Tuesday, November 27, 2012

ಅಮೇರಿಕಾ ಅನುಭವ -೨


ಸಮುದಾಯದ ಏಳಿಗೆ -ತಂಪೆರೆದಿದೆ ಬಾಳಿಗೆ                        

ಹಾಯ್ , ಹನಿ  ಆರಾಮಾಗಿದ್ದೀಯಾ? ಏನು ಕೊಡಲಿ?
ಥ್ಯಾಂಕ್ಯೂ ಹಮೀದ್‌ , ಈಗ ಓಕೆ .ಒಂದು ಐಸ್‌ ಕ್ರೀಂ ಕೊಡು . ತಿಂದು ಬಹಳ ದಿನ ಆಯಿತು
ಡಾರ್ಲಿಂಗ್‌ , ಕಾಲೇಜಿನಿಂದ ಯಾವಾಗ ಬಂದೆ? ಓದು  ಹೇಗೆ ಸಾಗಿದೆ?
ಇಂದು ಬೆಳಗ್ಗೆ  ಬಂದೆ,ನಿನ್ನನ್ನು ಮಾತನಾಡಿಸಲು ಬಂದಿರುವೆ. ನೀನು ಹೇಗಿರುವೆ?  
ಬಂದ ಗ್ರಾಹಕರಿಗೆಲ್ಲ ಆತ್ಮೀಯತೆ ತೋರುವ ವ್ಯಕ್ತಿ  ಹಮೀದ್‌ ಚೌದರಿ. ಅವನ "ಡೇರಿ ಕ್ವೀನ್" ಆ ಊರವರಿಗೆಲ್ಲ ಬೇಕಾದ ಜಾಗ. ಒಂದು ರೀತಿಯಲ್ಲಿ ಸಮುದಾಯದ ಕೇಂದ್ರವೆನ್ನಲೂ ಅಡ್ಡಿಯಿಲ್ಲ.
ಅಲ್ಲಿಗೆ ಬೇಸಿಗೆಯಲ್ಲಿ ಹೊಟ್ಟೆ ತಂಪುಮಾಡುವ ವಿವಿಧ ಐಸ್ಕ್ರೀಮ್ , ಪಾನೀಯಗಳ ಜೊತೆ ಅವನ ಸಿಹಿ ಮಾತಿಗಾಗಿಯೆ ಬರುವ ಜನ  ಬಹಳ.
ಬಂದು ತಿಂದು ಹೋಗುವುದಕ್ಕೆ ಮಾತ್ರ ಮೀಸಲಾಗಿಲ್ಲ ರೀಡಿಂಗ್‌ ಪಟ್ಟಣದ ಡೇರಿ ಕ್ವೀನ್.
ದೇಶಾದ್ಯಂತ ಹರಡಿರುವ ೫೦೦ ಕ್ಕೂ ಹೆಚ್ಚು ಇರುವ ಐಸ್‌ಕ್ರೀಮ್‌ ಕೇಂದ್ರಗಳಲ್ಲಿ ಇದೂ ಒಂದು. ನಿಗದಿತ ಗುಣ ಮಟ್ಟ , ರುಚಿ , ಅದರ ಜತೆಗ ಅಲಂಕಾರ. ಆದರೆ ಒಳಗೆ ಹೋಗಿ ನೋಡಿದರೆ ಗೋಡೆಯ ತುಂಬಾ ಅಭಿನಂದನಾತ್ರಗಳು, ಮೆಚ್ಚುಗೆ  ಓಲೆಗಳು , ಪ್ರಶಸ್ತಿ ಪತ್ರಗಳು,ವಂದನಾ ಸೂಚಕಗಳು. ಇದು ವ್ಯಾಪಾರಿ ಮಳಿಗೆಯೋ ಸಾಮಾಜ ಸೇವಕನೊಬ್ಬ ಕಚೇರಿಯೋ ಎಂಬ ಅನುಮಾನ ಮೂಡುವುದು.
ಪೆನ್ಸಿಲ್‌ವೇನಿಯಾದ ಆ ಪುಟ್ಟ ಪಟ್ಟಣದ ಸಮುದಾಯದೊಂದಿಗೆ  ಇರುವ ಅವನ ಸಂಬಂಧ ಗಮನಿಸಿದರೆ ,ತಲೆ ಮಾರಿನಿಂದ ಇಲ್ಲೆ ಇರುವ  ಇಲ್ಲಿಯೆ ಹುಟ್ಟಿ , ಬೆಳೆದು ಎಲ್ಲರೊಡನೆ ಬೆರತು ಬಾಳಿದವನು ಎನಿಸುವುದು ಸಹಜ.
ಆದರೆ ಹಮೀದ್‌ ಚೌದರಿ ಜನಿಸಿದ್ದು ಪಾಕಿಸ್ತಾನದಲ್ಲಿ.ತಂದೆ ಗುಮಾಸ್ತ. ಅವರು ಅಫಘಾತದ ಪರಿಣಾಮವಾಗಿ ನಿರುದ್ಯೋಗಿಯಾದರು. ಆರು ಮಂದಿ ಮಕ್ಕಳಲ್ಲಿ ಹಮೀದ ಅತ್ಯಂತ ಕಿರಿಯ. ತಾಯಿ ಶಿಕ್ಷಕಿಯಾಗಿ ಸಂಸಾರದ ರಥ ಎಳೆಯುತ್ತಿದ್ದಳು. ಅವಳ ಹಂಬಲ ಒಂದೇ,ತನ್ನ ಮಕ್ಕಳು ಸುಖವಾಗಿರಬೇಕು. ಅದರಿಂದ ಕಿರಿಯಮಗನನ್ನು ಅಮೇರಿಕಾದಲ್ಲಿ ಓದಲು ಉತ್ತೇಜಿಸಿದಳು. ಷಿಕಾಗೋದಲ್ಲಿ ಟ್ಯಾಕ್ಸಿ ಚಾಲಕನಾದ ಅವಳ ಸೋದರನ ಆಶ್ರಯ  ಹಮೀದನಿಗೆ ದೊರೆಯಿತು.ಇಲ್ಲಿ ಪದವಿ ಪಡೆಯುವುದ ಅವನ ಗುರಿ. ಭಾಷೆಯ ತೊಡಕು ಹಾಗೂ  ಜೀವನ ನಿರ್ವಣೆಗೆ ಹಣ ಸಂಪಾದಿಸಲು ಮಾಡಬೇಕಾದ ದುಡಿಮೆಯ ನಡುವೆ ಅವನಿಗೆ ಪದವಿ ಪಡೆಯುವುದು ಸುಲಭವಾಗಿರಲಿಲ್ಲ.ಅಂತೂ ಹಣ ಕಾಸುನಿರ್ವಹಣೆಯಲ್ಲಿ ಪದವಿ ಪಡೆದ. ವಾಲ್‌ಸ್ಟ್ರೀಟ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದ. ಆದರೆ ವಿಫಲನಾದ. ಬದುಕಲು ಏನಾದರೂ  ಮಾಡಲೆ ಬೇಕಿತ್ತು.  ಹೆಸರಾಂತ ಡ್ರೇಕ್‌ ಹೋಟೆಲಿನಲ್ಲಿ  ಸಾಧಾರಣ ಉದ್ಯೋಗಕ್ಕೆ ಸೇರಿದ. ತನ್ನ ಪರಿಶ್ರಮ ಮತ್ತು ಸನ್ನಡತೆಯಿಂದ ಸಹಾಯಕ ನಿರ್ವಾಹಕನ ಹುದ್ದೆಗೆ ಏರಿದ. ಅವನ ಮೇಲಿನ ವಿಶ್ವಾಸದಿಂದಾಗಿ ಅಲ್ಲಿಗೆ ಬರುವ ಗಣ್ಯ ಅತಿಥಿಗಳ ಸೇವೆಗೆ ಅವನೇ ನೇಮಕವಾಗುತಿದ್ದ. ಅದ್ಯಕ್ಷನಾದ ಬಿಲ್‌ ಕ್ಲಿಂಟನ್ ಅವರಿಗೆ ಸೀಜರ್ಸ ಸಾಲಡ್‌ ಅವನೇ ಕೊಡಬೇಕಿತ್ತು ಜಾಕ್‌ನಿಕೊಲಸನ್‌ ನಂತಹ ಸಿನೆಮಾ ನಟ ಹಾಗೂ,ಇತರ ಗಣ್ಯರೂ ಅವನ ಸೇವೆಪಡೆದು ಮೆಚ್ಚಿಗೆ ಸೂಚಿಸುತ್ತಿದ್ದರು.
 ಅದೆ ಸಮಯದಲ್ಲಿ ಸೈಯದ್ ಸನಾ ಎಂಬ ಯುವತಿಯ ಪರಿಚಯವಾಯಿತು. ಅವಳು ವೈದ್ಯಕೀಯ ವಿದ್ಯಾರ್ಥಿನಿ. ಅವನು ಅವರ ಮನೆಗೂ ಭೇಟಿನೀಡಿದ. ಒಂದೆರಡು ಸಲ ಭೇಟಿಯಾಗುವುದರೊಳಗೆ ಅವರು ಪ್ರೇಮಪಾಶಕ್ಕೆ ಸಿಲುಕಿದರು. ಹಿರಿಯರ ಅನುಮತಿ ಪಡೆದು 2001ರಲ್ಲಿ  ಮದುವೆಯೂ ಆಯಿತು. ಸನಾಳಿಗೆ ಪೆನ್ಸಿಲ್‌ವೇನಿಯಾ ರಾಜ್ಯದ ರೀಡಿಂಗ್‌ ಪಟ್ಟಣದ ಆಸ್ಪತ್ರೆಯಲ್ಲಿ ಉದ್ಯೋಗ ದೊರಕಿತು. ನ್ಯೂಯಾರ್ಕ ಬಿಟ್ಟು ನವ ದಂಪತಿಗಳು ಅಲ್ಲಿಗೆ ಹೋದರು. ಅವರು ಹೋದದ್ದು ಸೆಪ್ಟೆಂಬರ ೧೧ ೨೦೦೨ ರ ಅವಳಿ ಗೋಪುರಗಳ ಮೇಲೆ ತಾಲಿಬಾನರು ದಾಳಿ ಮಾಡಿದ ನಂತರ.ಇಡೀ ದೇಶವೆ ಪ್ರಕ್ಷ್ಯುಬ್ದವಾಗಿತ್ತು ಎಲ್ಲೆಲ್ಲೂ ತ್ವೇಷಮಯ ವಾತಾವರಣ.ಆದರೆ ಸಜ್ಜನತೆ ಮತ್ತು ಸನ್ನಡತೆಗೆ ಸದಾ ಬೆಲೆ ಇದೆ ಎಂಬ ನಂಬಿಕೆಯಿಂದ. ಹೊಸ ಊರಿನಲ್ಲಿ ನೆಲೆ ಕಂಡುಕೊಳ್ಳಲು  ನಿರ್ಧರಿಸಿದರು. ಹೆಂಡತಿ ವಾರಕ್ಕೆ ೯೦ ಗಂಟೆ ಸೇವೆ ಸಲ್ಲಿಸುತ್ತಿರುವಾಗ ತಾನೂ ಏನಾದರೂ ಮಾಡ ಬಯಸಿದ. ಕೆನ್‌ರ್ಟ ಪ್ಲಾಜದಲ್ಲಿ ಇದ್ದ  "ಡೇರಿ  ಕ್ವೀನ್"  ಮಾರಾಟಕ್ಕೆ ಇದೆ ಎಂದುಗೊತ್ತಾಗಿ ಧೈರ್ಯ ಮಾಡಿ ಅವರನ್ನು  ಸಂಪರ್ಕಿಸಿದ.ಅವರು ಕೇಳಿದ ೩೪೦೦೦ ಡಾಲರ್‌ ಹಣವನ್ನು ಹೇಗೋ ಹೊಂದಿಸಿದ. ಮಿನ್ನಸೋಟಾದಲ್ಲಿ ಪ್ರಾಂಚೈಸಿ ಪಡೆದ ಅವನಿಗೆ  ಮಿನ್ನಸೋಟಾದಲ್ಲಿ  ವಿವಿಧ ಐಸ್‌ ಕ್ರೀಮುಗಳ ತಯಾರಿ ಅವುಗಳ ನಿರ್ವಹಣೆ ಬಗ್ಗೆ ತರಬೇತಿ ದೊರೆಯಿತು ಗ್ರಾಹಕರ ಮೆಚ್ಚುಗೆ ಗಳಿಸಿದ ಅನುಭವ ಇದ್ದೆ ಇತ್ತು.  ಹಮೀದ ೨೩ ಜೂನ್‌ ೨೦೦೩ ರಲ್ಲಿ ವ್ಯಾಪಾರ ಪ್ರಾರಂಭಿಸಿದ.
ಆರಂಭದಲ್ಲಿ ಅವನಿಗೆ ಕಾರ್ಮಿಕರ ಕೊರತೆ, ಯಂತ್ರೋಪಕರಣಗಳ ತೊಂದರೆ  ಬಂದರೂ ಎದೆಗುಂದದೆ ತನ್ನ ಸೇವೆಯಿಂದ ಗ್ರಾಹಕರ ಮನ ಸೆಳೆದ. ವ್ಯಾಪಾರ ಕುದುರಿದಂತೆ ತಾನು ಇರುವ ಸಮುದಾಯದ ಒಳಿತಿಗೆ ಏನಾದರೂ ಮಾಡಲೇ ಬೇಕೆನಿಸಿತು. ಮೊದಲು ಸ್ಥಳೀಯ ಶಾಲೆಯ ಶಿಕ್ಷಕ ಪೋಷಕರ ಸಂಘದ ನಿಧಿ ಸಂಗ್ರಹಕ್ಕೆ ಮುಂದಾದ. ತನ್ನ ಒಂದು ದಿನದ ವ್ಯಾಪಾರದಲ್ಲಿ ೨೫% ಅವರಿಗೆ ವಾಗ್ದಾನ ಮಾಡಿದ . ಅದರಿಂದ ಸಂಗ್ರಹವಾ ೪೫೦ ಡಾಲರ್‌ ಹಣ ಕೊಡುಗೆಯಾಗಿ ನೀಡಿದ. ಅವನು ತಾನು ನೀಡಿದ ಆ ಚಿಕ್ಕ ಕಾಣಿಕೆಯಿಂದ ಬಂದ ಪ್ರತಿಕ್ರಿಯೆಯಿಂದ ದಂಗಾಗಿ ಹೋದ. ಅಂದಿನಿಂದ ಯಾವುದೆ ಸಾರ್ವಜನಿಕ ನಿಧಿ ಸಂಗ್ರಹಕ್ಕಾದರೂ ತನ್ನ ಮಳಿಗೆ ಮುಕ್ತವಾಗಿಸಿದ. ಅವನ ಆದಾಯದಲ್ಲಿ  ೫೦-೫೦ ಹಂಚಿಕೆಯ ಯೋಜನೆ ಎಲ್ಲರ ಮನ ಮುಟ್ಟಿತು. ಅವನು ತನ್ನ ವೆಚ್ಚವನ್ನು ಮಾತ್ರ ಪಡೆದು ಉಳಿದುದನ್ನು ದೇಣಿಗೆಯಾಗಿ ನೀಡತೊಡಗಿದ.ಕೆಲವೆ ವರ್ಷಗಳಲ್ಲಿ  ಅವನ ಹೆಸರು ಮನೆ ಮಾತಾಯಿತು,ಬಾಯ್‌ ಸ್ಕೌಟ್ಸ, ಗರ್ಲಸ್ಕೌಟ್ಸ, ಸಕರ್‌ ತಂಡ, ಸ್ಥಳಿಯ ಬೇಸ್‌ಬಾಲ್ ತಂಡ. ಕ್ಯಾನ್ಸರಿಗೆ ತುತ್ತಾದ ನಾಲಕ್ಕು ಮಕ್ಕಳ ತಾಯಿ, ಗುಂಡೇಟಿಗೆ  ಬಲಿಯಾದ ಪೋಲಿಸ್ ಅಧಿಕಾರಿಯ ಕುಟುಂಬ, ಶಾಲಾ ಊಪಹಾರ ಯೋಜನೆ ಗಳ ನಿಧಿ ಸಂಗ್ರಹ ಮಾಡಿದ, ರಕ್ತದಾನ ಶಿಬಿರದಲ್ಲಿ ಒಂದು ಪಿಂಟ್‌ ರಕ್ತ ನೀಡಿದವರಿಗೆ $20 ಬೆಲೆಯ ಐಸ್‌ಕ್ರಿಂಕೊಡುಗೆ ನೀಡಿದ, ಆಗೀಗ ಸ್ಥಳೀಯ ಶಾಲೆಗಳಿಗೆ ಭೇಟಿನೀಡಿ, ಶೀಕ್ಷಕರಿಗೆ ಸಿಹಿ ಹಂಚುವುದು , ಹೀಗೆ ಹಲವಾರು ಸಹಾಯಾರ್ಥ ಯೋಜನೆಗಳಿಗೆ ಕೈ ಜೋಡಿಸಿದ. ಇದರ ಪರಿಣಾಮ ಅವನ ಮಳಿಗೆಯ ಗೋಡೆಯ ತುಂಬ ಮೆಚ್ಚುಗೆ ಪತ್ರಗಳ ಸರಮಾಲೆ.
ಡೇರಿ ಕ್ವೀನ್‌ ಬರಿ ಒಂದು ವ್ಯಾಪಾರಿ ಸ್ಥಳವಾಗಿ ಉಳಿಯದೆ. ಅಲ್ಲಿನ ಸಮುದಾಯದ ಸಂವಹನ ಕೇಂದ್ರವಾಗಿ ಹೋಯಿತು. ಅಲ್ಲಿ ಎಲ್ಲ ನಾಗರೀಕರಿಗೂ ಅವನು ಹೆಸರು ಹಿಡಿದು ಕರೆಯುವಷ್ಟು ಸುಪರಿಚಿತ. ಅವರೆಲ್ಲರೂ ಅವನಿಗೂ ಚಿರಪರಿಚಿತರು.
ಇತ್ತೀಚೆಗೆ ಅವನಿಂದ ಸಾವಿರ ಡಾಲರಿನ ಚೆಕ್‌ ಪಡೆದ ಟ್ರಾಸಿ ಕಣ್ಣುತುಂಬಿ ಹೇಳದಳು, " ನನಗೆ ಗೊತ್ತು . ಸಹಾಯಾರ್ಥ ಸಂಜೆಯ ಕಾರ್ಯ ಕ್ರಮದಲ್ಲಿ ಇಷ್ಟೊಂದು ಮೊತ್ತದ ಹಣ ಸಂಗ್ರಹವಾಗಿಲ್ಲ. ಇದರಲ್ಲಿ ಹಮೀದನ  ವೈಯುಕ್ತಿಕ ಕೊಡುಗೆಯೂ ಸೇರಿದೆ"
ರೀಡಿಂಗ ಪಟ್ಟಣದ ನಾಗರೀಕರಿಗೆಲ್ಲ ಹಮೀದನ ಡೇರಿಕ್ವೀನ್ ಎಂದರೆ ಇನ್ನೊಂದು ಮನೆ ಇದ್ದಂತೆ. ಅಪಾರ ಅಭಿಮಾನ. ಅಲ್ಲಿನ ವರಿಗೆ ಅವನೆಂದರೆ ಅತೀವ ಹೆಮ್ಮೆ.
ಹಮೀದನೂ ಅಷ್ಟೆ ಸಂತೃಪ್ತ. ಎಲ್ಲರ ಏಳಿಗೆಗೆ ಶ್ರಮಿಸಿ ಅವರೊಳಗೆ ಒಂದಾಗಿರುವುದರಿಂದ  ಅವನ ಬಾಳು ತಂಪಾಗಿದೆ.  ಸಾಕಷ್ಡು ಆದಾಯ, ಚೊಕ್ಕದಾದ ಮನೆ ,ಮೆಚ್ಚಿನ ಹೆಂಡತಿ ಮುದ್ದಾದ ಎರಡು ಮಕ್ಕಳು ಬಿಲಾಲ್ಜೈನಾಬ್‌  ಮತ್ತು ನೂರಾರು ಆತ್ಮೀಯರು ಇರುವ ಸುಖಿ ಜೀವನ ಅವನದು. ಇದರ ಜೊತೆಗ ಅಲ್ಲಿನ ಎಲ್ಲರ ಪ್ರೀತಿ ಅಭಿಮಾನ. ನನಗೆ ಇಷ್ಟೆಲ್ಲ ಕೊಟ್ಟಿರುವ ಈ ಪಟ್ಟಣದ ಜನಸಮುದಾಯದ ಪ್ರೀತಿಗೆ ಪ್ರತಿಯಾಗಿ  ನಾನು  ಏನು ಕೊಡುಗೆ ಕೊಟ್ಟರೂ ಕಡಿಮೆ, ಎನ್ನುತ್ತಾನೆ ನಲವತ್ತರ ಹರೆಯದ ಹಮೀದ್‌ಚೌದರಿ
ವಲಸೆ ಬಂದ ದೇಶದ ಸಮಸ್ಕೃತಿಗೆ ಒಗ್ಗಿಕೊಳ್ಳದ, ನೀರಿನಲ್ಲಿನ ಎಣ್ಣೆಯಂತೆ ಬೇರೆಯಾಗಿರುವ ವಲಸಿಗರಿಗೆ ಇವನೊಂದು ಉತ್ತಮ ಮಾದರಿ
(ಅಮೇರಿಕಾ ಪತ್ರಿಕೆಯೊಂದರಿಂದ ಎಳೆ ಪಡೆದಿದೆ )

.





