Monday, March 25, 2013

ಬೆಳೆಗೆರೆ  ಕೃಷ್ಣ ಶಾಸ್ತ್ರಿಗಳು  -ಗಾಂಧಿಯುಗದ ಕೊನೆಯ ಕೊಂಡಿ 


ಸುಮಾರು ಒಂದ ದಶಕದ ಹಿಂದೆ ನಿವೃತ್ತನಾಗಿ ಚಿತ್ರದುರ್ಗದಲ್ಲಿ ಮಗನ ಜೊತೆ ಇದ್ದೆ.ಒಂದು ದಿನ ಬೆಳಗ್ಗೆ ಬಿಳಿ ಜುಬ್ಬತೊಟ್ಟ ಬಿಳಿ ಧೋತರ ಉಟ್ಟ  ತಲೆಗೆ ಬಿಳಿ ಟವೆಲ್‌  ಸುತ್ತಿಕೊಂಡ ಗಾಂಧೀಜಿಯಂತೆ ಮುಖವೆಲ್ಲ ಮುಗುಳು ನಗೆಯಾದ ಹಲ್ಲಿಲ್ಲದ ಬಾಯಿಯ ,ಕೋಲು ಮುಖದ ಹಿರಿಯರೊಬ್ಬರು ಆಕಾಶವಾಣಿಯ ಬೇದ್ರೆ ಮಂಜುನಾಥರ ಜೊತೆಗೆ ಮನೆಗೆ ಬಂದರು..ಕುಳಿತಿದ್ದ ಮಗ ಧಡಕ್ಕನೆ ಎದ್ದು ಅವರಿಗೆ ಕೈ ಮುಗಿದ.,”ಬೆಳೆಗೆರ ಶಾಸ್ತ್ರಿಗಳು ಬರಬೇಕು, ಬರಬೇಕು “ ಎಂದು ಸ್ವಾಗತಿಸಿದ, ಯಾವುದೇ ಬಿಂಕ ಬಿಗುಮಾನ ಇಲ್ಲದೆ ಒಳ ಬಂದು ಕುಳಿತರು. ಹೊಸದಾಗಿ ಬಂದಿರುವಿರಂತೆ ಹೇಗಿದೆ ಜೀವನ ಎಂದು ಉಭಯ ಕುಶಲೋಪರಿ ವಿಚಾರಿಸಿದರು . “ಹಿಂದೂ ಪತ್ರಿಕೆಗೆ ಹೊಸದಾಗಿ ಜಿಲ್ಲಾವರದಿಗಾರರಾಗಿ ಬಂದಿರುವವರಿಗೆ  ಸಾಹಿತ್ಯ ಸಂಸ್ಕೃತಿಯಲ್ಲಿ ಆಸಕ್ತಿ ಇದೆ. ನಿಮ್ಮನ್ನು  ನೋಡ ಬೇಕು ಎಂದರು, ಹಾಗಾದರೆಗ ಸರಿ , ನಾವೆ ಹೋಗೋಣ ಎಂದು ಬಂದೆ.”  ಎಂದು.ನುಡಿದರು.. ಸಾಹಿತ್ಯ , ಜೀವನ, ಶಿಕ್ಷಣ ಎಲ್ಲದರ ಬಗ್ಗೆ ನಿರರ್ಗಳವಾಗಿ ಮಾತನಾಡಿದರು. ಮಹಾತ್ಮಗಾಂದೀಯವರ ಅಂತಿಮ ಕ್ಷಣ, ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿ,ಮಾಸ್ತಿಯವರಮೃದು ಮನಸ್ಸು, ಜಿಡ್ಡು ಕೃಷ್ಣ ಮೂರ್ತಿಯವರ ತತ್ವಜ್ಞಾನ ದವರೆಗೆ ಅವರ ಮಾತಿನ ವ್ಯಾಪ್ತಿ ಹರಡಿತ್ತು.ಅವರು ಬಳ್ಳಾರಿಯ ರವಿಬೆಳಗೆರೆಯವರ ಸೋದರಮಾವನೆಂದು ತಿಳಿದು ಇನ್ನೂ ಹತ್ತಿರವೆನಿಸಿತು ನಾನು ನಿವೃತ್ತ ಪ್ರಾಂಶುಪಾಲನೆಂದು ಗೊತ್ತಾಗಿ ಒಂದು ಸಲ ನಮ್ಮ  ಹಳ್ಳಿಯ ಶಾಲೆ ನೋಡಲು ಬನ್ನಿ ಎಂದು ಆಮಂತ್ರಣ ನೀಡಿದರು.ತಾವಾಗಿಯೇ ಬಂದು ಬಾಯ್ತುಂಬ ಮಾತನಾಡಿದ ಹಿರಿಯ ಜೀವದ ಸರಳತೆ ಮನ ಗೆದ್ದಿತುನಮ್ಮ ಮನೆಯಾಕೆ ನೀಡಿದ ತಿಂಡಿತಿನ್ನಲಿಲ್ಲ. ಒಂದುಲೋಟ ಹಾಲು ಮಾತ್ರ ಸೇವಿಸಿದರು.ಅವರ ದರ್ಶನದ ಭಾಗ್ಯ ಮತ್ತೆ ದೊರಕಿದ್ದು ಅವರ ಊರಿಗೆ ಹೋದಾಗ.
ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು ಎಂದರೆ ಚಿತ್ರ ದುರ್ಗ ಜಿಲ್ಲೆಯಲ್ಲಿ  ಮನೆ ಮಾತು. ಎಲ್ಲರಿಗೂ ಬೇಕು. ಸಾತ್ವಿಕ ಜೀವನದ ಇನ್ನೊಂದು ಹೆಸರು. ಒಂದುರೀತಿಯಲ್ಲಿ ನಡೆದಾಡುವ ಗಾಂಧಿ. ಅವರು ವಿಶ್ವ ಕುಟುಂಬಿಗಳು. ಜಾತಿಮತಗಳ ಗೋಜುಇಲ್ಲ . ಹಿರಿಕಿರಿಯರೆಂಬ ಬೇಧವಿಲ್ಲ. ಯಾವುದೇ ಸಾಹಿತ್ಯಕಾರ್ಯಕ್ರಮವಿದ್ದರೆ ಹಾಜರು..ಎತ್ತಿದವರ ಕೈ ಕೂಸು.. ಮಾಕಂ ಸೆಟ್ಟರು, ಕಾಳಿಂಗ ಕೃಷ್ಣ, ಬೇದ್ರೆ, ಹುಸೆನ್‌ ಸಾಬ್,ಸಿದ್ದಯ್ಯ  ಎಲ್ಲರೂ ಬೇಕು.ತನ್ನದೆನ್ನುವ ಕುಟುಂಬ ಇಲ್ಲ ಹೆಂಡತಿ ಮಕ್ಕಳು ಇಲ್ಲ. ಚಳ್ಳಕೆರೆ ತ ಪಟ್ಟಣಕ್ಕೆ ಹತ್ತು ಕಿಲೋಮೀಟರ್‌ ದೂರದಲ್ಲಿರುವ  ಅವರು ಪ್ರಾರಂಭಿಸಿದ ಶ್ರೀ ಶಾರದಾವಿದ್ಯಾ ಮಂದಿರ ಶಾಲೆ ಮತ್ತು ಶಾಲೆಯಲ್ಲಿನ ನೂರಾರು ಮಕ್ಕಳ ಯೋಗಕ್ಷೇಮ, ಊಟ ಬಟ್ಟೆ ವಿದ್ಯೆಯ ಹೊಣೆ ಅವರದು.ತಮಗಿರುವ ಆದಾಯದಲ್ಲಿ ಸರ್ಕಾರದ ನೆರವಿಲ್ಲದೆ ವಿದ್ಯಾರ್ಥಿಗಳಗೆ ವಿದ್ಯೆಯ  ಜೊತೆ ಅನ್ನದಾನವನ್ನು ಮಾಡುವರು. ಅದಕ್ಕಾಗಿ ಇಳಿ ವಯಸ್ಸಿನಲ್ಲೂ ಕಳಕಳಿ.
ಮುಂದಿನವಾರವೇ ಅವರ ಅಭಿಮಾನಿ ಮಾಕಂ ಶ್ರೀನಿವಾಸಲುಅವರ ಜೊತೆ ಚಳ್ಳಕೆರೆಗೆ ಹೋಗುವ ಅವಕಾಶ ಸಿಕ್ಕಿತು ಅಲ್ಲಿಂದ ಬೆಳೆಗೆರೆ ಹೋದೆವು . ಊರ ಮುಂದೆಯೆ ಸುಸಜ್ಜಿತವಾದ ಕಟ್ಟಡದಲ್ಲಿ ಅವರ ಶಾಲೆ. ಹತ್ತಿರದಲ್ಲೆ ಇರುವ ತೋಟ. ಅಲ್ಲಿ ಒಂದು ಪುಟ್ಟ ಮನೆ. ಪುಟ್ಟ ಪೂರಾ ಕೃಷಿಕರ ಪರಿಸರ. ಕಾಂಕ್ರೀಟ್‌ಮನೆಯಲ್ಲ.ಗುಡಿಸಿಲಿಗೆ ಹೊಂದಿಕೊಂಡಂತೆ ಪುಟ್ಟ ಹಳ್ಳಿ ಮನೆ. ಹಲಗೆಯ ಮಂಚ ಕಟ್ಟಿಗೆಯ ಕುರ್ಚಿ  ಮತ್ತು ಹಲಗೆ ಜೋಡಿಸಿದ ಬೀರುಗಳಲ್ಲಿ ಪುಸ್ತಕಗಳು. ಅಲ್ಲಿಅವರ ಆಸ್ತಿ. ಒಂದು ರೀತಿಯಲ್ಲಿ ಅದು ಪರ್ಣ ಕುಟೀರ.ಅವರ ದೈನಂದಿನ ಅಗತ್ಯಗಳನ್ನು ನೋಡಿಕೊಳ್ಳಲು ಇರುವ ಹಳ್ಳಿಯ ಹೆಂಗಸನ್ನು ಮಗಳೆ  ಎಂದೇ ಕರೆಯುವರು. ಹೋದ ತುಸು ಹೊತ್ತಿನಲ್ಲಿಯೇ ಬಿಸಿಬಿಸಿ ಉಪ್ಪಿಟ್ಟು ಬಂದಿತು .ಪ್ರಕೃತಿಯ ಮಡಿಲಲ್ಲಿ ಇರುವ ಆ ಸರಳವ್ಯಕ್ತಿಯ ಆಗಷ್ಣೆ  ಹೇಳ ತೀರದು ಎಂಥೆಂಥ ಉದ್ದಾಮ ಸಾಹಿತಿಗಳು ಬಂದು ಅಲ್ಲಿ ತಂಗುವರು. ಅವರ ಜೊತೆ ಚರ್ಚೆಮಾಡಿರುವರು . ವಿದೇಶಿ ಸ್ವಯಂ ಸೇವಕರು ಸಮಾಜ ಸೇವೆಯ ಪಾಠಕಲಿಯಲು ಅಲ್ಲಿಗೆ ಬರುವುದು ಸಾಮಾನ್ಯ ಬಂದವರೆಲ್ಲ ಸರಳತೆಯ ಸಾಕಾರವವಾದ .ಅವರೊಂದಿಗೆ ಇರುವುದು  ಮತ್ತು ಮಾತುಕಥೆಯಾಡುವುದು ಒಂದು ಅನುಭವ.ಯಾರೆ ಬಂದರು ಅದೇ ರಾಗಿಮುದ್ದೆ ಅವರು ಕೈಯಾರೆ ಬೆಳೆದ ತರಕಾರಿ ಸಾರು. ನಾವು ಹೋದಾಗಲೇ ಒಬ್ಬ ವಿದೇಶಿಯರೂ ಬಂದಿದ್ದರು. ನಮ್ಮಿಬ್ಬರನ್ನು ತಮ್ಮ ಶಾಲೆಗೆ ಕೆರದುಕೊಂಡುಹೋಗಿ ಅಲ್ಲಿನ  ಧ್ಯಾನ ಮಂದಿರ, ವ್ಯಾಯಾಮಶಾಲೆ  ತೋರಿಸಿದರು. ಸಂಜೆ ಮಕ್ಕಳ ಸಭೆ ಸೇರಿಸಿ ಎರಡು ಮಾತನಾಡಿ ಎಂದರು. ಬಂದವರುಇಂಗ್ಲಿಷ್‌ನಲ್ಲಿ ಮಾಡಿದ ಭಾಷಣ ನಾನು ಅನುವಾದಿಸ ಬೇಕಾಯಿತು.. ಹಳ್ಳಿಯ ಮಕ್ಕಳಿಗೆ ಅವರ ಭಾಷೆಯ ಶೈಲಿಯನ್ನು ಅನುಸರಿಸುವುದು ಕಷ್ಟಕರವಾಗಿತ್ತು. ಹಳ್ಳಿಯ ಮಕ್ಕಳಿಗೆ ಬರಿ ಅಕ್ಷರ ವಿದ್ಯ ಕಲಿತರೆ ಸಾಲದು.ಹೊಸದಕ್ಕೆತೆರೆದುಕೊಳ್ಳ ಬೇಕು ಎಂದು ಅವರ ನಂಬಿಕೆ.ಅವರಿಗೆ “ Spoken English” ಕಲಿಸಲು ಕೋರಿದರುನನಗೂ ಆಸಕ್ತಿ ಇತ್ತು ಆದರೆ  ಅಲ್ಲಿಗೆ ಹೋಗಿ ಇರಲಾಗಲಿಲ್ಲ.ಅದಕ್ಕೆ ಯಾರೆ ಬಂದರೂ ಅರ್ಧ ಗಂಟೆಯಾದರೂ ಅವರ ಮಾತು ಮಕ್ಕಳಿಗೆ ಹೇಳಿಸುತಿದ್ದರು. ಶಾಲೆ ಸುಸಜ್ಜಿತವಾಗಿತ್ತು ಪರಿಸರ ಸ್ವಚ್ಛವಾಗಿತ್ತು. ಅಲ್ಲಿನ ಹೂ ಹಣ್ಣುಗಳ ಗಿಡಗಳು ಮಕ್ಕಳ ಆಸಕ್ತಿಯ ಕಥೆ ಹೇಳುತಿದ್ದವು.ಮಕ್ಕಳಿಗೆ ಯೋಗ, ಧ್ಯಾನ,ಕೃಷಿ , ಹೈನುಗಾರಿಕೆ ಕಲಿಕೆಯ ಒಂದುಭಾಗ.ಜೊತೆಗೆ ವೃತ್ತಿ ಶಿಕ್ಷಣವೂ ಇದೆ.ಅದು ನೂರಾರು ಸದಸ್ಯರು ಇರುವ ದೊಡ್ಡ  ಕುಟುಂಬವಾಗಿತ್ತು. ಊರಲ್ಲಿ ಇರುವಾಗ ಮನೆಯ ಹಿರಿಯನಂತೆ ಮಕ್ಕಳ ಜತೆ ಸಹ ಭೋಜನ.ಅಡುಗೆ ಮನಯೂ ಬಹಳ ಅಚ್ಚು ಕಟ್ಟು.ಸರತಿಯ ಮೇಲೆ ಅಡುಗೆಯವರಿಗೆ ಮಕ್ಕಳ ಸಹಾಯ.. ಕೈಗೊಂದು ಕಾಲಗೊಂದು ಆಳಿನ ಪ್ರಶ್ನೆಯೇಇಲ್ಲ.. ಎಲ್ಲದರಲ್ಲೂ  ಸ್ವಾವಲಂಬನೆ.
ಶಾಸ್ತ್ರಿಗಳದು  ಅಲೆಮಾರಿ ಜೀವನ. ಇಂದು ದುರ್ಗ ನಾಳೆ ಬೆಂಗಳೂರು. ಮುಂದಿನ ವಾರ ಮೈಸೂರು.. ಯಾವ ಊರಿಗೆ ಹೋದರೂ ಆತ್ಮೀಯ ಸ್ವಾಗತ. ಎಲ್ಲ ಹಿರಿಯ ಸಾಹಿತಿಗಳೂ ಅವರ ಆತ್ಮೀಯರು. ಗಾಂಧೀಜಿಯಿಂದ ಹಿಡಿದು ದರ್ಜಿ ಅಕ್ಬರ್‌ಸಾಬಿಯವರೆಗೆ ಒಂದೆ ರೀತಿಯ ಆತ್ಮಿಯ ಒಡನಾಟ.ಅವರಿಗೆ  ಮಕ್ಕಳಲ್ಲೂ ಅಷ್ಟೆ ಸಲಿಗೆ.ಅವರು ಬಂದರೆ ತಾತನನ್ನು ಕಂಡ ಮೊಮ್ಮಕ್ಕಳಿಗೆ ಆಗುವಷ್ಟು ಸಂತೋಷ  ಮಕ್ಕಳಿಗೆ. ಅವರುಇತ್ತೀಚಿನ ವರೆಗೂ ಇಂಗ್ಲಿಷ್‌ಪಾಠ ಮಾಡುತಿದ್ದರೆಂಬುದು ಅವರ ಕಾಯಕದನಿಷ್ಠೆಯನ್ನು ತೋರುವುದು.

