ್ಯುತ್‌ ಅನ್ವೇಷಣೆಯಾದಾಗ  ದ್ವನಿತರಂಗಗಳನ್ನು ವಿದ್ಯುತ್‌ ತರಂಗಗಳಾಗಿ ತಂತಿಯ ಮೂಲಕ ಕಳುಹಿಸುವುದರಿಂದ ತಂತಿ ಎಂಬ ಹೆಸರು ಪ್ರಚಾರದಲ್ಲಿ ಬಂದಿತು.ಸುಮಾರು ಐವತ್ತು ವರ್ಷಗಳವರೆಗೆ ಅದೇ ಪದ್ದತಿ ಜಾರಿಯಲ್ಲಿದ್ದಿತು. ನಂತರ  ರೇಡಿಯೋಗ್ರಫಿ ಬಳಕೆಗೆ ಬಂದಿತು. ಅಂದರೆ ನಿಸ್ತಂತು ಸೇವೆ ಬಳಕೆಗೆ ಬಂದಿತುಅಂದರೆ ತಂತಿಇಲ್ಲದ ಎಸಂದೇಶ ರವಾನಿಸುವ ಪದ್ದತಿ.  ಮೊದಲಿನಂತೆ ಕಟ್‌ ಕಡ  ಕಡ ಕಟ್ಟ್ ಎಂದು ಕುಟ್ಟುತ್ತಾ ಕೂಡುವ ಅಗತ್ಯ ವಿರಲಿಲ್ಲ..ಆದರೆ ಈಗಿನನ ವಿದ್ಯುನ್ಮಾನ ಯುಗದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಯುಗದಲ್ಲಿ ಕ್ಷಣ  ಮಾತ್ರದಲ್ಲಿ ಸಂದೇಶವನ್ನು ಕಳುಹಿಸಬಹುದಾಗಿದೆ.
..ಅಮೇರಿಕಾದಲ್ಲಿ  ಸ್ಯಾಮ್ಯುಯಲ್ ಮೋರ್ಸ್‌ನು  ೧೧ ನೆಯ ಜನವರಿ ೧೮೩೮ ರಲ್ಲಿ  ಕಂಡು ಹಿಡಿದರೂ ಅದು ಪೂರ್ಣಪ್ರಮಾದಲ್ಲಿ ಬಳಕೆಗೆ ಬಂದದ್ದು ರ ಮೇ ೧೮೪೪ರಂದು.ವಾಷಿಂಗ್ಟನ್ನಿಂದ ಬಾಲ್ಟಿ ಮೋರ್‌ಗೆ ಮೊದಲ ಟೆಲಿಗ್ರಾಫಿಕ್‌ ಸಂದೇಶ ಹೋಯಿತು.ಅದು- what hath God wrought ?  ಎಂದಾಗಿತ್ತು. ಆಗ ಎಲ್ಲವೂ ಕ್ಯಾಪಿಟಲ್‌ ಅಕ್ಷರಗಳಲ್ಲಿಯೇ ಇರುತಿದ್ದವು ಲೇಖನ ಚಿಹ್ನೆಗಳೇ ಇರಲಿಲ್ಲ.ಎರಡೇವರ್ಷದಲ್ಲಿ
ಅಮೇರಿಕಾದ  ಎಲ್ಲ ಭೂಭಾಗದಲ್ಲೂ ಅದನ್ನು ಅಳವಡಿಸಲಾಯಿತುಪೂರ್ವ ಮತ್ತು ಪಶ್ಚಿಮತೀರಗಳಿಗೂ ಸಂಪರ್ಕ ಬಂದಿತು. ಕುದುರೆ ಗಾಡಿ ಮೂಲಕ ಅಂಚೆ ಕಳುಹಿಸುವ ಪದ್ದತಿ ಕೊನೆ ಗೊಂಡಿತು ಆಗ ತುರ್ತು ಸಂದೇಶವೆಂದರೂ  ತಲುಪಲು  ಕನಿಷ್ಠ ೧೦ ದಿನ ಬೇಕಾಗುತಿತ್ತು  ಟೆಲಿಗ್ರಫಿ ಬಂದನಂತರ  ಕೆಲವೇ ನಿಮಿಷಗಳಲ್ಲಿ  ಸುದ್ಧಿ ತಲುಪುವಂತಾಯಿತು.ಇದರಿಂದ ಸರ್ಕಾರಕ್ಕ ಆಡಳಿತ ಮತ್ತು ಸೈನಿಕ ಚಟುವಟಿಕೆಯಮೆಲೆ ನಿಯಂತ್ರಣ ಬಂದಿತು
ಅದೂಅಲ್ಲದೆ ವ್ಯಾಪಾರ ವ್ಯವಹಾರಗಳಿಗೂ ಬಹಳ ಅನು ಕೂಲವಾಯಿತು.  ಹಿಂದೆ ಇದ್ದ ಪೋನಿ ಎಕ್ಷ ಪ್ರೆಸ್‌ ಪದ್ದತಿ ಕೊನೆ ಗೊಂಡಿತು. ಇದರ
ಅಮೇರಿಕಾ ಮತ್ತು ಯುರೋಪಿನ ಇಂಗ್ಲೆಂಡ್‌ ನಡುವೆ ಪ್ರಥಮ ತಂತಿ ಸಂಪರ್ಕವು  ೧೮೫೮ರಲ್ಲಿ ಆಯಿತು. ಇದು ಸಾಧ್ಯವಾದುದು ಅಟ್ಲಾಂಟಿಕ್‌ ಸಾಗರದ ಅಡಿಯಲ್ಲಿ ಕೇಬಲ್ ಹಾಕಿದ್ದರಿಂದ ಹಡಗಿನಲ್ಲಿ  ಹಲವು ದಿನದಲ್ಲಿ ತಲುಪಬಹುದಾದ ಮಾಹಿತಿಯನ್ನು ಕೆಲವೇ ನಿಮಿಷಗಳಲ್ಲಿ ಕಳುಹಿಸಲು ಸಾಧ್ಯವಾಯಿತು, ಅದರಿಂದ
“ ಯುರೋಪ್‌ಮತ್ತು ಅಮೇರಿಕಾ ಟೆಲಿಗ್ರಫಿ ಯಿಂದ ಒಂದಾದವು”  ಎಂದು ಬ್ರಿಟಿಷ್‌ರಾಣಿ ಘೋಷಿಸಿದಳು
ತಂತಿ ಸೇವೆಯಿಂದ ಶಾಂತಿ ಮತ್ತು ಸುವ್ಯವಸ್ಥೆಗೆ ಬಹಳ ಶಕ್ತಿಯುತವಾಯಿತು. ಆ ಕಾಲದದಲ್ಲಿ ಯುರೋಪಿನ  ಪಾತಕಿಗಳು ಘೋರ ಅಪರಾಧ ಮಾಡಿ ಹಡಗಿನ ಮೂಲಕ ಅಮೇರಿಕಾಕ್ಕೆ ಹೋಗಿ ಬಿಡುತಿದ್ದರು ಅವರನ್ನು ಕಂಡು ಹಿಡಿಯಲು  ತಿಂಗಳುಗಳೇ ಬೇಕಾದ್ದರಿಂದ ತಪ್ಪಿಸಿಕೊಳ್ಳುವುದು ಸುಲಭವಾಗುತಿತ್ತು. ಆದರೆ ಮೊದಲಬಾರಿಗೆ ಪಾತಕಿಯೊಬ್ಬನು ಅಮೇರಿಕಾದಲ್ಲಿ ಹಡಗಿನಿಂದ ಇಳಿದ ತಕ್ಷಣ ಅವನನ್ನುಬಂಧಿಸಿದಾಗ ಅಚ್ಚರಿಯೊ ಅಚ್ಚರಿ ಕಾರಣ ಅವನ ಅಪರಾಧದ ಪೂರ್ಣ ವಿವರ ತಂತಿ ಸಂದೇಶದ ಮೂಲಕ ಅಮೇರಿಕಾಕ್ಕೆ ಅವನು ಬರುವ ಮೊದಲೇ ತಲುಪಿತ್ತು.
ಟೆಲಿಗ್ರಫಿಯ ನೇರ ಪರಿಣಾಮ ವಾರ್ತಾ ಪತ್ರಿಕೆಗಳ ಗುಣಮಟ್ಟದ ಮೇಲೆ ಆಯಿತು. ಈ ಮೊದಲು ನೈಸರ್ಗಿಕ ಅವಘಡಗಳು, ಯುದ್ಧ , ದಂಗೆ ಮೊದಲಾದವುಗಳನ್ನು ವರದಿಮಾಡಲು ವರದಿಗಾರರು ಖುದ್ದಾಗಿ ಸ್ಥಳಕ್ಕೆ ಹೋಗಿ ಮಾಹಿತಿ ಸಂಗ್ರಹಿಸಿಕೊಂಡು ಕಾರ್ಯಾಲಯಕ್ಕೆ ಬಂದು ಬರೆದು ನಂತರ ಪ್ರಕಟಿಸ ಬೇಕಿತ್ತು .  ಇಲ್ಲವೆ ಬರೆದುದನ್ನು ಹೇಗಾದರೂ ಮಾಡಿ ಕಚೇರಿಗೆ ಮುಟ್ಟಿಸಲು ಹರಸಹಾಸ ಪಡಬೇಕಿತ್ತು ಆದರೆ ಟೆಲಿಗ್ರಫಿ ಬಂದ ಮೇಲೆ  ಹತ್ತಿರದ ಟೆಲಿಗ್ರಾಫಿಕ್‌  ಕಚೇರಿಗೆ ಹೋಗಿ ನೂರಾರು ಮೈಲು ಏಕೆ ಸಾವಿರಾರು ಮೈಲು ದೂರದಿಂದಲೂ ಸುದ್ದಿ ರವಾನೆ ಮಾಡುವ ಸೌಲಭ್ಯ ದೊರೆಯಿತು.  .
ಭಾರತದಲ್ಲಿ ಮೊಟ್ಟ ಮೊದಲ ಸಂದೇಶವು ೧೮೫೦ ರಲ್ಲಿ ಭಾರತದಲ್ಲಿ ಬ್ರಿಟಿಷ್‌  ಸಾಮ್ರಾಜ್ಯದ ರಾಜಧಾನಿಯಾದ ಕಲಕತ್ತಾ ದಿಂದ ಡೈಮಂಡ್ ಹಾರ್ಬರ್‌ ರವಾನೆಯಾಗಿತ್ತು ಆಗ . ಭಾರತದ ಗೌರ್ನರ್‌ಆಗಿದ್ದ  ಲಾರ್ಡ ಡಾಲ್‌ಹೌಸಿಯು ಟೆಲಿಗ್ರಾಮ್‌ಗಳ  ಪ್ರಾಮುಖ್ಯತೆಯನ್ನು ಗಮನಿಸಿ  ಕಲಕತ್ತಾದ ಹತ್ತಿರ ೨೭ ಮೈಲು  ಸಂಪರ್ಕ ಒದಗಿಸಲು ಅನುಮತಿ ನೀಡಿದ . ಅದು ಕ್ರಮೇಣ ೧೮೫೬ ರ ಹೊತ್ತಿಗೆ ಬ್ರಿಟಿಷ್‌ ಆಡಳಿತವಿರುವ ಪ್ರದೇಶಗಳ  ಪ್ರಮುಖ ನಗರಗಳಾದ  ಕಲಕತ್ತಾ,  ಆಗ್ರಾ, ಬಾಂಬೆ,ಪೆಷಾವರ್‌ ಮತ್ತು ಮದ್ರಾಸ್‌ಗೆ ಸಂಪರ್ಕ ಕಲ್ಪಿಸಲಾಯಿತು ಈ ತಂತಿಜಾಲವು ಸುಮಾರು ೪೦೦೦ ಮೈಲು ಉದ್ದವಾಗಿತ್ತು.  .
ಅದೇ ತಂತಿ ಜಾಲವು ೧೮೮೧೦ರ ಹೊತ್ತಿಗೆ ಲಂಡನ್‌ ಯುರೋಪು ಮೊದಲಾದ ವುಗಳನ್ನು ಪ್ರಮುಖ ಸ್ಥಳ ಗಳನ್ನು ಜೋಡಿಸುವ   20000 ಮೈಲು ಉದ್ದ  ಸಂಪರ್ಕ ಜಾಲವವನ್ನುಹೊಂದಿತ್ತು.ಭಾರತದಲ್ಲಿ ಈಸ್ಟ ಇಂಡಿಯಾ ಕಂಪನಿಯವರು ತಂತಿ ಸೇವೆಯನ್ನು ಪ್ರಥಮವಾಗಿ ಉಪಯೋಗಿಸಿದ  ಹಿರಿಮೆ ಅವರದಾಯಿತು.ಅದರ ಉಪಯುಕ್ತತೆಯನ್ನು ಗಮನಿಸಿದ ಅವರು ತಂತಿ ಸೇವಾ  ವ್ಯವಸ್ಥೆಯನ್ನುಭಾರತಾದ್ಯಂತ ವಿಸ್ತರಿಸಿದರು
ಅದರಿಂದ ಅವರ ಆಡಳಿತ ಮತ್ತು ಸೈನಿಕ ಕಾರ್ಯಗಳಿಗೆ  ತುಂಬ ಅನುಕೂಲವಾಯಿತು.ಆದಕ್ಕೆ ಅಂಚೆ ಮತ್ತು ತಂತಿಕಚೇರಿಗಳು ಪೂರ್ಣವಾಗಿ ಅವರ ಹತೋಟಿಯಲ್ಲಿದ್ದವು ..