Friday, November 23, 2012

ಅಮೇರಿಕಾದ ಅನುಭವ-೧



                            ಪ್ರದಾನ
      ಅಂದು ಬೆಳಗ್ಗೆ  ನಾರ್ಥ ಬ್ರನ್ಸವಿಕ್‌  ಲೈಬ್ರರಿಗೆ   ಯಥಾರೀತಿ ಗೆ ಹೊರಟಿದ್ದೆ. ಹಾದಿಯಲ್ಲಿ  ದೊಡ್ಡ ಅಕ್ಷರದ ಬ್ಯಾನರ್‌ಕಾಣಿಸಿತು. ಬಹುಶಃ ಗರಾಜ ಸೇಲ್‌ಇರಬಹುದು ಎಂದುಕೊಂಡೆ. ಇಲ್ಲಿ ಕೊಳ್ಳುಬಾಕ ಸಂಸ್ಕೃತಿಯ ಪರಿಣಾಮವಾಗಿ ಸಂಗ್ರಹವಾದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಲಾರದೆ ಗರಾಜ ಸೇಲು, ಯಾರ್ಡ ಸೇಲು ಎಂದು  ಬೇಸಿಗೆಯ ಶನಿವಾರ ಭಾನುವಾರ ಕಾಸಿಗೆ ಎರಡು ಕೊಸರಿಗೆ ಒಂದು ಕೊಟ್ಟು ಕೈತೊಳೆದುಕೊಳ್ಳುವುದು  ಸಾಮಾನ್ಯ. ಆದರೆ ಹತ್ತಿರ  ಹೋಗಿ ನೋಡಿದಾಗ ಗೊತ್ತಾಯಿತು ಅಲ್ಲಿ ನಡೆಯುತ್ತಿದ್ದುದು  ಮಾರಾಟವಲ್ಲ.  ಅಲ್ಲಿ ದೊಡ್ಡ ಅಕ್ಷರದಲ್ಲಿ ಬರೆದಿದ್ದರು  "Give Away"   "ಅಗತ್ಯವಿರುವ ಮನೆಗಳಿಗೆ ಉಚಿತವಾಗಿ  ಕೊಂಡೊಯ್ಯಿರಿ,"
 ಅಷ್ಟೆ ಅಲ್ಲ ಹತ್ತಿರ ಹೋದಾಗ ಗೊತ್ತಾಯಿತು ಅದು  ಒಂದು ಅಭಿಯಾನ ಎಂದು. ಅಲ್ಲಿ  ಹಾಕಿದ ಮೇಜುಗಳ ಮುಂದೆ ಮೂವರು ಕುಳಿತಿದ್ದರು. ಅವರು ಒಂದು ಕರಪತ್ರ, ಅವರ ವಿಜಿಟಿಂಗ್‌ಕಾರ್ಟು ಜೊತೆಗೆ ಒಂದು ಪೆನ್‌.ನೀಡಿದರು. ನಂತರ ಅಲ್ಲೆ ಇದ್ದ ಪುಸ್ತಕದಲ್ಲಿ ಹೆಸರು ವಿಳಾಸ ಬರೆಯಲು ವಿನಂತಿಸಿದರು.ಅಲ್ಲಿರುವ ವಸ್ತುಗಳಲ್ಲಿ  ಮನೆಗೆ ಯಾವುದು ಅಗತ್ಯವಿದೆಯೋ ಅದನ್ನು ಕೊಂಡೊಯ್ಯುವಂತೆ ವಿನಂತಿಸಿದರು. ಜತೆಗೆ ಅಗತ್ಯವಿರುವ ದೊಡ್ಡ ಪ್ಲಾಸ್ಟಿಕ್‌ಚೀಲವನ್ನು ನೀಡಿದರು. ನನಗೆ ತುಸು ಕಕಮಕವಾಯಿತು. ಅದು  ಬಿ.ಸಿ.ಸಿ ಯವರ ಸೇವಾ ಕೆಲಸ. ಅಂದರೆ "ಬ್ರನ್ಸವಿಕ್‌ನ ಚರ್ಚ ಫಾರ್ ಕ್ರಿಸ್ತ " ಅವರ ಕಾರ್ಯಕ್ರಮ.
 ದೇವರ ಕೆಲಸ ಎಂದರೆ ನಾವೆಲ್ಲ ದಾನ, ಧರ್ಮ, ದಕ್ಷಿಣೆ, ಕಾಣಿಕೆ ಗಳದೆ ದರ್ಬಾರು.ಭಕ್ತರು ಕೈಲಾದಷ್ಟನ್ನು ಕೊಟ್ಟು ಕೃತಾರ್ಥರಾಗವರು. ಆದರೆ ಇಲ್ಲಿ ಅವರೆ ಕೊಡುತಿದ್ದಾರೆ.ಇದು ತುಸು ವಿಚಿತ್ರವಾಗಿ ಕಂಡಿತು.ಅಲ್ಲಿ ನೋಡಿದಾಗ ಮಕ್ಕಳ ಆಟದ ಸಾಮಾನು,ಪುಸ್ತಕಗಳು, ಬಟ್ಟೆ ಬರೆ, ಕೊಡುಗೆ, ಅಲಂಕಾರಿಕ ಸಾಮಗ್ರಿ, ವಿಸಿಡಿ,ಪೀಠೋಪಕರಣಗಳು ಪ್ರಿಂಟರ್‌, ಟಿವಿ ,ಇತರೆ  ಎಲೆಕ್ಟ್ರಾನಿಕ್‌ವಸ್ತುಗಳನ್ನು ಮೇಜಿನ ಮೇಲೆ ಒಪ್ಪವಾಗಿ ಜೋಡಿಸಿರುವುರು.  ಇದು ಬಡ ಬಗ್ಗರಿಗೆ ಇರುವ ಕಾರ್ಯ ಕ್ರಮ ಎಂದುಕೊಂಡು ನಾನು ಅಲ್ಲಿಂದ ಕಾಲು ಕಿತ್ತೆ.   ಒಂದು ಗಂಟೆಯನಂತರ ವಾಪಸ್ಸು ಬರುವಾಗ ನೋಡಿದರೆ ಜನ ಕಿಕ್ಕಿರಿದಿದ್ದಾರೆ, ಅಲ್ಲಿ ಕಾರುಗಳು ಸಾಲು ಗಟ್ಟಿ  ನಿಂತಿವೆ.ಹರೆಯದವರು, ಹೆಂಗಸರು ಮಕ್ಕಳು ವಯಸ್ಸಾದವರು ಅಮೇರಿಕನರು, ಆಫ್ರಿಕನರು , ಸ್ಪಾನಿಷ್ ಜನ,   ದೇಸಿಯರು ಎಲ್ಲ ಸೇರಿದ್ದಾರೆ. ಅಲ್ಲಿಂದ ಇಲ್ಲಿಗೆ ಓಡಾಡುತ್ತಾ  ಆಯ್ದು ಕೊಳ್ಳುತಿದ್ದಾರೆ.ಅವರಗೆ ಸಹಾಯ ಮಾಡಲು ಆರೆಂಟು ಜನ ಸ್ವಯಂ ಸೇವಕರು ನಗುನಗುತ್ತಾ ಬಯಸಿದ ವಸ್ತುಗಳನ್ನು ಕಾರಿನೊಳಗೆ ಸಾಗಿಸಲು ಸಹಾಯ ಮಾಡುತಿದ್ದಾರೆ. ಅಲ್ಲಿದ್ದ  ಸ್ವಯಂ ಸೇವಕಿ ಶ್ರೀಮತಿ ಕ್ಯಾರಿನ್‌ ಅವರನ್ನು ಮಾತನಾಡಿಸಿದಾಗ ಗೊತ್ತಾಯಿತು. ಅದು ಬೇಡದ , ಹಳೆಯ ವಸ್ತುಗಳನ್ನು ದಾನ ಮಾಡುವ ಮೇಳವಲ್ಲ. ಸಮುದಾಯದಲ್ಲಿನ ಮನೆಗಳವರು ತಮ್ಮಲ್ಲಿನ ಹೆಚ್ಚಿನ ವಸ್ತುಗಳನ್ನು ಅವುಗಳ ಅಗತ್ಯವಿರುವವರೊಂದಿಗೆ ಹಂಚಿಕೊಳ್ಳುವ ಸೇವಾ ಕಾರ್ಯ. ಸರಳ ಜೀವನನ ಆ ಎಲ್ಲರ ಗುರಿ. ತಮ್ಮ ಸುತ್ತಮುತ್ತ ಇರುವರೆಲ್ಲ ನೆಮ್ಮದಿಯಾಗಿರಲು ತಮ್ಮ ಕೊಡುಗೆ ನೀಡಲು ಅವರು ಸದಾ ಸಿದ್ದ. ಅದರಂದ ಅವರು ಗೃಹ ಬಳಕೆಗೆ ಅತ್ಯವಾದ ಹೆಚ್ಚುವರಿ ವಸ್ತುಗಳನ್ನು ಮಕ್ಕಳ ಆಟಿಎ, ಪುಸ್ತಕ , ಡಿವಿಡಿ , ವಿಸಿಡಗಳನ್ನು ಸಂಗ್ರಹಿಸಿ ಈ ನೀಡುವ ಕಾರ್ಯ ಕ್ರಮ ಹಮ್ಮಕೊಂಡಿದ್ದರು. ಮೊದಲೆ ಫ್ಯಾಷನ್‌ಯುಗ. ಅತ್ಯಾಧುನಿಕವಾದುದು ಪೇಟೆಯಲ್ಲಿ ಬಂದ ತಕ್ಷಣ ಕೊಳ್ಳುವ ತನಕ. ಅವು ಬಂದ ಮೇಲೆ ಮೊದಲು ಇದ್ದದು ಸುಸ್ಥಿತಿಯಲ್ಲಿ ಇದ್ದರೂ  ಬೇಡ. ಅಂಥಹ ಅನೇಕ  ಕುರ್ಚಿ, ಮೇಜು, ಫೋರ್ಕ್,  ಚಮಚ ಬಟ್ಟಲು , ಪ್ಲೇಟು , ಮೊದಲಾದ ಗೈಹೋಪಯೋಗಿ ಸಾಮಾನುಗಳು ಅಲಂಕಾರಿಕ ವಸ್ತುಗಳು . ಪುಸ್ತಕ. ವಿಸಿಡಿ . ಡಿವಿಡಿ ಇದ್ದವು. ಅಲ್ಲಿ ಜಾತಿ ಮತ ಬಣ್ಣದ  ಬೇಧ ಇಲ್ಲ. ಯಾರಾದರೂ ಸರಿ ಅಲ್ಲಿಗೆ ಹೋಗಿ ಪಡೆಯಬಹುದು. ನಗು ನಗುತ್ತಾ ಕೊಟ್ಟು ನಮಸ್ಕಾರ ಹೇಳುವರು.ಮಾಲ್‌ಗೆ  ಹೋಗಿ ಸಾಮಾನು ತಂದಂತೆ. ಆದರೆ ಒಂದೆ ವ್ಯತ್ಯಾಸ. ಇಲ್ಲಿ ಬಿಲ್ಲು ಇಲ್ಲ . ಹಣ ಪಾವತಿ ಅಗತ್ಯವೂ ಇಲ್ಲ.  ಎಲ್ಲ ಸಾಮಗ್ರಿಗಳು ಇವೆ ಎಂದಲ್ಲ. ಬಹುತೇಕ ಇದ್ದವು.   ಅವೂ ಸುಸ್ಥಿತಿಯಲ್ಲಿಯೆ. ಕೆಲವು ಸಿದ್ಧ ಹಾರಪದಾರ್ಥಗಳು ಅಂದರೆ ಬೇಗ ಕೆಡಲಾರದವೂ ಕೂಡ ಅಲ್ಲಿ ಸಾಲಾಗಿಟ್ಟಿದ್ದರು. ಕೋಕ್‌, ಕೆಚಪ್‌, ಜ್ಯೂಸ್‌ಬಾಟಲಿಗಳು ಕ್ಯಾನುಗಳು ಇದ್ದವು.
ಅಲ್ಲಿನ ನಿರ್ವಾಹಕಿ ಶ್ರೀಮತಿ ಕ್ಯಾರಿನ್‌ರನ್ನು ಕೇಳಿದೆ. ಇದು ಹೇಗೆ ಸಾಧ್ಯ? ಕೆಲವು ಹೊಚ್ಚ ಹೊದವೂ  ಇವೆಯಲ್ಲ? ಎಂದು.
 ಅದಕ್ಕೆ ಅವರು ನೀಡಿದ ಉತ್ತರ ಸಮಾಧಾನ ತಂದಿತು. ಅಲ್ಲಿ ಕ್ರಿಸ್‌ಮಸ್‌ಗೆ, ಹುಟ್ಟುಹಬ್ಬಕ್ಕೆ ಹಾಗೂ ಅನೇಕ ಸಂಭ್ರಮಾಚರಣೆ  ಸಮಯದಲ್ಲಿ  ಕೊಡುಗೆ ನೀಡುವುದು ಸಾಮಾನ್ಯ. ಅನೇಕ ಸಲ ಇರುವ ವಸ್ತುಗಳೆ ಮೂರು ನಾಲಕ್ಕು ಸೆಟ್‌ ಬರುವವು.ಅವನ್ನು ಹಾಗೆ ಇಟ್ಟು ಕೊಳ್ಳುವುದಕ್ಕಿಂತ ಅದರ ಅಗತ್ಯವಿರುವವರಿಗೆ ಕೊಟ್ಟರೆ ತೃಪ್ತಿಯಾಗುವುದು. ಅಲ್ಲಿನ ಅನೇಕ ವಸ್ತುಗಳು ಆ ಮನೋಭಾವದವರ ಕೊಡುಗೆಯ ಫಲ..
ಅನೇಕರಿಗೆ ಸರಳ ಜೀವನದ ಹಂಬಲ. ಹೆಚ್ಚುವರಿಯಾಗಿ ಕಾಣಿಕೆಯಾಗಿ ಬಂದವನ್ನು ಬೇಡ ಎಂದರೆ ಕೊಡಲು ಬಂದವರ  ಮನಸ್ಸಿಗೆ ನೋವು.   ಸರಿ ಹಾಗೆ ಬಂದುದನ್ನು ಹೀಗೆ ವಿನಿಯೋಗ ಮಾಡಿದರೆ ಇಬ್ಬರಿಗೂ ನೆಮ್ಮದಿ.
ಈ  ಕೊಂಡೊಯ್ಯುವ ಕೆಲಸ ನಾಲಕ್ಕು ಗಂಟೆಯ ವರೆಗೆ ನೆಡೆದೆ ಇತ್ತು.  ಸಂಜೆ ಅವರನ್ನು ವಿಚಾರಿಸಿದೆ. ಅವರ ಪ್ರಕಾರ ಯೇಸುವಿನಂತೆ ಮಾನವ ಜನಾಂಗವನ್ನು ಪ್ರಿತಿಸುವುದು, ಅವರ ಸೇವೆ ಮಾಡುವುದು ಮತ್ತು ಅವರಿಗೆ ನೆಮ್ಮದಿ ಕೊಡುವುದೆ ಅತಿ ಮುಖ್ಯ.  ಉಳ್ಳವರು ಅಗತ್ಯವಿರುವವಿರಿಗೆ ನೆರವು ನೀಡುವುದೆ ಧರ್ಮ.
ಅದಕ್ಕನುಗುಣವಾಗಿ ಅವರು ಕಾರ್ಯಕ್ರಮಗಳನ್ನು ರೂಪಿಸುವರು.ಅದರಲ್ಲಿ ಕಾರು ವಾಷಿಂಗ್‌ಕಾರ್ಯ ಕ್ರಮವೂ ಇದೆ. ಅವರು ನೀರಿನ, ವ್ಯಾಕ್ಯೂಮಿನ  ಮತ್ತು ಸಾಬೂನಿನ ವ್ಯವಸ್ಥೆ ಮಾಡುವರು. ಯಾರು ಬೇಕಾದರೂ  ಸ್ವಯಂ ಸೇವಕರಾಗಿ ಬಂದವರ  ಕಾರುಗಳ ಶುಚಿ ಮಾಡಬಹುದು.. ಅದು ಸೇವೆ. ಕಾರಿನ ಮಾಲಕರು ಸ್ವಾಭಾವಿಕವಾಗಿ ಸ್ವಂತ ಖುಷಿಯಿಂದ  ಬರುವರು.. ಹೊರಗೆ ಕಾರು ತೊಳೆಸಿದರೆ. ಕನಿಷ್ಟ ೧೫  ಡಾಲರು ಶುಲ್ಕ ಕೊಡುವರು. ಇಲ್ಲಿ ಧರ್ಮದ ಕೆಲಸ. ಸ್ವಾಬಾವಿಕವಾಗಿಯೆ ಎಲ್ಲರೂ ಧಾರಾಳವಾಗಿ ಹಣದ ಕೊಡುಗೆ ನೀಡುವರು. ಅಲ್ಲಿ ನನಗೆ ಬಹು ಕಂಡ ಮೋಜಿನ ಸಂಗತಿ  ಎಂದರೆ ಕೆಲವರು ಮಕ್ಕಳ ಸಮೇತ ಕಾರಿನಲ್ಲಿ  ಬಂದರು. ಅಲ್ಲಿ  ಅವರ ಮಕ್ಕಳೆ ಕುಣಿದಾಡುತ್ತಾ  ಕಾರು ತೊಳೆದರು. ನಂತರ ಅಲ್ಲಿರುವ ಕಾಣಿಕೆ ಡಬ್ಬಿಯಲ್ಲಿ ಕಾಸು ಹಾಕಿ ಖುಷಿಯಿಂದ ಹೋದರು.   ಮನೆಯಲ್ಲಿ ಮಾಡು ಎಂದರೆ ಗೊಣಗುವ ಮಕ್ಕಜಳು ಇಲ್ಲಿ ಇತರರನ್ನು ನೋಡಿ ಆಡಾಡುತ್ತಾ ಕಾಯಕದ ಗೌರವ ಕಲಿಯುವರು. ಮಕ್ಕಳು ಮಾಡುವರಲ್ಲ ಎಂಬ ನೆಮ್ಮದಿ  ತಾಯಿತಂದೆಯರಿಗೆ.ಸಂಗ್ರಹವಾದ  ಹಣವನ್ನು ಈ ಬಾರಿ ಜೋಪ್ಲಿನ್‌ನಲ್ಲಿನ ಬಿರುಗಾಳಿ ಸಂತ್ರಸ್ತರ ಸಹಾಯಾರ್ಥ ಬಳಸಲಾಗುವುದು  ಎಂದು ತಿಳಿಯಿತು
ಅವರ ಇನ್ನಂದು ಜನಪ್ರಿಯ ಕಾರ್ಯ ಕ್ರಮ ಬಾನಿನ ಅಡಿಯಲ್ಲಿ ಬಯಾಸ್ಕೋಪು. ಅಂದರೆ ಬೇಸಿಗೆಯಲ್ಲಿ  ಇಲ್ಲಿನ ಜನ ಸದಾ ಹೊರಗೆ ಇರಲು ಬಯಸುವರು. ಅದಕ್ಕಾಗಿ ಬಯಲಲ್ಲಿ ಕುಟುಂಬ ಸಮೇತ ಹೆಂಗಸರು ಮಕ್ಕಳು ನೋಡಬಹುದಾದ ಸಿನೇಮಾ ಪ್ರದರ್ಶಿಸುವರು. ಒಬ್ಬರಿಗೆ ಒಂದು ಡಾಲರು. ಅದರ ಜೊತೆ ಪ್ರತಿಯೊಬ್ಬರಿಗೂ ಪಾಪ್‌ಕಾರ್ನ್‌ಉಚಿತ.  ಮಜಾ ಎಂದರೆ ನಮ್ಮ ಭಾರತದಲ್ಲಿನ  ಬಯಲಾಟದಂತೆ. ಅಲ್ಲಿ ಕೂಡಾ  ಆಸನ ವ್ಯವಸ್ಥೆ ಇಲ್ಲ. ಬೇಕಾದರೆ ನೋಡುಗರು ಕುರ್ಚಿ ಬೆಂಚು ಒಯ್ಯ ಬಹುದು. ಇಲ್ಲವೆ ಕಾರಿನಲ್ಲೆ ಕುಳಿತು ಸಿನೆಮಾ ನೋಡಬಹುದು.ಸ್ವಟರ್ ಜಾಕೀಟು ಬೇಕಾದರೆ ರಗ್ಗು , ಬ್ಲಾಂಕೆಟ್ ತಂದರೂ ಸರಿ.   ಅದು ಅವರವರ ಅನುಕೂಲ. ಒಟ್ಟಿನಲ್ಲಿ ಆರಾಮಾಗಿ ಎಲ್ಲರ ಜತೆ ಕಲೆತು ಮಾತನಾಡುತ್ತಾ ನೋಡಬಹುದು.ನನಗೆ ಆಗ ನಲವತ್ತು ವರ್ಷಗಳ ಹಿಂದೆ ಬೆಂಗಳೂರಿನ ಬನ್ನೇರು ಘಟ್ಟದಲ್ಲಿನ ಡ್ರೈವ್‌ಇನ್‌ಸಿನಿಮಾದ ನೆನಪಾಯಿತು.,ಅಲ್ಲದೆ  ಮೂವತ್ತೈದು ವರ್ಷದ ಹಿಂದೆ ಕರ್ನಾಟಕದಲ್ಲೆ ಮೊದಲ ಬಾರಿಗೆ ಟಿವಿ ಬಂದಾಗ ಹೈದ್ರಾಬಾದಿನಿಂದ  ಪ್ರಸಾರ ವಾಗುತಿದ್ದ ಕನ್ನಡ ಕಾರ್ಯ ಕ್ರಮಗಳನ್ನು ನೋಡಲು ಅನುಕೂಲ ವಾಗುವಂತೆ ಗುಲ್ಬರ್ಗ ಜಿಲ್ಲೆ ಯ ಹಳ್ಳಿಗಳಲ್ಲಿ  ಪ್ರತಿ ಪಂಚಾಯತ್‌ಬೋರ್ಡುಗೆ ಒಂದು ಕಪ್ಪು ಬಿಳುಪು ಟಿವಿ ಕೊಡಲಾಗಿತ್ತು. .ಆಗ ನಾವು ಕೆಂಪುಬಾಳೆಹಣ್ಣಿಗೆ ಪ್ರಸಿದ್ದವಾದ ಕಮಲಾಪುರದಲ್ಲಿದ್ದವು. ಆ ಊರಲ್ಲಿ ಟಿವಿಯನ್ನು ಪ್ರತಿ ಭಾನುವಾರ ರಾತ್ರಿ  ಶಾಲೆಯ ಮುಂದಿನ ಬಯಲಲ್ಲಿ ಇಡಲಾಗಿತಿತ್ತು. ಊರಿನ ಜನರೆಲ್ಲ  ಅಂದು ಅದರಲ್ಲಿ ಬರುವ ಕನ್ನಡ ಸಿನೆಮಾ ನೋಡಲು ಬರುತ್ತಿದ್ದರು. ಆಗಲೂ ಸಹಾ ಇಲ್ಲಿಯಂತೆಯ  ಜನ ತಮ್ಮ ತಮ್ಮ ಕುರ್ಚಿ ತಾವೆ ತಂದು ಹಾಕಿಕೊಂಡು  ಟಿವಿಯಲ್ಲಿ  ಸಿನೇಮಾ ನೋಡಿದ ನಂತರ ಮನೆಗೆ ತೆಗೆದುಕೊಂಡು ಹೋಗುತಿದ್ದರು.
 ಹವಾ ನಿಯಂತ್ರಿತ ಥೇಟರಲ್ಲಿ ಕೂತು ನೋಡುವ ಆಧುನಿಕ ಜನ ಬಯಲಲ್ಲಿ ಜಮಾಯಿಸಿರುವುದು ಕಂಡು ನನಗೆ ಅಚ್ಚರಿಯಾಯಿತು.ಈಗ ಐವತ್ತು ವರ್ಷಗಳ ಹಿಂದೆ ನಮ್ಮ ಹಳ್ಳಿಗಳಲ್ಲೂ ವಾರ್ತಾ ಮತ್ತು ಪ್ರಚಾರ ಇಲಾಖೆಯವರು ಸುದ್ಧಿ ಚಿತ್ರಗಳನ್ನು ಪ್ರದರ್ಶಿಸಿದಾಗ ನೋಡಲು ಹಳ್ಳಿಗರಿಗಿದ್ದ ಹುಮ್ಮಸ್ಸು  ಮರುಕಳಿಸಿದೆ ಎನಿಸಿತು.
ಈ ಎಲ್ಲ ಕಾರ್ಯಕ್ರಮಗಳ ಉದ್ದೇಶ ಜನ ದ್ವೀಪಗಳಂತಾಗದೆ ಎಲ್ಲರೊಡನೆ ಬೆರೆತು ಒಂದಾಗ ಬೇಕೆಂದು
ನನಗೆ ಖುಷಿಯಾದ ಮತ್ತೊಂದು ಸಂಗತಿ ಎಂದರೆ ಅಲ್ಲಿ ಚರ್ಚಿಗೆ ಬನ್ನಿ ಎನ್ನುವಮಾತಿಲ್ಲ. ಧರ್ಮದ ಬಗ್ಗೆ ಪ್ರವಚನ ಇಲ್ಲ. ಎದ್ದು ಕಾಣುವುದು ಜನರನ್ನು ನೆಮ್ಮದಿಯಿಂದ ಇಡಬೇಕೆನ್ನಿಸುವ ಅವರ ಕಳಕಳಿ ಮಾತ್ರ .
ಅವರ ಪ್ರಕಾರ " ಬಡತನ , ನಿರುದ್ಯೋಗ, ಶಿಕ್ಷಣ ವ್ಯವಸ್ಥೆ, ರಾಜಕೀಯ, ತೆರಿಗೆ , ಅಂತರ್‌ಜಾಲಗಳು ಇವು ಯಾವೂ ನಮ್ಮ  ಸಮಸ್ಯೆಗಳಿಗೆ , ನೋವಿಗೂ ಕಾರಣವಲ್ಲ. ನಮ್ಮೆಲ್ಲರ ದುಖಃಕ್ಕೆ ನೋವಿಗೆ ಕಾರಣ ವಿಘಟಿತವಾಗುತ್ತಿರುವ  ಕುಟುಂಬ ವ್ಯವಸ್ಥೆಮುರಿದು ಬಿದ್ದ ಸಂಸಾರ  ಮತ್ತು ಕಾಣೆಯಾಗುತ್ತಿರುವ ಸಾಮಾಜಿಕ ಮೌಲ್ಯಗಳು. .ಜನರು ಈಗ ಹಣ , ವೃತ್ತಿ, ಸುಖ , ವೈಬೋಗಗಳನ್ನೆ ಜೀವನದ ಗುರಿಯಾಗಿಸಕೊಂಡಿರುವರು . ಪರಿಣಾಮ ಒಂದು ಹಂತದವರೆಗೆ ಎಲ್ಲ ಚಂದ . ನಂತರ ಪ್ರತಿಭಟಿಸುವ ಮಕ್ಕಳು, ಉದ್ದೀಪನ ಮದ್ದುಗಳ ದಾಸರಾದ ಯುವಕರು,ನಿರಾಸೆಯ ಮಡುವಿನಲ್ಲಿ ತಾಯಿತಂದೆಯರು ಮತ್ತು ವಿಷಾದಲ್ಲಿ ಮುಳುಗಿ ಏಕಾಂಗಿಗಾಳಗಿರುವ ವೃದ್ಧರು  ಸಮಾಜದಲ್ಲಿ ಹೆಚ್ಚಾಗಿದ್ದಾರೆ. ಅದಕ್ಕಾಗಿ ಪೂರ್ಣ ಸಮುದಾಯವನ್ನು ಒಟ್ಟಿಗೆ ತರುವ ಪ್ರಯತ್ನ ನಮ್ಮ  ಆಶಯ" .
ಅವರು ಏಸುವಿನ ಹೆಸರಲ್ಲಿ  ಮಾಡುವ ಈ ಕೆಲಸವನ್ನು  ಬೇರೆ ಯಾವುದೆ ದೇವರ ಹೆಸರಲ್ಲಿ   ಮಾಡಿದರೂ  ಈಗಿನ ಸಮುದಾಯ ಎದುರಿಸುತ್ತಿರುವ  ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಬಹುದು ಎಂದು .ಎನಿಸಿತು, ನಾವೂ  ಆ ಕಾರ್ಯ ಕ್ರಮದಲ್ಲಿ "Home medicine ,  Redaers digest collection ಮತ್ತು ಅಲ್ಲಿ ಒಂದೆರಡು ಒಳ್ಳೆಯ ಮಕ್ಕಳ ಪುಸ್ತಕಗಳನ್ನು ತೆಗೆದುಕಂಡು ಬರುವಾಗ ವಂದನೆ ಸಲ್ಲಿಸಲು ಹೊಇರಟರೆ ಅವರೆ  ಮುಂದಾಗಿ ಅಭಿನಂದನೆ ತಿಳಿಸಿದರು.