ಊರಿನಲ್ಲಿ ಇರುವಾಗ ಹೆಚ್ಚು ತೋಟದ ಕೆಲಸವೇ ಅವರಿಗೆ ಆದ್ಯತೆ. ನಂತರ ಶಾಲೆಗೆ ಹೊರಡುವರು. ಶಾಲೆಯಲ್ಲಿ.ಅಲ್ಲಿನ ಜವಾನನಿಂದ ಹಿಡಿದು ಪ್ರಾಂಶುಪಾಲರವರೆಗ ಯೋಗಕ್ಷೇಮದ ವಿಚಾರಣೆ. ಇನ್ನು ಮಕ್ಕಳಿಗಂತೂ ಇನ್ನಿಲ್ಲದ ಸಂತೋಷ. ಅವರದು ಅಗತ್ಯವಿದ್ದವರಿಗೆ ವಸತಿ ಶಾಲೆ. ಸುಸಜ್ಜಿತವಾದ ಕೊಟ್ಟಡಿಗಳು ಅಡಿಗೆ ಮನೆಗೆ ಗೋಬರ್‌ಗ್ಯಾಸ್‌ ಅದಕ್ಕೆ ಸೆಗಣಿಒದಗಿಸಲು ನಾಲ್ಕಾರು ದನಗಳು ಅವುಗಳಲ ಯೊಗಕ್ಷೇಮ ಮಕ್ಕಳದು ಅದರ  ಉತ್ಪನ್ನಗಳಾದ ಹಾಲು ಮೊಸರು ಮಕ್ಕಳಿಗೆ . ವಿದ್ಯಾರ್ಥಿ ನಿಲಯದಲ್ಲಿ  ದೂರದೂರಿನವರು ಇದ್ದಾರೆ..ಗುಲ್ಬರ್ಗ ರಾಯಚೂರಿನವರು ಇದ್ದಾರೆ. ಅವರಿಗೆ ಬರಿ ಪುಸ್ತಕದ ವಿದ್ಯೆ ಮಾತ್ರವಲ್ಲ ಕೈ ಕೆಲಸ ಕಲಿಯುವ ಅವಕಾಶ. ಅವರು ತಿನ್ನುವುದ ಅವರೇ ಬೆಳೆದ ತರಕಾರಿ.ಅಲ್ಲಿ ಜಾತಿ ಮತ ಬೇಧವಿಲ್ಲ. ಯಾವ ಊರು ಎಂದು ಕೇಳುವುದಿಲ್ಲ. ಅವರಿಗೆ ಸೇರಲುಇರುವ ಅರ್ಹತೆ ಎಂದರೆ ಬಡತನ ಮತ್ತು ಓದುವ ಹಂಬಲ.. ಇನ್ನು ಉಳಿದ ಯಾವ ಅಂಶಗಳೂ ಲೆಕ್ಕಕ್ಕೆ ಇಲ್ಲ.
ಅಲ್ಲಿ ಕೆಲಸಮಾಡುವವರೂ ಅವರಿಂದ ಸ್ಪೂರ್ತಿ ಪಡೆದು ಸೇವಾ ದೀಕ್ಷೆ ತೊಟ್ಟವರೆ. ಸಂಬಳಕ್ಕಾಗಿ ದುಡಿಯುವವರಲ್ಲ. ಶಾಲೆ ನೋಡಿ ಬಹಳ ಖುಷಿಯಾಯಿತು ನನ್ನದೂ ಕಿರು ಕಾಣಿಕೆಇರಲಿ ಎಂದು ತುಸು ಕಾಣಿಕೆ ಕೊಟ್ಟುಬಂದೆ.ಮುಂದಿನ ಭಾನುವಾರವೇ ಅವರ ಶಾಲೆಯ ಶಿಕ್ಷಕರೊಬ್ಬರು ಖುದ್ಧು ಮನೆಗೆ ಬಂದು ರಸೀತಿ ನೀಡಿಹೋದರು.ಅಷ್ಟು ನಿಖರ ಅವರ ಹಣಕಾಸಿನ. ವ್ಯವಹಾರ.

ಕೃಷ್ಣ ಶಾಸ್ತ್ರಿಗಳು ಹುಟ್ಟಿದ್ದು  ಬೆಳಗೆರೆಯಲ್ಲಿ ೧೯೧೬ನೆಯ ಇಸ್ವಿ ಮೇ೨೨ ರಂದು ತಂದೆ ಚಂದ್ರಶೇಖರ ಶಾಸ್ತ್ರಿ  ಕಂಚಿಯಲ್ಲಿ  ಅಧ್ಯಯನ ಮಾಡಿದವರು. ನಂತರ ಜಾನಪದಕ್ಕೆ ಮಾರುಹೋಗಿ ಆ ರಂಗದಲ್ಲಿ ಸಾಧನೆ ಗೈದರು. ಆಶುಕವಿತೆ ರಚಿಸುವರು. ಸಾಹಿತ್ಯಾರಾಧಕರು. ಸ್ವಥಃ ಬರಹಗಾರರು. ಬೇಂದ್ರೆ, ಮಾಸ್ತಿ, ಡಿವಿಜಿ, ವಿಸೀಯರಿಗೆ ನಿಕಟವಾಗಿದ್ದವರು. ಅದೇ ಸಂಪರ್ಕ ಮಗನಿಗೂ ಮುಂದುವರಿಯಿತು ಸಾಹಿತ್ಯಾಸಕ್ತಿ ಕುದುರಿತು.ಶಾಸ್ತ್ರಿಗಳ ತಾಯಿ ಅನ್ನ ಪೂರ್ಣಮ್ಮ.ಸುಸಂಸ್ಕೃತೆ .ದೈವ ಭಕ್ತೆ.
ಪ್ರಾಥಮಿಕ ಶಿಕ್ಷಣ ಬೆಂಗಳುರಿನಲ್ಲಿ  ನಂತರ ಮೈಸೂರಲ್ಲಿ ಶಿಕ್ಷಕ ತರಬೇತಿ. ಸ್ವಅಧ್ಯಯನವಂತೂ ಜೀವನದ ಉದ್ದಕ್ಕೂ ನಡೆದೇ ಇತ್ತು.
 ಹರೆಯದಲ್ಲಿ ಗಾಂಧೀಜಿಯವರ ತತ್ವಗಳಿಂದ ಆಕರ್ಷಿತರಾಗಿ ಚಳುವಳಿ ಸೇರಿದರು. ಸಬರಮತಿ ಆಶ್ರಮದಲ್ಲಿ  ಕೆಲಕಾಲ ಇದ್ದು ಬಂದರು.ಚಳುವಳಿಮಡಿ ಜೈಲು ಸೇರಿದರು. ಅಂದಿನಿಂದ ಅಪ್ಪಟ ಖಾದಿಧಾರಿ ಜತೆಗೆ ಗಾಂಧಿತತ್ವ ಪಾಲಕ. ನಂತರ ವಿನೋಬಾಜಿಯವರೊಂದಿಗೆ ಒಡನಾಟ. ಅವರ ಭೂದಾನ ಚಳುವಳಿಯಲ್ಲಿ ಸಕ್ರಿಯರು. ಸರಕಾರಿ ಶಿಕ್ಷಕರಾಗಿ ಕೆಲಸ ಕ್ಕೆ ಸೇರಿದರು. ಮದುವೆಯೂ ಆಯಿತು. ಒಂದು ಗಂಡುಮಗುವೂ ಆಯಿತು. ಮಗುವು ಚಿಕ್ಕದಿರುವಾಗಲೇ ತಾಯಿ ಮಗು ಇಬ್ಬರೂ ಒಂದೇ ದಿನ ಮೃತರಾದರು. ಇನ್ನೂ ವಯಸ್ಸು ಮೀರಿಲ್ಲ . ಮನೆಯಲ್ಲಿ ಮದುವೆಗೆ ಒತ್ತಾಯ.  ಎರಡನೆ ಮದುವೆಗೆ ಹುಡುಗಿಗೆ ಹುಡುಕಾಟ.ಶಾಸ್ತ್ರಿಗಳದು ಒಂದೆ ನಿರ್ಧಾರ. ಮದುವೆ ಬೇಡ.ಸಂಸಾರ ಸುಖ ಸಾಕು.ಒಂದುದಿನ ಊರಿನಿಂದ ಈ ಸಂಜೆ ಹೆಣ್ಣು ತೋರಿಸಲು ಬರುತ್ತಾರೆ ನೀನು ಊರಿಗೆ ಬರಲೇ ಬೇಕು ಎಂದು ಒತ್ತಾಯಿಸಿ ಕಾಗದ ಬಂತು. ಸರಿ ಊರಿಗೆ ಹೋದರು .  ಏಕೆ ಕಿಟ್ಟಣ್ಣ ಮುಖ ಮುಚ್ಚಿಕೊಂಡಿರುವೆ , ಎಂದಾಗ  ಬಾಯಿಗೆ ಅಡ್ಡ ಹಿಡಿದ ಟವಲ್‌ ತೆಗೆದು ನಕ್ಕರು ಮನೆಯವರು ಇವರ ಹಲ್ಲಿಲ್ಲದ ಬಾಯಿನೋಡಿ ಗಾಬರಿಯಾದರು.  ಶಾಸ್ತ್ರಿಗಳು ವೈದ್ಯರಲ್ಲಿಗೆ ಹೋಗಿ ಎಲ್ಲ ಹಲ್ಲು ಕಿತ್ತಿಸಿಕೊಂಡು ಬಂದಿದ್ದರು. ಮದುವೆ ಮಾತು ಅಲ್ಲಿಗೆ ಮುರಿದು ಬಿತ್ತು.
ಅಂದಿನಿಂದ ಸುಮಾರು ಆರು ದಶಕಗಳ ಕಾಲ ಹಸುಳೆಯ ನಗು ಅವರದಾಯಿತು.ಅವರಿಗೆ ಶಾಲೆಯೆ ಮನೆ. ವಿದ್ಯಾರ್ಥಿಗಳೇ ಮಕ್ಕಳು.ಗ್ರಾಮಸ್ಥರೆ ಬಂಧುಗಳು ವಿದ್ಯಾದಾನವೇ ಕಾಯಕ. ಸಾಹಿಯ್ವೇ ಹವ್ಯಾಸ.ತಳಕಿನ ವೆಂಕಣ್ಣಯ್ಯ, ಕ್ಷೀರಸಾಗರ,ತರಾಸು ಅವರ ಬಂಧುಗಳು ಬೇಂದ್ರೆ, ಕಾರಂತ ಕುವೆಂಪು ಮಾಸ್ತಿ, ಡಿವಿಜಿ , ವೀಸಿ, ವೆಂಕಟಾಚಲಯ್ಯಯ, ಮೊದಲಾದ ಘಟಾನುಘಟಿಗಳ ಸಂಪರ್ಕವಿತ್ತು ತಮ್ಮ ಊರಿನಲ್ಲಿ ಹಳ್ಳಿಗಾಡಾದರೂ ಸಾಹಿತ್ಯ ಸಮಾರಾಧನೆ ಮಾಡುತಿದ್ದರು. ಹಿರಿಯ ಸಾಹಿತಿಗಳನ್ನು ಕರೆಸಿ ಉಪನ್ಯಾಸ ಮಾಡಿಸುತಿದ್ದರು  ಭಾರತದಾದ್ಯಂತ ಸುತ್ತಾಡಿದರು ರಮಣ ಮಹರ್ಷಿಗಳ ಅನುಗ್ರಹಕ್ಕೂ ಪಾತ್ರರು.ಆದರೆ ಅವರು ವಿಶ್ವ ಕುಟುಂಬಿ. ಮಿರಾಸಾಬಿಹಳ್ಳಿ,ಹೆಗ್ಗೆರೆ, ಕಡೂರು ನಲ್ಲಿನ ದೇವನೂರು ಹೀಗೆ ಹಲವುಕಡೆ ಸೇವೆ ಸಲ್ಲಿಸಿದರು ಅವರು ಕೆಲಸ ಮಾಡಿದ ಹಳ್ಳಿಗಳಲ್ಲಿ ಅವರ ಪಾಠ ಮಾಡುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. , ಆಸ್ಪತ್ರೆ ,ಶಾಲೆಯ ಕಟ್ಟಡ, ವಿದ್ಯಾರ್ಥಿನಿಲಯ ಪಾಠೋಪಕರಣ, ಪೀಠೋಪಕರಣಗಳಿಂದ ಸುಸಜ್ಜಿತಗೊಳಿಸಿದರು.ತಾವೆಹಣ ಹಾಕಿದರು ಇತರರು ಅವರ ಮಾದರಿ ಅನುಸರಿಸಿದರು. ಅವರು ಕೊನೆಯ ತನಕ ಬಡ ಮೇಷ್ಟ್ರುಆಗಿಯೇ ಉಳಿದರು. ಅವರು ಮಕ್ಕಳಿಗೆ ಮಾತ್ರ ಮೇಷ್ಟ್ರು ಅಲ್ಲ. ಊರಿನಲ್ಲಿ ಸಾಮಾಜಿಕ  ಸುಧಾರಣೆ , ಆರ್ಥಿಕ ಪ್ರಗತಿ ಮತ್ತು ಕೋಮುಸಾಮರಸ್ಯಕ್ಕೆ ಕಾರಣರಾದರು. ಕಡೂರು ತಾಲೂಕಿನಲ್ಲಂತೂ ಮುಕುಂದ ಸ್ವಾಮಿಗಳ ಸಂಪರ್ಕಕ್ಕೆ ಬಂದಮೇಲೆ ಅವರ  ಅಧ್ಯಾತ್ಮದ ಅನುಭವ ದಟ್ಟವಾಯಿತು. ಜೀವನ ಇನ್ನು ಪಕ್ವವಾಯಿತು ಅವರಿಗೆ ಎರಡು ಬಾರಿ  ಶ್ರೇಷ್ಠ ಶಿಕ್ಷಕ ಪ್ರಶಸ್ತಿಬಂದಿತ್ತು ಅದನ್ನು ನಯವಾಗಿಯೇ ನಿರಾಕರಿಸಿದರು. ಮೂರನೆಯಬಾರಿಗೆ ಬಂದಾಗ ತಮ್ಮ ಗುರುಗಳ ಒತ್ತಾಯಕ್ಕೆ ಮಣಿದು೧೯೭೧ ರಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದರು. ಸ್ವಾತಂತ್ರ್ಯ ಹೋರಾಟಗಾರರ ಮಾಶಾಸನ ಕೊಡಲು ಮನೆತನಕ ಬಂದರೂ ನಯವಾಗಿ ಬೇಡ ಎಂದರು..ನಾನು ನಮ್ಮಮನೆ ದೇಶ ಉಳಿಸಿಕೊಳ್ಳಲು ಚಳುವಳಿ ಮಾಡಿದೆ. ಅದಕ್ಕೆ ಕೂಲಿ ಪಡೆಯುವುದಿಲ್ಲ ಎಂದರು
ಹುಟ್ಟೂರಿನ ಜನರಿಗೆ ಶಿಕ್ಷಣದ ಸೌಲಭ್ಯವಿಲ್ಲ. ಇದುಹಳ್ಳಿಗಾಡು,  ಏನಾದರೂ ಮಾಡು ಎಂಬ ತಂದೆಯವರ ಮಾತಿನಂತೆ ನಿವೃತ್ತರಾದ ಮೇಲೆ  ಅಂದರೆ ೧೯೬೭ ರಲ್ಲಿ ಶಾಲೆ ತೆಗೆದರು ಅದು ಈಗ ಪದವಿ ಪೂರ್ವ ಹಂತಕ್ಕೆ ಬಂದುನಿಂತಿದೆ.
ಓದಲುಬರುವ ಮಕ್ಕಳಿಗೆ ಮನೆಯಲ್ಲಿ ಮುದ್ದೆಗೂ ಪರದಾಟ.  ಕೂಲಿಗೆ ಹೋದರೆ, ದನ ಮೇಯಿಸಿದರೆ ತುಸುವಾದರೂ ಅನುಕೂಲವಾಗುವುದೆಂದು ಶಾಲೆಗೆ ಕಳುಹಿಸಲು ಪೋಷಕರ ಹಿಂದೇಟು. ಅದಕ್ಕಾಗಿಗಿ ವಿದ್ಯಾರ್ಥಿನಿಲಯ ತೆಗೆದರು.ಪ್ರೌಢ ಶಾಲಾಮಕ್ಕಳಿಗೆಉಚಿತ ವಿದ್ಯಾರ್ಥಿನಿಲಯವಿದೆ. ಜಾತಿ ಮತ ಬೇಧವಿಲ್ಲದೆ ಎಲ್ಲರಿಗೂ ಉಚಿತ ಊಟ ಮತ್ತು ವಸತಿ ಸೌಲಭ್ಯ ಅದು ಪ್ರಾರಂಭವಾಗಿ .ನಲವತ್ತುವರ್ಷವಾದರೂ ಸರಕಾರದ ಅನುದಾನ ಇಲ್ಲ. ಅವರ ನಿವೃತ್ತಿವೇತನ,  ಜಮೀನಿನ ಆದಾಯ ಮತ್ತು  ಅಭಿಮಾನಿಗಳ ನೆರವಿನಿಂದ  ಮಕ್ಕಳಿಗೆ ಎಲ್ಲ ಅನುಕೂಲ ಮಾಡಿರುವರು. ಅವರಿಗೆ ತಂದೆಯ ಸಾಹಿತ್ಯಾಭಿರುಚಿಯೂ ಮೈಗೂಡಿದೆ.ಹಳ್ಳಿಚಿತ್ರ, ಹಳ್ಳಿ ಮೇಷ್ಟ್ರು, ಮರೆಯಲಾದೀತೆ, ಸಾಹಿತಿಗಳ ಸ್ಮೃತಿ, ಎಲೆಮರೆಯ ಅಲರು ಎಂಬ ಕೃತಿಗಳನ್ನುರಚಿಸಿದ್ದಾರೆ.ಜೊತೆಗೆ ನಾಲ್ಕು ಅನುವಾದಿತ ಕೃತಿಗಳೂ ಬಂದಿವೆ.ಅವರ ಮುಕುಂದುರು ಸ್ವಾಮಿಗಳ ಕುರಿತಾದ ಕೃತಿ “ “ ಯೇಗ್ದಾಗೆಲ್ಲಾ ಐತೆ’ ಬಹು ಜನಪ್ರಿಯ ಪುಸ್ತಕ.೧೨ ಮರು ಮುದ್ರಣ  ಕಂಡಿದೆ. ಅದುಹಿಂದಿ ತೆಲುಗು ಮರಾಠಿ ಭಾಷೆಗೂ ಅನುವಾದಗೊಂಡಿದೆ ಅಲ್ಲದೆ  ನಾಟಕ ರೂಪದಲ್ಲೂ ರಂಗ ಮಂದಿರದಲ್ಲಿ ಯಶ ಪಡೆದಿದೆ.
ಮದುವೆ ಮಕ್ಕಳು ಬೇಡವೆಂದರೂ ಅವರು ಜೀವನ್ಮುಖರು. ಮಮತೆಗೆ ಏನೂ ಕೊರತೆಇರಲಿಲ. ತಮ್ಮ ಜಮೀನಿನಕೆಲಸಕ್ಕೆ ಬರುತಿದ್ದ ಹುಡುಗಿಯೊಬ್ಬಳು ಅನಾಥಳದಾಗ. ಇವರೆ ಆಶ್ರಯ ಕೊಟ್ಟರು.ಜಾತಿ ಮತ ಲೆಕ್ಕಿಸದೆ ಮನೆಯಲ್ಲಿಯೇ ತಮ್ಮ ಜೊತೆ ಇಟ್ಟುಕೊಂಡರು .ಅವಳು ಮಗಳೇ ಆದಳು ಶಿಕ್ಷಣ ಕೊಡಿಸಿ ಮದುವೆ ಮಾಡಿಸಿ ನೆಲೆ ನಿಲ್ಲುವಂತೆ ನೊಡಿಕೊಂಡರು.  ಇಟ್ಟುಕೊಂಡರು . ಈಗ ಗಂಡ ಹೆಂಡರು ಇಬ್ಬರೂ ಜಮೀನು ಮನೆ ನೋಡಿಕೊಳ್ಳುತಿದ್ದಾರೆ. ಅವರ ಮಗು ಇವರಿಗೆ ಮುದ್ದಿನ ಮೊಮ್ಮಗು .ತಮ್ಮ ನಂತರವೂ ಸಂಸ್ಥೆಯು ಸಾಂಗವಾಗಿ ನಡೆಯಬೇಕೆಂದು. ಆಸ್ತಿ ಮತ್ತು ಶಾಲೆಯ ಹೊಣೆಯನ್ನು ನಿರ್ವಹಿಸಲು  ಸೂಕ್ತ ವ್ಯವಸ್ಥೆ  ಮಾಡಿದರು.. ಅದಕ್ಕೆ ಮೊದಲು   ತಮ್ಮೊಡನಿರುವ ಸಾಕುಮಗಳ ಜೀವನೋಪಾಯದ ವ್ವಸ್ತೆ ಮಾಡಲು ಲು ಮರೆಯಲಿಲ್ಲ. ಅವರ ಜೀವನಕ್ಕೆ ಭದ್ರತೆ ಒದಗಿಸಿದುದು ಅವರ ದೂರದೃಷ್ಠಿಗೆ ಮತ್ತು ಮಮತೆಗೆ ಸಾಕ್ಷಿಯಾಗಿದೆ.    ಬೆಳೆಗೆರೆಯ ನೂರಾರು ಮಕ್ಕಳಿಗೆ ದಾರಿದೀಪವಾಗಿ, ಸಂಪರ್ಕಬಂದವರಿಗೆ ಸಾಕ್ಷಿಪ್ರಜ್ಞೆಯಾಗಿದ್ದ ಕೃಷ್ಣ ಶಾಸ್ತ್ರಿಗಳು ಇನ್ನಿಲ್ಲ.
 ಶತಮಾನದ ಗಡಿಯ ಹತ್ತಿರ ಬಂದು ಸಮಾಜ ಬೆಳಗಿ ಸಾರ್ಥಕಬಾಳು ಬಾಳಿದ ಧನ್ಯ ಜೀವ  ಶನಿವಾರ, ಮಾರ್ಚ೨೩ ರಂದು ಬರಿ ನೆನಪಾಗಿ ಉಳಿಯಿತು..ಗಾಂಧಿ ಯುಗದ ಕೊನೆಯ ಕೊಂಡಿ ಕಳಚಿತು