 ಒಂದು ರೀತಿಯಲ್ಲಿ ೧೮೫೭ ರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ  ಬ್ರಿಟಿಷರ ಗೆಲುವಿಗೆ ಟೆಲಿಗ್ರಫಿಯೇ ಕಾರಣ.ಅದರಿಂದ  ಅವರಿಗೆದೇಶಾದ್ಯಂತದ ಪರಿಸ್ಥಿತಿಯನ್ನು ತಕ್ಷಣವೇತಂತಿಯ ಮೂಲಕ ತಿಳಿದುಕೊಂಡು ಸೂಕ್ತ ಕ್ರಮಕೈಗೊಳ್ಳು ಅವಕಾಸವಿರುತಿತ್ತು ಅದೇ ಸ್ವಾತಂತ್ರ್ಯ ಹೋರಾಟಗಾರರು ಸಂದೇಶಗಳನ್ನು ಗುಟ್ಟಾಗಿ ಕಳುಹಿಸಲು ವ್ಯಕ್ತಿಯೊಬ್ಬನ ಕೈನಲ್ಲಿನ ಬುತ್ತಿಯಲ್ಲಿ ಸಂದೇಶ ಅಡಗಿಸಿ ಕಳೂಹಿಸುತಿದ್ದರು ಅಂದ ಮೇಲೆ ಅವರ  ಮಿತಿಯನ್ನು ಅರ್ಥ ಮಾಡಿಕೊಳ್ಳಬಹುದು. ಯಾವಾಗ ಸೈನಿಕರು ದಂಗೆ ಎದ್ದರೋ ತಕ್ಷಣ ತಂತಿ ಸಂದೇಶವನ್ನು ಎಲ್ಲಕಡೆ ಕಳುಹಿಸಿ ಸೈನ್ಯ ಜಮಾವಣೆ ಮಾಡಿದರು ಇಂಗ್ಲೇಂಡಿಗೆ ಕಳುಹಿಸಿ ಅಲ್ಲಿಫ್ರೆಂಚರೊಡನೆ ಯುದ್ಧ ನಿರತರಾಗಿದ್ದ ಸೈನ್ಯವನ್ನು ಭಾರತಕ್ಕೆ ಕರಸಿಕೊಂಡರು.
ಕೆಲವೇ ವರ್ಷದ ಹಿಂದೆ ಸ್ಥಾಪಿಸಿದ ಈ ಸಂಪರ್ಕಜಾಲವು ಬ್ರಟಿಷರಿಗೆ ಸಿಪಾಯಿ ದಂಗೆ ಯನ್ನು ಹತ್ತಿಕ್ಕಲು ಬಹಳ ಸಹಾಯ ಮಾಡಿತು.ಭಾರತಾದ್ಯಂತ ವಿವಿಧ ಕಡೆಗಳಲ್ಲಿ ಬ್ರಿಟಿಷರ  ವಿರುದ್ಧ ಒಟ್ಟಿಗೆ ಹೋರಾಟ ನಡೆಸಿದರೂ ಆಂಗ್ಲರಿಗೆ ಇರುವ  ಅತ್ಯುತ್ಯತ್ತಮ ಸಂಪರ್ಕ ಜಾಲದಿಂದ ಸೈನ್ಯ ಜಮಾವಣೆಗೆ ಅವಕಾಶ ದೊರೆತು ಹೋರಾಟಗಾರರನ್ನು ಹಿಮ್ಮೆಟ್ಟಿಸಲಾಯಿತು. ಸ್ವಾತಂತ್ರ ಹೋರಾಟಗಾರರನ್ನು  ನೇಣಿಗೆ ಏರಿಸುವಾಗ ಅವರಲ್ಲಿ ಒಬ್ಬನಾಯಕನು  ಟೆಲಿಗ್ರಾಫಿಕ್‌  ಕಂಬಗಳನ್ನು ನೊಡಿ  “ ಈ ಪಾಪಿ ತಂತಿಗಳೇ ನಮ್ಮ ಕೊರಳಿಗೆ ಉರುಳಾದವು” ಎಂಬ ಅವನ  ಉದ್ಗಾರವು  ಸಂವಹನಶಕ್ತಿಯ ಪ್ರಾಮುಖ್ಯತೆಯ  ಪಾತ್ರವನ್ನು ಎತ್ತಿ ತೋರುತ್ತದೆ.
 ವಿಶೇಷವಾಗಿ ಇದು ಸಮುದ್ರಯಾನ ದಲ್ಲಿ ಹಡಗುಗಳಲ್ಲಿ ಬಹಳ ಅನುಕೂಲ ಒದಗಿದಸಿತು ಯಾವುದೇ ತೊಂದರೆ ಇದ್ದರೆ ಅವರು ಕಳುಹಿಸುವ S-O-S   •••---••• (SOS) ಎಂಬ ತಂತಿ ಸಂದೇಶವು ಸಹಸ್ರಾರು ಜನರ ಪ್ರಾಣಗಳನ್ನು ಕಾಪಾಡುವ ಮಂತ್ರವಾಯಿತು
.
ಒಂದು ರೀತಿಯಲ್ಲಿ ಟೆಲಿಗ್ರಾಫಿಕ್‌ ತಂತಿಗಳು ಬ್ರಿಟಿಷರ ಏಕಸ್ವಾಮ್ತತ್ವದ, ಅಧಿಕಾರದ  ಸಂಕೇತವೂ ಆಗಿದ್ದವು ಅದರಿಂದಲೇ ಕ್ರಾಂತಿ ಕಾರಿ ಸ್ವತಂತ್ರ್ಯ ಹೋರಾಟಗಾರರು ಟೆಲಗ್ರಾಫಿಕ್‌ ತಂತಿಗಳನ್ನು ಕಡಿದುಹಾಕುವುದು ಮತ್ತು ಸೈನ್ಯ ಸಾಗಣಿಕೆಗೆ ಸಹಾಯ ಮಾಡುತಿದ್ದ ರೈಲ್ವೇಸ್ಠೇಷನ್‌ಗಳನ್ನು ಸುಟ್ಟು ಹಾಕುವುದು ಪ್ರತಿಭಟನೆಯ ಅಂಗವಾಗಿ ಪರಿಗಣಿಸಿದ್ದರು ಕರ್ನಾಟಕದ ಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರರಾದ ಹಳ್ಳಿಕೇರಿ ಗುದ್ಲೆಪ್ಪ ಮತ್ತು ಮೈಲಾರ ಮಹದೇವ ಇದೇ ಅಪಾದನೆಯ ಮೇಲೆ ಶಿಕ್ಷೆಗೆ ಗುರಿಯಾಗಿದ್ದರು.
ಗಾಂಧೀಜಿಯವರು ತಮ್ಮ ದಕ್ಷಿಣ ಆಫ್ರಿಕಾ ಹೋರಾಟದ ಸಮಯದಿಂದಲೆ ಬ್ರಿಟಿಷ್‌ಅದಿಕಾರಶಾಹಿಗೆ ಮೇಲಿಂದ ಮೇಲೆ ತಂತಿಯ ಮೂಲಕ ತಮ್ಮ ಪ್ರತಿಭಟನೆ  ಸೂಚಿಸುತಿದ್ದರು. ತಮ್ಮ ಸಂಗಾತಿಗಳೊಡನೆ ಸತತಸಂಪರ್ಕದಲ್ಲಿರಲು ತಂತಿಯ ಮೂಲಕವೇ ಮಾರ್ಗದರ್ಶನ ನೀಡಿ ಚಳುವಳಿಯನ್ನು  ಮುನ್ನೆಡೆಸುತಿದ್ದರು .ತಮ್ಮ ಹೋರಾಟದ ಮುನ್ಸೂಚನೆಯನ್ನು ತಂತಿ ಸಂದೇಶದ ಮೂಲಕ ಸರ್ಕಾರಕ್ಕೆ ತಿಳಿಸಿಯೇ ಹೋರಾಟ ಪ್ರಾರಂಭಿಸುತಿದ್ದರು.
ಸ್ವಾತ್ರ್ಯ ಬಂದನಂತರ ತಂತಿಕಚೇರಿಯ ವಿಸ್ತರಣೆ ಅಗಾದವಾಗಿತ್ತು ಅದು ಗರಿಷ್ಟ ಮಟ್ಟ ಮುಟ್ಟಿದುದು ೧೯೮೫ರಲ್ಲಿ. ಆಗ ೪೫,೦೦ ತಂತಿಕಚೇರಿಗಳಿದ್ದವು ಅವುಗಳ ಮೂಲಕ ಆವರ್ಷ  ೬ ಕೋಟಿ ಟೆಲಿಗ್ರಾಮ್‌ಗಳ ವಿತರಣೆ ಯಾಗಿತ್ತು.
.
ಸಾರಿಗೆ ಸೌಲಭ್ಯವಿಲ್ಲದ ಭಾರತದಲ್ಲಿ ತಂತಿ ಸೇವೆಯು ವರದಾನವಾಗಿ ಬಂದಿತು ಮೊದಲು ನಗರಗಳಿಗೆ ಮಾತ್ರ ಇದ್ದ ಸಂಪರ್ಕವು ಬರಬರುತ್ತಾ ಪಟ್ಟಣ ಮತ್ತು ಹಳ್ಳಿಗಳಿಗೂ ವಿಸ್ತರಿಸಿತು ಇದು ಅಂವೆ ಸೇವೆಯ ಭಾಗವಾಗಿದ್ದುದರಿಂದ ಎಲ್ಲಿ ಅಂಚೆ ಕಚೇರಿಗಳಿವೆಯೋ ಅಲ್ಲಿ ತಂತಿಸೌಲಭ್ಯವೂ ಸಿಗುತಿತ್ತು ಅಂಚೆಕಚೇರಿಗೆ ಬಂದ ತಂತಿ ಸಂದೇಶವನ್ನು ಸಂದೇಶವಾಹಕರು ಸೈಕಲ್‌ಮೇಲೆ ಹೋಗಿ ಸಂಬಂಧಪಟ್ಟವರಿಗೆ ತಲುಪಿಸುತಿದ್ದರು. ಬರಿ ಸರ್ಕಾರದ ಕೆಲಸಕ್ಕೆ ಬಳಕೆಯಾಗುತಿದ್ದ ತಂತಿಸೇವೆ ಸಾಮಾನ್ಯರ ಸೇವೆಗೂ ಲಭ್ಯವಾಯಿತು ಆದರೂ ಬಹಳ ಕಾಲದ ತನಕ ತಂತಿ ಬಂದಿತೆಂದರೆ ಅದು ಸಾವಿನ ಸುದ್ದಿ ಎಂದೇ ತಿಳಿದುಕೊಂಡು ಗಾಬರಿಯಾಗುತಿದ್ದರು
.
ಈಗ ಹಲವಾರು ಟಿ.ವಿ ಚಾನಲ್‌ಗಳು24x7  ಎಂದು ಹೆಮ್ಮೆಯಿಂದಹೇಳಿಕೊಂಡು ಕೆಲಸ ಮಾಡುತ್ತಿವೆ. ಆದರೆ ಬಹಳ ಮೂಚೆಯೇ ಹಗಲು ಮತ್ತು ತಡ ರಾತ್ರಿಯವರೆಗೆ ಕಟ್‌ಕಟಕ ಕಟ್‌ ಎಂದು ಶಬ್ದ ಮಾಡುತಿದ್ದು ಎಂದರೆ ತಂತಿಕಚೇರಿ ಮಾತ್ರ.. ನೀರವರಾತ್ರಿಯಲ್ಲಿಯು ದರ ಶಬ್ದ ಕಟ್ಟಡದ ಆಸು ಪಾಸಿನಲ್ಲಿ ಕೇಳಬಹುದಾಗಿತ್ತು
ಭಾರತದಲ್ಲಿ ಬ್ರಿಟಷರು ಅದನ್ನು ಸ್ತಾಪಿಸಿದುದು ತಮ್ಮ ಆಡಳಿತ ಮತ್ತುಸೈನಿಕ ಕಾರಣಗಳಿಗಾಗಿ. ಆದರೆ ಅದು ಸ್ವಾತಂತ್ರ್ಯ ಹೋರಾಟದ ಚಾಲಕ ಶಕ್ತಿಯಾಗಿಯು ಕೆಲಸ ಮಾಡಿತು
ಟೆಲಿಗ್ರಾಫಿಕ್  ಇಂಗ್ಲಿಷ್ ಎಂಬುದು ಒಂದು  ವಿಶೇಷ ರೀತಿಯ  ಇಂಗ್ಲಿಷ್‌ ಬರಹ. ಅದರಲ್ಲಿ ನಾಮಪದ ಮತ್ತು ಕ್ರಿಯಾಪದಗಳು ಮಾತ್ರ ಇರುತ್ತವೆ. ಇಂಗ್ಲಿಷ್‌ನ  helping verb, adjective , adverb article preposion ಗಳಿಗೆ ಪ್ರಾಮುಖ್ಯತೆ ಇಲ್ಲ. ಕಾರಣ ಪ್ರತಿ ಪದಕ್ಕೂ ನಿಗದಿತ ಮೊತ್ತದ ಹಣ ಕೊಡಬೇಕು ಆದ್ದರಿಂದ ಕಡಿಮೆ ಪದಗಳಲ್ಲಿ ಹೆಚ್ಚು ಮಾಹಿತಿ ಕೊಡಲುಪ್ರಯತ್ನಿಸುವರು.ಇದನ್ನು ಅಡಕ  ಬರಹ ಎನ್ನಬಹುದು. ಮೊದಲುಇಂಗ್ಲಿಷ್‌ನಲ್ಲಿ ಮಾತ್ರ ಸಂದೇಶ ಇರಬೇಕಿತ್ತುಬ ಆದರೆ ನಂತರ ಲಿಪ್ಯಾಂತರ ಮಾಡಿದರೆ ಸಾಕಿತ್ತು ವಿಶೇಷ ಸಂದರ್ಭ ಲ್ಲಿ ಆಯ್ದ ಶುಭಾಶಯಗಳಿಗೆ ನಿಗದಿತ ಸಂಖ್ಯೆಬರೆದರೆ ಸಾಕಿತ್ತು ಮತ್ತು ಒಂದೆ ವಿಷಯವನ್ನು ಅನೇಕರಿಗೆ ಪ್ರತಿಹಾಕಿದರೆ ರಿಯಾತಿಯ  ಸೌಲಭ್ಯವೂ ಇತ್ತು.  