Monday, November 19, 2012

ಸಹಜೀವನ


                                 
ಹಳ್ಳಿ ಎಂದರೆ  ಎಂದರೆ ಸಹಬಾಳ್ವೆಗೆ ಇನ್ನೊಂದು ಹೆಸರಾಗಿತ್ತು. ಜನ ಮತ್ತು ದನ ಮಾತ್ರವಲ್ಲ ಕ್ರಿಮಿಕೀಟಗಳುಧಾರಾಳವಾಗಿ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದವು. ಇಲಿ ಹೆಗ್ಗ ಣ, ನೊಣ ,ತಗಣಿ .ಸೊಳ್ಳೆ, ಉಣ್ಣೆ ಮತ್ತು ಕೂರಿಳ ಕಾಟ ಹೇಳ ತೀರದು.. ಆದರೆ ಒಂದು ಸಲ ತಗಣಿಗಳೆ  ನಮ್ಮ ಮನೆ ಉಳಿಸಿದ್ದು ಮಾತ್ರ  ನನಗೆ ಚೆನ್ನಾಗಿ  ನೆನಪಿದೆ. ಅಂದು ರಾತ್ರಿ ಕಳ್ಳರು ಬಂದು ನಮ್ಮ ಮನೆಯ ಗೋಡೆಯಲ್ಲಿನ  ಕಿಟಕಿಯ ಸರಳನ್ನು ಬಗ್ಗಿಸಿ ಮುರಿದಿರುವರು. ಇನ್ನೇನು ಒಳಗೆ  ಇಳಿಯಬೇಕು. ನಮ್ಮಅಮ್ಮ ಎದ್ದು  ಕೈ ನಲ್ಲಿ  ಚಿಮಣೀ  ಬುಡ್ಡಿ  ಹಿಡಿ ದು ತಗಣಿ ಕೊಲ್ಲುವ  ಕಾಯಕದಲ್ಲಿರುವುದು ಕಾಣಿಸಿದೆ. ಕಂಬದಿಂದ ಕಂಬಕ್ಕೆ ಗೋಡೆಯಿಂದ  ಗೋ ಡೆಗೆ ಓಡಾಡುತ್ತಾ ತಮ್ಮಕೆಲಸ ಮುಂದುವರಿಸಿದ್ದಾರೆ.  ಕಳ್ಳರು ಕಿಟಕಿಯಿಂದ ಒಳಗೆ ಧುಮುಕಿದ್ದರೆ   ಆ ಮಾತೆ ಬೇರೆ  ಇತ್ತು. ಹಲ್ಲೆ ಮಾಡಿ ಹೆದರಿಸಿ ಕಳ್ಳತನ ಮಾಡಬಹುದಾಗಿತ್ತು.  ಆದರೆ ಇನ್ನೂ ಮನೆಯೊಳಗೆ ಇಳಿದಿಲ್ಲ.  ಹಾಗಾಗಿ  ಧೈರ್ಯ  ಸಾಲದೆ  ಕಾಯುತ್ತಾ ಕುಳಿತಿರುವರು.. ಕೋಳಿ ಕೂಗುವ  ತನಕ ಅಮ್ಮ ದೆವ್ವದ ತರಹ ಒಂದು ಕೈನಲ್ಲಿ ದೀಪ ಹಿಡಿದು  ಮನೆ ತುಂಬ ಓಡಾಡುತ್ತಲೆ ಇದ್ದಾರೆ. ಕಳ್ಳರು  ಅಮ್ಮನಿಗೆ ಶಾಪ  ಹಾಕಿದರೋ,  ತಗಣಿಗೆ  ಶಾಪ  ಹಾಕಿದರೋ  ತಿಳಿಯದು.ಕಿಟಕಿಯ ಸರಳನ್ನು ಅಲ್ಲಿಯೆ ಬಿಟ್ಟು  ಪೆಂಟಿ ಕಿತ್ತಿದ್ದಾರೆ. ಬೆಳಗ್ಗೆ  ತಿಪ್ಪೆಗುಂಡಿಗೆ ಹೆಂಡಿಗಸ  ಹಾಕುವವರು ನಮ್ಮ  ಗೋಡೆಯ ಪಕ್ಕದ ಓಣಿಯಲ್ಲೆ ಹೋಗಬೇಕು.ಅವರು ನೋಡಿದರೆ ಮುರಿದ ಕಿಟಕಿ ಒಂದು  ಹಾರೆ ಮತ್ತು ಒಂದೆರಡು ಕಣಗ ಅಲ್ಲಿ ಬಿದ್ದಿವೆ.ಅವರು ಬಂದು ಹೇಳಿದಾಗಲೆ  ನಮಗೆ  ಗೊತ್ತಾಗಿದೆ.  ನಮ್ಮಮನೆ  ಕಿಟಕಿ  ಮುರಿದು ಕಳ್ಳತನಕ್ಕೆ ಪ್ರಯತ್ನವಾಗಿದೆ  ಎಂದು. ಅಂತೂ  ದೇವರು  ತಗಣಿ ರೂಪದಲ್ಲಿ ಬಂದು  ನಮ್ಮನ್ನು ಕಾಪಾಡಿದ. ಎಂದು ತುಪ್ಪದ ದೀಪ ಹಚ್ಚಿದರು. ಹಾಗೆಂದು ತಗಣಿಗೆ ಮಾತ್ರ ಕರುಣೆ ತೋರಿಸಲಿಲ್ಲ.
ತಗಣಿಗಳೆಲ್ಲ ಪ್ರಖ್ಯಾತವಾದವು  ರೈಲಿನಲ್ಲಿನ ತಗ ಣಿಗಳು. ಒಂದು ಸಲ ರೈಲುಪ್ರಯಾಣ  ಮಾಡಿದರೆ  ಮುಗಿಯಿತು.ಹೆದ್ದುಮ್ಮಿಯಂತಹ ತಗಣಿಗಳು ಮನೆಯಲ್ಲಿ. ಹಲವರ ರಕ್ತದ ರುಚಿ  ಕಂಡ ಅವು ಗಾತ್ರದಲ್ಲಿ ದೊಡ್ಡದಾಗಿರುತಿದ್ದವು. ತಗಣಿನಿವಾರಕ ಔಷಧಿಗಳು ಆಗ ಬಹಳ ವಿರಳ.  ತಗಣಿ ಎಣ್ಣೆ ಇದ್ದರೆ ಕುಡಿದು ಸಾಯುವ ಘಟನೆಗಳೆ ಕೇಳಿಬರುತಿದ್ದವು.ಮನೆಯ  ಜನರಿಗೆ ರೋಗ ಬಂದರೆ ದೇವರಿಟ್ಟಂತೆ ಆಗುವುದು ಎಂಬ ಜನ ತಗಣಿ ಕೊಲ್ಲುವ ಔಷಧಿ ತರುವರೆ. ಅದೂ ಹಾಳು ಪ ಟ್ಟಣದಂತಹ ಮನೆಗಳು.ಅದರಲ್ಲಿ ಕಿಕ್ಕಿರಿದು ತುರುಕಿದ ಸಾಮಾನುಗಳು.ಕಟ್ಟಿಗೆಯ ಕುರ್ಚಿ ಮಂಚ, ಮೇಜು, ಕಂಬ ತೊಲೆ ಅದರೊಂದಿಗೆ ಗೋಡೆಯಲ್ಲಿನ ಬಿರುಕುಗಳೂ ತಗಣಿಗಳ ವಾಸಸ್ಥಾನ. ಯಾವ ಗೋಡೆನೋಡಿದರೂ ಬಿಳಿಯ ಮಧ್ಯ ಕೆಂಪು ಸಾರಿಸಿದಂತೆ ಗುರುತು. ಅದು ನಿದ್ದೆಗಣ್ಣಲ್ಲಿ ಎದ್ದು ಕೈಗೆ ಸಿಕ್ಕ ತಗಣಿಯ  ಒರೆದಾಗಿನ ಫಲ ಅದು. ಆಗ ಇನ್ನೂ ಟಿಕ್‌ 20 ಯಂತಹ ಪರಿಣಾಮಕಾರಿ ರಸಾಯನಿಕಗಳು ಇರಲಿಲ್ಲ.
ನಗರದವರನ್ನು ನೋಡಿ ಸೊಳ್ಳೆ ಪರದೆ ಕಟ್ಟಿಕೊಂಡರೆ ಬೆಳಗಾದಾಗ ನೋಡಿದರೆ ಮೇಲಿನ ಮೂಲೆಯಲ್ಲಿ ಕುಪ್ಪೆ ಕುಪ್ಪೆ ತಗಣಿ.  ತಗಣಿ ಮನಯೊಡೆದ ಕಥೆ ಹೇಳಿ ನಮ್ಮವರು ನಗುತಿದ್ದರು ಹಳ್ಳಿಯ ಸಾಹುಕಾರರೊಬ್ಬರು ಪ್ಯಾಟೆಯ ಚಂದುಳ್ಳ ಹುಡುಗಿಯನ್ನು ಮದುವೆಯಾಗಿ ಹಳ್ಳಿಯ ತಮ್ಮ ಭವ್ಯವಾದ ಮನೆಗೆ ಕರೆತಂದರು. ಅವರ ಮಲಗುವ ಕೋಣೆಯಲ್ಲಿ ಚಪ್ಪರ ಗಾಲಿನಮಂಚ, ನಾಲಕ್ಕಾರು ಕುರ್ಚಿಗಳು ಜೊತೆಗೆರಡು ಮೇಜು ಅದರ ಮೇಲೆ ಮೆತ್ತನೆಯಲೇಪು.ಆಹ ಅರಮನೆ ಅಂದಕೊಂಡಳು ನಗರದ ನಾರಿ.ಪೆಟ್ರೊಮ್ಯಾಕ್ಸದೀಪ, ತಟ್ಟೆ ತಟ್ಟೆ ತಿಂಡಿ  ಹೂವು ಹಣ್ಣು ಸ್ವರ್ಗ ಭೂಮಿಗೆ ಇಳಿದು ಬಂದಿತ್ತು ರಾತ್ರಿಹಾಡು ಹಸೆ ಮುಗಿಸಿ ಒಳಗೆ ಕಳುಹಿಸದಾಗ ಶುರವಾಯಿತು ತಗಣಿಯ ಕಡಿತ.ರಾತ್ರಿಯೆಲ್ಲಾ ಸುಖದ ಅಮಲಿನಲ್ಲಿರಬೇಕಾದವರು ಮೈಎಲ್ಲಾ ಕೆಂಪಾಗಿಸಿಕೊಂಡು ನಿದ್ದೆ ಇಲ್ಲದೆ ತಗಣಿಯ ಬೇಟೆಯಲ್ಲಿ ಕಾಲ ಕಳೆದಿದ್ದರು. ಆ ಹುಡುಗಿ ಬೆಳಗಾದೊಡನೆ ತವರಿಗೆ ಹೊರಟವಳು ನಗರದಲ್ಲಿ ಮನೆ ಮಾಡಿದರೆ ಮಾತ್ರ ಬರುವೆ ಎಂದು ಹಟ ಹಿಡಿದಳು. ಅನಿವಾರ್ಯವಾಗಿ  ಅಲ್ಲೆ ಹೋಗಿ ಇರಬೇಕಾಯಿತು ಹೊಸ ದಂಪತಿಗಳು.
 ಇನ್ನು ಚಿಕ್ಕವರು ದೊಡ್ಡವರು ಎಂಬ ಭೇದ ಇಲ್ಲದೆ ಎಲ್ಲ ಹೆಂಗಸರ  ತಲೆಯಲ್ಲೂ ಮನೆ ಮಾಡಿರುವ ಕೀಟ ಎಂದರೆ  ಹೇನು. ಎಲ್ಲರೂ ತಲೆ ಪರಪರ ಕೆರೆಯುವವರೆ. ಹೆಣ್ಣು ಹುಡುಗೆಯರಿಗೆ ಮಂಡಿ  ಮಟ್ಟ  ಕೂದಲು. ಅದರ  ಆರೈಕೆಗೆ ಹೊತ್ತು ಸಾಲದು.  ಅನುಕೂಲವಿದ್ದವರು ವಾರಕೊಮ್ಮೆ ಎಣ್ಣೆ  ನೀರು  ಹಾಕಿಕೊಂಡು  ತಲೆ ಸ್ನಾನ  ಮಾಡುವರು.ನಂತರ ಬಿಸಿಲಲ್ಲಿ  ತಲೆ ಒಣಗಿಸಿ ಕೊಂಡು ಜಾಕಣಿಯಲ್ಲಿ ಕೆಂಡಹಾಕಿ ಅದರಲ್ಲಿ ಹಾಲು ಮಡ್ಡಿ ಸಾಂಬ್ರಾಣಿ  ಹಾಕಿದರೆ ದಟ್ಟವಾದ ಸುವಾಸನೆಯ ಹೊಗೆ ಬರುವುದು.ಅದರ ಮೇಲೆ  ಕವಚಿದ ದೊಡ್ಡ ಬಿದಿರ ಬುಟ್ಟಿಯ ಮೇಲೆ  ಕೂದಲು ಹರವಿ ಒಣಗಿಸುವರು. ಅವರಿಗೆ  ಹೇನಿನ ಸಮಸ್ಯೆ ಇರತ್ತಿರಲಿಲ್ಲ. ಆದರೆಜನ ಸಾಮಾನ್ಯರಿಗೆ  ಮಾತ್ರ ಅದರ ಕಾಟ ತಪ್ಪಿದ್ದಲ್ಲ. ಕೂದಲಿದ್ದ ಮೇಲೆ  ಹೇನು ಇರುವುದು ಸಾಮಾನ್ಯ ಎಂಬದನ್ನು ಒಪ್ಪಿಕೊಂಡಿದ್ದರು.ಅದಕ್ಕೆ ಒಂದೆ ಹಾದಿ ಎಂದರೆ  ಪುರುಸೊತ್ತು  ಇದ್ದಾಗಲೆಲ್ಲ ತಲೆ ನೋಡ ವುದು. ಅದರಲ್ಲೂ ಹಿರಿಯಹೆಂಗಸರು  ಹೆಣ್ಣು ಹುಡುಗಿಯರನ್ನುತಮ್ಮ ಮುಂದೆ  ಕೂಡಿಸಿ  ಕೊಂಡು ಅವರ ತಲೆಯನ್ನು  ತಮ್ಮ   ಮೊಣಕಾಲ ನಡುವೆ ಸಿಗಿಸಿಕೊಂಡು ಕೂದಲ ನಡುವಿನ ಹೇನನ್ನು ಹೆಕ್ಕಿ  ಹೆಕ್ಕಿ ಕುಕ್ಕುವರು .ಅದಕ್ಕೆ  ಗಂಟೆ ಗಟ್ಟಲೆ  ಕಾಲ ವ್ಯಯ ಮಾಡುವರು. ಕೆಲವರು ಸಾಕಿದ  ಕೋತಿಗಳ  ಮುಂದೆ ತಲೆಬಾಗಿಸಿ  ಕೂತರೆ ಸಾಕು ಅವು   ಹೆಕ್ಕಿ ಹೆಕ್ಕಿ  ತಿನ್ನುವವು. ಅವು ತೀರ ಹೆಚ್ಚಾದರೆ ದೇವರಿಗೆ ಹರಸಿಕೊಂಡು ಮಂಡೆ ಕೊಡುವರು. ಹೇನಿನ ಹಣಿಗೆ  ಎಲ್ಲರ ಮನೆಯಲ್ಲಿ ಇರಲೆ ಬೇಕು.ಹೇನಿನ  ಮೊಟ್ಟೆಗಳನ್ನು  ಸೀರು ಎನ್ನುವರು.ಅವು ಬೆಳ್ಳಗೆ ಸಾಸಿವೆಗಿಂತ ಚಿಕ್ಕವು ಕೂದಲಿಗೆ ಅಂಟಿ ಕೊಂಡಿರುವ..ಅವನ್ನು ತೆಗೆಯಲು ವಿಶೇಷವಾದ ಸೀರು  ಹಣಿಗೆಯೆಬೇಕು. ಅಗಿನ್ನೂ ಔಷಧಿಗಳು ಬಂದಿರಲಿಲ್ಲ. ಸೀತಾಫಲದ ಬೀಜವನ್ನುಪುಡಿ ಮಾಡಿ ಕೊಬ್ಬರಿ  ಎಣ್ಣೆಯಲ್ಲಿ ಬೆರಸಿ  ರಾತ್ರಿ ಚೆನ್ನಾಗಿ ತಲೆಗೆ ಹಚ್ಚಿಕೊಂಡು  ಬೆಳಗ್ಗೆ ಎರೆದು ಕೊಂಡರೆ ಅವುಗಳು ಸಕುಟುಂಬವಾಗಿ ನಾಶವಾಗುವವು.

ಸೊಳ್ಳೆ ಹಳ್ಳಿ ಜೀವನದ  ಅವಿಭಾಜ್ಯ ಅಂಗ. ಕತ್ತಲಾಯಿತೆಂದರೆ ಗಂಯ್‌ ಎಂದು ಮುತ್ತುವವು. ಅವನ್ನು ಕಡಿಮೆ ಮಾಡಲು ಸಂಜೆ ಬೇವಿನ ಹೊಗೆ ಹಾಕುವರು. ಇತ್ತೀಚೆಗೆ ಸರ್ಕಾದವರೆ ಡಿಡಿ ಟಿ ಸಿಂ ಪಡಿಸುತಿದ್ದರು.
. ಆದರೆ ಹಳ್ಳಿಯಲ್ಲಿ  ಅವರಿಗೆ ಅಸಹಕಾರ. ಅವುಗಳಿಂದ ಮನೆಯಲ್ಲಿರುವ ಕಾಳು ಕಡಿ ಹಾಳಾಗಬಹುದು ಎಂಬ ಭಯ. ಆದ್ದರಿಂದ ದನದ ಕೊಟ್ಟಿಗೆಯಲ್ಲಿ  ತುಸು ಹೊಡೆಸಿದ   ಶಾಸ್ತ್ರ ಮಾಡಿ ಕೈಮುಗಿದು  ಕಳುಹಿಸುವರು. ಮತ್ತೆ  ಯಥಾ ರೀತಿ ಸೊಳ್ಳೆಗಳ  ಸಾಮ್ರಾಜ್ಯ. ತುಸು ಅನುಕೂಲಸ್ಥರು  ಸೊಳ್ಳೆ ಪರದೆ ಬಳಸುತಿದ್ದರು.
ಇನ್ನು  ಕೂರೆ ಸೀರೆಗೆ ಅಂಟುವ ಪರೋಪ ಜೀವಿ. ಅತಿ ಬಡತನದಿಂದ ಹೆಚ್ಚು ಸೀರೆ ಇರದವರು ಅದನ್ನು ಪದೇ  ಪದೇ ವಗೆಯುಲಾಗುತ್ತಿರಲಿಲ್ಲ. ಆಗ  ಅಲ್ಲಿ ಕೂರಿ ಬೀಳುತಿದ್ದವು. ಅದರಿಂದಲೆ  ಶುಚಿಯಾಗಿ  ಇಟ್ಟುಕೊಂಡರೆ  ಅದರ  ನಿವಾರಣೆಯಾಗುತಿತ್ತು. ಖರೆ ಎಂದರೆ ಬಡತನದ ಇನ್ನೊಂದು ಹೆಸರು.ಕೂರೆ.
 ಇನ್ನುಉಣ್ಣೆ ದನಗಳಿಗೆ ಕಾಡುವ ಪರೋಪಜೀವಿ.ಅದು  ಮನುಷ್ಯರಿಗೂ ಹತ್ತುತಿತ್ತು. ಇನ್ನು ಇಲಿ    ಹೆಗ್ಗಣಗಳ ಕುರಿತು  ಹೇಳುವ ಹಾಗೆ ಇಲ್ಲ.ಮಣ್ಣಿ ಮನೆಯಲ್ಲಿ ಮಾಳಿಗೆಯಲ್ಲಿ  ಇಲಿಗಳ ಓಡಾಟವಾದರೆ ನೆಲದ ಕೆಳಗೆ   ಹೆಗ್ಗಣಗಳ ದಾಳಿ. ಅವುಗಳು  ತೋಡುವ  ಗುದ್ದು ಪುಟ್ಟಿಗಟ್ಟಲೆ   ಮಣ್ಣು ಹಾಕಿದರೂ ತುಂಬುತ್ತಿರಲಿಲ್ಲ. ದವಸ ಧಾನ್ಯಗಳು ಅವುಗಳ ಹಾವಳಿಗೆ ಈಡಾಗುವುದು  ಬಹಳ . ಅದರಿಂದ ಎಲ್ಲರ ಮನೆಯಲ್ಲಿ  ಬೆಕ್ಕು ಸಾಕುವರು. ಹಾಲು ಹೈನು ಸಮೃದ್ಧಿ ಇದ್ದಮನೆಯಲ್ಲಿ ಅವಕ್ಕೆ ಹಾಲು ಮೊಸರು ಬೆಣ್ಣೆ ಕದಿಯುವುದು. ಸುಲಭ. ಅದಕ್ಕೆ ಕಷ್ಟಪಟ್ಟು ಇಲಿ ಹಿಡಿದು ಮಾಂಸಾಹಾರಿಗಳಾಗುವುದಕ್ಕಿಂತ ಹಾಲು ಮೊಸರು ಕುಡಿದು ಸಸ್ಯಾಹಾರಿಗಳಗಿರುವ ಬೆಕ್ಕುಗಳೆ ಜಾಸ್ತಿ.
ಹಂದಿಗಳಂತೂ ನಮ್ಮೂರಲ್ಲಿ ಅರೋಗ್ಯ ಇಲಾಖೆಯ ಕೆಲಸವನ್ನುಬಹುಚೆನ್ನಾಗಿ ಮಾಡುವವು.ಯಾರ ಮನೆಯಲ್ಲೂ ಕಕ್ಕಸು  ಇಲ್ಲ.  ಎಲ್ಲರೂ ಹೊರಗಡೆಗೆ  ಹೋಗುವರು. ಗಂಡಸರು ಬಯಲ ಕಡೆ ಇಲ್ಲವೆ ಹೊಲಕ್ಕೆ ಹೋದರೆ , ತಿಪ್ಪೆಗುಂಡಿಯೇ ಹೆಂಗಸರ ಸಾಮೂಹಿಕ ಸಂಡಾಸು. ಅಲ್ಲಿ ಹಂದಿಗಳ  ಹಾವಳಿ ಹೇಳ ತೀರದು ಕೂಡುವುದೆ ತಡ  ಓಡಿ ಬರುವವು.  ಅವಕ್ಕೆ  ಬಹು  ಆತುರ.  ಬಿಸಿಬಿಸಿ ಯಾದ್ದನ್ನು ತಿನ್ನುವ ಹಂಬಲ. ಅದಕ್ಕೆ ಕೆಲವರು  ಕೈನಲ್ಲಿ  ಕೋಲು  ಹಿಡಿದು  ಹೋಗುವವರೂ  ಇದ್ದರು. ಅದರೆ ಅವುಗಳಿಗೆ  ಹೊಡೆಯುವ ಮಾತೆ ಇಲ್ಲ .  ಹೆದರಿಸಲು ಮಾತ್ರ ಕೋಲು . ಆದರೆ ಅವು ಅಕಸ್ಮಾತ್‌ ಮನೆ  ಹೊಕ್ಕರೆ  ಮತ್ತೆ  ಹೊರಗೆ   ಹೋಗುವ ಅವಕಾಶ ಬಹು ಕಡಿಮೆ.   ಅಂದರೆ ಅವನ್ನು ಕೊಂದು ತಿನ್ನುತ್ತಿದ್ದರು ಎಂದಲ್ಲ.  ನಮ್ಮ  ಕಡೆ ಹಂದಿ ಮಾಂಸ ಹೆಚ್ಚು  ಜನ ಪ್ರಿಯಅಲ್ಲ.. ಅದನ್ನು ಮನೆಯಿಂದ ಹೊರಗೆ ಬಿಡದಿರಲು ಕಾರಣ ಅದು  ಲಕ್ಷ್ಮಿಯ ಸ್ವರೂಪ ಎಂಬ ಭಾವನೆ.. ಮನೆಗೆ ಬಂದ ಮಹಾಲಕ್ಷ್ಮಿಯನ್ನು ಹೊರಗೆ ಬಿಟ್ಟರೆ ಬಡತನ ಬರುವುದು  ಖಂಡಿತ..    .ಅದು ಮನೆಯಲ್ಲೆ ಇರಬೇಕು.ಅದಕ್ಕೆಅದನ್ನು ಹೊಡೆದು ಮನೆಯಲ್ಲಿಯೆ ಹೂತು ಹಾಕುವರು. ನಮ್ಮಲ್ಲಿ  ಅತಿ ಸಿರಿವಂತಿಕೆ ಇದ್ದವರನ್ನುಅವರ ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದು ಕೊಂಡು ಬಿದಿದ್ದಾಳೆ  ಎನ್ನುವರು.  ಇದಕ್ಕೆ  ವಿರುದ್ಧವಾದ ನಂಬಿಕೆ  ಎಂದರೆ  ಕಾಗೆಯ ಬಗ್ಗೆ.   ಅದು .ತಲೆಗೆ ಕುಕ್ಕಿದರೆ ತಲೆ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಬೇಕು ಎನ್ನುವ  ಆಚರಣೆ.  ಕಾಗೆ  ಮನೆ ಹೊಕ್ಕರೆ ಕೇಡು ಕಟ್ಟಿಟ್ಟ ಬುತ್ತಿ  ಅದಕ್ಕೆ  ಮನೆಯನ್ನೇ  ಕೆಲದಿನ ಖಾಲಿ ಮಾಡುವರು.ಕಾಗೆಯನ್ನು ಕುರಿತ ಇನ್ನೊಂದು  ವಿಚಿತ್ರ ಕಲ್ಪನೆ ಎಂದರೆ ಕಾಗೆ ಕೂಟವನ್ನು ಅಂದರೆ  ಗಂಡು ಹೆಣ್ಣು ಕಾಗೆಗಳು ಒಂದಾಗುವುದನ್ನು  ಕಂಡರೆ  ಬಹಳ  ಕೇಡು ಎಂಬುದು ದೃಢವಾದ ನಂಬಿಕೆ.ಅದಕ್ಕೆ ಪರಿಹಾರವೆಂದರೆ ನಮ್ಮ ಆತ್ಮೀಯರಿಗೆ ಕಾಗೆ  ನೋಡಿದವರು ಸತ್ತು ಹೋಗಿರುವರು  ಎಂದು ಸುದ್ದಿ ಕಳುಹಿಸುವುದು.  ಅವರು ಅಳುತ್ತಾ ಕರೆಯುತ್ತಾ  ಬಂದು ನೋಡಿದರೆ ಸತ್ತಿರುವನು ಎನ್ನಲಾದವನು ನಗುತ್ತಾ ಕುಳಿತಿರುವ. ನಿಜ ವಿಷಯ ತಿಳಿದು ಅಳುತ್ತಾ ಬಂದವರು  ನಗುತ್ತಾ ಹೋಗುವರು.  ನಮ್ಮಪರಿಸರವನ್ನುಶುಚಿ ಮಾಡುವ ಪಕ್ಷಿ  ಕಾಗೆ. ಅದು ನಿಸರ್ಗದ ಝಾಡಮಾಲಿ. ಆದರೆ  ಅದರ ಬಗ್ಗೆ ಈ ಪಾಟಿ ಹೆದರಿಕೆಗೆ .ಕಾರಣ ಅದು ನವಗ್ರಹಗಳಲ್ಲಿ  ಅತಿ ಕ್ರೂರ ಎಂದು ಭಾವಿಸಲಾದ ಶನಿದೇವರ  ವಾಹನವಾಗಿದೆ  ಎಂಬ ನಂಬಿಕೆ  ಕಾರಣ. ಇನ್ನು ಒಂದು ಹೆಚ್ಚು ರೂಢಿಯಲ್ಲಿದ್ದ ಅಚರಣೆ  ಹಲ್ಲಿ ಶಾಸ್ತ್ರ. ಹಲ್ಲಿ ಮೈ ಮೇಲೆ ಬಿದ್ದರೆ ಅಪಶಕುನ ಎಂದು ಗಾಢವಾಗಿ ನಂಬಿದ್ದರು. ಅದೂ ದೇಹದ ಯಾವ ಭಾಗದಲ್ಲಿ ಬಿದ್ದರೆ ಯಾವ  ಫಲ ಎಂದು ಹೇಳುವ ಹಿರಿಯರು ಇದ್ದರು.  ಹಲ್ಲಿ ಮೇಲೆ ಬಿದ್ದರೆ ತಲೆ ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡಬೇಕು. ಅದರಲ್ಲೂ ಯಾರಾದರೂ ಕಂಚಿಗೆ ಹೋಗಿ ಅಲ್ಲಿನ ದೇಗುಲದಲ್ಲಿರುವ ಬಂಗಾರದ ಹಲ್ಲಿ ಮುಟ್ಟಿ ಬಂದವರಿದ್ದರೆ ಅವರಿಗೆ ನಮಸ್ಕಾರ ಮಾಡಿದರೆ ದೋಷ ಪರಿಹಾರ .
ಬೆಳಗ್ಗೆ  ಕೋಳಿ ಕೋಗಿದ ಕೂಡಲೆ ಏಳುವುದು ವಾಡಿಕೆ.. ಹಿರಿಯರು ಮೊಸರು ಕಡೆದರೆ, ಹರೆಯದವರ ಕೆಲಸ ನೀರು ತರುವುದು. ನೀರು ದೂರದ  ಬಾವಿಯಿಂದ  ತರಬೇಕು. ಗಂಡಸರು ಹೆಗಲ ಮೇಲೆ  ಕೊಡ ಹೊತ್ತರೆ ಹೆಂಗಸರು ತಲೆಯ ಮೇಲೆ ಕೊಡ ಹೊರುವರು. ಅದಾದ  ನಂತರ ಎಲ್ಲರ ಮನೆಯಲ್ಲೂ ಪಟ ಪಟ ರೊಟ್ಟಿ ಬಡಿಯುವ ಸದ್ದು. ಹೊತ್ತು ಹುಟ್ಟುವ ಮೊದಲೆ  ಎತ್ತುಗಳ ಹೆಗಲ ಮೇಲೆ  ನೊಗ ಹಾಕಿ ರಂಟೆ ಕುಂಟೆ ನೇಗಿಲು  ಹೇರಿಕೊಂಡು ಗಳೆ ಹೊಡೆಯಲು ಹೊರಡುವರು. ಎತ್ತಿನ ಕೊರಳ ಗಂಟೆಯ ಗಣ ಗಣ ಸದ್ದು ನಮ್ಮನ್ನು ನಿದ್ದೆಯಿಂದ ಎಬ್ಬಿಸವುದು.  ಸಾಧಾರಣವಾಗಿ ಹೊಲದ ಕೆಲಸ ತಂಪು ಹೊತ್ತಿನಲ್ಲಿಯೇ ಪ್ರಾರಂಭಿಸಿ ಹೊತ್ತು ಏರುವುದರಲ್ಲಿ   ಕೆಲಸ  ಮುಗಿಸುವರು.ಮಧ್ಯಾಹ್ನದ  ಬಿರು ಬಿಸಲಲ್ಲಿ ಬಸವಣ್ಣಗೆ ದಣಿವಾಗ ಬಾರದೆಂಬ ಮುಂದಾಲೋಚನೆ.. ನಮಗೆ ಹೆಚ್ಚುಜಮೀನು ಇರಲಿಲ್ಲ. ಹಾಗಾಗಿ ಆರಂಬ ದ ಅವಶ್ಯಕತೆ ಇರಲಿಲ್ಲ.ಬಾಡಿಗೆ ಗಳೇವು ಪಡೆದು ಬೇಸಾಯ ಸಾಗಿಸುತಿದ್ದೆವು. ಆದರೆ ಒಂದಾದರೂ  ಕರೆಯುವ  ರಾಸು ಇರುತಿತ್ತು. ನಮ್ಮಮನೆಯ ಸುತ್ತ ಮುತ್ತ ರೈತರ ಮನೆಗಳು. ಹಾಗಾಗಿ ನಮಗೂ ಬೇಗ ಏಳುವ ಅಭ್ಯಾಸ. ಅದೂ ಅಲ್ಲದೆ  ಒಂದೊಂದು ದಿನ ಇನ್ನೂ ಮಲಗಿರುವಾಗಲೆ ತಲೆಬಾಗಿಲ ಚಿಲಕ ಕುಟ್ಟಿ ಎಬ್ಬಿಸುವರು. ಬಾಗಿಲು ತೆಗೆದಾಗ:
 ಯಮ್ಮಾ! ಎರಡು  ಬೆಂಕಿ ಕಡ್ಡಿ ಕೊಡು ಒಲೆಹೊತ್ತಿಸಬೇಕು ,ಎಂದು ಕೇಳಿ ಪಡೆಯುವರು.ಅವರ ನಮ್ಮ ನಡುವೆ  ಯಾವುದೆ ಸಂಕೋಚವಿರಲಿಲ್ಲ.  ಭಿನ್ನಬೇಧಗಳ  ಸುಳಿವಿರಲಿಲ್ಲ. ಅವರಲ್ಲಿ ಯಾರಿಗಾದರೂ ಅರಾಮ ಇಲ್ಲದೆ  ಹೋದರೆ,  ಬಾಯಿಕೆಟ್ಟು  ಹೋಗಿದೆ ಉಪ್ಪಿನಕಾಯಿ ಕೊಡಿ  ಎನ್ನುವರು.  ಬಾಣಂತಿ ಇದ್ದರೆ  ಅವರಿಗೆ ಬಾಯಿ ರುಚಿಗೆ ನಮ್ಮ ಮನೆಯ ಬೇಳೆ ಸಾರು ಬೇಕೆ ಬೇಕು. ಹಬ್ಬಹರಿ ದಿನದಲ್ಲಿ  ಹೋಳಿಗೆ ಮಾಡಿದ್ದರೆ ಅವರಿಗೆ ಸಿಹಿ  ಬೇಕಿಲ್ಲ ಆದರೆ ಎರಡು ಸೌಟು ಕಟ್ಟಿನ ಸಾರು  ಕೊಟ್ಟರೆ ತೃಪ್ತರು. ಅವರಿಗೂ ಅಷ್ಟೆ ಅವರ ಹೊಲದಲ್ಲಿ ಬೆಳೆದ ಹೆಸರು ಕಾಯಿ .ಅಲಸಂದಿಕಾಯಿ ,ತೊಗರಿಕಾಯಿ ಹೊಲದಲ್ಲಿನ  ಕಾಯಿಪಲ್ಲೆ  ಮೊದಲು ನಮಗೆ ಕೊಡದೆ ಸಮಾಧಾನವಿಲ್ಲ. ಅವರು. ಕಬ್ಬಿನ ಗಾಣ  ಹಾಕಿದರಂತೂ ಸಾಕು ಎನಿಸುವಷ್ಟು ಕಬ್ಬಿನ ಹಾಲು.ಆದರೆಅದನ್ನು ತರಲು ಪಾತ್ರೆಕೊಡಬೇಕು. ತರುವಾಗ ಅದರಲ್ಲಿ ಕಬ್ಬಿನ ಸಿಪ್ಪೆ ಹಾಕಿದ್ದರೆ ಒಂದು ದಿನ ಇಟ್ಟರೂ ಹಾಲು  ಹುಳಿಯಾಗದು.ಅದಕ್ಕೆ ನಿಂಬೆ ರಸ  , ಶುಂಟಿ ಪುಡಿ ಸೇರಿಸಿ  ಕುಡಿದರೆ ಸ್ವರ್ಗ ಮೂರೆ ಗೇ ಣು. ಮನೆಯಲ್ಲಿ ಯಾರಿಗಾದರೂ  ಕಾಮಣಿಯಾದರೆ ಒಂದು ವಾರ ದಿನಾ ಕಬ್ಬಿನ ರಸ ಕುಡಿದರೆ ಕಣ್ಣಿನ ಹಳದಿ ಮಟಾಮಾಯ. ಇನ್ನು ಕೆನೆಬೆಲ್ಲ, ಕಬ್ಬಿಗೆ ಹಚ್ಚಿದ ಬೆಲ್ಲ ಬಾಯಿಚಪ್ಪರಿಸುವಂತೆ ಇರುತಿದ್ದವು. ಗಾಣ ಮುಗಿದಮೇಲೆ ಮನೆಗೆ ಪುಟ್ಟಿಪುಟ್ಟಿ  ಹೊಸ ಬೆಲ್ಲ ಬರುತಿತ್ತು. ಮಗಿಯಲ್ಲಿ ಹಾಕಿದ್ದ ಕಾಕಂಬಿ ತಿಂಗಳುಗಟ್ಟಲೆ ದೋಸೆಗೆ, ರೊಟ್ಟಿ, ಚಪಾತಿಗೆ ಜೊತೆಯಾಗುತಿತ್ತು.ಅದಕ್ಕೆ ತುಪ್ಪ ಸೇರಿಸಿ ತಿಂದರೆ  ಈಗಿನ ಜಾಮ್,  ಕೆಚಪ್ಪು  ಸಪ್ಪೆ  ಎನುವಷ್ಟು ಸೊಗಸಾಗಿರುತಿತ್ತು. 