Sunday, March 24, 2013

ಹಂ. ಪ. ನಾ- ಹೊಸ ಕೃತಿ

                     ಚಾರು -ವಸಂತ ಒಂದು ಅನಿಸಿಕೆ


ಪ್ರಚಲಿತ ಸಮಸ್ಯೆಗಳನ್ನು ಪ್ರತಿನಿಧಿಸುವ ಪ್ರಾಚೀನಕಾವ್ಯ  ಹಂ. ಪ. ನಾ. ಅವರ   “ಚಾರು- ವಸಂತ  “
ಹಂ. ಪ. ನಾ ಅವರ ಇತ್ತೀಚಿನ ಕಾವ್ಯ ಚಾರು ವಸಂತ ಭಾಷಾತಜ್ಞ, ಸಂಶೋಧಕ , ಸಂಘಟಕ ಹಂ.ಪಾ.ನಾಗರಾಜಯ್ಯ  ಅವರಲ್ಲಿಯ  ಕವಿಹೃದಯವನ್ನು,. ಇತ್ತೀಚಿನ ಕೃತಿ. ಅನಾವರಣಗೊಳಿಸಿದೆ .ಸಹಸ್ರ ವರ್ಷಕ್ಕೂ ಮುಂಚಿನಿಂದಲೂ ಸಹೃದಯರ ಪ್ರೀತಿಗೆ ಪಾತ್ರವಾದ ಗುಣಾಡ್ಯನ   ಪೈಶಾಚಿಕ ಭಾಷೆಯ  ಬೃಹದ್‌ಕಥಾ, ನಂತರ ಸಂಸ್ಕೃತದಲ್ಲಿ ರಸಿಕರ ಮನ ಸೂರೆಗೊಂಡ ಶೂದ್ರಕ ಕವಿಯ ನಾಟಕ  ಮೃಚ್ಛಟಿಕಾ , ಭವಭೂತಿಯ ದೆಂದು ಹೇಳಲಾದ ದರಿದ್ರಚಾರುದತ್ತನ ಅಪುರ್ಣ ನಾಟಕ ಇವರ ಕೃತಿಗೆ ಮೂಲವಾದರೂ ಇದರ ಹಿರಿಮೆ ಇರುವುದು ,ಕಥಾವಸ್ತುವನ್ನು ಹೊಸ ಕಾಲಕ್ಕೆ ಅಳವಡಿಕೆಮಾಡಿರುವ ರೀತಿಯಲ್ಲಿ. ಅವರೇ ಹೇಳುವಂತೆ ಕೃತಿಯಲ್ಲಿ ಮಹಾಕಾವ್ಯದ ಮುಖ್ಯ ಲಕ್ಷಣಗಳಾದ ಅಷ್ಟಾದಶ ವರ್ಣನೆಗಳು ಇದ್ದರೂ ಮಹಾಕಾವ್ಯ ರಚಿಸುವ ಹಂಬಲ ಅವರಿಗೆ ಇರಲಿಲ್ಲ. ಅವರ ಗುರಿ ಜನರಿಂದ ಜನರಿಗಾಗಿ ಜನರ ಕಾವ್ಯ ರಚಿಸುವುದು. ಜನಸಾಮಾನ್ಯನ ಮನ ಮಿಡಿಯುವುದು, ಪೂರ್ವ ಸೂರಿಗಳು ಹೇಳಿದ ಹಾಗೆ ಶೃತಿ ಮಾಡಿದ ವೀಣೆ ಯುಗಳಗಳಲ್ಲಿ ಒಂದನ್ನು ಮಿಡಿದಾಗ ಇನ್ನೊಂದು ತನ್ನಿಂದ ತಾನೆ ಝೇಂಕಾರಮಾಡುಂತೆ ಇಂದಿನ ಸಮಸ್ಯೆಗಳಿಗೆ ಹಿಂದಿನ ಕಾಲದ ಕಥೆಯ ಚೌಕಟ್ಟನ್ನು ಬಳಸಿ ಹೊಸ ದೃಷ್ಟಿಯಲ್ಲಿ ನೋಡುವ ಪ್ರಯತ್ನ.ದಿಂದ ಜನರ ಮನ ಮಿಡಿಯುವ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ.ಅವರ ಈ ಪ್ರಯತ್ನ ಸಾಮಾನ್ಯರ ಕೈನಲ್ಲಿ  ಸಕ್ಕರೆಯ ನಡುವಿನ ಹರಳಾಗಬಹುದಿತ್ತು. ಆದರೆ ಇಲ್ಲಿ ಕಲ್ಲುಸಕ್ಕರೆಯ ನಡುವಿನ ದ್ರಾಕ್ಷಿಯಂತೆ ಸಮರಸವಾಗಿ ಸೇರಿ ರುಚಿ ಹೆಚ್ಚಿಸಿದೆ. ಕಥಾ ಹೂರಣ ಹಳೆಯದಾದರೂ ಅದನ್ನು ಬರೆದುದು ಮುಕ್ತ ಛಂದಸ್ಸಿನಲ್ಲಿ . ಕಾವ್ಯದಲ್ಲಿ ಮೂರುಮಾತ್ರೆಯ ಗಣದಿಂದ ಹಿಡಿದು ಮೂವತ್ತು ಮಾತ್ರೆಯ ವರೆಗಿನ ಸಾಲುಗಳು ಇಲ್ಲಿ ಉಂಟು ಅವರ ಸಹಪಾಠಿ ಪ್ರೊ. ಎಂಎಚ್‌ಕೃಷ್ಣಯ್ಯನವರು ಗಮನಿಸಿದಂತೆ ಕೃತಿಯಲ್ಲಿ ವಿದ್ವಾಂಸರಾದ ಹಂ.ಪ.ನಾ ಶಿಷ್ಟ ಭಾಷೆಯ ಕಟ್ಟುಪಾಡಿಗೆ ಒಳ ಪಟ್ಟಿಲ್ಲ. ಅಗತ್ಯ ಬಿದ್ದಾಗ ಇಂದಿನ ಆಡು ಮಾತನ್ನೂ ಕಾವ್ಯದಲ್ಲಿ ಸಂದರ್ಭೋಚಿತವಾಗಿ ಬಳಸಿದ್ದಾರೆ.. ಮಹಾಕಾವ್ಯದ ವಸ್ತುವಿನಲ್ಲಿ ಮಲವನ್ನು ತಲೆಯ ಮೇಲೆ ಹೊರುವ ಪದ್ದತಿಯಂಥಹ ಕೀಳು ಕಾಯಕದ ನಿರ್ಮೂಲನೆಯ ವಿಷಯ ತಂದಿರುವರು. ಇನ್ನು ಜೀತ ಪದ್ದತಿಯ ರದ್ದತಿಯೂ ಇಲ್ಲಿ ಅವರ ಸ್ವಾತಂತ್ರ್ಯ ಪ್ರಜ್ಞೆಯ ಪ್ರತೀಕವಾಗಿ ಮೂಡಿಬಂದಿದೆ.
 ಖೇಚರಿಯೊಬ್ಬಳ ಕಥೆಯು ಇತ್ತೀಚೆಗೆ ಮಾದ್ಯಮಗಳಲ್ಲಿ ಸುದ್ಧಿಯಾಗಿರುವ ಅತ್ಯಾಚಾರಗಳತ್ತ ಒಳ ನೋಟ ಬೀರಿದೆ. ಪರಿಹಾರವು ಸರಳಿಕೃತವಾಗಿರುವಂತೆ ತೋರಿದರೂ ಆಳವಾಗಿ ಯೋಚಿಸಿದರೆ ಮಹಿಳಾ ಸಬಲೀಕರಣವು ಈ ಸಮಸ್ಯೆಯನ್ನು ಸಮೂಲವಾಗಿ ನಾಶಮಾಡಲು ಇರುವ ರಾಜಮಾರ್ಗ ಎಂಬ ಆಶಯ ಕೇವಲ ಆದರ್ಶ ಎನಿಸಿದರೂ , ಅದರಲ್ಲಿ ಹುರುಳುಇಲ್ಲದಿಲ್ಲ.ಸದ್ಯಕ್ಕೆ ಅಲ್ಲದಿದ್ದರೂ ದೂರಗಾಮಿ ಗುರಿಯಾಗಿಸಿದರೆ ಒಂದು ಪರಿಹಾರ ಸಿಗಬಹುದು. ,ಚಾರದತ್ತ ಮತ್ತು ವಸಂತಸೇನೆಯರ ಪ್ರಣಯ ಪ್ರಸಂಗದ ವಿವರಣೆ ರಸಿಕರಿಗೆ ರಸದೌತಣ. ಶಂಗಾರರಸ ಕಾವ್ಯದ ಉದ್ದಕ್ಕೂ ಓತ  ಪ್ರೋತವಾಗಿ ಹರಿದಿದೆ.ಒಬ್ಬ ಅಭಿಮಾನಿ ಹೇಳಿದಂತೆ ಈ ಕೃತಿಯನ್ನು ಎರಡು ಭಾಗ ಮಾಡಿ ಒಂದು ವಯಸ್ಕರಿಗೆ ಇನ್ನೊಂದು ಸಾಮಾನ್ಯ ಓದುಗರಿಗೆ ಎಂದು ಎರಡು ಸಂಪುಟಗಳಲ್ಲಿ ತಂದಿದ್ದರೆ ಹದಿಹರೆಯದವರು ಮುಗಿ ಬಿದ್ದು ಕೊಂಡು ಓದುತಿದ್ದರು ಎಂಬಮಾತು ಹಾಸ್ಯ ಕ್ಕೆಂದು ಹೇಳಿದ್ದಾದರೂ ಅದರಲ್ಲಿ ಹುರುಳು ಇಲ್ಲದಿಲ್ಲ.ವೇಶ್ಯಾ ವಾಟಿಕೆಯ ವರ್ಣನೆಯ  ಮತ್ತು ಅವರ ಮಿಲನ ಸಂದರ್ಭದಲ್ಲಿ ಕವಿಯ ಶಂಗಾರ ಪ್ರಜ್ಞೆ ವಿಜೃಂಭಿಸುತ್ತದೆ.ಹಾಗೆಂದು ಇದು ಬರಿ ಶೃಂಗಾರ ಕಾವ್ಯವೂ ಅಲ್ಲ. ಇಲ್ಲಿನ ಸಾಮಾಜಿಕ ಕಳಕಳಿ, ಮಾನವ ಸಂಬಂಧಗಳ ವಿಶ್ಲೇಷಣೆ,ವ್ಯಕ್ತಿಯೊಬ್ಬನ ವಿವೇಚನಾರಹಿತ ವರ್ತನೆಯಿಂದ  ಅವನ ಕುಟುಂಬ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಕ್ಕೆ ಒಳಗಾಗುವುದು ತಂದೆ, ತಾಯಿ,ಹೆಂಡತಿಯರು ಅನುಭವಿಸುವ ಯಾತನೆಯ ವರ್ಣನೆಯಲ್ಲಿ  ಕರುಣಾರಸ ಹರಳು ಗಟ್ಟಿದೆ.ಇದು  ಒಂದು ರೀತಿಯಲ್ಲಿ ಆಧುನಿಕ ಕಾಲದ ಸಮಸ್ಯೆಯ  ಪ್ರತಿಬಿಂಬ  ಎನಿಸುವುದು.
ಇಲ್ಲಿ ಅದೇಕೋ ಹಾಸ್ಯರಸ ತುಸು ಅವಗಣನೆಗೆ ಒಳಗಾಗಿದೆ ಎಂಬ ಭಾವ ಮೂಡುವುದು.. ಮೂಲಕಥೆಯಲ್ಲಿನ ಶಕಾರ ಇಲ್ಲಿ ಕಾಣೆಯಾಗಿದ್ದಾನೆ.ಸಾಮಾಜಿಕ ಸಮಸ್ಯೆಗಳ ತ್ತ  ಕ್ಷ- ಕಿರಣ ಬೀರಿದ  ಕವಿಗಳು ಪ್ರಸ್ತುತ ರಾಜಕೀಯ ವ್ಯವಸ್ಥೆಯನ್ನು ಬಳಸಿದ್ದರೆ ವಿಡಂಬನೆಗೆ ವಿಫುಲ ಅವಕಾಶವಿದ್ದಿತು.  ಇಂದಿನ ವಿಕಾರಿಗಳ ಮಾತು ವರ್ತನೆಗಳು ಅಂದಿನ  ಶಕಾರನ ಅಪದ್ದ ಮಾತು ಅಸಂಬದ್ದ ವರ್ತನೆಗಳಿಗೆ ಯಾವ ರೀತಿಯಲ್ಲಿಯೂ ಕಡಿಮೆ ಏನಲ್ಲ.