 ಜೊತೆಗೆ ರಿಪ್ಲೈ ಪೇಡ್‌  ತಂತಿ ಕಳುಹಿಸುವ ಸೌಲಭ್ಯವಿತ್ತು.  ನ್ಯಾಯಾಲಯದಲ್ಲಿ ತಂತಿಯನ್ನು ಸಾಕ್ಷಿವಾಗಿ ಪರಿಗಣಿಸುವ ಅವಕಾಶವೂಇತ್ತು.
ಅತಿ ಚಿಕ್ಕ ಸಂದೇಶ ಕಳುಹಿಸಿದ ಹಿರಿಮೆ ಇಂಗ್ಲಿಷ್‌ಲೇಖಕ ಅಸ್ಕರ್‌ವೈಲ್ಡ್‌ನದು. ಅವನ ಹೊಸ ಪುಸ್ತ ಒಂದು ಇಂಗ್ಲೆಂಡಿನಲ್ಲಿ ಪ್ರಕಟವಾದಾಗ ಅವನು ಪ್ಯಾರಿಸ್‌ನಲ್ಲಿದ್ದ. ಅದರ ಮಾರಾಟ ಹೇಗಿದೆ ಎಂದು ತಿಳಿಯಲು ಪ್ರಕಾಶರಿಗೆ ಕಳುಹಿಸಿದ ತಂತಿಯಲ್ಲ್ಲಿ  ?   ಚಿಹ್ನೆ ಮಾತ್ರ ಇತ್ತು.ಅವನಿಗೆ ಬಂದ ಉತ್ತರವೂ ಅಷ್ಟೇ ಚಿಕ್ಕದಾಗಿತ್ತು. ಅದರಲ್ಲಿಯೂ  !   ಗುರುತ ಮಾತ್ರ ಇತ್ತು . ಅತ್ಯಂತ ದೊಡ್ಡ ಸಂದೇಶವನ್ನು ಕಳುಹಿಸಿರುವುದು  ಜವಹರ್‌ಲಾಲ್‌ನೆಹರೂ ಅವರು. ೧೯೪೭ ರಲ್ಲಿ ಬ್ರಿಟಿಷ್‌ ಪ್ರಧಾನಿ ಕ್ಲೆಮೆಂಟ್‌ ಆಟ್ಲಿ ಯವರಿಗೆ ೧೬೩ ಪದದ ಸಂದೇಶ ಕಳುಹಿಸಿದ್ದರು.
ಮೊಬೈಲ್‌ಫೋನುಗಳ ಸಂಖ್ಯೆಯು ಕಳೆದ ದಶಕದಲ್ಲಿ ಸ್ಪೋಟಕವಾಗಿ ಹೆಚ್ಚಿದೆ,ಅದು ಒಂದುರೀತಿಯಲ್ಲಿ ಸಂಪರ್ಕಕ್ರಾಂತಿಯನ್ನು ತಂದಿದೆ. ಎಸ್ ಎಂಎಸ್ ಅಂತೂ ತಂತಿ ಸಂದೇಶಕ್ಕೆ ಮಾರಣಾಂತಿಕ ಹೊಡೆತ ನೀಡಿತು. ಅದರ ಫಲವಾಗಿ ನೂರು ಕೋಟಿ ಇದ್ದವ್ಯವಹಾರ ೭೦ ಲಕ್ಷ ಕ್ಕೆ ಇಳಿಯಿತು. ಅನಿವಾರ್ಯವಾಗಿ ಮಹಾ ಸೇವೆಯೊಂದಕ್ಕೆ ಮಂಗಳ ಹಾಡ ಬೇಕಾಯಿತು

Monday, July 15, 2013

ಆರರಿಂದ ಅರವತ್ತು -ಸರಣಿ- ನಡೆದಂತೆ ನುಡಿ

ನಿಯಮ ಎಲ್ಲ್ರರಿಗೂ ಒಂದೆ
ನಾನು ಕೆಲಸವನ್ನು ನಿಯತ್ತಿನಿಂದ ಮಾಡುವುದು ಅದರಲ್ಲೂ ಪರೀಕ್ಷೆಗಳನ್ನು ಶಿಸ್ತಿನಿಂದ ನಡೆಸುವುದು ಅನೇಕರಿಗೆ ಅಪಹಾಸ್ಯದ ವಸ್ತುವಾಗಿತ್ತು, ಓಹೋ! ಊರಲ್ಲಿ ಬೇರೆ ಯಾರಿಗೂ ಇಲ್ಲದ ರೂಲ್ಸ ಇವರೊಬ್ಬರಿಗೆ, ಒಣ ನಿಷ್ಠುರ ಕಟ್ಟಿಕೊಳ್ಳುವರು. ಇವರಿಗೆ ರಾಷ್ಟ್ರ ಪ್ರಶಸ್ತಿ ಕೊಡುವರು. ನಾಳೆ ಏನಾದರೂ ಹೆಚ್ಚು ಕಡಿಮೆಯಾದರೆ ಇಲಾಖೆ ಇವರ ಸಹಾಯಕ್ಕೆ ಬರುವುದೇ?  ಮುಂತಾದ ಮಾತುಗಳು ಹಿಂದೆ ಮುಂದೆ ಆಡುವವರು ಇದ್ದರು. ಆದರೆ ನಾನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ನನ್ನ ಕರ್ತವ್ಯ ನಾನು ಮಾಡುತಿದ್ದೆ. ಆದರೆ ನನ್ನ ಕೆಲಸಕ್ಕೆ ಗೌರವ ಪ್ರಶಸ್ತಿಗಳು ಬಾರದಿದ್ದರೂ ಇಲಾಖೆಯ ಅಭಿಮಾನ ದೊರಕಿತ್ತು.ನನಗೆ ಹೃದಯಾಘಾತವಾದಾಗ ಜಯದೇವ ಅಸ್ಪತ್ರೆಯಲ್ಲಿ ಶಸ್ತ್ರ ಕ್ರಿಯೆಗೆ ಒಳಗಾಗಿದ್ದೆ. ಸುಮಾರು ೧ಲಕ್ಷದವರೆಗೆ ಖರ್ಚಾಯಿತು. ಮಗ ಅದೆ ತಾನೆ ಕೆಲಸಕ್ಕೆ ಸೇರಿದ್ದ. ಆದರೂ ಹೇಗೋ ನಿಭಾಯಿಸಿದೆವು, ಆ ಸಮಯದಲ್ಲಿ ಇಲಾಖೆಯ ಔದಾರ್ಯ ಮನ ಮುಟ್ಟಿತು. ನನಗೆ ಆಸ್ಪತ್ರೆಗೆ ಫೋನು ಮಾಡಿ ಆರೋಗ್ಯವಿಚಾರಿಸಿದರು ಜತೆಗೆ ನನ್ನ ಮಗ ಕಾರವಾರದಲ್ಲಿ ಕೆಲಸ ಮಾಡುತಿದ್ದುದರಿಂದ ಈ ಸಮಯದಲ್ಲಿ ಅವನ ಜತೆಗೆ ಇರುವುದು ಸೂಕ್ತವೆಂದು ನಗರದ ಕಾರವಾರದ ಹತ್ತಿರವೆ ಇರುವ ಹೈವೇನಲ್ಲೆ ಇದ್ದ ಕಾಲೇಜಿಗೆ ವರ್ಗ ಮಾಡಿ ಅದೇಶವನ್ನು ಅಸ್ಪತ್ರೆಗೆ ಕಳುಹಿಸಿದರು.ನಿರ್ದೇಶಕರೆ ವೈಯುಕ್ತಿಕ ಆಸಕ್ತಿ ತೆಗೆದು ಕೊಂಡುದುದರಿಂದ ಇದು ಸಾಧ್ಯವಾಯಿತು ಒಳ್ಳೆಯ ಕೆಲಸಗಾರನಿಗೆ ಆಪತ್ತಿನಲ್ಲಿ ಆಗ ಬೇಕೆಂಬ ಅವರ ಸಹೃದಯತೆಯೆ ಅದಕ್ಕೆ ಕಾರಣ.. ಒಂದು ವರ್ಗಾವಣೆ ಬೇಕೆಂದರೆ ವಿಧಾನ ಸೌಧದ ಕಂಬ ಕಂಬ ಸುತ್ತಬೇಕಾದ, ಹಣ ವನ್ನು ನೀರಿನಂತೆ ಚೆಲ್ಲ ಬೇಕಾದ ವ್ಯವಸ್ಥೆಯಲ್ಲಿ ಮಲಗಿದಲ್ಲಿಯೆ  ಆದೇಶದ ಪ್ರತಿ ಬರುವುದೆಂದರೆ ಸಂಬಂಧಿಸಿದವರ ವಿಶ್ವಾಸವೆ ಕಾರಣ. ಅದರ ಜೊತೆಗೆ ವೈದ್ಯಕೀಯ ವೆಚ್ಚದ ಬಿಲ್ಲನ್ನು  ಮಂಜೂರು ಮಾಡಲು ಜಿಲ್ಲಾ ಮಟ್ಟದಲ್ಲಿ ತುಸು ಮಿಜಿಮಿಜಿ ಮಾಡಿದಾಗ ವಿಷಯ ತಿಳಿದು ಅವರ ಮೂಲಕ  ಕಳುಹಿಸುವ ಬದಲು ನೇರವಾಗಿ ಇಲಾಖೆಗೆ ಸಲ್ಲಿಸಲು ತಿಳಿಸದರು. ಜತೆಗೆ ಮೂರೆ ದಿನದಲ್ಲಿ ನನಗೆ ಹಣ ದೊರೆಯುವ ವ್ಯವಸ್ಥೆಯಾಯಿತು.  ಮನೆಯವರೆಲ್ಲಾ ಸದಾ ನನ್ನ ನಿಯತ್ತಿನ ಕೆಲಸದಿಂದ ಆಗೀಗ ತೊಂದರೆಗೆ ಒಳಗಾದವರೆ. ಎಲ್ಲರಂತೆ ನೀವೂ ಇರಿ ಎಂದು ಅವರೇನೂ ಹೇಳಿರಲಿಲ್ಲ. ಆದರೆ ಆಗೀಗ ಭಾವನೆ ಬಂದಿರಬಹುದು. ಆದರೆ ಆಪತ್ತಿನಲ್ಲಿ ಆದ ಸಹಾಯದಿಂದ ಅವರಿಗೂ ಒಳ್ಳೆತನಕ್ಕೆ , ಪ್ರಾಮಾಣಿಕ ಕೆಲಸಕ್ಕೆ ಬೆಲೆ ಇದೆ ಎಂದು ಮತ್ತೊಮ್ಮೆ ಖಚಿತವಾಯಿತು.  ಆದ್ದರಿಂದ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೆ ಮನೆಗೆ ಹೋದ ನಾನು ವಿಶ್ರಾಂತಿಯ ಅವಧಿ ಮುಗಿತ  ತಕ್ಷಣವೆ ಸೀದಾ ಹೊಸ ಜಾಗದಲ್ಲಿ ವರದಿ ಮಾಡುವಂತಾಯಿತು. ಕೆಜಿಎಫ್‌ ಕಾಲೆಜು ಬಿಡುವುದೆಂದರೆ ನನಗೂ ಬೇಸರ.ಸಹೋದ್ಯೋಗಿಗಳ  ಸಹಕಾರ ಮತ್ತು ವಿದ್ಯಾರ್ಥಿಗಳ ಮಮತೆ ನಾನು ಮರೆಯುವಹಾಗಿರಲಿಲ್ಲ. ಕೆಲವರಂತೂ ನಾವು ನಿಮ್ಮ ಮಗನಂತೆ ನೋಡಿಕೊಳ್ಳುತ್ತೇವೆ. ಅಲ್ಲಿ ಒಬ್ಬ ಮಗನಿದ್ದರೆ ಇಲ್ಲಿ ನಾವು ಹಲವರಿದ್ದೇವೆ ಇಲ್ಲಿಯೆ ಇದ್ದು ಬಿಡಿ ಎಂದು ಗೋಗರೆದರು ಆದರೆ ಅದೇಶ ಬಂದಿತ್ತು  . ಈಗ ಹೋದರೂ ಮನೆ ತೆಗೆಯುವುದಿಲ್ಲ. ಹೇಗಿದ್ದರೂ ಸ್ವಂತ ಮನೆ ಇದೆ, ನಿವೃತ್ತನಾದ ಮೇಲೆ ಇಲ್ಲಿಯೆ ಬಂದು ನೆಲಸುವೆ ಎಂದು ಸಮಾಧಾನ ಮಾಡಿದೆ.ಭಾರವಾದ ಹೃದಯದಿಂದ ವಿದಾಯ ಹೇಳ ಬೇಕಾಯಿತು. ತಾಲೂಕಿನ ಚುಟುಕ ಸಾಹಿತ್ಯ ಪರಿಷತ್‌ನ ಬೀಳ್ಕೊಡಿಗೆ ಸಮಾರಂಭ ಕಣ್ಣಲ್ಲಿ ನೀರುತಂದಿತು. ಒಂದೆ ಊರಿನವರಲ್ಲ, ಒಂದೆ ಜಿಲ್ಲೆಯವರಲ್ಲ. ಹೋಗಲಿ ಒಂದೆ ಇಲಾಖೆಯವರೂ ಅಲ್ಲ . ಅವರಲ್ಲಿ ಬಹುಪಾಲು ಬಿ.ಇ.ಎಮ್‌.ಎಲ್‌ ಅಧಿಕಾರಿಗಳು. ಕನ್ನಡದ ಕೆಲಸಕ್ಕಾಗಿ ಜತೆಯಾದವರು. ನಾಲಕ್ಕುವರ್ಷದಲ್ಲಿ ನಲುಮೆಯ ಒಡನಾಡಿಗಳಾಗಿದ್ದರು