Friday, November 16, 2012

ಧೋನಿ , ನಾಟ್‌ ಔಟ್- ಚಿತ್ರ ವಿಮರ್ಶೆ


ಸಿನೆಮಾ  ಆಧುನಿಕ ಸಮಾಜದಲ್ಲಿ ಪ್ರಮುಖ ಮನರಂಜನಾ ಮಾದ್ಯಮ. ತಮಿಳುನಾಡಿನಲ್ಲಂತೂ ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಬಹುಶಃ ತಮ್ಮ ನೆಚ್ಚಿನನಾಯಕರು  ರೀಲ್‌ಲೈಫಿನಲ್ಲಿ ಸೃಷ್ಟಿಸಿದ  ಆದರ್ಶಸಮಾಜವನ್ನು ರಿಯಲ್‌ ಲೈಫ್‌ನಲ್ಲೂ ಮಾಡಲಿ ಎಂದು ಅಧಿಕಾರದ ಗದ್ದುಗೆ ಏರಿಸಿದ  ಜನರಲ್ಲಿ ತಮಿಳರು ಮೊದಲಿಗರು. ಎಂಜಿಆರ್‌ ತಮ್ಮ  ನಟನೆಯಿಂದ ರಾಜ್ಯದ ಕೊಟ್ಯಾನುಕೋಟಿ ಜನರನ್ನು ಮಂತ್ರ ಮುಗ್ದರನ್ನಾಗಿಸಿ ಮುಖ್ಯಮಂತ್ರಿಯ ಗದ್ದುಗೆ ಏರಿದ ಮೊದಲ ನಟ.ಅವರ ವಾರಸುದಾರಿಣಿಯಾದ ಜಯಲಲಿತ ಈಗಲೂ ಮತ್ತೆ ಮೂರನೆ ಬಾರಿ ಅಧಿಕಾರಕ್ಕೆ ಬಂದಿದ್ದಾರೆ.ಕಳೆದ ನಾಲಕ್ಕು ದಶಕದಿಂದ ರಾಜಕೀಯರಂಗದಲ್ಲಿ ಲೇಖನಿಯ ಬಲದಿಂದಲೇ ತಮ್ಮಕುಟುಂಬವನ್ನೆ ರಾಜಕೀಯದಲ್ಲಿ ನೆಲೆಯೂರಿಸಿದ ಕರುಣಾನಿಧಿ ಬಂದಿರುವುದೂ ಸಿನೆಮಾರಂಗದಿಂದಲೇ.ಕ್ರಾಂತಿಕಾರ ನಾಯಕರ ದನಿಯಾದವರು ಅವರು.ಅವರ ಚಿತ್ರಕಥೆ ಮತ್ತು ಸಂಭಾಷಣೆ ಅಷ್ಟು ಪ್ರಭಾವಶಾಲಿ. ದ್ರಾವಿಡ ಚಳುವಳಿಯ ಧೃವತಾರೆ ಅಣ್ಣಾದುರೈ ಕೂಡಾ ಸಿನಿಮಾಕ್ಕೆ ಸಂಭಾಷಣೆ ಬರೆದೆ ಸಮಾಜಸೇವೆಗೆ ಕಾಲಿಟ್ಟವರು. ಈ ಬದಲಾವಣೆಯಿಂದ ಸುಧಾರಣೆ ಎಷ್ಟರ ಮಟ್ಟಿಗೆ ಆಗಿದೆ ಎಂಬುದು ಚರ್ಚೆಗೆ ಅವಕಾಶನೀಡಿದರೂ ಅದರ ಪ್ರಭಾವವಂತೂ ವಿವಾದಾತೀತ.
 ಇತ್ತೀಚೆಗೆ ಸಿನಿಮಾ ಮಾದ್ಯಮವನ್ನು ಸಾಮಾಜಿಕ ಸಮಸ್ಯೆಗಳ ಅನಾವರಣಕ್ಕೆ ಬಳಸುತ್ತಿರುವ ಸಂಖ್ಯೆ ತಮಿಳಿನಲ್ಲಿ  ಬೆಳೆಯುತ್ತಿದೆ. ಅದರಲ್ಲೂ ಕನ್ನಡಿಗನೊಬ್ಬ ತಮಿಳು, ತೆಲಗು ಸಿನೆಮಾಗಳ ಅನಿವಾರ್ಯ ಅಂಗವಾಗಿ ಹೆಸರು ಮತ್ತು ಹಣಮಾಡಿ ಈಗ ಸದಭಿರುಚಿಯ ಚಿತ್ರನಿರ್ಮಾಣಕ್ಕೆ ಮುಂದಾಗಿ ಅನ್ನಕೊಟ್ಟ ರಂಗಕ್ಕೆ ರಂಗುತರುವ ಕೆಲಸ ಮಾಡುತ್ತಾ ಛಾಪು ಮೂಡಿಸಿರುವ ಅತಿ ವಿರಳರಲ್ಲಿ ಪ್ರಕಾಶ್‌ರಾಜ್‌ (ಕನ್ನಡದ ಪ್ರಕಾಶ್‌ರೈ) ಒಬ್ಬರು.ಅವರ ಇತ್ತೀಚಿನ ಕಾಣಿಕೆ ದೋನಿ, ನಾಟ್‌ಔಟ್‌ ಸಿನೆಮಾ ವೀಕ್ಷಕರಲ್ಲಿ ಕಿರು ಅಲೆಯನ್ನೇ ಎಬ್ಬಿಸಿದೆ. ಹಿಂದಿಯಲ್ಲಿ ಬಂದ ಅಮೀರ್‌ಖಾನರ  ತಾರೆ ಜಮೀನ್‌ಪರ್ “  ಮತ್ತು ತ್ರೀ ಈಡಿಯಟ್ಸನಲ್ಲಿರುವಂತೆ ಹೆಸರಾಂತ ನಾಯಕ ನಟರಿಲ್ಲ, ಬೆಡಗಿನ ನಟಿಯರು ನಾಪತ್ತೆ, ಅದ್ಧೂರಿಯ ಸೆಟ್‌ಗಳಿಲ್ಲ. ಹೊರಾಂಗಣ ಚಿತ್ರೀಕರಣಕ್ಕೆ ವಿದೇಶಿ ಲೋಕೇಷನ್‌ಗೆ ಹೋಗಿಲ್ಲ, ಕುಣಿತ ಮಣಿತ ಹೊಡೆದಾಟ ಇಲ್ಲ. ಆದರೆ ನಟರೆಲ್ಲ ತೆಲುಗು ರಂಗಭೂಮಿಯ ಹಿನ್ನೆಲೆಯಿಂದ ಬಂದು ಸಿನೆಮಾದಲ್ಲಿ ಹೆಸರು ಮಾಡಿದವರು..ಆದರೆ ಸಮಾಜದಲ್ಲಿನ ಮೂಲಭೂತ ಶಿಕಷ್ಣ ಸಮಸ್ಯೆಯಗಂಭೀರತೆಯನ್ನು  ಈ ಚಿತ್ರ ವಿಶ್ಲೇಷಿಸುತ್ತದೆ ಮೊದಲಿಂದ ಕೊನೆ ತನಕ ಚಿತ್ರದ ಕೇಂದ್ರಬಿಂದು ಪ್ರಕಾಶ್‌ರಾಜ್ ಅಂದರೆ ನಮ್ಮ ಕನ್ನಡದ ಪ್ರಕಾಶರೈ.ಜೊತೆಗೆ ಕೋಮಾದಲ್ಲಿರುವ ಮಗನ ಪಾತ್ರದಲ್ಲಿ ಕಮರ್ಶಿಯಲ್‌ಚಿತ್ರಗಳ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್‌ ಪುತ್ರ. ಚಿತ್ರ ಮೊದಲಾಗುವುದೇ ಹೆಸರಾಂತ್‌ ಖಾಸಗಿ ಕಾನ್ವೆಂಟ್‌ನಲ್ಲಿ ಓದುತ್ತಿರುವ 17X8  ಎಂದರೆ ಎಷ್ಟು ಎಂದು ಹೇಳಲಾಗದ ಆದರೆ ಅತೀವ ಕ್ರಿಕೆಟ್ ಆಟದ ಗೀಳಿರುವ ಕಾರ್ತಿಕ ಎಂಬ ಬಾಲಕನ ಸಾಂಪ್ರದಾಯಿಕ ಶಿಕ್ಷಣದಲ್ಲಿ ಅನುಭವಿಸುವ ಹಿನ್ನಡೆಯಿಂದ. ತಂದೆ ಮಧ್ಯಮವರ್ಗದ ಸರಕಾರಿ ನೌಕರ. ಎರಡು ಮಕ್ಕಳನ್ನು ಒಂಟಿಯಾಗಿ ಸಾಕುತ್ತಿರುವ ವಿಧುರ. ಅವನ ಜೀವನದ ಒಂದೆ ಗುರಿ ಮಗ ಚೆನ್ನಾಗಿ ಓದಬೇಕು. ನೂರಕ್ಕೆ ನೂರು ಅಂಕ ಪಡೆಯಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಗೆದ್ದು ಒಳ್ಳೆಯ ಸಂಪಾದನೆಯ ನೌಕರಿ ಹಿಡಿಯಬೇಕು ಎಂದು. ಅದಕ್ಕಾಗಿ ಸಾಲ ಸೋಲ ಮಾಡಿ ಬಿಡುವಿನ ವೇಳೆಯಲ್ಲಿ ಉಪ್ಪಿನಕಾಯಿ ವ್ಯಾಪಾರ ಮಾಡಿ, ಜೀವ ಬಿಗಿ ಹಿಡಿದು ಪ್ರತಿಷ್ಠಿತ ಶಾಲೆಯಲ್ಲಿ ಸೇರಿಸಿರುವನು.ಆದರೆ ಮಗನಿಗೆ ಓದಿನಲ್ಲಿ ಆಸಕ್ತಿ ಇಲ್ಲ.ಅವನು ಧೋನಿಯ ಅಭಿಮಾನಿ. ಹುಡುಗ ಕ್ರಿಕೆಟ್‌ ಆಗಸದಲ್ಲಿ ಮಿನುಗಬಹುದಾದ ಭವಿಷ್ಯದ ತಾರೆ ಎಂದು ಕೋಚ್‌ನ ಅಭಿಪ್ರಾಯ. ಆದರೆ ಅದು ತಾನು ಮಾರುವ ಉಪ್ಪಿನಕಾಯಿಯಷ್ಟಾದರೂ ಆದಾಯ ತರುವುದೆ ಎಂಬ ಅನುಮಾನ ತಂದೆಯದು.
 ಶೀರ್ಷಿಕೆಯೇ ಸೊಗಸು. ಚೆಂಡು ಸ್ಟಂಪಗಳಿಗೆ ತಗುಲಿದೆ ಬೇಲ್‌ ಬಿದ್ದವೆ ಆದರ   ಕೆಳಗೆ ನಾಟ್‌ ಅಂತ ಎಂಬ ಬರಹ ನಿಜಕ್ಕೂ ಚಿತ್ರದ ಆತ್ಮವನ್ನೆ ಅನ್ವರ್ಥವಾಗಿಸಿದೆ. ಪ್ರಕಾಶ್‌ರಾಜ್‌ನಿರ್ದೇಶಕ.ಮುಗ್ದ ಘೋಡ್ಸೆ,ರಾಧಿಕಾ ಆಪ್ಟೆ, ನಾಸಿರ್, ಬ್ರಹ್ಮಾನಂದಮ್, ಬಾಲನಟ ಆಕಾಶ್‌ಪುರಿ. ನಟನೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುವರು
ಉತ್ತಮ ನಟನೆಂದು ಖ್ಯಾತಿಪಡೆದ ಪ್ರಕಾಶ್‌ರಾಜ್‌ನ ನಿರ್ದೇಶನದ ಚಿತ್ರ ನಿರೀಕ್ಷೆ ಮೂಡಿಸಿದ್ದು ಸಹಜ.ಚಿತ್ರದ ಕಥೆ ನಮಗೆಲ್ಲರಿಗೂ ಸಂಬಂಧಿಸಿದ , ತಂದೆ ತಾಯಿಗಳಿಗೆ ತಲೆ ನೋವಾಗಿರುವ ಶಿಕ್ಷಣ ವ್ಯವಸ್ಥೆಯ ಕುರಿತದ್ದು’. ಓದು ಎನ್ನುವ  ತಂದೆ, ಆಡುವೆ ಎನ್ನುವ ಮಗನ ನಡುವಿನ ತಾಕಾಲಾಟವೆ ಚಿತ್ರದ ಜೀವಾಳ.  ಸಂಪ್ರದಾಯಿಕಶಿಕ್ಷಣ ನೂರಕ್ಕೆ ನೂರುಅಂಕಗಳು ಸೆಂಟ್‌ ಪರ್ಸೆಂಟ್‌ ಫಲಿತಾಂಶ ಬೇಕೆನ್ನುವ ಶಾಲೆ, ಕನಸು ಮನಸಲ್ಲೂ ಕ್ರಿಕೆಟ್ ತುಂಬಿಕೊಂಡಿರುವ ಮಗ.ತಂದೆಯ ತಳಮಳದಲ್ಲಿ ಮಗ ಉತ್ತಮ ಮಾರ್ಕ ತೆಗೆದುಕೊಂಡಿಲ್ಲ ಎಂದು ಬ್ಯಾಟ್‌ಮುರಿದು ಕೋಪದಿಂದ ದೂಡಿದಾಗ ಗಾಯಗೊಂಡ ಮಗ ಕೋಮಾದಲ್ಲಿ ಹೋಗುವನು. ಫಲಿತಾಂಶಕ್ಕೆ ಕುಂದು ಬರುವುದೆಂದು ಪ್ರತಿಷ್ಠಿತ ಶಾಲೆಯವರು ಟಿ.ಸಿ ಕೊಟ್ಟು ಕೈ ತೊಳೆದುಕೊಳ್ಳುವರು,ಚಿಕಿತ್ಸೆಗೆ ಹಣ ಬೇಕಾದಾಗ ಸಹಾಯಕ್ಕೆ ಬರುವವರು ಅನೈತಿಕ ವ್ಯವಹಾರದಲ್ಲಿ ತೊಡಗಿದವಳೆಂದು ದೂರವಿಟ್ಟಿದ್ದ ಮಗಳ ಗೆಳತಿಯಾದ ನೆರೆ ಮನೆಯ ಯುವತಿ ಹಾಗೂ
ಮೀಟರ್‌ ಬಡ್ಡಿಗೆ ಸಾಲ ನೀಡುವ ಸಾಹುಕಾರ. ಮಕ್ಕಳ ಭವಿಷ್ಯಕ್ಕಾಗಿನ ಮಧ್ಯಮ ವರ್ಗದ ಕಷ್ಟ ಕಾರ್ಪಣ್ಯ,ಹೇಗಾದರೂ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಮನೋವೃತ್ತಿಯನ್ನು ಸಹಜವಾಗಿ ಚಿತ್ರಿಸಲಾಗಿದೆ
ಸದ್ಯದ ಶಿಕ್ಷಣದ ಹಲವು ಆಯಾಮಗಳನ್ನು ಅನಾವರಣ ಗೊಳಿಸುವಲ್ಲಿ ನಿರ್ದೇಶಕ ಪ್ರಕಾಶ್‌ರಾಜ್‌ ಗೆದ್ದಿದ್ದಾರೆ,ಇನ್ನು ನಟನಾಗಿ ಮನ ಮುಟ್ಟುವರು.ಆಟಗುಳಿಯಾಗಿ ಆಕಾಶ್‌ಪುರಿ,ಸಹೃದಯಿ ನೆರೆಯವಳಾಗಿ ರಾಧಿಕಾಆಪ್ಟೆ ನೆನಪಲ್ಲಿ ಉಳಿಯುವರು .ಇನ್ನು ತೆಲುಗು ವಾಣಿಜ್ಯ ಚಿತ್ರಗಳ ಅನಿವಾರ್ಯ ಅಂಗವಾಗಿರುವ ನಟರು ತಮಿಳು ಚಿತ್ರದಲ್ಲೂ ತಮ್ಮ ಛಾಪು ಒತ್ತಿದ್ದಾರೆ.
 ಬರಿ ಉಪದೇಶ ನೀಡಬಹುದಾಗಿದ್ದ  ಚಿತ್ರವನ್ನು  ಪ್ರೇಕ್ಷಕರು ಒಂದಲ್ಲ ಒಂದು ಹಂತದಲ್ಲಿ ತಮ್ಮದೆ ಕಥೆ ಎಂಬ ತನ್ಮಯತೆ ಮೂಡಿಸುವುದೇ ಇದರ ಹಿರಿಮೆ. ಚಿತ್ರದ ನಿಜವಾದ ನಾಯಕ ಎಂದರೆ ಮರಾಠಿ ಲೇಖಕ ಮಹೇಶ್‌ ಮಂಜ್ರೇಕರ್‌ ಅವರ ಕಥೆ. ಶಿಕ್ಷಣ ರಂಗದ ಅನೇಕ ಜ್ವಲಂತ ಸಮಸ್ಯೆಳ ಮೇಲೆ ಕ್ಷ ಕಿರಣ ಬೀರುವುದು. ನವಿರಾದ ವಿಶ್ಲೇಷಣೆ, ಅತಿಭಾವುಕತೆ ಇಲ್ಲದ ನೈಜ ದೃಶ್ಯಗಳು, ನಿತ್ಯ ನಾವಾಡುವ ಮಾತಿನಂತಿರುವ ಸಂಭಾಷಣೆ, ಅಬ್ಬರವಿಲ್ಲದ ಸಂಗೀತ. ಚಿತ್ರದ ಮೊದಲರ್ಧ ತಂದೆ, ಮಗ ಮತ್ತು ಶಿಕ್ಷಣದ ಸುತ್ತ ಗಿರಕಿಹೊಡೆಯವುದು. ಅದು ಎಲ್ಲರ ಮನೆಯಕಥೆ. ದ್ವಿತಿಯಾರ್ಧವು ಕಡಿಮೆ ಮಾರ್ಕು ಬಂದವೆಂಬ ಆವೇಶದ ಭರಿತ ವರ್ತನೆಯಫಲವಾಗಿ ಮುಗ್ದ ಮಗುವಿನ ಜೀವ ಬಲಿಯಾಗುವುದನ್ನು ತಡೆಯುವ ಪ್ರಯತ್ನ ಕಣ್ಣಲ್ಲಿ ನೀರು ತರಿಸುವುದು.ಈ ನಡುವೆ ಶಿಕ್ಷಣದ ಬಗೆಗಿನ ಟಿವಿ ಕಾರ್ಯಕ್ರಮ. ಗಾಲಿಕುರ್ಚಿಯಲ್ಲಿದ್ದ ಮಗುವಿನೊಡನೆ ಮುಖ್ಯಮಂತ್ರಿಗೆ ಮಾಡುವ ಮನವಿಯ ತಜ್ಞನರವೈದ್ಯತನಗೂ 17X8  ಮಗ್ಗಿ ಬರುವುದಿಲ್ಲ ಎನ್ನುವು ದೃಶ್ಯಗಳು ನೋಡುಗರ ಮನ ತಟ್ಟುತ್ತವೆ. ಕೊನೆಗೆ ಗುಣಮುಖನಾದ ಕಾರ್ತಿಕ್ ರಾಜ್ಯ ಮಟ್ಟದ ಪಂದ್ಯದಲ್ಲಿ ಕೊನೆ ಬಾಲಿನಲ್ಲಿ ಸಿಕ್ಸರ್‌ ಹೊಡೆದು ಗೆಲವು ಸಿನೀಮಯ ಎನಿಸಿದರೂ ಅದು ಸಾಧ್ಯವಾದರೆ ಎಷ್ಟು ಚೆನ್ನ ಎನಿಸುವುದು.ಫೋಟೋಗ್ರಫಿ, ಹಿನ್ನೆಲೆ ಸಂಗೀತ ಎಲ್ಲವೂ ಪೂರಕವಾಗಿ ಒಟ್ಟಾರೆ ಸಹಜತೆ ಮೂಡಿಸುವವು.


ನಮ್ಮ ನಟನೊಬ್ಬ ಪಕ್ಕದ ರಾಜ್ಯದಲ್ಲಿ ನಟನಾಗಿ , ನಿರ್ಮಾಪಕನಾಗಿ ಮತ್ತು ನಿರ್ದೇಶಕನಾಗಿ ವಿಭಿನ್ನ ಕಥಾವಸ್ತುವನ್ನುತೆಗೆದುಕೊಂಡು ಕೀರ್ತಿ ಪತಾಕೆ ಹಾರಿಸಿರುವುದು ಹೆಮ್ಮೆಯ ಸಂಗತಿ