 
ಒಂದು ಮಾತು ಸತ್ಯ.ಈ ಅಂತರ್‌ಜಾಲ ಯುಗದಲ್ಲಿ  ಪುಸ್ತಕ ಓದುವವರು ಯಾರು.? ಹಳೆ ಕಾಲದ ಕಬ್ಬ ಇಂದು ಕಗ್ಗ ಎಂಬ ಭಾವನೆಯನ್ನು ಈ ಕೃತಿ ಬುಡಮೇಲು ಮಾಡುವುದು..ಇದುಯಾವುದೇ ಜನಪ್ರಿಯ ಕಾದಂಬರಿಗೂ ಸವಾಲು ಹಾಕಬಲ್ಲ ಶಕ್ತಿ ಹೊಂದಿದೆ ಎಂದರೆ ಅತಿಶಯೋಕ್ತಿ  ಅಲ್ಲ.ಈಗಾಲೇ ಮೂರು ಭಾಷೆಗಳಿಗ ಅನುವಾದವಾಗಿದೆ ಎಂಬುದೇ ಇದರ ಜನಪ್ರಿಯತೆಯ ಮಾನ ದಂಡವಾಗಿದೆ.ಇದಂತೂ ಪುಸ್ತಕ  ಪ್ರಪಂಚದಲ್ಲಿ ಸ್ವಾಗತಾರ್ಹ ಹೊಸ ಪ್ರಯತ್ನ..

(ದಿನಾಂಕ ೨೩ಮಾರ್ಚನಂದು ಸುಚಿತ್ರ ಫಿಲ್ಮ ಸೊಸೈಟಿಯಲ್ಲಿ ನಡೆದ ಹಂಪ. ನಾ.ಕೃತಿಯ ಓದು ಮತ್ತು ಸಂವಾದದ ನಂತರ ಅನಿಸಿದ್ದು)

Saturday, March 23, 2013

ಆರರಿಂದ ಅರವತ್ತು - ಸರಣಿ


                                        ಲೋಕಾಯುಕ್ತರು ಬಲೆ ಬೀಸಿದರು
ಅಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಎಂದರೆ ನಡುಕ. ವೆಂಕಟಾಚಲ ಅವರು ಲೋಕಾಯಕ್ತರಾಗಿದ್ದಾಗ ಪತ್ರಿಕೆಗಳಿಗೆ ರಸಕವಳ. ಸಾರ್ವಜನಿಕರಿಗೆ ಮೆರೆಯುತ್ತಿದ್ದ ಅಧಿಕಾರಿಗಳು ಕುರಿಯಂತೆ ತಲೆ ತಗ್ಗಿಸಿ ಲೋಕಾಯುಕ್ತರ ವಿಚಾರಣೆ ಎದುರಿಸುವದನ್ನು ನೋಡುವುದೇ ಒಂದು ಮನರಂಜನೆ. ಈಗಿನ ಲೋಕಾಯುಕ್ತರಂತೂ ತಿಮಿಂಗಿಲಗಳಿಗೂ ಬಲೆ ಬೀಸಿದ್ದಾರೆ. ಐ..ಎಸ್,  ಐಪಿ ಎಸ್, ಅಧಿಕಾರಿಗಳಿಗೆ ಹೇಗೋ ಗಳಿಸಿದ ಅಪಾರ ಆಸ್ತಿ, ಸಂಪತ್ತು ಉಳಿಸಿಕೊಳ್ಳುವುದೇ ದುಸ್ತರ ಎನಿಸಿದೆ. ಈ ಲೋಕಾಯುಕ್ತರ ಭಯ ಇಂದು ನಿನ್ನೆಯದಲ್ಲ. ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಿನಿಂದ ಮೊದಲಾದ ಭ್ರಷ್ಟಾಚಾರ ನಿಯಂತ್ರಣ ವ್ಯವಸ್ಥೆ ಹಲವು ಹತ್ತು ಮಜಲು ದಾಟಿ ಬಂದಿದೆ. ಕೆಲವು ಕಾಲ ಗುಮಾಸ್ತ, ಅಧಿಕಾರಿ, ಗ್ರಾಮ ಲೆಕ್ಕಿಗರಂಥಹ ಪುಡಿ ಮೀನುಗಳು ಮಾತ್ರ  ಇವರ ಗುರಿಯಾಗಿದ್ದೂ ಉಂಟು. ಅಂತೂ ಗುಮ್ಮ ಬರುವುದು ಎಂಬ ಭಯವಂತೂ ಇದ್ದೇ ಇತ್ತು.
ಮಂಡ್ಯ ಜಿಲ್ಲೆಯಲ್ಲಿದ್ದಾಗ  ಒಂದುವಿಶೇಷ ಅನುಭವ ಆಯಿತು. ಆಗಲೇ ವೃತ್ತಿ ಶಿಕ್ಷಣವನ್ನು +2 ಹಂತದಲ್ಲಿ ಪ್ರರಂಭಿಸಿ ದಶಕಗಳೇ ಕಳೆದಿದ್ದವು. ಪದವಿಪೂರ್ವ ಶಿಕ್ಷಣಕ್ಕೆ ಅದು ಪರ್ಯಾಯ. ಮುಂದೆ ಓದಲು ಆಗದವರಿಗೆ ವೃತ್ತಿ ತರಬೇತಿ ನೀಡಿ ಸ್ವಾವಲಂಬಿ ಮಾಡುವದೆ ಅದರ  ಉನ್ನತ ಗುರಿ. ಅದಕ್ಕೆಂದೇ ಇಂಗ್ಲೀಷ್ ಮತ್ತು ಕನ್ನಡ ಭಾಷೆಗಳು ಮಾತ್ರ ಇರುವ  ಉಳಿದಂತೆ ವಿಭಿನ್ನ ವೃತ್ತಿಯ ವಿಷಯಗಅಳವಡಿಸಿ ಮೆಟ್ರಿಕ್ ನಂತರ ಸ್ವಯಂ ಉದ್ಯೋಗಿಗಳಾಗಲು ತರಬೇತಿ ನೀಡಲಾಗುತ್ತಿತ್ತು. ನಾನು ಆರಂಭದಿಂದಲೂ ವೃತ್ತಿ ಶಿಕ್ಷಣ ವಿಭಾಗದಲ್ಲಿ  ಕೆಲಸ ಮಾಡಿದ ಅನುಭವಿ. ಹೀಗಾಗಿ ಇಂಗ್ಲೀಷ ಮೌಲ್ಯಮಾಪಕನಾಗಿ ನಿಯುಕ್ತನಾಗುತ್ತಿದೆ. ಪಿಯುಸಿ ಮತ್ತು ಜೆಒಸಿ ಗಳಿಗೆ ಭಾಷೆಯ ಪಠ್ಯಕ್ರಮ ಒಂದೇ ಆದರೂ,  ಈ ವಿದ್ಯಾರ್ಥಿಗಳ ಸಾಧನೆ ಮಟ್ಟ ತುಂಬ ಕಡಿಮೆ. ಅಲ್ಲದೆ, ವೃತ್ತಿ ಶಿಕ್ಷಣವಾದ್ದರಿಂದ ಮೌಲ್ಯಮಾಪನ ಉದಾರವಾಗಿಯೇ ಇರುತ್ತದೆ. ಉತ್ತರ ಪತ್ರಿಕೆ ಖಾಲಿ ಕೊಟ್ಟರೆ ಮಾತ್ರ ಅಂಕ ಕೊಡುವುದು ಹೇಗೆ.  ಆದರೂ ಹೀಗಾಗಿ ಇಂಗ್ಲೀಷ್ ವಿಷಯ ಒಂದು ಬಿಟ್ಟು ಉಳಿದ ಎಲ್ಲದರಲ್ಲೂ ೭೦-೮೦ ಅಂಕ ಪಡೆದರೂ ಪಾಸಾಗುತ್ತಿರಲಿಲ್ಲ.
ಒಂದು ಭಾನುವಾರ 10 ಗಂಟೆ ಸಮಯ. ಒಬ್ಬ ಹುಡುಗ ಮನೆ ಬಾಗಿಲಿಗೆ ಬಂದ. ಪ್ರಿನ್ಸಿಪಾಲರಿದ್ದಾರೆಯೇ ಎಂದು ಕೇಳಿದ. ನನಗೆ  ಅವನನ್ನು ನಮ್ಮ ಕಾಲೇಜಿನಲ್ಲಿ ನೋಡಿದ ನೆನಪಿರಲಿಲ್ಲ.
 ಯಾರು ನೀನು ?ಎಂದೆ.
ನಾನು ಜೆ.ಒ.ಸಿ. ವಿದ್ಯಾರ್ಥಿ
ಯಾವ ವಿಭಾಗ, ನಿನ್ನ ನೋಡಿದ ಹಾಗಿಲ್ಲವಲ್ಲ.
ನಾನು ಹಳೆಯ ವಿದ್ಯಾರ್ಥಿ. ಆದರೆ ನಿಮ್ಮ ಕಾಲೇಜಿನಲ್ಲಲ್ಲ
ಸರಿ ಏಕೆ ಬಂದೆ, ಏನಾಗಬೇಕಿತ್ತು
ಸಾರ್ ನಿಮ್ಮಿಂದ ನನಗೆ ಒಂದು  ಉಪಕಾರ ಆಗಬೇಕಿತ್ತುಎಂದು ಕೈ ಮುಗಿದ.
ವಿಷಯ ಏನು ಹೇಳು ನನ್ನ ವ್ಯಾಪ್ತಿಯಲ್ಲಿ ಇದ್ದರೆ ಮಾಡಬಹುದು
ನೀವು ಮನಸ್ಸು ಮಾಡಿದರೆ ಆಗುತ್ತದೆ
ಸರಿ ಏನು ಬೇಕು ಹೇಳಪ್ಪ ಎಂದೆ.
ನನ್ನನ್ನು ಈ ಬಾರಿ ನೀವು ಪಾಸು ಮಾಡಿಸಬೇಕು. ಹೇಗೂ ಮೌಲ್ಯಮಾಪನಕ್ಕೆ ಹೋಗುತ್ತೀರಿ ಎಂದ.
ನಾನು ಹೋಗುವುದನ್ನು ಯಾರು ಹೇಳಿದರು ? ನೀವು  ಇಲಾಖೆಯಲ್ಲಿ ತುಂಬ ಪ್ರಭಾವಿಗಳು ಪ್ರತಿವರ್ಷ ಮೌಲ್ಯಮಾಪನಕ್ಕೆ ಹೋಗುತ್ತೀರಿ.ಆದು ಎಲ್ಲರಿಗೂ ಗೊತ್ತು. ಹೇಗಾದರೂ ಪಾಸು ಮಾಡಿಸಿ.