.ಆರೋಗ್ಯ ತುಸು ಸುಧಾರಿಸಿದ ಮೇಲೆ ನಾನು ಉತ್ತರ ಕನ್ನಡದ ಕಾಲೇಜಿಗೆ ಸೇರಲು ಹೊರಟೆ.ಅಲ್ಲಿನ ವಾತಾವರಣದ ಪರಿಚಯ ಹಾದಿಯಲ್ಲೆ ಆಯಿತು. ಎಲ್ಲ ಕಡೆ ದಟ್ಟ ಹಸಿರು . ಶಿವಮೊಗ್ಗ ದಾಟಿದರೆ ಗೇರು ಸೊಪ್ಪೆಯಿಂದ ಹೊನ್ನಾವರದ ವರೆಗ ಅಲ್ಲಲ್ಲಿ ಮಿಂಚಿ ಮಾಯವಾಗುವ ಜಲಪಾತಗಳು, ನಂತರ ಕರಾವಳಿಯಲ್ಲಿ ರಸ್ತೆಗೆ ಸಮಾಂತರವಾಗಿ ಭೋರ್ಗರೆವ ಸಮುದ್ರ ಕಾರಿನಲ್ಲಿ ಹೋಗುವಾಗ ಕಣ್ಣು ಮುಚ್ಚಿದರೆ ಸುಂದರದೃಶ್ಯ ಕಾಣದಾಗುವುದು ಎಂಬ ಕಾತರದಿಂದ ಹಾದಿಯುದ್ದಕ್ಕೂ ಬಿಟ್ಟ ಕಣ್ಣು ಬಿಟ್ಟಂತೆ ಪ್ರಕೃತಿಸೌಂದರ್ಯ ನೊಡುತ್ತಾ ಕುಳಿತೆ. ಹಾದಿಯಲ್ಲೆ ಮಳೆ ಅಂಕೋಲೆಯಿಂದ ಜಿಟಿಜಿಟಿ ಮಳೆ ಪ್ರಾರಂಭವಾಯಿತು.ಇನ್ನೂ ಹತ್ತು ಕಿಲೋ ಮೀಟರ್‌ ದೂರದಲ್ಲೆ ಮಗರಾಯ ಕಾದು ನಿಂತಿದ್ದ. ಅಲ್ಲಿ ಹೆಸರಾದ ಉಧ್ಭವ ಗಣಪತಿ ದೇಗುಲ.ಬೃಹತ್ ಬಂಡೆಉ ಮೇಲೆ ಒಡಮೂಡಿದ್ದು ಬಹು ಪ್ರಸಿದ್ಧಿ. ಅದರ ಮುಂದೆಯೆ ಮಗ ಬಂದು ನಿಂತಿದ್ದ. .ಅವನನ್ನು ನೋಡಿ ಇಳಿದಾಗ ಗುಲಾಬಿ ಹೂ ನೀಡಿ ಕಾರವಾರಕ್ಕೆ ಸ್ವಾಗತ , ಎಂದ.  ಆ ನಡೆ ಬಹಳ ಖುಷಿ ತಂದಿತು. ಆ ಹೂವಿನ ಬೆಲೆ ಬರಿ ಒಂದು ರೂಪಾಯಿ ಇರಬಹುದು. ಆದರೆ ಅದು ನೀಡುವ ಸಂತೋಷ , ಅದರ ಹಿಂದಿರುವ ಆತ್ಮೀಯತೆ ಆಳ ಅಳೆಯಲು ಆಗದು.ಅಲ್ಲಿರುವ ದೇವರ ದರ್ಶ ನ  ಮಾಡಿಕೊಂಡು ತುಸುವೆ ಮುಂದೆ ಇರುವ ಕಾಲೇಜಿಗೂ ಭೇಟಿ ನೀಡಿದೆವು. ಅದು ಚಿಕ್ಕದಾದ ಆದರೆ ಚೊಕ್ಕವಾಗಿದ್ದ ಕಾಲೇಜು. ಅಲ್ಲಿ ಅಂಕೋಲೆಯವರೊಬ್ಬರು  ಪ್ರಾಂಶುಪಾಲರಾಗಿದ್ದರು. ಅವರಿಗೆ ಹತ್ತಿರದಲ್ಲೆ ಇದ್ದ ಇನ್ನೊಂದು ಕಾಲೇಜಿಗೆ ವರ್ಗ ಮಾಡಿ  ನನಗೆ ಕಾರವಾರದಿಂದ ದಿನಾ ಓಡಾಡಲು ಅನುಕೂಲವಾಗಲಿ ಎಂದು ಆ ಸ್ಥಳ ನೀಡಿದ್ದರು. ನಾನು ಬರುವ ಮಾಹಿತಿ ಅವರಿಗೆ ಗೊತ್ತಿತ್ತು . ಮತ್ತು ಉಪನಿರ್ದೇಶಕರೆ ಇಲಾಖೆಯವರು ಒಬ್ಬ ಅನುಭವಿ ವ್ಯಕ್ತಿಯನ್ನು ಇಲ್ಲಿಎ ಕಳುಹಿಸಿರುವರು ಎಂದು ತಿಳಿಸಿದ್ದರು, ನನ್ನ ವಿವರ ಅವರಿಗೆ ನಾನು ಬರುವದಕ್ಕಿಂತ  ಮೊದಲೆ ಅಲ್ಲಿ ತಿಳಿದಿತ್ತು.
ಕಾಲೇಜಿಗೆ ಭೇಟಿ ನೀಡಿ ನಂತರ ಗಿಡ ಮರಗಳ ಮಧ್ಯ ಪರ್ಣ ಕುಠೀರದಂತಿರುವ ಮನೆ ಹೋದೆವು.   ಅಲ್ಲಿನ ಸಸ್ಯರಾಶಿ ಜಲಸಮೃದ್ಧಿ  ಕಣ್ಣು ಮನಸ್ಸುಎರಡನ್ನೂ ತುಂಬಿದವು
ಮಾರನೆ ದಿನ ಕಾರವಾರದಿಂದ ಆರು ಕಿಲೋಮೀಟರ್‌ ದೂರದಲ್ಲಿನ ಕಾಲೇಜಿಗೆ ಹೋದೆ. ಕಾಲೆಜಿ ಹೈಸ್ಕೂಲು ಸೆರಿ ಮೂರುನೂರು ವಿದ್ಯಾಥಿಗಳು.ಪಿಯುಸಿಯಲ್ಲಿ ಒಟ್ಟು ನೂರು ಮಕ್ಕಳು. ಅದರಲ್ಲಿ ವಾಣಿಜ್ಯ ವಿಬಾಗದಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು.೧೨ ಜನ ಶಿಕ್ಷಕರು ಆರು ಜನ ಉಪನ್ನಾಸಕರು ಇದ್ದರು. ಅದೇಕೋ ಅವರಲ್ಲಿ ಮಹಿಳೆಯರೇ ಬಹಳ.ಹೈಸ್ಕೂಲಿನಲ್ಲಿ ಒಬ್ಬರು ಕಾಲೇಜಿನಲ್ಲಿ ನಾಲಕ್ಕು ಜನ ಪುರುಷ ಉದ್ಯೋಗಿಗಳು ಇದ್ದರು.  ಡ್ರಿಲ್‌ ಮಾಷ್ಟರ್‌ ಬಿಟ್ಟು  ಎಲ್ಲ ಹುದ್ದೆಗಗಳೂ ತುಂಬಿದ್ದವು. ಜಿಲ್ಲಾ ಕೇಂದ್ರಕ್ಕೆ ಹತ್ತಿರವಾದ್ದರಿಂದ ಎಲ್ಲರೂ ನಿತ್ಯ ಪ್ರಯಾಣಿಕರು. ಬಹುತೇಕಜನ ಅಲ್ಲಿಯವರೆ. ಅವರ ವಾಸ ಕಾರವಾರ ಇಲ್ಲವೆ ಹತ್ತಿರದ ಅಂಕೋಲೆಯಲ್ಲಿ.ಕಾಲೇಜು ಸುಸಜ್ಜಿತವಾಗಿತ್ತು. ಒಳ್ಳೆಯ ಕಟ್ಟಡ, ಸಾಕಷ್ಟು ಆಟದ ಮೈದಾನ, ಕಾಂಪ್ಯೂಟರ್‌ ಕಲಿಕೆಯ ವ್ಯವಸ್ಥೆ ಎಲ್ಲಕ್ಕಿಂತಲೂ ಪೂರ್ಣ ಪ್ರಮಾದಲ್ಲಿ ಸಿಬ್ಬಂದಿ ಇದ್ದುದರಿಂದ ಪಾಠ ಪ್ರವಚನ ಸುಗಮವಾಗಿ ಸಾಗಿತ್ತು. ಇಲ್ಲಿನ ಸಿಬ್ಬಂದಿಗೂ ನನಗೆ ಮೇಜರ್‌ ಆಪರೇಷನ್‌ ಆಗಿದೆ ಅದಕ್ಕೆಂದೆ ಇಲಾಖೆಯು ಇಲ್ಲಿಗೆ ನನಗೆ ವರ್ಗ ಮಾಡಿರುವರು ಎಂಬ ಮಾಹಿತಿ ಇತ್ತು . ಅದು ಹೇಗೆ ಗೊತ್ತಾಯಿತೋ ನಾನು ಅರಿಯೆ,ಅಲ್ಲಿನ ಹಿರಿಯ ಸಹಾಯಕರು ನಾನು ಹೆಚ್ಚು ಶ್ರಮ ತೆಗೆದುಕೊಳ್ಳ ಬಾರದೆಂದೂ,ಸಾವಕಾಶವಾಗಿ ಬಂದು ಬೇಗ ಹೋದರೂ ಸರಿ ಎಲ್ಲ ತಾವು ನೋಡಿಕೊಳ್ಳುವುದಾಗಿ ತಿಳಿಸಿದರು. ಅಲ್ಲದ ನನಗೆ ಪ್ರಯೋಗಾಲಯದಲ್ಲಿ ಹಾಸಿಗೆ ಹಾಸಿ ವಿಶ್ರಾಂತಿ ತೆದುಕೊಳ್ಳಲು ವ್ಯವಸ್ಥೆ ಮಾಡಬಯಸಿದರು, ಅವರ ಕಳಕಳಿಗೆ ನಾನು ಅಭಿನಂದಿಸಿದೆ.ಶಸ್ತ್ರ ಕ್ರಿಯೆ ಆಗಿದ್ದರೂ ನಾನು ದೈನಂದಿನ ಕೆಲಸ ಮಾಡಲು ಶಕ್ತ. ವೈದ್ಯರು ಏನೆ ಕೆಲಸ ಮಾಡಲು ಅಭ್ಯಂತರವಿಲ್ಲ ಎಂದೆ ತಿಳಿಸಿದ್ದಾರೆ. ಅಲ್ಲದೆ ನನ್ನ ಕರ್ತವ್ಯ ವನ್ನು ಸರಿಯಾಗಿ ನಿರ್ವಹಿಸಲು ತೊಂದರೆ ಯಾದರೆ ನಾನೆ ರಜೆ ತೆಗೆದುಕೊಳ್ಳುತ್ತಿದ್ದೆ. ಇನ್ನು ಇರುವ ಮೂರು ವರ್ಷವೆ ನನಗೆ ಕೆಲಸ ಮಾಡಲು ಅವಕಾಶ. ನಿವೃತ್ತಿಯಾದ ನಂತರ ವಿಶ್ರಾಂತಿ ಇದ್ದೆ ಇದೆ. ಆದ್ದರಿಂದ ಹೆಚ್ಚಿನ ಸೌಲಭ್ಯದ ಆಗತ್ಯವಿಲ್ಲ. ಎಂದು ತಿಳಿಸಿದೆ.ಕಾಲೇಜಿನಲ್ಲಿ ಪೂರ್ಣಹೊಣೆ ವಹಿಸಿಕೊಂಡೆ. ಅಲ್ಲಿನವರ ಹೆಂಗರಳು. ಶಿಸ್ತುಬದ್ದ ನಡವಳಕೆ ಸದಾ ಸಮಸ್ಯೆಯ ಸುಳಿಯಲ್ಲೆಯೆ ಕೆಲಸ ಮಾಡಿದ ನನಗೆ ಬಿರುಬೇಸಿಗೆಯಲ್ಲಿ ತಂಗಾಳಿ ತೀಡಿದಂತೆ ಅನಿಸಿತು.
ಎರಡು ದಿನ ಬಿಟ್ಟು  ಕಾರವಾರದ ಉಪನಿರ್ದೇಶಕರ ಕಚೇರಿಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಅವರು ದಕ್ಷಿಣ ಕನ್ನಡದ ಮೂಲದವರು. ಅವರಿಗೆ ನಿರ್ದೇಶಕರಿಂದ ನನ್ನ ಕುರಿತು ಮಾಹಿತಿ ಇತ್ತು. ನನ್ನನ್ನು ಬಹಳ ಆದರದಿಂದ ಸ್ವಾಗತಿಸಿದರು. ಮೇಲಾಗಿ ಪತ್ರಕರ್ತನಾಗಿದ್ದ ನನ್ನ ಮಗನು ಅವರಿಗೆ ಚಿರ ಪರಿಚಿತ,ನನಗೆ ಹೃದಯಶಸ್ತ್ರ ಕ್ರಿಯೆಯಾಗಿರುವುದರಿಂದ ಖುದ್ದು ನಿರ್ದೇಶಕರೆ ಆಸಕ್ತಿ ವಹಿಸಿ ಇಲ್ಲಿಗೆ  ಹಾಕಿರುವುದುನ್ನು ಅವರು ಅರಿತಿದ್ದರು
ಕಾಲೇಜು ಚಿಕ್ಕದು. ದೊಡ್ಡ ದೊಡ್ಡ ಕಾಲೇಜುಗಳನ್ನೆ ನಿಭಾಯಿಸಿ ಬಂದ ನಿಮಗೆ ಇದು ಬಹಳ ಸರಳ ಕೆಲಸ. ಕಾಲೇಜಿಗೆ ವಾರಕ್ಕೊಮ್ಮೆ ಹೋದರೂ ಸರಿ. ಉಳಿದ ದಿನ ನೀವು ಇಲ್ಲಿಯೆ ಬಂದು ನನಗೆ ಕಚೇರಿ ಕೆಲಸದಲ್ಲಿ ಸಹಾಯ ಮಾಡಬಹುದು, ಅದರಿಂದ ನಿಮಗೆ ಹೊತ್ತು ಹೊತ್ತಿಗೆ ಬಿಸಿ ಊಟವೂ ಸಿಗುವುದು. ಬಸ್ಸಿನಲ್ಲಿ ಹೋಗಿ ಬರುವ ಶ್ರಮ ಇರುವುದಿಲ್ಲ. ಎಂದು ಸಲಹೆ ನೀಡಿದರು.