Wednesday, November 14, 2012

Car festival , a tonic to tired


ಜಾತ್ರೆ , ಒಂದು  ಶಕ್ತಿ ವರ್ಧಕ ಮಾತ್ರೆ  
  ನಮ್ಮದು ಹಂಪೆಯ ಹತ್ತಿರದ ಪುಟ್ಟ ಹಳ್ಳಿ. ಅಂಥಹ ಮುಂದುವರೆದ ಗ್ರಾಮವಾಗಿರಲಿಲ್ಲ.  ಹಂಪೆ ಹೊಸಪೇಟೆಯ ಮಧ್ಯದ ರಸ್ತೆಯಲ್ಲಿ ಇರುವುದೆ ಅದರ ವಿಭಿನ್ನತೆಗೆ ಕಾರಣ ಹಂಪೆಯ ಜಾತ್ರೆ ತುಂಬ ಪ್ರಸಿದ್ಧವಾದುದು .ಬಸ್ಸಿನ ಸೌಕರ್ಯ ಅಷ್ಟಾಗಿ ಇರಲಿಲ್ಲ.ಜಾತ್ರೆಗೆ ಬರುವವರು ಎತ್ತಿನ ಗಾಡಿಯಲ್ಲಿಯೇ ಬರಬೇಕು.  ಜಾತ್ರೆ ಇನ್ನೂ ಒಂದು ವಾರವಿದೆ ಎನ್ನುವಾಗಲೆ ಬಂಡಿಗಳಸಾಲು ಸಾಲು..ಎಲ್ಲ ಬಂಡಿಗಳೂ ನಮ್ಮ ಊರ ಮೂಲಕವೆ ಹಾದು ಹೋಗಬೇಕು.ನಾವು ಸಾಲಿಗುಡಿಯಲ್ಲಿ ನೆನಪಿಸಿಕೊಳ್ಳುತ್ತಿದ್ದ ಅಮವಾಸ್ಯೆ ಮತ್ತು ಹುಣ್ಣಿಮೆಗಳ ಪಟ್ಟಿಯಲ್ಲಿ ಚೈತ್ರ ಶುದ್ಧ ದವನದ ಹುಣ್ಣಿಮೆಯೆ ಪ್ರಪ್ರಥಮ.  ಅದನ್ನೆ ಹಂಪೆ ಹುಣ್ಣಿಮೆ ಎಂದೂ ಕರೆಯುವರು.ಜಾತ್ರೆ ನಡೆಯುವುದು ಒಂದು ಎರಡು ದಿನ , ಅಥವ ವಾರವಲ್ಲ. ಪುಟ್ಟ ಪೂರ್ತಿ ಒಂದು ತಿಂಗಳು.ಹೊಸದಾಗಿ ಮದುವೆಯಾದವರು ಜೋಡಿ ಕಳಸ ನೋಡಲೆ ಬೇಕೆಂಬ ಪದ್ದತಿ ಇದ್ದಿತು. ಹೊಸ ದಂಪತಿಗಳನ್ನು ಇಬ್ಬರನ್ನೆ ಕಳುಹಿಸುವುದು ಉಂಟೆ ? ಅದರಲ್ಲೂ ಇನ್ನೂ ಅರಸಿನ ಮೈಯವರನ್ನು.  ಅದಕ್ಕೆ ಮನೆ ಮಂದಿ ಎಲ್ಲ ಹೊರಡುವರು. ನವ ದಂಪತಿಗಳ ಜತೆಗೆ ನೆಂಟರಿಷ್ಟರೂ ಜಮಾಯಿಸುತಿದ್ದರು.  ಹಂಪೆಯಲ್ಲಿ ಜೋಡು ತೇರುಗಳು. ಒಂದು ಪಂಪಾಪತಿಯದು ಇನ್ನೊಂದು ಹಂಪಮ್ಮನದು. ಅವುಗಳನ್ನು ಒಟ್ಟಿಗೆ ಎಳೆಯುತ್ತಿದ್ದುದು  ವಿಶೇಷ. ಪಂಪಾಪತಿ ಮತ್ತು ಹಂಪಮ್ಮ ಅಲ್ಲಿನ ಅಧಿ ದೇವತೆಗಳು.ಆ ರಥಗಳು ಸುತ್ತಮುತ್ತಲಿನ ಪ್ರದೇಶಲ್ಲಿ ಹೆಸರುವಾಸಿ. ಗಾತ್ರದಲ್ಲೂ ಬೃಹತ್ತಾಗಿದ್ದವು.ನಾಲಕ್ಕು ಕಲ್ಲಿನ ಗಾಲಿಗಳು .ಎತ್ತರದ ಆಳು ಅವುಗಳ ಬದಿಯಲ್ಲಿ ನಿಂತರೆ ಅವುಗಳ ಅಚ್ಚಿಗಿಂತ ತುಸು  ಮೇಲೆ ಬರುಬಹುದು, ಅಚ್ಚಿನ ಮೇಲೆ  ಮೇಲೆ ಏಳು ಹಂತದಲ್ಲಿ ಕಟ್ಟಿಗೆಯಲ್ಲಿ ಕೆತ್ತನೆ . ದೇವಾನು ದೇವತೆಗಳಿಂದ ಹಿಡಿದು ಒಂದು ಹಂತದಲ್ಲೀ ವಿವಿಧ ಭಂಗಿಯಲ್ಲಿ ಸುಖದಲ್ಲಿ  ನಿರತರಾದ ಚಿತ್ರಗಳು ತರುಣ ತರುಣಿಯರಿಗೆ ಪ್ರೇಮ ಪಾಠವನ್ನು ಹೇಳಿಕೊಡುವಂತಿದ್ದವು.ಹಿರಿಯರ ಕಣ್ಣುತಪ್ಪಿಸಿ ಕಿರಿಯರು , ಮಕ್ಕಳೆದುರಿಗೆ ನೋಡಬಾರದೆಂಬ ನಟನೆ ಮಾಡಿ ಅದರ ಅಂದ ಸುಖಿಸುವ ವಯಸ್ಸಾದವರು, ಯಾರದೂ ಎಗ್ಗಿಲ್ಲದೆ ನೆಟ್ಟ ನೋಟದಲ್ಲಿ ನೋಡುತ್ತಾ ನಿಲ್ಲುವ ಯುವಕರ ವರ್ತನೆ ಮಾನವ ಸಹಜ ಪ್ರವೃತ್ತಿಯ ಉತ್ತಮ ನಿದರ್ಶನವಾಗುತಿತ್ತು. ತೇರಿನ ಮೇಲೆ ದಶಕಗಳಿಂದ ಸುರಿದ ಎಣ್ಣೆಯ ಫಲವಾಗಿ ತೇರುಗಳು ಕಪ್ಪಗೆ ಮಿರಿಮಿರಿ ಮಿಂಚುತಿದ್ದವು.. ಹಾಗೆ ಎಣ್ಣೆ ಹಾಕುವುದು ಭಕ್ತಿಯ ಭಾಗವೋ ? ಇಲ್ಲವೆ ಮಳೆ,ಗಾಳಿ, ಬಿಸಿಲಿಗೆ ಕಟ್ಟಿಗೆಯು ಹಾಳಾಗದಿರಲಿ ಎಂದು ತೆಗೆದುಕೊಂಡ ಎಚ್ಚರಿಕೆಯ ಕ್ರಮವೋ ಆ ದೇವರೆ ಬಲ್ಲ.ಅದು ಅನೂಚೀನವಾಗಿ ನೆಡೆದುಬಂದ ಪದ್ದತಿ. ಬಹುಶಃ  ಆ ತೇರುಗಳು ಹಿಂದಿನ ವಿಜಯನಗರದ ಅರಸರ ಕಾಲದಿಂದಲೂ ಬಂದಿರುವ ಐತಿಹಾಸಿಕ ಆಚರಣೆಯ ಅಂಗಗಳಾಗಿವೆ. ಕಾರಣ ಜಾತ್ರೆಯ ದಿನ ಆನೆಗುಂದಿಯ ಅರಸು ಮನೆತನದವರು ಬಂದು ತೇರಿಗೆ ಪ್ರಥಮ ಪೂಜೆ ಸಲ್ಲಿಸಿದ ಮೇಲೆಯೆ ರಥ ಮುಂದೆ ಸಾಗುವುದು. ಅಲ್ಲಿ ಪ್ರಭುಗಳಿಗೆ ಜಾತ್ರೆಯಲ್ಲಿ ನೀಡಿದ ಪ್ರಾಧಾನ್ಯದಂತೆ ಪ್ರಜೆಗಳಿಗೂ  ಅವರದೆ ಆದ ಪಾತ್ರ ಇದೆ .ಹಂಪೆಯ ಮಠದ ಸ್ವಾಮಿಗಳದೂ ಇದರಲ್ಲಿ ಜಾತ್ರೆಯಲ್ಲಿ ಬಹು ಮುಖ್ಯ ಪಾತ್ರವಿದೆ. ಹಂಪೆಯ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ಅಲಂಕರಿಸಿದ  ಪೀಠ ಅದು. ರಾಜಗುರುಗಳಾಗಿದ್ದ ಅವರ ಅನುಮತಿಯಂತೆ ಎಲ್ಲ ಧಾರ್ಮಿಕ ಕ್ರಿಯೆ ನಡೆಯುತ್ತಲಿದ್ದವು. ಈಗಲೂ ಆ ಪೀಠದಲ್ಲಿರುವ ಸ್ವಾಮಿಗಳ ಸಮ್ಮುಖದಲ್ಲೆ ಜಾತ್ರೆಯಾಗುವುದು. . ಹಕ್ಕಬುಕ್ಕರ ಪಡೆಯ ಸೈನ್ಯದ ಬೆನ್ನೆಲುಬಾಗಿದ್ದ  ಅಲ್ಲಿನ ಬೇಡರ ಸಮುದಾಯಕ್ಕೆ  ಹಲವು ಹಕ್ಕುಗಳು ಇವೆ.ಹಂಪೆಗೆ ಅಂಟಿಕೊಂಡಿರುವ ಕಮಲಾಪುರದ ಏಳು ಕೇರಿಯ ಬೇಡರ ಪಡೆಯೆ ತೇರಿನ ಮಿಣಿ ಮೊದಲು ಹಿಡಿಯಬೇಕು.ಮಿಣಿ ಎಂದರೆ ಮೊಳಗಾತ್ರದ ವಿಶೇಷ ಹಗ್ಗ.ಉದ್ದವಾಗಿದ್ದು ನೂರಾರು ಮಂದಿ ಹಿಡಿದು ಎಳೆಯಲು ಅನುವಾಗುವಂತಹದು. ಅದರಲ್ಲಿ ಮನ್ಮಥಕೇರಿಯವರು ಮಿಣಿ ಹಿಡಿದರೆ , ಸನ್ನೆ ಹಾಕುವುದು ಚೌಡಿಕೆ ಕೇರಿಯವರದು. ಹಿರಿಕೇರಿ , ಕಿರಿಕೇರಿ ಹೀಗೆ ಎಲ್ಲರಿಗೂ  ದೇವರ ಕೆಲಸದ ಹಂಚಿಕೆಯಾಗಿದೆ ಎಲ್ಲ ಕೇರಿಯವರಿಗೆ ಇದು ಗೌರವದ ಹಕ್ಕು. ಸನ್ನೆ ಎಂದರೆ ತೇರಿನ ಚಲನೆಯ ನಿಯಂತ್ರಣ ಮಾಡುವ ಸಾಧನ . ಸಾವಿರಾರು ಜನ ಹರಹರ ಮಹಾದೇವ ಎಂದು ಭಕ್ತಿಯಿಂದ ಮುಗಿಲುಮುಟ್ಟುವಂತೆ  ದೇರನ್ನು ಸ್ಮರಿಸುತ್ತಾ ಹಗ್ಗ ಜಗ್ಗುವಾಗ ಹರಿಯುವ ತೇರಿನ ಗಾಲಿಗೆ ಸಿಕ್ಕು ಒಂದೆರಡು  ಸಲ ಭಕ್ತರು ಪ್ರಾಣ ಕಳೆದುಕೊಂಡಿರುವುದೂ ಇದೆ. ಆದರೆ ಅದು ಪೂರ್ವ ಜನ್ಮದ ಸುಕೃತ ಎಂದು  ಅವರ ನಂಬಿಗೆ.  ತೇರಿನ ಮಿಣಿ ಮೊಳ ಗಾತ್ರದ್ದು . ಅದನ್ನು ಮುಟ್ಟಿದರೆ ಸಾಕು ಧನ್ಯತಾಬಾವ. ಯಾವುದೆ ಸಾಮೂಹಿಕ ಕಾರ್ಯದ ಪರಿಯೆ ಹಾಗೆ. ಸಾವಿರಾರು ಜನ ಎಳಯುವಾಗ ನಾವು ಕೈಗೂಡಿಸಿದರೆ ತೇರನ್ನೆಳೆದೆವು ಎಂಬ ಧನ್ಯತಾ  ಭಾವ  ನಮಗೆ . ಒಬ್ಬರಿಂದ ಆಗದ ಕೆಲಸ .ಸಹಸ್ರಾರು ಕೈಗಳು ಕೂಡಿದಾಗ ರಥ ದುಡುದುಡುನೆ ಹರಿಯುವುದು.
 ಹೀಗೆ  ಗುರುಮನೆ ,ಅರಮನೆ ಮತ್ತು ನೆರೆ ಹೊರೆಯ ಮನೆ ಮನೆಯವರೂ ಒಂದಾಗಿ ಸೇರಿದ ಪರಿಣಾಮವಾಗಿ  ಜಾತ್ರೆ ಸುಸೂತ್ರವಾಗಿ ಜರುಗುವುದು.
ಜಾತ್ರೆ ಹದಿಹರೆಯದವರಿಗೆ ಶಕ್ತಿವರ್ಧಕ ಮಾತ್ರೆ.ಇದ್ದಂತೆ. ರೇಷ್ಮೆ ಸೀರೆಯಟ್ಟು , ತಲೆ ತುಂಬ ಹೂವೂ ಮುಡಿದು ,ಕೈ ತುಂಬ ತೊಟ್ಟ ಗಾಜಿನ ಬಳೆಗಳನ್ನು ಘಿಳಗ ಘಿಲ್‌ ನಾದ ಮಾಡುತ್ತಾ ಗೆಳತಿಯರೊಡನೆ ಜಾತ್ರೆಯಲ್ಲಿ ಓಡಾಡುವ ಯುವತಿಯರು ಕಣ್ಣಿಗೆ ಹಬ್ಬ . ಅವರ ಹಿಂದೆ ಹೋದಲೆಲ್ಲ ಹಿಂಬಾಲಿಸುವುದೆ ಹಲವು ಯುವಕರ ಕಾಯಕ.ಜಾತ್ರೆಯ ದಿನವಂತೂ ಅವರು ಹಲವು ಹತ್ತುಬಾರಿ ನೂಕು ನುಗ್ಗಲಿದ್ದರೂ ಬಿಷ್ಟಪ್ಪಯ್ಯನ ಗೋಪುರದಿಂದ ಗುಡಿಯ ಬಾಗಿಲವರೆಗೆ ಹತ್ತಾರು ಬಾರಿಯಾದರೂ ಹೋಗಿಬರುವರು. ಅವರು ಬಂದು ಹೋಗುವುದು ದೇವರ ದರ್ಶನಕ್ಕೆ ಅಲ್ಲ.  ದೇವರನ್ನು ನೋಡಲು ಬರುವ ಚಂದದ ಹುಡುಗಿಯರ ಸ್ಪರ್ಶನಕ್ಕೆ. ಎಳ್ಳು ಹಾಕಿದರೆ ನೆಲಕ್ಕೆ ಬೀಳದಷ್ಟು ಜನಸಂದಣಿ ಇದ್ದಾಗ ತಳ್ಳಾಟದಲ್ಲಿ ಬೇರೆ ಸಮಯದಲ್ಲಿ ದೂರ ನಿಂತು ನೋಡಲಾಗದವರನ್ನೂ ಹತ್ತಿರದಲ್ಲೆ ಒತ್ತಿಕೊಂಡು ನಡೆಯುವ ಭಾಗ್ಯ ದೊರಕಿದರೆ ಬಿಟ್ಟಾರೆಯೆ ನಮ್ಮ ಹಳ್ಳಿಯ ಹೈಕಳುಗಳು .ಮನೆ ಬಿಟ್ಟು ಹೊರಬಾರದು, ಸದಾ ಹಿರಿಯರ ಕಣ್ಗಾವಲಿನಲ್ಲೆ ಇರುವ ಹುಡುಗಿಯರು ಈ ಸಮಯದಲ್ಲಿ ಹಿರಿಯರು ಭಕ್ತಿಯ ಆವೇಶದಲ್ಲಿರುವಾಗ ದೊರೆಯುವ ಈ ನಿರಪಾಯಕರಿ ಸಂತಸದ ಕ್ಷಣಗಳನ್ನು ಬಹುಪಾಲು ಜನ ಖುಷಿಯಿಂದಲೆ ಸ್ವೀಕರಿಸುವರು. ತೇರನ್ನೆಳೆಯುವಾಗ ಅದರ ಮೇಲೆ ಬಾಳೆಹಣ್ಣು ಎಸೆಯುವುದೆ  ಒಂದು ಚಂದದ ಕಾಯಕ. ಅದಕ್ಕಾಗಿಯೆ ವಿಶೇಷವಾದ ಚಿಕ್ಕ ಹಣ್ಣುಗಳು ಭರದಿಂದ ಮಾರಾಟವಾಗುವವು. ಅದನ್ನುಎಲ್ಲರೂ ತೇರಿನೆಡೆಗೆ ಎಸೆದಾಗ ಅದನ್ನು ಪ್ರಸಾದವೆಂದು ಬುತ್ತಿ ಹಿಡಿಯಲು ನಾನು ನೀನು ಎಂದು ನುಗ್ಗಾಟವಾಗುವುದು. ಹಣ್ಣು ಹಿಡಿಯುವ  ಗಡಿಬಿಡಿ ಕೆಲವರಿಗಾದರೆ,  ಬೇಕಾದವರಿಗೆ ಗುರಿಇಟ್ಟು ಹೊಡೆಯುವ  ಹವಣಿಕೆ ಹಲವರದು. ತಮ್ಮ ಪ್ರೀತಿ ಪಾತ್ರರ ಗಮನ ಸೆಳೆದು ತಮ್ಮ ಇರುವನ್ನು ಖಚಿತಪಡಿಸಲು ಪಡ್ಡೆ ಹುಡುಗರು ತೇರಿಗೆ ಒಗೆಯುವ ಹಣ್ಣನ್ನು ನಾರಿಯರ ಕಡೆ ಎಸೆಯುವ  ರಸಿಕತೆ ಮೆರೆಯುವರು.ಇನ್ನು ಗುಂಪಿನಲ್ಲಿ ಭಕ್ತಿ ಭರದಿಂದ ಮಹಿಳೆಯರು ಎರಡೂ ಕೈಗಳನ್ನು ತಲೆಯ ಮೇಲೆತ್ತಿ  ಪಾರ್ವತಿಪತೆ ಹರ ಹರಹ ಮಹದೇವ ಎಂದು ಕಳಸಕ್ಕೆ ಕೈಮುಗಿಯುತ್ತ , ಆ ಸುಂದರ ದೃಶ್ಯದ ನೋಟದಲ್ಲಿ ತನ್ಮಯರಾಗಿರುವಾಗ ಅವರ ಹಿಂದೆ ನಿಂತು ಒಂದೆ ಕೈನಲ್ಲಿ ದೇವರಿಗೆ ವಂದಿಸುವ ತುಂಟರೂ ಅಲ್ಲಲ್ಲಿ ಕಾಣುವರು. ದೈನಂದಿನ ಜೀವನದಲ್ಲಿ ಮನಸ್ಸಿಲ್ಲದಿದ್ದರೂ  ಹೆದರಿ ಬೆದರಿದಂತೆ ನಟಿಸ ಬೇಕಾದವರು  ಹಿರಿಯರು ಎಂದು ಹಮ್ಮಿನಲ್ಲಿರುವವರಿಗ  ಕೈತಪ್ಪಿ ಬಿತ್ತು ಎನ್ನವ ರೀತಿಯಲ್ಲಿ ಫಲ ಸೇವೆ ಮಾಡಿ  ಸೇಡು ತೀರಿಸಿಕೊಂಡು ತೃಪ್ತಿ ಪಡೆಯಲೆಳಸುವವರೂ ಒಬ್ಬಿಬ್ಬರಿದ್ದರು. ಅದು  ಹಿರಿಯರಿಗೆ ಗೊತ್ತಾದರೂ ಜಾತ್ರೆಯಲ್ಲಿ  ಇದೆಲ್ಲ ಸಾಮಾನ್ಯ ಎಂದು  ಎಲ್ಲವನ್ನೂ ಲಘುವಾಗಿ ತೆಗೆದುಕೊಂಡು ಮುಗುಳ್ನಗು ಬೀರುವರು.ವರ್ಷವಿಡೀ ಗಾಣದ ಎತ್ತಿನಂತೆ ಕೆಲಸದಲ್ಲಿ ಮುಳುಗಿದವರಿಗೆ ಜಾತ್ರೆ ಒಂದು  ಮೋಜಿನ ಯಾತ್ರೆ.
 ನೂರಾರು ವರ್ಷ ಗಾಳಿ ಮಳೆಗಳ ಹೊಡೆತಕ್ಕೆ ಜುಮ್ಮೆನ್ನದ ತೇರು ಮುಂದೆ ಒಂದು ದಿನಬೆಂಕಿಗೆ ಆಹುತಿಯಾಯಿತು. ಎಣ್ಣೆಮಯವಾಗಿದ್ದ ತೇರಿಗೆ  ರಾತ್ರಿ ಹೇಗೆ ಕಿಡಿತಗಲಿತೋ ಏನೋ ಅದು ಧಗಧಗನೆ ಹತ್ತಿ ಉರಿಯುವಾಗ ಜ್ವಾಲೆಯು ತೇರು ತೆಗ್ಗು  ಪ್ರದೇಶದಲ್ಲಿದ್ದರೂ ಸುತ್ತಲಿನ ಗುಡ್ಡ ಬೆಟ್ಟಗಳನ್ನೂ ಬೆಳಗಿಸಿತಂತೆ. ನಂತರ ಹಲವಾರು ದಿನಗಳ ಕಾಲ ಎಲ್ಲ  ಆಸ್ತಿಕರ ಮನದಲ್ಲೂ ಸೂತಕದ ಛಾಯೆ. ಮನೆಯಲ್ಲಿನ  ಯಾರೋ ಹಿರಿಯರನ್ನು ಕಳೆದುಕಂಡ ನೋವು.ಏನೋ  ಅನಾಹುತ ಆಗುಬಹುದೆಂಬ ಅಳಕು.  ಕಾಲ ಕೆಟ್ಟಿತು ಅದಕ್ಕೆ ಹೀಗೆ . ಬರುವ ಕೇಡಿನ  ಮುನ್ಸೂಚನೆ ಇದು ಎಂಬ ಭಯ. ಮುಂದೆ ಎನಾಯಿತೋ ಏನೋ ಒಳ್ಳೆಯದು ಕೆಟ್ಟದ್ದು ಎರಡೂ ಆಗಿರಬಹುದು. ಆದರೆ  ಸುಟ್ಟುಹೋದ ತೇರಿನ ಮಾತು ಮಾತ್ರ  ಮತ್ತೆ ಮತ್ತೆ  ಬರುತಿತ್ತು.  ಉಳಿದ ಇನ್ನೊಂದು ತೇರನ್ನು ಮೊದಲಿನಂತೆ ಎದುರು ಬಸವಣ್ಣನ ತನಕ ಎಳೆದು ವಾಪಸ್ಸು ಬರತರುವ ಪದ್ದತಿಯನ್ನು ಮೊಟಕುಗೊಳಿಸಲಾಯಿತು.  ಮುಂದೆ ಹತ್ತಾರು ವರ್ಷಗಳ ನಂತರ ಇನ್ನೊಂದು ತೇರು ಶಿಥಿಲವಾಗಿ ಕುಸಿಯಿತು. ಈಗ ಎರಡೂ ತೇರುಗಳನ್ನು ಹೊಸದಾಗಿ ನಿರ್ಮಿಸಿಲಾಗಿದೆ. ಹಿಂದಿನ ತೇರಿನ ಭವ್ಯತೆಯ ಇವಕ್ಕಿಲ್ಲ. ಅವುಗಳಿಗೆ ಹೋಲಿಸಿದರೆ ಇವು ಏನೇನೂ ಅಲ್ಲ. ಆಟಿಕೆಯಂತೆ ತೋರುತ್ತವೆ.   ಬದಲಾದ ಭಕ್ತಿಯ ಪ್ರಮಾಣದ ಸಂಕೇತವಾಗಿವೆ ಹೊಸ ರಥಗಳು. ಇತ್ತೀಚೆಗೆ ಜಾತ್ರೆಗೆ ಎರಡುದಿನ ಮುಂಚೆ ಹಂಪೆಗೆ ಹೋಗಿ ನೋಡಿದಾಗ ಬೆಪ್ಪಾದೆ.ನೂರಾರು ಮಂಡಾಳು ಡಾಣಿ ಮಿಠಾಯಿ ಅಂಗಡಿಗಳೂ, ಜತೆ ಜತೆ ಯಾಗಿ ಬಣ್ಣಬಣ್ಣದ ಬಳೆ ಮಾರುವ ಬಳೆ ಆಂಗಡಿಗಳು , ಬೀದಿಯಲ್ಲೆ  ಒಡೆ ಮೆಣಸಿನಕಾಯಿ ಕರಿದು ಬಿಸಿ ಬಿಸಿ ಯಾಗಿ  ಸಿದ್ಧವಾಗುವ ತಿಂಡಿ ಯಾವದೂ ಇಲ್ಲ. ಜಾತ್ರೆ ಯಾವುದೆ ತಯಾರಿಯ ಗಡಿಬಿಡಿ ಕಾಣಲಿಲ್ಲ. ಅಂಗಡಿಗಳು ಕಾಣಲಿಲ್ಲ. ತೇರನ್ನೂ ಇನ್ನೂ ಕಟ್ಟಿ ಮುಗಿಸಿರಲಿಲ್ಲ.ಅಂದರೆ ಕಟ್ಟಿಗೆಯತೇರಿನ ಮೇಲೆ ಹಂತ ಹಂತವಾಗಿ ಮಾಡಿ ಅವನ್ನು ಬೇರೆ ಬರೆ ರೀತಿಯಲ್ಲು ಸಿಂಗರಿಸಿ ಅತಿ ಮೇಲೆ ಇದಿರಿನ ಡುಬರಿಮಾಡಿ ಅದಕ್ಕೆ ಬಣ್ಣಾ ಬಣ್ಣದ ಬಟ್ಟೆಹೊದಿಸಿ ಅದರ ಮೇಲೆ ಕಳಸ ಇರಿಸಿರುವರು. ಅದಾವುದೂ ಇರಲಿಲ್ಲ.
ಜಾತ್ರೆಯಾದಾಗ ದಾಸೋಹ ನಡೆಯುತಿತ್ತು. ಬ್ರಾಹ್ಮಣರಿಗೆ  ಅವರ ಮಠದಲ್ಲಿ ಊಟವಾದರೆ, ಶೆಟ್ಟರಿಗೆ ಅವರ ಛತ್ರದಲ್ಲಿ ಸಂತರ್ಪಣೆ . ವೀರ ಶೈವರ ದಾಸೋಹದ ಮಂಟಪಗಳೂ ಅನೇಕ. ಜಾತಿ ಭೇದವಿಲ್ಲದೆ ಹಸಿದವರಿಗೆ ಅನ್ನ ನೀಡುವವರೂ ಇದ್ದರು. ಈಗ ಅವುಗಳ ಸುಳಿವೂ ಕಾಣಲಿಲ್ಲ.ಕೆಲವು ದಾನಿಗಳು ಜ್ಯಾತೀತವಾಗಿ ದಾಸೋಹ ನಡೆಸುವ ವಿಷಯ ತಿಳಿಯಿತು. ಆದರೆ ಕೊಡುವೆನೆಂದರೂ ಪಡೆಯುವವರೆ ಇಲ್ಲ.ಹೆಜ್ಜೆಗೊಂದು ಹೋಟೆಲು,ಹೊಸ ರುಚಿಯ ತಿಂಡಿಗಳು  ಕೈಬೀಸಿ  ಕರೆವಾಗ ಸಾಂಪ್ರದಾಯಿಕ ದಾಸೋಹಕ್ಕೆ ಕಾಯುವವರು ಯಾರು ?
 ಅಲ್ಲಿನವರನ್ನು ಏನು ಹೀಗೆ ?  ಎಂದು ಕೇಳಿದಾಗ “ಸ್ವಾಮಿ , ಈಗ ಮೊದಲಿನಂತೆ ಜನ ಮುಂಚಿತವಾಗಿ ಸೇರುವುದಿಲ್ಲ. ಫಟಾಪಟ್ ಜಾತ್ರೆಯ ಹೊತ್ತಿಗೆ ಬರುತ್ತಾರೆ ರಾತ್ರಿ ಎಂಟರ ಹೊತ್ತಿಗೆ ಕಸ ಗುಡಿಸಲು ಶುರು ಮಾಡುವರು. ಅಷ್ಟು ವಾಹನ ಸೌಕರ್ಯ ಇದೆ ಇಲ್ಲಿ ತಂಗುವವರು ಬಹು ಕಡಿಮೆ “. ಜಾತ್ರೆಯ ದಿನ ನೂರಾರು ಕೆಂಪು ಬಸ್ಸುಗಳು ನಿಮಿಷ ಕ್ಕೊಂದರಂತೆ ಬರುತ್ತಲೆ ಇರುತ್ತವೆ.ಇನ್ನು ಖಾಸಗಿ ವಾಹನಗಳಾದ ಕಾರು, ಟೆಂಪೋ , ಬೈಕುಗಳಂತೂ  ಸಾವಿರ ಸಂಖ್ಯೆಯಲ್ಲಿ ಆದರೆ ಅವೆಲ್ಲವನ್ನು ಹಂಪೆಗೆ  ಮೈಲು ದೂರದಲ್ಲಿ ನಿಲುಗಡೆ ಮಾಡಲಾಗುವುದು. ಅಲ್ಲಿನವರ ಪ್ರಕಾರ ಇತ್ತೀಚೆಗೆ ಆಚರಿಸುತ್ತಿರುವ   ಸರಕಾರಿ ಪ್ರಾಯೋಜಿತ ಹಂಪೆ ಉತ್ಸವ  ಬಲು ಜೋರು. ಅಲ್ಲಿನ ನಾಲಕ್ಕಾರು ವೇದಿಕೆಗಳಲ್ಲಿನ ಸಂಗೀತ , ನೃತ್ಯ , ನಾಟಕ ಧ್ವನಿ ಮತ್ತು ಬೆಳಕಿನ ಪ್ರದರ್ಶನ. ಬಂಡೆ ಬಂಡೆಗೂ ದೀಪಾಲಂಕಾರ. ರಾತ್ರಿ ಲೇಸರ್‌ ಪ್ರದರ್ಶನ  ಇಷ್ಟೆಲ್ಲ ನೋಡಲು  ಇರುವಾಗ ಉತ್ಸಾಹ ಜಾತ್ರೆಯಬಗ್ಗೆ ಕಂಡು ಬಾರದೆ ಇರುವುದ ಅಚ್ಚರಿಯಲ್ಲ..ಮೂರು ದಿನದ ಮಟ್ಟಿಗೆ ವಿಜಯನಗರದ ವೈಭವ ಮರುಕಳಿಸಿದಂತಿರುವುದು. ನೂರಾರು ಕೋಟಿ ಹಣ ಹರಿಯುವುದು ಮಿರಿ ಮಿರಿ ಮಿಂಚುವ ರಾಜಕಾರಣಿಗಳು ಮತ್ತು   ಹೊಳೆಯುವ ಚಿತ್ರತಾರೆಯರ ಮುಂದೆ ಪಂಪಾಪತಿಯೂ ತುಸು ಮಂಕಾಗಿ ಕಾಣುವುದು. ಇದೆಲ್ಲ ಯುಗಧರ್ಮಕ್ಕೆ ಸರಿಯಾಗೆ ಇದೆ.