ಅದೆಲ್ಲಾ ಆಗದ ಮಾತು ಎಂದು ಗದರಿದೆ.
ನನಗೆ ಗೊತ್ತು ಸಾರ್, ನೀವು ಬಹಳ ಪ್ರಭಾವಶಾಲಿಗಳು. ನಿಮ್ಮ ಮಾತು ನಡೆಯುತ್ತದೆ. ಹೇಗಾದರೂ ಮಾಡಿ. ಎಷ್ಟು ಖರ್ಚಾದರೂ ಸರಿಎಂದ
ನನಗೆ ಇನ್ನಿಲ್ಲದ ಕೋಪ ಬಂದಿತು. ಮೊದಲು ಮನೆಯಿಂದ ಆಚೆ ನಡೆ ಎಂದು ಗದರಿಸಿದೆ.
ತೆಗೆದುಕೊಳ್ಳಿ ಸಾರ್ , ಸಂಕೋಚ ಬೇಡ, ಎಂದೂ ಗೋಗರೆದ.
ಎಯ್ ಹೋಗುತ್ತೀಯೋ ಇಲ್ಲವೋ.. ಪೋಲೀಸರನ್ನು ಕರೆಸುತ್ತೇನೆ  ನೋಡು, ಎಂದು ಕೂಗು ಹಾಕಿದೆ.  ಅವನು ಅಲ್ಲಿಂದ ಕಾಲ್ಕಿತ್ತ
ಈ ಘಟನೆಯಾಗಿ ಒಂದು ವಾರ ಕಳೆಯಿತು. ಮಂಡ್ಯದಿಂದ ದೂರವಾಣಿ ಕರೆ ಬಂದಿತು. ಅಲ್ಲಿನ ಲೋಕಾಯುಕ್ತ ಅಧಿಕಾರಿ ತಕ್ಷಣ ತಮ್ಮ ಕಚೇರಿಗೆ ಬರಬೇಕು ಎಂದು ತಿಳಿಸಿದರು.
ನನಗೆ ತುಸು ಗಾಬರಿ. ಏನು ಕಾರಣವೋ ತಿಳಿಯಲಿಲ್ಲ. ಸ್ಥಳೀಯ ಆರಕ್ಷಕ ಅಧಿಕಾರಿ ತುಂಬ ಪರಿಚಿತರು. ಅವರನ್ನು ವಿಚಾರಿಸಿದೆ. ಅವರಿಗೂ ಏನೂ ಗೊತ್ತಿರಲಿಲ್ಲ. ಹೇಗಿದ್ದರೂ ಒಂದು ಹೆಜ್ಜೆ ಹೋಗಿ ಬನ್ನಿ. ಕರೆದಿದ್ದಾರೆ ಎಂದರು
ಏನೋ ವಿಶೇಷ ಇರಬೇಕು ಎಂದು ಭಾವಿಸಿದೆ.
ಜತೆಗೆ ಯಾರನ್ನಾದರೂ ಕರೆದುಕೊಂಡು ಹೋಗಲು ಯೋಚಿಸಿದೆ. ಏನೋ ನಡೆದಿದೆ.ಹೆಚ್ಚು ಕಡಿಮೆಯಾದರೆ, ತಮ್ಮ ಮೈಮೇಲೆ ಬರಬಹುದು ಎಂಬ ಭಾವನೆ ಸಿಬ್ಬಂದಿಯ ಮುಖದ ಮೇಲಿತ್ತು. ಸರಿ ಆದದ್ದು ಆಗಲಿ, ಬಂದದ್ದನ್ನು ಎದುರಿಸೋಣ ಎಂದು ತಾತ್ಕಾಲಿಕ ಹೊಣೆಯನ್ನು ಹಿರಿಯ ಉಪನ್ಯಾಸಕರಿಗೆ ವಹಿಸಿ ಹೊರಟೆ.
ಮಂಡ್ಯ ನಗರ ತಲುಪಲು ಸುಮಾರು ಎರಡು ತಾಸೇ ಹಿಡಿಯುತು. ಆದರೆ,  ಆಗಲೇ ತಲೆ ಧಿಮ್ಮೆನ್ನುತಿತ್ತು.ನಾನು ನಿಯತ್ತಾಗಿ ಕೆಲಸ ನಿರ್ವಹಿಸುತ್ತಿರುವೆ. ಕೆಲಸ ತೆಗೆಯುವಾಗ ನಿಷ್ಠುರವಾಗಿ ನಡೆದುಕೊಂಡಿರುವುದು ನಿಜ. ಒಬ್ಬಿಬ್ಬರಿಗೆ ನಿಯಮಾನುಸಾರ ಕ್ರಮ ತೆಗೆದುಕೊಂಡದರಿಂದ ತೊಂದರೆ ಆಗಿರುವುದೂ ನಿಜ. ಆದರೆ, ಎಲ್ಲವನ್ನು ಆಡಳಿತದ ಹಿತದೃಷ್ಟಿಯಿಂದ ಮಾಡಿದ್ದು. ಅದರ ಬಗ್ಗೆ ವಿಚಾರಣೆ ಎಂದರೆ ಕೆಲಸ ಮಾಡುವ ಬಗೆ ಹೇಗೆ? ಎಂಬ ಯೋಚನೆಯಿಂದ ತಲೆ ಧಿಮ್ಮೆನ್ನುತ್ತಿತ್ತು.
ಲೋಕಾಯುಕ್ತರ ಕಚೇರಿಗೆ ಹೋಗಿ, ನಾನು ಬಂದಿರುವ ಬಗ್ಗೆ ತಿಳಿಸಿದೆ. ತಕ್ಷಣ ಅವರು ನನ್ನನ್ನು ಒಳಗೆ ಬರಲು ಹೇಳಿದರು. ಕುಳಿತುಕೊಳ್ಳಿ ಎಂದು ತಿಳಿಸಿದರು. ಗಿರಿಜಾ ಮೀಸೆ ಹೊತ್ತ ದುಂಡನೆಯ ಮುಖ, ಅಜಾನುಬಾಹು, ಸೈಂದವನಂಥಹ ದೇಹ. ಹುಲಿಯ ಮುಂದೆ ಕುರಿಯಂತೆ ಕುಳಿತೆ.
ನೀವೇ ಏನು ಆ ಕಾಲೇಜಿನ ಪ್ರಿನ್ಸಿಪಾಲರು ಎಂದರು
ಹೌದು ಸಾರ್
ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೆ ಇಷ್ಟು ಹೊತ್ತಿಗೆ ಕಂಬಿ ಎಣಿಸುತ್ತಿದ್ದಿರಿ
ನನಗೆ ಅರ್ಥ ಆಗಲಿಲ್ಲ.
ಅದೃಷ್ಟ ಚೆನ್ನಾಗಿದೆ. ನಿಮ್ಮ ಹೆಂಡತಿ ಮಕ್ಕಳ ಪುಣ್ಯ ಎನ್ನುತ್ತ,  ದಪ್ಪನೆಯ ಕಡತವೊಂದನ್ನು ನನ್ನ ಕೈಗೆ ಕೊಟ್ಟರು.
ನಿಮ್ಮ ಮೇಲೆ ಭ್ರಷ್ಟಾಚಾರದ ದೂರು ಬಂದಿದೆ. ಅದರ ವಿಚಾರಣೆಯ ಕಡತ ಎಂದು ವಿವರಿಸಿದರು.
ಯಾರು ದೂರು ಕೊಟ್ಟರು ಏನು ಆಪಾದನೆ, ನಾನು ತಿದುಕೊಳ್ಳಬಹುದೇ ? ಎಂದು ಅಳುಕುತ್ತಾ ಕೇಳಿದೆ.
ನಿಮ್ಮಲ್ಲಿ ನಾರಾಯಪ್ಪ ಎಂಬ ಉಪನ್ಯಾಸಕರಿದ್ದಾರೆಯೇ?
ಇದ್ದಾರೆ ಸಾರ್. ವೃತ್ತಿ ಶಿಕ್ಷಣ ವಿಭಾಗದಲ್ಲಿ. ಅಲ್ಲಿ ತಾತ್ಕಾಲಿಕ ಉಪನ್ಯಾಸಕರಾಗಿ. ಆದರೆ, ದುರ್ನಡೆಯಿಂದ ಅವರನ್ನು ಕೆಲಸದಿಂದ ಇಲಾಖೆ ವಜಾ ಮಾಡಿದೆ.
ಅವರಿಂದಲೇ ದೂರು ಬಂದಿದೆ.  ನೀವು ಲಂಚ ತುಂಬ ತೆಗೆದುಕೊಳ್ಳುತ್ತೀರಿ.. ಕೆಲಸಕ್ಕೆ ಸರಿಯಾಗಿ ಹೋಗುತ್ತಿಲ್ಲ. ತುಂಬ ಹಣ ಮಾಡಿದ್ದೀರಿ. ಒಂದು ಬೇಕರಿ ನಡೆಸುತ್ತಿದ್ದೀರಿ. ಹಿಂದಿನ ಸ್ಥಳಗಳಲಿ ಸಾಕಷ್ಟು ಅವ್ಯವಹಾರ ಮಾಡಿರುವಿರಿ ಎಂಬುದು ದೂರಿನ ಸಾರಾಂಶ.
ಇವೆಲ್ಲ ಸತ್ಯಕ್ಕೆ ದೂರ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ, ಎಂದು ಅಲವತ್ತು ಕೊಂಡೆ.
ಹೌದ್ರಿ. ಅದಕ್ಕೆ ನಿಮ್ಮನ್ನೆ ಇಲ್ಲಿಗೆ ಕರೆಸಿದ್ದು. ಸದ್ರಿ ವ್ಯಕ್ತಿ  ಪದೇ ಪದೇ ದೂರು ನೀಡುತ್ತಿದ್ದ. ನಾವೂ ಸ್ಥಳೀಯವಾಗಿ ವಿಚಾರಣೆ ನಡೆಸಿ, ಈ ಎಲ್ಲ ಆಪಾದನೆಗಳೂ ಸತ್ಯಕ್ಕೆ ದೂರವೆಂದು ದಾಖಲೆ ಮಾಡಿಕೊಂಡೆವು.
ಆದರೆ, ಆ ವ್ಯಕ್ತಿ ಸುಮ್ಮನಾಗಲಿಲ್ಲ. ಪೋಲೀಸ್ ಇಲಾಖೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವ ಇಬ್ಬರು ಕುಲ ಬಾಂಧವರನ್ನು ಸಂಪರ್ಕಿಸಿದಲಿತನಾದುದರಿಂದ ತನಗೆ ಅನ್ಯಾಯವಾಗುತ್ತಿದೆ,  ಜಿಲ್ಲಾಹಂತದಲ್ಲಿ  ದೂರು ನೀಡಿದರೂ ಪ್ರಯೋಜನವಿಲ್ಲ ,ಎಂದು ಅವರನ್ನು ತಪ್ಪು ಮಾಹಿತಿ ನೀಡಿ ಮನವೊಲಿಸಿದ. ಹಾಗಾಗಿ ನಮಗೆ ಮೇಲಿಂದ ಮೇಲೆ ಸೂಕ್ತ ಕ್ರಮಕ್ಕಾಗಿ ಒತ್ತಡ ಹೆಚ್ಚಿತು. ನೀವು ಹಿಂದೆ ಕೆಲಸ ಮಾಡಿದ ಎಲ್ಲ ಕಡೆ ವಿಚಾರಿಸಲಾಯಿತು. ನಿಮ್ಮ ಮಗ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾನೆ. ಮಗಳು ಜೆಒಸಿ . ಮನೆಯಲ್ಲಿ ಟಿ.ವಿ  ಸಹ ಇಲ್ಲ. ಒಂದು ಹಳೆಯ ಸೈಕಲ್ಲು ಮಾತ್ರ  ಇದೆ.ನಿಮ್ಮ  ಮನೆಯಿಂದ. ನೀವು ಕಾಲೇಜಿಗೆ ಬಸ್ಸು ಸಿಕ್ಕರೆ ಬಸ್ಸು, ಲಾರಿ ಸಿಕ್ಕರೆ ಲಾರಿ, ಒಟ್ಟಿನಲ್ಲಿ  ಹೇಗಾದರು ಸರಿ ಹೊತ್ತಿಗೆ ಸರಿಯಾಗಿ ಕಾಲೇಜಿಗೆ ಹೋಗುತ್ತೀರಿ ’ಎಂದರು.
ಮೊನ್ನೆ ತಾನೆ ನಾವು ಒಬ್ಬರನ್ನು ನಿಮ್ಮ ಹತ್ತಿರ ಹಣ ಕೊಟ್ಟು ಕಳುಹಿಸಿದ್ದೆವು ಅಂದರು.
ನನಗೆ ಗೊತ್ತಿಲ್ಲ ಯಾರೂ ಬಂದಿಲ್ಲ ಎಂದೆ ಅಚ್ಚರಿಗೊಂಡು.
ಒಬ್ಬ ಹುಡುಗ ಪಾಸು ಮಾಡಿಸಿ ಎಂದು ಹಣಕೊಡಲು ಬಂದಿದ್ದ. ಆಗಲೇ ಮರೆತಿರಾ ಎಂದು ಚುಚ್ಚಿದರು.
ಹಲವು ವಿದ್ಯಾಥಿಗಳು ತಮ್ಮ ಕಷ್ಟ ಹೇಳಿಕೊಂಡು ಬಂದಿರುತ್ತಾರೆ. ಅವನೂ ಹಾಗೇ ಎಂದುಕೊಂಡಿದ್ದೆ.
ಇಲ್ಲಾ ನಾವೇ ಕಳುಹಿಸಿದ್ದೆವು. ಆ ದಿನ ನೀವು ಒಪ್ಪಿಕೊಂಡಿದ್ದರೆ ಈಗ ಜೈಲಿನಲ್ಲಿರುತ್ತಿದ್ದಿರಿ.ಇಷ್ಟೆಲ್ಲಾ ವಿಚಾರಣೆಯಾದ ಮೇಲೆ ನಿಮ್ಮಲ್ಲಿ ಯಾವುದೇ ಭ್ರಷ್ಟಾಚಾರದ ವಾಸನೆ ಇಲ್ಲ” ಎಂದು  ವರದಿ ಮಾಡಿದೆವು.
ಆದರೆ, ಆ ವ್ಯಕ್ತಿ ಎರಡು ದಿನದ ಹಿಂದೆ ಪುನಃ ಬಂದಿದ್ದ.ಅವನ  ಹೆಂಡತಿ ಸರಕಾರಿ ಹೈಸ್ಕೂಲು ಮುಖ್ಯೋಪಾಧ್ಯಿಯನಿ, ಸಹ ಜತೆ  ಬಂದಿದ್ದರು. ನಿಮಗೆ ತುಂಬ ಪರಚಿತರಂತೆ,ಎಂದರು.
ಹೌದು ಸ್ವಾಮಿ, ಆಕೆ ನಮ್ಮ ಹತ್ತಿರದ ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಒಳ್ಳೆಯ ಜನ ಎಂದೆ.
ನಿಜ ಆ ತಾಯಿ ತುಂಬ ಒಳ್ಳೆಯವರು. ಆದರೆ, ಆ ವ್ಯಕ್ತಿ ಮಾತ್ರ ಲೋಫರ್.  ಹೇಗಾದರೂ ಮಾಡಿ ನಿಮ್ಮನ್ನು  ಲಂಚದ ಬಲೆಗೆ ಬೀಳಿಸಲು ಉಪಾಯ ಹೇಳಿದ.” ನಾನು ದುರ್ವರ್ತನೆಯಿಂದ ಕೆಲಸ ಕಳೆದುಕೊಂಡಿದ್ದರೂ ವೈಯಕ್ತಿಕವಾಗಿ ನನ್ನೊಂದಿಗೆ ಚೆನ್ನಾಗಿಯೇ ಇದ್ದಾರೆ. ವಿಶ್ವಾಸದಿಂದ ಮಾತನಾಡಿಸುತ್ತಾರೆ. ಪ್ರತಿದಿನ ಬಸ್ಸಿನಲ್ಲಿ ಕಾಲೇಜಿಗೆ ಬರುತ್ತಾರೆ. ಬಸ್ ನಿಲ್ದಾಣದಲ್ಲಿ ಅವರನ್ನು ಕಂಡು ನಾನು ,ಬನ್ನಿ ಸಾರ್ ಸ್ಕೂಟರಿನಲ್ಲಿ ಕಾಲೇಜಿಗೆ ಬಿಡುತ್ತೇನೆ ಎನ್ನುವೆ.
ಬೇಡ ಕಣಪ್ಪ ನಡೆದು ಹೋಗುತ್ತೇನೆ ನಿನಗ್ಯಾಕೆ ತೊಂದರೆ ಎಂದರೂ ಬಿಡುವುದಿಲ್ಲ. ಇಲ್ಲ ಸಾರ್ ಆ ಕಡೆ ಹೋಗುತ್ತಿರುವೆ. ಹಾದಿಯಲ್ಲಿ ಕಾಲೇಜಿದೆ. ನಿಮಗೆ ಡ್ರಾಪ್ ಕೊಡುವೆ ಎಂದು ಮಾಡಿ ಹತ್ತಿಸಿಕೊಳ್ಳುತ್ತೇನೆ. ಕಾಲೇಜಿನ ಹತ್ತಿರ ಸ್ಕೂಟರ್ ನಿಲ್ಲಿಸಿ ಅವರು ಇಳಿದಾಗ ಕೈಯಲ್ಲಿರುವ ಕವರ್ ಕೆಳಗೆ ಬೀಳಿಸುವೆ.
ಅವರನ್ನು ಸರ್, ಕವರ್ ಬಿತ್ತು, ದಯಮಾಡಿ ಎತ್ತಿಕೊಡಿ ಎಂದು ಕೇಳುವೆ. ಆಗ ಅವರು ಹೇಗೂ ಎತ್ತಿ ಕೊಡುತ್ತಾರೆ. ತಕ್ಷಣ ನೀವು ಅವರನ್ನು ಆ ಕವರ್ ಸಮೇತ ಹಿಡಿಯಬಹುದು” ಎಂದು ಸೂಚಿಸಿದ.
ಇದನ್ನು ಕೇಳಿದ ಅವನ ಹೆಂಡತಿ ಸಾರ್, ಈ ಮೂರ್ಖನ ಮಾತು ಕೇಳಬೇಡಿ. ನಮಗೆ ಒಂದೇ ಗಂಡು ಮಗುವಿದೆ. ಅಂಥವರಿಗೆ ಅನ್ಯಾಯವಾಗಿ ತೊಂದರೆ ಮಾಡಿದರೆ, ದೇವರು ನಮಗೆ ಒಳ್ಳೆಯದು ಮಾಡುವುದಿಲ್ಲ. ಏನೂ ಅರಿಯದ ಒಳ್ಳೆಯ ಮನುಷ್ಯರಿಗೆ ನೋವು ಅನುಭವಿಸುವಂತಾಗಬಾರದು. ಇವರು ನನ್ನ ಗಂಡ ನಿಜ, ಆದರೆ ಮನುಷ್ಯ ಸರಿಯಾಗಿಲ್ಲ, ಎಂದು ಜೋರಾಗಿ ಅಳತೊಡಗಿದಳು.
.

ಈ ಎಲ್ಲ ವಿಷಯ ಕೇಳಿ ನನಗೆ ತುಂಬ ಆಶ್ಚರ್ಯವಾಯಿತು. ನನಗೆ ಗೊತ್ತಿಲ್ಲದೇ ಏನೆಲ್ಲಾ ನಡೆದಿದೆ. ಸುಮಾರು ನೂರಾರು ಪುಟಗಳಷ್ಟು ಮಾಹಿತಿ ಸಂಗ್ರಹವಾಗಿದೆ.
ದೇವರು ದೊಡ್ಡವನು. ಏನೂ ತೊಂದರೆಯಾಗಲಿಲ್ಲ
ಕೊನೆಯಲ್ಲಿ ತಮ್ಮ ಜವಾನನ್ನು ಕರೆದು ಇವರಿಗೆ ಸಕ್ಕರೆಯಿಲ್ಲದ ಬಾದಾಮಿ ಹಾಲು, ನನಗೆ ಕಾಫಿ ತನ್ನಿ ಎಂದು ಹೇಳಿದರು. ‍ಸಾರ್,  ನಾನು ಕಾಫಿ ಕುಡಿಯುವುದಿಲ್ಲ ಎಂಬುದು ನಿಮಗೆ ಗೊತ್ತಾ ಎಂದು ಬೆರಗಿನಿಂದ ಕೇಳಿದೆ. ಬರೀ ನೀವು ಯಾಕೆ, ನಿಮ್ಮ ಮನೆಯಲ್ಲಿ ಯಾರೂ ಕಾಫಿ-ಟೀ ಕುಡಿಯುವುದಿಲ್ಲ ಎನ್ನುವದೂ ಗೊತ್ತು, ನೀವು ಕುಡಿಯುವ ಹಾಲಿಗೆ ಸಕ್ಕರೆ ಹಾಕಿಕೊಳ್ಳುವುದಿಲ್ಲ, ಡಯಾಬಿಟೀಸ್ ಇದೆ ಎಂಬದೂ ಗೊತ್ತು ಎಂದರು.
ಹೌದೆಂದು ತಲೆಯಾಡಿಸಿದೆ. ನೀವು ಏನು ತಿನ್ನುತ್ತೀರಿ, ಏನು ಕುಡಿಯುತ್ತೀರಿ ಎಂಬುದನ್ನೂ ತಿಳಿದುಕೊಂಡಿರದಿದ್ದರೆ ಲೋಕಾಯುಕ್ತರ ಕಚೇರಿ ಕೆಲಸ ಮಾಡುವುದು ಹೇಗೆ ? ಎಂದು ಗಹಗಹಿಸಿ ನಕ್ಕರು

Friday, March 22, 2013

ದಿನದ ಕವನ


ಆಗಸದಲ್ಲಿ ಹಕ್ಕಿ
ನೀರಿನಲ್ಲಿ ಮೀನು
ಭೂಮಿಯ ಮೇಲೆ ಭೂಪ
 ಏನು ಮಾನವನ ಪ್ರತಾಪ!
ಸಾಗರದಲ್ಲಿ ತೈಲದ ಕೊಳೆ
ಆಗಸದಿ ಆಮ್ಲದ ಮಳೆ
ವಿಷವಾಗಿದೆ ಉಸಿರಾಡುವ ಗಾಳಿ
ಜೀವನ ಇನ್ನು ಹೇಗೆ ಹೇಳಿ?