ಅವರ ಈ ಉದಾರತೆಗೆ  ಮತ್ತು ಕಳಕಳಿಗೆ ನಾನು ವಂದಿಸಿದೆ. ಮೊದಲು ಕಾಲೇಜಿಗೆ ಹೋಗಿ ಅಲ್ಲಿನ ಪರಿಸರ ಅರಿತು ನಿರ್ಧಾರತೆಗೆದು ಕೊಳ್ಳುವುದಾಗಿ ತಿಳಿಸಿದೆ,
ಅವರೇನೋ ಉದಾರತೆಯಿಂದ ನನಗೆ ರಿಯಾಯಿತಿ ಕೊಡಲು ಮುಂದಾಗಿದ್ದರು. ಆದರೆ ಕಾಲೇಜಿಗೆ ಯಾವಾಗಲಾದರೂ ಒಮ್ಮೆ ಹೋಗಿ ಸಹಿ ಮಾಡಿ ಬರುವ ವಿಚಾರ ನನಗೆ ಹಿಡಿಸಲಿಲ್ಲ. ನಾನು ಮೂಲತಃ ಪ್ರಾಂಶುಪಾಲ. ಸಂಬಳ ಪಡೆಯುವುದುಕಾಲೇಜಿನಲ್ಲಿ. ನನಗೆ ಅನುಕೂಲ ಎಂದು ಅಲ್ಲಿಗೆ ಹೋಗದೆ ಉಪನಿರ್ದೇಶಕರ ಕಚೇರಿಯಲ್ಲೆ ಕಾರ್ಯ ಮಾಡುವುದಕ್ಕೆ ಮನ ಒಪ್ಪಲಿಲ್ಲ.ಇದು ಬರಿ ಬಾಯಿ ಮಾತಿನ ಸೂಚನೆ. ನನ್ನನ್ನು ನಿಯೋಜನೆ ಮಾಡಿಕೊಂಡರೆ ಅದು ಬೇರೆ ಮಾತು.ಆದರೆ ಯಾರೂ ಕೇಳುವುದಿಲ್ಲ ಎಂದು ಕಾಲೇಜಿಗೆ ಬಾರದೆ ಇರುವುದು ನನ್ನ ಮನಸ್ಸಿಗೆ ಒಗ್ಗದ ಮಾತಾಗಿತ್ತು.ಪ್ರಿನ್ಸಿಪಾಲರು ಕಾಲೇಜಿಗೆ ಸರಿಯಾಗಿ ಬರುತ್ತಿಲ್ಲ ಎಂದು ಜನರ ಬಾಯಿಗೆ ಬೀಳುವುದು ಮನಃ ಸಾಕ್ಷಿಗೆ ವಿರುದ್ಧವಾಗುವುದು.  ವಿನಯವಾಗಿ ಉಪನಿರ್ದೇಶಕರಿಗೆ ನನ್ನ ಅಭಿಪ್ರಾಯ ತಿಳಿಸಿದೆ. ನಾನು ಇರುವಾಗ ನಿಮಗೆ ಏಕೆ ಇಲ್ಲದ ಚಿಂತೆ. ಎಲ್ಲದಕ್ಕೂ ನಾನು ಉತ್ತರ ಕೊಡುವೆ, ವೃಥಾ ಏಕೆ  ಕಷ್ಟ ಪಡುವಿರಿ? ಎಂದರು.ನಾನು ಮುಗುಳ್ ನಕ್ಕು ಸುಮ್ಮನಾದೆ.ಕಾಲೇಜಿಗೆ ಹೋಗಿ ಮಕ್ಕಳೊಂದಿಗೆ ಇರುವುದು ನನಗೆ  ಎಂದೂ ಕಷ್ಟದ ಕೆಲಸ ಎನಿಸಿರಲಿಲ್ಲ.
ಇದುವರೆಗೂ ನಾನು ಕೆಲಸ ಮಾಡಿದ ಕಾಲೇಜಿಗಿಂತ ಇದು ಭಿನ್ನವಾಗಿತ್ತು.ಎಲ್ಲರೂ ತಮ್ಮ ಕೆಲಸ ಮಾಡಿ ಕೊಂಡು ಹೋಗುತಿದ್ದರು ಮಹಿಳೆಯರೆ ಇದ್ದುದರಿಂದ ಹೈಸ್ಕೂಲು ವಿಭಾಗವಂತೂತಲೆ ನೋವೆ ಇರಲಿಲ್ಲ. ಕಾಲೇಜುವಿಭಾಗದಲ್ಲಿ ಇಂಗ್ಲಿಷ್‌ ಭಾಷೆಯೊಂದನ್ನು ಬಿಟ್ಟರೆ ಬಹುತೇಕ ಅತ್ಯುತ್ತಮ ಫಲಿತಾಂಶ ಬರುತಿತ್ತು. ಗ್ರಾಮಾಂತರ ಪ್ರದೇಶ. ಕನ್ನಡ ಮಾಧ್ಯಮ.ವಾದ್ದರಿಂದ  ಪಿಯುಸಿಯಲ್ಲಿ ಮಕ್ಕಳ ಇಂಗ್ಲಿಷ್‌ ಜ್ಞಾನ ಸುಧಾರಿಸಬೇಕಿತ್ತು. ಅದಕ್ಕೆ ನಾನೆ ವಿಶೇಷ ತರಗತಿಗಳನ್ನು ತೆದುಕೊಂಡು ಸುಧಾರಿಸಬಯಸಿದೆ.ಅಲ್ಲಿ ಎಲ್ಲ ಸರಿ ಇದ್ದರೂ ಒಂದುವಿಷಯ ಮಾತ್ರ ನನಗೆ ಕುಟುಕುತಿತ್ತು. ಎಲ್ಲರೂ  ಕಾರವಾರದಿಂದ ಬರುವವರೆ. ಬಸ್ಸು ತಡವಾದರೆ ಅನಿವಾರ್ಯ ವಾಗಿ ಅಶಿಸ್ತಿಗೆ ಅವಕಾಶವಿತ್ತು.ಬಸ್ಸುಗಳೇನೋ ಅರ್ಧ ಗಂಟೆಗೆ ಒಂದರಂತೆ ಇದ್ದವು. ಆದರೂ ಒಬ್ಬಿಬ್ಬರಾದರೂ ಬರುವುದು ತಡವಾಗುತಿತ್ತು. ಆ ಸಮಯದಲ್ಲಿ ಮೂಛೆ ಬಂದವರು ಮಕ್ಕಳನ್ನು ನಿಯಂತ್ರಿಸುವರು.ನಾನು ಸದಾ ಮುಂಚೆ ಬಂದು ಕೊನೆಗೆ ಹೋಗುವ ಅಭ್ಯಾಸ ಬೆಳಸಿಕೊಂಡಿರುವವನು. ಹಾಗಾಗಿ ಇದೊಂದು ವಿಷಯ ನನ್ನ ಮನಸ್ಸು ಕೊರೆಯುತಿತ್ತು.
ಒಂದು ದಿನ ನನಗೂ ಮನೆ ಬಿಡುವುದು ತಡವಾಯಿತು. ಮಗನೆ ಬಂದು ಬೈಕನಲ್ಲಿ ಬಸ್‌ ನಿಲ್ದಾಣಕ್ಕೆ  ಬಿಟ್ಟರೂ ಬಸ್ಸು ಮಿಸ್ಸಾಗಿತ್ತು . ಮುಂದೆ ಹತ್ತೆ ನಿಮಷಕ್ಕೆ ಬಸ್ಸು  ಇತ್ತು . ಬೈಕನಲ್ಲೇ  ಕಾಲೇಜಿನ ತನಕ ಡ್ರಾಪು ತೆದುಕೊಂಡರೂ ತಡವಾಗುತಿತ್ತು. ಸರಿ ಏನು ಮಡುವುದೆಂದು ತಿಳಿಯದೆ ಬಂದ ಬಸ್ಸನ್ನು ಹತ್ತಿ ಕುಳಿತೆ. ಕಾಲೇಜಿಗೆ ಬರುವಾಗ ಆದರೂ ೩೦ ನಿಮಿಷ ತಡವಾಯಿತು. ನಾನು ಮೂಬಾಗಿಲಿನಿಂದ ಇಳಿದರೆ ಹಿಂಬಾಗಿಲಿನಿಂದ  ಆರು ಜನ  ಶಿಕ್ಷಕರು ಬಸ್ಸಿನಿಂದ ದುಬ ದುಬನೆ  ಇಳಿದರು.. ನಾನು ಛೇಂಬರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ ಅವರು ಗಡಿಬಿಡಿಯಲ್ಲಿ ಸ್ಟಾಫ್ ರೂಮಿಗೆ ಹೋಗಿ ಅಲ್ಲಿ ತಮ್ಮ ಬ್ಯಾಗುಗಳನ್ನು ಇಟ್ಟು ತುಸು ಸುಧಾರಿಸಿಕೊಂಡು ತಮ್ಮ ತರಗತಿಗಳಿಗೆ ತೆರಳಿದರು.
ಪಿರಿಯಡ್‌ ಮುಗಿಸಿಕೊಂಡು ಅವರೆಲ್ಲ ಹಾಜರಿ ಪುಸ್ತಕದಲ್ಲಿ ಸಹಿ ಮಾಡಲು ಬಂದರು. ನಾನು ತುಸು ಗೊಂದಲಕ್ಕೆ ಒಳಗಾಗಿದ್ದೆ. ನನಗೆ ಗೊತ್ತಿರುವಂತೆ ಮೊದಲಿನ ಬಸ್ಸು ಸಿಗದೆ ಇನ್ನೊಂದು ಬಸ್ಸು ಹಿಡಿದು ಬರುವುದರಿಂದ ತಡವಾಗಿತ್ತು. ಯಾರೂ ಉದ್ದೇಶ ಪೂರ್ವಕವಾಗಿ ತರಗತಿಗೆ ಚಕ್ಕರ್‌ ಹೊಡೆದಿರಲಿಲ್ಲ. ಅಲ್ಲದೆ ನಾನೂ ತಡವಾಗೆ ಅವರ ಜೊತೆಗೆ ಬಂದಿದ್ದೆ.  ಇದೇ ದೆ ಮುಂದುವರಿದರೆ ಶಿಸ್ತಿಗೆ ಭಂಗಬರಬಹುದು.ಯೋಚನೆ ಮಾಡಿ ಒಂದು ಕ್ರಮತೆಗೆದು ಕೊಂಡೆ. ಮೊದಲು ನಾನೆ ಅರ್ಧ ದಿನ ರಜೆ ಯನ್ನು ಹಾಜರಿಯಲ್ಲಿ ನನ್ನ ಹೆಸರಿನ ಮುಂದೆ ಗುರುತು ಮಾಡಿದೆ. ಇಬ್ಬರು ಶಿಕ್ಷಕಿಯರು ಸಂಕೋಚ ದಿಂದ ಮೇಜಿನ ಮುಂದೆ ಬಂದು ನಿಂತರು.ಹಾಜರಿ ಪುಸ್ತಕ ತೆಗೆದು ನೋಡಿದರು, ನಾನೆ ಅರ್ಧ ದಿನ ರಜೆ ಹಾಕಿಕೊಂಡಿರುವುದು ಅವರಿಗೆ ಅಚ್ಚರಿಯಾಯಿತು.ತಾವು ಸಹಿ ಮಾಡದೆ ನನ್ನಮುಖ ನೋಡಿದರು.