Friday, November 9, 2012

ಇದ್ದಲ್ಲಿಗೆ ಸಿದ್ಧ ಆಹಾರ. ಭಾಗ ೨


 ಭಾಗ- ೨
ಆಹಾರದ ಪ್ಯಾಕೆಟ್‌ಗಳನ್ನು ಹಿಡಿದು ಪಟ್ಟಯಲ್ಲಿರುವ ಮನೆಗಳಿಗೆ ಹೋದೆವು.ನಾವು ಹೋದ ಅನೇಕ ಮನೆಯಲ್ಲಿ ಅನೇಕರು ಗಾಲಿ ಕುರ್ಚಿಯಲ್ಲೆ ಕುಳಿತು ಬಾಗಿಲು ತೆರೆದರು. ಒಂದೆರಡು ಕಡೆ ಬಾಗಿಲುತಟ್ಟಿದಾಗ  ಬಂದು ತೆರೆಯಲು ಆಗದು ಎಂದು ಕೆಲವರು ಹಾಗೆ ಮುಂದು ಮಾಡಿದ್ದರು ಒಬ್ಬಿಬ್ಬ ಮಹಿಳೆಯರು ಸಿದ್ದ ಆಹಾರ ಪಡೆದು ತಕ್ಷಣವೇ ಬಾಗಿಲು ಹಾಕಿಕೊಂಡರೆ ಕೆಲವರು ಮಾತಿಗೆ ನಿಲ್ಲಿಸಿ ಕೊಳ್ಳುತಿದ್ದರು ಅದರಲ್ಲೂ ಗಾಲಿ ಕುರ್ಚಿಯಲ್ಲಿದ್ದವರಿಗೆ ಏನೋ ಹೇಳ ಬೇಕೆಂಬ ತುಡಿತ ಇದ್ದಂತೆ ಕಾಣುತಿತ್ತು ಬಂದಿರುವುದು ಅವರಿಗೆ ಸಮಾಧಾನ ತಂದಂತಿತ್ತು. ಷಾನ್ ಅವರಿಗೆ ಆತ್ಮೀಯನಾಗಿದ್ದಂತೆ ಅನಿಸಿತು. ಅವರು ತಮ್ಮ ಕಷ್ಟ ಕೋಟಲೆಗಳನ್ನು ಹಂಚಿಕೊಳ್ಳುತಿದ್ದರು ಅವನು ತಾಳ್ಮೆಯಿಂದ ಹೇಳುವುದನ್ನೆಲ್ಲಾ ಕೇಳುತ್ತಾ ಒಂದೆರಡು ಸಮಾಧಾನದ ನುಡಿ ಹೇಳುತಿದ್ದ. ಅಷ್ಟಕ್ಕೆ ಅವರ ಮೊಗದಲ್ಲಿ ನಗೆ ಮೂಡುತಿತ್ತು. ಅವರ ಸಂತೋಷಕ್ಕೆ ನಾವು ಕೊಟ್ಟ ಆಹಾರದ ಪೊಟ್ಟಣಕ್ಕಿಂತ ಅವರ ಮಾತು ಕೇಳಿದ, ದುಗುಡ ದುಮ್ಮಾನಗಳಿಗೆ ಕಿವಿಯಾದದ್ದೆ ಹೆಚ್ಚಿನ ಕಾರಣ ಎನಿಸಿತು ಕೆಲವರಂತೂ ಹೆಚ್ಚುವರಿಯಾಗಿ ಡೊನಟ್ ಕೊಟ್ಟದ್ದಕ್ಕೆ ಬಹಳ ಸಂತೋಷಪಟ್ಟರು.ಇವರು ನನ್ನ ಗೆಳೆಯ ಎಂದು ಪರಿಚಯ ಮಾಡಿಕೊಟ್ಟಾಗ ಮನಸಾರೆ ಅಭಿನಂದನೆ ಸಲ್ಲಿಸಿದರು.
ನಾನು ಬರಿ ಆಫ್ರಿಕನ್ ಅಮೇರಿಕನ್ನರು ಮಾತ್ರ ಈ ಸೌಲಭ್ಯ ಪಡೆಯುವರು , ಅದರಲ್ಲೂ ಬಡವರು ಮಾತ್ರ ಎಂದುಕೊಂಡಿದ್ದು ನನ್ನ ಭಾವನೆ ಸುಳ್ಳಾಯಿತು. ಅವರಲ್ಲಿ ಅಮೇರಿಕನ್ನರೂ ಇದ್ದರು. ಇದಕ್ಕೆ ಹೆಚ್ಚಾಗಿ ಆರ್ಥಿಕ ಸ್ಥಿತಿಯ ಜೊತೆ ಸಾಮಾಜಿಕ ಕಾರಣವೂ ಇದೆ ಎಂದುವಿವರಣೆ ದೊರೆಯಿತು
ವಿರ್ಲ ಫೋರ್ಡ  ಎಂಬ ಹಣ್ಣು ಹಣ್ಣು ಮುದುಕರ ಮನೆಗೆ ಹೋದೆವು. ಅವರದು ಮೂರು ಬೆಡ್‌ರೂಮ್‌ ಮನೆ. ಎರಡು ಗರೇಜ್‌ ಇದ್ದವು. ಒಂದರಲ್ಲಿ ಬೆಲೆಬಾಳುವ ಕಾರೂ ಇದ್ದಿತು. ಮನೆ ಒಂದು ಮಿನಿ ಬಂಗಲೆ.  ಕಡು ಬಡವರಿಗೆ ಕೊಡಬೇಕಾದ ದಾನವನ್ನು ಉಳ್ಳವರೂ ಪಡೆಯುವರಲ್ಲ ಎಂದು ಆಶ್ಚರ್ಯವಾಯಿತು. ನಮ್ಮಲ್ಲಿನ  ಸರಕಾರದ ಯೋಜನೆಗಳು ಅಪಾತ್ರರ ಪಾಲಾಗುವುದಲ್ಲ ಹಾಗೆ ಇಲ್ಲಿಯೂ ಆಗಿರಬಹುದು. ಎಲ್ಲಿ ಹೋದರೂ ಮಾನವರೆಲ್ಲ ಒಂದೆ ತಾನೆ. ಎಂದುಕೊಂಡೆ.  ಆದರೆ ನನ್ನ ಗೆಳೆಯ ಬಾಗಿಲು ಕರೆ ಗಂಟೆ ಒತ್ತಿದ ಕೂಡಲೆ ಕಮ್ ಇನ್ ಎಂಬ ದನಿ ಕೇಳಿಸಿತು.  ಇಬ್ಬರೂ ಒಳಗೆ ಹೋದೆವು ಸಾಧಾರಣವಾಗಿ ಸುಸ್ಥಿತಿಯಲ್ಲಿ ಹಾಲು ಅಲ್ಲಿ ಹಳೆಯಕಾಲದ ಮೇಜು ಕುರ್ಚಿಗಳೂ ಇದ್ದವು ಆದರೆ ಮೇಜಿನ ತುದಿಯಲ್ಲಿ ಗಾಲಿಕುರ್ಚಿಯಲ್ಲಿ ತೀರಾ ವಯಸ್ಸಾದ  ಮುದುಕರೊಬ್ಬರು ಕುಳಿತಿದ್ದರು. ಅದು ಅವರದೆ ದನಿ. ಬಿಳಿತಲೆ,ಸೊರಗಿದ ದೇಹ.  ಒಂದು ಕಾಲದಲ್ಲಿ ಬಹುಸುಂದರವಾಗಿದ್ದ ಮೊಗ . ಸುಮಾರಾಗಿ ಬೆಲೆ ಬಾಳುವ ಉಡುಪು ಧರಿಸಿದ್ದಾರೆ. ಆದರೆ ಅವರಿಗೆ ನಾವು ತಂದ ಎರಡು  ಊಟ ಕೊಡುತಿದ್ದೇವೆ. ಅವರಿಗೆ ಮತ್ತು ಅವರ ಹೆಂಡತಿಗೆ. ಅವರ ಹೆಂಡತಿ ಕಾಣಲಿಲ್ಲ.  ವಿಚಾರಿಸಿದಾಗ ಅನಾರೋಗ್ಯದಿಂದ  ಆಸ್ಪತ್ರೆಯಲ್ಲಿ ಇರುವುದಾಗಿತಿಳಿಸಿದರು. ಈಗ ತುಸು ಗುಣ ಮುಖವಾಗಿದೆ  ನಾವು ಹೋಗುವ ಮೊದಲು ದೂರವಾಣಿಯ ಆಸ್ಪತ್ರೆಯಿಂದ ಕರೆಬಂದಿತ್ತು. ಇಲ್ಲಿ ಒಂದು ಅನುಕೂಲ ಇದೆ. ಅರೋಗ್ಯ ಸೇವೆಯಸೌಲಭ್ಯವಿದೆ.  ಹಿರಿಯ ನಾಗರೀಕರಿಗೆ ತುಸುವೆ ತೊಂದರೆಯಾದರೂ ತಕ್ಷಣ ಆಂಬ್ಯುಲೆನ್ಸ ಬಂದು ಸೂಕ್ತ ಚಿಕಿತ್ಸೆ ಒದಗಿಸುವರು.  ಆದರೆ ಇವರಿಗೆ ಹೆಂಡತಿಯನ್ನು ನೋಡಲು ಅಲ್ಲಿ ಹೋಗಲು ಆಗಿಲ್ಲ. ಕಾರು ಇದೆ. ಆದರೆ ಕರೆದೊಯ್ಯುವವರು ಯಾರು ?
ವಾರಾಂತ್ಯದಲ್ಲಿ ಹತ್ತಿರದ ಊರಲ್ಲಿರುವ ಮಗಳು ಬಂದು ಕರೆದು ಕೊಂಡು ಹೋಗುವಳು ಆಗ ನೋಡಿಕೊಂಡು ಬರುವೆ ಎಂದು ತಿಳಿಸಿದರು. ನಂತರ ಅವರ ಬಗ್ಗೆ ವಿವರ ತಿಳಿಯಿತು. ಅವರು ಉತ್ತಮ ಆದಾಯದ ಉದ್ಯೋಗದಲ್ಲಿದ್ದರು. ಸಾಕಷ್ಟು ಹಣವಿದೆ. ಸ್ವಂತ ಮನೆಯೂ ಇದೆ. ಆದರೆ ಇದ್ದ ಇಬ್ಬರು ಮಕ್ಕಳೂ ದೂರದಲ್ಲಿದ್ದಾರೆ. ಇವರಿಗೆ ೯೦ವರ್ಷ , ಹೆಂಡತಿಗೆ ೮೫ ವರ್ಷತುಂಬ ಕಷ್ಟದಿಂದ ಮನೆಯಲ್ಲೆ ಓಡಾಡಬಲ್ಲರು. ಆದರೆ ಹೊರಗೆ ಹೋಗಲಾಗುವುದಿಲ್ಲ. ಇನ್ನು ಕಾರು ಚಾಲನೆ ಆಗದ ಮಾತು. ಎದ್ದು ಅಡುಗೆ ಮಾಡುವ ಯೋಚನೆಯೂ ಸಾಧ್ಯವಿಲ್ಲ. ಸಿದ್ಧ ಆಹಾರವನ್ನು ಫ್ರಿಫ್ರಜ್‌ನಿಂದ ದ ತೆಗೆದು ಮೈಕ್ರೋ ವೇವ್‌ನಲ್ಲಿ ಬಿಸಿ ಮಾಡಿಕೊಂಡು ತಿನ್ನಲು ಸಾಧ್ಯವಾಗುವುದೆ ಅವರ ಪುಣ್ಯ. ಅದಕ್ಕೆ   ಅವರಿಗೂ ಈ ಛಾರಿಟಿ ಊಟ. ಬಿಸಿನೂಟವನ್ನು ಈಗ ಮಾಡುವರು. ಉಳಿದದ್ದೂ ಫ್ರಿಜ್‌ನಲ್ಲಿ ಇಟ್ಟು ಮಾರನೆ ದಿನ ಬಳಸುವರು.ನಿವೃತ್ತರಾಗಿ ಮೂವತ್ತು ವರ್ಷದ ಮೇಲಾಗಿದೆ. ಆದಾಯ ಬರಬರುತ್ತಾ ಇಳಿಮುಖವಾಗಿದೆ. ಅಸಿಸ್ಟೆಡ್ ಲಿವಿಂಗ್ ಹೋಗಲು ಮನಸ್ಸಿಲ್ಲ .ಜತೆಗೆ ಹೆಂಡತಿ ಇದ್ದಾಳೆ . ಹೇಗೋ ಜೊತೆಯಾಗಿ ಕಾಲಕಳೆಯುವರು. ಅದಕ್ಕೆ ಅವರಿಗೆ ಆಗಾಗ ಸಿದ್ಧ ಆಹಾರ ದೊರೆತರೆ ಅದನ್ನೆ ಇಟ್ಟುಕೊಂಡು ಎರಡು ಮೂರುದಿನ ತಿನ್ನುವರು. ನಂತರ ದಿಢೀರ್ ಆಹಾರವಿದ್ದೆ ಇದೆಅವರಿಗೆ ನಾವು ತಂದು ಎರಡು ಊಟಗಳನ್ನು ಕೊಟ್ಟೆವು. ಅವರು ಒಂದನ್ನು ಮಾತ್ರ  ತೆಗೆದುಕೊಂಡು ಇನ್ನೊಂದನ್ನು ನಯವಾಗಿ ನಿರಾಕರಿಸಿದರು.  ಒತ್ತಾಯ ಮಾಡಿದರೂ ಒಪ್ಪಲಿಲ್ಲ. "ನನ್ನದು ಮಾತ್ರ ಕೊಡಿ . ನನ್ನ ಹೆಂಡತಿ ಮನೆಯಲ್ಲಿ ಇಲ್ಲ . ಅದಕ್ಕೆ ಅವಳ ಪಾಲಿನದು ಬೇಡ." ಅವರ ನೇರವಂತಿಕೆ ನೋಡಿ ಮೆಚ್ಚುಗೆಯಾಯಿತು.
ಇಲ್ಲಿನ ದೃಶ್ಯ ನನಗೆ ಚೆನ್ನೈನಲ್ಲಿ  ಎನ್ ಆರ್ ಐ ಹಿರಿಯನಾಗರೀಕರ ನೆನಪುತಂದಿತು. ಮೈಲಾಪುರದಲ್ಲಿ ಅನೇಕ ಪ್ರತಿಷ್ಠಿತ ಬಡಾವಣೆಗಳಲ್ಲಿ  ಭೂತ ಬಂಗಲೆಯಂಥಹ ಮನೆಗಳಲ್ಲಿ ಒಬ್ಬರೋ ಇಬ್ಬರೋ ವಯಸ್ಸಾದ ಹಿರಿಯರು. ಅವರ ಮಕ್ಕಳೆಲ್ಲಾ ಅಮೇರಿಕಾ, ಇಂಗ್ಲೆಂಡ್ ಮುಂತಾದ ವಿದೇಶಗಳಲ್ಲಿ.  ಅವರಿಗೆ ಯಾವುದಕ್ಕೂ ಕೊರತೆಯೆ ಇಲ್ಲ. ಆದರೆ ನೋಡಿಕೊಳ್ಳಲು ಆತ್ಮೀಯರೆ ಇಲ್ಲ. . ಅವರದೇನಿದ್ದರೂ ಕಾಂಪ್ಯೂಟರಿನಲ್ಲಿ  ವಾರಂತ್ಯದಲ್ಲಿ  ಮಾತನಾಡಿದರೆ ಮುಗಿಯಿತು.
.ಮನೆಯ ಹೊರಗಿನ ಕೆಲಸಕ್ಕೆ ಒಬ್ಬ ಆಳು ಬಂದು ಶುಚಿ ಮಾಡಿ ಹೋಗುವಳು. ಬೆಳಗ್ಗೆ ಹನ್ನೊಂದು ಗಂಟೆಗೆ ಮಾಮಿ ಮನೆಯಿಂದ ಊಟದ ಡಬ್ಬಿ. ಅಲ್ಲಿ ರಾತ್ರಿಯಂತೂ ಊಟವೆ ಇಲ್ಲ. ಏನೋ ಅಲ್ಪಾಹಾರ.ಟಿವಿ ಆಯಿತು ತಾವಾಯಿತು. ಆಗೀಗ ಕೈ ಕಾಲು ಗಟ್ಟಿಇದ್ದವರು ಸಂಗೀತ ಕಚೇರಿ , ದೇವಸ್ಥಾನ ಎಂದು ಹೋಗುವರು. ಆದರೆ ಅಕ್ಕ ಪಕ್ಕದವರು ಮಾತನಾಡಿಸುವರು. ಆಗೀಗ ನೆಂಟರು , ಗೆಳೆಯರು ಬರುವರು ಅದೆ ಅವರಿಗೆ ದೊಡ್ಡ ಸಂತೋಷದ ಸಂಗತಿ.  ಆದರೆ ಅಮೇರಿಕಾದಲ್ಲಿ ಅದೆಲ್ಲ ಇಲ್ಲ
 ಯಾರಿಗೆ ಯಾರೋ ಪುರಂಧರ ವಿಠಲ.!   .
ಬರುತ್ತಾ ನನ್ನಗೆಳೆಯ ವಿವರಣೆ ನೀಡಿದ. ಐವತ್ತು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ.ಒಟ್ಟುಕುಟುಂಬ ಇರುತಿದ್ದವು.ಆಗ ಎಲ್ಲರೂ ಒಟ್ಟಿಗೆ ಇರುತಿದ್ದರು. ವಯಸ್ಸಾದವರನ್ನು ನೋಡಿಕೊಳ್ಳುವ ಪ್ರಶ್ನೆಯೆ ಏಳುತ್ತಿರಲಿಲ್ಲ. ಅವರೂ ಕುಟುಂಬದ ಹಿರಿಯ ಸದಸ್ಯರಾಗಿದ್ದರು. ಆದರೆ ವಿದ್ಯೆ ಕಲಿತು ಉದ್ಯೋಗಕ್ಕಾಗಿ ದೂರ ದೂರ ಹೋಗುವುದು ಮೊದಲಾಯಿತು . ಅಲ್ಲದೆ ವಾರಕ್ಕೆ ೬೦-೭೦ ಗಂಟೆ ಕೆಲಸಮಾಡುವ ಗತಿ ಬಂದಿತು. ಇನ್ನು ವಯಸ್ಸಾದ ತಾಯಿತಂದೆಯರನ್ನು ನೋಡಲು ಸಮಯ ಎಲ್ಲಿ.?ಅದಕ್ಕೆ ತಕ್ಕಂತೆ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಹಿರಿಯ ನಾಗರೀಕರಿಗೆ ಹಣ ಕಾಸಿನ ನೆರವು,  ವೈದ್ಯಕೀಯ ಸೌಲಭ್ಯವಿದೆ.  ಯಾವಾಗ ಆರ್ಥಿಕ ಅವಲಂಬನೆ ಇಲ್ಲವಾಯಿತೋ ಆಗಲೆ ಕೌಟುಂಬಿಕ ಸಂಬಂಧಗಳು ಸಡಿಲವಾಗತೊಡಗಿದವು.   ಹದಿನಾರನೆ ವಯಸ್ಸಿಗೆ ಹಕ್ಕಿಯಂತೆ ಹಾರಿ ಹೊರಗೆ ಹೋಗಿ ಸ್ವತಂತ್ರ ಜೀವನ ನಡೆಸಿ ಮನ ಬಂದವರ ಜತೆಇದ್ದು ಜೀವನ ಸಾಗಿಸುವವರಿಗೆ ವಯಸ್ಸಾದ ಹೆತ್ತವರ ನೆನಪಾದರೂ ಇರುವುದು ಹೇಗೆ? ಹತ್ತಿರದಲ್ಲಿದ್ದರೆ, ವರ್ಷಕ್ಕೊಂದು ಸಲ ಮದರ್‌ಸ್ ಡೇ  ದಿನದಂದು ತಾಯಿಗೆ , ಫಾದರ್ಸ ಡೇ ಯಂದುತಂದೆಗೆ ಕೂಡುಗೆ ನೀಡಿ ಶುಭಾಶಯ ಕೋರುವರು.ಸಾಧ್ಯವಾದರೆ ಒಟ್ಟಿಗೆ ಊಟ ಮಾಡುವರು.   ಮತ್ತೆ ಮುಂದಿನ ವರ್ಷದವರೆಗೆ ನೆನಪೆ ಇರುವುದಿಲ್ಲ.ಅದೂ ಹತ್ತಿರದಲ್ಲಿದ್ದರೆ, ಅನುಕೂಲವಾದರೆ. ಇಲ್ಲವಾದರೆ ಒಂದು ಹೂವಿನ ಜತೆ ಪತ್ರ ಕಳುಹಿಸಿದರೆಫೋನು ಮಾಡಿದರೆ ಹೆತ್ತವರು ಹಿರಿಹಿರಿ ಹಿಗ್ಗುವರುಕಾರಣ ಅನೇಕ ತಾಯಿತಂದೆಯರಿಗೆ ತಮ್ಮಮಕ್ಕಳು ಎಲ್ಲಿರುವರು? ಏನು ಮಾಡುವರು ಎಂಬುದೇ  ಗೊತ್ತಿರುವುದಿಲ್ಲ.ಕೆಲವರಿಗಂತೂ ಅವರ ಸಮಾಚಾರ ಸಿಗುವುದು ಪೋಲಿಸರಿಂದ . ಅವರು ಯಾವುದೋ ಅಪರಾಧ ಪ್ರಕರಣದಲ್ಲಿ ಸಿಕ್ಕಹಾಕಿಕೊಂಡು ಜೈಲು ಪಾಲಾದಾಗ ನಡೆಸುವ  ತನಿಖೆಯಿಂದ ತಾಯಿತಂದೆಯರಿಗೆ ವಿಷಯ ತಿಳಿಯುವುದು. ಅದೂ ಅವರು ಒಟ್ಟಿಗೆ  ಇದ್ದರೆ.
ಅನೇಕರಿಗೆ ಹಣಕಾಸಿನ ಕೊರತೆ ಇದೆ ಎಂಬ ಮಾತು ನಿಜ. ಆದರೆ ದುಡಿಯುವವರಿಗೆ  ದುಡ್ಡು ಸಿಕ್ಕೇ ಸಿಗುವುದು. ಸರ್ಕಾರವೆ ಇಲ್ಲಿನ ನಾಗರೀಕರಿಗೆ ೧೮ ತಿಂಗಳು ಕಾಲ ನಿರುದ್ಯೋಗ  ಭತ್ಯ ನೀಡುವುದು. ನಿರ್ಗತಿಕರಾದರೆ  ಫುಡ್‌ಸ್ಟ್ಯಾಂಪ್ಸ  ಕೊಡುವುದು. ಸರ್ಕಾರ ಕೊಡುವ ಈ ಚೀಟಿಗಳನ್ನು ಯಾವ ಅಂಗಡಿಯಲ್ಲಾದರು ಬಳಸಬಹುದು ಆದರೆ ಆಹಾರ ಪದಾರ್ಥಗಳನ್ನು ಮಾತ್ರ  ಕೊಳ್ಳಬಹುದು. ಅಂದರೆ ಇಲ್ಲಿ ಅಮೇರಿಕಾದ ನಾಗರೀಕರು ಹಸಿವಿನಂದ  ಸಾಯುವ ಸಂಭವ ಬಹು ಕಡಿಮೆ.
 ಇಲ್ಲಿ ಕೆಲಸ ಮಾಡುವವರಿಗೆ ಆದಾಯ ಬಂದೆ ಬರುವುದು. ಆದರೆ ದುಡಿಮೆ ಮಾಡಿದ ಹಣವನ್ನು ದುರ್ವ್ಯಸನಕ್ಕೆ ಹಾಳು ಮಾಡುವವರೆ ಬಹಳ. ಒಂದು ಸಲ ದುರಭ್ಯಾಸ ಅಂಟಿದರೆ ನಂತರ ತಮ್ಮ ಗೀಳಿನ ಸಲುವಾಗಿ ಹಣಹೊಂದಿಸಲು ಅಪರಾಧಕ್ಕೆ ಎಳಸಿ ವಿಷವರ್ತುಲದಲ್ಲಿ  ಸಿಲುಕುವರುವರು. ಇದಕ್ಕೆಲ್ಲಕಾರಣ  ಒಡೆದ ಕುಟುಂಬಗಳು,ಮುರಿದು ಹೋದ ಸಂಬಂಧಗಳು ಮತ್ತು ನಿರಾಸಕ್ತ ಸಮಾಜ .ಹದಿಹರೆಯದಲ್ಲೆ ಹೇಳಲು ಹಿರಿಯರಿಲ್ಲ . ಕೇಳಲು ಕಿರಿಯರು ತಯಾರಿಲ್ಲ ಅದರ ಪರಣಾಮವೆ ಹೆಚ್ಚಿದ ಅಪರಾಧ ಮತ್ತು ಡ್ರಗ್‌ದುರ್ಬಳಕೆ
 ಅವರು ಹೇಳಿದ ಮಾತು ಮನ ತಟ್ಟಿತು."ಭೌತಿಕ ಅಗತ್ಯಗಳನ್ನು ಹೇಗಾದರೂ ಪೂರೈಸಬಹುದು. ಆದರೆ ಮಾನಸಿಕ ಮತ್ತು ಭಾವನಾತ್ಮಕ ಅಗತ್ಯಗಳ ಕೊರತೆಯಿಂದ ಯುವಪೀಳಿಗೆ ಸೊರಗುತ್ತಿದೆ.ಅವರಿಗೆ ಜೀವನದ ಮೇಲೆ ನಂಬುಗೆಯೆ ಇಲ್ಲವಾಗಿದೆ. ಅದಕ್ಕೆ ನಾವು ಮೊದಲು ಅವರಿಗೆ ದೇವರಲ್ಲಾದರೂ ನಂಬಿಕೆ ಮೂಡಿಸಿದರೆ ಸಮಸ್ಯೆ ತನ್ನಿಂದ ತಾನೆ ಪರಿಹಾರವಾಗುವುದು. ಈಗ ಚರ್ಚಗಳು ಮೊದಲು ಮಾಡಬೇಕಾದದ್ದೂ ಅದೆ ಕೆಲಸ. ಸಾಲ್ವೇಷನ್ ಆರ್ಮಿಯವರು ಈ ದಿಶೆಯಲ್ಲಿ ಕೆಲಸ ಮಾಡುತಿದ್ದಾರೆ. ಆದರೆ ಇವರೆಲ್ಲ ಚರ್ಚಿಗೆ ಬರಬೇಕು ಎಂದು ಕಡ್ಡಾಯ ಮಾಡಲಾಗುವುದಿಲ್ಲ. ಅವರ ಮನಸ್ಸು ಪರಿವರ್ತನೆಗೆ ಪ್ರಯತ್ನ ಮಾಡ ಬೇಕು. ಅನ್ನ ದೇವರಿಗೀಂತ ಇನ್ನು ದೇವರಿಲ್ಲ. ಮೊದಲು ಅದನ್ನು ಕೊಡುವ. ನಂತರ ಇನ್ನೆಲ್ಲ  "    ಸತ್ಯವೆನಿಸಿತು  ಅವರ ಮಾತು