Tuesday, March 19, 2013

ಆರರಿಂದ ಅರವತ್ತು-ಸರಣಿ


ನನ್ನ ಸಾವಿಗೆ ನೀವೇ ಹೊಣೆ !
ಕಾಲೇಜಿಗೆ ಮಧ್ಯಾಹ್ನದ ವಿರಾಮದ ಸಮಯ. ಜವಾನ ಬೆಲ್ಲು ಹೊಡೆದು ಕುಡಿಯುವ ನೀರನ್ನುಟೇಬಲ್‌ ಮೇಲೆ ತಂದಿಟ್ಟ. ಎಲ್ಲರೂ ಊಟಕ್ಕೆ ಧಾವಿಸಿದ್ದರು. ನಾನೂ ಲಂಚ್‌ ಬಾಕ್ಸ ತೆರೆದೆ. ಚಪಾತಿ ಪಲ್ಯ ಮತ್ತು ಚಟ್ಟಣಿ ಇತ್ತು ಸಾವಧಾನವಾಗಿ ತಿನ್ನತೊಡಗಿದೆ. ಊಟ ಮುಗಿಯಿತು. ಕೈ ತೊಳೆದು ಇನ್ನೇನು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದೆ, ಧಡಕ್ಕನೆ  ಸ್ವಿಂಗ್ ಬಾಗಿಲು ತೆಗದು ಕೊಂಡಿತು. ಅಲ್ಲಿ ನಮ್ಮ ಗುಮಾಸ್ತ ಮಾದಯ್ಯ ನಿಂತಿದ್ದ
ಅಮಾನತ್ತಾಗಿದ್ದ  ಅವನನ್ನು ನಾನು ನೋಡಿ ಹದಿನೈದು ದಿನಗಳಾಗಿದ್ದವು .ಅವನ ಕಣ್ಣುಗಳು ಕೆಂಡದ ಉಂಡೆಗಳಾಗಿದ್ದವು. ತಲೆ ಕೆದರಿತ್ತು.ಬಟ್ಟೆ ಗಳು ಮಾಸಿದ್ದವು .
ಏನು ಮಾದಯ್ಯ,   ಹೇಗಿದ್ದೀಯಾ? ಈಗ ಇಲ್ಲಿಗೆ ಯಾಕೆ ಬಂದೆ?
“ಇವತ್ತು ಏನಾದರೂ ಒಂದು ಇತ್ಯರ್ಥವಾಗಲೇ ಬೇಕು , ಸಾರ್‌  ನಿಮ್ಮನ್ನು ಕೊನೆ ಮಾತು ಕೇಳಲು ಬಂದೆ..
ನನಗೆ ಸಹಾಯ ಮಾಡುವಿರಾ ಇಲ್ಲವಾ  ಹೇಳಿ ಬಿಡಿ”
“ನಾನು ಹೇಳುವುದು ಇದರಲ್ಲಿ ಏನು ಇಲ್ಲ. ನೀನುಂಟು ಇಲಾಖೆ ಉಂಟು” , ಉತ್ತರಿಸಿದೆ.
 ಹಾಗಾದರೆ ಇದೆ ನಿಮ್ಮ  ಕೊನೆ ಮಾತೆ? ಮುಂದಿನ ಪರಿಣಾಮಕ್ಕೆ ನೀವೆ ಹೊಣೆಗಾರರು.!
 ಮಾದಯ್ಯ ನಮ್ಮಲ್ಲಿ ಎರಡನೆ ದರ್ಜೆ ಗುಮಾಸ್ತ  ಹದಿನೈದು ದಿನದ ಹಿಂದೆ ಅಮಾನತ್ತು ಆಗಿದ್ದ.
ಅವನ ಪರಿಚಯವಾದದ್ದು ಈ ಕಾಲೇಜಿಗೆ ಬಂದ ಮೇಲೆ. ಇನ್ನೂ ೨೫ ರ ಹರೆಯದ ಹುಡುಗ. ಅನುಕಂಪದ ಆಧಾರದ  ಮೇಲೆ ಬೇಗನೆ   ಕೆಲಸ ಸಿಕ್ಕಿತ್ತು. ಸ್ಥಳಿಕ. ರಾಜಕಾರಣಿಗಳ ಪರಿಚಯವಿತ್ತು ಬಹಳ ಉಡಾಫೆಯ ವರ್ತನೆ.
ನಾನು ಈ ಕಾಲೇಜಿಗೆ ಬಂದಾಗ ನನ್ನ ಕೋಣೆಯಲ್ಲಿನ ದೊಡ್ಡ ಟ್ರಜರಿ ನೋಡಿ ದಂಗಾದೆ.ಬಹು ಹಳೆಯ ಸಂಸ್ಥೆಯಾದ್ದರಿಂದ ಅದು ಇದ್ದಿತು. ಈಗ ಅದರ ಉಪಯೋಗ ಇರಲಾರದು ಎಂದುಕೊಂಡೆ.
ಆಗ ಮಾದಯ್ಯನೆ ವಿವರಣೆ ನೀಡಿದ್ದ. ಇಲ್ಲ ಸಾರ್‌, ಇದು ನಮಗೆ ಬಹಳ ಅಗತ್ಯ .. ಹಿಂದಿನ ಸಾಹೇಬರು ಲಕ್ಷ ಗಟ್ಟಲೆ ಹಣ ಇಡುತಿದ್ದರು.
ಯಾಕಯ್ಯಾ, ಈಗ ಬ್ಯಾಂಕು ಇದೆಯಲ್ಲಾ. ಅದರಲ್ಲಿ ಹಣ ಇಡುವ ಅಗತ್ಯ ಏನಿದೆ?
ಹಾಗಲ್ಲ  ಸಾರ್‌. ನಮ್ಮಕಾಲೇಜಿಗೆ ಲಕ್ಷಾಂತರ ರೂಪಾಯಿ ವಿದ್ಯಾರ್ಥಿ ವೇತನ ಬರುವುದು .ಎಲ್ಲ ಹಣ ಇದರಲ್ಲೆ ಇಟ್ಟು ಅವರು ಬಂದು ಬಂದಾಗ ಕೊಡಲು ಅನುಕೂಲ, ಎಂದ
ನನಗೆ ತಲೆ ಬುಡ ತಿಳಿಯಲಿಲ್ಲ.  ಆಗ ಸುಮ್ಮನಾದೆ.
ಕೆಲ ದಿನಗಳ ನಂತರ ಅದರ ಅಂತರಾಳದ ಅರಿವಾಯಿತು. ನಮ್ಮದು ಸಾವಿರಾರು ವಿದ್ಯಾರ್ಥಿಗಳು ಇರುವ ಕಾಲೇಜು. ಅವರಲ್ಲಿ ೯೦% ವಿದ್ಯಾರ್ಥಿ ವೇತನ ಕೊಡಲೆ ಬೇಕಾದ ಸಮುದಾಯಕ್ಕೆ ಸೇರಿದವರು.ಹಾಗಾಗಿ ಲಕ್ಷಾಂತರ ಹಣ ಬರುವುದು ನಿಜವಾಗಿತ್ತು.
ಅಲ್ಲಿ ನಾನು ಗಮನಿಸಿದ ವಿಶೇಷವೆಂದರೆ ದಾಖಲಾದವರಿಗೆಲ್ಲ  ಅವರು  ಕಾಲೇಜಿಗೆ ಬರಲಿ ಬಿಡಲಿ ವಿದ್ಯಾರ್ಥಿ ವೇತನ ಸಂದಾಯವಾಗುತಿತ್ತು.ಅರ್ಜಿ ಹಾಕಿದವರಿಗೆಲ್ಲ ತಪ್ಪದೆ ಹಣ ಬರುತಿತ್ತು. ನಂತರ ಗೊತ್ತಾಯಿತು. ಅವರು ಸಂಬಂಧಿಸಿದ ಇಲಾಖೆ ಯವರಿಗೆ ಒತ್ತಡಹಾಕಿ ಮಂಜೂರು ಮಾಡಿಸುವರು.
ನಂತರ ವಿದ್ಯಾರ್ಥಿಯ ಹಾಜರಾತಿ ಸರಿಯಾಗಿದ್ದರೂ ಅವನಿಗೆ ಏನೋ ಒಂದು ನೆಪ ಹೇಳಿ ತುಸು ಹಣ ಕಡಿತ ಮಾಡುವರು. ಹಾಜರಾತಿ ಕಡಿಮೆ ಇದ್ದರೆ ಮುಗಿಯಿತು ಅವರಿಗೆ ನಿನಗೆ ಹಾಜರಾತಿ ಇಲ್ಲ ಹಣ ವಾಪಸ್ಸು ಕಳುಹಿಸುವೆವು ಎಂದು ಧಮಕಿ ಹಾಕುವರು. ಅವನು ದಮ್ಮಯ್ಯ ಗುಡ್ಡೆ ಹಾಕಿದ ಮೇಲೆ ಅವನಿಗೆ ಅರ್ಧಹಣ  ಕೊಟ್ಟು ಸಹಿ ಮಾಡಿಸಿಕೊಳ್ಳುವರು. ಇನ್ನು ಕಾಲೇಜು ಬಿಟ್ಟವರದೂ ಹಣ ಇಲಾಖೆಗೆ ವಾಪಸ್ಸು ಕಟ್ಟುತ್ತಿರಲಿಲ್ಲ.. ವರ್ಷದ ಕೊನೆಯಲ್ಲಿ ದಾಖಲೆಗೆ ಸಹಿ ಹಾಕಿ ಹಣ ವಿತರಣೆಯಾದಂತೆ ತೋರಿಸುತಿದ್ದರು. ಇದರಲ್ಲಿ ಗುಮಾಸ್ತರು ಭಾಗಿ ಹೀಗಾಗಿ ನಗದು ಕೊಡುವುದು ಮಕ್ಕಳ  ಹಿತವೆನಿಸಿದರೂ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಹೆಸರಲ್ಲಿ  ಇವರಿಗೂ ಆದಾಯವಿತ್ತು. ಇದೆಲ್ಲ ಜನರಿಗೆ  ಗೊತ್ತಿದ್ದರೂ,.   ನಮ್ಮ ಕುಲ ಬಾಂಧವರು  ಎಂಬ ಕಕುಲಾತಿ  ಅವರಿಗೆ..
 ಈ ಸಲ ಅರ್ಜಿ ಹಾಕುವಾಗಲೆ ಕಾಲೇಜಿನ ಎಲ್ಲರಿಗೂ  ವಿದ್ಯಾರ್ಥಿ ವೇತನವನ್ನು  ಕ್ರಾಸ್ದ ಚೆಕ್‌ ಮೂಲಕ ಕೊಡುವುದಾಗಿಯೂ ಅವರು ನಿಗದಿತ ಬ್ಯಾಂಕಿನಲ್ಲಿ ಖಾತೆ ತೆರೆಯಬೇಕೆಂದು ತಿಳಿಸಲಾಯಿತು.   ಆ ಕುರಿತು ಬ್ಯಾಂಕಿನವರಿಗೂ ಸಹಕರಿಸಲು ಕೋರಲಾಯಿತು. ಆದರೆ ಹೈಸ್ಕೂಲು ಮಕ್ಕಳಿಗೆ ಖಾತೆ ತೆರೆಯಲು ಆಗಲಿಲ್ಲ . ಅವರಿಗೆ ಬರುವ ಹಣ ಕೆಲವೆ ನೂರು ರೂಪಾಯಿಗಳು. ಆದರೆ ಅವರಿಗೂ ಬೇರರ್ ಚೆಕ್‌ ಮೂಲಕ ಹಣ ನೀಡಿದರೆ ಅದನ್ನು ಖಾತೆ ಇರುವ ನಮ್ಮ ಶಿಕ್ಷಕರು ದೃಢೀಕರಿಸಿದರೆ ಹಣ ನೀಡಲು ಬ್ಯಾಂಕಿನವರು  ಒಪ್ಪಿದರು.
ನನಗೂ ಸಮಸ್ಯೆ  ಪರಿಹಾರವಾಯಿತು. ನಮ್ಮ ಟ್ರೆಜರಿ ಯಲ್ಲಿ ಹಣ ಇಡುವ ಹೊಣೆ ತಪ್ಪಿತು.
ಈ ವಿಧಾನದಿಂದ ಮಕ್ಕಳು ಖುಷಿಯಾದರು. ಅವರಿಗೆ ಮೊದಲಿನಂತೆ ಕಡಿತವಾಗದೆ  ಪೂರ್ಣ ಹಣ ಕೈಗೆ ಬಂದಿತು. ಅವರ ಪೋಷಕರನ್ನು ಕರೆದು ತರಬೇಕಿದ್ದುದರಿಂದ ಮಕ್ಕಳು ಅಪವ್ಯಯ ಮಾಡುವುದಕ್ಕೆ ಕಡಿವಾಣ ಬಿದ್ದು ಅವರಿಗೂ ನೆಮ್ಮದಿಯಾಯಿತು .
 ವಿದ್ಯಾರ್ಥಿ ವೇತನ ಬಂದನಂತರ ಆ ಹಣವನ್ನು ಖಾತೆಗೆ ಜಮಾ ಮಾಡಿ ಎಲ್ಲರಿಗೂ ಚೆಕ್‌ ಮೂಲಕವೆ ಪಾವತಿ ಮಾಡಿದುದರಿಂದ ಅವ್ಯವಹಾರಕ್ಕೆ ಕಡಿವಾಣ ಬಿತ್ತು. ಆದರೆ ಕೆಲವೆ ದಿನಗಳ ನಂತರ ಅನೇಕ ಹೈಸ್ಕೂಲು  ವಿದ್ಯಾರ್ಥಿಗಳು ಅರ್ಜಿ ಹಾಕಿದರೂ  ವಿದ್ಯಾರ್ಥೀ ವೇತನ  ತಮಗೆ  ಬಂದಿಲ್ಲ ಎಂದು ದೂರಿದರು. ಹೊಸಬರದು ಮಾತ್ರವಲ್ಲ ಕೆಲವು ನವೀಕರಣ ದವೂ ಬಂದಿರಲಿಲ್ಲ. ನಮ್ಮ ಶಿಕ್ಷಕ್ಕರೊಬ್ಬರನ್ನು ಇಲಾಖೆಗೆ ಕಳುಹಿಸಲಾಯಿತು. ಸಲ್ಲಿಸಿದ ಅರ್ಜಿಗಳಿಗೆಲ್ಲಾ ಮಂಜೂರಾತಿ ದೊರಕಿತ್ತು. ದಾಖಲೆ ತರಿಸಿ ನೋಡಿದಾಗ ಅದು ನಿಜವಾಗಿತ್ತು ಎಲ್ಲರಿಗೂ ವಿದ್ಯಾರ್ಥಿ ವೇತನ ಬಂದಿತ್ತು ಮಾತ್ರವಲ್ಲ ಅವರಿಗೆ ಚೆಕ್‌ ಸಹಾ ತಲುಪಿಸಲಾಗಿದೆ.
 ಮಕ್ಕಳನ್ನು ಕರಸಿ ವಿಷಯ ತಿಳಿಸಿದಾಗ ತಾವು ಚೆಕ್‌ ಪಡೆದೆ ಇಲ್ಲ ಎಂದರು. ಅವರು ಮಾಡಿದ ಸಹಿ ತೋರಿಸಿದಾಗ ಅದು ನಮ್ಮ ಸಹಿಯಲ್ಲ ಎಂದು ನಿರಾಕರಿಸಿದರು
ಉಪನ್ಯಾಸಕರೊಬ್ಬರನ್ನು ವಿಚಾರಣೆ ನಡೆಸಿ ವರದಿ ನೀಡಲು ನೇಮಿಸಿದಾಗ ವಿವರ ಹೊರಬಂದಿತು.ಸುಮಾರು ನಲವತ್ತು ಹೈಸ್ಕೂಲು ಮಕ್ಕಳ ವಿದ್ಯಾರ್ಥಿ ವೇತನದ ಹಣ ದುರ್ಬಳಕೆ ಯಾಗಿದೆ. ಅವರ ಹೆಸರಿನಲ್ಲಿ ಚೆಕ್‌ ನೀಡಲಾಗಿದೆ. ದಾಖಲೆಗಳಲ್ಲಿ ಅವರ ಸಹಿ ಫೋರ್ಜರಿ ಮಾಡಲಾಗಿದೆ. ಬ್ಯಾಂಕಿನಲ್ಲಿ ವಿಚಾರಿಸಲಾಗಿ ಆ ಎಲ್ಲ  ಚೆಕ್‌ಗಳಿಗೆ ನಮ್ಮ ಲ್ಲಿನ ವೃತ್ತಿ ಶಕ್ಷಣ ಉಪನ್ಯಾಸಕರೊಬ್ಬರು ದೃಢೀಕರಿಸಿದ್ದಾರೆ. ಅವರನ್ನೂ ಕರೆಸಿ ವಿಚಾರಿಸಿದಾಗ ಅವರಿಗೆ ಗುಮಾಸ್ತರು ಸಹಿ ಮಾಡಲು ಕೇಳಿದಾಗ  ಒಂದೆ ದಿನ ಎಲ್ಲವಕ್ಕೂ ಸಹಿ ಮಾಡಿದ್ದಾರೆ. ಅವರು ವಿದ್ಯಾರ್ಥಿಗಳನ್ನು ನೋಡಿಯೆಇಲ್ಲ. ಹೇಗಿದ್ದರೂ ಪ್ರಿನ್ಸಿಪಾಲರ ಸಹಿ ಇದೆ ಎಂದು ಕೊಂಡು ಅವರೂ ಸಹಿ ಮಾಡಿದುದಾಗಿ ತಿಳಿದು ಬಂತು
 ಮಾದಯ್ಯ ಅವರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡಿರುವನು.
ಆ ಚೆಕ್ಕುಗಳನ್ನು ಬೇರೆ ಯಾವುದೋ ಹುಡುಗರಿಗೆ ಹೇಳಿ ನಗದು ಮಾಡಿಸಿದೆ. ಬ್ಯಾಂಕಿನವರು ಬೇರರ್ ಚೆಕ್‌ ಆದ್ದರಿಂದ ಹಣ ವೂ ಕೆಲವೆ ನೂರು ರೂಪಾಯಿಗಳಾದ್ದರಿಂದ ಶಿಕ್ಷಕರ ದೃಢೀ ಕರಣ ನೋಡಿ ಮರು ಮಾತಾಡದೆ ಹಣ ನೀಡಿದ್ದಾರೆ.
ಸಬಂಧಿಸಿದ ಗುಮಾಸ್ತರ ಕೈವಾಡದಿಂದ ನಲವತ್ತು ಮಕ್ಕಳಿಗೆ ವಂಚನೆ ಯಾಗಿದೆ. ಸುಮಾರು ಆರು ಸಾವಿರರೂಪಾಯಿ ನುಂಗಿಹಾಕಿರುವರು.
ಈ ಎಲ್ಲ ವಿಚಾರಗಳ ಸಮೇತ ಮಾದಯ್ಯನನ್ನು  ವಿಚಾರಿಸಿದರೆ. ಅವನು ತನ್ನತಪ್ಪು ಒಪ್ಪಿಕೊಂಡ.  ಎಲ್ಲರಿಗೂ ಹಣ ವಾಪಸ್ಸು ನೀಡುವುದಾಗಿ ತಿಳಿಸಿದ. ಸಂಬಳದ ಹಣದಲ್ಲಿ ಕಡಿತ ಮಾಡಲು ವಿನಂತಿಸಿದ.ಅದರಂತೆ ಬರಹದಲ್ಲಿ ಹೇಳಿಕೆಯನ್ನೂ ನೀಡಿದ. ವಿಷಯವನ್ನು ಇಲಾಖೆಯ ಗಮನಕ್ಕೆ ತರಲಾಯಿತು.
 ಈ ಮಧ್ಯ ಅವನು ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶೂಲ್ಕವನ್ನೂ ದುರುಪಯೋಗ ಪಡಿಸಿಕೊಂಡ ವಿಷಯ ಬೆಳಕಿಗೆ ಬಂತು. ಅದರಂದ ಸುಮಾರು ೫೧ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಬರಲೆ ಇಲ್ಲ. ನಾನೆ ಮಧ್ಯ ಪ್ರವೇಶಿಸಿ ಅವರಿಗೆ ಪರೀಕ್ಷೆಗೆ ತೊಂದರೆಯಾಗದಂತೆ ನೋಡಿಕೊಳ್ಳ ಲಾಯಿತು. ಇದರ ಪರಿಣಾಮವಾಗಿ ಮಾದಯ್ಯ ಅಮಾನತ್ತು ಆಗಿದ್ದ.
 ಈಗ ಹದಿನೈದು ದಿನದ  ಮೇಲೆ ಬಂದು ಏನಾದರೂ ತೀರ್ಮಾನ ಮಾಡಲು ಒತ್ತಾಯಿಸುತಿದ್ದ.
ಅವನ ವಿಷಯ ಇಲಾಖೆಯ ಗಮನಕ್ಕೆ ಹೋಗಿ ಅವರು ಕ್ರಮ ತೆಗೆದುಕೊಂಡಿರುವರು. ನಾನು ಏನೂ ಮಾಡಲಾರೆ. ಸುಮ್ಮನೆ ಮನಗೆ ಹೋಗು. ಇಲಾಖೆಯನ್ನೆ ಸಂಪರ್ಕಿಸು, ಎಂದು ತಿಳಿ ಹೇಳಿದ.
ನೀವು  ದೂರನ್ನು ವಾಪಸ್ಸು ಪಡೆಯದಿದ್ದರೆ  ನಾನು ಸಾಯುವೆ.  ಅದರ  ಹೊಣೆ  ನಿಮ್ಮದು" ಎನ್ನುತ್ತಾ ಜೇಬಿನಿಂದ ಚಿಕ್ಕಬಾಟಲಿ ತೆಗೆದ.
 ಆ ರೀತಿ ಹುಚ್ಚಚ್ಚಾರ ಮಾಡ ಬೇಡ. ಎಂದು ಹೇಳುತಿದ್ದಂತೆಯೆ , ಬಾಟಲಿಯ ಮುಚ್ಚಳ ತೆಗೆದು ಅದರೊಳಗಿರುವುದನ್ನು ಗಟಗಟನೆ ಕುಡಿದ.
 ಬೇಡ , , ಹಾಗೆ ಮಾಡ ಬೇಡ ಎನ್ನುತ್ತಾ ನಾನು ಕರೆಗಂಟೆಯನ್ನು ಬಾರಿಸಿದೆ. ಜವಾನರಿಬ್ಬರು ಧಾವಿಸಿ ಬಂದರು
ಅವರು ಅವನ ಕೈ ಹಿಡಿಯುವುದರೊಳಗೆ ಪೂರ್ಣ ಕುಡಿದು ಬಿಟ್ಟ.
ನಾನು ಗಾಬರಿಯಿಂದ ಹಿರಿಯ ಶಿಕ್ಷಕರನ್ನು ಕರೆಸಿದೆ. ಪೋಲಿಸರಿಗೆ ಫೋನು ಮಾಡಿದೆ. ವೈದ್ಯರನ್ನು ಕರೆಸಲು ತಿಳಿಸಿದೆ.
 ನನ್ನ ಕಣ್ಣೆದುರೆ ಒಬ್ಬ ವ್ಯಕ್ತಿ ಸಾಯುತ್ತಿರುವುದಕ್ಕೆ ಬಹಳ ವ್ಯಥೆಯಾಯಿತು.
ಅವನಿಗೆ ಏನಾದರೂ ಪ್ರಥಮ ಚುಕಿತ್ಸೆ ಕೊಡಲು ಹೇಳಿದೆ. ತೂರಾಡುತಿದ್ದ ಅವನನ್ನು ಅಲ್ಲಿಯೆ ಬೆಂಚಿನ ಮೇಲೆ ಕೂಡಿಸಿದರು. ಅಷ್ಟರಲ್ಲಿ ಪೋಲಿಸರು ಬಂದರು.
 ವಿಷಯ ತಿಳಿದ ಅವರು ಏನು  ಕುಡಿದೆ ? ಏಕೆ ಹೀಗೆ ಮಾಡಿದೆ ? ಎಂದರು.
ಅವನು  ಸರಿಯಾಗಿ ಮಾತು ಆಡಲೆ ಇಲ್ಲ.
"ಒಳ್ಳೆಯ ಮಾತಲ್ಲಿ ತಿಳಿಸುವೆಯಾ, ಇಲ್ಲವಾದರೆ ಸ್ಟೇಷನ್ನಿಗೆ ನಡೆ, ನಿನ್ನಮೇಲೆ ಆತ್ಮ ಹತ್ಯೆಯ ಕೇಸು ಹಾಕುವೆವು,"  ಗದರಿಸಿದರು.
ಇಲ್ಲ ಸಾರ್‌, ನಾನು ಏನೂ ಮಾಡಿಲ್ಲ. ಸ್ಟೇಷನ್ನಿಗೆ ಕರೆದು ಕೊಂಡುಹೋಗಬೇಡಿ, ಎಂದು ಗೋಗರೆದ.
ಅಲ್ಲಿಯೆ ಇದ್ದ ಬಾಟಲಿಯನ್ನು ಮೂಸಿ ನೋಡಿದರು. ಏನಯ್ಯಾ ಯಾವುದೆ ವಾಸನೆ ಇಲ್ಲ, ಏನು ಕುಡಿದೆ ? ಯಾಕೆ ಕುಡಿದೆ ?ಎಂದು ಕೇಳಿದರು.
ಇಲ್ಲ ಸಾರ್‌, ವಿಷ ಕುಡಿದಿಲ್ಲ. ನಾನು ಕುಡಿದದ್ದು ಬರಿ ನೀರು, ಪ್ರಿನ್ಸಿಪಾಲರನ್ನು ಹೆದರಿಸಲು ಹಾಗೆ ಮಾಡಿದೆ, ಎಂದ.