ನಿಜ ,ನೀವು  ಉದ್ದೇಶ ಪೂರ್ವಕವಾಗಿ ತಡವಾಗಿಬಂದಿಲ್ಲ. ಆದರೆ ಮಕ್ಕಳಿಗಂತೂ ತೊಂದರೆಯಾಗಿದೆ. ನಾನೂ ತಡವಾಗಿ ಬಂದಿರುವೆ. ಸಮಯಪ್ರಜ್ಞೆ ಇದ್ದರೆ ಅರ್ಧ ಗಂಟೆ ಮೊದಲೆ ಮನೆ ಬಿಟ್ಟು ಮುಂಚಿನ ಬಸ್ಸಿಗೆ ಬರಬೇಕಾಗಿತ್ತು. ಅದರಿಂದ ಬಸ್ಸು ಇರಲಿಲ್ಲ ಎಂದು ಹೇಳುವುದು ಪರಿಹಾರವಲ್ಲ. ನಾನೂ ರಜೆ ಹಾಕಿಕೊಂಡಿರುವೆ  ನೀವೂ ಅರ್ಧ ದಿನದ ರಜೆ ಚೀಟಿ  ಕೊಡಿ. ಬೇಕಾದರೆ ನೀವು ಪಾಠ ಮಾಡದೆ ವಿಶ್ರಾಂತಿ ತೆಗದುಕೊಳ್ಳಿ. ನನ್ನ ಅಭ್ಯಂತರವಿಲ್ಲ ಮಧ್ಯಾಹ್ನದಿಂದ ತರಗತಿಗೆ ಹೋಗಬಹುದು. ನಿಮ್ಮ ತರಗತಿಗಳಿಗೆ ಗೈರು ಹಾಜರಿ ವ್ಯವಸ್ಥೆ ಮಾಡುವೆ. ಆದರೆ ಬಸ್ಸಿನಕಾರಣದಿಂದ ತಡವಾದರೆ ವಿನಾಯತಿ ಕೊಡಲಾಗುವುದಿಲ್ಲ.ಏನಾದರೂ ವ್ಯವಸ್ಥೆ ಮಾಡಿಕೊಂಡು ಸಮಯಕ್ಕೆ ಸರಿಯಾಗಿ ಬರಬೇಕಾದುದು ನಮ್ಮಕರ್ತವ್ಯ.  ಎಂದೆ’
ಅವರು ಎರಡು ಮಾತಿಲ್ಲದೆ ವಾಪಸ್ಸು ಹೋದರು. ಐದು ನಿಮಿಷ ಬಿಟ್ಟು ಹಿರಿಯ ಸಹಾಯಕರನ್ನ ಕರೆದು ಆರೂ ಜನರ ತರಗಿತಗಳಿಗೆ ಗೈರುಹಾಜರಿ ವ್ಯವಸ್ಥೆ  ಮಾಡಲು ಹೇಳಿದೆ. ಅವರು ಅಗತ್ಯವಿಲ್ಲ ಸಾರ್‌, ಅವರು ರಜೆ ಚೀಟಿ ಕೊಟ್ಟರೂ ತರಗತಿಗೆ ಹೋಗಲು ಸಿದ್ಧರಿದ್ದಾರೆ. ಎಂದರು
ಅದೆ ಕೊನೆ . ಯಾರೂ ತಡವಾಗಿ ಬರಲಿಲ್ಲ. ಹಾಗೇನದರೂ ಅದರೆ ಫೋನು ಮಾಡಿ ಅರ್ಧ ದಿನ ರಜೆ ಹಾಕಲು ಮನವಿ ಮಾಡುತಿದ್ದರು
ನಾನು ಅಂದುಕಂಡಂತೆ ಯಾವುದೆ ಅಸಮಧಾನ ದುಸುಮುಸು ಕಾಣಲಿಲ್ಲ. ಪ್ರಿನ್ಸಿಪಾಲರೆ ರಜ ಹಾಕಿಕೊಂಡಿರುವಾಗ ನಾವು ಮಾತನಾಡಲು ಬರುವುದೆ, ಇನ್ನು ಮೇಲೆ ಮನೆಯನ್ನು ಅರ್ಧ ಗಂಟೆ ಮೊದಲೆ ಬಿಟ್ಟರೆ ಆಯಿತು. ಅವರ ಮಾತಿನಲ್ಲು ಅರ್ಥವಿದೆ.  ಎಂದು ಅವರವರೆ ಮಾತನಾಡಿಕೊಂಡರೆಂಬ ಮಾಹಿತಿ ಬಂತು. ಯಾವುದೆ ಭಿನ್ನಾಭಿಪ್ರಾಯಕ್ಕೂ ಎಡೆ ಗೊಡದೆ ದೊಡ್ಡ ಸಮಸ್ಯೆ ಪರಿಹಾರವಾಯಿತು.


Saturday, July 13, 2013

ಸರಣಿ- ಸಾಮರಸ್ಯ ಮೂಡಿಸಿದ ಸಮಸ್ಯೆ.

ಸಮಸ್ಯೆಯೇ ಸಾಮರಸ್ಯಕ್ಕೆ ಕಾರಣವಾಯಿತು
ನಾನು ಪ್ರಾಂಶುಪಾಲನಾಗಿ ಹೊಸ ಕಾಲೇಜಿನಲ್ಲಿ ಅಧಿಕಾರ ವಹಿಸಿಕೊಂಡ ಹೊಸದು. ಅಲ್ಲಿ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ.ವಾಗಿದೆ. ಪ್ರತಿ ತರಗತಿಯಲ್ಲಿ ನಾಲಕ್ಕು ಐದು ಜನ ಇದ್ದರು. ನಾನು ಹೋದ ತಿಂಗಳೊಪ್ಪತ್ತಿನಲ್ಲೆ ಗಣೇಶನ ಹಬ್ಬ ಬಂದಿತು.ಆ ಕಾಲೇಜಿನಲ್ಲೂ ಗಣಪತಿ ಉತ್ಸವದ ಆಚರಣೆಯ ಪದ್ದತಿ ಇತ್ತು. ಅದು ವಿದ್ಯಾರ್ಥಿ ಸಂಘದ ಚಟುವಟಿಕೆಯ ಒಂದು ಭಾಗವಾಗಿತ್ತು   ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ವಿದ್ಯಾರ್ಥಿ ಸಂಘದ ವಂತಿಗೆ ಜತೆಗೆ ವಿದ್ಯಾರ್ಥಿಗಳೂ ಚಂದಾ ಹಾಕಿ ಮೂರು ದಿನದ ಉತ್ಸವ ಮಾಡುವುದು ಎಂದು ತೀರ್ಮಾನವಾಯಿತು. ಹಬ್ಬ ಹತ್ತಿರ  ಬಂದಿತು .ಆದರೆ ವಂತಿಗೆ ಹಣ ಪೂರ್ಣವಾಗಿ ಸಂಗ್ರಹ ವಾಗಿರಲಿಲ್ಲ.  ಹಲವು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇದು ನಮ್ಮ ಹಬ್ಬವಲ್ಲ ಆದುದರಿಂದ ನಾವು ಏಕೆ ವಂತಿಗೆ ಕೊಡಬೇಕು ಎಂದು ತಕರಾರು ತೆಗೆದಿದ್ದರು. ಅದನ್ನುನೋಡಿ ಇತರ ಕೆಲವರು ಅವರು ಕೊಡದಿದ್ದ ಮೇಲೆ ನಾವೂ ಕೊಡುವುದಿಲ್ಲ ಎಂದು ತಗಾದೆ ಮಾಡಿದ್ದರು.. ಇಗಾಗಿ ಹಣ ಸಂಗ್ರಹ ನೆನಗುದಿಗೆ ಬಿದ್ದಿತ್ತು. ವಿಚಾರಿಸಿದಾಗ ಅನೇಕ ವಿದ್ಯಾರ್ಥಿಗಳು ಅವರು ಕೊಡದಿದ್ದರೆ ಬೇಡ ನಾವೆ ಹೆಚ್ಚುವರಿಯಾಗಿ ಕೊಟ್ಟು ಮೊದಲಿಗಿಂತ ಜೋರಾಗಿ ಆಚರಿಸೋಣ ಎಂಬ ಹುಮ್ಮಸ್ಸಿನಲ್ಲಿದ್ದರು. ಆದರೆ ಈ ವಿಷಯ ನನ್ನ ಗಮನಕ್ಕೆ ಬಂದಾಗ ಈ ರೀತಿಯ ಯೋಚನೆ ಸರಿಯಲ್ಲ ಎನಿಸಿತು. ಇದರಿಂದ ಕಾಲೇಜಿನ ಒಗ್ಗಟ್ಟು ಮಾಯವಾಗಿ ಬಿಕ್ಕಟ್ಟು ಮೂಡುವ ಸಂಭವ ಇದೆ ಎನಿಸಿತು.ಇವರು ಈ ಹಬ್ಬ ತಮ್ಮದು ಎಂದು ಅವರನ್ನು ಬಿಟ್ಟು ತಾವೆ ಚಂದಾಹಾಕಿ ಆಚರಿದರೆ ನಾಳೆ ಅವರೂ  ಸಹಾ ನಮ್ಮಷ್ಟಕ್ಕೆ ನಾವೆ ನಮ್ಮ ಹಬ್ಬವನ್ನು ಆಚರಿಸುವೆವು ಎನ್ನಲು ಅವಕಾಶವಿತ್ತು. ಈ ಸಮಾರಂಭವು ವಿದ್ಯಾರ್ಥಿಗಳೆಲ್ಲರದು ಎಂಬ ಭಾವನೆಗೆ ಬಲವಾದ ಪೆಟ್ಟು ಕೊಡುತಿತ್ತು. ಇದರಿಂದ ಇಲ್ಲದ ಸಮಸ್ಯೆಯನ್ನು ನಾವೆ ಹುಟ್ಟಿಹಾಕಿದ ಹಾಗಾಗುತಿತ್ತು..  ಸರಕಾರಿ ಸಂಸ್ಥೆಯಲ್ಲಿ ಯಾವುದೆ ಒಂದು ಧರ್ಮಕ್ಕೆ ಸೀಮಿತವಾದ ಸಮಾರಂಭ ಆಚರಿಸಬಾರದು. ಹಾಗೆಂದು ಇದ್ದ ಸಂಪ್ರದಾಯ ಬಿಡಬಾರದು. . ನನಗೆ ಆ ತಕ್ಷಣ ಏನೂ ಹೊಳೆಯಲಿಲ್ಲ. ಆ ಸಮಸ್ಯೆಯು ಗುಂಗಿ ಹುಳ ದಂತೆ ರಾತ್ರಿಯೆಲ್ಲಾ ನನ್ನ ತಲೆಯಲ್ಲು ಗುಂಯ್‌ ಗುಡುತಿತ್ತು. ಕೊನೆಗೆ ಒಂದು ತೀರ್ಮಾನಕ್ಕೆ ಬಂದೆ . ಏನೆ ಆಚರಣೆ ಇರಲಿ ಅದು ಸಾರ್ವತ್ರಿಕ ವಾಗಿರಬೇಕು. ಅಂದಾಗ ಮಾತ್ರ ಅದು ಐಕ್ಯತೆಯ ಸಂಕೇತವಾಗುವುದು. ಮಾರನೆಯ ದಿನ ಎಲ್ಲ ಮಕ್ಕಳ ಸಭೆ ಕರೆಯಲಾಯಿತು.ಅಲ್ಲಿ ಈ ಆಚರಣೆಯ ವಿಧಾನ ಕುರಿತ ವಿಷಯ ವಿವರಿಸಲಾಯಿತು.ಇದು ಇಂದು ನಿನ್ನೆಯದಲ್ಲ. ಅನೇಕ ವರ್ಷಗಳಿಂದ ನಡೆದು ಬಂದ ಆಚರಣೆ.ಇದು ಸ್ವಾತಂತ್ರ್ಯ ಪೂರ್ವದಲ್ಲಿ ಲೋಕಮಾನ್ಯ ತಿಲಕರಿಂದ  ಇದು ಪ್ರಾರಂಭವಾಯಿತು. ಜನ ಮನದಲ್ಲಿನ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಲು ಇದು ಸಾಧನವಾಯಿತು.ಭಾರತೀಯರ ಐಕ್ಯತೆಯ  ಸಂಕೇತ ವಾಯಿತು. ಆದ್ದರಿಂದ ಇದನ್ನು ಒಂದು ಧರ್ಮಕ್ಕೆ ಸೀಮಿತ ಗೊಳಿಸುವುದು ಸಲ್ಲದು ಎಂದು ಎಲ್ಲರಿಗೂ ಮನದಟ್ಟು ಅಗುವಂತೆ ವಿವರಿಸಿದೆ. ಇನ್ನು ಆಚರಣೆಯ ವಿಧಾನ , ಹೆಚ್ಚು ಹಣ ವೆಚ್ಚಮಾಡಿ ವೈಭವದಿಂದ ಮಾಡಬೇಕೆಂದೇನೂ ಇಲ್ಲ. ಸರಳವಾಗಿ ಆಚರಿಬಹುದು ಎಂದು ಸೂಚಿಸಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಂದ ಆಚರಣೆ ಅದ್ಧೂರಿಯಾಗಿರಬೇಕು ಎಂಬ ಬೇಡಿಕೆ ಬಂತು. ಹಾಗಿದ್ದರೆ ನಾನು ಚಂದಾ ಸಂಗ್ರಹಕ್ಕೆ ಅನುಮತಿಸಿದೆ. ಆದರೆ ಕಡ್ಡಾಯ ಮಾಡ ಬಾರದು. ಯಾರೂ ಧಾರ್ಮಿಕ ಕಾರಣದ ಮೇಲೆ ಚಂದಾ ನಿರಾಕರಿಸಬಾರದು ಆರ್ಥಿಕವಾಗಿ ತೊಂದರೆ ಇದ್ದರೆ  ನಾಮಕಾವಾಸ್ತೆ ಕೈಲಾದುದನ್ನು ಕೊಡಲಿ. ಆದರೆ ಇಲ್ಲ ಎನ್ನಬಾರದು, ಎಂದು ಮನವರಿಕೆ ಮಾಡಲಾಯಿತು.
 ಅಷ್ಟರಲ್ಲಿ ಒಂದು ದನಿ ಬಂದಿತು. ನಾವೂ ಪೂಜೆ ಮಾಡಬಹುದೆ ?  ಕೇಳಿದವನು ದಲಿತವರ್ಗದವ. ನಾನು ಖಂಡಿತ ಎಂದೆ. ನಾವು ಗಣೇಶನ ಪೂಜೆಗೆ ಹೊರಗಿನಿಂದ ಬ್ರಾಹ್ಮಣರನ್ನೋ, ಅಯ್ಯನವರನ್ನು ಕರೆಸುವುದು ಬೇಡ. ವಿಗ್ರಹಕ್ಕೆ ಜನಿವಾರ, ಲಿಂಗಧಾರಣೆಯ ಹಂಗಿಲ್ಲ. ನಮಗೆ ಮಂತ್ರ ಸಹಿತ ಪೂಜೆ ಎಂದೇನೂ ಇಲ್ಲ. ಯಾರಾದರೂ ವಿದ್ಯಾರ್ಥಿ ಶುಚಿಯಾಗಿ ಬಂದು ಪೂಜೆ ಮಾಡಬಹುದು. ಅವನಿಗೆ ಯಾರು ಬೇಕಾದರೂ ಇಬ್ಬರು ಮೂವರು ಸಹಾಯ ಮಾಡಲಿ. ಅದನ್ನು ಮಕ್ಕಳೆ ನಿರ್ಧರಿಸಲಿ,  ಎಂದೆ.  ಸಾಧ್ಯವಾದರೆ ಅಲ್ಪ ಸಂಖ್ಯಾತ ಮತ್ತು ದಲಿತ ಮಕ್ಕಳೂ ಪೂಜಾ ತಂಡದಲ್ಲಿರಲಿ, ಎಂದು ತಿಳಿಸಿದೆ.