Thursday, November 8, 2012

ಇದ್ದಲ್ಲಿಗೆ ಸಿದ್ಧ ಆಹಾರ -ಭಾಗ ೧

  
ಭಾಗ  .೧
ದುಡಿದದ್ಧು ಉಣ್ಣುವೆ ಎಂಬುದು ಬರಿ ಭ್ರಮೆ ಪಡೆದದ್ದು ಉಣ್ಣುವುದು ಸತ್ಯ ಎಂಬ ಮಾತಿನ ಪ್ರತ್ಯಕ್ಷ ದರ್ಶನ ನನಗೆ ಅಮೇರಿಕಾದಲ್ಲಿ ಆಯಿತು.ಕಳೆದ ಬಾರಿ ಹೊದಾಗ  ಹತ್ತು  ಹಲವು ಸಾರಿ ನ್ಯೂಯಾರ್ಕ ನಗರಿಯನ್ನು ಕಾಲ್ನೆಡೆಗೆಯಲ್ಲೆ ನೋಡುವ ಪ್ರಯತ್ನ ಮಾಡಿದ್ದೆ. ಅದರ ಫಲವಾಗಿ ನನಗೆ ಎಲ್ಲ ಪ್ರೇಕ್ಷಣೀಯ ಸ್ಥಳಗಳ ಹತ್ತಿರದ ದರ್ಶನವಾಯಿತು.ಈ ಸಲ ಅಮೇರಿಕಾ ದೇಶದ ನೈಜ ಜನ ಜೀವನ ನೋಡುವ ಹಂಬಲ ಹುಟ್ಟಿತು..
ನಮಗೆ ಬಹುಮಟ್ಟಿಗೆ ಅಲ್ಲಿನ ಜನ ಜೀವನದ ಪರಿಚಯವಾಗುವುದು  ಪುಸ್ತಕ, ಪತ್ರಿಕೆಗಳ ಮೂಲಕ ಮಾತ್ರ. ಇನ್ನು ಸಿನೆಮಾ  ಅಂತೂ ಹೇಳಿಕೇಳಿ ಭ್ರಮಾ ಲೋಕ.
ಆದರೆ ಈ ತೊಡಕು ತನ್ನಿಂದ ತಾನೆ ಪರಿಹಾರವಾದದ್ದು  ನಾರ್ಥ ಬ್ರನ್ಸವಿಕ್ ಚರ್ಚನ ಸಂಪರ್ಕದಿಂದ. ಅವರು Give away  ಕಾರ್ಯಕ್ರಮ ಮಾಡಿದಾಗ  ಅದು ನನಗೆ ಹೊಸದು ಅನಿಸಿದ್ದರಿಂದ ನಾನು ಅದರ ಕೆಲ ಫೋಟೊ ತೆಗೆದಿದ್ದೆ. ಅವನ್ನು ಅವರು ನೀಡಿದ ಇ. ಮೇಲ್‌ವಿಳಾಸಕ್ಕೆ ಕಳುಹಿಸಿದ್ದೆತಕ್ಷಣ ಅವರಿಂದ ಮಾರೋಲೆ ಬಂದಿತು ಸೋಮವಾರ ಸಂಜೆ ನಡೆವ ಕಮ್ಯುನ್ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಮಂತ್ರಣ ತಂದಿತು.  ಹೇಗಿದ್ದರೂ ನಿತ್ಯ ನಾನು ಹೋಗುವ ಗ್ರಂಥಾಲಯದ  ಹಾದಿಯಲ್ಲೆ ಇದೆ ಎಂದು ಹಾಜರಾದೆ, ಅಂದು ಹತ್ತುಜನ ಸೇರಿದ್ದರು. ಎಲ್ಲರೂ ದುಂಡಗೆ ಕುರ್ಚಿಹಾಕಿಕೊಂಡು ಕುಳಿತಿದ್ದರು. ಒಬೊಬ್ಬರಾಗಿ  ತಮ್ಮ ನೋವು ಸಂಕಟ ನಿವೇದನೆ ಮಾಡಿದರುಕೆಲವರು ತಮಗೆ ಬೇಕಾದವರ ಸಂಕಷ್ಟ ಪರಿಹಾರಕ್ಕೆ ಸಲಹೆ ಕೇಳಿದರು. ಷಾನ್ ಫುಟೈಲ್ ಅಲ್ಲಿನ ಪಾಸ್ಟರ್. ಅವರು ಎಲ್ಲರ ಮಾತುಕೇಳಿ . ಟಿಪ್ಪಣಿ ಮಾಡಿಕೊಂಡಿದ್ದರು ಒಬ್ಬೊಬ್ಬರಿಗೂ  ಸಾಂತ್ವನದ ನುಡಿ ಹೇಳಿದರು, ಆಗ ನನಗೆ ".ಸುಖ ಹಂಚಿಕೊಂಡರೆ ಹೆಚ್ಚಾಗುವುದು  ಕಷ್ಟ ಹಂಚಿಕೊಂಡರೆ ಕಡಿಮೆಯಾಗುವುದು" ಎಂಬ ಮಾತಿನ ಸತ್ಯದ ಅರಿವಾಯಿತು.. ದುಗುಡ ದುಮ್ಮಾನ ಅಡಗಿಸಿ ಇಟ್ಟಾಗ ದ್ವಿಗುಣವಾಗುವುದು.ಅಲ್ಲಿ ನನಗೆ ಮೆಚ್ಚುಗೆಯಾದ ಅಂಶವೆಂದರೆ ಅತಿಯಾದ ಧಾರ್ಮಿಕ ಭಾವನೆ ವ್ಯಕ್ತವಾಗಲಿಲ್ಲ. ನಾನು ಯಾವ ಧರ್ಮದವನು ಎಂಬುದನ್ನೂ ಅವರು ವಿಚಾರಿಸಲಿಲ್ಲ. ಅದು ಒಂದು ರೀತಿಯಲ್ಲಿ ಆತ್ಮನಿವೇದನೆ ಹಾಗೂ ಆಪ್ತ ಸಲಹೆಯ ಸಮ್ಮಿಶ್ರಣವಾಗಿತ್ತು.ಆ ಕಾರ್ಯ ಕ್ರಮ ಮುಗಿದಾಗ ಹೊರಡುವ ಮುನ್ನ  ಪ್ರತಿ ತಿಂಗಳೂ ವಾರ  ಬಿಟ್ಟು ವಾರ ಶುಕ್ರವಾರದಂದು  ಹಿರಿಯ ನಾಗರೀಕರಿಗೆ ಅವರ ಮನೆ ಬಾಗಿಲಿಗೆ ಉಚಿತ ಊಟ ನೀಡುವ ಕಾರ್ಯ ಕ್ರಮವಿರುವುದಾಗಿ ತಿಳಿಸಿದರು. ಅಮೇರಿಕಾದ ಜನ ಜೀವನದ ನಿಕಟ ಪರಿಚಯ ಪಡೆಯಲು ಇದು ಒಂದು ಉತ್ತಮ ಅವಕಾಶ  ಎಂದುಕೊಂಡೆ ,
"ನಾನೂ ಅವರ ಜೊತೆ ಸೇರಬಹದೆ "ಎಂದುವಿಚಾರಿಸಿದೆ.
 ಧಾರಾಳವಾಗಿ ಬರಬಹುದು.ನಮಗೆ ಏನೂ ತೊಂದರೆಇಲ್ಲ,ಎಂದರು
  ನನಗೆ ವಾಹನದ ಸೌಕರ್ಯಇಲ್ನ ನಾನು ಹೇಳಿದೆ.
ಪರಾವಾಇಲ್ಲ , ನಮ್ಮಕಾರಿನಲ್ಲೆ ಬರಬಹುದು., ನಾವೆ ನಿಮ್ಮನ್ನು ಕರದೊಯ್ಯುತ್ತೇವೆ, ಷಾನ್‌ಭರವಸೆ ನೀಡಿದರು.
"ದಯಮಾಡಿ  ಹತ್ತು ಗಂಟೆಗೆ ಚರ್ಚನ ಹತ್ತಿರ ಬನ್ನಿ  ನಾವು ಇಲ್ಲಿಂದ ಹೊರಟು  ಅಂದಾಜು  ಮೂರು ಗಂಟೆಗಳ ಕಾಲ  ಮನೆ ಮನೆಗೆ ಹೋಗಿ  ಆಹಾರ  ಕೊಡಬೇಕಾಗುವುದು , ಎಂದರು. ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ಚರ್ಚಿನಲ್ಲಿ ಭೇಟಿಯಾಗಲು ನಿರ್ಧರಿಸಲಾಯಿತು.
ಈ ಛಾರಿಟಿ ಮೀಲ್ಸನ ಉದ್ದೇಶ ಓಡಾಡಲಾಗದ  ಮನೆಯಲ್ಲಿ ಮೂಲೆ ಗುಂಪಾದ ಹಿರಿಯ ನಾಗರೀಕರಿಗೆ ಆಹಾರ ಒದಗಿಸುವುದಾಗಿತ್ತು.   ನನಗೇ ಅವರ  ಈ ಉದ್ದೇಶ  ಮನಮುಟ್ಟಿತು. ನಾನೂ ಕೈಲಾದ  ಅಳಿಲು ಸೇವೆ ಮಾಡಲು ಬಯಸಿದೆ. ನೊಂದವರಿಗೆ ಏನಾದರೂ ನನ್ನ  ಕಿರುಕಾಣಿಕೆ  ಕೊಡುಗೆ ನೀಡಲು ಬಯಸಿದೆ.
ಮನೆಗೆ ಬಂದ ನಂತರ ಮಗಳನ್ನು ಕೇಳಿದೆ. ಅವಳು ಸಂತೋದಿಂದ ಒಪ್ಪಿದಳು ಷಾನ್‌ಅವರನ್ನು ಸಂಪರ್ಕಿಸಿ ನಾನೂ ಸಹಾ ಪ್ರತಿಯೊಬ್ಬರಿಗೂ ನೀಡಲು ಏನಾದರೂ ಆಹಾರ ಪದಾರ್ಥ ತರಬಹುದೆಅಂದು ವಿಚಾರಿಸಿದೆ.
ಅವರು ಸಂತೋಷದಿಂದ ಒಪ್ಪಿದರು. ಕಳೆದ ವಾರವಷ್ಟೆ ನಮ್ಮ ತಾಯಿಯ ವಾರ್ಷಿಕ  ಆಚರಣೆಯಾಗಿತ್ತು. ಅವರ ನೆನಪಲ್ಲಿ ನಲವತ್ತು  ಐವತ್ತ ಮಂದಿಗೆ ಏನಾದರೂ ನೀಡಿದರೆ ನನ್ನ ಮನಸ್ಸಿಗೆ ನೆಮ್ಮದಿ ಸಿಗುವುದು ಎನಿಸಿತು.. ಏನು ಕೊಡಬಹುದು ಎಂಬುದರ ಬಗ್ಗೆ ಮಗಳು ಅಳಿಯನ ಜೊತೆ ಸಮಾಲೋಚನೆ ನೆಡೆಸಿದೆ. ಇಲ್ಲಿ ಬಳಸಲಾಗದ ಬೇಡವಾದ ತಂಗಳು ಪಂಗಳು ಕೊಡುವಹಾಗಿಲ್ಲ. ಎಲ್ಲ ಆರೋಗ್ಯನಿಯಮಗಳಿಗೆ ಅನುಗುಣ ವಾಗಿರಬೇಕು. ಅಳೆದೂ ಸುರಿದು ಕೊನೆ ಹತ್ತಿರದಲ್ಲೆ ಇದ್ದ ಡಂಕಿನ್ ಡೋನಟ್ಸ ನಲ್ಲಿ  ಡೊನಟ್ಟಸ ಕೊಂಡು ನೀಡಲು ನಿರ್ಧರಿಸಲಾಯಿತು.
ಡೊನಟ್ಸ  ಎಂದರೆ ಅದು ಒಂದು ಮಾದರಿಯ ಸಿಹಿ ತಿನಿಸು. ಬ್ರೆಡ್ ಮತ್ತು ಕೇಕಿನ  ಸಂಕರ.ಅದರಲ್ಲಿ ಹತ್ತು ಹಲವು ವೈವಿದ್ಯಗಳನ್ನು ಹೊಂದಿರುವುದು. ನಾಲಕ್ಕು ಡಾಲರಿಗೆ ಆರು ಡೊನಟ್ಗಳು ಬರುವವು.  ಅವೂ ತಾಜಾ ತಾಜಾ .ನಾಲಕ್ಕು ಡಜನ್ ಗಳನ್ನು ಕೊಂಡೆವು. ಅವರು ಅವನ್ನು  ಪ್ಯಾಕ್ ಮಾಡಿಕೊಟ್ಟರು. ಅದನ್ನು ಹಿಡಿದು  ಹತ್ತು ಗಂಟೆ  ಐದು ನಿಮಿಷಕ್ಕೆ ಚರ್ಚ್ ಮುಂದೆ ಇದ್ದೆ  ಆದರೆ ಅಲ್ಲಿ ಬಾಗಿಲು ಹಾಕಿತ್ತು ಬಹುಶಃ ನಾನು ತಡ ಮಾಡಿದೆ. ಅವರು ಆಗಲೆ ಹೊರಟಿರುವರು ಎಂದು ಹಳಹಳಿಸಿದೆ. ನಾನು ಕೊಡಬೇಕೆಂದು ತಂದಿದ್ದ ಡೊನಟ್ಸ   ಹಾಗೆ ಉಳಿದವು.ಕಾಣದ ಊರಿನಲ್ಲಿ ಇಷ್ಟೊಂದು ಡೊನಟ್‌ಗಳನ್ನು ಏನು ಮಾಡುವುದು ಎಂಬ ಚಿಂತೆಯಾಯಿತು.
 ಅಲ್ಲಿಯೆ ಇದ್ದ ವ್ಯಕ್ತಿ ಫೋನಿನಲ್ಲಿ ಷಾನ್ ಆರ್ ಯು ಕಮಿಂಗ್ ಸೂನ್‌ಎಂದ ಮಾತು ಕೇಳಿತು. ಷಾನ್ ಎಂಬುದು ಪಾಸ್ಟರರ್‌ನ ಹೆಸರು.  ನನ್ನ ಮುಖ ಅರಳಿತು. ಹಾಗೆ ಮಾತನಾಡಿದವನ ಹೆಸರು ರಿಚರ್ಡ. ಆತ ಈ ಸೇವಾಕಾರ್ಯದಲ್ಲಿ ಸಹಾಯಕ. ಆತ ಒಬ್ಬ ಎವಾಂಜಲಿಸ್ಟ್ ಅಂದರೆ ಧರ್ಮ ಪ್ರಚಾರಕ.
ಕೆಲವೆ ನಿಮಿಷಗಳಲ್ಲಿ ಷಾನ್‌ಅವರ  ಕಾರು ಬಂದಿತು. ಗ್ಯಾಸ್‌ಖಾಲಿಯಾದ್ದರಿಂದ ಆತನು ಬರುವುದು ತಡವಾಗಿತ್ತು ಅದಕ್ಕಾಗಿ ಮತ್ತೆ ಮತ್ತೆ  ಕ್ಷಮೆ ಯಾಚಿಸಿದ. ಬೆಳಗಿನಕಾರ್ಯ ಕ್ರಮಕ್ಕೆ ಮಧ್ಯಾಹ್ನ  ಬರುವವರನ್ನು ನೋಡಿರುವ ನನಗೆ ಆತನು ಐದು ನಿಮಿಷ ತಡವಾದದಕ್ಕೆ ಕ್ಷಮೆಯಾಚಿಸುವುದು  ಸಂಕೋಚ ಉಂಟು ಮಾಡಿತು.ನಾನು ಡೊ ನಟ್ಸ ಹಿರಿಯ ನಾಗರೀಕರಿಗೆ ಕೊಡಲು ತಂದಿರುವುದಾಗಿ ತಿಳಿಸಿದೆ.  ಅದರಿಂದ  ಅವನಿಗೆ ಬಹಳ ಖುಷಿಯಾಯಿತು. ಅಲ್ಲಿಂದ ನಾವು ಸೀದಾ ಸೀನಿಯರ್ ಸಿಟಿಜನ್ ಸೆಂಟರ್‌ಗೆ  ಹೋದೆವು ಅಲ್ಲಿ ಶ್ರೀಮತಿ ಗೇ ಎಂಬ ಹಿರಿಯ ಮಹಿಳೆ ಮೇಲ್ವಿಚಾರಿಕೆ. ಷಾನ್ ನನ್ನ ಪರಿಚಯ ಮಾಡಿಸಿದ.
 "ದಯವಿಟ್ಟು ಅಲ್ಲಿರುವ ಪುಸ್ತಕದಲ್ಲಿ ನಿಮ್ಮ ಹೆಸರು ವಿಳಾಸ ಬರೆಯಿರಿ, ನಿಮಗೆ ಎಷ್ಟು ಹೊತ್ತು ಬೇಕಾದರೂ ಆರಾಮಾಗಿ ಇರಬಹುದು:" ಎಂದಳು. ಇಲ್ಲಿನ ಸೀನಿಯರ್‌ ಸಿಟಿಜನ್‌ಸೆಂಟರ್‌ನಲ್ಲಿ ಹಿರಿಯ ನಾಗರೀಕರು ಯಾವಾಗ ಬೇಕಾದರೂ ಬರಬಹುದು. ಅಲ್ಪೋಪಹಾರವೂ ಆ ಸಮಯದಲ್ಲಿ ಇದ್ದರೆ ಕೊಡುವರು.
 ಆದರೆ ಷಾನ್ ನಾನು ಅಲ್ಲಿನ ಸೌಲಭ್ಯಕ್ಕಾಗಿ  ಬಂದಿಲ್ಲ. ಚಾರಿಟಿ ಮೀಲ್ಸ  ಹಂಚಲು ಅವನ ಜೊತೆ ಹೊರಟಿರುವೆ ಅಂದು ತಿಳಿಸಿದ. ಅಲ್ಲದೆ ಹಂಚಲು ಡೊ ನಟ್ ತಂದಿರುವುದಾಗಿ ತಿಳಿಸಿದ.
ಅಲ್ಲಿರುವ ಹಿರಿಯನಾಗರೀಕರು ಆರಾಮಾಗಿರುವಂತೆ ಕಂಡಿತು. ಮೂವರು ವಯಸ್ಸಾದ  ಮಹಿಳೆಯರು, ನಾಲಕ್ಕು ಜನರು ಪುರುಷರು ಇದ್ದರು. ಒಬ್ಬ ವ್ಯಕ್ತಿ ಲ್ಯಾಪ್‌ ಟಾಪಿನಲ್ಲಿ ಏನೋ ಕೆಲಸ ಮಾಡುತಿದ್ದ. ಇನ್ನೊಬ್ಬ ಮಹಿಳೆ ಐ- ಫೋನಿನಲ್ಲಿ ಮಾತನಾಡುತ್ತಿರುವುದು  ಕಂಡುಬಂದಿತು ಒಬ್ಬ ವ್ಯಕ್ತಿ ಬೆಳಗಿನ ತಿಂಡಿ ಸೇವಿಸುತಿದ್ದ..ಇಬ್ಬರು ದಿನಪತ್ರಿಕೆ ಕೈನಲ್ಲಿ ಹಿಡಿದಿದ್ದರು. ಎಲ್ಲರೂ ಒಳ್ಳೆಯ ಉಡುಪು ಧರಿಸಿದ್ದರು.ಅವರೆಲ್ಲರ ಮುಖದಲ್ಲಿ ನೆಮ್ಮದಿಯ ನಗೆ ಕಾಣುತಿತ್ತು. ಅಲ್ಲಿರುವ ಹಾಲಿನಲ್ಲಿ ಪುಸ್ತಕ, ನಿಯತಕಾಲಿಕಗಳಿದ್ದವು. ಮೂಲೆಯಲ್ಲಿ ಟಿವಿ ಇದ್ದಿತು. ಅದು ಒಂದು ಮಧ್ಯಮ ವರ್ಗದವರ ಮನೆಗಿಂತಾ ಅಚ್ಚುಕಟ್ಟಾಗಿತ್ತು. ಅಲ್ಲಿನ ಸೂಚನಾ ಫಲಕದಲ್ಲಿ ಸ್ವಯಂ ಸೇವಕರ ನೊಂದಾವಣೆಯ ಸೂಚನೆ ಇತ್ತು. ಹಿರಿಯ ನಾಗರೀಕರಿಗೆ ದೊರಕುವ ಸೌಲಭ್ಯಗಳು ಮತ್ತು ಅವರಿಗಾಗಿರುವ ಕಾರ್ಯಕ್ರಮದ ವಿವರಣೆ ಫಲಕದ ಮೇಲೆ ಇತ್ತು
ಷಾನ್ ಅಲ್ಲಿ ಇರುವ ಒಂದು ಕಡತ ತೆಗೆದುಕೊಂಡು ದಾಖಲೆಯಲ್ಲಿ ಸಹಿ ಮಾಡಿದರು. ಆಗಲೆ ಸಿದ್ದವಾಗಿಟ್ಟಿದ್ದ  ಬಿಸಿ ಊಟ ಮತ್ತು ಸಂರಕ್ಷಿತ ಆಹಾರದ ಪೊಟ್ಟಗಳಿದ್ದ ಎರಡು ಚೀಲಗಳನ್ನು ಹೊತ್ತು ಕಾರಿನತ್ತಸಾಗಿದರು.. ವಾರದ ನಿಗದಿತ ದಿನದಂದು ನೋಂದಾಯಿತರಾದ ಹಿರಿಯ ನಾಗರೀಕರಿಗೆ ಆಹಾರವನ್ನು ಅವರ ಮನೆಗೆ ಮುಟ್ಟಿಸುವ  ಈ ಯೋಜನೆಯಲ್ಲಿ ಹಲವು ಸ್ವಯಂ ಸೇವಕರು ಭಾಗವಹಿಸಿಸುವರು.. ಅವರಲ್ಲಿ ನನ್ನ ಗೆಳೆಯ ಷಾನ್‌ಕೂಡಾ  ಒಬ್ಬರು. ನಿಗದಿತ ಪ್ರದೇಶದಲ್ಲಿ ಮನೆಯಿಂದ ಹೊರ ಬರಲಾರದ ನಿಸ್ಸಾಹಾಯಕ ಹಿರಿಯ ನಾಗರೀಕರು ಇದ್ದಲ್ಲಿಗೆ  ಹೋಗಿ ಸಿದ್ದ ಆಹಾರ ಕೊಡುವ ಕಾರ್ಯ ಕ್ರಮವೆ ಈ ಚಾರಿಟಡಿ ಮೀಲ್ ಉದ್ದೇಶವಾಗಿತ್ತು.ಇದಕ್ಕೆ ಸರ್ಕಾರದ ಸಹಾಯ ಧನದ ಜೊತೆಗೆ ದಾನಿಗಳ ಕೊಡುಗೆಯೂ ಕೂಡಿ ಕೆಲಸ ಮುಂದುವರಿದಿತ್ತು.ಅಗತ್ಯ ಆಹಾರ ಸಿನಿಯರ್‌ ಸೆಂಟರ್‌ನವರೆ ಸಿದ್ಧಮಾಡುತಿದ್ದರು.
ನಾನು ಇದುವರೆಗೆ ಅಮೇರಿಕಾದ ಪ್ರೇಕ್ಷಣೀಯ ಸ್ಥಳ ನೋಡಿದ್ದೆ. ಶ್ರೀಮಂತ ವರ್ಗದವರ ಮಹಲುಗಳನ್ನು ದೂರದಿಂದ ನೋಡಿದ್ದರೆ  ಮಧ್ಯಮವರ್ಗದವರ ಮನೆಗಳ  ಪರಿಚಯ ನಿಕಟವಾಗಿತ್ತು.. ಈಗ ನಾವು ಸಮಾಜದ ಕೆಳಸ್ಥರದ ಜನರ ವಾಸಸ್ಥಳಕ್ಕೆ ಹೊರಟಿದ್ದೆವು.ಇಲ್ಲಿನ ನಗರ ಯೋಜನೆಯ ಪರಿಣತೆ ಕಂಡು ನನಗೆ ಅಚ್ಚರಿಯಾಯಿತು. ಅತಿ ಬಡವರು ಇರುವ ಮನೆಗಳ ಸಮೂಹ ಅಲ್ಲಿದ್ದರೂ ಎಲ್ಲ ಮನೆಗಳೂ ಏಕ ರೂಪದ ಸೌಲಭ್ಯ ಹೊಂದಿದ್ದವು. ಎಲ್ಲವೂ ಸಮೂಹ ಗೃಹ ಸಮುಚ್ಚಯಗಳೆ. ರಸ್ತೆ ಮರ  ಗಿಡ  ಬಯಲು ಎಲ್ಲ ಕ್ರಮಬದ್ದ. ಆದರೆ ಮನೆಗಳು ಮಾತ್ರ ಚಿಕ್ಕವು ನಮ್ಮಲ್ಲಿನ ಚಾಳಿನ ಹಾಗೆ. ಪ್ರತಿ ಮನೆಗೂ ಒಂದು ಹಾಲು ಮತ್ತು ಕಿಚನ್ ಚಿಕ್ಕ ರೆಸ್ಟ  ರೂಮು ಯಾವುದೆ ಅಲಂಕಾರವಿಲ್ಲ. ಎಲ್ಲೂ ಟೈಲ್ಸ , ಕಟ್ಟಿಗೆ ಪೆನಲ್ ಇಲ್ಲ. ಬರಿ ಒರಟು ಸಿಮೆಂಟ್ ನೆಲ. ಅಲ್ಲಿ ಯಾವ ಮನೆಯಲ್ಲೂ ಕಾರ್ಪೆಟ್ಟುಗಳಿಲ್ಲ.ಅತಿ ಸರಳ ಪೀಠೋಪಕರಣಗಳು. ಕೆಲವರದು ಸ್ವಂತ ಮನೆ. ಅನೇಕರು ಬಾಡಿಗೆಗೆ ಇರುವವರು. ಬಾಡಿಗೆ  ಬಹು ಕಡಿಮೆ. ಸಾಧಾರಣ ಮನೆಗಳ ಕಾಲು ಪಾಲಿಗೂ ತುಸು ಹೆಚ್ಚು. ಬಹುತೇಕ ಆಫ್ರಿಕನ್‌ ಅಮೇರಿಕನ್ನರೆ  ಅಲ್ಲಿನ ನಿವಾಸಿಗಳು. ಅಲ್ಲಿ ಗರಾಜು ಇಲ್ಲ. ಬೇರೆ  ಕಡೆಯಂತೆ ಕಾರು ನಿಲ್ಲಿಸಲು ಗುರುತು ಮಾಡಿದ ಜಾಗಗಗಳೂ ಇಲ್ಲ.  ಅಲ್ಲೊಂದು ಇಲ್ಲೊಂದು ಹಳೆಯ ಕಾರುಗಳು ನಿಂತಿದ್ದವು.  ಅಹಾರ ವಿತರಣೆ ಹಿರಿಯ ನಾಗರೀಕರಿಗೆ ಮಾತ್ರ. ಬೇರೆ ಇತರ ಕಡೆಗಳಲ್ಲಿ ವಾರದ ಕೆಲಸದ ದಿನಗಳಲ್ಲಿ ವಸತಿ ಸಮೂಹಗಳು ನಿರ್ಮಾನುಷ.ಯಾವಾಗಲೂ ಜನರು  ಕಾರು  ಹತ್ತಲು ಹೊರಬರುವರೆ ವಿನಹ  ಸುಮ್ಮನೆ ಬರುವುದಿಲ್ಲ. ನಿಂತು ಹರಟೆ ಹೊಡೆಯುವುದನ್ನು ನಾನು ನೋಡಿಯೆ ಇರಲಿಲ್ಲ. ಅಲ್ಲಿ ಜನ ವಸತಿ  ದಟ್ಟವಾಗಿತ್ತು. ಅಲ್ಲಲ್ಲಿ ಮೂರ ನಾಲಕ್ಕು ಜನ ಗುಂಪಾಗಿ ನಿಂತು ಹರಟೆ ಹೊಡೆಯುವುದು ಕಂಡಿತು. ನಮ್ಮ ದೇಶದಂತೆ ಹೀಗೆ ಆರಾಮಾಗಿ ನಿಂತವರನ್ನು ಇಲ್ಲಿ ನೋಡಿದ್ದು ಇದೆ ಮೊದಲು. ಕಾರಣ ಅವರು ಯಾರೂ ಕೆಲಸಕ್ಕೆ ಹೋದಂತೆ ಕಾಣಲಿಲ್ಲ. ಬಹುಶಃ  ಅವರು ನಿರುದ್ಯೋಗಿಗಳು ಆಗಿರಬಹುದು
                                                                        ಮುಂದುವರೆಯುವುದು..

Wednesday, November 7, 2012

ಅಭಯ ನೀಡಿದ ಅಂಬೇಡ್ಕರ್:






ಹೊಸ ಕಾಲೇಜಿಗೆ ಪ್ರಿನ್ಸಿಪಾಲನಾಗಿ  ಬಂದು ಒಂದುವಾರ ಆಗಿರಬಹುದು, ವಿದ್ಯಾರ್ಥಿಗಳ ಒಂದು ಗುಂಪು ನನ್ನನ್ನು ಕಾಣಲು ಬಂತು. ಅವರು ತುಸು ಉದ್ವೇಗಕ್ಕೆ ಒಳಗಾದಂತೆ ಇದ್ದರು. ಕಾರಣ ತಿಳಿಯಲಿಲ್ಲ. ಏನುವಿಷಯ? ಏಕೆ ಬಂದಿರಿ?, ಕೇಳಿದೆ. ಅವರೆಲ್ಲ ನಮ್ಮ ಕಾಲೇಜಿನಲ್ಲಿ ಅಂಬೇಡ್ಕರ್ ಶತಮಾನೋತ್ಸವವನ್ನು ಆಚರಿಸಬೇಕೆಂಬ  ಬೇಡಿಕೆ ಇಡಲು ಬಂದಿದ್ದರು. ನನಗೆ ಆಗ ನೆನಪಾಯಿತು ೧೯೯೫ ಡಾ. ಬಾಬಾ ಸಾಹೇಬ್ಅಂಬೇಡ್ಕರ್ ಅವರ ಜನ್ಮ ಶತಮಾನೋತ್ಸವ ಎಂದು. ಈವರೆಗೆ ನಾನು ಕೆಲಸ ಮಾಡಿದ ಯಾವುದೇ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ಎಂದರೆ ಒಂದು ದಿನ ರಜೆ . ಯಾವುದೆ ಆಚರಣೆ ಇರಲಿಲ್ಲ. ಇಲ್ಲಿನ ಹೊಸ ಬೇಡಿಕೆ ಕುರಿತು ತೀರ್ಮಾನ ತಕ್ಷಣ ಹೇಳುವುದು ಹೇಗೆ.? ಅದಕ್ಕೆ ಒಂದೆರಡು ದಿನಗಳಲ್ಲಿ ಸಹೋದ್ಯೋಗಿಗಳ ಜೊತೆ ಸಮಾಲೋಚನೆ ಮಾಡಿ  ತಿಳಿಸುವೆ ಎಂದು ಸಮಾಧಾನ ಮಾಡಿ ಕಳುಹಿಸಿದೆ.
ಸಂಜೆ ಉಪನ್ಯಾಸಕರ ಸಭೆ ಕರೆದು ವಿಷಯ ತಿಳಿಸಿದೆ. ಮೊದಲೇ ಇಲ್ಲಿನ ವಾತಾವರಣ ಚೆನ್ನಾಗಿಲ್ಲ. ಇದುವರೆಗೂ ಆ ರೀತಿಯ ಯಾವುದೆ ಕಾರ್ಯಕ್ರಮ ಮಾಡಿಲ್ಲ. ಸುಮ್ಮನೆ ಹಣ ಖರ್ಚು. ಕಾಲೇಜಿನ ಸುತ್ತ ಮುತ್ತ ಇರುವ ಜನರಿಂದ  ಗಲಭೆ, ಗೊಂದಲ ಆಗಬಹುದು. ಅವರನ್ನು ನಿಯಂತ್ರಿಸುವುದು ಕಷ್ಟ, ಹಿಂದಿನವರು ಉದ್ದೇಶಪೂರ್ವಕವಾಗಿ ತೊಂದರೆ ನೀಡಲು ವಿದ್ಯಾರ್ಥಿಗಳನ್ನು ಪ್ರಚೋದಿಸಿ ಕಳುಹಿದ್ದಾರೆ. ಒಪ್ಪಿಗೆ ನೀಡಿದರೆ ಅವರ ಸಂಚಿಗೆ ಬಲಿಯಾಗಬೇಕಾಗುವುದು. ಎಚ್ಚರಿಕೆಯಿಂದ ಇರುವುದು ಅಗತ್ಯ. ಸಮಾರಂಭ ಮಾಡಿದರೆ ಗಲಭೆ ಎಬ್ಬಿಸಿ ಶಾಂತಿಭಂಗಮಾಡಿ ಕೆಟ್ಟಹೆಸರು ತರುವುದು, ಮಾಡದಿದ್ದರೆ ದಲಿತ ವಿರೋಧಿ ಎಂದು ಪಟ್ಟ ಕಟ್ಟುವ ಹುನ್ನಾರ. ಅವರು ಹಾಕಿದ ಬಲೆಗೆ ಬೀಳುವುದು ಬೇಡ ಎಂದು ಸಲಹೆ ನೀಡಿದರು. ಒಂದಂತೂ ನಿಜ. ಬಹುಸಂಖ್ಯಾತ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸದೆ ಇರುವುದು  ದಲಿತ ವಿರೋಧಿ ಧೋರಣೆಯೆ ಎಂದು ನನಗೂ ಅನಿಸಿತು. ಅಲ್ಲದೆ ಡಾ. ಅಂಬೇಡ್ಕರ್ ದಲಿತನಾಯಕರು ಮಾತ್ರ ಅಲ್ಲ ಸಂವಿಧಾನ ನಿರ್ಮಾತೃವಾದ ರಾಷ್ಟ್ರೀಯನಾಯಕರು. ಅಲ್ಲದೆ ಇದು ಅವರ ಜನ್ಮ ಶತಮಾನೋತ್ಸವ. ಆದರೆ  ಕಾಲೇಜಿನ ಪರಿಸ್ಥಿತಿ ಬಹಳ ಶೋಚನೀಯವಾಗಿತ್ತು. ಬೋಧಕವರ್ಗದವರು ತಟಸ್ಥರಾಗಿ ಉಳಿದರು. ಯಾರೂ ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ.ಬಹುತೇಕರಿಗೆ ಅದು ಅಸಹನೆಯ ವಿಷಯವಾಗಿತ್ತು. ಆದ್ದರಿಂದ ಬಹಳ ಜನ ಆತಂಕಕ್ಕೊಳಗಾದರು. ಸರಿ  ನಿರ್ಧಾರ ತೆಗೆದುಕೊಳ್ಳುವ ಹೊಣೆ ಪೂರ್ಣ ನನ್ನದೆ ಆಯಿತು.
ಮನೆಯಲ್ಲಿ ಬಹಳ ಹೊತ್ತು ಇದೇ ಯೋಚನೆ ಮಾಡಿದೆ. . ರಾತ್ರಿ ನಿದ್ದೆ ಬರಲಿಲ್ಲ. ಇದು ಒಂದು ರೀತಿಯ ಸವಾಲು. ಕೊನೆಗೆ  ಮಕ್ಕಳನ್ನೆ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಉತ್ತಮ ಎನಿಸಿತು.
ಮಾರನೆದಿನ ದಲಿತ ಉಪನ್ಯಾಸಕರನ್ನೂ ಕೂಡಿಸಿಕೊಂಡು ದಿನಾಚರಣೆ ಬೇಡಿಕೆ ಇಟ್ಟ ವಿದ್ಯಾರ್ಥಿಗಳು ಹಾಗೂ ತರಗತಿಯ ಪ್ರತಿನಿಧಿಗಳ ಸಭೆ ಸೇರಿಸಲಾಯಿತು.
ಸಭೆಯಲ್ಲಿ ಮೊದಲನೆಯದಾಗಿ ಸಂವಿಧಾನ ಶಿಲ್ಪಿಯ ಶತಮಾನೋತ್ಸವದ ಪ್ರಸ್ತಾವನೆ ಮಾಡಿರುವುದಕ್ಕಾಗಿ ಅವರನ್ನು ಅಭಿನಂದಿಸಿದೆ. ಅದು ಕಾಟಾಚಾರದ ಸರ್ಕಾರಿ ಆಚರಣೆಯಾಗದೆ ನಮ್ಮೆಲ್ಲರ ಗೌರವ ಸೂಚಿಸುವ ಸಮಾರಂಭವಾದರೆ ಸಾರ್ಥಕ ಎಂದು ತಿಳಿಸಿದೆ. ಅದನ್ನು ವಿಶೇಷವಾಗಿ ವಿಜೃಂಭಣೆಯಿಂದ ಆಚರಿಸುವ ಅಗತ್ಯವನ್ನು ಒತ್ತಿ ಹೇಳಿದೆ.
ಜಯಂತಿ ಮಾಡಲು ನನಗಿರುವ ಉತ್ಸಾಹ ಅವರಿಗೆ ಆಶ್ಚರ್ಯ ಉಂಟುಮಾಡಿತು. ಅವರು ಇದನ್ನು ನನ್ನ ಬಳಿ ತರುವಾಗ ನಾನು ಹಿಂದು ಮುಂದು ನೋಡುವೆ, ಸಮಾರಂಭದ ಆಚರಣೆಯನ್ನು ವಿರೋಧಿಸುವೆ. ಆಗ ದಲಿತ ವಿರೋಧಿ ಎಂದು ಹಣೆ ಪಟ್ಟಿ ಹಚ್ಚಿ ಗೊಂದಲ ಎಬ್ಬಿಸಲು ಸಿದ್ಧರಾಗಿದ್ದರು.ಇದು ಒಂದು ರೀತಿಯಲ್ಲಿ ನನ್ನ ಸತ್ವ ಪರೀಕ್ಷೆಯಾಗಿತ್ತು.
ಅವರ ಒಳಉದ್ದೇಶ ಏನೇ ಇರಲಿ, ಸಂವಿಧಾನ ನಿರ್ಮಾಪಕನಿಗೆ ಗೌರವ ತೋರುವ ಅವಕಾಶವನ್ನು ಬಿಡಬಾರದು ಎಂದು ನಿರ್ಧರಿಸಿದೆ,
ಎಲ್ಲರಿಗೂ ದಿನಾಚರಣೆಯನ್ನು ವಿಶೇಷವಾಗಿ ಆಚರಿಸೋಣ ಎಂದು ತಿಳಿಸಿದೆ. ಬರಿ ಕಾಲೇಜು ಮಟ್ಟದಲ್ಲಿ ಮಾಡಿದರೆ ಸಾಲದು ಅದು ಜಿಲ್ಲೆಯ ಎಲ್ಲರ  ಗಮನ ಸೆಳೆಯುವಂತೆ ಅದ್ಧೂರಿಯಾಗಿ  ಆಚರಿಸಬೇಕು ಎಂಬ ನನ್ನ ಆಶಯ ತಿಳಿಸಿದೆ.
ಅದಕ್ಕಾಗಿ ನಮ್ಮಲ್ಲಿರುವ ಹಿರಿಯ ಉಪನ್ಯಾಸಕರು ಮತ್ತು ಎಲ್ಲ ದಲಿತ ಸಿಬ್ಬಂದಿ ಹಾಗು ವಿದ್ಯಾರ್ಥಿ ಪ್ರತಿನಿಧಿಗಳಿಂದ ಕೂಡಿದ ಸಮಿತಿ ರಚಿಸಿದೆವು.ಎಲ್ಲರೂ ಕುಳಿತು ಯಾವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳ ಬೇಕೆಂಬುದನ್ನು ಸಮಾಲೋಚನೆ ಮಾಡಲು ಇನ್ನೊಂದು ದಿನ ಗೊತ್ತು ಮಾಡಲಾಯಿತು.
ಇಬ್ಬರು ಸಹೋದ್ಯೋಗಿಗಳ ಜತೆ ದೀರ್ಘವಾಗಿ ಚರ್ಚೆ ಮಾಡಿದೆ. ಮೊದಲನೆಯದಾಗಿ ಕಾರ್ಯಕ್ರಮಕ್ಕೆ ಬೇಕಾದ ಹಣಕಾಸು ಅದು ಅಂಥಹ ದೊಡ್ಡ ಸಮಸ್ಯೆ ಅನಿಸಲಿಲ್ಲ. ಎಲ್ಲ ಸಿಬ್ಬಂದಿ ತಮ್ಮ ಸಹಕಾರದ ಕುರುಹಾಗಿ ವಂತಿಗೆ ನೀಡಬೇಕೆಂದು ಮನವಿಮಾಡಿ ಕೊಂಡೆವು. ಕೆಲವರಿಗೆ ಮನಸ್ಸಿಲ್ಲದಿದ್ದರೂ ದಲಿತ ವಿರೋಧಿ ಹಣೆ ಪಟ್ಟಿ ಬರುವುದೆಂಬ ಭಯದಿಂದ ಒಪ್ಪಿದರು. ನಂತರ ವಿದ್ಯಾರ್ಥಿಗಳು ನೀಡಬೇಕಾದ ವಂತಿಗೆಯ ಹಣದ ನಿರ್ಧಾರವನ್ನು ಅವರಿಗೆ ಬಿಡಲು  ಬಯಸಿದೆವು.  ಅದೇ ಸಮಯದಲ್ಲಿ ಶತಮಾನೋತ್ಸವದ ನೆನಪಲ್ಲಿ ಜಿಲ್ಲಾಮಟ್ಟದ ಯಾವುದಾದರೂ ಒಂದು ಸಾಂಸ್ಕೃತಿಕ ಸ್ಪರ್ಧೆ  ನಡೆಸಿ ಅದನ್ನು ಪ್ರತಿವರ್ಷ ಮುಂದುವರಿಸುವ ಯೋಜನೆ ಹಾಕಲಾಯಿತು.
ಇದು ವಿಶೇಷ ಸಂದರ್ಭವಾದ್ದರಿಂದ  ದಲಿತಪರ ಸಂಘ ಸಂಸ್ಥೆಗಳ ಸಹಕಾರ  ಹೇಗೆ ಪಡೆಯಬಹುದು ಎಂಬುದನ್ನು ವಿದ್ಯಾರ್ಥಿ ಪ್ರತಿನಿಧಿಗಳೆ ಯೋಚಿಸಿ ತಿಳಿಸಲು  ಹೇಳಿದೆವು.
ಮತ್ತೆ ಸಭೆ ಸೇರಿಸಲಾಯಿತು.ಅಲ್ಲಿ ಮೊದಲನೆಯದಾಗಿ ನಮ್ಮಲ್ಲಿನ ಎಲ್ಲ ಸಿಬ್ಬಂದಿಯೂ ಶತಮಾನೋತ್ಸವಕ್ಕೆ ತಮ್ಮ ವಂತಿಗೆ ನೀಡುವುದಾಗಿ ಘೋಷಿಸಿದರು ಇದು ಮಕ್ಕಳಲ್ಲಿ ಅಚ್ಚರಿ ಮೂಡಿಸಿತು.  ಜಾತಿ ಮತದ ಬೇಧವಿಲ್ಲದೆ ಸಹಕರಿಸಿರುವುದು ಅವರಿಗೆ ಖುಷಿ ತಂದಿತು. ಎಲ್ಲ ಪ್ರತಿನಿಧಿಗಳೂ ಮಕ್ಕಳಿಂದಲೂ ತರಗತಿವಾರು ವಂತಿಗೆ ಸಂಗ್ರಹಿಸಲು ಮುಂದಾದರು. ಹಣಕಾಸಿನ ವ್ಯವಸ್ಥೆಯಾಯಿತು. ನಂತರ ಅವರಿಗೆ ಕಾಲೇಜಿನ ಸ್ಥಿತಿ ತೋರಿಸಿದೆ. ಸಾವಿರಾರು ಜನ ಬರುವರು. ಸಾಧ್ಯವಾದರೆ ಮಂತ್ರಿಗಳನ್ನೂ ಕರೆಸಬಹುದು. ಕಾಲೇಜು ಈಗಿರುವ ಹೀನ ಸ್ಥಿತಿನೋಡಿದರೆ ಬಂದವರು ಏನೆನ್ನಬಹುದು. ಇದರಿಂದ ಕಾರ್ಯಕ್ರಮಕ್ಕೆ ಶೋಭೆ ಬಾರದು. ಗೋಡೆಯ ಮೇಲಿರುವ ಅಶ್ಲೀಲ ಬರಹ  ಅಳಿಸಬೇಕು. ಕಟ್ಟಡಕ್ಕೆ ಸುಣ್ಣ ಬಣ್ಣ ಮಾಡಿಸಿದರೆ ಚಂದ ಆದರೆ ಇಲಾಖೆಯಿಂದ ಮಾಡಿಸಲು ತಿಂಗಳುಗಳೆ ಆಗಬಹುದು.  ಏನು ಮಾಡೋಣ ಎಂದು ಸಮಸ್ಯೆಯನ್ನು ಅವರ ಮುಂದೆ ಇಟ್ಟೆ. ನೀವೇ ಒಂದು ಪರಿಹಾರ ಹೇಳಿಎಂದು ನನಗೆ ಒತ್ತಾಯಿಸಿದರು.
ಕಾಲೇಜಿನ ಹೊರಭಾಗಕ್ಕೆ ಸುಣ್ಣ ಹಚ್ಚಿಸಲೇಬೇಕು. ಬೇಕಾದರೆ ಹಳದಿಪುಡಿ ಸೇರಿಸ ಬಹುದು. ಅದರ ಖರ್ಚುವೆಚ್ಚ ಕಾಲೇಜಿನಿಂದ ಭರಿಸಬಹುದು. ಆದರೆ ಆ ಕೆಲಸವನ್ನು ಮಾಡಲು ಕೆಲಸಗಾರರ ಕೂಲಿ ಕೊಡುವುದು ನಮಗೆ ಆಗದು. ಜತೆಗೆ ಅವರು ವಾರಗಟ್ಟಲೆ ಕೆಲಸ ಮಾಡುವರು.ಅದಕ್ಕೆ ನಾವೇ ಮಾಡುವುದು ಉತ್ತಮ ಎಂದು ಸೂಚಿಸಿದೆ. ನಮ್ಮಲ್ಲಿನ ಬಹುತೇಕರು ಕೈಮುಟ್ಟಿ ಕೆಲಸ ಮಾಡುವ ಹಿನ್ನೆಲೆಯವರು. ಆಗ ಆರು ಮಂದಿ ವಿದ್ಯಾರ್ಥಿಗಳೆ ತಾವು ಸುಣ್ಣಬಣ್ಣ ಹಚ್ಚುವ  ಕೆಲಸ ಮಾಡುವುದಾಗಿ ಮುಂದೆ ಬಂದರು. ಅವರಿಗೆ ಅಗತ್ಯವಾದ ಸಾಮಗ್ರಿಗಳನ್ನು ಕಾಲೇಜಿನಿಂದಲೆ ಒದಗಿಸಲು ತಿಳಿಸಿದೆ.
ಮಾರನೆ ದಿನ  ಕಾಲೇಜಿಗೆ ನಾನು ಬಂದಾಗ ಅಲ್ಲಿನ ದೃಶ್ಯ ನೋಡಿ ನನಗೆ ಒಂದು ಕ್ಷಣ ಕಣ್ಣು ಉಜ್ಜಿ ಕೊಳ್ಳುವಂತಾಯಿತು. ಆರಲ್ಲ ಹನ್ನೆರಡುಜನ ಕೆಲಸ ಮಾಡುತಿದ್ದರು.ನಮ್ಮ ಕಾಲೇಜಿನ ಕಲಿಗಳು ಕಾಲೇಜಿನ ಗೋಡೆಗಳ ಮೇಲಿದ್ದ ಸಾಹಿತ್ಯವನ್ನೆಲ್ಲ ಅಳಿಸಿಹಾಕಿ ಸುಣ್ಣ ಬಣ್ಣ ಹಚ್ಚುತ್ತಿದ್ದರು. ನಾಲ್ವರು ಹೊರಭಾಗದಲ್ಲಿ, ಮೂವರು ಒಳಭಾಗದಲ್ಲಿ ಡಿಸ್ಟೆಂಪರ್ ಹಚ್ಚುತ್ತಿದ್ದರು. ಇಬ್ಬರುಮಾಳಿಗೆಯ ಮೇಲಿಂದ ಇಳಿದು ಸಜ್ಜದ . ಮೇಲ್ಭಾಗದಲ್ಲಿ ಕೆಲಸದಲ್ಲಿ ತೊಡಗಿದ್ದರು. ಉಳಿದವರು ಸಹಾಯಮಾಡುತಿದ್ದರು. ಅದೂ ಯಾರನ್ನು ಬಹಳ ಒರಟರು, ಅಶಿಸ್ತಿಗೆ ಕಾರಣರು ಎಂದು ನನಗೆ ತಿಳಿಸಿದ್ದರೋ ಅವರೆ ಖುಷಿಯಿಂದ ಕೆಲಸ ಮಾಡುತಿದ್ದರು.
ಅಂದೆ ಇನ್ನೊಂದು ವಿಷಯದಲ್ಲಿ ಒಮ್ಮತ ಮೂಡಿಬಂತು. ಈ ಸಮಾರಂಭದ ಸ್ಮರಣಾರ್ಥ ಜಿಲ್ಲಾ ಮಟ್ಟದ ಭಾವ ಗೀತೆ ಸ್ಪರ್ಧೆಯನ್ನು ನಡೆಸಲು ಮತ್ತು ಸ್ಥಳೀಯ ದಲಿತ ಸಂಘಟನೆಗಳು ಎಲ್ಲ ಬಹುಮಾನಗಳನ್ನು ಪ್ರಾಯೋಜಿಸುವುದನ್ನು ಒಪ್ಪಲಾಯಿತು. ಎರಡೇ ದಿನದಲ್ಲಿ ನಮ್ಮವರು ಮೂರು ಅಡಿ ಎತ್ತರದ ದೊಡ್ಡ  ಷೀಲ್ಡ್ ತಂದರು.ಅದನ್ನು ರೋಲಿಂಗ್ಷಲ್ಡ್ ಮಾಡಬೇಕೆಂದು ಪ್ರತಿವರ್ಷ ಸ್ಪರ್ಧೆ ನಡೆಸಬೇಕೆಂದು ಅಂದುಕೊಂಡೆವು. ಅದನ್ನು ಸಂಘಟಿಸಲು ಕನ್ನಡ ಉಪನ್ಯಾಸಕರಿಗೆ ಹೊಣೆ ವಹಿಸಲಾಯಿತು. ಹಾ ,ಹಾ ಎನ್ನುವುದರಲ್ಲಿ ಕಾಲೇಜು ಲಕಲಕ ಹೊಳೆಯತೊಡಗಿತು. ಇಬ್ಬರು ಸಹೋದ್ಯೋಗಿಗಳ ಜೊತೆ ಸ್ಥಳೀಯ ಶಾಸಕರನ್ನು ಬೆಂಗಳೂರಿನ ಶಾಸಕರ ಭವನದಲ್ಲಿ ಕಂಡೆವು. ನಮ್ಮದು ಮೀಸಲು ಕ್ಷೇತ್ರ. ಶಾಸಕರು ಅಂಬೇಡ್ಕರ್ ಶತಮಾನೋತ್ಸವ ಬಗೆಗಿನ ನಮ್ಮ ಯೋಜನೆಯಿಂದ ಉತ್ಸುಕರಾದರು. ಗೃಹ ಮಂತ್ರಿಗಳಾಗಿದ್ದ ಧರ್ಮಸಿಂಗ್ ಅವರನ್ನು ಆಹ್ವಾನಿಸಲು ನಮ್ಮನ್ನೂ ಕರೆದೊಯ್ದರು. ನಮ್ಮೆದುರಿಗೆ ಅವರು ಬರಲೇ ಬೇಕೆಂದು ಒತ್ತಾಯ ಮಾಡಿದರು.ಮಂತ್ರಿಗಳು ಬರುವ ದಿನಾಂಕ ನಿಗದಿಯಾಯಿತು. ಮುಖ್ಯ ಅತಿಥಿಯಾಗಿ  ಬಂಜಗೆರೆ ಜಯಪ್ರಕಾಶ ಅವರನ್ನು ಗೊತ್ತು ಮಾಡಲಾಯಿತು.
ಜಿಲ್ಲಾಮಟ್ಟ ಭಾವಗೀತ ಗಾಯನ ಸ್ಪರ್ಧೆಗೆ  ಸಮಯದ ಕಡಿಮೆ ಇರುವುದರಿಂದ ನಮ್ಮ ಬೋಧಕರನ್ನೆ ಖುದ್ದಾಗಿ ಕಾಲೇಜುಗಳಿಗೆ ಕಳುಹಿಸಿ ಸ್ಪರ್ಧೆಗೆ ಅವರು ಭಾಗವಹಿಸುವಿಕೆಯನ್ನು ಖಚಿತ ಪಡಿಸಿಕೊಳ್ಳಲಾಯಿತು. ಒಟ್ಟು ೧೭ ಕಾಲೇಜುಗಳು ಭಾಗವಹಿಸಿದವು. ಅಂಬೇಡ್ಕರ್ ಜಯಂತಿಯಂದು ಎಲ್ಲರಿಗೂ  ಬಹುಮಾನ ನೀಡುವ ವ್ಯವಸ್ಥೆಯಾಯಿತು. ಅಂದು ಉಪಹಾರದ ವ್ಯವಸ್ಥೆಯಾಯಿತು.ಎಲ್ಲರೂ ಮನಃ ಪೂರ್ತಿಯಾಗಿ ದುಡಿದರು.
ಗೃಹ ಮಂತ್ರಿಗಳೆ ಬಂದುದರಿಂದ ಜಿಲ್ಲಾಮಟ್ಟದ ಅಧಿಕಾರಿಗಳೆಲ್ಲ ಜಮಾಯಿಸಿದರು. ಜಿಲ್ಲಾ ಪೋಲೀಸ್ ವರಿಷ್ಟರು ಎರಡುದಿನ ಮುಂಚೆಯೆ ಭೇಟಿಕೊಟ್ಟು ಬಂದು ವ್ಯವಸ್ಥೆಯ ವಿವರ ಪರಿಶೀಲಿಸಿದರು. ಅಲ್ಲದೆ ಗೃಹಮಂತ್ರಿಗಳಿಗೆ ಪೋಲಿಸರಿಂದ ವಿಶೇಷ ಗೌರವವೆಂದು ಗಾರ್ಡ ಅಫ್ ಆನರ್ ನೀಡುವುದಾಗಿ ತಿಳಿಸಿದರು. ಸಂಜೆ ಆಗುತಿದ್ದಂತೆ ದೀಪಾಲಂಕಾರದಿಂದ ಕಾಲೇಜು ಝಗಮಗಿಸಲಾರಂಭಿಸಿತು. ಪುರಾತನವಾದ ಕಾಲೇಜು ಕಟ್ಟಡವು ಮಿನಿವಿಧಾನ ಸೌಧದಂತೆ ಕಾಣುತಿತ್ತು.
ಸಾರ್ವ ಜನಿಕರೂ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದರು. ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳೂ ಗೃಹ ಮಂತ್ರಿಗಳ ಸಮಾರಂಭವು ಯಶಸ್ವಿಯಾಗಲೆಂದು ಎಲ್ಲ ರೀತಿಯ ಸಹಕಾರ ನೀಡಿದರು. ಬಂದು ಕೆಲವೆ ದಿನಗಳಾದರೂ ಎಲ್ಲ ಅಧಿಕಾರಿಗಳ ಪರಿಚಯದ  ಅವಕಾಶ ಆಯಾಚಿತವಾಗಿ ನನಗೆ ದೊರೆಯಿತು. ಸಾವಿರಾರು ಜನ ಕಿಕ್ಕಿರಿದು ಸೇರಿದರು. ಮುಖ್ಯ ಅತಿಥಿಗಳು ಅಂಬೇಡ್ಕರ್ ಕುರಿತಾಗಿ ಅಮೋಘವಾಗಿ ಮಾತನಾಡಿದರು. ಗೃಹ ಮಂತ್ರಿಗಳು ಸರ್ಕಾರಿ ಕಾಲೇಜಿನಲ್ಲಿ ಅದ್ಧೂರಿಯಾಗಿ ಸಂವಿಧಾನ ಶಿಲ್ಪಿಯ ಶತಮಾನೋತ್ಸವ ನಡೆದಿದುಕ್ಕೆ ಸಂತಸ ವ್ಯಕ್ತ ಪಡಿಸಿದರು. ಸ್ಥಳೀಯ ಶಾಸಕರಿಗಂತೂ ಖುಷಿಯೋ ಖುಷಿ.. ಗಲಾಟೆಯಾಗಬಹುದು ಎಂಬ ನಮ್ಮ ಸಹೋದ್ಯೋಗಿಗಳ ಭಯ ನಿಜವಾಗಲಿಲ್ಲ. ಅಲ್ಲಿ ನೆರೆದ ಜಿಲ್ಲೆಯ ಎಲ್ಲ ಪೋಲೀಸು ಅಧಿಕಾರಿಗಳ ಸಮೂಹ ನೋಡಿಯೆ ಜನ ದಂಗಾಗಿದ್ದರು. ಜಿಲ್ಲಾ ಮಟ್ಟದ ಭಾವ ಗೀತಾ ಸ್ಪರ್ಧೆಯ ಬಹುಮಾನ ಪಡೆಯಲು ಬೇರೆ ಬೇರೆ ಕಾಲೇಜಿನಿಂದ ಬಂದವರೂ ಸ್ಥಳಿಯ ದಲಿತ ಸಂಘಟನೆಯವರು ನೀಡಿದ್ದ ಮೂರು ಅಡಿ ಎತ್ತರದ ಪರ್ಯಾಫಲಕ ನೋಡಿ ದಂಗಾದರು. ಉಳಿದ ಬಹುಮಾನಗಳನ್ನು ನೋಡಿ ಸಂತಸ ಗೊಂಡರು. ಮಾರನೆ ದಿನ ಎಲ್ಲ ಪತ್ರಿಕೆಗಳಲ್ಲೂ ಸಮಾರಂಭದ ಸುದ್ದಿ ಪ್ರಕಟವಾಯಿತು. ಸ್ಥಳೀಯ ಪತ್ರಿಕೆಗಳಲ್ಲಂತೂ ಸಚಿತ್ರ ವರದಿಗಳು ಬಂದವು. ಈ ವರೆಗೆ ಬೇರೆ ಕಾರಣಗಳಿಂದ ಕುಪ್ರಸಿದ್ಧ ವಾಗಿದ್ದ ನಮ್ಮ ಕಾಲೇಜು ಮೊದಲ ಬಾರಿಗೆ  ಜನರ ಮೆಚ್ಚುಗೆ ಗಳಿಸಿತು.
ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಊರಿನವರಿಗೆಲ್ಲ ಹೊಸ ಪ್ರಾಂಶುಪಾಲರು ಪರವಾ ಇಲ್ಲ ಸಾಕಷ್ಟು ಪ್ರಭಾವ ಶಾಲಿಗಳು, ತರಲೆ ಕಾಲೇಜಿಗೆ ಗೃಹಮಂತ್ರಿಗಳನ್ನೆ ಕರೆಸಿದರು.ಬಾಬಾಅಂಬೇಡ್ಕರ್ ಶತಮಾನೋತ್ಸವವನ್ನು ಯಾರೂ ಮಾಡದಷ್ಟು ಅದ್ಧೂರಿಯಾಗಿ ಮಾಡಿರುವರು ಎಂದು ಮಾತನಾಡಿಕೊಂಡರು.
ನಮ್ಮವಿದ್ಯಾರ್ಥಿಗಳಿಗೂ ಬಹಳ ಸಂತೋಷವಾಯಿತು. ತಮ್ಮ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಪ್ರಚಾರ ದೊರೆತುದುದು ಅವರಿಗೆ ಬಹಳ ಹೆಮ್ಮೆಯ ವಿಷಯವಾಯಿತು. ಅಲ್ಲದೆ ತಾವೆಲ್ಲ ಸೊಂಟ ಕಟ್ಟಿ ದುಡಿದದ್ದು ಸಾರ್ಥಕವಾಯಿತು ಎಂದು ಖುಷಿಯಿಂದ ಬೀಗಿದರು. ಅವರಿಗೆ ಪ್ರಾಂಶುಪಾಲರ ದಲಿತ ಪರ ಧೋರಣೆಯ  ಬಗ್ಗೆ ಖಾತ್ರಿ ದೊರೆಯಿತು.
ನಮ್ಮ ಬೋಧಕವರ್ಗದವರಿಗೆ ಒಂದು ವಿಷಯ ಅರ್ಥವೇ ಆಗಲಿಲ್ಲ. ಹೊಸ ಪ್ರಾಂಶುಪಾಲರಿಗೆ ಬಂದು ಕೆಲವೇ ದಿನಗಳಲ್ಲಿ ಗೃಹ ಮಂತ್ರಿಗಳನ್ನು ಕರೆಸುವಷ್ಟು ಸಾಮರ್ಥ್ಯ ಹೇಗೆ ಬಂತುಎಂದು ಅಚ್ಚರಿಗೊಂಡರು. ಅವರಿಗೆ ನಾನು ಗುಲ್ಬರ್ಗ ಜಿಲ್ಲೆಯಲ್ಲಿ ಕೆಲಸ ಮಾಡಿರುವುದು ಗೊತ್ತಿತ್ತು. ಆ ಪರಿಚಯದಿಂದ ಕೆಲಸ ಆಗಿಬಹುದು ಎಂದುಕೊಂಡರು. ನಿಜ ಗುಲ್ಬರ್ಗದಲ್ಲಿ ಒಂದೆರಡು ಸಲ  ಮಂತ್ರಿಗಳ ಭೇಟಿಯಾಗಿದ್ದೆ. ಆದರೆ ಅಂಥಹ ಪರಿಚಯವಿರಲಿಲ್ಲ. ಅದನ್ನು ನಾನು ವಿವರಿಸಲು ಹೋಗಲಿಲ್ಲ. ಸ್ಥಳೀಯ ಶಾಸಕರ ಸಹಕಾರ ಪೂರ್ಣ ಪ್ರಮಾಣದಲ್ಲಿ ದೊರೆಯಿತು. ಸಮಸ್ಯಾತ್ಮಕ ಕಾಲೇಜಿನಲ್ಲಿ ಕೆಲಸ ಮಾಡಲು ಒಂದು ಸುಭದ್ರವಾದ ಅಡಿಪಾಯ ನನಗೆ ದೊರೆಯಿತು.
ನಾನು ಸವಾಲಿನಂತೆ ಸ್ವೀಕರಿಸಿ ಸಮಾರಂಭ ಮಾಡಿದುದರಿಂದ ವಿದ್ಯಾರ್ಥಿಗಳ ಪ್ರೀತಿ, ಸಹೊದ್ಯೋಗಿಗಳ ಗೌರವ ಸಾರ್ವಜನಿಕರ ಸಹಾನುಭೂತಿ ಮತ್ತು ಇಲಾಖೆಯ ಮೆಚ್ಚುಗೆ ಸಿಕ್ಕಿತು. ಕಿರಿಕಿರಿ ಮಾಡಬೇಕೆಂದಿದ್ದವರ ಸಂಚು ವಿಫಲವಾಯಿತು. ನನ್ನ ಯೋಜನೆಯಂತೆ ಹಳಿತಪ್ಪಿದ ಕಾಲೇಜನ್ನು ಸರಿದಾರಿಗೆ ತರುವ ಕೆಲಸ ಮಾಡಲು ಬಾಬಾ ಅಂಬೇಡ್ಕರ್ ಜಯಂತಿ ಭೀಮ ಬಲ ತಂದು ಕೊಟ್ಟಿತು.ಅಂಬೇಡ್ಕರ್ ನನ್ನ ಸುಧಾರಣೆಯ ಕಾರ್ಯಕ್ಕೆ  ಅಭಯ ನೀಡಿದರು.
                                                                                                                                ಎಚ್. ಶೇಷಗಿರಿರಾವ್