Saturday, March 16, 2013

ಆರರಿಂದ ಅರವತ್ತು ಸರಣಿ


ಅಮಾನತ್ತಿನಲ್ಲಿಡಿ  ಆದರೆ ಅವಕಾಶ  ಕೊಡಿ

ಸಂಜೆ ಮೂರು  ಗಂಟೆಯ ಆಸು ಪಾಸು. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಎಸ್ ಎಸ್ ಎಲ್ ಸಿ  ಪರೀಕ್ಷಾ ಮಂಡಳಿಯ ಕಚೇರಿಯಲ್ಲಿ ನಿರ್ದೇಶಕರು ಗಂಭೀರವಾಗಿ  ಕುಳಿತಿರುವರು. ಅವರೆದುರು ಅನತಿ ದೂರದಲ್ಲಿ  ಇಪ್ಪತ್ತೈದರ ಯುವಕ ತಲೆತಗ್ಗಿಸಿ ಕೈಕಟ್ಟಿ ನಿಂತಿದ್ದಾನೆ.ಮುಖದಲ್ಲಿ ಗಾಬರಿ. ಕಣ್ಣಲ್ಲಿ ನೀರು.. ಅವರ ಮುಂದಿನ ಉದ್ದನೆಯ   ಮೇಜಿನ ಎರಡು ಕಡೆಗೆ  ಹಾಕಿದ ಕುರ್ಚಿಯೊಂದರಲ್ಲಿ ಕುಳಿತ ಐವತ್ತು ದಾಟಿದ ವ್ಯಕ್ತಿ  ಕೈನಲ್ಲಿನ ಪತ್ರ ತೋರಿಸುತ್ತಾ   ವಿನಯವಾಗಿ ಮಾತನಾಡುತಿದ್ದಾನೆ

 "ತಪ್ಪಿದ್ದರೆ  ನನ್ನನ್ನು ಅಮಾನತ್ತು ಮಾಡಿ , ಚಿಂತೆ ಇಲ್ಲ.  ಆದರೆ ಐವತ್ತೊಂದು ಅಮಾಯಕ ವಿದ್ಯಾರ್ಥಿಗಳ   ಭವಿಷ್ಯ  ಹಾಳಾಗಬಾರದು. ದಯವಿಟ್ಟು ಅವರಿಗೆ ಪರೀಕ್ಷೆಗೆ  ಕುಳಿತು ಕೊಳ್ಳಲು  ಅವಕಾಶ ಕೊಡಿ"  
ಅಲ್ರಿ   ಪ್ರಿನ್ಸಿಪಾಲಾರೆ, ಅವರ ಅರ್ಜಿಗಳೇ ಬಂದಿಲ್ಲ , ಪರೀಕ್ಷಾ ಶುಲ್ಕ  ಸಂದಾಯವಾಗಿಲ್ಲ. ಪ್ರವೇಶ ಪತ್ರ ಕೊಡುವುದು  ಹೇಗೆ ಸಾಧ್ಯ
"
ಹೇಗಾದರೂ  ಮಾಡಿ  ಅವಕಾಶ ಕೊಡಿ ಸಾರ್ ,ಅವರು ಅರ್ಜಿ ತುಂಬಿದ್ದಾರೆ. ಹಣ ಕೊಟ್ಟಿದ್ದಾರೆ. ನಮ್ಮ ಗುಮಾಸ್ತನು ಇಲಾಖೆಗೆ ಕಳುಹಿಸಿಲ್ಲ.ದುರ್ಬಳಕೆ  ಮಾಡಿರುವನು. ಅದು ಅವನ ತಪ್ಪು"
ಅವನು ತಪ್ಪು ಮಾಡಿದ , ಆದರೆ ನೀವು ಏನು ಮಾದುತಿದ್ದಿರಿ? ಮೇಲ್ವಿಚಾರಣೆ ನಿಮ್ಮ ಕರ್ತವ್ಯ ಅಲ್ಲವೇಸರಕಾರಕ್ಕೆ ಸಲ್ಲಬೇಕಾದ ಹಣ  ನುಂಗಿ ಹಾಕಿ , ಈಗ ಗೋಗರೆಯುತ್ತಿರುವಿರಿ , ಇದು ಕರ್ತವ್ಯ ಚ್ಯುತಿ  ನಿಮ್ಮ ಮೇಲೆ  ಕ್ರಮ  ತೆಗೆದುಕೊಳ್ಳ ಬೇಕು. "
ಬೇಕಾದ್ರೆ ನನಗೆ ಶಿಕ್ಷೆ   ಕೊಡಿ , ಈಗಲೇ   ಅಮಾನತ್ತು ಮಾಡಿ . ನಿಮ್ಮ ಆದೇಶ ಪಾಲಿಸುವೆ., ಆದರೆ ದಯಮಾಡಿ ಮಕ್ಕಳಿಗೆ ಪರೀಕ್ಷೆಗೆ   ಕುಳಿತು ಕೊಳ್ಳಲು   ಅವಕಾಶ ಕೊಡಿ  "
  ಸಂಭಾಷಣೆ ನಡೆದದ್ದು   ಬೆಂಗಳೂರಿನಲ್ಲಿ . ನಾನು ಮಂಡ್ಯ  ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿ ಪಾಲ ನಾಗಿದ್ದಾಗ.  ನಮ್ಮದು  ಸಂಯುಕ್ತ  ಪದವಿ  ಪೂರ್ವ ಕಾಲೇಜು.  ಅಲ್ಲಿ  ಹೈಸ್ಕೂಲು  ಮತ್ತು ಕಾಲೇಜು ಎರಡು ವಿಭಾಗಕ್ಕೂ ಒಬ್ಬರೇ ಮುಖ್ಯಸ್ಥರು.
ಹೈಸ್ಕೂಲು ವಿಭಾಗಕ್ಕೆ  ಹಿರಿಯ ಸಹಾಯಕರು ಇರುವರು. ಶೈಕ್ಷಣಿಕ  ವಿಚಾರಗಳ  ಉಸ್ತುವಾರಿ ಮಾಡುವರು     ಆದರೆ  ಹಣ ಕಾಸು  ಶಿಸ್ತು  ಮೊದಲಾದವುಗಳ  ಅಂತಿಮ ಹೊಣೆ  ಅವರದಲ್ಲ..
  ವರ್ಷ ಎಸ್ ಎಸ್ ಎಲ್ ಸಿ ಪೂರಕ    ಪರೀಕ್ಷೆಗೆ  ವೇಳಾ ಪಟ್ಟಿ  ಬಂದಿದೆ..ನಮ್ಮಲ್ಲಿ ನೂರ  ಐವತ್ತಕ್ಕೂ ಹೆಚ್ಚು ಮಕ್ಕಳು   ಪರೀಕ್ಷೆಗೆ  ಕಟ್ಟಿರುವರು ಮೊದಲ ಹಂತದಲ್ಲಿ ೯೫  ಮತ್ತು ಎರಡನೆ ಹಂತದಲ್ಲಿ ೫೬ ಮಂದಿ ಅರ್ಜಿ  ಸಲ್ಲಿಸಿದ್ದಾರೆ. ಒಟ್ಟು ನೂರಾ  ಐವತ್ತು ಒಂದು ಜನ ರ ಪಟ್ಟಿ ನಮ್ಮಲ್ಲಿದೆ.ಆದರೆ ನಮಗೆ ಬಂದದ್ದು ೯೫ ಪ್ರ ವೇಶ ಪತ್ರಗಳು, ನಾಮಿನಲ್‌   ರೋಲ್ ಮತ್ತು ಇತರ ದಾಖಲೆಗಳುಮಾತ್ರ.
ಗುಮಾಸ್ತನು  ಎರಡನೆ ಬ್ಯಾಚಿನವು ತಡವಾಗಿ ಬರುವವು ಎಂದು ಹೇಳಿದ. ಇರಬಹುದು ಎಂದು ಕೊಂಡೆವು.
ಪ್ರ ವೇಶ ಪತ್ರಗಳ ವಿತರಣೆ ಪ್ರಾರಂಭ ವಾಯಿತು. ಪರೀಕ್ಷೆಗೆ  ನಾಲ್ಕೇ ದಿನ ಬಾಕಿ. ಉಳಿದ ಪ್ರವೇಶ   ಪತ್ರಗಳ  ಸುಳಿವೇ ಇಲ್ಲ.ಇದರ ಮೇಲೆ ಗುಮಾಸ್ತನು ಬೇರೇ ಎರಡು ದಿನ ರಜೆ ಹಾಕಿದ.ಬೇರೆ ಶಾಲೆಗಳಲ್ಲಿ ವಿಚಾರಿಸಲಾಗಿ ಎಲ್ಲ ಕಡೆ  ಯಾವಾಗಲೋ ಬಂದಿವೆ. ಆದ್ರೆ ನಮಗೆ ಮಾತ್ರ ಬಂದೆ ಇಲ್ಲ.
ಗಾಬರಿಯಾಯಿತು. ಯಾಕೋ ಅನುಮಾನ ಬಂದಿತು. ಹಿರಿಯ ಸಹಾಯಕರನ್ನು ಕರೆದು  ಗುಮಾಸ್ತನ ಬೀ ರುವಿನಲ್ಲಿ ಹುಡುಕಲು ಹೇಳಿದೆ.

ಅವ್ರು ತುಸು ಸಮಯದ ನಂತರ  ಕೈನಲ್ಲಿ ಒಂದು ಕಡತ ಹಿಡಿದು ಬಂದರು  ., " ಸಾರ್, ಅರ್ಜಿ ಇಲ್ಲೇ ಇವೆ ಕಳುಹಿಸಿಯೇ ಇಲ್ಲ."
ತಕ್ಷಣ  ಗುಮಾಸ್ತನ ಮನೆಗೆ ಜವಾನನ್ನು ಕಳುಹಿಸಿದೆ. ಅರ್ಧ ಗಂಟೆಯಲ್ಲಿ ಬಂದ.
 