 ಆಗಾ ನಮ್ಮ ಸಹ ಶಿಕ್ಷಕರೊಬ್ಬರು , ಅದೆಲ್ಲಾ ಬೇಡ ಸಾರ್‌, ಅಲ್ಪ ಸಂಖ್ಯಾತರು ಮೂರ್ತಿ ಪೂಜೆ ಮಾಡುವುದು ಅವರ ಧರ್ಮದ ಪ್ರಕಾರ ನಿಷಿದ್ಧ,  ಹಾಗೇನಾದರೂ ಮಾಡಿಸಿದರೆ ಅವರ ಜನಾಂಗದಿಂದ ಆಕ್ಷೇಪಣೆ  ಬರಬಹುದು, ಎಂದು ಕೊಕ್ಕೆ ಹಾಕಿದರು.
ಒಂದು ಕ್ಷಣ ಅವರ ಮಾತು ನಿಜ ಎನಿಸಿತು. ಇದು ಇಲ್ಲದ ಸಮಸ್ಯೆಗೆ ಕಾರಣವಾಗಬಹುದು ಎನಿಸಿತು.ಆದರೆ ನನಗೆ ನಮ್ಮ ಊರಲ್ಲಿ ಆಚರಿಸುವ ಮೊಹರಂ ಹಬ್ಬದ ನೆನಪು ಬಂದಿತು. ಆ ಸಮಯದಲ್ಲಿ ಪಂಜಾಗಳಿಗೆ ಬಣ್ಣದ ಬಟ್ಟೆ ತೊಡಿಸಿ ಒಂಬತ್ತು  ದಿನ  ಅಹೋರಾತ್ರಿ ಪೂಜಿಸುವ ಪರಿಪಾಠ ಕಣ್ಣ ಮುಂದೆ  ಬಂದಿತು.ಕೆಲವು ಕಡೆ ಅದನ್ನು ಪೀರಲ ದೇವರು ಎಂದರೆ ಇನ್ನೂ ಕೆಲವು ಕಡೆ ಬಾಬಯ್ಯನ ಹಬ್ಬ ಎನ್ನುವರು.  ಈ ಹಬ್ಬವನ್ನು ಮುಸ್ಲಿಮರ ಜತೆ ಹಿಂದೂಗಳೂ ಆಚರಿಸುವರು. ಕೆಲವು ಗ್ರಾಮಾಂತರ  ಪ್ರದೇಶಗಳಲ್ಲಿ ಹಿಂದೂಗಳ ಸಂಖ್ಯೆಯೆ ಅಧಿಕ.  ಹೆಣ್ಣು ,  ಪಿಂಛಾದಿಂದ  ಮಗುವಿ ಮೈ ಸವರಿದರೆ ರೋಗ  ನಿವಾರಣೆಯಾಗುವುದು ಎಂಬುದು  ನಂಬಿಕೆ. ಐದನೆ ದಿನ ಏಳನೆ ದಿನ ದೇವರನ್ನು ಹೊತ್ತವರು ಮೆರವಣಿಗೆಯಲ್ಲಿ ಊರ ಸಂಚಾರಕ್ಕೆ ಹೊರಡುವುರು.ಆಗ ಅದರ ಪಾದದ ಮೇಲೆ ತುಂಬಿದ ಕೊಡದ ನೀರು ಹಾಕಿ ಅದನ್ನತಮ್ಮ ಮೈಮೇಲೆ ಸಿಡಿಸಿಕೊಳ್ಳುವರು.ಅದರ ಲೋಭಾನದ ಹೊಗೆ ಹಾಕಿಸಿಕೊಂಡರೆ ಅನಿಷ್ಟ ಪರಿಹಾರವಾಗುವುದು ಎಂದು ಬಲವಾಗಿ ನಂಬಿರುವರು. ಅಷ್ಟೆ ಅಲ ಆ ದೇವರುಗಳು ಹಳ್ಳಿಯಲ್ಲಿನ ದುರುಗಮ್ಮ , ಗಾಳೆಮ್ಮನ ಗುಡಿಗೆ ಬಂದು ತಮ್ಮ ತಂಗಿಯನ್ನು ನೋಡಿಕೊಂಡು ಹೋಗಬೇಂಬ ವಾಡಿಕೆ ಇದೆ.  ಊರಲ್ಲೆ ಎರಡು ಕಡೆ ಇಟ್ಟಿದ್ದರೆ , ಇಲ್ಲವೆ ಹತ್ತಿರದಲ್ಲೆ ಇರುವ ಊರಿಗೆ ಹೋಗಿ ತಮ್ಮ ಭಾಯಿಯನ್ನು ಭೇಟಿಯಾಗುವರು.ಅದನ್ನು ಅಲಾಯಿ ಬಿಲಾಯಿ ಕೊಡುವುದು ಎನ್ನುವರು. ಅಲ್ಲದೆ ದೇವರ ಮಂದೆ ತೆಗೆದ ಆಲಾಯಿ ಕುಣಿಯಲ್ಲಿ ಬೆಂಕಿಹಾಕಿ ಸುತ್ತಲೂ ರಾತ್ರಿ ಬಹು ಹೊತ್ತಿನ ತನಕ ಕುಣಿಯುವರು.ಬಹತೇಕ ಅವರೆಲ್ಲ ಹಿಂದುಗಳೆ. ಒಂಬತ್ತನೆ ದಿನ ರಾತ್ರಿ ಖತಲ್‌ ರಾತ್ರಿ. ಅದೂ ಕತ್ತಲ ರಾತ್ರಿ ಎಂದೆ ಪ್ರಸಿದ್ಧಿ. ಅಂದು ರಾತ್ರಿ  ಇಡೀ   ಅವುಗಳ ಓಡಾಟ. ಆಗಿನ  ಜನ ಜಂಗುಳಿ ಹೇಳ ತೀರದು. ಅಂದು ಬೆಂಕಿ ತುಳಿಯುವುದೂ ಇದೆ. ಹತ್ತನೆಯ ದಿನ ದೇವರು ಸಾಯುವ ದಿನ. ಅಂದು ಸಂಜೆ  ಎಲ್ಲರೂ ಮೆರವಣಿಗೆಯಲ್ಲಿ ನೀರಿನ ತಟಾಕಕ್ಕೆ ಹೋಗಿ ದೇವರಬಟ್ಟೆ ತೆಗೆದು  ಪೆಟ್ಟಿಗೆಯಲ್ಲಿಟ್ಟು ಕಂಡು ಶೋಕ ಗೀತೆ ಹಾಡುತ್ತಾ ಮೂಲ ಸ್ಥಾನಕ್ಕೆ ಬರುವರು. ಮತ್ತೆ ಮುಂದಿನ ವರ್ಷದವರೆಗೆ ಅವನ್ನು ಮಸೀದೆಯಲ್ಲಿ ಭದ್ರವಾಗ ನೇತು ಹಾಕುವರು. ಅಲ್ಲಿಗೆ ಮೊಹರಂ ಮುಕ್ತಾಯ. ಈ ಆಚರಣೆ ಅಲ್ಪ ಸ್ವಲ್ಪ ವ್ಯತ್ಯಾಸದೊಂದಿಗೆ ಎಲ್ಲ ಕಡೆ ಇದೆ.ದೇವರಿಗೂ ಮಾನವರಂತೆ ಅಕ್ಕ, ತಮ್ಮ, ಸಂಬಂಧ ಕಲ್ಪಿಸಿ, ಕೊನೆಗೆ ಸಾವೂ  ಇದೆ ಎಂದು ನಂಬುವ ಜನಪದದ ರೀತಿ ಬಹು ವಿಸ್ಮಯಕಾರಿ. ಅದೂ ಎಲ್ಲ ಜಾತಿ ಧರ್ಮದ ಕಟ್ಟು ಮೀರಿದ ಆಚರಣೆಯಾಗಿದೆ.ಈ ವಿಷಯವನ್ನು ನಮ್ಮ ಶಿಕ್ಷಕರ ಸಭೆಯಲ್ಲಿ ಚರ್ಚಿಸಿದೆ. ಎಲ್ಲರೂ ಈ ರೀತಿ ಆರಣೆ ಇರುವುದು ನಿಜ ಎಂದು ಒಪ್ಪಿಕೊಂಡರು. ಆದರೆ ಮೊದಲಿನ ಜೋರು ಇಲ್ಲ ಎಂದರು ಹಾಗಿರುವಾಗ ಗಣಪತಿಯೂ ಒಂದು ಸಾಂಕೇತಿಕ ಉತ್ಸವವಾಗಬೇಕು.ಅದನ್ನು ಯಾವುದೆ ಧರ್ಮಕ್ಕೆ ಸೀಮಿತ ಗೊಳಿಸಬಾರದು ಇದು ಪರಂಪರೆಯ ಒಂದು ಭಾಗ. ಶಾಲೆಯಲ್ಲಿನ ಆಚರಣೆ ಸಮಾಜಕ್ಕೆ ಮಾದರಿಯಾಗಬೇಕು. ಇದು ಜಾತಿ ಮತಗಳ ಸೋಂಕಿನಿಂದ ದೂರವಿರಬೇಕು  ಎಂದು ಅವರಿಗೆಲ್ಲ ಮನದಟ್ಟು ಮಾಡಿದೆ. ಆಕ್ಷೇಪಣೆ ಮಾಡಿದವರೂ  ತಲೆ ದೂಗಿದರು.
ಆ ವರ್ಷ ಗಣೇಶನ ಉತ್ಸವ ಚೆನ್ನಾಗಿಯೆ ನಡೆಯಿತು.ಎಲ್ಲ ಮಕ್ಕಳೂ ಉತ್ಸಾಹದಿಂದ ಭಾಗವಹಿಸಿದರು  ತಳಿರು ತೋರಣ ಕಟ್ಟುವಲ್ಲಿ , ಮಂಟಪ ಅಲಂಕಾರ ಮಾಡುವ  ಕೆಲಸದಲ್ಲಿ, ಬಣ್ಣದ ಕಾಗದ ಕತ್ತರಿಸಿ ಅಂಟಿಸುವಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿದರು. ಫುಜೆಯ ದಿನ ಬಂದಿತು. ಅಂದು ಪೂಜೆಗೆ ಒಬ್ಬರ ಬದಲು ಮೂವರು ತಂಡವನ್ನು   ಪೂಜೆ ಮಾಡಲು  ನಿಯೋಜಿತವಾಯಿತು. ಪೂಜಾ ವಿಧಾನವನ್ನು ತಿಳಿದವನಿ ಜತೆ ಅಲ್ಪಸಂಖ್ಯಾತ ಮತ್ತು ದಲಿತ ವಿದ್ಯಾರ್ಥಿಇರುವ ತಂಡ  ಪೂಜೆ ಮಾಡಿತು. ಒಬ್ಬನು ಶ್ಲೋಕ ಹೇಳಿದರೆ ಇನ್ನೊಬ್ಬನು ಹೂ ಏರಿಸಿದ. ಮತ್ತೊಬ್ಬನು ಗಂಟೆಬಾರಿಸಿ  ಮಂಗಳಾರತಿ ಎತ್ತಿದ. ತೀರ್ಥ ಪ್ರಸಾದ ವಿತರಣೆಯೊಂದಿಗೆ ಉತ್ಸವವು ಯಾವುದೆ ಅಡೆ ತಡೆಯಿಲ್ಲದೆ ಸಾಂಗವಾಗಿ ಮುಗಿಯಿತು.
 ಗಣೇಶನ ವಿಸರ್ಜನೆಯನ್ನು  ಐದನೆ ದಿನ  ಏಳನೆ  ದಿನ  ಮಾಡುವುದು  ವಾಡಿಕೆ.ಅದರಿಂದ ಅಷ್ಟೂ ದಿನ ಪಾಠ ಪ್ರವಚನಕ್ಕೆ ತೊಂದರೆ. ಅದರಿಂದ ಅವದಿಯನ್ನು ಮೂರೆ  ದಿನಕ್ಕೆ ಇಳಿಸಲಾಯಿತು. ಪೂಜಾ ಸಮಯದಲ್ಲಿ ಬಿಡುವಿರುವ ತರಗತಿಯಮಕ್ಕಳು ಮಾತ್ರ ಇದ್ದರೆ ಸಾಕೆಂದು ವಿಧಿಸಲಾಯಿತು. ಜೊತೆಗ ವಿರಾಮವಿರುವ ಶಿಕ್ಷಕರು ಕೂಡಾ ಭಾಗವಹಿಸುವರು. ಮೂರನೆಯ ದಿನ ಮಾತ್ರ ಮಧ್ಯಾಹ್ನ ಎಲ್ಲರಿಗೂ ಪಾಠ ಇಲ್ಲ.   ಎಲ್ಲರೂ ಸೇರಿ ಅದ್ಧೂರಿಯಿಂದ ಮೆರವಣಿಗೆಯಲ್ಲಿ ಗಣೇಶನನ್ನು ಹತ್ತಿರದ ಕೆರೆಗೆ ಕೊಂಡೊಯ್ಯಲಾಯಿತು. ಶಾಲೆಯ ಡ್ರಮ್‌ ಸೆಟ್‌, ತತ್ತೂರಿ ಧ್ವನಿಯಜತೆಗೆ ನೂರಾರು ಕಂಠದಿಂದ ಹೊರಟ ಗಣಪತಿ ಬಪ್ಪಾ ಮೋರಯ್ಯಾ, ಮುಂದಿನ ವರ್ಷಕ್ಕೆ ಬಾರಯ್ಯಾ ಎಂಬ ಘೋಷಣೆ ನಿನದಿಸುತಿತ್ತು. ವಿಸರ್ಜನೆಯ ನಂತರ ಚರುಪು ಹಂಚಿ ಕಾಲೇಜಿಗೆ ವಾಪಸ್ಸಾದೆವು
ಸಮಸ್ಯೆ ಯಾಗಬಹುದಿದ್ದ ವಿಷಯ ಸಾಮರಸ್ಯಕ್ಕೆ ಕಾರಣವಾಯಿತು.   . 