ಏನು ಮಾದಯ್ಯ  ಇನ್ನು56  ಪ್ರವೇಶ ಪತ್ರಗಳು ಬಂದೆ ಇಲ್ಲ, ಏಕೆ ? ಎಂದು ಕೇಳಿದೆ.
ಸಾರ್  ನಾನಂತು ಹಣ ತುಂಬಿ ಅರ್ಜಿ ಕಳುಹಿಸಿರುವೆ. ಅಲ್ಲಿಯೇ ಏನಾದರೂ ವ್ಯತ್ಯಾಸವಾಗಿರಬಹುದು . ಬೇಕಾದರೆ  ಖುದ್ದಾಗಿ ಹೋಗಿ ತರುವೆ " ಎಂದು ಉತ್ತರಿಸಿದ.
 
ಹಿರಿಯ ಸಹಾಯಕರು ಕಡತವನ್ನು ಅವನ ಮುಂದೆ  ಹಿಡಿದು " ಅರ್ಜಿಗಳು ಇಲ್ಲಿಯೇ ಇವೆ. ನೀನು ಅವನ್ನು  ಕಳುಹಿಸಿಯೇ ಲ್ಲ. ಸುಳ್ಳು ಯಾಕೆ  ಹೇಳುತ್ತಿರುವೆ" ಎಂದು ಗದರಿದರು.
ಅವನು ಪೆಚ್ಚಾದ . ಬೇ  ಬೇ  ಎನ್ನ ತೊಡಗಿದ.
ನಿಜ ಹೇಳು , ಆದದ್ದಾದರೂ  ಏನು  , ಎಂದು ಗದರಿದಾಗ ಬಾಯಿ ಬಿಟ್ಟ
ಹುಡುಗರು ಪರಿಕ್ಷಾ ಶುಲ್ಕ  ಕಟ್ಟಿದ್ದಾರೆ. ಸುಮಾರಿ ೧೫೦೦ ರುಪಾಯಿ ಆಗಬಹುದು.ಹಣ  ಬಂದ ಹಾಗೆ ಬಳಸಿ ಕೊಂಡಿರುವ . ಕೊನೆಗೆ ಕಟ್ಟಲು  ಕೈನಲ್ಲಿ ಕಾಸಿಲ್ಲ.  ಆದದ್ದಾಗಲಿ ಎಂದು ಸುಮ್ಮನಾಗಿದ್ದಾನೆ. ಪ್ರವೇಶ ಪತ್ರಗಳು ಬಂದಾಗ ಗೊತ್ತಾಗಿದೆ. ಆದರೆ ಕೈ ಮೀರಿದೆ.ಅದಕ್ಕೆ ರಜೆ ಹಾಕಿದ್ದಾನೆ..
 
ಈಗ ಏನು ಮಾಡುವುದು , ನೀನೆ ಹೇಳು, ಎಂದಾಗ ,
 
ಸಾರ್ , ಹೇಗಿದ್ದರೂ ರಿಪೀಟರಸ್ . ಅವರು ಹೇಗಿದ್ದರೂ ಪಾಸಾಗುವುದಿಲ್ಲ. ಮುಂದಿನ ಪರೀಕ್ಷೆಗೆ ಕೂಡಲಿ  ನಾನೇ ಪರೀಕ್ಷಾ  ಶುಲ್ಕ ಕಟ್ಟುವೆ, ಎಂದು ಉಡಾಫೆಯ ಮಾತನಾಡಿದ.
 
ಅವರು ಪಾಸಾಗುವರೋ ಬಿಡುವರೋ ಅದು ಬೇರೆ ಮಾತು ೫೧ ಜನ ಪರೀಕ್ಷೆ ಕಟ್ಟಿದ್ದಾರೆ. ಅವರಿಗೆ ಅನ್ಯಾಯವಾ ಗುವುದುಎಲ್ಲರಿಗು ಸಮಾಧಾನ ಮಾಡುವುದು ಸಾಧ್ಯವೇ ಇಲ್ಲ., ಎಂದರು ಹಿರಿಯ ಸಹಾಯಕರು.
ಮೊದಲೇ ನಮ್ಮಲ್ಲಿ ಹಿಂದುಳಿದ ಮತ್ತು ದಲಿತ ಮಕ್ಕಳೇ ಹೆಚ್ಚು. ದೊಡ್ಡ  ಗಲಾಟೆಯಾಗುವುದು . ನಮ್ಮ ಊರು ಸೂಕ್ಷ್ಮ ಪ್ರದೇಶ. ಕೋಮು ಗಲಭೆ ಗೆ ಕಾರಣ ವಾದರೂ ಅಚ್ಚರಿ ಇಲ್ಲ.  ಯಾವುದೇ ಅವ್ಯವಹಾರ ಗಳಿಗೆ  ಅವಕಾಶ ಕೊಡದೆ  ಬಿಗಿಯಾಗಿ ಪರೀಕ್ಷೆ  ನಡೆಸುವುದರಿಂದ .ಅನೇಕರಿಗೆ ಅಸಮಾಧಾನವಿದೆ. ಈಗ ಕಾರಣ ಸಿಕ್ಕರೆ ತೊಂದರೆ  ಖಂಡಿತ .  ಅಂತು  ನಾವು ಗಂಡಾಂತರಕ್ಕೆ ಸಿಕ್ಕು ಹಾಕಿ ಕೊಂಡಿದ್ದೇವೆ, ಎಂದು ಹೇಳಿದೆ.
ಅವನಿಗೆ ಮೆಮೋ ಕೊಡಲಾಯಿತು. ಅವನು ತನ್ನ ತಪ್ಪು ಒಪ್ಪಿಕೊಂಡು ಪತ್ರ ಬರೆದು ಕೊಟ್ಟ.ಅದನ್ನು ಇಲಾಖೆಯ  ಗಮನಕ್ಕೆ ಸಲ್ಲಿಸಲಾಯಿತು. ಆದ್ರೆ  ಸಾರ್ವ ಜನಿಕರನ್ನು  ಸಮಾಧಾನ ಮಾಡುವುದು   ಆಗದ ಮಾತು.
ಎಲ್ಲ ದಾಖಲೆಗಳ ಸಮೇತ ಅವನನ್ನು ಕರೆದುಕೊಂಡು ಪರೀಕ್ಷಾ ಮಂಡಳಿಗೆ ಹೋದೆ.ಅಲ್ಲಿನ ಅಧಿಕಾರಿಗಳ ಮನ ಒಲಿಸಿ  ಪ್ರವೇಶ ಪತ್ರ   ಪಡೆಯುವುದೊಂದೇ ಈ ಸಮಸ್ಯೆಗೆ ಪರಿಹಾರವೆನಿಸಿತು.
ಅದರಂತೆ ಮಂಡಳಿಯ  ನಿರ್ದೇಶಕರಿಗೆ ವಿಷಯ  ತಿಳಿಸಿ ಮನವಿ ಸಲ್ಲಿಸಲಾಯಿತು.
ಅವರು  ಮೊದಲು ನಮ್ಮ ಮನವಿಯನ್ನು ಸಾರಾ ಸಗಟು ತಳ್ಳಿ ಹಾಕಿದರು
."
ತಪ್ಪು ನಿಮ್ಮದು, ಅನುಭವಿಸಿ " ಎಂದು ಝಾಡಿಸಿದರು
"
ನಾನು  ಯಾವುದೇ ಸಬೂಬು ಹೇಳದೆ ಪ್ರಾಂಜಲ  ಮನದಿಂದ ತಪ್ಪು  ಒಪ್ಪಿಕೊಂಡೆ
"
ಗುಮಾಸ್ತನೆ  ಹಣ  ತಿಂದಿದ್ದರು ಅದನ್ನು  ತಡೆಯುವಲ್ಲಿ  ನಾನು ವಿಫಲನಾಗಿದ್ದೆ.ಅವನು ಯಾವುದೊ ಚಲನ್ ತೋರಿಸಿ ಹಣ  ಕಟ್ಟಿ ಬಂದಿರುವೆ ಎಂದರೆ ನಂಬಿದ್ದು ನನ್ನ ತಪ್ಪು. ಪರಿಶೀಲನೆ ಮಾಡ ಬೇಕಾದದ್ದು ನನ್ನ ಕರ್ತವ್ಯವಾಗಿತ್ತು.   ಇದರಿಂದ ೫೧ ಜನಕ್ಕೆ ತೊಂದರೆಯಾಗಿತ್ತು.
ಪರಿಕ್ಷಾಆ ಸಮಯದಲ್ಲಿ ಅಷ್ಟು ಜನ ಪೋಷಕರನ್ನು , ವಿದ್ಯಾರ್ಥಿಗಳನ್ನೂ  ಸಮಾಧಾನ  ಮಾಡುವುದು ಆಗದ ಮಾತು. ತಪ್ಪು ಯಾರದೇ ಇರಲಿ, ಗುಮಾಸ್ತನದೋ , ಪ್ರಾಂಶುಪಾಲರದೋ , ಇಲ್ಲವೇ ಇಲಾಖೆಯದೋ  ಅದು ಅವರಿಗೆ ಗೊತ್ತಿಲ್ಲ.  ಅವರಿಗೆ  ಅನ್ಯಾಯವಾಗಿದೆ. ಪ್ರತಿಭಟನೆ  ಮಾಡುವರು. ಕಾಲೇಜಿನ ಮತ್ತು ಊರಿನ ಶಾಂತಿ ಸುವ್ಯವಸ್ಥೆಗೆ ಭಂಗ  ಬರುವುದು ಖಂಡಿತ.
ನನಗೆ ಏನೇ ಆದರು ಸರಿ . ಪ್ರವೇಶ ಪತ್ರ  ಇಲ್ಲದೆ  ಇಲ್ಲಿಂದ ಕದಲುವುದಿಲ್ಲ. ಇಲಾಖೆ  ಕೊಡದಿದ್ದರೆ ಕಾಲೇಜಿಗೆ ಗಂತೂ  ಕಾಲಿಡುವುದಿಲ್ಲ , ಎಂದು ಅಲ್ಲಿಯೇ ಗಟ್ಟಿಯಾಗಿ ಕುಳಿತೆ.
ಗುಮಾಸ್ತನು ನೀಡಿದ್ದ ಹೇಳಿಕೆಯನ್ನು ಅವರಿಗೆ ಸಲ್ಲಿಸಿದೆ. ಇದ್ದ ವಿಷಯ ತಿಳಿಸಲು .  ಅವನಿಗೆ ಸೂಚಿಸಿದೆ..
ಅವನು ಅಳುತ್ತ ನಿರ್ದೇಶಕರ ಕಾಲು ಹಿಡಿದ
, " ಮೇಡಂ, ನಾನು   ಪ್ರಾಂಶುಪಾಲರಿಗೆ ಮೋಸ ಮಾಡಿದೆ. . ಮಣ್ಣು ತಿನ್ನುವ ಕೆಲಸ ಮಾಡಿದೆ ನೀವೇ ಕಾಪಾಡಿ "  ಅಳತೊಡಗಿದ.
..
ನಿರ್ದೇಶಕರು ಮಹಿಳೆ. ಅವರ ಮನ  ಕರಗಿತು.
 
ನೀವು ಏನು ಕ್ರಮ  ತೆಗೆದುಕೊಂಡಿದ್ದೀರಿ? .ನನ್ನನ್ನು ಕೇಳಿದರು
ಮೆಮೋ ಕೊಟ್ಟಿರುವೆ. ಇಲಾಖೆಗೆ ವರದಿ ಮಾಡಿರುವೆ., ಮೊದಲು ಅನಾಹುತ ಆಗುವ ಮೊದಲೇ ತಪ್ಪು ಸರಿಪಡಿಸಲು ಇಲ್ಲಿಗೆ ಬಂದಿರುವೆ. ಪರೀಕ್ಷೆಗೆ ಕುಳಿತುಕೊಳ್ಳಲು ದಯಮಾಡಿ ಮಕ್ಕಳಿಗೆ ಅನುಮತಿ ಕೊಡಿಎಂದು ಅರ್ಜಿಯ    ಕಡತವನ್ನು ನೀಡಿದೆ.

ಅವರು  ಸಂಬಂಧಿಸಿದ ಅಧಿಕಾರಿಯನ್ನು ಕರೆದು ತಕ್ಷಣ  ಪ್ರವೇಶ  ಪತ್ರಗಳನ್ನು , ಅಗತ್ಯ ದಾಖಲೆಗಳನ್ನು ಸಿದ್ಧ  ಪಡಿಸಲು ತಿಳಿಸಿದರು.
ಆದ ತಪ್ಪಿಗೆ  ಕಠಿಣ ಶಿಕ್ಷೆ  ಕೊಡುವುದಾಗಿ  ಬೆದರಿಸಿದರು.
ನಾನು ನಿರಾಳವಾಗಿ ಒಪ್ಪಿಕೊಂಡೆ.ಮಕ್ಕಳಿಗೆ ಪರೀಕ್ಷೆಗೆ ಕೂಡಲು  ಅನುಮತಿ ಸಿಕ್ಕಿತು.  ಅದೇ ದೊಡ್ಡದು.   ಗಂಡಾಂತರ ತಪ್ಪಿತು ನನಗೆ ಏನೇ ಆದರು ಪರವಾ  ಇಲ್ಲ ಎಂದುಕೊಂಡೆ. ಅಂದೇ ಸಂಜೆ ಆರು ಗಂಟೆಗೆ ಎಲ್ಲ ದಾಖಲೆಗಳು     ಕೈಗೆ ಬಂದವು.. ಸೂಕ್ತ  ಕ್ರಮ ತೆ ಗೆದು ಕೊಳ್ಳಲು  ಉಪ  ನಿರ್ದೆಶಕರಿಗೆ    ಸೂಚನೆ ರವಾನಿಸಲಾಯಿತು. ರಾತ್ರಿ ಹತ್ತರ ಹೊತ್ತಿಗೆ ಊರಿಗೆ ವಾಪಾಸಾದೆವು.
 
ಬೆಳಗ್ಗೆ ಕಾಲೇಜಿನಲ್ಲಿ ಎಲ್ಲರಿಗು  ಅಚ್ಚರಿ ಪರೀಕ್ಷಾ ಶ್ಯುಲ್ಕ ಪಾವತಿ ಮಾಡದೆ  ಪ್ರವೇಶ  ಪತ್ರ  ಬಂದಿದ್ದವು..ಎರಡೇ ದಿನದಲ್ಲಿ  ಪರೀಕ್ಷಾ ಶುಲ್ಕವನ್ನು ಪ್ರತಿ  ಅರ್ಜಿಗೆ ೧೦೦ ದಂಡವನ್ನು ಸಲ್ಲಿಸಲು ತಿಳಿಸಲಾಗಿತ್ತು. ಆ ವೇಳೆಗೆ ಆಗಲೇ ಗುಮಾಸ್ತನ ಅಮಾನತ್ತು ಆಗಿತ್ತು.  ನಾನು ಹೆಚ್ಚು ತಲೆ ಕೆಡಿಸಿ ಕೊಳ್ಳಲಿಲ್ಲ   .ಇಲಾಖೆಯೇ ತಪ್ಪಿನ ಹೊಣೆಯನ್ನು ನಿಗದಿ ಮಾಡಿ ಆರೋಪಿಯ ಮೇಲೆ ಕ್ರಮ  ಜರುಗಿಸಿತ್ತು. ಅವನಿಂದ ವಸೂಲು ಮಾಡಿ   ಸಲ್ಲಿಸಲಾಗುವುದು ಎಂದು ವಿನಯ  ಪೂರ್ವಕವಾಗಿ ಉತ್ತರಿಸಿದೆ. 
ಸಿಡಿಲಿನಂತೆ ಬಂದ  ಸಮಸ್ಯೆ ಬರಿ ಗುಡುಗಾಗಿ ಪರಿಹಾರ ವಾಗಿತ್ತು.
ನಿಜವಾಗಿಯೂ ನಮ್ಮ ಅದೃಷ್ಟ  ದೊಡ್ಡದು. ನಮ್ಮದೇ ಜಿಲ್ಲೆಯಲ್ಲಿ ಮಂಡ್ಯದ ಹತ್ತಿರದ ಹಳ್ಳಿಯ  ಶಾಲೆಯಲ್ಲಿ . ಹೀಗೆ  ಆಗಿದೆ. ಮೂವತ್ತು ಹುಡುಗರಿಗೆ ಪ್ರವೇಶ ಪತ್ರ ಬಂದಿಲ್ಲ. ಅಲ್ಲಿನ  ಮುಖ್ಯೋ ಪಾಧ್ಯಯರು   ತುಂಬ ಭಯಸ್ಥರು,. ಸಜ್ಜನರು.ದೊಡ್ಡ ಗಲಭೆ ಯಾಗುವುದು. ಹಾಗಾದರೆ  ಮರ್ಯಾದೆ ಹೋಗುವುದು  ಎಂದು ಹೆದರಿ ಆತ್ಮ ಹತ್ಯೆ ಮಾಡಿಕೊಂಡ ಸುದ್ದಿ ಬಂದಿತು.
ನನಗೆ ಏನಾದರು ಸರಿ ವಿದ್ಯಾರ್ಥಿಗಳಿಗೆ   ತೊಂದರೆ  ಆಗಬಾರದು  ಎಂಬ ಮನೋಭಾವ  ಮತ್ತು ಅಮಾನತ್ತು ಆದರೂ ಸರಿ , ಪ್ರವೇಶ ಪತ್ರವಿಲ್ಲದೆ ಕಾಲೇಜಿಗೆ ಹೋಗುವುದಿಲ್ಲ  ಎಂಬ  ನನ್ನ  ಹಟ ದಿಂದ  ಸಮಸ್ಯೆ  ಸರಳವಾಗಿ ಪರಿಹಾರವಾಯಿತು.