Wednesday, July 10, 2013

ವಾಯುವಿಹಾರ ಜೊತೆಗೆ ವ್ಯಾಪಾರ


ಬೆಂಗಳೂರು ಉದ್ಯಾನಗಳ ನಗರ ಎಂಬ ಹೆಮ್ಮಗೆ ಪಾತ್ರವಾಗಿತ್ತು  ಹಲವು ದಶಕಗಳ ಹಿಂದೆ. ಬೆಂಗಳೂರು ಎಂದರೆ ಕಬ್ಬನ್‌ಪಾರ್ಕ ಮತ್ತು ಲಾಲ್‌ಬಾಗ್‌ಗಳ ನೆನಪು ಬರುವುದು. ಅವು ಶತಮಾಗಳಷ್ಟು ಹಳೆಯವು.ಆಗಿನ ಬೆಂಗಳೂರಿನ ಶ್ವಾಸ ಕೋಶಗಳೇ ಆಗಿದ್ದವು. ಆದರೆ ಕಳೆದ ದಶಕದಲ್ಲಿ ಬೆಂಗಳೂರಿನ ಬೆಳವಣಿಗೆ ಬೃಹತ್ತಾಗಿದೆ. ಜನ ಸಂಖ್ಯೆ ಹತ್ತಿರ ಹತ್ತಿರ ಕೋಟಿಗೆ ತಲುಪಪಿದೆ. ಹೊಸೊ ಹೊಸ ಬಡವಾಣೆಗಳು ತಲೆಎತ್ತುತ್ತಲಿವೆ. . ಮಹಾನಗರ ಪೂರ್ಣ ಕಾಂಕ್ರೀಟ್‌ಕಾಡು ಆಗುವುದನ್ನು ತಪ್ಪಿಸಲು ಪ್ರತಿ ಬಡವಾಣೆಗೂ ಒಂದು ಉದ್ಯಾನ ವಿರಲೇ ಬೇಕೆಂದು. ನಿಯಮವಿದೆ..ಆದರೆ ಅವು ಬಹುತೇಕ ಕಾಗದದ ಮೇಲಿವೆ. ಒಂದು ಕಾಲಕ್ಕೆ ನಿವೃತ್ತರ ಸ್ವರ್ಗವಾಗಿದ್ದ ಮಹಾನಗರದಲ್ಲಿ ಇಂದು ಸಂಚಾರ ದಟ್ಟಣೆಯಿಂದ  ಎಂಥವರಿಗೂ ಓಡಾಟ ಕಷ್ಟದಾಯಕವಾಗಿದೆ. ಹೀಗಿರುವಾಗ ಹಿರಿಯ ನಾನಗರೀಕರ ಹೊರ ಸಮಚಾರ ಬಲುಕಷ್ಟ.. “ಅಗತ್ಯವೇ ಅವಿಷ್ಕಾರದ ತಾಯಿ”  ಎಂಬ ಮಾತಿದೆ. ಅದಕ್ಕೆ ಸುಮಾರು ಎಪ್ಪತ್ತೈದು ವರ್ಷದ ಹಿಂದೆ ನಿರ್ಮಾಣವಾದ ಬಸವನ ಗುಡಿ ಬಡಾವಣೆಯ ಕೃಷ್ಣರಾವ್‌ ಪಾರ್ಕನಲ್ಲಿ ನಸುಕಿನಲ್ಲಿ ಬರುವ ಓಢಾಡಿಗರು ತಮ್ಮದೇಆದ ಪರಿಹಾರ ಕಂಡುಕೊಂಡಿರುವರು,
 ಕೃಷ್ಣರಾವ್ ಪಾರ್ಕ ೧೯೪೦ನೆಯ ಇಸ್ವಿಯಲ್ಲಿ  ದಿವಾನರಾಗಿದ್ದ ಕೃಷ್ಣರಾಯರ ಕನಸಿನ ಕೂಸು. ಅವರೇ ನೀಡಿದ್ದ ಸುಮಾರು ೨೦ ಎಕರೆ ದಟ್ಟ  ಮರಗಳಿಂದ ಕೂಡಿದ ವನಪ್ರದೇಶವನ್ನು ಅವರ ಹೆಸರಿಬಲ್ಲೇ ಪಾರ್ಕ ಮಾಡಲಾಯಿತು. ಬರಬಬರುತ್ತಾ ಅಲ್ಲಿ ಪೋಲೀಸ್‌ ಸ್ಠೇಷನ್, ಜಲಮಂಡಳಿ,,ದೇವಸ್ಥಾನಗಳು ತಲೆ ಎತ್ತಿದವು. ಸುಮಾರು ಎರಡೂವರೆ ಎಕರೆ ಜಾಗ ಕಡಿಮೆ ಯಾಯಿತು. ಎಚ್ಚೆತ್ತ ನಾಗರೀಕರು ಪ್ರತಿಭಟಿಸಿದರು. ಪರಿಣಾಮ ಅದಕ್ಕೆ ಒಂದು ಕಾಂಪೌಂಡು ಆಯಿತು. ಅಲ್ಲಿನ ವಾಕರ್‌ಗ್ರೂಪುನ ಆಸಕ್ತಿಯಿಂದ ಒಂದೊಂಏ ಅನುಕೂಲಗಳು  ಲಭ್ಯವಾಗ ತೊಡಗಿದವು. ವಾಕಿಂಗ್‌ ಟ್ರಾಕ್‌ ತಯಾರಾಯಿತು. ಮಕ್ಕಳ ಆಟಿಕೆಗೆ ಉಪಕರಣಗಳು ಬಂದವು. ಜೊತೆಗೆ ಯುವಕರಿಗೂ ಆಟವಾಡಲು ವಿಶಾಲ ಮೈದಾನ ಕೈ ಬಿಸಿ ಕರೆಯುವಂತಿದೆ,,ಈಗ ಬೆಳಗ್ಗೆ ಮತ್ತು ಸಂಜೆ ನೂರಾರು ಜನ ಬರುವ ತಾಣವಾಗಿ ಪರಿವರ್ತಿತವಾಗಿದೆ. ಅದರ ಪರಿಣಾಮ ವ್ಯಾಪಾರಿಗಳನ್ನೂ ಆಕರ್ಷಿಸಿದೆ.ಈಗ ಚುಮುಚುಮ ನಸುಕಿನಲ್ಲಿ ಪಾರ್ಕಿನ ಮುಂದಿಗಡೆ ಒಂದು ಮನಿಮಾರ್ಕೆಟ್‌ ಸೇರುವುದು..

ಅಲ್ಲಿವಿಶೇಷವಾಗಿ ಬರುವವರ ಅಗತ್ಯಕ್ಕೆ ತಕ್ಕಂತೆ ಮಾರಾಟ. ಮೊದಲನೆಯದಾಗಿ ಅಲ್ಲಿಆರೋಗ್ಯಕ್ಕೆ ಆದ್ಯತೆ. ಅದಕ್ಕೆ ವಿವಿಧ ರಸಗಳ ನ್ನು  ಅರೋಗ್ಯದೃಷ್ಠಿಯಿಂದ ಸಹಾಯಕವಾಗು ,ತರಕಾರಿ ರಸ, ಹಾಗಲಕಾಯಿ ರಸ, ಕ್ಯಾರೆಟ್‌ರಸ, ಸೌತೆ ಕಾಯಿರಸ ಲೋಳೆಸರದ ರಸ, ಪುದಿನ,ಸೊಪ್ಪಿನ ರಸ, ಹೀಗೆ ಹಲವು ಹನ್ನೊಂದು ತಾಜಾರಸಗಳು ಲಭ್ಯ.  ಅವು ರುಚಿ ರುಚಿಯಾಗಿ ಇರುವುದದಿಲ್ಲ. ಆದರೆ ಅಧರಕ್ಕೆ ಕಹಿಯಾದುದು ಉದರಕ್ಕೆ ಸಿಹಿ ಎನ್ನುವ ಮಾತಿದೆಯಲ್ಲ ಅದನ್ನ  ನಂಬಿ ಜನ ಕುಡಿಯುವರು. ಬರಿ ಐದು ರೂಪಾಯಿಗೆ ಒಂದು ಚಿಕ್ಕ ಲೋಟ,
ಅದರ ಪಕ್ಕದಲೇ ಇನ್ನೊಂದು ಶಕ್ತಿದಾಯಕ ಪಾನೀಯ. ಅದೇ ರಾಗಿ ಮಾಲ್ಟ್‌. ಬರಿ ರಾಗಿಗಂಜಿ ಎನ್ನ ಬೇಡಿಅದಲ್ಲ. . ಅದಕ್ಕೆ ಹತ್ತಾರು ಆರೋಗ್ಯಕ್ಕೆ ಪೂರಕವಾದ ವಸ್ತುಗಳ ಪುಡಿ ಸೇರಿಸುವರು. ವಾಕ್‌ ಮಾಡಿದಣಿದವರಿಗೆ ತಕ್ಷಣದ ಶಕ್ತಿಪೂರಣವಾಗುವುದು.. ಜೊತೆಗೆ ಸಕ್ಕರೆ ರೋಗ ಮತ್ತು ರಕ್ತದ ಏರೊತ್ತಡದವರಿಗೂ ಇದು ಬಹಳ ಉಪಯುಕ್ತ.
ಇನ್ನು ಬೆಳಗ್ಗೆ ಬರುವವರೆಲ್ಲ ಹಿರಿಯ ನಾಗರೀಕರೆ. ಸಹಜವಾಗಿ ಅವರ ಶರೀರದದ ಸಂಗಾತಿಗಳಾದ ಮಧು ಮೇಹ ಮತ್ತ ರಕ್ತದ ಒತ್ತಡದ ತಕ್ಷಣದ ತಪಾಸನೆಗೆ ಆಸಪತ್ರೆಗಳ ಮತ್ತು ಔಷಧಿ ಕಂಪನಿಗಳವರು  ಉಚಿತವಾಗಿ ಇಲ್ಲವೇ ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಲು ಕಾದು ಕುಳಿತಿರುವುರು..ವಯಸ್ಸಾದವರು ಆಗಾಗ ಈ ಪರೀಕ್ಷೆಗಳನ್ನು  ಮಾಡಿಸಿಕೊಳ್ಳಲೇ ಬೇಕು. ಅವರಿಗೆ ಸಂಚಾರ ದಟ್ಟಣೆಯಲ್ಲಿ ಹೋಗಿ ಆಸ್ಪತ್ರೆಗೆ ಹೋಗಿ  ಕಾಯುವ ಕಷ್ಟ ತಪ್ಪುವು.ದು.ಜೊತೆಗೆ ಏರು ಪೇರಾಗಿದ್ದರೆ ಸೂಕ್ತ  ಮಾಹಿತಿ ದೊರೆಯುವುದು

      ಇಳಿವಯಸ್ಸಿನಲ್ಲಿ ಅರೋಗ್ಯ ಕಾಪಾಡಿಕೊಳ್ಳಲು ಮೂರು ಅಂಶಗಳು ಅತಿ ಮುಖ್ಯ. ಆಹಾರ, ಔಷಧಿ ಮತ್ತು ವ್ಯಯಾಮ         ಅದಕ್ಕಾಗಿ ಆರೋಗ್ಯಕ್ಕೆ  ಪೂರಕವಾಗುವು ತಾಜಾ ಹಸಿರುಎಲೆ  ತರಕಾರಿ, ಮೊಳಕೆ ಕಾಳುಗಳು ಲಭ್ಯ.  ವಾಕಿಂಗ್‌ಮುಗಿಸಿ ಹಾಗೆಯೇ ಕೈನಲ್ಲಿ ಹಿಡಿದುಕೊಂಡು ಹೋದರೆ ಮನೆಯವರಿಗೂ ತುಸು ಸಹಾಯ.

ಆದರ ಜೊತೆ ಕುರುಕುಲ ತಿಂಡಿ, ಕೋಡುಬಳೆ, ನಿಪ್ಪಟ್ಟು ಹಪ್ಪಳ ಇತ್ಯಾದಿಗಳನ್ನು  ಮಾರಲು ಜನ ಕಾದಿರುವುರು.ಅದೆಲ್ಲದರ ಜೊತೆ . ಬೆಳಗಿನ ಪೂಜೆ ಗೆ ಹೂವು ಬೇಕೆ ಬೇಕಲ್ಲ. ಅದನ್ನು ಮಾರುವವರೂ ಸದಾಸಿದ್ದ,ಇನ್ನು ಚುನಾವಣೆ  ಸಮಯ ಬಂತೆಂದರ ರಾಜಕೀಯ ನಾಯಕರ ಸವಾರಿ. ಮುಗುಳುನಗುತ್ತಾ ಕಂಡವರಿಗೆಲ್ಲ ಕೈಮುಗಿಯುವರು, 
ಗೇಟಿನ ಅಕ್ಕಪಕ್ಕದ ಜಾಗದಲ್ಲಿ ಅಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ  ಬ್ಯಾನರ್‌ಗಳು. ಬಾಗಿಲಿ\ಲ್ಲೇ ನಿಂತು ಕರಪತ್ರನೀಡುವ ಸ್ವಯಂಸೇವಕರು. ಮುಂಜಾನೆ ಮೂರು ತಾಸು ಪಾರ್ಕ ಮುಂದೆ ಭರ್ಜರಿವ್ಯಪಾರ.. ಹೀಗಾಗಿ ಪಾರ್ಕಿಗೆ ದೈಹಿಕ ಆರೋಗ್ಯದ ಸುಧಾರಣೆಯ ಜೊತೆ ಜೊತೆಗೆ ಅನೇಕ ಕೆಲಸಗಳನ್ನು ಮುಗಿಸಿ ಹೊರಡುವ ಅನೂಕೂಲ ಈಗಿದೆ. ಜೊತೆತೆಗ ಗೆಳೆಯರ ಭೇಟಿ , ಹರಟೆ, ಸುಖದುಃಖ ಸಮಾಚಾರ ವಿನಿಮಯ, ಮತ್ತು ಸಾಮಾಜಿಕ ಸಂವಹನ ಕೇಂದ್ರವಾಗಿದೆ.  ,